ಕಾಶ್ಮೀರ ಯಾರಿಗೆ ಸೇರಿದ್ದು?

ಕಾಶ್ಮೀರ ಯಾರಿಗೆ ಸೇರಿದ್ದು?

ಭಾರತ ಪಾಕಿಸ್ತಾನಗಳೆರಡಕ್ಕೂ ಸ್ವಾತಂತ್ರ್ಯ ದೊರೆತು 60 ವರುಷಗಳೇ ಕಳೆದರೂ ಇನ್ನೂ ಬಗೆಹರಿಸಲಾಗದ, ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಭಾರತದ ಶಿರಸ್ಥಾನದಲ್ಲಿರುವ ಕಾಶ್ಮೀರ ಭೂ ಪ್ರದೇಶದ ಸದಾ ಚಾಲ್ತಿಯಲ್ಲಿರುವ ಸಂಘರ್ಷಕ್ಕೆ ವರ್ಷಕ್ಕೊಮ್ಮೆ ಜರುಗುವ "ಅಮರ್‌ನಾಥ್ ಯಾತ್ರೆ"ಯಿಂದಾಗಿ ಮತ್ತಷ್ಟು ಪುಷ್ಟಿ ದೊರಕಿದೆ ಎಂದೆನಿಸುತ್ತೆ.

ಯಾವುದೇ ಧರ್ಮ, ದೇವರು ಅಥವಾ ನಂಬಿಕೆ ಮನುಷ್ಯ ಮನುಷ್ಯರನ್ನು ಒಂದಾಗಿಸಬೇಕೇ ಹೊರತು, ಒಡೆಯುವ ಕೆಲಸ ಮಾಡಬಾರದು. ಆದರೆ, ದುರಂತವೆಂದರೆ, ಮನುಷ್ಯನ ಸೃಷ್ಟಿಯಾದಂದಿನ ಕಾಲದಿಂದಲೂ ಮನುಷ್ಯ ಮನುಷ್ಯರ ನಡುವೆ ಬಿರುಕು ಮೂಡುವುದಕ್ಕೆ ಪ್ರಮುಖವಾದ ಕಾರಣಗಳು ಇವೇ ಆಗಿವೆ. ಇಂತಹ ಸಂದರ್ಭಗಳಲ್ಲೆಲ್ಲ ನನಗೆ ಮಹಾಮಾನವತಾವಾದಿ ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿಯವರ "Where there is division there is no society" ಎಂಬ ಮಾತು ಸದಾ ರಿಂಗಣಿಸುತ್ತಿರುತ್ತದೆ. Divison ಇರುವೆಡೆ ನಿಜವಾದ Society ಇರಲಾರದಾದರೂ, ಇಂದು Division ಇಲ್ಲದ Societyಯೊಂದು ಇರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ!

ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹೂಡಿದ ಎರಡನೇ ವಿಶ್ವಸಮರದ ಉದ್ದೇಶ ಇಡೀ ವಿಶ್ವವನ್ನೇ ತನ್ನದಾಗಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಾಗಿದ್ದರೂ, ಲಕ್ಷಾಂತರ ಮಂದಿ ಯಹೂದಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ಯುದ್ಧಕ್ಕೆ ಪಾತಕಿ ಹಿಟ್ಲರ್‍‌ನ "ಮತಾಂಧತೆ" ಕೂಡ ಒಂದೆಡೆ ಕಾರಣವಾಗಿತ್ತು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆತನೇನಾದರೂ ಇಂದು ಬದುಕಿದ್ದರೆ ಇಡೀ ವಿಶ್ವವನ್ನೇ ಇಂದು ಇಡೀ ವಿಶ್ವದಲ್ಲೇ "ಜೆಹಾದ್"(ಧರ್ಮ ಯುದ್ಧ) ಸಾರಿರುವ ಒಸಾಮ ಬಿನ್ ಲಾಡೆನ್ ಆದಿಯಾಗಿ ಎಲ್ಲಾ ಮುಸ್ಲಿಂ ಸಂಘಟನೆಗಳು ನಡೆಸುತ್ತಿರುವ "ಭಯೋತ್ಪಾದನೆ" ಹೆಸರಿನ ಕ್ರೌರ್ಯಕ್ಕೆ ಮುಂದಾಳತ್ವವನ್ನು ವಹಿಸುತ್ತಿದ್ದನೋ ಏನೋ? ಆದರೆ, ವ್ಯತ್ಯಾಸ ಏನೆಂದರೆ, ಲಾಡೆನ್‌ಗೆ ತನ್ನ ಧರ್ಮ ಹೇಗೆ ಇಡೀ ವಿಶ್ವದಲ್ಲಿ ಪ್ರಬಲವಾಗಿರಬೇಕು ಎಂಬ ಮಹತ್ವಾಕಾಂಕ್ಷೆ ಇದೆಯೋ ಹಾಗೆಯೇ ಹಿಟ್ಲರ್‌ಗೆ ಕೂಡ ತನ್ನ ಧರ್ಮದ ಸರ್ವಾಧಿಕಾರವೇ ಮುಖ್ಯವಾಗಿರುತ್ತಿತ್ತು!

ಇಂದು ಅಮರ್‌ನಾಥ್ ಯಾತ್ರೆಯ ಹಿನ್ನೆಲೆಯಲ್ಲಿ ಸುರುವಾಗಿರುವ ಈ ಕ್ರೌರ್ಯಕ್ಕೂ ಕಾರಣ ಮತಾಂಧತೆ ಎನ್ನುವುದು ಸ್ಪಷ್ಟ. ಮುಸ್ಲಿಂ ಮತಾಂಧತೆಗೆ ಪ್ರತಿಯಾಗಿ ಅಮರ್‌ನಾಥ್ ಯಾತ್ರೆಯನ್ನು ನೆಪವಾಗಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಪ್ರಾಯೋಜಿತ "ಹಿಂದೂ ಧರ್ಮ ಯುದ್ಧ"ಕ್ಕೆ ಕಾರಣವೂ ಮತಾಂಧತೆಯೇ ತಾನೇ? ಇನ್ನು ಜನತಾ ಪರಿವಾರದ ಹಿನ್ನೆಲೆಯನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲವಾದ್ದರಿಂದ ಅವರ ರಾಜಕೀಯ ಸಿದ್ಧಾಂತ ಏನನ್ನು ಆಧರಿಸಿದೆ ಎಂದು ಹೇಳಬೇಕಿಲ್ಲವಷ್ಟೆ!

ಇನ್ನು ಪ್ರಸ್ತುತ ಕಾಶ್ಮೀರದಲ್ಲಿ ಉದ್ಭವಿಸಿರುವ ಸಮಸ್ಯೆಯ ವಿಚಾರಕ್ಕೆ ಬಂದಪರೆ, ಒಂದು ತಿಂಗಳು ಅಥವಾ ಹೆಚ್ಚೆಂದರೆ 6 ವಾರಗಳ ಕಾಲ ಜರುಗುವ ಅಮರ್‌ನಾಥ್ ಯಾತ್ರೆಗೆಂದು ಬರುವ ಭಕ್ತಾದಿಗಳು ತಂಗುವುದಕ್ಕೋಸ್ಕರ ಅಮರ್‌ನಾಥ್ ಪೀಠ ಮಂಡಳಿಗೆ 100 ಎಕರೆ ಅರಣ್ಯ ಭೂಮಿಯನ್ನು ನೀಡಲಾಗಿರುವುದು ಪ್ರಸ್ತುತ ಉಲ್ಭಣಿಸಿರುವ ಸಮಸ್ಯೆಗೆ ಕಾರಣ. ಇದರಿಂದ ಇಲ್ಲಿನ ನಿವಾಸಿಗಳಾದ "ಕಾಶ್ಮೀರಿ"ಗರಿಗೆ(ಮುಸ್ಲಿಂರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ!) ಅನಾನುಕೂಲವಾಗುವುದೆಂಬ "ಸಲ್ಲದ" ಕಾರಣವನ್ನು ಮುಂದಿಟ್ಟುಕೊಂಡು ಕ್ಯಾತೆ ತೆಗೆದಿರುವ "ಪ್ರತ್ಯೇಕತಾವಾದಿಗಳು"(ಮುಸ್ಲಿಂರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ!) ಅಪಾರ ಸಾವುನೋವು, ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದ್ದಾರಲ್ಲದೆ, ಸರಕಾರ ಈ ಮುಸ್ಲಿಂ ಉಗ್ರವಾದಿಗಳ ಒತ್ತಾಯಕ್ಕೆ ಮಣಿದು ತಾವು ಅಮರ್‌ನಾಥ್ ಪೀಠಕ್ಕೆ ನೀಡಿರುವ ಭೂಮಿಯನ್ನು ವಾಪಸ್ ತೆಗೆಸುವ ಮಟ್ಟಿಗೆ ತಮ್ಮ ಪವರ್ "ಇಸ್ತೇಮಾಲ್" ಮಾಡಿದ್ದಾರೆ! ಇದಲ್ಲದೆ, ಅಮರ್‌ನಾಥ್ ಪೀಠ ಮಂಡಳಿಯಲ್ಲಿರುವ ಸದಸ್ಯರು ಕೂಡ ಯಾರೂ ಸ್ಥಳೀಯರಲ್ಲ ಎನ್ನುವುದು ಇವರ ಕೋಪಕ್ಕೆ ಮತ್ತೊಂದು ಕಾರಣವಿರಬಹುದು.

ಮೇಲ್ನೋಟಕ್ಕೆ ಇದು ಈ ಹಿಂಸಾಚಾರವನ್ನು ಹುಟ್ಟುಹಾಕಿರುವ ಸಂಘಟನೆಗಳು ಹಾಗೂ ಸರಕಾರದ ನಡುವಿನ "ಸಂವಹನ" ಸಮಸ್ಯೆಯೂ ಕಾರಣವಾಗಿದೆಯೆಂಬುದು ಚಿಂತಕರ ಅಭಿಮತ. ಮೊದಲನೆಯದಾಗಿ ಸರಕಾರ ಈ ಪ್ರಶ್ನಾರ್ಹ ಭೂಮಿಯನ್ನು ಮುಸ್ಲಿಮೇತರರಿಗೆ ಶಾಶ್ವತಾಗಿ ವರ್ಗಾಯಿಸುವ ಯಾವುದೇ ಪ್ರಸ್ತಾವನೆಯೂ ತಮ್ಮ ಮುಂದೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು. ಅಷ್ಟಕ್ಕೂ ಒಂದು ಋತುವಿನಲ್ಲಷ್ಟೇ ಜರುಗುವ ಈ ಯಾತ್ರೆ ಅಬ್ಬಬ್ಬಾ ಎಂದರೂ ಒಂದು ತಿಂಗಳ ಕಾಲವಷ್ಟೇ ನಡೆಯುವುದಲ್ಲದೆ, ಯಾತ್ರಿಕರು 2-3 ದಿನಗಳ ಕಾಲವಷ್ಟೇ ಇಲ್ಲಿ ತಂಗುವರು. ಹಾಗೆಂದ ಮೇಲೆ ಇದರಿಂದ ಕಾಶ್ಮೀರದ Demographic Balanceಗೆ ಯಾವ ರೀತಿಯ ತೊಂದರೆಯುಂಟಾಗುತ್ತದೆ ಎನ್ನುವುದು ಮೂಲಭೂತವಾದ ಪ್ರಶ್ನೆ!

1989ರಲ್ಲಿ ಆರಂಭವಾದ ಅತಿಕ್ರಮಣದಿಂದಾಗಿ 1991-92ರಲ್ಲಿ ಕಾಶ್ಮೀರಿ ಪಂಡಿತರನ್ನು ರಾಜ್ಯದಿಂದ ಹೊರದೂಡಿದಾಗ "ಜಮ್ಮು ಮತ್ತು ಕಾಶ್ಮೀರ"ದ Demographic Balance ಹಾಳಾಗಿರಲಿಲ್ಲವೇ ಎಂದು ಶಿಕ್ಷಣ ತಜ್ಞ, ಲೇಖಕ, ಮಾಜಿ ಸಂಸದ ಹಾಗೂ ಸರಕಾರಕ್ಕೆ ಕಾರ್ಯದರ್ಶಿಯೂ ಆಗಿದ್ದ ಶ್ರೀ ನಿತೀಶ್ ಸೇನ್‌ಗುಪ್ತ "ಡೆಕ್ಕನ್ ಕ್ರಾನಿಕಲ್‌"ನಲ್ಲಿ ತಾವು ಈ ಕುರಿತು ಬರೆದಿರುವ ಲೇಖನದಲ್ಲಿ ಪ್ರಶ್ನಿಸುತ್ತಾರೆ. ಇದಲ್ಲದೆ, ಅವರು ತಾವು ಸರಕಾರಕ್ಕೆ ಸಲ್ಲಿಸಿದ್ದ ವರದಿಯೊಂದರಲ್ಲಿ ಅಮರ್‌ನಾಥ್ ಯಾತ್ರೆ ಕೈಗೊಳ್ಳುವ ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸಬೇಕೆಂದು ಹೇಳಿ ಒಂದು ಸಲಕ್ಕೆ 20,000 ಯಾತ್ರಿಕರಿಗಷ್ಟೇ ಯಾತ್ರೆಯ ಅನುಮತಿ ನೀಡುವಂತೆ ಸೂಚಿಸಿದ್ದನ್ನು ಸ್ಮರಿಸುತ್ತಾರೆ. ಆದರೆ, ಈ ಬಾರಿ ಈ ಸಂಖ್ಯೆಯನ್ನೂ ಮೀರಿ ಯಾತ್ರಿಕರು ಪ್ರಯಾಣ ಬೆಳೆಸಿರುವುದು, ಹಿಂಸಾಚಾರವಾದಂತಹ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಅವಕಾಶ ಮಾಡಿಕೊಡಬಹುದಾದ್ದರಿಂದ ಇಂತಹದ್ದನ್ನು ತಡೆಗಟ್ಟಲೇಬೇಕಾಗಿದೆ.

ಇನ್ನು ದೇಶದಲ್ಲಿ ಏನೇನು ಸಮಾಜಘಾತುಕ ಆಪತ್ತುಗಳು ಸಂಭವಿಸಬಹುದು, ಅವನ್ನು ಹೇಗೆ ನಿಭಾಯಿಸಬೇಕು ಎಂದು ಸರಕಾರಕ್ಕೆ ಮುನ್ಸೂಚನೆ ನೀಡಬೇಕಿರುವ ನಮ್ಮ "ಇಂಟಲಿಜೆನ್ಸ್" ಏಜೆನ್ಸಿಗಳು ಏನು ಮಾಡುತ್ತಿವೆ ಎಂಬುದನ್ನು ದೇಶದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಕಡೆ ಜರುಗುತ್ತಿರುವ ಭಯೋತ್ಪಾದನಾ ಕೃತ್ಯಗಳು, ದಾಳಿಗಳು, ಚಟುವಟಿಕೆಗಳು ಸೂಚಿಸುತ್ತಲೇ ಇವೆ.

ಒಂದು ಕಾಲದಲ್ಲಿ ಕಾಶ್ಮೀರ ಎಂದರೆ ಹೆಸರಾಂತ ಶೈವ ಪಂಡಿತರಿಗೆ ಹೆಸರುವಾಸಿಯಾಗಿದ್ದ ನಾಡು. ನಮ್ಮ ನಾಡಿನ ಮಹಾಜ್ಞಾನಿ, ದಾರ್ಶನಿಕ 12ನೇ ಶತಮಾನದ ಅಲ್ಲಮ ಪ್ರಭುಗಳ ಹಾಗೆಯೇ ಕಾಶ್ಮೀರದಲ್ಲೂ ಒಬ್ಬ ಇದ್ದನು. ಆತನೇ ಅಭಿನವಗುಪ್ತ. ಅಲ್ಲಮ ಮತ್ತು ಈತ ಇಬ್ಬರೂ ಶೈವಪ್ರತಿಭೆಗಳೇ. ಈ ಈರ್ವರನ್ನೂ ಮುಖಾಮುಖಿಯಾಗಿಸಿ ಕನ್ನಡದ ಶ್ರೇಷ್ಠ ವಿಮರ್ಶಕರಲ್ಲೊಬ್ಬರಾಗಿದ್ದ ಡಿ.ಆರ್.ನಾಗರಾಜ್ "ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ" ಎನ್ನುವ ಆಚಾರ್ಯಕೃತಿಯೊಂದನ್ನು ರಚಿಸಿದ್ದರು. ಕನ್ನಡ ವಿಮರ್ಶಾಲೋಕಕ್ಕೆ ಹೊಸ ನುಡಿಗಟ್ಟೊಂದನ್ನು ಒದಗಿಸಿಕೊಟ್ಟ ಅಪೂರ್ವ ಕೃತಿ ಅದು. ಅಷ್ಟು ದೂರ ಯಾಕೆ ಹೋಗಬೇಕು. ನಮ್ಮ ದೇಶದ ಮೊತ್ತ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಕೂಡ ಮೂಲತಃ ಕಾಶ್ಮೀರಿ ಶೈವ ಪಂಡಿತರೆಂದು ನಾನು ಓದಿದ್ದೇನೆ.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್(ನೇತೃತ್ವದ ಯುಪಿಎ) ಪಕ್ಷದ ಸಮ್ಮಿಶ್ರ ಸರಕಾರವೇ ಗುಲಾಂ ನಬಿ ಅಜಾದ್ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ ನಡೆಸುತ್ತಿದ್ದಾದರೂ, ಸದ್ಯ ಆ ಸರಕಾರ ವಜಾಗೊಂಡು ರಾಜ್ಯಪಾಲರ ಆಡಳಿತ ಜಾರಿಯಲ್ಲಿರುವುದರಿಂದ ಸಮಸ್ಯೆ ಹೆಚ್ಚಾಗಿ "ಉರಿಯುವ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ". ಮುಂದಿನ ಚುನಾವಣೆಯನ್ನೇ ಎದುರು ನೋಡುತ್ತಿರುವ ಬಿಜೆಪಿ ತನ್ನ "ಹಿಂದೂವಾದ"ವನ್ನೇ ಮುಂದಿಟ್ಟುಕೊಂಡು ಮೊಂಡುವಾದ ಮಾಡುತ್ತಾ ತಾನು ಜವಾಬ್ದಾರಿಯುತ ವಿರೋಧ ಪಕ್ಷದ ಸ್ಥಾನದಲ್ಲಿರುವುದನ್ನೇ ಮರೆತು "ಅನಾಹುತಕ್ಕೆಲ್ಲ ಶನೇಶ್ವರನೇ ಕಾರಣ" ಎನ್ನುವಂತೆ ಎಲ್ಲದಕ್ಕೂ ಕಾಂಗ್ರೆಸ್ಸನ್ನು ದೂರುವುದರಲ್ಲೇ ನಿರತವಾಗಿದೆ. ಇಂದು ಕೂಡ ಬಿಜೆಪಿ ನಾಯಕ ಅರುಣ್ ಜೈಟ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ "ಅಮರ್‌ನಾಥ್ ವಿವಾದ" ಪ್ರಮುಖ ವಿಷಯವಾಗಲಿದೆ ಎಂದು ಪತ್ರಿಕಾ ಹೇಳಿಕೆ ಕೂಡ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಸಂದರ್ಭಗಳಲ್ಲಿ ಎಲ್ಲ ಪಕ್ಷಗಳೂ ಒಟ್ಟುಗೂಡಿ ಪರಿಸ್ಥಿತಿಯನ್ನು ಸರಳಗೊಳಿಸುವ ಬದಲು ಜಟಿಲಗೊಳಿಸುತ್ತಿರುವುದನ್ನು ನೋಡಿದರೆ, ಜಮ್ಮು ಮತ್ತು ಕಾಶ್ಮೀರ ಸ್ವಾತಂತ್ರ್ಯಪೂರ್ವ ಕಾಲದಲ್ಲಿದ್ದಂತೆ ರಾಜರ ಆಡಳಿತವನ್ನೇ ಹೊಂದಿದ್ದಲ್ಲಿ ಇಂತಹ ಸಮಸ್ಯೆಗಳು ತಲೆದೋರುತ್ತಿರಲಿಲ್ಲವೇನೋ ಎನಿಸುತ್ತೆ!

ಈಗಾಗಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ನಡೆಸಿದ ಗುಂಡಿನ ದಾಳಿಗೆ ಮಂಗಳವಾರ 20 ಜನ ಪ್ರತಿಭಟನಾಕಾರರು ಮಡಿದಿದ್ದಾರೆ. ಇಷ್ಟಾದರೂ ಸಾವಿರಾರು ಮಂದಿ ಪ್ರತಿಭಟನಾಕಾರರು ಇನ್ನೂ ಪ್ರತಿಭಟನೆಯಲ್ಲಿ ನಿರತರಾಗಿಯೇ ಇದ್ದಾರೆ. ಪ್ರತ್ಯೇಕತಾವಾದಿಗಳು ಶುಕ್ರವಾರ(ಆಗಸ್ಟ್ 22,2008) ಮತ್ತೆ 3 ದಿನಗಳ ಕಾಶ್ಮೀರ ಕಣಿವೆ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದಾರೆ.

ಇವೆಲ್ಲದರ ನಡುವೆಯೂ, ಅಮರ್‌ನಾಥ್ ಯಾತ್ರೆಯ ಮುಂದುವರಿಕೆಯ ಬಗ್ಗೆ ಕಾಶ್ಮೀರದ ಯಾವೊಬ್ಬ ಮುಸ್ಲಿಂ ನಾಯಕರೂ ತಗಾದೆ ತೆಗೆಯದಿರುವುದು ಸ್ವಾಗತಾರ್ಹ ಮಾತ್ರವಲ್ಲ, ಇಲ್ಲಿಯವರೆಗೂ ಅಮರ್‌ನಾಥ್ ಯಾತ್ರಿಕರಿಗೆ ಯಾವೊಂದು ತೊಂದರೆಯನ್ನೂ ನೀಡದ ಇಲ್ಲಿನ ಕಾಶ್ಮೀರಿ ಮುಸ್ಲಿಮರು, ಭಕ್ತಾದಿಗಳು ಶಾಂತಿಯುತವಾಗಿ ತಮ್ಮ ಯಾತ್ರೆಯನ್ನು ಮುಗಿಸುವುದನ್ನು ನಾವು ಖಾತ್ರಿಪಡಿಸುತ್ತೇವೆ ಎಂದಿರುವುದು ಕೂಡ ಇನ್ನೂ ಅಳಿದುಳಿದಿರುವ ಕೋಮುಸೌಹಾರ್ದಕ್ಕೆ ಸಾಕ್ಷಿಯಾಗಿ ನಿಂತಿದೆ.

ಹಾಗಾದರೆ ಸರಕಾರಕ್ಕೆ ಈ ಸಮಸ್ಯೆಯನ್ನು ಬಗೆಹರಿಸಲು ದಾರಿಗಳೇ ಇಲ್ಲವೇ?

ಇನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೂ ಈ ಸಮಸ್ಯೆಯನ್ನು ಬಗೆಹರಿಸಲು ಹಲವಾರು ದಾರಿಗಳಿವೆ. ಹೇಗೆಂದರೆ, ಪಾಕಿಸ್ತಾನ ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಂಡು ಇಡೀ ಕಾಶ್ಮೀರವನ್ನೇ ತನ್ನದಾಗಿಸಿಕೊಳ್ಳಬೇಕೆಂಬ ದುರಾಸೆಯಿಂದ ಹಲವಾರು ಮುಸ್ಲಿಂ ಸಂಘಟನೆಗಳಿಗೆ ಕುಮ್ಮಕ್ಕು ನೀಡುತಿರುವುದು ಸ್ಪಷ್ಟವಾಗಿದೆಯಾದರೂ, ಸ್ವತಃ ಪಾಕಿಸ್ತಾನ ಇಂದು ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿದೆ. ಅಧ್ಯಕ್ಷ ಪರ್ವೇಜ್ ಮುಷರ್ರಫ್ ತನ್ನ ಸ್ಥಾನದಿಂದ ಇದೀಗ ತಾನೇ ಕೆಳಗಿಳಿದಿದ್ದಾರೆ. ಪಾಕಿಸ್ತಾನದ ಗಮನವೆಲ್ಲವೂ ಸಂಪೂರ್ಣವಾಗಿ ದೇಶದ ರಾಜಕೀಯ ಪರಿಸ್ಥಿತಿಯೆಡೆಗೇ ಇದೆ. ಇನ್ನು, ಈ ಮುಸ್ಲಿ ಸಂಘಟನೆಗಳಲ್ಲಿಯೂ ಯಾವುದೇ ಒಗ್ಗಟ್ಟು ಕಾಣಸಿಗುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಪಾಕಿಸ್ತಾನ ಪರವಾಗಿರುವ ಹುರ್ರಿಯತ್‌ನ ಮುಖಂಡ ಸೈಯದ್ ಆಲಿ ಶಾ ಗೀಲಾನಿ ತನ್ನನ್ನೇ ನಾಯಕನನ್ನಾಗಿ ಪರಿಗಣಿಸುವಂತೆ ಘಂಟಾಘೋಷವಾಗಿ ಶ್ರೀನಗರ ಜನತೆ ಮುಂದೆ ಸಾರಿರುವುದು ಅವರಲ್ಲಿನ ಒಡಕನ್ನು ಎತ್ತಿ ತೋರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರ ಮುಂದಿನ ಚುನಾವಣೆಗೆ ಕಾರ್ಯತಂತ್ರ ರೂಪಿಸುವಲ್ಲಿ ತೊಡಗದೆ, ತನ್ನ ರಾಜತಾಂತ್ರಿಕ ನೈಪುಣ್ಯವನ್ನು ಬಳಸಿಕೊಂಡು ಸಧ್ಯಕ್ಕೆ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವುದಲ್ಲದೆ, ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಈಗಲೇ ಕ್ರಿಯಾಶೀಲವಾಗಬೇಕಿದೆ.

ಈ ನಡುವೆ ಶ್ರೀ ಅಮರ್‌ನಾಥ್ ಯಾತ್ರ ಸಂಘರ್ಷ್ ಸಮಿತಿಯ ಧರಣಿ 56ನೇ ದಿನಕ್ಕೆ ಕಾಲಿರಿಸಿದೆ. ಪೂಂಚ್ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಿಂಸಾಚಾರ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಕಥುವಾ ಜಿಲ್ಲೆಯ ಹಿರಾನಗರ್ ಪಟ್ಟಣದಲ್ಲಿ ಕರ್ಫ್ಯೂವನ್ನು ಮರುವಿಧಿಸಲಾಗಿದೆ. ಈ ಸಮಸ್ಯೆ ಮತ್ತಷ್ಟು ವಿಷಮವಾಗುವ ಮುನ್ನ ಭಕ್ತಾದಿಗಳ ಆ ಅಮರ್‌ನಾಥ್(ಎಂಬುವ ದೇವರೇನಾದರೂ ಇದ್ದಲ್ಲಿ!!) ಕಾಶ್ಮೀರವನ್ನು, ಕಾಶ್ಮೀರದ ಜನತೆಯನ್ನು, ತನ್ನ ಭಕ್ತಾದಿಗಳನ್ನು ಕಾಪಾಡಬೇಕು.

ಸ್ವಾತಂತ್ರ್ಯ ಬಂದು 60 ವರುಷಗಳೇ ಕಳೆದಿದ್ದರೂ ದೇಶದ ಉತ್ತರ ಶಿಖರದಲ್ಲಿರುವ ಕಾಶ್ಮೀರ ಯಾರಿಗೆ ಸೇರಬೇಕು, ಅಲ್ಲಿ ಯಾರು ವಾಸ ಮಾಡಬೇಕು, ಪ್ರಜಾಸತ್ತಾತ್ಮಕ, ಜಾತ್ಯಾತೀತ ದೇಶವೆಂದು ತನ್ನ ಸಂವಿಧಾನದ ಪ್ರಸ್ತಾವನೆಯಲ್ಲಿ ಕರೆದುಕೊಂಡಿರುವ ನಮ್ಮ ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯದಲ್ಲಿ ಯಾಕೆ ಮುಸ್ಲಿಮೇತರರು ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ ಎಂಬಂತಹ ಹಲವಾರು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿರುವುದು ನಮ್ಮ ದೇಶ ಇನ್ನೂ ಉತ್ತರ ಕಂಡುಕೊಳ್ಳಬೇಕಾಗಿರುವ ಪ್ರಮುಖ ಮೂಲಭೂತ ಪ್ರಶ್ನೆಗಳಲ್ಲಿ ಒಂದಾಗಿದೆ.

ಕಡೆಯದಾಗಿ, ರಾತ್ರಿ ಡಾ.ಯು.ಆರ್.ಅನಂತಮೂರ್ತಿಯವರ ಇತ್ತೀಚಿನ ಕೃತಿ "ಮಾತು ಸೋತ ಭಾರತ"ವನ್ನು ಮತ್ತೊಮ್ಮೆ ಓದುತ್ತಿದ್ದೆ. ಅದರಲ್ಲಿ "ರಾಷ್ಟ್ರಪಿತ" ಮಹಾತ್ಮ ಗಾಂಧಿ ಹಾಗೂ ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಚಾರಿಯವರ ಮೊಮ್ಮಗನೂ, ದೇಶ ಕಂಡ ಅತ್ಯಂತ ಸೂಕ್ಷ್ಮ ಬುದ್ಧಿಜೀವಿಗಳಲ್ಲಿ ಒಬ್ಬರೂ ಆಗಿದ್ದ ಶ್ರೀರಾಮಚಂದ್ರ ಗಾಂಧಿಯವರ ಬಗ್ಗೆ ಅನಂತಮೂರ್ತಿಯವರು ಬರೆದಿರುವ ಆಸಕ್ತಿಪೂರ್ಣ ಲೇಖನವನ್ನು ಮತ್ತೊಮ್ಮೆ ಓದುತ್ತಿದ್ದಾಗ ಅದರಲ್ಲಿ ಶ್ರೀರಾಮಚಂದ್ರ ಗಾಂಧಿಯವರು ಕಾಶ್ಮೀರ ವಿವಾದದ ಕುರಿತಂತೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಅವರು ಉಲ್ಲೇಖಿಸಿರುವುದನ್ನು ನೋಡಿದೆ. ಕಾಶ್ಮೀರ ಸಮಸ್ಯೆ ಜೀವಂತವಾಗಿರುವವರೆಗೂ ಸಲ್ಲುವ ಶ್ರೀರಾಮಚಂದ್ರ ಗಾಂಧಿಯವರ ಈ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸುತ್ತ ಈ ಲೇಖನವನ್ನು ಮುಗಿಸಲು ಇಚ್ಛಿಸುತ್ತೇನೆ. ಇನ್ನುಈ ರಾಮಚಂದ್ರಗಾಂಧಿಯವರು ಯಾರು,ಏನು ಎಂದು ತಿಳಿಯಲು ನೀವು ಆ ಲೇಖನವನ್ನೇ ಓದಿ ತಿಳಿಯಬೇಕು.

ಕಾಶ್ಮೀರ ಯಾರಿಗೆ ಸೇರಬೇಕು? ಎಂದು ಒಮ್ಮೆ ಅವರನ್ನು ಕೇಳಲಾದ ಪ್ರಶ್ನೆಗೆ, 'ಪಾಕಿಸ್ತಾನ ಭಾರತದಂತೆಯೇ ಎಲ್ಲ ಧರ್ಮೀಯರನ್ನೂ ಸಮವಾಗಿ ಕಾಣುವ ಸೆಕ್ಯುಲರ್ ರಾಜ್ಯವಾಗಿದ್ದರೆ ಕಾಶ್ಮೀರ ಭಾರತದಲ್ಲಿರಬೇಕೋ? ಪಾಕಿಸ್ತಾನದಲ್ಲಿ ಇರಬೇಕೋ ಎಂಬುದು ನನಗಷ್ಟು ಮುಖ್ಯವಾದ ಪ್ರಶ್ನೆಯೇ ಅಲ್ಲ' ಎಂದು ವೃತ್ತಿ ಪ್ರವೃತ್ತಿಗಳೆರಡರಿಂದಲೂ ತತ್ವಜ್ಞಾನಿಯೇ ಆಗಿದ್ದ ಶ್ರೀರಾಮಚಂದ್ರಗಾಂಧಿಯವರು ಉತ್ತರಿಸಿದ್ದರು.

ಬಹುಶಃ, ನಿಜವಾಗಿಯೂ "ಸೆಕ್ಯುಲರ್" ಆಗಿರುವ ಪ್ರತಿಯೊಬ್ಬರೂ "ರಾಮೂ" ಅವರ ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿಯಾರು! ಗಾಂಧೀಜಿ ಬದುಕಿದ್ದರೂ ಹೀಗೆಯೇ ಉತ್ತರಿಸುತ್ತಿದ್ದರೇನೋ!

Rating
No votes yet