ಕಿಂಗ್ ಮೇಕರ್ ಕಿಶೋರ ಕುಮಾರ
1967 ರಲ್ಲಿ ರಾಹುಲ್ ದೇವ ಬರ್ಮನ್, ಬೆಂಗಾಲಿಯಲ್ಲಿ ಮುಕುಲ್ ದತ್ತ ರಚಿಸಿದ ಹಾಡು ’ಏಕ್ ದಿನ್ ಪಾಖಿ ಉರೇ’ ಹಾಡು ಒಂಥರಾ ಟ್ರೆಂಡ ಸೆಟರ್ ಮಾದರಿಯಲ್ಲಿ ಜನಪ್ರಿಯವಾಯಿತು. ಬಂಗಾಲಿಯಲ್ಲಿ ಜನಪ್ರಿಯವಾದ ಅನೇಕ ಹಾಡುಗಳನ್ನು ಹಿಂದಿಯಲ್ಲಿ ಅಳವಡಿಸುವುದು ಅಂದೊನ ಕಾಲದಲ್ಲಿ ಒಂದು ರೀತಿಯ ಪರಿಪಾಠವೇ ಆಗಿತ್ತೆನ್ನಬಹುದು. ಇದೇ ಹಾಡನ್ನು 1969 ರಲ್ಲಿ ‘ಪ್ಯಾರ ಕಾ ಮೌಸಮ್’ ಚಿತ್ರದಲ್ಲಿ ‘ತುಮ್ ಬಿನ್ ಜಾಂವೂ ಕಹಾಂ’ ಎಂದು ಬಳಸಿಕೊಳ್ಳಲಾಯಿತು. ಅದೂ ಕಿಶೋರ ಹಾಡಿದ ಮೊದಲ ಸ್ಟಾಂಜಾ ಮಾತ್ರ ಬಳಸಿಕೊಳ್ಳುತ್ತಾರೆ ಪಂಚಮ್. ಬರೀ ಹಾಡುಗಳಿಂದಲೇ ತುಂಬಿದ ಈ ಚಿತ್ರದಲ್ಲಿ ಪಂಚಮ್ ಇದೊಂದೇ ಹಾಡನ್ನು ಕಿಶೋರಗೆ ನೀಡುತ್ತಾರೆ. ಅಂದರೆ ಕಿಶೋರಗೆ ಲೀನ್ ಪ್ಯಾಚ್ ಅವಧಿಯದು. ಉಳಿದೆಲ್ಲ ಸೋಲೋ ಹಾಗೂ ಯುಗಳ ಗೀತೆಗಳನ್ನು ‘ನಿ ಸುಲ್ತಾನಾ ರೆ ಪ್ಯಾರ ಕಾ ಮೌಸಮ್ ಆಯಾ’ , ‘ಚೆ ಖುಶ್ ನಝಾರೆ’ ಮುಂತಾದವುಗಳನ್ನು ಮಹಮ್ಮದ ರಫಿಯಿಂದ ಹಾಡಿಸುತ್ತಾರೆ.
‘ತುಮ್ ಬಿನ್ ಜಾಂವೂ ಕಹಾಂ’ ಕೂಡ ಮೊದಲು ನಿಷ್ಕರ್ಷಿಸಿದಂತೆ ರಫಿಯಿಂದ, ಹೀರೋ ಶಶಿಕಪೂರ ಮೇಲೆ ಹಾಡುವುದಿತ್ತು, ಹಾಗೂ ಈ ಹಾಡು ಚಿತ್ರದಲ್ಲಿ ಐದು ಸಾರಿ ಬರುತ್ತದೆ. ಇದನ್ನು ಕಿಶೋರನಿಂದ ಹಾಡಿಸಿದರೆ ಅದರ ಡೆಫ್ತ್ ಸರಿಯಾಗಿ ಬರುತ್ತದೆ ಎಂದು ಗ್ರಹಿಸಿದ ಪಂಚಮ್, ನಾಸಿರ ಹುಸೇನರಿಗೆ ದುಂಬಾಲು ಬಿದ್ದು, ಅವರಿಗೆ ಕನ್ವಿನ್ಸ್ ಮಾಡುವಾಗ, ಹೀರೋನ ಮೇಲೆ ಹಾಡಿಸಲು ಒಪ್ಪದಿದ್ದಾಗ, ಕಿಶೋರ ಧ್ವನಿಯಲ್ಲಿ ಹೀರೋನ ಅಪ್ಪ, ಭರತ ಭೂಷಣ ಮೇಲೆ ಚಿತ್ರಿಸುತ್ತ, ಕಿಶೋರ ಹಾಡುತ್ತಾರೆ. ಅಂದರೆ ಕಿಶೋರಗೆ ಹೀರೋ ಮೇಲೆ ಹಾಡುವ ಅವಕಾಶಗಳೇ ಇಲ್ಲವೆನ್ನುವಂತೆ ದಿನಗಳಿದ್ದವು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಆದರೆ ಆ ಚಿತ್ರದ ಹಾಡುಗಳಲ್ಲಿ ಇದುವರೆಗೆ ಜನಮಾನಸದಲ್ಲಿ ಉಳಿದದ್ದು ‘ತುಮ್ ಬಿನ್ ಜಾಂವೂ ಕಹಾಂ’ ಎಂದೇ ಹೇಳಬಹುದು. ಅಂತಹ ಮಾಧುರ್ಯ ತುಂಬಿದ ಕಿಶೋರ ಹಾಡುಗಳಲ್ಲಿ ಇದೊಂದು.
ಇದೇ ಸಮಯದಲ್ಲಿ ರಾಜೇಶ ಖನ್ನಾನೊಂದಿಗೆ ‘ಬಹಾರೋಂ ಕೆ ಸಪನೆ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ, ಶಕ್ತಿ ಸಾಮಂತ ತಮ್ಮ 1967 ರ ‘ಎನ್ ಇವನಿಂಗ್ ಇನ್ ಪ್ಯಾರಿಸ್’ ನಂತರ ಮತ್ತೊಂದು ಚಿತ್ರವನ್ನು ರಾಜೇಶ ಖನ್ನಾನೊಂದಿಗೆ ನಿರ್ಮಿಸಲು ಯೋಜಿಸಿ, ‘ಸುಬಹ್ ಪ್ಯಾರ ಕಿ’ ನಿರ್ಮಾಣಕ್ಕೆ ಅಣಿಯಾಗುತ್ತಾರೆ. ಈ ಹೆಸರನ್ನು ಇಡಲು ಕಾರಣವೆಂದರೆ, ‘ಎನ್ ಇವನಿಂಗ್ ಇನ್ ಪ್ಯಾರಿಸ್’ ನ ಹಾಡು, ‘ರಾತ ಕೆ ಹಮ್ ಸಫರ್, ಥಕ ಕೆ ಘರ ಕೊ ಚಲೆ, ಝೂಮತಿ ಆ ರಹೀ ಹೈ, ಸುಬಹ ಪ್ಯಾರ ಕಿ’ ಮುಖಡಾ ಹಾಡಿನ ಕೊನೆಯ ಪದಗಳು ಈ ಚಿತ್ರದ ಟೈಟಲ್ಗೆ ಸ್ಫೂರ್ತಿಯಾಗಿತ್ತು.
ಈ ಚಿತ್ರದ ವಸ್ತು ಕೂಡ ಕೆಲವು ವಿಶೇಷತೆಗಳಿಂದ ಕೂಡಿತ್ತು. ‘ಎನ್ ಇವನಿಂಗ್ ಇನ್ ಪ್ಯಾರಿಸ್’ ಚಿತ್ರದಲ್ಲಿ ಬಿಕಿನಿಯಲ್ಲಿ ಮಾಡ್ ಆಗಿ ಓಡಾಡಿದ ಹುಡುಗಿ ಶರ್ಮಿಲಾ ಟಾಗೋರ್ ಗೆ ಈ ಚಿತ್ರದಲ್ಲಿ ಇಂಟರವಲ್ ನಲ್ಲಿಯೇ ವಿಧವೆಯಾಗುವ ಕಥೆ, ಹಾಗೂ ರಾಜೇಶ ಖನ್ನಾ ಗೆ ಡಬಲ್ ರೋಲನ, ಒಂದು ರೋಲ್ನಲ್ಲಿ ನಾಯಕ ನಟಿಮಣಿಯರ ಗೆಳತಿಯೊ, ನಾಯಕನ ತಂಗಿಯೋ ಪಾತ್ರ ನಿರ್ವಹಿಸುತ್ತಿದ್ದ, ಫರೀದಾ ಜಲಾಲ ಕೂಡ ಇನ್ನೊಬ್ಬ ನಾಯಕಿಯಾಗಿ ಆಯ್ಕೆಯಾಗಿದ್ದಳು. ಹೆಚ್ಚು ಕಡಿಮೆ ಎಲ್ಲ ಸಣ್ಣ ಸಣ್ಣ ಆಯ್ಕೆಗಳೇ, ಅತಿ ಕಮ್ಮಿ ಬಜೆಟ್ಟಿನ ಚಿತ್ರವಿದು.
ತುಂಬ ಬ್ಯುಜಿಯಾದ ಹಾಗೂ ತುಸು ದುಬಾರಿಯಾದ ಶಂಕರ ಜೈಕಿಶನ್ ಅವರ ಸಂಗೀತದ ಶುಲ್ಕವನ್ನು ಭರಿಸುವುದು ಸಾಧ್ಯವಾಗದೇ, ಎಂಭತ್ತು ಸಾವಿರದ ಸುತ್ತಮುತ್ತವಿದ್ದ ಎಸ್ ಡಿ ಬರ್ಮನ್ ಕೂಡ ನೂರು ಸಾವಿರಗಳಿಗೆ ಆಫರ್ ನೀಡಿದಾಗ, ಕೊನೆಗೂ ಅದು ಸಿಕ್ಕಾಗ, ತುಂಬ ಖುಷಿ ಪಟ್ಟು, ತಮ್ಮ ಅತ್ಯುತ್ತಮವಾದುದನ್ನು ನೀಡಲು ಅಣಿಯಾದರು.
ಚಿತ್ರದ ಟೈಟಲ್ ಯಾಕೋ ಹೊಂದುತ್ತಿಲ್ಲ ಎಂದು ಅದನ್ನು ಬದಲಿಸಿ, ‘ಆರಾಧನಾ’ ಎಂದು ಮರುನಾಮಕರಣ ಮಾಡಿದರು ಶಕ್ತಿ ಸಾಮಂತ. ಚಿತ್ರದ ಹಾಡುಗಳು ಬಿಡುಗಡೆಯಾಗುತ್ತಲೇ ಅಭೂತಪೂರ್ವ ಜನಪ್ರಿಯತೆಯೊಂದಿಗೆ, ಹಿಂದಿ ಚಿತ್ರ ಜಗತ್ತಿಗೆ ಮೊದಲ ‘ಸುಪರ್ ಸ್ಟಾರ’ ನೀಡಿದ ಚಿತ್ರವಾಯಿತು ‘ಆರಾಧನಾ’. ಬೆಳಗಾಗುವುದರಲ್ಲಿ ರಾಜೇಶ ಖನ್ನಾ ನನ್ನು ಸುಪರ್ ಸ್ಟಾರ್ ಮಾಡಿದ್ದು, ಕಿಶೋರ ಕಂಠದಿಂದ ಹೊರಹೊಮ್ಮಿದ ಮಾಧುರ್ಯ ಭರಿತ ಹಾಡುಗಳೇ ಕಾರಣವೆಂದರೆ ಬಹತೇಕ ತಪ್ಪಾಗಲಾರದು.. ಬಿನಾಕಾ ಗೀತಮಾಲಾದ ಅಮೀನ್ ಸಯಾನಿಯ ಧ್ವನಿ ಕಂಠದಲ್ಲಿ, ಹೊರಹೊಮ್ಮುವ ‘ಬೆಹನೋ ಔರ್ ಭಾಯಿಯೋಂ’ ಇಸ್ ಹಫ್ತೇ ಕೀ ಚೋಟೀ ಪರ್ ಆ ಗಯೀ ಹೈ’ ಎಂದಾಕ್ಷಣ, ಇಡೀ ದೇಶದ ಶ್ರೋತೃಗಳ ಕಿವಿಗಳೆಲ್ಲ, ಅವರ ಧ್ವನಿಯಿಂದ ಹೊರಡುವ ಆ ಅನೌನ್ಸ್ ಮೆಂಟ್ಗೆ ಕಾಯುವ ಆ ಪರಿ, ಇಂದಿಗೂ ನೆನಪಿಸಿಕೊಂಡರೆ ರೋಮಾಂಚನವೆನಿಸೀತು.ಅಂತಹ ಬಿನಾಕಾ ಗೀತಾಮಾಲಾದಲ್ಲಿ ಇದರ ಕೆಲವು ಹಾಡುಗಳು, ‘ಸರ್ ತಾಜ್‘ ಇನ್ನುಳಿದವು ಅದರಲ್ಲಿ ಮೊಳಗಿದ್ದುದು ಈ ಚಿತ್ರದ ಹಾಡುಗಳ ಹಿರಿಮೆ. ದೇಶದ ಎಲ್ಲ ಬಾನುಲಿ ಕೇಂದ್ರಗಳಿಂದ ಪದೇ ಪದೇ ‘ಫರಮಾಯಿಶ್’ ಗಳಲ್ಲಿ, ‘ಮನ್ ಚಾಹೇ ಗೀತ’ ಗಳಲ್ಲಿ ಗುಣಿಗುಣಿಸಿದವು ‘ಆರಾಧನಾ’ ಹಾಡುಗಳು. ಅಂದಿನಿಂದ ರಾಜೇಶ ಖನ್ನಾನ ಹಾಗೆ ಡ್ರೆಸಿಂಗ್ ಹಾಗೂ ಹೇರ್ ಸ್ಟೈಲ್ ಮಾಡಿಕೊಳ್ಳುವುದು, ಕಿಶೋರ ಕುಮಾರ ಹಾಗೆ ಹಾಡುವುದೇ ಹದಿಯರೆಯದ, ಕಾಲೇಜು ಯುವಕರ, ಪ್ರೇಮಿಗಳ ಪ್ರವೃತ್ತಿಯಾಯಿತು. ಎಲ್ಲ ಆರ್ಕೆಸ್ಟ್ರಾ ಗಳಲ್ಲಿ ಕಿಶೋರನ ಹಾಡುಗಳೇ. ಅಂದು ಬೆಳೆದ ಕಿಶೋರ, ತಮ್ಮ ಅಪ್ಪಟ ಪ್ರತಿಭೆಯಿಂದ, ಜನಪ್ರಿಯತೆಯಿಂದ, ತಮ್ಮ ಕಾಲದ ಎಲ್ಲ ಮೇಲ್ ಸಿಂಗರ್ಗಳನ್ನು ಸುಮಾರು ವರ್ಷಗಳ ವರೆಗೆ ಅಕ್ಷರಶ: ಮನೆಯಲ್ಲಿ ಕೂಡುವಂತೆ ಮಾಡಿದರು. ಪ್ರತಿ ಹಾಡು ಮನೆ ಮಾತಾದವು. ‘ಮೇರೆ ಸಪನೋಂ ಕಿ ರಾಣಿ ಕಬ್ ಆಯೇಗಿ ತೂ’ , ಕೋರಾ ಕಾಗಜ್ ಥಾ ಎ ಮನ್ ಮೇರಾ’ ಸ್ಕೋರ್ ಗಳನ್ನು ಮೂ¯ವಾಗಿ ಕಂಪೋಸ್ ಮಾಡಿದ್ದು ಪಂಚಮ್, ಆದರೆ ಎಲ್ಲಿಯೂ ತಮ್ಮ ಹೆಸರು ಇದರಲ್ಲಿ ಕಾಣಿಸಲಿಲ್ಲ, ಆದರೆ ಬಂಗಾಳಿಯಲ್ಲಿ ಇಬ್ಬರ ಹೆಸರುಗಳನ್ನು ಕಂಪೋಸರ್ಗಳೆಂದು ದಾಖಲಿಸಲಾಯಿತು.
ಆ ವರ್ಷದ ಫಿಲ್ಮಫೇರ್ ಅತ್ಯುತ್ತಮ ಚಿತ್ರಪ್ರಶಸ್ತಿ ‘ಆರಾಧನಾ’ ಚಿತ್ರಕ್ಕೆ ದೊರೆಯಿತು.. ಅತ್ಯುತ್ತಮ ನಟಿ ಶರ್ಮಿಲಾ ಟಾಗೋರ್, ಅತ್ಯುತ್ತಮ ಹಿನ್ನೆಲೆ ಹಾಡು, ‘ರೂಪ ತೇರಾ ಮಸ್ತಾನಾ’ ಕ್ಕೆ ಕಿಶೋರ ಅತ್ಯುತ್ತಮ ಹಿನ್ನೆಲೆ ಗಾಯಕ, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ, ಎಸ್ ಡಿ ಬರ್ಮನರಿಗೆ, ಆ ವರ್ಷದ ‘ನ್ಯಾಶನಲ್ ಅವಾರ್ಡ’ ಬಂದದ್ದು, ಅವರ ಎವರ್ ಗ್ರೀನ್ ಹಾಡಿಗೆ, ‘ಸಫಲ್ ಹೋಗೀ ತೇರಿ, ಆರಾಧನಾ’. ವಾಹ್! ಎಂಥ ಮಾಧುರ್ಯ ತುಂಬಿದ ಹಾಡಿದು. ಬಂಗಾಲಿ, ಬಟಾಲಿಕ್ ಸಂಗೀತವನ್ನು ಮೇಳೈಸಿ, ಹಾಡಿದ ಹಾಡಿದು. ಈಗಲೂ ಹಾಡನ್ನು ಕೇಳುತ್ತಿದ್ದರೆ ಮೈ ರೋಮಾಂಚನದ ಅನುಭವ ಆದೀತು.
ಹೀಗೆ ಚಿತ್ರಜಗತ್ತಿನ ಇತಿಹಾಸವನ್ನೇ ಬದಲಿಸಿದ, ಎಂದೂ ಮರೆಯದ ಚಿತ್ರ ‘ಆರಾಧನಾ’, ಚಿತ್ರ ಜಗತ್ತಿನ ಮೈಲಿಗಲ್ಲು.
ಹೀರೋನ ಅಪ್ಪನಿಗೆ ಹಾಡಲೂ, ಅವಕಾಶಕ್ಕಾಗಿ ಹಾತೊರೆಯುತ್ತಿದ್ದ, ಕಿಶೋರನ ಲೀನ್ ಯುಗವೊಂದು ಕರಗಿ, ಅಮರ ಗಾಯಕನ ಸಿರಿಕಂಠದ ಹಾಡುಗಳು ರೂಪುಗೊಂಡು, ಸಂಗೀತ ಪ್ರೇಮಿಗಳನ್ನು, ಶ್ರೋತೃಗಳನ್ನು ತಮ್ಮ ಮಾಧುರ್ಯದಿಂದ ಈಗಲೂ ಮನಸ್ಸುಗಳನ್ನು ತಲ್ಲೀನಗೊಳಿಸುತ್ತಿವೆ. ಇಂದಿಗೂ, ಎಂದಿಗೂ ಕೇಳುಗರ ಹೃದಯದಲ್ಲಿ ಕಿಶೋರ ಅಮರ. ಕಿಶೋರ ಅವರೇ ಒಂದು ಹಾಡಿನಲ್ಲಿ ಹೇಳುವಂತೆ, ‘ಜಿಂದಗೀ ಕೆ ಸಫರ ಮೇ ಗುಜರ್ ಜಾತೇ ಹೈಂ, ಔರ್ ವೊ ಫಿರ್ ನಹೀಂ ಆತೇ…ವೋ ಫಿರ್ ನಹೀಂ ಆತೇ.. ಎನ್ನುತ್ತ ನಮ್ಮನ್ನಗಲಿದ ಮಹಾನ್ ಚೇತನ ಎಲ್ಲಿದ್ದರೂ ನೆಮ್ಮದಿಯಾಗಿರಲಿ, ಅವರ ಹಾಡುಗಳನ್ನು ಕೇಳುವುದೇ ಅವರಿಗೆ ನಾವು ನೀಡುವ ಶೃದ್ಧಾಂಜಲಿ ಎನ್ನೋಣವೇ!