ಕಿಚ್ಚು ::ಭಾಗ -೮
ಕಿಚ್ಚು ::ಭಾಗ -೮
ಹಿಂದಿನ ಕಂತು : http://sampada.net/blog/kamathkumble/19/12/2010/29556
೧೭
ಬಸ್ಸನಲ್ಲಿ ಗುರುತು ಪತ್ತೆ ಹಚ್ಚದ ಯಶೋದಮ್ಮ ಬಸ್ಸ್ ನಿಂದ ಇಳಿಯುತ್ತಲೇ ನನ್ನನ್ನು ಗುರುತಿಸಿದರು,ನನ್ನನ್ನು ನೋಡುತ್ತಲೇ "ಮಗೂ ನಿನ್ನ ಬೆನ್ನ ಹಿಂದೆ ಏನು ನಡೆದಿದೆ ಎಂದು ತಿಳಿದಿದ್ದಿಯಾ? ನೀನು ಸಾಧನೆ ಮಾಡಿರುವೆ ಅಂದು ಕೊಂಡಿರಬಹುದು ಆದರೆ ನೀನು ನಿನ್ನ ಜೀವನವನ್ನೇ ಸುಟ್ಟು ಬಿಟ್ಟೆ, ಆ ಅಮೂಲ್ಯ ಜೀವನ ಇನ್ನೆಂದು ಬರಲಾರದು, ನೀನು ಜೀವನದ ಮೊದಲ ಆಟದಲ್ಲೇ ಸೋತು ಬಿಟ್ಟೆ, ಇನ್ನು ನೀನು ಯಾವುದೇ ವಿಧವಾದ ವಿಧಿಯಾಟವನ್ನು ಎದುರಿಸಲು ನಿಶ್ಯಕ್ತ ನಾಗಿರುವೆ, ಮನೆಯವರು, ಸಮಾಜ , ಮತ್ತು ಪರಿಸ್ಥಿತಿ ಎಲ್ಲಾ ನಿಮ್ಮಿಬ್ಬರ ಜೀವನದ ಮೇಲೆ ನಿರಂತರ ವಾಗಿ ಜ್ವಾಲೆಯ ಚೆಂಡನ್ನು ಎಸೆಯುತ್ತಲೇ ಇರುತ್ತದೆ, ಅದನ್ನು ಎದುರಿಸುವ ಸಾಮರ್ಥ್ಯ ನಿಮ್ಮಿಬ್ಬರರಲ್ಲಿ ಇಲ್ಲ . ಕನಸು ಕಾಣುವ ಹೊತ್ತಲೇ ಮನಸ್ಸಿನ ಬಯಕೆಗೆ ಮನಸೋತಿರಿ , ಆದರೆ ಇನ್ನು ಮನಸು ಅಂದುಕೊಂಡರು ಈ ಸವಿ ದಿನದ , ಸವಿ ಬಾಳಿನ ಕನಸು ಬಿಳಲಾರದು. ನೀವು ಮನೆಗೆ ಹೋಗ ಬೇಡಿ, ಅಲ್ಲಿ ಎಲ್ಲ ಹಸಿದ ಹೆಬ್ಬುಲಿ ಗಳಾಗಿದ್ದರೆ , ನೀವು ಅವರ ಕೈಗೆ ಸಿಕ್ಕಿದರೆ ನಿಮ್ಮನ್ನು ಕೊಂದು ತಮ್ಮ ದ್ವೇಷ ಸಾಧಿಸುತ್ತಾರೆ, ಇಲ್ಲಿಂದಲೇ ನೀವು ನಿಮ್ಮ ಕನಸಿನೂರಿನ ಕನಸಿನ ಪಯಣಕ್ಕೆ ಮರಳಿ, ನೀವು ಸಿಕ್ಕಿರುವ ವಿಚಾರ ನಾನು ಯಾರಲ್ಲಿ ಹೇಳುವುದಿಲ್ಲ, ಹೋಗಿ ...."
ಅವರ ಕಾಳಜಿಯನ್ನು ನೋಡಿ ನಾನು "ಯಶೋದಮ್ಮ , ಇಲ್ಲ ನಾನು ಯಾರು ಏನು ಹೇಳಿದರು ಕೇಳಲು , ಅವರು ಕೊಡುವ ಶಿಕ್ಷೆ ಅನುಭವಿಸಲು ತಯಾರಿದ್ದೇನೆ, ಎಲ್ಲದಕ್ಕೂ ನಾವು ಮಾಡಿರುವ ತಪ್ಪೇ ಕಾರಣ, ತಂದೆ-ತಾಯಿಯನ್ನು ಪರೋಕ್ಷವಾಗಿ ನಮ್ಮ ಪ್ರೀತಿ ಬಲಿ ತೆಗೆದು ಕೊಂಡಿತು ಕನಿಷ್ಠ ಪಕ್ಷ ಅವರ ೧೩ ನೇ ದಿನದ ಕಾರ್ಯ ಮಾಡಿ ನನ್ನ ಋಣ ಕಮ್ಮಿ ಮಾಡಿ ಕೊಳ್ಳುತ್ತೇನೆ."
ಅದಕ್ಕೆ ಅವರು "ಮತ್ತೆ ನಿನ್ನಿಷ್ಟ, ಆದರೆ ಅಲ್ಲಿ ಹೋದರೆ ನಿನಗೆ ಎಲ್ಲರ ಅವಾಚ್ಯ ಶಬ್ದ ಕೇಳ ಬೇಕಾಗಬಹುದು , ಆ ಮಾತುಗಳು ,ಇಲ್ಲ ಅವರು ಕೊಟ್ಟ ಶಿಕ್ಷೆಯನ್ನು ನೀವಿಬ್ಬರು ಜೀವನ ಪೂರ್ತಿ ಅನುಭವಿಸ ಬೇಕಾಗಿ ಬರಬಹುದು ಆದಕಾರಣ ನೀವು ಅಲ್ಲಿ ಹೋಗದೆ ಇರುವುದು ಸೂಕ್ತ "
ಅವರು ಏನೆಂದರು ನಾವು ಮನೆಗೆ ಹೋಗಲು ನಿರ್ಧರಿಸಿ ಆಗಿತ್ತು ಮೂವರು ಸುಮಾರು ೧ ಮೈಲು ನಡೆದಿರಬಹುದು,ದಾರಿ ಕವಲಾಯಿತು, ಯಶೋದಮ್ಮನ ಮನೆ ಬಲಬದಿಯ ಕವಲಲ್ಲಿ, ನಾವಿಬ್ಬರು ಎಡಬದಿಯ ಕವಲು ಹಿಡಿದೆವು, ಅವರು ನಮ್ಮಲ್ಲಿ "ಸರಿ ಕಣಪ್ಪ ನಿಮ್ಮ ದಾರಿ ನೀವು ನೋಡಿ ಕೊಳ್ಳಿ."ಅಂದು ತಮ್ಮ ದಾರಿ ಹಿಡಿದರು.
ಡಾಮರು ಕಾಣದ, ದೃಷ್ಟಿ ಹಾಯಿಸಿದಷ್ಟು ದೂರ ಸಾಗುವ ಒಂಟಿ ರಸ್ತೆ, ಸೂರ್ಯನ ಪಯಣ ಆಗಲೇ ನಿಧಾನವಾಗಿತ್ತು. ವಸುಂದರ ಇಲ್ಲಿವರೆಗೆ ಇಷ್ಟು ನಡೆದಿರಲಿಕ್ಕಿಲ್ಲ, ಹುಟ್ಟಿನಿಂದ ಕಾರ್ ಸೈಕಲ್ ನಲ್ಲಿ ತಿರುಗಾಡುತ್ತಿದ್ದ ಶ್ರೀಮಂತರ ಮನೆ ಹುಡುಗಿಯನ್ನು ಸುಡುವ ಬಿಸಿಲಿನಲ್ಲಿ ನಾನು ನಡೆಸಿಕೊಂಡು ಹೋಗುತಿದ್ದೆ.ಮದ್ಯಾಹ್ನದ ಸಮಯವಾಗಿರುವುದರಿಂದ ದಾರಿ ಮದ್ಯ ಯಾವನೇ ಪರಿಚಯದವನು ಸಿಗದ ಕಾರಣ ಕಿವಿ ಮಾಲಿನ್ಯವಾಗದೆ ಉಳಿದು ಹೋಯಿತು, ಇಲ್ಲಂತಾದರೆ ಮುಂದಿನ ೧ ಮೈಲು ೧೦೦ ಮೈಲಿನ ದೂರವಾಗುತಿತ್ತು. ನಡೆ ನಡೆಯುತ್ತಲೇ ನನ್ನ ಮನೆ ತಲುಪಿದೆವು.
ಕಲ್ಲು, ಮಣ್ಣಿನ ಗೋಡೆಗೆ ಸೆಗಣಿಯ ಬಣ್ಣ, ಒಂದು ಬದಿಯಲ್ಲಿ ಹಂಚಿನ ಮಾಡು , ಹಣವಿಲ್ಲದೆ ಇನ್ನೊಂದು ಬದಿಯಲ್ಲಿ ಅಜ್ಜನ ಕಾಲದಲ್ಲಿ ಹಾಸಿದ್ದ ಮುಳಿ ಆಗಲೋ ಇಗಲೋ ಬೀಳುವಂತಿತ್ತು. ಸಣ್ಣದಾದ ಅಂಗಳ, ಅದರಲ್ಲಿ ಒಡೆದು ಹೋದ ಚೆಟ್ಟಿಯೇ ತುಳಸಿ ಕಟ್ಟೆ, ಅದರ ಪಕ್ಕದಲ್ಲಿ ತಿಂಗಳು ಗಳಿಂದ ಎಣ್ಣೆ ಇಲ್ಲದೆ ಬಿದ್ದ ಒಣ ಹಣತೆ, ಇದನೆಲ್ಲ ನೋಡುತ್ತಿದ್ದಂತೆ ವಸುಂದರನಿಗೆ ಯಾವ ನರಕಕ್ಕೆ ಬಂದು ಬಿದ್ದೇನು ಎಂದೆನಿಸಿರಬಹುದು, ಅವಳು ನನ್ನಲ್ಲಿ "ಇದುವೇ ನಿಮ್ಮ ಮನೆ?" ಎಂದು ಕೇಳಿದಳು.
ನಾನು "ನಮ್ಮ ಮನೆ ಅನ್ನು , ನಾವಿನ್ನು ಇಲ್ಲೇ ಇರ ಬೇಕಾದದ್ದು" ಅಂದೆ.
ಪಾಪ ವಸುಂದರ ಅವರ ಮನೆಯ ಕೆಲಸದವರ ಬಚ್ಚಲು ಇದಕ್ಕಿಂತ ಚೊಕ್ಕ ಮತ್ತು ಶುಬ್ರವಾಗಿರುವುದನ್ನು ನೋಡಿ ಬೆಳೆದವಳು, ಈ ಕೋಳಿ ಗೂಡನ್ನು ತನ್ನ ಮನೆ ಎಂದು ಸ್ವೀಕರಿಸುವಲ್ಲಿ ಕಷ್ಟವಾಯಿತು.
ನಾನು ಮುಳ್ಳಿನ ಬೇಲಿಯ ನಡುವಿನ ಕಂಗಿನ ಗೇಟ್ ತೆಗೆದು ಒಳ ನಡೆದೆ. ಮನೆಯಲ್ಲಿ ಆಗಲೇ ದೊಡ್ದವರೆನಿಸಿದವರು ಬಂದಾಗಿತ್ತು, ತಮ್ಮ ವಸಂತ ಕ್ರಿಯೆಗೆ ಮಡಿಯಲ್ಲಿ ಕೂತಾಗಿತ್ತು.ನಾನು ಅಂಗಳ ದಾಟಿ ಜಗಲಿ ಮೇಲೆ ಹೆಜ್ಜೆ ಇಟ್ಟೆ ನನ್ನ ಹಿಂದೆ ವಸುಂದರ ನನ್ನ ನೆರಳಂತೆ ಸದ್ದಿಲದಂತೆ ಬರುತಿದ್ದಳು ,ಹೊಟ್ಟು ಬಿಡುತ್ತ ಅರ್ದ ಜೀವ ವಾಗಿರುವ ಮಾವಿನ ಮರದ ಬಾಗಿಲು ಮೆಲ್ಲನೆ ಸರಿಸಿದೆ, ಅಲ್ಲೇ ಕುಳಿತಿದ್ದ ಇಷ್ಟು ವರುಷ ನಮ್ಮಲ್ಲಿ ದ್ವೇಷ ಸಾದಿಸುತಿದ್ದ ತಂದೆಯವರ ಅಣ್ಣ ಅಂದರೆ ನನ್ನ ದೊಡ್ಡಪ್ಪನನ್ನು ಕಂಡೆ.
ನಮ್ಮಿಬ್ಬರನ್ನು ನೋಡುತಿದ್ದಂತೆ ಅವರು ನನ್ನಲ್ಲಿ "ಒಳಗೆ ಪ್ರವೇಶಿಸ ಬೇಡಿ , ನೀನು ಎನ್ನಂದು ಕೊಂಡಿದ್ದಿಯಾ ಇಲ್ಲಿ ಯಾರು ಹಿರಿಯರಿಲ್ಲ ,ನಡೆದದ್ದೇ ದಾರಿ ಅಂದು ಕೊಂಡಿದ್ದಿಯಾ ?ಅಪ್ಪನನ್ನು ಬಲಿ ತೆಗೆದು ಕೊಂಡಿ, ಇನ್ನು ನಮ್ಮ ಹಿಡಿ ಕುಟುಂಬವನ್ನೇ ಬಲಿ ತೆಗೆದು ಕೊಳ್ಳುವೆಯಾ?"
ನನಗೆ ಏನು ಹೇಳ ಬೇಕಂತ ತಿಳಿಯಲಿಲ್ಲ, ಅವರು ನನ್ನನ್ನು ಅತ್ತ ಸರಿಸುತ್ತ ಹಿಂದೆ ನಿಂತ ವಸುನ ಕತ್ತಿಗೆ ಕೈ ಹಾಕಿ "ಎಂಥ ಮಾಯಾಂಗನೆ ಕಣಮ್ಮ ನೀನು, ಬಂಗಾರದಂತ ಕುಟುಂಬವನ್ನೇ ಸುಟ್ಟು ಬಿಟ್ಟಿಯಲ್ಲೇ ? ಇವನ ಕೈ ಹಿಡಿದದ್ದೇ ಹಿಡಿದದ್ದು ಹಿಡಿ ಕುಟುಂಬವನ್ನು ಸರ್ವ ನಾಶಕ್ಕೆ ತಳ್ಳಿದೆಯಲ್ಲಾ? ನಾವು ಯಾವ ತಪ್ಪು ಮಾಡಿದೆವೆಂದು ಈ ಬಗೆಯ ಶಿಕ್ಷೆ ನೀ ನೀಡಿದ್ದು ?ಬರುವ ಕೋಪಕ್ಕೆ ನಿನ್ನನ್ನು ಇಲ್ಲೇ ಕತ್ತು ಹಿಸುಕಿ ಸಾಯಿಸ ಬೇಕು" ಎನ್ನುತ್ತಾ ಗಟ್ಟಿಯಾಗಿ ಕತ್ತು ಹಿಸುಕಿದರು.
ನನ್ನಲ್ಲಿನ ಹಿಂದಿನ ದ್ವೇಷಾಗ್ನಿ ಇನ್ನು ಪ್ರಖರವಾಯಿತು ಆದರೆ ಏನು ಮಾಡಲು ನಾ ನಿಶಕ್ತನಾಗಿದ್ದೆ, ಎಲ್ಲದಕ್ಕೂ ನಾವು ಮಾಡಿದ ತಪ್ಪು ನಿರ್ಧಾರವೇ ಕಾರಣ ವಾಗಿತ್ತು. ಒಳ ಇಟ್ಟ ಬಲ ಗಾಲನ್ನು ಹೊಸ್ತಿಲಿನಿಂದ ಹೊರ ತೆಗೆದೆ, ಹಾಗೆ ಬಗ್ಗಿ ದೊಡ್ಡಪ್ಪ ಎಂಬ ಹೊಸ ಸಂಭಂದಿಕನ ಕಾಲು ಹಿಡಿದು "ತಪ್ಪಾಯ್ತು ದೊಡ್ಡಪ್ಪ, ನಮ್ಮನ್ನು ಕ್ಷಮಿಸಿ ಬಿಡಿ, ಅವಳನ್ನು ಬಿಟ್ಟು ಬಿಡಿ , ನಾವಿಬ್ಬರು ನಿಮ್ಮನೆಲ್ಲ ಬಿಟ್ಟು ದೂರ ಹೋಗುತ್ತೇವೆ , ಅವಳನ್ನು ಅಗಲಿ ನಾನಿರಲಾರೆ, ಬಿಟ್ಟು ಬಿಡಿ ಇನ್ನೆಂದಿಗೂ ನಾವು ನಿಮ್ಮ ಸಂಭಂದವನ್ನು ಅರಸಿ ಬರುವುದಿಲ್ಲ, ಬಿಟ್ಟು ಬಿಡಿ" ಎನ್ನುತ್ತಾ ಅತ್ತು ಬಿಟ್ಟೆ.
ವಸುಂದರನ ಚೀರಾಟವೂ ಕಮ್ಮಿ ಆಯಿತು , ಕೈ ಸಡಿಲ ಗೊಂಡಿತು. ಒಳಗಿನ ತಮ್ಮ ತಂಗಿಯರೆಂಬ ೮ ಪ್ರೇಕ್ಷಕರು ಮೌನಿಯಾಗಿಯೇ ಕಣ್ಣ ಮುಂದೆ ನಡೆಯುತ್ತಿರುವ ವಿಚಿತ್ರ ನಾಟಕದ ಪ್ರೇಕ್ಷಕರಾದರು.ಭಾರವಾದ ಮನಸ್ಸಿನಿಂದ ಕಂಗಿನ ಗೇಟ್ ಮುಚ್ಚಿದೆ, ಇನ್ನೊಮ್ಮೆ ನಾ ಹುಟ್ಟಿ ಬೆಳೆದ ಮನೆಗೆ ಕೊನೆಯ ಸಲಾಂ ಹೊಡೆದು ದೂಳು ಹಿಡಿದ ದಾರಿಯಲ್ಲಿ ನಂಭಿ ಬಂದ ವಸುವಿನೊಂದಿಗೆ ಹೆಜ್ಜೆ ಇಡಲು ಕಾಲಕೆಳಗೆ ನೆರಳು ಕೂಡ ನನ್ನ ಜೊತೆ ಗಿರಲಿಲ್ಲ.
ಮುಂದಿನ ಭಾಗ : http://sampada.net/blog/kamathkumble/22/12/2010/29629
Comments
ಉ: ಕಿಚ್ಚು ::ಭಾಗ -೮
In reply to ಉ: ಕಿಚ್ಚು ::ಭಾಗ -೮ by shamzz
ಉ: ಕಿಚ್ಚು ::ಭಾಗ -೮