ಕಿಚ್ಚು :: ಭಾಗ - ೯
ಕಿಚ್ಚು :: ಭಾಗ - ೯
ಹಿಂದಿನ ಕಂತು : http://sampada.net/blog/kamathkumble/21/12/2010/29603
೧೮
ನನ್ನ ಎದೆಯಲ್ಲಿ ವಸುಂದರ ಅಂದು ಹಚ್ಚಿದ ಪ್ರಶಾಂತ ಪ್ರೇಮದ ಹಣತೆ ಈಗ ವಿರಾಟ ರೂಪ ತಾಳಿತ್ತು , ನಮ್ಮಿಬ್ಬರ ಜೀವನದಲ್ಲಿ ದೊಡ್ಡದೊಂದು ಸುಂಟರಗಾಳಿಯನ್ನೇ ಎಬ್ಬಿಸಿತ್ತು. ಇಬ್ಬರ ಮನೆಯವರಿಂದಲೂ ಬಹಿಷ್ಕಾರ ಹಾಕಿಸಿ ಕೊಂಡ ಈ ಹದಿಹರೆಯದ ಜೋಡಿಹಕ್ಕಿಗೆ ಸೂರು ಇಲ್ಲದಾಯಿತು.ಇಬ್ಬರು ಸಂಧರ್ಭ ಕೊಟ್ಟ ಶಿಕ್ಷೆಗೆ ಶರಣಾಗಬೇಕಾಯಿತು. ಮನೆಯವರು ನನ್ನನ್ನು ದೂರ ಮಾಡಿದರು ಆದರೂ ಅವರಿಗೆ ನನ್ನ ಆಶ್ರಯದ ಅಗತ್ಯವಿತ್ತು ಅಂದುಕೊಂಡು ಪುನಃ ಬೆಂಗಳೂರಿಗೆ ಹೋಗುವುದು ಬೇಡ ಮಂಗಳೂರಿನಲ್ಲಿಯೇ ಕೆಲಸ ಹುಡುಕುವುದು ಎಂದು ನಿಶ್ಚಯಿಸಿ ಕೊಂಡೆ. ತಂದೆಯವರ ಕೊನೆಯ ಕಾರ್ಯ ನನ್ನ ಕೈಯಲ್ಲಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗಿನಿಂದಲೇ ಸುಡು ಬಿಸಿಲಿನಲ್ಲಿ ನಾವಿಬ್ಬರು ಬರುತಿದ್ದೆವು ಅದೇ ವೇಳೆಗೆ ಅದೇ ಮೂರು ಮಾರ್ಗದಲ್ಲಿ ಯಶೋದಮ್ಮ ಎದುರಾದರು, ನಮ್ಮ ಹತಾಶ ಮುಖ ಛಾಯೆಯನ್ನು ನೋಡಿ ಅವರು ನಮ್ಮೊಂದಿಗೆ ನಡೆದಿರಬಹುದಾದ ವಿಷಯಗಳನ್ನು ಮನಗೊಂಡು ನನ್ನ ಮತ್ತು ವಸುವನ್ನು ಸಲ್ಪ ದಿನದ ಮಟ್ಟಿಗೆ ಅವರ ಮನೆಯಲ್ಲಿ ಇರುವಂತೆ ಸೂಚಿಸಿದರು. ಅವರ ಆ ಮಾತುಗಳು ನಿಜಕ್ಕೂ ನಮಗೆ ನೂರು ಆನೆಯ ಬಲ ನೀಡಿದಂತಾಯಿತು.
ಯಶೋದಮ್ಮನ ಮನೆಯಲ್ಲಿ ಅಂದು ಮಿಕ್ಕಿದ ಅನ್ನ ಸಾರಿನಿಂದಲೇ ಹಸಿವಿನ ದಾಹವನ್ನು ಸಣ್ಣ ಮಟ್ಟಿಗೆ ತೀರಿಸಿಕೊಂಡೆವು.ನಾನು ಅವರಲ್ಲಿ ಯಾವುದಾದರು ಸಣ್ಣ ಪುಟ್ಟ ಕೆಲಸ ಪಕ್ಕದೂರಿನಲ್ಲಿ ಇಲ್ಲ ಮಂಗಳೂರಿನಲ್ಲಿ ಹುಡುಕುತ್ತೇನೆ, ಮನೆಯವರ ಕಣ್ಣಿಗೆ ಬೀಳದೆ ಅವರ ಎಲ್ಲಾ ಜವಾಬ್ಧಾರಿ ನಾ ತೆಗೆದು ಕೊಳ್ಳಬೇಕು, ಈ ಕೆಲಸಕ್ಕೆ ನಿಮ್ಮ ಸಹಾಯ ಬೇಕು ಎಂದು ವಿನಂತಿಸಿ ಕೊಂಡೆ. ಅವರು ಅದಕ್ಕೆ ಸಮ್ಮತಿ ಇಟ್ಟರು.
ಯಶೋದಮ್ಮ ನವರು ತನ್ನ ಮಗನ ಹಳೆಯ ಕೆಲವು ಶರ್ಟ್ ಮತ್ತು ಮಗಳ ಕೆಲ ಹಳೆ ಬಟ್ಟೆಗಳನ್ನು ನಮ್ಮಿಬ್ಬರಿಗೆ ಕೊಟ್ಟರು. ಅಂತು ಇಂತು ೧ ವಾರದಿಂದ ತೊಟ್ಟ ಬಟ್ಟೆಯಿಂದ ಮುಕ್ತಿ ಸಿಕ್ಕಿದಂತಾಯಿತು.ತಮ್ಮ ತೋಟ ದಲ್ಲಿರುವ ಪಂಪ್ ರೂಂ ನಲ್ಲಿ ನಮ್ಮಿಬ್ಬರ ವಾಸ್ತವ್ಯಕ್ಕೆ ಅನುವುಮಾಡಿ ಕೊಟ್ಟರು.ನಾನು ಹಾರೆ ಗುದ್ದಲಿ ಹಿಡಿದು ಅವರ ಹೊಲದ ಕೆಲಸದಲ್ಲಿ ನಿರತ ರಾಗಿದ್ದರೆ ವಸುಂಧರನಿಗೆ ಮನೆಯ ಯಾವುದೇ ಕೆಲಸ ಗೊತ್ತಿರದಿದ್ದರು ಕೂತು ಯಶೋದಮ್ಮ ಕೊಟ್ಟ ಬಿಟ್ಟಿ ಅನ್ನ ತಿನ್ನಲು ಸ್ವಾಭಿಮಾನ ಅಡ್ಡ ಬಂದು ಮನೆಯ ಕಸ ಮುಸುರೆ ಕೆಲಸವನ್ನು ನೆಚ್ಚಿ ಕೊಂಡು ಮಾಡಲು ತೊಡಗಿದಳು.ಬೆಳಗ್ಗೆ ಮತ್ತು ಸಂಜೆ ಹೊಲದ ತೆಂಗಿನ ತೋಟಕ್ಕೆ ನೀರು ಬಿಡುವುದು, ಬಿದ್ದ ಅಡಿಕೆ ಸಂಗ್ರಹಿಸುವುದು ನನ್ನ ಮತ್ತು ವಸುಂದರನ ದಿನಚರಿ ಯಲ್ಲಿ ಸೇರಿ ಹೋಯಿತು.
ಒಂದು ವಾರದಲ್ಲೇ ವಸುಂದರ ಇಂಥ ಸಣ್ಣ ಪುಟ್ಟ ಕೆಲಸ ಕಲಿತಳು,ಹೊಲದಲ್ಲಿನ ಕಳೆ ಎಲ್ಲಾ ಚೊಕ್ಕವಾದವು, ಬೇಲಿ ಇನ್ನು ಗಟ್ಟಿಯಾದವು. ಇನ್ನು ನನಗೆ ಆ ಹೊಲದಲ್ಲಿ ದೈನಂದಿನ ಕೆಲಸ ವಿರಲಿಲ್ಲ. ಮಾರನೆ ದಿನ ಬೆಳಗ್ಗಿನ ಕೆಲಸ ಮುಗಿಸಿ ಮಂಗಳೂರಿಗೆ ಹೋಗಿ ನನಗೆ ತಕ್ಕ ಮಟ್ಟಿನ ಕೆಲಸದ ಹುಡುಗಾಟ ನಡೆಸುವ ಎಂದು ಹೊರಟೆ.ಸಣ್ಣ ಪುಟ್ಟ ಹೋಟೆಲ್,ಗರಾಜ್ ಎಲ್ಲಾ ಹುಡುಕಾಟ ನಡೆಸಿದೆ. ಸಂಜೆ ಯ ಹೊತ್ತಿಗೆ ಒಂದು ಹೋಟೆಲಿನಲ್ಲಿ ೪೫೦ ತಿಂಗಳ ಸಂಬಳಕ್ಕೆ ಒಪ್ಪಿಕ್ಕೊಂಡೆ.
ಈ ಸುದ್ದಿಯನ್ನು ನಾನು ವಸುಂದರ ನಲ್ಲಿ ಸಂಜೆ ಹೇಳಿಕೊಂಡೆ. ಅವಳು "ಆ ಕೆಲಸದ ಬದಲು ಬೆಂಗಳೂರಿನಲ್ಲಿ ಗಿಟ್ಟಿಸಿದ ಕೆಲಸವೇ ಒಳ್ಳೇದು ತಿಂಗಳಿಗೆ ೨೫೦ ರುಪಾಯಿ ಹೆಚ್ಚಿನದಾಗಿ ಸಂಪಾದಿಸಬಹುದು,ಮಂಗಳೂರಿನ ಕೆಲಸ ಬೇಡ ಬದಲಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಸಂಬಳಕ್ಕೆ ಸೇರಿ ಕೊಳ್ಳಿ" ಅಂದಳು.
ನಾನು ಇವಳಲ್ಲಿ ನಗರದ ವ್ಯಾಮೋಹ ತುಂಬಿದೆ ಅಂದುಕ್ಕೊಂಡೆ ಆದರೆ ಅವಳು ಮುಂದುವರಿಸಿದಳು "ನೀವು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿ ಕೊಳ್ಳಿ, ನಾನು ಇಲ್ಲೇ ಯಶೋದಮ್ಮ ನೊಂದಿಗೆ ನಿಮ್ಮ ಮನೆಯವರ ಕಾಳಜಿ ವಹಿಸಿ ಕೊಳ್ಳುತ್ತೇನೆ, ನೀವು ಅಲ್ಲಿ ಆರಾಮಾಗಿರಿ."ಅಂದಳು.
ನನಗೆ ಅವಳ ಮೇಲೆ ಈಗ ಅಭಿಮಾನವು ಇಮ್ಮಡಿ ಯಾಯಿತು, ತನ್ನ ಬಗ್ಗೆ ಧ್ವೇಶದ ಮಾತಾಡಿದ ನನ್ನ ಕುಟುಂಬದವರ ಮೇಲೆ ಇವಳು ಇತ್ತ ಪ್ರೀತಿ ಕಂಡು ನನಗೆ ಮನ ಉಕ್ಕಿ ಬಂತು, ಇಲ್ಲಿದ್ದರೆ ಬಾರಿ ಬಾರಿಗೂ ಜನರ ಚುಚ್ಚುಮಾತಿಗೆ ಗುರಿ ಆಗ ಬೇಕಾಗುತ್ತದೆ, ಆದರೆ ಬೆಂಗಳೂರಿಗೆ ಹೋದರೆ ಇವೆಲ್ಲದರಿಂದ ಮುಕ್ತಿ ಸಿಗುತ್ತದೆ, ವಸುಂದರನನ್ನು ಇಲ್ಲಿ ನನ್ನ ಮನೆಯವರು ಬಿಟ್ಟರೆ ಬೇರೆ ಯಾರು ಗುರುತಿಸಲಾರರು, ಯಶೋದಮ್ಮನಿಗೂ ರಾಯರಿಗೂ ಇವಳು ಈಗ ಮಗಳಿನಷ್ಟೇ ಆತ್ಮೀಯಳಾಗಿದ್ದಳು. ಇವಳ ರಕ್ಷಣೆ ಅವರು ಮಾಡುವಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ.
ನಾನು ವಸುಂದರನಲ್ಲಿ "ಯಶೋದಮ್ಮನಲ್ಲಿ ಕೇಳಿ ನೋಡುವ ಅವರೆನೆನ್ನುತ್ತಾರೆ ಅದರ ಮೇಲೆ ನಾವು ನಿಶ್ಚಯ ತೆಗೆದು ಕೊಳ್ಳುವ" ಅಂದೆ.
ತಂದಿದ್ದ ಸಿಹಿ ತಿಂಡಿಯ ಪೊಟ್ಟಣದೊಂದಿಗೆ ಇಬ್ಬರು ಮನೆ ಪ್ರವೇಶಿಸಿದೆವು, ಅವರಲ್ಲಿ ಈ ಬಗ್ಗೆ ಅವರ ಅಭಿಪ್ರಾಯ ಕೇಳಿದೆವು, ಅದಕ್ಕೆ ಅವರು "ನೀನು ಬೆಂಗಳೂರಿಗೆ ಹೋಗಪ್ಪಾ, ಇಲ್ಲಿ ಇವಳ ಆರೈಕೆ ನಾನು ಮಾಡುತ್ತೇನೆ, ಸಲ್ಪ ಸಮಯದ ಬಳಿಕ ಇವಳನ್ನು ಇಲ್ಲಿಂದ ಕರಕ್ಕೊಂಡು ಹೋಗಬಹುದು ಸದ್ಯಕ್ಕೆ ನೀನೊಬ್ಬನೇ ಹೋಗು."ಅಂದರು.
ನಾನು "ಇವಳಿಂದ ನಿಮಗೆ ಊರಿನವರ ಮಾತು ಕೇಳಬೇಕಾಗಿ ಬಂದೀತು"ಅಂದೆ.
ಅದಕ್ಕೆ ಅವರು "ಇವಳನ್ನು ಯಾರು ಗುರುತಿಸಲಾರರು ಅಂದೆಯಲ್ಲಾ ..ನಾಳೆ ಇಂದ ಇವಳು ನನ್ನ ತಂಗಿ ಮಗಳಾಗಿ ನನ್ನೊಂದಿಗೆ ಇರುತ್ತಾಳೆ.ಯಾರು ಕೇಳಿದರು ನನ್ನ ತಂಗಿ ಮಗಳೆನ್ನುತ್ತೇನೆ, ನೀನು ನಿಶ್ಚಿಂತೆಯಾಗಿ ಇರು." ಅಂದರು.
ಯಶೋದಮ್ಮ ನಮಗೆ ನಮ್ಮ ಪ್ರೀತಿಗೆ ಸಿಕ್ಕ ದೇವರಾದರು, ನಿಶ್ಚಿಂತೆಯಾಗಿ ವಸುಂದರನೊಡನೆ ಆ ಪುಂಪ್ ರೂಂ ನಲ್ಲಿ ಕೊನೆರಾತ್ರಿ ಕಳೆದೆನು.ಬೆಳಗ್ಗೆ ಎದ್ದು ಹೊಲದಲ್ಲಿನ ಕೊನೆ ದಿನದ ಕೆಲಸ,ಎಲ್ಲಾ ಮುಗಿಸಿಕೊಂಡೆ. ಯಶೋದಮ್ಮ ತಮ್ಮ ಮಗನ ೫-೬ ಜೊತೆ ಹಳೆಯ ಬಟ್ಟೆ, ೨ ಜೊತೆ ಒಳ್ಳೆ ಬಟ್ಟೆಗಳನ್ನು ಒಂದು ಬಾಗ್ ನಲ್ಲಿ ಕಟ್ಟಿ ಕೊಟ್ಟರು.ಹಬ್ಬದ ಅಡುಗೆಯನ್ನು ಮಾಡಿದ್ದರು. ಮದುವೆಯ ಊಟ ೨ ವಾರ ತಡವಾಗಿ ನವವಿವಾಹಿತ ಜೋಡಿ ಸವೆದೆವು. ರಾಯರು ಕೇಸ್ ನ ಸಲುವಾಗಿ ಉಡುಪಿ ಕೋರ್ಟ್ ಗೆ ಹೋಗಿದ್ದರು, ಸಂಜೆ ಆಗುತಿದ್ದಂತೆ ನಾನು ಯಶೋದಮ್ಮ ನ ಆಶೀರ್ವಾದ ಪಡೆದು,ವಸುಂದರನ ಹಣೆ ಮೇಲೊಂದು ಮುತ್ತಿಟ್ಟು ಹೊರಟೆ. ಅವಳೂ ನನ್ನೊಂದಿಗೆ ಆ ಓಣಿ ವರೆಗೆ ಬಂದಳು. ಒಮ್ಮೆ ಅವಳನ್ನು ತಬ್ಬಿ,
"ಬಹುಬೇಗನೆ ಬಂದು ನಿನ್ನನ್ನು ಕರಕ್ಕೊಂಡು ಹೋಗುತ್ತೇನೆ, ನಿಶ್ಚಿಂತೆಯಾಗಿ ಯಶೋದಮ್ಮನವರೊಂದಿಗೆ ಇಲ್ಲೇ ಇರು,ಬೆಂಗಳೂರು ತಲುಪಿದೊಡನೆ ಅಲ್ಲಿಯ ವಿಳಾಸ ಬರೆದು ಕಳುಹಿಸುವೆ ಕಾಗದ ಬರೆಯುತ್ತಲಿರು , ನಾನು ಪ್ರತಿ ಉತ್ತರಿಸುವೆ, ನನ್ನನ್ನು ನೋಡ ಬೇಕೆಂದಾಗ ಕಣ್ಣು ಮುಚ್ಚಿ ನಿನ್ನ ಕಣ್ಣಲ್ಲಿ ಅಡಗಿರುವ ನನ್ನಚ್ಚನ್ನು ನೋಡು, ಉಸಿರಲ್ಲಿ ಉಸಿರಾಗಿ ಹರಿಯುವ ನನ್ನ ಶ್ವಾಸವನ್ನು ಆಸ್ವಾದಿಸು, ನಾನು ನಿನ್ನಿಂದ ಬೌತಿಕ ವಾಗಿ ದೂರ ಇರುವೆನು ವಿನಃ ಮಾನಸಿಕವಾಗಿ ನಿನ್ನೊಂದಿಗೆ ಇರುವೆ , ಧೈರ್ಯವಾಗಿರು"ಅಂದೆ.
ಅವಳೂ ಮೌನ ವಾಗಿಯೇ ಇದ್ದಳು , ಕಣ್ಣ ಹನಿಗಳು ಆಗಲೇ ಮಾಲೆ ಪೋಣಿಸಲು ಆರಂಭಿಸಿದ್ದವು.ಅವಳನ್ನು ನೋಡುತ್ತಲೇ ನನ್ನ ಮನ ಕಣ್ಣು ಎರಡೂ ತುಂಬಿ ಬಂತು. ಅವಳನ್ನು ಇನ್ನೊಮ್ಮೆ ತಬ್ಬಿ ಹಣೆಗೆ ಮುತ್ತಿಟ್ಟು "ಬೇಗನೆ ಬರುವೆ,ಕತ್ತಲಾಗುತ್ತಿದೆ ಮನೆ ಸೇರು, ಬಾಯ್ " ಎಂದು ಮುಂದಿನ ರೋಡ್ ಹಿಡಕ್ಕೊಂಡೆ , ಅವಳಿನ್ನು ಅದೇ ಓಣಿಯಲ್ಲಿ ನಿಂತು ಕೈ ಆಡಿಸುತಿದ್ದಳು. ಕುತ್ತಿಗೆಯಲ್ಲಿನ ಹರಸಿನದಾರ ನನ್ನನ್ನೇ ನೋಡುತ್ತಿತ್ತು, ಒಲ್ಲದ ಮನಸ್ಸಿನಿಂದ ಬಸ್ ಸ್ಟಾಪ್ ಕಡೆಗೆ ಹೆಜ್ಜೆ ಇಟ್ಟೆ.
ಮುಂದಿನ ಕಂತು:: : http://sampada.net/blog/kamathkumble/23/12/2010/29659