ಕಿರಿಕ್ ಪಾರ್ಟಿ - ಸಿನೆಮಾ ವಿಮರ್ಶೆ

ಕಿರಿಕ್ ಪಾರ್ಟಿ - ಸಿನೆಮಾ ವಿಮರ್ಶೆ

ಚಿತ್ರ

ಹತ್ತು ವರ್ಷಗಳ ಹಿಂದೆ, ಡಿಸೆಂಬರಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ಅಲೆ ಮೂಡಿಸಿದ್ದ ಚಿತ್ರ ಮುಂಗಾರು ಮಳೆ. ಇಂದು, ಕನ್ನಡ ಚಿತ್ರರಂಗದಲ್ಲಿ ಬಿರುಸಾಗಿ ಬೀಸುತ್ತಿರುವ ಗಾಳಿ 'ಕಿರಿಕ್ ಪಾರ್ಟಿ'. ಎಲ್ಲಿ ನೋಡಿದರೂ, ಯಾರನ್ನು ಕೇಳಿದರೂ ಅವರೆಲ್ಲಾ ಹೇಳುತ್ತಿರುವುದು ಕಿರಿಕ್ ಪಾರ್ಟಿ, ಕಿರಿಕ್ ಪಾರ್ಟಿ ಅಂತ. ಎಲ್ಲರ ಫೇಸ್ ಬುಕ್ ಚೆಕ್ ಇನ್ ಕೂಡಾ ಕಿರಿಕ್ ಪಾರ್ಟಿ ಆಗಿದೆ. ಒಂದು ಅಲೆ ಮೂಡಿಸಿಬಿಟ್ಟಿದೆ ಕಿರಿಕ್ ಪಾರ್ಟಿ. ಹೆಸರು ಕೇಳಿದರೆ ಇದೇನಪ್ಪಾ ಅನಿಸುತ್ತೆ. ಲಾಂಗು ಮಚ್ಚು ಕಿರಿಕ್ ಇರಬಹುದೇನೊ ಅಂದುಕೊಂಡ್ರೆ ಅದು ತಪ್ಪು. ಈ ಚಿತ್ರ ಕಾಲೇಜು ಜೀವನವನ್ನು ಕಥಾವಸ್ತುವನ್ನಾಗಿಸಿಕೊಂಡಿದೆ. ಜಾಲಿ ಡೇಸ್ ಚಿತ್ರದ ನಂತರದಲ್ಲಿ ಕಾಲೇಜು ಥೀಮ್ ಇಟ್ಟುಕೊಂಡ ಒಂದು ಅದ್ಭುತ ಸಿನೆಮಾ ಕಿರಿಕ್ ಪಾರ್ಟಿ ಆಗಿದೆ.
 
ರಕ್ಷಿತ್ ಶೆಟ್ಟಿಯವರು ತಮ್ಮ ಎಂಜಿನಿಯರಿಂಗ್ ಮುಗಿದ ನಂತರ ಬರೆದ ಕಥೆಯಂತೆ ಇದು. ರಿಕ್ಕಿ ಚಿತ್ರದ ನಂತರ ರಿಷಬ್ ಶೆಟ್ಟಿ ಅವರು ಇದನ್ನು ನಿರ್ದೇಶಿಸಿದರು. ಇದಕ್ಕೆ ತಮ್ಮದೆ ಆದ ಪ್ರೊಡಕ್ಷನ್ ಹೌಸ್ ಇರಲಿ ಅಂತ 'ಪರಮ್ವಾಹ್ ಸ್ಟೂಡಿಯೋಸ್' ಹುಟ್ಟುಹಾಕಿದರು. ಚಿತ್ರದ ವಿಷೇಶವೇನೆಂದರೆ, ಬೆರಳೆಣಿಕೆಯಷ್ಟು ನಟರನ್ನು ಹೊರೆತು ಪಡಿಸಿ, ಮಿಕ್ಕವರೆಲ್ಲರೂ ಹೊಸ ನಟ-ನಟಿಯರು. ಸರಿ ಸುಮಾರು 4000 ಜನರ ಆಡೀಶನ್ ನಡೆಸಿ ಇವರನ್ನೆಲ್ಲ ಆರಿಸಲಾಗಿತ್ತು. ಚಿತ್ರದ ಹೆಸರು ಮೊದಲು ಸದ್ದು ಮಾಡಿತ್ತು, ಹಾಡುಗಳು ಬಿಡುಗಡೆಯಾದ ನಂತರ, ಎಲ್ಲರ ದಿನ ಜೀವನದಲ್ಲಿ ಕಿರಿಕ್ ಪಾರ್ಟಿ ಹಾಡುಗಳ ಗದ್ದಲವೋ ಗದ್ದಲ. ಚಿತ್ರ ಬಿಡುಗಡೆಯಾಗಿದ್ದೇ ತಡ, ಹೌಸ್ ಫುಲ್ ಬೋರ್ಡಿನ ದಿನ ಬಳಕೆ ಶುರುವಾಗಿದೆ.
 
ರಕ್ಷಿತ್ ಶೆಟ್ಟಿಯವರು ತಮ್ಮ ಕಾಲೇಜು ದಿನಗಳ ನೆನಪಿನಲ್ಲಿ ಚಿತ್ರವನ್ನು ಬರೆದು ನಮ್ಮೆಲ್ಲರ ಕಾಲೇಜು ದಿನಗಳ ನೆನಪು ಮರುಕಳಿಸುವ ಹಾಗೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಸಿನೆಮಾದಲ್ಲಿ ಕಾಲೇಜು, ನಮ್ಮ ತುಂಟತನದ ನೆನಪು ಆಗುತ್ತಲೆ ಇರುತ್ತದೆ. ವಿಜೃಂಭಣೆಯ ಹೀರೋ ಎಂಟ್ರಿ ಇಲ್ಲಿಲ್ಲ. ಸಿನೆಮಾಕ್ಕೆ ಬೇಕಾದ ಹಾಗೆ, ಹೀರೋ ಕೂಡ ಒಬ್ಬ ವಿದ್ಯಾರ್ಥಿ ಹಾಗು ಅನ್ಯರಂತೆ ಅವನೂ ಸಹ ಎನ್ನುವ ರೀತಿಯಲ್ಲಿ ಸಾಮಾನ್ಯವಾದ ಎಂಟ್ರಿ ತೋರಿಸುವುದು ವಿಷೇಶವಾಗಿದೆ. ಮೊದಲ ಬಾರಿಗೆ ನೀವು ಗಡಿಯಾರ ನೋಡುವುದು ಬ್ರೇಕಿನಲ್ಲಿ. ಎರಡನೆಯ ಬಾರಿ ಗಡಿಯಾರ ನೆನಪಾಗುವ ಹೊತ್ತಿಗೆ, ಚಿತ್ರ ಮುಗಿದಿರುತ್ತದೆ. ಸ್ವಲ್ಪವೂ ಬೇಸರವಾಗದಂತೆ ಇಡೀ ಚಿತ್ರ ನಮ್ಮನ್ನು ಕೊಂಡೊಯ್ಯುತ್ತದೆ. ಚಿತ್ರದಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ಬಹಳ ಸಹಜವಾದ ರೀತಿಯಲ್ಲಿ ಹಾಸ್ಯವನ್ನು ಮೇಳೈಸಲಾಗಿದೆ. ನಕ್ಕು ನಕ್ಕು ಹೊಟ್ಟೆನೋವು ಬಂದರೂ ಆಶ್ಚರ್ಯವಿಲ್ಲ. ಯಾಂತ್ರಿಕ (mechanical) ಎಂಜಿನಿಯರಿಂಗ್ ಹುಡುಗರಿಗಂತು ಸಿನೆಮಾ ಒಂದು ಹೆಗ್ಗಳಿಕೆಯಾಗಿದೆ.
 
ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಹೇಗೆ ನಮ್ಮ ಮೇಲೆ ಪರಿಣಾಮ ಬೀರಿಬಿಡುತ್ತದೆ ಎಂದು ಒಳ್ಳೆಯ ರೀತಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಕರ್ಣನ ಪಾತ್ರದ ಎರಡು ಮುಖಗಳನ್ನು ಅತ್ಯಂತ ವರ್ಣನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಒಂದೇ ಚಿತ್ರದಲ್ಲಿ ಎರಡು ಭಾಗ ಎರಡು ರೀತಿಯ ನಾಯಕನನ್ನು ತೋರಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. ಕಾಲೇಜು ವಯಸ್ಸಿನ ತುಮುಲಗಳು, ತುಂಟತನಗಳನ್ನು ಮನಮುಟ್ಟಿಸುವ ಹಾಗೆ ವರ್ಣಿಸಿದ್ದಾರೆ. ಸಾನ್ವಿ ಪಾತ್ರದ ಮುಖಾಂತರ ರಶ್ಮಿಕ ಅವರು ಎಲ್ಲ ಹುಡುಗರ ಹೃದಯ ಗೆದ್ದರೆ, ಆರ್ಯಾ ಪಾತ್ರದ ತುಂಟತನದಿಂದ ಸಂಯುಕ್ತ ಹೆಗಡೆಯವರು ಜನರ ಹೃದಯದಲ್ಲಿ ಮನೆ ಮಾಡಿದ್ದಾರೆ. ರಕ್ಷಿತ್ ಶೆಟ್ಟಿಯವರು ಎಂದಿನಂತೆ ಹೆಣ್ಣು ಮಕ್ಕಳ ಹೃದಯ ಗೆದಿದ್ದಾರೆ ಎಂದು ಹೇಳಬೇಕಿಲ್ಲ.
 
ಚಿತ್ರದ ಬಹು ದೊಡ್ದ ಆಕರ್ಷಣೆ ಕಿರಿಕ್ ಕಾರು, ಸ್ಕೂಟರ್ ಮತ್ತು ಬುಲೆಟ್. ಬುಲೆಟ್ ಮೇಲೆ ಹೋಗುವ ಒಂಟಿ ಪ್ರಯಾಣವು (solo ride) ಬೈಕ್ ಪ್ರೇಮಿಗರನ್ನು ಹುರಿದುಂಬಿಸಿದೆ. ಚಿತ್ರದಲ್ಲಿ 10 ಹಾಡುಗಳಿದ್ದು ಎಲ್ಲವೂ ಸಹ ಅತ್ಯುತ್ತಮವಾಗಿ ಮೂಡಿಬಂದಿದೆ. ಕಥೆಯ ಮಧ್ಯೆ ಹಾಡು, ಹಾಡಿನ ಜೊತೆಯಲ್ಲಿ ಕಥೆ ಎನ್ನುವ ಹಾಗೆ ಒಂದಕ್ಕೊಂದು ಸುತ್ತಿಕೊಂಡಿವೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಕರಮ್ ಚಾವಲ ಅವರ ಕೈ ಚಳಕ ಚಿತ್ರದಲ್ಲಿ ಕಂಡುಬರುವುದು. ಕೊನೆಯಲ್ಲಿ ತೋರುವ ಮುಖ್ಯ ಪ್ರಾಧ್ಯಾಪಕರ ನುಡಿಗಳ ಮೂಲಕ ಶಿಕ್ಷಕರ ದೊಡ್ದತನವನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ.  ಚಿತ್ರಕ್ಕೆ ಆರಿಸಿಕೊಂಡ ಪ್ರತಿ ಜಾಗವೂ ಸಹ ಅದ್ಭುತವಾಗಿದ್ದು, ಕಥೆ ಪ್ರಾಸಂಗಿಕ (episodic) ರೂಪದಲ್ಲಿ ಸಾಗುತ್ತದೆ.
 
ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಸ್ನೇಹಿತರ ಪ್ರಾಂತ್ಯದಲ್ಲಿ ತಮ್ಮ ಜೀವನ ಕಟ್ಟಿಕೊಂಡ ಎಲ್ಲರಿಗೂ ಈ ಸಿನೆಮಾ ಇಷ್ಟವಾದರೂ ಮಧ್ಯಮ ವಯಸ್ಕರಿಗೆ ಹಾಗು ಹಿರಿಯ ವಯಸ್ಕರನ್ನು ಚಿತ್ರ ಸೆಳೆಯುವಲ್ಲಿ ಹಿಂದೆ ಬಿದ್ದಿರಬಹುದು. ಚಿತ್ರದಲ್ಲಿ ಒಂದು ಕಥೆಯ ಎಳೆ ಬಹಳ ಕಮ್ಮಿ ಇದ್ದು, ಕಥೆಯನ್ನು ನಿರೀಕ್ಷಿಸುವ ನೋಡುಗರು ಸ್ವಲ್ಪ ಮಟ್ಟಿಗೆ ನಿರಾಶರಾಗಬಹುದು. ಚಿತ್ರ ಬಹಳ ವೇಗವಾಗಿ ಸಾಗುತ್ತದೆ ಎಂಬ ಅಭಿಪ್ರಾಯವೂ ಸಹ ಬಂದಿದೆ. ಆದರೆ, ಕೂತ ಸಮಯ ವ್ಯರ್ಥವಾದಂತೆ ಅನಿಸುವುದಿಲ್ಲ, ನಿಸ್ಸಂದೇಹವಾಗಿ ನಗುತ್ತಾ ಮರಳುತ್ತೇವೆ. ಚಿತ್ರ ಬಿಡುಗಡೆಯ ಮುನ್ನ ಕೆಲವರ ಕುತಂತ್ರದಿಂದ ಕಷ್ಟಗಳು ಬಂದರೂ ಚಿತ್ರ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲರನ್ನು ಆಕರ್ಷಿಸಿ ಮತ್ತೆ ನೋಡಲೇಬೇಕು ಎಂಬ ಆಸೆ ತುಂಬುವಲ್ಲಿ ಚಿತ್ರ ಸೈ ಎನಿಸಿಕೊಂಡಿದೆ. ಒಮ್ಮೆಯಾದರೂ ಈ ಚಿತ್ರವನ್ನು ಎಲ್ಲರೂ ವೀಕ್ಷಿಸಬೇಕು ಹಾಗು ಸ್ನೇಹಿತರೋದಿಗೆ ವೀಕ್ಷಿಸುವುದು ಮತ್ತಷ್ಟು ಆನಂತ ತಂದು, ನೆನಪುಗಳನ್ನು ಮರುಕಳಿಸುವಂತೆ ಮಾಡುವುದು. ಕಿರಿಕ್ ಪಾರ್ಟಿ ಚಿತ್ರವು 100 ದಿನದ ಸಂಭ್ರಮ ಆಚರಿಸುವಲ್ಲಿ ಸಂದೇಹವಿಲ್ಲ.

Rating
No votes yet