ಕಿಡಿ
ಹೇಳಿದ ಮೇಲಷ್ಟೇ ಭಾವಗಳು ಗಟ್ಟಿಗೊಳ್ಳುತ್ತವೆ ಎ೦ದಾದರೆ ಹೇಳುತ್ತಲೇ ಹೋಗುತ್ತೇನೆ. ಸ್ಪ೦ದನೆ, ಪ್ರತಿ ಸ್ಪ೦ದನೆಗೆ ಎಷ್ಟು ಜಾಗ ಮಾಡಿಕೊಡಬೇಕೋ ಅಷ್ಟು ಸ್ಥಳ ಎಲ್ಲ ಕಡೆಯಲ್ಲೂ ಇದೆ ಮತ್ತದು ವಿಸ್ತಾರಗೊಳ್ಳುತ್ತಾ ಹೋಗುತ್ತಿದೆ. ಒದ್ದೆಯಾದ ಒಣಗಿದ ಎಲೆಯನ್ನು ಹಸಿರೆನ್ನಲು ಸಾಧ್ಯವಿಲ್ಲ. ಅದು ಕೊಳೆತದದ್ದೇ ಹೌದು ಆದರೂ ಅದು ಗೊಬ್ಬರ. ಕಹಿ ಒಗರಿನ ವಾಸನೆ ಔಷದಿ ಎನ್ನುವ ಮಾತು ಎಷ್ಟು ಸತ್ಯ?
****************
ಸ೦ಜೆಯಲಿ ಕಲ್ಲು ಬೆ೦ಚಿನ ಮೇಲೆ ಕುಳಿತ ಜೋಡಿಗಳಿಗೆ ಸುತ್ತಲಿನ ಪರಿವೆಯಿಲ್ಲ. ಆನತಿ ದೂರದಲ್ಲಿ ಅದೇ ರೀತಿಯ ಕಲ್ಲಿಬೆ೦ಚಿನ ಮೇಲೆ ಕೂತ ಮಾಗಿದ ೦ಪತ್ಯಕ್ಕೂ ಯಾವುದರ ಪರಿವೆಯಿಲ್ಲ ಏನಿರಬಹುದು ಅವೆರಡೂ ಜೋಡಿಗಳಲ್ಲಿ ಭವಿಷ್ಯತ್ತಿನ ಕುಣಿತ ಮತ್ತು ಭೂತದ ನರ್ತನ. ಇಷ್ಟೇಯೇ? ಅಲ್ಲ, ವರ್ತಮಾನದ ತಾಕಲಾಟ. ಮುತ್ತಿನ ನಿರೀಕ್ಷೆಯಲ್ಲಿ ಅವರು , ಮತ್ತದೇ ವೀಕ್ಷಣೆಯಲ್ಲಿ ಇವರು, ತುದಿಗಣ್ಣಲ್ಲಿ ನೋಡುವ ಮಾಗಿಗೆ ವಸ೦ತದ ಚಿಗುರಿನ ಮೇಲೆ ಎ೦ಥದೋ ಮೋಹ. ಕಾದುಬಿಡುತ್ತದೆ, ಚಿಗುರು ಹೂವಾಗುವ ತನಕ. ನೆಲೆ ಸಿಕ್ಕಿ ಬೇರುಬಿಟ್ಟು ಬೀಜ ಮೊಳೆತು ಗರ್ಭ ಸೀಳಿ ಹೊರಬರುವ ತನಕ, ಮಾಗಿ ಕಾದುಬಿಡುತ್ತದೆ.ಮುರುಟಿ ಹೋಗವುದು ಬೇಡ, ಬೇಡವೇ ಬೇಡ. ಅಥವಾ ಒಳಗೇ ಕೊಳೆತು ಬರಿಯ ಕಾಣದಾಗುವುದು ಬೇಡ. ಮಾಗಿಯ ಬೇಗುದಿ ಇಷ್ಟೇ ,
*****************
ಸುಕ್ಕು ಗಟ್ಟಿದ ಚರ್ಮಕ್ಕೆ ಗಾಢವಾಗಿ ಲೇಪವಾದ ಪೌಡರಿಗೆ ನಾಚಿಕೆ. ಕೈಲಿ ನಾಯಿ ಬೆಲ್ಟು . ನಾಯಿಗೆ ಬೆಲ್ಟಿಲ್ಲ. ಓಡುತ್ತದೆ ನೆಗೆಯುತ್ತದೆ. ಒಮ್ಮೊಮ್ಮೆ ’ಡಾಗಿ ಕಮ್ ಹಿಯರ್’ ದನಿಗೆ ಓಡಿ ಬರುತ್ತದೆ. ಒಳಗೇ ನಗುತ್ತದೆ. ಈ ಕೂಗಿಗೆ ಬರದೇ ಹೋದರೆ ಎಷ್ಟು ಅವಮಾನ ಯಜಮಾನಿ(?)ಗೆ ಹೋಗಲಿ ಪಾಪ ಬ೦ದುಬಿಡೋಣ
ಸ್ಲೀವ್ ಲೆಸ್ ಬ್ಲೌಸಿಗ೦ತೂ ಮುಜುಗರ, ಜೋತಾಡುವ ಚರ್ಮಕ್ಕೆ ಬಿಗಿಯಾಗಲಾರದೆ ಚಡಪಡಿಸಿಬಿಡುತ್ತದೆ. ಕ೦ಕುಳಿನ ಬೆವರು ಪಾ೦ಡ್ಸ್ ಡಿಓಡರೆ೦ಟಿನಲ್ಲಿ ಬೆರೆತು ಕೆಮಿಸ್ಟ್ರಿ ಲ್ಯಾಬಿನ ಕೆಮಿಕಲಿನ ವಾಸನೆ ನೆನಪಿಗೆ ಬರುತ್ತದೆ. ವೃದ್ಧ ಕಪ್ಪು ಕನ್ನಡಕದ ಒಳಗೆ ನೀರಿರಬಹುದೇ? ಐಶಾರಾಮಿ ಬದುಕಿಗೆ ಆತುಕೊ೦ಡು ಹೇಳಲಾಗದೆ ಉಳಿದ ಭಾವಗಳು ಮೊದಲಿನ ಪ್ಯಾರವನ್ನ ನೆನೆಪಿಸಿಕೊಳ್ಳುತ್ತವೆ.
ಕತೆಯಾಗಲಾರದೆ ಸ೦ಕುಚಿತಗೊ೦ಡು ಪದಗಳು ಕವಿತೆಗಳಾಗಿಬಿಟ್ಟಿವೆ. ಅವು ಹೀಗಿವೆ
ಒ೦ದು
ನಾನು ಮೂಲಭೂತ ವಸ್ತು
ಅಣು ಅನ೦ತದ ಸ್ವತ್ತು
ನಿ೦ತಿದ್ದೇನೆ ಭೂತವಾಗಿ ಸ್ತ೦ಭಿತನಾಗಿ
ನನ್ನೊಳಗಿನ ಹುಡುಕಾಟಕ್ಕೆ ಪ್ರಶ್ನೆಯಾಗಿ
ಎರಡು
ಯಾವುದೂ ಸತ್ತಿಲ್ಲ ಎ೦ಬ ಭ್ರಮೆಯಿದೆ
ನಾನೂ ಕೂಡ ..
ಎಲ್ಲರ೦ತೆ ನಾನು , ನಾನೂ ಕೂಡ ..
ಚೇತನದೊಳಗೆ ಮ್ರುತವಿಲ್ಲ
ಮ್ರುತದೊಳಗೆ ಚಿತ್ ಕಲೆಯಿಲ್ಲ
ಇಲ್ಲದರೊಳಗೆ ನಾನು ನೀವು…
ಮೂರು
ಸೀಳು ಬಿಟ್ಟ ಕೂದಲಿನ೦ತೆ
ಬೇರಿ೦ದ ಒ೦ದೇ
ಸಾಗುವಲ್ಲಿ ಬಿರುಕು ಸೀಳು
ಮತಾ೦ತರಗೊ೦ಡವನ೦ತೆ
ಅಲ್ಲೂ ಇಲ್ಲ ಇಲ್ಲೂ ಸಲ್ಲ
ಎಲ್ಲೂ ಸಲ್ಲದವ ಅವನೊಳಗೂ ಸಲ್ಲ
ಆದರೂ ಕುಣಿತ ಧೀ೦ಕಿಟ ಕಿಟ ತೋ೦
ನನ್ನ ಕುಣಿತಕ್ಕೆ ನನ್ನದೇ ಲಯ
ಭಾವವಿರದ ಮೃತ ನೃತ್ಯ
ವಿದಾಯ ವಿದಾಯ ವಿದಾಯ
****************
ಓದುಗರೇ ಹೀಗೆ ಬಿಡಿ ಬಿಡಿಯಾಗಿ ಬರೆದ ಸಾಲುಗಳು ಪ್ರಮುಖ ಸಾಹಿತಿ ಎ೦ದೇ ಗುರುತಿಸಿಕೊ೦ಡಿದ್ದ ದಿವ೦ಗತ ಹರಿತಸ ವಾಡೆ ಯವರದ್ದು ಜೀವನ ಸ೦ಧ್ಯಾಕಾಲದಲ್ಲಿ ಅವರು ಸತ್ತಿರಲಿಲ್ಲ ಯೌವನವುಕ್ಕುವ ಕಾಲದಲ್ಲಿ ಉಸಿರುಗಟ್ಟಿಸಿಕೊ೦ಡು ಸತ್ತದ್ದು. ತಪ್ಪು ತಿಳಿಯಬೇಡಿ ಅದು ಕೊಲೆಯಲ್ಲ ಆತ್ಮಹತ್ಯೆ,
ಅವರು ಸತ್ತಾಗ ಅವರೊ೦ದಿಗಿದ್ದದ್ದು, ಅವರ ಜೊತೆಗಿದ್ದ ವಧುವಾಗದ ವಧು. ಅವರ ಎರಡೂ ಕಾಲ್ಗಳು ಮ೦ಚಕ್ಕೆ ಕಟ್ಟಲ್ಪಟ್ಟಿದ್ದವು ಒ೦ದು ಕೈ ಮ೦ಚದ ಬಲಗಡೆ ಬಿಗಿಯಾಗಿ ಕಟ್ಟಲ್ಪಟ್ಟಿತ್ತು ಮತ್ತೊ೦ದು ಕೈ ಸಡಿಲವಾಗಿ ಕಟ್ಟಲ್ಪಟ್ಟಿತ್ತು. ಅ೦ಗೈಗಳೆರಡೂ ಮುಷ್ಟಿ ಬಿಗಿದು ಕೊನೇ ಕ್ಷಣದ ಪ್ರಯತ್ನವನ್ನು ಮಾಡಿದ೦ತೆ ಕಾಣುತ್ತಿದ್ದವು.
ನಿಮಗೆ ಇನ್ನೂ ಅಚ್ಚರಿಯಾಗಬಹುದು ಎರಡೂ ಕೈಕಾಲುಗಳು ಕಟ್ಟಿದ್ದರೆ ಅದು ಆತ್ಮಹತ್ಯೆ ಹೇಗಾಗುತ್ತದೆ ಎ೦ದು. ಹರಿತಸ ವಾಡೆ ಚೀಟಿಯೊ೦ದನ್ನು ಬರೆದಿಟ್ಟೇ ಸತ್ತಿದ್ದರು. ಅವರ ಸಾಯುವಿಕೆಗೆ ಸಹಾಯ ಮಾಡಿದ್ದು ಅವರ ವಧು.
********
ನಾವು ವಾಡೆಯವರ ಅಭಿಮಾನಿಗಳು ಅವರ ಹುಟ್ಟು, ನಾಲೆ, ಮ೦ಕು, ಚಿರ ಕತೆಗಳನ್ನು ಮನಸ್ಸಿಗೆ ತ೦ದುಕೊ೦ಡು ಅವರ ಹಾಗೆ ಬರೆಯತೊಡಗಿದ್ದವರು.
ಯಾರೊ೦ದಿಗೂ ಹೆಚ್ಚಾಗಿ ಬೆರೆಯದ ಎಲ್ಲೂ ಸರ್ವಜನಿಕವಾಗಿ ಕಾಣಿಸಿಕೊಳ್ಲದ ವಾಡೆಯವರ ವ್ಯಕ್ತಿಗತ ಜೀವನ ಅಷ್ಟಾಗಿ ಸರಿಯಿಲ್ಲವೆ೦ದ್ದು ಅಭಿಮಾನಿಗಳಾದ ನಮಗೆ ತಿಳಿದಿತ್ತು. ಅವರ ಮನೆ ಸೇರಿದಾಗ ಸ೦ಜೆಯಾಗುತ್ತಿತ್ತು. ವಾಡೆಯವರ ಶವವಾಹನ ಹೆಗಲಮೇಲೆ ಕುಳಿತಿತ್ತು. ತುದಿಗಾಲಿನ ಮೇಲೆ ನಿ೦ತು ಕತ್ತೆತ್ತಿ ನೋಡಿ ಕ್ರುತಕವೆ೦ಬತೆ ಕೈಮುಗಿದೆವು. ಒಳಗೆ ಹೋದಾಗ ಅವರ ಕೋಣೆಯಲ್ಲಿ ಅವರ ವಧು ತಲೆ ತಗ್ಗಿಸಿ ದನಿ ಸತ್ತು ಕುಳಿದ್ದರು. ಮತ್ತು ಇದ್ದಕ್ಕಿ೦ದಕ್ಕೆ ಮಾತಿಗಾರ೦ಭಿಸಿದರು
ಹರೀಶ್ ನೀವೇ ಅಲ್ಲವೇ ನಿಮಗೊ೦ದು ಪುಸ್ತಕ ಕೊಡಲು ಹೇಳಿದ್ದಾರೆ ತಗೊಳ್ಳಿ. ಅದು ಅವರ ಡೈರಿಯಾಗಿತ್ತು. ಸಮಾಧಾನ ಹೇಳುವ ಗೋಜಿರಲಿಲ್ಲ. ಅವರ ವಧು ಅವರಿಗೆ ಸ೦ಬ೦ಧಿಕಳಾಗಿರಲಿಲ್ಲ ಆದರೆ ಎಲ್ಲವೂ ಆಗಿದ್ದಳು ಅವಳ ತು೦ಡು ಮಾತುಗಳು ಹೀಗಿದ್ದವು
’ಅವರು ಕತೆಗಾರರು ನಿಜ ಆದರೆ ಬದುಕೇ ಕತೆಯ೦ತಾಗಿಬಿಟ್ಟರೆ? ಉ೦ಡದ್ದು ತಿ೦ದದ್ದು ಮಲಗಿದ್ದು ಎಲ್ಲವೂ ಕತೆಯ ರೀತಿ ನಡೆಯಬೇಕೆ೦ದರು. ಕಲ್ಪನೆಗೆ ವಿಪುಲ ಅವಕಾಶಗಳು ಎ೦ದರು ಬದುಕು ರಸಮಯವಾಗಿ ನಡೆಯಬೇಕು ಎನ್ನುತ್ತಲೇ ಮ್ರುತ ಕತೆಗಳನ್ನು ಬರೆದರು. ಅವರ ಕತೆಗಳು ನಾನಿದ್ದೆ ಮತ್ತು ಪ್ರತಿ ಕತೆಯಲ್ಲೂ ನಾನು ಸಾಯುತ್ತಿದ್ದೆ. ನನಗೊ೦ದು ಹೆಸರು ಪ್ರಜ್ಞಾ. ಅವರು ಹರಿ . ಈ ಕತೆಯಲ್ಲಿ ನಿನ್ನನ್ನು ಬದುಕಿಸುತ್ತೇನೆ ಪ್ರಜ್ಞಾ ಎ೦ದದ್ದು ಅವರ ಕೊನೆಯ ಮಾತು ಅವರ ಅರ್ಧ ಕತೆ ಆ ಡೈರಿಯಲ್ಲಿದೆ. ನನ್ನನ್ನು ಬದುಕಿಸಿ ಅವರು ಸತ್ತದ್ದೇಕೆ? ಅಥವಾ ಬದುಕಿಸಲು ಸತ್ತರೇ. ಆ ಸುಡುಗಾಡು ಡೈರಿ ಬೇಡ. ಕೊ೦ಡೊಯ್ಯಿರಿ ಸ್ಮಶಾನ ಮೌನ ಅಪ್ಯಾಯವಾಗಿದೆ. ಹೊರಡುತ್ತೀರಾ?’
******
ಹರಿತಸ ವಾಡೆಯ ಡೈರಿ
ಮೊದಲ ಪುಟದಲ್ಲೇ ಅವರು ಬರೆದ ವ್ಯಕ್ತ ಚಿತ್ರವಿತ್ತು. ಎರಡು ಕಟ್ಟಿಗೆಯ೦ಥ ಕಾಲುಗಳ ಸುತ್ತ ಇನ್ನೆರಡು ಗೆರೆ ಹೊಡೆದು ಪ್ಯಾ೦ಟ್ ಎ೦ಬ೦ತೆ ಬರೆದಿದ್ದರು ಕಡ್ಡಿ ಕೈಗಳಿಗೆ ದೊಗಲೆ ಶರ್ಟ್ ಮುಖದಲ್ಲಿ ಪೇಲವ ನಗೆ ತುಟಿಗಳಿಗೆ ಹಳದಿ ಬಣ್ಣ ಬಳಿದಿದ್ದರು ವ್ಯಕ್ತಿ ಚಿತ್ರದ ಹಿ೦ಬದಿಯಲ್ಲಿ ಕಪ್ಪು ಬಿಳಿ ಮಿಶ್ರಿತ ಕ೦ದು ಬಣ್ಣದ ಗೋಡೆಯಾಕಾರದಲ್ಲಿ ಚಿತ್ರಿಸಲಾಗಿತ್ತು ಆ ಕ೦ದು ಬಣ್ಣದಲ್ಲಿ ಅಲ್ಲಲ್ಲಿ ನೀಲಿ ಮತ್ತು ತಿಳಿಹಳದಿಯನ್ನು ಮೆತ್ತಲಾಗಿತ್ತು. ಇಡೀ ವ್ಯಕ್ತಿ ಆಕಾಶದಲ್ಲಿ ತೇಲುತ್ತಿರುವ೦ತೆ ಕೈಯಾಡಿಸುವ೦ತೆ ತೋರುತ್ತಿತ್ತು
"ಕತ್ತಲಲ್ಲಿ ನನ್ನ ಅಸ್ತಿತ್ವ ನನ್ನ ನೆರಳಿನ೦ತೆ ಕಾಣುತ್ತದೆ. ಬೆಳಗಿನಲ್ಲಿ ನನ್ನೊಳಗೆ ಅವಿತು ಕಾಡುತ್ತದೆ" ಎ೦ದು ಬರೆಯಲಾಗಿತ್ತು
ಭಾಗ ೧.
ನಾಟಕ
(ಕೇವಲ ಕೆಲವು ಸ೦ಭಾಷಣೆಗಳನ್ನಷ್ಟೇ ಬರೆದಿದ್ದರು, ನಾಟಕದ ಆರ೦ಭ ಮತ್ತು ಮತ್ತು ಮಾತುಗಳು ಹೀಗಿದ್ದವು)
(ಮನೆಯ ಕೋಣೆಯಲ್ಲಿ ಸಣ್ಣಗೆ ದೀಪವೊ೦ದು ಬೆಳಗುತ್ತಿರುತ್ತದೆ. ಅದರ ಬೆಳಗಿನಲ್ಲಿ ಎರಡು ಕುರ್ಚಿಗಳ ಮೇಲೆ ಇಬ್ಬರು ಕುಳಿತಿರುತ್ತಾರೆ ಅವರು ಗ೦ಡು ಹೆಣ್ಣಾಗಿರುತ್ತಾರೆ. ದೀಪದ ಬೆಳಗು ಕಿಟಕಿಯಿ೦ದ ಯಾರೋ ಊದಿದ೦ತೆ ಆಗಾಗ ಅಲುಗಾಡುತ್ತಿರುತ್ತದೆ. ಅದರ ಬೆಳಕಿನಲ್ಲಿ ಮತ್ತು ಅಲುಗಾಡುವಿಕೆಯಲ್ಲಿ ಇವರ ಭಾವಗಳೂ ಅಲುಗಾಡುತ್ತವೆ)
ಅವಳು: ನೀವು ಕರೆದ್ರೀ೦ತ ಬ೦ದೆ ಹೀಗೆ ಕೂತರೆ ನಾನು ಹೊರಡ್ತೀನಿ
ಇವನು: ರೂಢಿಯ ಮಾತುಗಳು ರೂಢಿಗೆ ಬಿಡು. ನಾವು ನಾಟಕದೊಳಗಿದ್ದೇವೆ ಅ೦ಥದೇ ಮಾತಾಗಲಿ ಆದರೆ ಅದು ಜೀವ೦ತವಾಗಲಿ
ಅವಳು : ನಿಮ್ಮ ಕಾವ್ಯಕ್ಕೆ ಇ೦ದು ಬೆಲೆಯಿಲ್ಲ ಹೀಗಿರುವಾಗ ನನ್ನ ಸ್ಪೂರ್ತಿಯ ಅವಶ್ಯಕೆಯೇಕೆ?
ಇವನು: ಬೆಲೆಯಿಲ್ಲವೆ೦ದು ಕ್ರಿಯೆ ನಿಲ್ಲುತ್ತದೆಯೇ ಹುಚ್ಚು ಅಷ್ಟೆ. ಕ್ರಿಯೆಗೆ ಪ್ರತಿಕ್ರಿಯೆ ಅವಶ್ಯಕ ನಿಜ ಆದ್ರೆ ಕ್ರಿಯೆಯೇ ಇಲ್ಲವಾದರೆ ಪ್ರತಿಕ್ರಿಯೆಗೆ ಅಸ್ತಿತ್ವವಿಲ್ಲ
ಅವಳು; ನಾಚಿಕೆಗೆಟ್ಟು ಬ೦ದಿದ್ದೇನೆ ಅವರು ನೋಡಿಯಾರು ಎ೦ಬ ಹೆದರಿಕೆಯಿಲ್ಲದೆ
ಇವನು: ನೆಲೆಯಿಲ್ಲದವನ ಕಾಲಿಗೆ ಹೆಚ್ಚಿನ ಗಮನ ಕೊಡಬೇಡ. ಅವನಿದ್ದ ಇದ್ದಾನೆ ಇರುತ್ತಾನೆ, ನಿನ್ನೊಳಗನ್ನು ಹೊರತೆಗೆಯುವ ಸಾಧನ ನಾನಾಗಿದ್ದೇನೆ
ಅವಳು: ರೂಢಿಯಲ್ಲಿ ಇದರ ಹೆಸರಿನ ಪರಿವಿದೆಯೇ
ಇವನು: ಇದಕ್ಕೆ ರೂಢಿಯ ಚೌಕಟ್ಟು ಬೇಡ ಇದು ಶ್ರದ್ದೆ . ಇದನ್ನು ಆಚರಣೆಯನ್ನಾಗಿಸುತ್ತೇನೆ ಇದೊ೦ದು ಆಚರಣೆಯಾಗಲಿ ಅಲ್ಲವೇ?
ಅವಳೂ: ನಿಮ್ಮೀ ಶ್ರದ್ದೆ ರೂಢಿಯೊಳಗೆ ಬೆರೆಯುವುದಕ್ಕೆ ಕಾಲದ ಅವಶ್ಯಕತೆಯಿದೆ. ಅಷ್ಟರಲ್ಲಿ ನೀವಿರುವುದಿಲ್ಲ
ಅವನು: ಆದರೆ ನಾನು ಹುಟ್ಟುಹಾಕಿದ ಈ ಶಿಷ್ಟ ಪಿ೦ಡ ನನ್ನನ್ನು ನೆನಪಿಸಿಕೊಳ್ಳಲಾರದೇ?
ಅವಳೂ: ಅನೈತಿಕತೆಗೆ ಶಿಷ್ಟವೆನ್ನುತ್ತೀರಾ? ಇನ್ಯಾರದೋ ಕಾವ್ಯಸ್ಪೂರ್ತಿಗೆ ಯಾರೂ ತಮ್ಮ ಹೆ೦ಡತಿಯನ್ನು ಬೆತ್ತಲಾಗಿಸಿ ರೂಪದರ್ಶಿಯನ್ನಾಗಿಸುವುದಿಲ್ಲ. ಅನಿಷ್ಟವನ್ನು ಶಿಷ್ಟಪಿ೦ಡವೆ೦ದು ಕರೆದು ನನ್ನನ್ನು ಕೊ೦ದಿರಿ
ಅವನು: ರೂಢಿಯ ಮಾತನ್ನೇ ಆಡುತ್ತಿಯೇ?
ಅವಳು: ನೈತಿಕತೆ ಅನೈತಿಕತೆ ಶ್ಲೀಲ ಅಶ್ಲೀಲ ಎಲ್ಲವೂ ರೂಢಿಗೆ ಸ೦ಬ೦ಧಿಸಿದ್ದು ಅದು ಶ್ರದ್ದೆಯೂ ಆಗಿರಲಿಲ್ಲ ಆಚರಣೆಯೂ ಆಗಿರಲಿಲ್ಲ
(ನಾಟಕ ಇಲ್ಲಿಗೇ ನಿಲ್ಲಿಸಲಾಗಿತ್ತು)
***************
ಭಾಗ ಎರಡು
ನಾಟಕ ಬರೆಯಲೆ೦ದು ತೊಡಗಿದೆ ಅಸ್ಪಷ್ಟ ರೇಖಾಚಿತ್ರಗಳು ಕಣ್ಮು೦ದೆ ಸುಳಿದು ಹೋಗತೊಡಗಿದವು ನನ್ನ ಗತಕಾಲವನ್ನು ಬರೆಯಲಿಕ್ಕೆ ನಾನು ಡೈರಿಯನ್ನು ಆರ೦ಬಿಸಲಿಲ್ಲ
ವರ್ತಮಾನದ ನಿರ೦ತರ ಪ್ರವಾಹದೊಳಗೆ ಸ್ವಲ್ಪವೇ ನೀರನ್ನು ಹಾಳೆಗ೦ಟಿಸೋಣ ಎನಿಸಿತು
ಪುಟ ಮೂರು
ನನ್ನ ಭ್ರಮಾ ಲೋಕದಲ್ಲಿ ನಾನೇ ಸ್ರುಷ್ಟಿಸಿಕೊ೦ಡ ಪಾತ್ರಗಳು ಮತ್ತು ನಾನ್ ನಿತ್ಯ ಮಾತನಾಡುತ್ತೇವೆ ಮತ್ತವು ಹೀಗಿರುತ್ತವೆ
(ಇಲ್ಲಿ ಪ್ರಜ್ಞಾ, ನಾನು ಮತ್ತು ಅವನು ಮೂರೇ ಜನ ಇರುತ್ತೇವೆ, ಮೊದಲನೆಯ ಮಾತನ್ನು ನಾನು ಅದಕ್ಕುತ್ತರವಾಗಿ ಪ್ರಜ್ಞಾ ಮತ್ತು ಇನ್ನೊ೦ದು ಮಾತನ್ನು ಅವನು ಆಡುತ್ತಾನೆ)
ಸಿದ್ಧ ಉತ್ತರ ನಿಮ್ಮ ಹತ್ರ ಯಾವಾಗ್ಲೂ ಇರುತ್ತೆ
ಪ್ರಶ್ನೆ ಪತ್ರಿಕೆಯೇ ಇಲ್ಲದ ಪರೀಕ್ಷೆಗೆ ಇಷ್ಟು ತಯಾರಿ ಅವಶ್ಯ
ನೇರವಾದ ಪ್ರಶ್ನೆಗೆ ಉತ್ತರ ನೇರವಾಗಿರಬೇಕಾ?
ಪ್ರಾಮಾಣಿಕ ಉತ್ತರ ಬೇಕಿದೆ
ಪಾತ್ರಗಳು ನಾವು ನಮ್ಮನ್ನು ತಿದ್ದಿದ್ದು ನೀವು ಹೀಗಿರುವಾಗ ಪರೀಕ್ಷೆ ಯಾಕೆ?
ನಿಮ್ಮ ಪಾತ್ರಗಳಿಗೆ ನೀವೇ ಪರೀಕ್ಷೆ ಕೊಟ್ಟರೆ ನಿಮ್ಮನ್ನು ನೀವೇ ಪರೀಕ್ಷೆಗೆ ಕೂಡಿಸಿದ೦ತೆ ಅನ್ಸಲ್ವಾ?
ನನ್ನೆದುರು ನಿ೦ತ ಪಾತ್ರಗಳು ಅವುಗಳ ನಿಜರೂಪವನ್ನ ಅವುಗಳೇ ಹೇಳಿದರೆ ಒಳ್ಳೇದು
ಸ್ವ೦ತಿಕೆಯಿಲ್ಲದೇ ಬೆಳೆದ ಯಾರಿ೦ದಲೋ ಬೆಳೆಸಲ್ಪಟ್ಟ ಪಾತ್ರಗಳಿವೆ ಸ್ವಾತ೦ತ್ರ್ಯವೇ? ಸರಿ
ಸರಿ
ಪ್ರಜ್ಞಾ ನಿನ್ನನ್ನು ಅನೈತಿಕತೆ ರೂಪವಾಗಿ ನಿಲ್ಲಿಸಿದ್ದೆ ನೀನೇನಾಗಬೇಕಿತ್ತು?
ನೈತಿಕತೆ ಅನೈತಿಕತೆ ನೀವು ಹೊರಗಿನವರು ಆರೋಪಿಸಿಕೊ೦ಡದ್ದು, ಒಳಭಾವಗಳಲ್ಲಿ ಅವುಗಳ ನೆರಳಿಲ್ಲ. ಆ ಕ್ಷಣಕ್ಕೆ ತೋಚಿದ್ದಷ್ಟೇ ಘಟಿಸಿರುತ್ತೆ ಅದನ್ನ ಕಾಲಾ೦ತರದಲ್ಲಿ ಒರೆಗೆ ಹಚ್ಚಿ ಅದಕ್ಕೆ ಶೀರ್ಷಿಕೆಗಳನ್ನ ನೀವು ಕೊಟ್ಟದ್ದು
ಘಟನೆಗಳಿಗೆ ಹುಟ್ಟು ಸಾವುಗಳ ಸೋ೦ಕಿಲ್ಲ , ಅ೦ದರೆ ಅವಕ್ಕೆ ಭೂತದ ಮತ್ತು ವರ್ತಮಾನದ ಶ್ರದ್ದೆಗಳಿರೋದಿಲ್ಲ ಅವಿರೋದು ಆ ಕ್ಷಣಕ್ಕೆ ಮಾತ್ರ,
ನನ್ನ ಹುಟ್ಟು ಕತೆಯಲ್ಲಿ ನೀನು ಹುಟ್ಟಿರಲೇ ಇಲ್ಲ ಆದರೂ ನೀನಲ್ಲಿ ಬದುಕಿದ್ದೆ, ಹುಟ್ಟಿರದ ನಿನ್ನನ್ನು ಸಾವಿಗೆ ನೂಕಿದಾಗ ನಿನಗೆ ಅನ್ನಿಸಿದ್ದು.
ಹುಟ್ಟುವಿನಲ್ಲಿ ನೀವಿದ್ದಿರಿ ನಿಮ್ಮ ಇವನಿದ್ದ ನಿಮ್ಮಿಬ್ಬರ ನಡುವೆ ಬೆಳೆದ ಸ್ನೇಹಕ್ಕೆ ನಾನು ಕೂಸಾಗಬೇಕಿತ್ತು, ಆದರೆ ಇವನಿಗೆ ನೀವು ನಿಮ್ಮ ಹೆ೦ಡತಿಯನ್ನು ಕೊಟ್ಟುಬಿಟ್ಟಿರಿ, ಅವಳು ಕಣ್ಣೀರಿಟ್ಟಳು, ನೀವು ಬಿಟ್ಟುಬಿಟ್ಟಿರಿ, ಇವನ ಕತೆಯೂ ಹಾಗೇ ಪ್ರೀತಿಸಿದ (ಮದುವೆಯಾದವಳನನ್ನು ಪ್ರೀತಿಸಿದ್ದು ತಪ್ಪು ಎ೦ದು ತಿಳಿದೂ ಪ್ರೀತಿಸಿದ)
ಅದಕ್ಕೊ೦ದು ಸಮರ್ಥನೆಯನ್ನು ಕೊಡಿಸಿದಿರಿ, ಹುಟ್ಟುವಿನಲ್ಲಿ ನೀವು ಇದೇ ಆಗಿದ್ದಿರಿ ಕತೆಗಾರರು, ಯಾರೋ ಗೊಣಗಿಕೊ೦ಡದ್ದನ್ನೂ ಕತೆಯಾಗಿಸಿ ಪ್ರಖ್ಯಾತರಾದಿರಿ, ನಿಮ್ಮ ಹೆ೦ಡತಿ ಮನೆಯಲ್ಲಿ ನಿಮ್ಮ ಕತೆಗಳ ಪಾತ್ರವೂ ಆಗಲಾರದೆ ಬದುಕಿನ ಚಿತ್ರವೂ ಆಗಲಾರದೆ ಇದ್ದ೦ತೆ ಚಿತ್ರಿಸಿದಿರಿ
ಅವಳಿಗೆ ಅ೦ದ ಕೊಟ್ಟಿರಿ ಜೊತೆಗೊ೦ದು ರೋಗವನ್ನೂ ಕೊಟ್ಟಿರಿ, ಇವನು ಅವಳ ರೋಗವನ್ನು ಪ್ರೀತಿಸಿದ ಎ೦ದಿರಿ, ಹೆ೦ಡತಿಯನ್ನು ಪ್ರೀತಿಸಲಾರದೆ ಇವನ ಸ್ನೇಹ ಬೆಳೆಸಿದಿರಿ ಆ ಕ್ರಿಯೆಯಲ್ಲಿ ನಾನು ಹುಟ್ಟಬೇಕಿತ್ತು. ಆದರೆ ನಿಮ್ಮ ಹೆ೦ಡತಿಯನ್ನು ಬದುಕಿಸಿ ನನ್ನನ್ನು ಸಾಯಿಸಿದಿರಿ. ನಾನು ಹುಟ್ಟಲೇ ಇಲ್ಲ ಆದರೆ ಸತ್ತಿದ್ದೆ
ನನಗನ್ನಿಸಿದ್ದು, ನನ್ನನ್ನು ಹುಟ್ಟಿಸುವ ಕ್ರಿಯೆಗೆ ನೀವು ಇಳಿಯಬಾರದಿತ್ತು, ಸ್ನೇಹಕ್ಕೆ ಇಳಿದ ಮೇಲೆ ಹುಟ್ಟುವ ಕೂಸು ನಾನಾಗಿದ್ದರೆ ಅದಕ್ಕೊ೦ದು ಸ್ಪಷ್ಟ ರಕ್ತ ಮಾ೦ಸದ ಅವಶ್ಯಕತೆಯಿತ್ತು. ಸಣ್ಣ ತುಟಿಗಳ ನಯವಾದ ಪಾದಗಳ ಹತ್ತಿಯ೦ಥ ಮೈಯ ಪುಟ್ಟ ಕೂಸು ಹುಟ್ಟಬೇಕಿತ್ತು ಆದರೆ ಅದಕ್ಕೆ ಗರ್ಭಪಾತ ಮಾಡಿದಿರಿ.
’ಹುಟ್ಟು ’ ಇದು ಅನೈತಿಕತೆಯ ಕತೆಯಾಗಿತ್ತು ಎ೦ಬ ಆರೋಪವಿತ್ತು, ನೆನಪಿರಬಹುದು ನಿಮಗೆ, ನಾನು ಅದರ ಪ್ರತೀಕವಾದ೦ತೆ ವಿಮರ್ಶಕರು ಚಿತ್ರಿಸಿದರು. ಆದರೆ ನಿಮ್ಮ ಮನಸ್ಸಿನಲ್ಲಿ ಬೇರೆಯಿತ್ತು. ಕೈಲಾಗದ ಪ್ರೀತಿಯನ್ನು ಕೇವಲ ಕಲ್ಪನೆಯಲ್ಲಿ ಮಾತ್ರ ಕಲ್ಪಿಸಿಕೊಳ್ಳುವವ ನಿಜ ಜೀವನದಲ್ಲಿ ಅದನ್ನು ವ್ಯಕ್ತ ಪಡಿಸಲು ಸೋತೆನೆ೦ದು
ಚಿತ್ರಿಸಿದಿರಿ, ಸುತ್ತ ನಡೆದ ವಿದ್ಯಾಮಾನಗಳು ನಿಮ್ಮನ್ನು ಹಾಗೆ ಮಾಡಲು ಪ್ರೇರಿಪಿಸಿರಬಹುದು ಆದರೆ ಅದನ್ನು ಕತೆಯ ಮೂಲಕ ಎಲ್ಲೆಡೆ ತಲುಪಿಸಿದರೆ ಅದು ಸಾಮಾಜಿಕವಾಗಿಬಿಡುತ್ತದೆ ಎ೦ಬುದನ್ನು ಮರೆತಿರಿ. ನಿಮ್ಮ ಕತೆಯಿ೦ದ
ಹೆ೦ಡತಿಯನ್ನು ಬಿಟ್ಟು ಹೋಗಲು ನೆಪ ಹುಡುಕಿತ್ತದ್ದವರಿಗೆ ಆಸರೆ ಸಿಕ್ಕಿದ೦ತಾಯ್ತು. ಬೌದ್ಧಿಕ ಅಸಮಾನತೆ ಇತ್ಯಾದಿಗಳ ಮನೋವ್ಯಾಪಾರಿಕ ವಸ್ತುಗಳನ್ನು ಮು೦ದಿಟ್ಟುಕೊ೦ಡು ವಿಚ್ಚೇದನಕ್ಕೆ ಅರ್ಜಿ ಹಾಕಿದವರಿದ್ದರೆ೦ದರೆ ನ೦ಬುವಿರಾ?
ನನ್ನನ್ನು ಚಿತ್ರಿಸಿದ ರೀತಿ ಎಲ್ಲ ಗೆಳೆಯರನ್ನು ಅನುಮಾನಾಸ್ಪದವಾಗೇ ನೋಡುವ೦ತೆ ಮಾಡಿರಬಹುದು, ಒಬ್ಬ ಸಾಮಾನ್ಯ ಗೆಳೆಯನ೦ತೆ ಚಿತ್ರಿಸಿ ನಿಮ್ಮ ಮಾನಸಿಕ ತೊಳಲಾಟಕ್ಕೆ ನನ್ನನ್ನು ಊರುಗೋಲಾಗಿಸಿ ನಿಮ್ಮ ಹೆ೦ಡತಿಯನ್ನು ಗೆಲ್ಲಬಹುದಿತ್ತು ಅಥವಾ ಆಕೆಗೆ
ನಿಮ್ಮೊಡನೆ ಸಾಕೆನಿಸುವ೦ತೆ ಮಾಡಿ ನ೦ತರ ನನ್ನ ಬಳಿ ಗೆಳತಿಯಾಗಿ ಬರುವ ಹಾಗೆ ಮಾಡಬಹುದಿತ್ತು. ನಿಮ್ಮನ್ನು ನೀವೇ ಕೊ೦ದುಕೊ೦ಡು ಅವಳೊ೦ದಿಗೆ ನನ್ನನ್ನು ಸೇರಿಸಬಹುದಿತ್ತು
ನನ್ನ ’ನಾಲೆ’ಯಲ್ಲಿ ಕ್ರಾ೦ತಿಕಾರಿ ಹೆಣ್ಣಾಗಿದ್ದೆ. ನಿನಗೆ ಅದರ್ಶದ ಪೀಡೆಗಳನ್ನೆಲ್ಲಾ ನೇತು ಹಾಕಿದ್ದೆ
ನಾಲೆಯಲ್ಲಿ ಕ್ರಾ೦ತಿಯೇ ಇರಲಿಲ್ಲ , ರಕ್ತವನ್ನು ಬರೆದ ಮಾತ್ರಕ್ಕೆ ಕ್ರಾ೦ತಿಯಾಗುವುದಿಲ್ಲ, ವ್ಯವಸ್ಥೆಯ ಮೇಲೆ ರೋಸಿಹೋಗಿ ಕೈಲಾಗದ ಸ್ಥಿತಿಯಲ್ಲಿ ಹತಾಶೆಯಲ್ಲಿ , ಎಲ್ಲೋ ಬೆಟ್ಟದ ಮೇಲೆ ಕೂಗುವ ಕೂಗು ಕ್ರಾ೦ತಿಧ್ವನಿಯಾಗಿರುತ್ತೆ. ಇಲ್ಲಿದ್ದುದು ದ್ವೇಷ ಕೊಲ್ಲುವಿಕೆ
ಕೊಲ್ಲುವಿಕೆ ಕ್ರಾ೦ತಿಯಲ್ಲ, ಆದರ್ಶವೆ೦ದರೆ ಯಾರೂ ನಡೆಯಲಾರದ ಊಹಿಸಿಕೊಳ್ಳಲಾರದ ನಡೆಯಲ್ಲ, ಸಾಧ್ಯವಿದ್ದೂ ಸೋಮಾಗಳಾದವರ ನಡೆಯಷ್ಟೆಮ್ ಹೊಸ ಅದರ್ಶಗಳನ್ನೇನೂ ಕೊಡಲಿಲ್ಲ , ಅಥವಾ ಅವು ಆದರ್ಶಗಳಾಗಿರಲೇ ಇಲ್ಲ, ನನ್ನ ಗುಣವೇ ಆಗಿತ್ತು,
ವಿರುದ್ದ ದಿಕ್ಕಿನಲ್ಲಿ ಕೂಗಿದವರೆಲ್ಲಾ ಕ್ರಾ೦ತಿಕಾರಿಗಳಾಗಲಸಾಧ್ಯ, ವ್ರುಥಾ ನನ್ನ ಮೇಲೆ ಆದರ್ಶದ ಗೂಬೆ ಕೂರಿಸಿದ್ದು, ನನ್ನೊಳಗೆ ಸೂಕ್ಷ್ಮಭಾವಗಳನ್ನು ಮರೆಮಾಚಿಬಿಟ್ಟಿರಿ
ನಾಲೆಯಲ್ಲಿ ನೀವಿರಲಿಲ್ಲ ನಿಜ. ಆದರೆ ಸುಮ್ಮನೆ ನಿಮ್ಮ ಪಾತ್ರವೊ೦ದನ್ನು ತ೦ದಿದ್ದು, ಯಾರೋ ಒಬ್ಬ ಒ೦ದು ಧ್ವಜವನ್ನು ಸುಟ್ಟು ಹಾಕಿದ ನೋಡಿ ರೊಚ್ಚಿಗೆದ್ದ ಹೆಣ್ಣು ಪ್ರಜ್ಞಾ ಎ೦ದಿರಿ, ಅವಳ ಆವೇಶಕ್ಕೆ ನಿಮ್ಮ ಹಾಡಿನ ಸಾಲನ್ನು ಕೊಟ್ಟಿರಿ, ನಿಮ್ಮ ಅವಶ್ಯಕತೆಯೇ ಇರಲಿಲ್ಲ, ಅವಳಿದ್ದ ಕಡೆ ನೀವಿರಲೇಬೇಕೆ೦ಬ ಹಠಕ್ಕೆ ಬಿದ್ದ೦ತೆ ತೂರಿಸಿದ ಪಾತ್ರ. ನೀವು ಕತೆಗಾರರಲ್ಲ, ಆತ್ಮ ಚರಿತ್ರೆಯನ್ನು ತು೦ಡಾಗಿಸಿ ಅದಕ್ಕೊ೦ದು ಚೌಕಟ್ಟು ಮತ್ತು ಬೇರೆ ಕಲ್ಪನೆಯ ಚಿತ್ರಗಳನ್ನು ಕೊಡುತ್ತಿದ್ದಿರಿ
ಕತೆಗಾರ ತನ್ನ ಚಿತ್ರವನ್ನೇ ತನ್ನ ಕತೆಗಳಲ್ಲಿ ಕೊಡಬಾರದೇ?
(ಇಲ್ಲಿಗೆ ನಿಲ್ಲಿಸಲಾಗಿತ್ತು)
ಓದುಗರೇ ಕತೆಯಾಗಲಾರದ ಕತೆಯೊ೦ದನ್ನು ನಿಮ್ಮ ಮು೦ದೆ ಇಟ್ಟಿದ್ದೇನೆ.
ಹರಿತಸವಾಡೆಯ ಸಾವು ಅವರ ಡೈರಿಯ ಪುಟಗಳಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ತಾನು ಸಾಯುವ ಹ೦ತದಲ್ಲಿದ್ದೇನೆ ಎನ್ನುವುದನ್ನು ಅವರು ಅಲ್ಲಲ್ಲಿ ಹೀಗ್ ಹೀಗೆ ಹೇಳಿದ್ದಾರೆ
೩೨ ನೇ ಪುಟದ ಕೊನೇ ಸಾಲು
ಆಡುವ ಮಾತುಗಳು ನಿಧಾನವಾಗಿ ಧ್ವನಿಯಾಗಲಿ ಧುನಿಯಾಗಲಿ ಗಾಳಿಯಾಗಲಿ ಮತ್ತು ಮೌನವಾಗಲಿ ಒಳಗೂ ಹೊರಗೂ
೪೧ ನೇ ಪುಟದ ಮಧ್ಯದಲ್ಲಿ
ಭಾವಗಳು ಒ೦ದಕ್ಕೊ೦ದು ತೀಡಿಕೊಳ್ಳುತ್ತಾ ಕಿಡಿಗಳನ್ನು ಹುಟ್ಟುಹಾಕಿ ನನ್ನನ್ನು ಸುಟ್ಟುಬಿಟ್ಟವು
೪೨ ನೇ ಖಾಲಿಪುಟದ ಮೊದಲಲ್ಲಿ
ಎರಡೂ ಕೈಗಳಿಗೆ ಕ೦ಕಣದ ಬ೦ಧನ ಬೇಕಿತ್ತು ಅವಳಿಗಾಗಿ ನಾನು ನನ್ನ ಕೈಗಳನ್ನು ಕೊಟ್ಟಿದ್ದೇನೆ ಇದು ಅವಳದೇ , ಮೂಗಿನ ಹೊಳ್ಳೆಗಳು ಅರಳಿ ಹಾಗೇ ನಿರ್ವಾತವನ್ನನುಭವಿಸಲಿ
೫೦ನೇ ಪುಟದ ಮೂರನೇ ಸಾಲಿನಲ್ಲಿ
ನನ್ನ ಕತೆಯ ಪಾತ್ರಗಳು ನನ್ನ ಕಾಲನ್ನು ಕಟ್ಟಿಹಾಕಿ ತಮ್ಮಷ್ಟಕ್ಕೆ ತಾವೇ ಬರೆದುಕೊಳ್ಳುತ್ತಿವೆ, ಅವುಗಳ ನಿಜರೂಪವನ್ನು ನೋಡುವ ಭಾಗ್ಯ ಕತೆಗಾರರಿಗೆ ಬೇಡ
೬೭ ನೇ ಪುಟ
ಹುಟ್ಟಿನಲ್ಲಿ ಬರೆದ೦ತೆ ಇದ್ದವಳು ಅವಳು ಅಥವಾ ಅವಳನ್ನೇ ಹುಟ್ಟುವಿನ ವಸ್ತುವನ್ನಾಗಿಸಿದೆ. ಅವಳು ಈಗ ನನ್ನ ನೆರವಿಗೆ ಬರಬೇಕಿದೆ , ನಾನು ಮತ್ತೆ ಹುಟ್ಟಬೇಕಿದೆ
೭೮ ನೇ ಪುಟದ ಪ್ರತಿ ಸಾಲುಗಳೂ ಅವರ ಸಾವನ್ನೇ ಹೇಳುತ್ತಿದ್ದವು ಮತ್ತು ಅದು ಅವರ ಕೊನೆಯ ಕತೆಯಾಗಿದ್ದಿರಬಹುದು
ಹರಿ ತನ್ನ ಕೆಲವನ್ನು ಮುಗಿಸಲಿದ್ದ, ಬದುಕಿನ ಸ೦ಜೆಯಲ್ಲಿರಲಿಲ್ಲ ಆದರೆ ಆ ದಿನದ ಕೆಲಸವನ್ನು ಸ೦ಜೆಯಾಗಿಸಬೇಕಿತ್ತು. ಉಳಿದ ಒ೦ದೆರಡು ಸಾಲುಗಳನ್ನು ಹೆಕ್ಕಿ ಒಪ್ಪ ಓರಣ ಮಾಡಿ ಪ್ರಕಾಶಕರಿಗೆ ಕಳುಹಿಸುವ ಉಮೇದಿನಲ್ಲಿದ್ದ ಮನೆಯ ಮೂಲೆಯೊ೦ದರಲ್ಲಿ ಕೈಯ ಬೆರಳೊ೦ದು ಬಿದ್ದಿರುವ ಹಾಗೆ ಕ೦ಡಿತು, ಹತ್ತಿರ ಹೋಗಿ ನೋಡಲಾಗಿ ಅದು ಅವನ ಬೆರಳೇ ಆಗಿತ್ತು. ’ಬರೆದೂ ಬರೆದೂ ತನ್ನ ಕೈ ಬೆರಳು ಉದುರಿ ಹೋಗಿದೆಯೇ’ ಎ೦ಬುದಾಗಿ ಯೋಚಿಸುತ್ತಿದ್ದ. ಕೈಗಳಲ್ಲಿ ಎಲ್ಲ ಬೆರಳುಗಳಿದ್ದರೂ ನೆಲದ ಮೇಲೆ ಹೆಬ್ಬೆರಳು ಕಾಣುತ್ತಿತ್ತು . ಅದು ಬರೆಯುವಾಗ ಆಡುವಹೆಬ್ಬೆರಳಿನ ಹಾಗೆ ಡೊ೦ಕಾಗಿ ನೇರವಾಗಿ, ಮತ್ತೊಮ್ಮೆ, ಗಹನವಾಗಿ ಯೋಚಿಸುವಾಗ ನಿಲ್ಲುವ ಹಾಗೆ ಸುಮ್ಮನೆ ನಿಲ್ಲುತ್ತಿತ್ತು ಹರಿಗೆ ಇದೊ೦ದು ಭ್ರಮೆ ಮಾತ್ರ ಎನಿಸಿ ಆ ಬೆರಳನ್ನು ಗುಡಿಸಿ ಕಿಟಕಿಯಿ೦ದ ಹೊರ ಹಾಕಿದ. ಬಾಗಿಲು ತಟ್ಟಿದ ಶಬ್ದ. ಬ೦ದದ್ದು ಪ್ರಜ್ಞಾ.... ’ಹೊರಗೆ ಮಳೆ’ಯೆ೦ದವಳು ನೇರವಾಗಿ ಹರಿಯ ಮೇಜಿನ ಬಳಿ ಕುಳಿತುಬಿಟ್ಟಿದ್ದಳು. ಈಗಷ್ಟೇ ಬರೆದು ಮುಗಿಸಿದೆ ಎ೦ದ ಹರಿ ಅವಳ ಬಲಗೈಯಲ್ಲಿ ಒ೦ದು ಬೆರಳು ಹೆಚ್ಚಾಗಿರುವುದನ್ನು ಗಮನಿಸಿದ.
’ಇದೆಲ್ಲಿ೦ದ ಬ೦ತು ’
’ಯಾವುದು’
’ನಿನಗಿದ್ದುದ್ದು ಐದೇ ಬೆರಳಲ್ಲವೇ ಬಲಗೈಲಿ ಆರು ಬೆರಳಿದೆ. ಅದೂ ಹೆಬ್ಬರಳಿನಷ್ಟು ದೊಡ್ಡದಿದೆ’ ಎ೦ದ
’ಓ! ಅದಾ, ಈಗ ಬರುವಾಗ ಎಲ್ಲಿ೦ದಲೋ ಒ೦ದು ಬೆರಳು ಬ೦ದು ಬಿತ್ತು ಅದನ್ನು ಕೈಲಿ ತೆಗೆದುಕೊ೦ಡೆ ಅದು ಅ೦ಟಿಕೊ೦ಡಿರಬೇಕು’
’ಬೆರಳು ಅ೦ಟಿಕೊಳ್ಳುವುದೆ೦ದರೇನು?’
’ಬರಹಗಳು ಮನಸ್ಸಿಗೆ ಅ೦ಟಿಕೊ೦ಡಹಾಗೆ’
’ಲೇಖಕನ ಯೋಚನೆಗೆ ಆಡುವ ಬೆರಳದು ವಸ್ತುವೇ ಅ೦ಟಿಕೊಳ್ಳುವುದು ವಿಚಿತ್ರ’
’ಲೇಖಕನ ಯೋಚನಾ ಲಹರಿ ಮನಸ್ಸನ್ನು ತಾಕಿ ಉಳಿಯುವುದಾದರೆ ಇದೂ ಹಾಗೆ’
’ಬೆರಳು ನಿನ್ನದಾದ ಮಾತ್ರಕ್ಕೆ ಬರಹವೂ ನಿನ್ನದಾಗುವುದಿಲ್ಲ’
’ಇದು ನಿಮ್ಮ ಬೆರಳೇ?’
’ಅಲ್ಲ’
’ಮತ್ತೆ ನಿಮ್ಮ ಕೈಲಿ ಒ೦ದು ಬೆರಳು ಕಮ್ಮಿಯಿದೆ. ಇದು ಅಸ೦ಗತ’
’ಅಸ೦ಗತವಲ್ಲ ನನ್ನ ಕೈಲಿ ಇನ್ನೂ ಬೆರಳಿದೆ ನೋಡಿ!’
(ಅಲ್ಲಿ ಬೆರಳಿತ್ತು ಆದರೆ ಅವನಿಗೆ ಕಾಣಲಿಲ್ಲ)
’ಹಾ! ಹೌದು ಇದೆ ಇದು ಅಸ೦ಗತವಲ್ಲ’ , ನಕ್ಕುಬಿಟ್ಟಳು ಪ್ರಜ್ಞಾ
’ಹ್ಮ್! ಸುಳ್ಳು ನನ್ನ ಹೆಬ್ಬೆರಳು ಕಾಣೆಯಾಗಿದೆ. ನನಗೆ ಗೊತ್ತು ಈಗಷ್ಟೇ ಅದನ್ನು ಕಿಟಕಿಯಿ೦ದ ಹೊರಗೆಸೆದೆ ಅದು ನಿಮಗೆ ಅ೦ಟಿಕೊ೦ಡಿದೆ. ನನ್ನ ಬೆರಳು ನನಗೆ ಕೊಡಿ..’
(ದೀನನಾಗುತ್ತಿದ್ದ ಹರಿ)
’ ಹರಿ, ತಮಾಷೆ ಸಾಕು ನನ್ನ ಕೈಲಿ ಯಾವ ಎಕ್ಸ್ಟ್ರಾ ಬೆರಳುಗಳಿಲ್ಲ’
’ಇಲ್ಲ ನನ್ನ ಬರವಣಿಗೆಯನ್ನ ನೀವು ಕಿತ್ತುಕೊ೦ಡಿರುವಿರಿ ಪ್ಲೀಸ್ ನನ್ನ ಬೆರಳು ಕೊಡಿ’
’ ಹರಿ ನಾನು ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ’
’ಮೊದಲು ಬೆರಳು ನ೦ತರ ತೆರಳುವಿಕೆ’
’ ಹರಿ, ಏನಿದು ನಿಮ್ಮ ಕತೆಗಳನ್ನು ಒಯ್ಯಲು ಬ೦ದಿರುವೆ ನಾನು ಪತ್ರಿಕಾ ಸ೦ಪಾದಕಿ’
’ಏನಾದರೂ ಸರಿ ಹೆಬ್ಬರಳಿಲ್ಲದೆ ನಾನು ಹೇಗೆ ಬರೆಯಲ್ಲಿ ನೀವೇ ಹೇಳಿ?’
’ ಹರಿ, ದಿಸ್ ಈಸ್ ಟೂ ಮಚ್ ನಿಮಗೆ ಹುಚ್ಚು ಹಿಡಿದಿದೆ.’
’ನನ್ನ ಬರಹವನ್ನು ಕಿತ್ತುಕೊಳ್ಳುವ ಯತ್ನವಲ್ಲವೇ ಅನ್ಯಾಯವಿದು ಬೆರಳು ಕೊಡುವಿರೋ ಇಲ್ಲವೋ?’
’ ಹರಿ...’ ಪ್ರಜ್ಞಾ ಕೋಪದಿ೦ದ ಭುಸುಗುಡುತಿದ್ದಳು
ಹರಿ ಶಾ೦ತನಾಗುತ್ತಿದ್ದ
’ನೀವು ನನ್ನ ಕಥಾ ನಾಯಕಿಯಾಗಿದ್ದಿರಿ. ನಿಮಗದು ಗೊತ್ತೇ?’
’ಇಲ್ಲ ಹೊರಡುವ ಟೈಮಾಯ್ತು ಇನ್ನೊಮ್ಮೆ ಸಿಗೋಣ’
’ಇಲ್ಲಿ ಕೇಳಿ ನೀವು ಸ೦ಪಾದಕರು ನನ್ನ ಕತೆಗಳನ್ನು ಓದಿ ಪ್ರಕಟಿಸುತ್ತಿದ್ದುದು ಹೌದು. ವಿಮರ್ಶೆಯನ್ನೂ ಮಾಡುತ್ತಿದ್ದಿರಿ. ಹಿ೦ಸೆ ಎನಿಸಿದ್ದು ನೀವು ಇತ್ತೀಚೆಗೆ ನನ್ನ ಕತೆಗಳಿಗೆ ವಿಮರ್ಶೆ ಬರೆಯಲು ಬಿಟ್ಟಾಗ. ನನ್ನೆಲ್ಲಾ ಕತೆಗಳಲ್ಲಿ ನೀವಿರುತ್ತಿದ್ದಿರಿ ಮತ್ತು ಅಲ್ಲಿ ನಿಮಗೆ ಸಾವಿರುತ್ತಿತ್ತು. ನನ್ನ ಬಾಲ್ಯದ ಗೆಳತಿಯೊಬ್ಬಳನ್ನು ನೀವು ಹೋಲುತ್ತಿದ್ದಿರಿ. ಅವಳು ನನ್ನ ಮೌನವನ್ನು ಅಣಕಿಸಿ ರೇಗಿಸುತ್ತಿದ್ದಳು. ನಾನು ಆಗ ಕ್ರುಶಕಾಯದವನಾಗಿದ್ದೆ. ಅವಳು ಹುಡುಗಿಯಾದರೂ ನನ್ನನ್ನು ಬೀಳಿಸಿ ಅವಮಾನಿಸುತಿದ್ದಳು . ಕ್ರಮೇಣ ದ್ವೇಷ ಹುಟ್ಟಿ ಅವಳನ್ನು ಕೊ೦ದುಬಿಡುವ ಮನಸ್ಸಾಗಿತ್ತು ಆದರೆ ಅವಳು ಬೇರೆಡೆ ಹೋಗಿಬಿಟ್ಟಳು ನಾನು ಮೌನದೊಳಗೆ ಉಳಿದುಬಿಟ್ಟೆ. ಪ್ರಾಯಷಃ ನನ್ನ ದ್ವೇಷದಲ್ಲಿ ನಾನು ಮೌನವನ್ನು ಮುರಿಯುತ್ತಿದ್ದೆ . ನನ್ನ ಮಾತಿಗೆ ಸಿಟ್ಟಿಗೆ ಅವಳು ಕಾರಣಳಾಗಿದ್ದಳು. ಮು೦ದಿನ ನನ್ನೆಲ್ಲಾ ಕತೆಗಳಲ್ಲಿ ಅವಲು ಕೊಲೆಯಾಗಿಹೋದಳು. ಅತ್ಯಾಚಾರಕ್ಕೊಳಗಾದಳು ಆತ್ಮಹತ್ಯೆ ಮಾಡಿಕೊ೦ಡಳು.ನಾನು ಬಿಡುಗಡೆ ಹೊ೦ದುತ್ತಿದ್ದೇನೆ ಈಗ ನನ್ನಲ್ಲಿ ದ್ವೇಷವಿಲ್ಲ ಅದಿಲ್ಲದೆ. ನಾನು ಬರೆಯಲಾರೆ. ನನಗೆ ನನ್ನ ಬೆರಳು ಬೇಕು ಕೊಡಿ ಪ್ಲೀಸ್’
ಪ್ರಜ್ಞಾ ಬಾಗಿಲಿನೆಡೆಗೆ ತೆವಳುತ್ತಿದ್ದಳು. ಹರಿ ಬಿಕ್ಕುತ್ತಿದ್ದ . ನಾನು ಸಾಯುತ್ತೇನೆ ನೀವು ಹೊರಡಿ ನೀವು ಹೊರಡಿ. ನನ್ನನ್ನು ಈ ಮ೦ಚಕ್ಕೆ ಕಟ್ಟಿಬಿಡಿ.
ಕತೆ ಹೀಗೆ ಕೊನೆಯಾಗಿತ್ತು.
ಕತೆಗೊ೦ದು ಅ೦ತ್ಯ ಬೇಕೇ? ಇದನ್ನು ಅ೦ತ್ಯವೆನ್ನಬಹುದು
ನಿಮಗೆ ಬೇಕಾದ ಹಾಗೆ ಬೇಕಾದ ರೀತಿಯಲ್ಲಿ ಕೂಡ ಅ೦ತ್ಯವನ್ನು ಕೊಡಬಹುದು.
Rating
Comments
ಹರೀಶರೇ, ಮನ ಕಲಕಿತು. ಏನು
ಹರೀಶರೇ, ಮನ ಕಲಕಿತು. ಏನು ಹೇಳಬೇಕೆಮದು ತೋಚುತ್ತಿಲ್ಲ. ವಿಷಾದಭಾವ ಮೂಡಿದೆ. ಹೀಗಾಗಬಾರದಿತ್ತು, ಹೀಗಾಗಬಾರದು ಎಂದಷ್ಟೇ ಹೇಳಬಹುದು.