ಕಿರುಗತೆ : ಆಡುವ ಕೋಗಿಲೆಯೂ… ಹಾಡುವ ಕಾಗೆಯೂ....

ಕಿರುಗತೆ : ಆಡುವ ಕೋಗಿಲೆಯೂ… ಹಾಡುವ ಕಾಗೆಯೂ....

ಕಿರುಗತೆ :  ಆಡುವ ಕೋಗಿಲೆಯೂ… ಹಾಡುವ ಕಾಗೆಯೂ....

 

ಮಾಸಿದ ಬಿಳಿ ಪಂಚೆ, ಕೊಳೆ ಹತ್ತಿದ ಅಂಗಿ, ಕೈಯಲೊಂದು ಏಕನಾದ. ವಾರದ ಹಿಂದೆ ಶೇವ್ ಮಾಡಿರಬಹುದಾದ ಗಡ್ಡ, ಚಕ್ಕಳ ಅಂಟಿಕೊಂಡ ಸೊರಗಿದ ಕಪ್ಪು ಶರೀರ. ತಲೆಯ ಮೇಲೊಂದು ರುಮಾಲೂ ಇತ್ತು. ಬಹುಶಃ ಪ್ರವಾಸಿಗರು ಹತ್ತಿರ ಸುಳಿಯದ ಹಂಪೆಯ ಒಂದು ಪ್ರದೇಶವೇ ಆತನ ಕಳೆದ ನಾಲ್ಕು ದಿನದ ವಾಸಸ್ಥಾನ. ಜನರಿರಲೀ ಬಿಡಲಿ ತನ್ನ ಸುಶ್ರಾವ್ಯವಾದ ಕಂಠದಿಂದ  ಜನಪದ ಗೀತೆಯನ್ನಾಡುತ್ತ ಹೊಟ್ಟೆತುಂಬಿಸಿಕೊಳ್ಳುವ ಕಾಯಕ ಅವನದು. ಎಲ್ಲಾ ಕಲೆಗೂ ಪ್ರತಿಭೆಯೇ ಆಧಾರ. ಅದಿಲ್ಲದಿದ್ದಲ್ಲಿ ಕಲೆಗಾರ ಕಲೆಗಾರನಲ್ಲ. ಆದರೆ ಪ್ರತಿಭೆಯನ್ನು ಆಸ್ವಾಧಿಸುವುದು ಮಾತ್ರ ಕೆಲವರಿಗಷ್ಟೇ ಸಾಧ್ಯ.. ನೂರು ರೂಪಾಯಿ ತೆತ್ತು ಸೋನುನಿಗಂ ನ ಸಂಗೀತ ಕಛೇರಿಗೆ ಹೋಗುವವರಲ್ಲಿ ಆತನ ನಿಜವಾದ ಸಂಗೀತವನ್ನು ಕಿವಿತುಂಬಿಕೊಳ್ಳುವವರು ಎಲ್ಲೋ ಕೆಲವರಷ್ಟೇ.. ಉಳಿದವರ ಕೂಗಾಟ ಕಿರಿಚಾಟಗಳೆಲ್ಲಾ 'ಜನ ಮರುಳೋ, ಜಾತ್ರೆ ಮರುಳೋ' ಎಂಬ ಹಿನ್ನೆಲೆಯಲ್ಲಿ ಹುಟ್ಟಿದವುಗಳಷ್ಟೇ. ನಿಜವಾದ ಕಲಾರಸಿಕ ಸ್ಮಶಾನದ ಶಹನಾಯಿಯಲ್ಲೂ ಕಲೆಯನ್ನು ಹುಡುಕಬಲ್ಲ. ಕಲೆ ಕಲೆಯಷ್ಟೇ. ನಿಜವಾದ ರಸಿಕ ಕಲೆಯನ್ನು ತನ್ನ ಅಂತಸ್ತಿಗೆ ತಕ್ಕಂತೆ ಆಯ್ದುಕೊಳ್ಳುವುದಿಲ್ಲ. ನೂರುನೂರೈವತ್ತರ ಬೆಲೆಯ ಕೊಳಲಿಗಿಂತ ಮೂರುನಾಲ್ಕು ಸಾವಿರದ ಗಿಟಾರ್ ಗೆ ಮಹತ್ವ ಹೆಚ್ಚು. ನಾಟ್ಯ ಯೋಗವಾದ ಭರತ ನಾಟ್ಯಕ್ಕಿಂತ ಸಾಲ್ಸಾಗೆ ಆಕರ್ಷಣೆ ಹೆಚ್ಚು. ಕಾರಣ ಅವುಗಳಲ್ಲಿ ಏನೋ ಒಂದು ಸ್ಟಾಂಡರ್ಡ್ ಇದೆ  ಎಂಬುದು ಇಂದಿನ ಯುವ ಜನತೆಯ ಅಭಿಪ್ರಾಯ. ಭಾರತದಲ್ಲಿ ಸಂಗೀತವೂ ಒಂದು ಯೋಗವೇ ಆಗಿದೆ. ಅದನ್ನು ನಾದಯೋಗವೆಂದೇ ಕರೆಯುವರು. ಆಳಕ್ಕಿಳಿದಷ್ಟು ಅದು ನಮಗೆ ಹತ್ತಿರವಾಗುತ್ತದೆ. ಅಷ್ಟೇ ಅಲ್ಲಾ, ಭಾರತೀಯ ಸಂಸ್ಕೃತಿಯನ್ನು ದರ್ಶಿಸುತ್ತದೆ.  ಈತನದ್ದೂ ಒಂದು ಯೋಗವೇ. ಗಂಟಲಿಗೆ ಚೈತನ್ಯ ತುಂಬುವಷ್ಟು ಆಹಾರಗಳಿಕೆ ಆತನಿಗೆ ಸಾಕು. ನಂತರ ಆತ ಭಿಕ್ಷೆ ಬೇಡುತ್ತಿರಲಿಲ್ಲ.. ಒಬ್ಬನೆ ಕುಳಿತು ತನ್ನ ಇಷ್ಟದೈವ ತಿಮ್ಮಪ್ಪನ ಬಗ್ಗೆ ಹಾಡು ಕಟ್ಟುತ್ತಿದ್ದನು. ಆತ ಎಂದಿಗೂ ಓದು ಬರಹ ಕಲಿತವನಲ್ಲ.. ಅದು ಆತನಿಗೆ ಬೇಕಾಗಿದ್ದಂತೆಯೂ ಇರಲಿಲ್ಲ.  ಅವನ ಹಾಡುಗಾರಿಕೆ ನೋಡಿದರೆ ಆತ ದಕ್ಷಿಣ ಕರ್ನಾಟಕ ಭಾಗದವನೇ ಇರಬೇಕು.. ಉತ್ತರ ಕರ್ನಾಟಕದ ಗ್ರಾಮ್ಯ ಅವನ ಹಾಡುಗಳಲ್ಲಿ ಕಾಣುತ್ತಿರಲಿಲ್ಲ.  ಹಂಪೆಯ ವೀಕ್ಷಣೆಗೆ ಬೆಂಗಳೂರಿನ ಕನ್ನಡಿಗರಿಬ್ಬರು ಹೋಗಿದ್ದರು. ಕನ್ನಡ ಹಾಗೂ ಕನ್ನಡಿಗರಿಗಾಗಿ ಎಂತಹ ತ್ಯಾಗಕ್ಕೆ ಬೇಕಾದರೂ ಸಿದ್ಧರಿದ್ದ ಯುವಕರವರು. (ಅಥವಾ ಹಾಗೆ ಭಾವಿಸಿದ್ದವರು).  ಅವರಿಬ್ಬರಲ್ಲಿಯೇ ಚರ್ಚೆ ಆರಂಭವಾಯಿತು, ಹಂಪೆಯ ಕೃಷ್ಣದೇವರಾಯ ಕನ್ನಡಿಗನೋ ? ಅಥವಾ ತೆಲುಗಿನವನೋ? ಎಂದು.. ವಾಸ್ತವ ಅದೇನೇ ಇದ್ದರೂ ಅವರ ವಾದವಿವಾದಗಳೆಲ್ಲಾ ಕೊನೆಗೆ ಕೃಷ್ಣದೇವರಾಯನನ್ನು ಅಪ್ಪಟ ಕನ್ನಡಿಗನನ್ನಾಗಿ ಮಾಡುತ್ತಿದ್ದವು. ಹಿಂದೊಮ್ಮೆ ಹಂಪೆ ಹೇಗೆ ಮೆರೆದಿತ್ತು ಎಂಬುದರ ಇತಿಹಾಸವನ್ನೊಮ್ಮೆ ತಳುಕು ಹಾಕಿ ಕನ್ನಡಿಗರ ನಷ್ಟವನ್ನು ಚಿಂತಿಸತೊಡಗಿದರು. ಗಂಟೆಗಟ್ಟಲೆ ಕನ್ನಡಕ್ಕಾಗಿ ಮಾಡಬಹುದಾದ ಹೋರಾಟ ಹಾಗೂ ಸೇವೆಗಳ ಬಗ್ಗೆ ಇಬ್ಬರ ಮನಸ್ಸು ಚಿಂತಿಸತೊಡಗಿತು. ಇವರ ಮಾತುಕತೆಗಳು ನಿಂತಾಗ,  ಅದೆಲ್ಲೋ ದೂರದಲ್ಲಿ ತೇಲುತ್ತಾ ದನಿಯೊಂದು ಕೇಳಿ ಬರುತ್ತಿತ್ತು. ನಿರ್ಜನವಾದ ಪ್ರದೇಶದಲ್ಲಿನ ಆ ದನಿಯ ಇಂಪು, ಕಿವಿಯನ್ನು ತುಂಬಿ ಮನಸ್ಸೆಳೆಯುತ್ತಿತ್ತು. ಇಬ್ಬರೂ ಆ ದನಿ ಬರುತ್ತಿದಲ್ಲಿಗೆ ಹೋದರು..

 

"ಮುದ್ದಿನ ಮೊಗವೊತ್ತು ಬೆಟ್ಟಾದ ನೆತ್ಯಾಗೆ

ಸದ್ದಿಲ್ದೆ ಸುದ್ದಿಲ್ದೆ ಎದ್ದು ನಿಂತಾ ದೊರೆಯ

ಕಾಲಾನೊತ್ತುತ ಬುಡದಿ ಲಕ್ಸ್ಮೀ ಕುಂತಾಳೆ,

ನಿನ್ನಂತ ದೊರೆಯಿಲ್ಲ  ಎನುತ  ಆಡ್ತಾಳೆ..

 

ಮಿರಿಮಿರಿ ಮಿರಿಗುಟ್ಟೋ

ಮಟಮಟಾ ಬಿಸಿಲೊತ್ತು

ಒರಗೋಗಬ್ಯಾಡ ಎನುತಾಳೆ

 

ಎಬ್ಬಂಡೆ ಮೇಲತ್ತಿ

ನಡಿಬ್ಯಾಡಾ ಸುಡುತಾವೆ

ಮೆಟ್ಟ ಮರಿಬ್ಯಾಡ ಅಂತಾಳೆ.

 

ನೆತ್ತಿ ಅತ್ತಿದ ಸೂರ್ಯ

ಕೆಂಡದುಂಡೆಯ  ಕಣ್ಣ

ಬೀರ್ಯಾನು ಒಳಗೀರೂ ಅಂತಾಳೆ..".

 

ಹೀಗೆ ಹಾಡು ಮುಂದುವರಿಯುತ್ತಿರಬೇಕಾದರೆ, ಕಿರಣನಿಗೆ  ಪಾಪ ಆ ಜನಪದ ಗಾಯಕನ ಮೇಲೆ ಕರುಣೆ ಹುಟ್ಟಿತು.   ಆ ಕರುಣೆ ಆತನ ತೊಟ್ಟ ಬಟ್ಟೆಗಾಗಲೀ ಅಥವಾ ಆತನ ಸೊರಗಿದ ದೇಹಕ್ಕಾಗಲೀ ಅಥವಾ ಆತನ ಬಡತನಕ್ಕಾಗಿ ಅಲ್ಲ. ಬದಲಾಗಿ ಆತನ ಕನ್ನಡದ ತಪ್ಪು ಉಚ್ಚಾರಗಳಿಗಾಗಿ. ಆದರೆ ಆತನಿಗೆ ಅರಿವಿತ್ತು; ಗ್ರಾಮೀಣರಲ್ಲಿ ಶಿಕ್ಷಣದ ಕೊರತೆಯಿಂದಾಗಿ ಈ ತಪ್ಪುಗಳಾಗಬಹುದು.  ಇಂತಹ ಎಷ್ಟು ಗ್ರಾಮೀಣರು ನಮ್ಮ ಮಧ್ಯದಲ್ಲಿ ಬದುಕುತ್ತಿರಬಹುದು... ಆತನ ಮನಸ್ಸು ಮಿಡಿಯಿತು.  ಇವರಿಗೆ ಕನ್ನಡದ ಸರಿಯಾದ ಉಚ್ಚಾರ ಗೊತ್ತಿಲ್ಲದಿದ್ದರೇನು... ನಾವಿಲ್ಲವೇ ತಿಳಿದವರು. ಹೇಳಿಕೊಟ್ಟರಾಯಿತು.. ಅವನ ಮನಸ್ಸಿನಲ್ಲಿ ಮಿಂಚಿನಂತೆ ಒಂದು ವಿಚಾರ ಬಂದು ಹೋಯಿತು ಅದೇನೆಂದರೆ ಗ್ರಾಮೀಣರಿಗೆ ಸರಿಯಾದ ಕನ್ನಡ ಕಲಿಸುವುದು. ಅಷ್ಟರಲ್ಲೇ ರಸಭಂಗವಾಗಿ ಆ ಹಾಡುಗಾರ ಇವರತ್ತ ನೋಡಿದ.  ಇವರೂ ಅವನನ್ನು ನೋಡಿದರು.

 

ಕಿರಣನ ಜೊತೆ ಇದ್ದ ಸುಹಾಸ್ ಎರಡು ರೂಪಾಯಿ ನಾಣ್ಯವನ್ನ ಆ ಹಾಡುಗಾರನಿಗೆ ಕೊಟ್ಟ.

 

ಕಿರಣ ಆತನ ಹತ್ತಿರ ಹೋಗಿ.."ಆಹಾ .. ತುಂಬಾ ಚನ್ನಾಗಿ ಹಾಡಿದ್ರಿ... ಎಲ್ಲಿ ಕಲ್ತ್ ಕೊಂಡ್ರಿ..?"

 

"ನೀವ್ಗುಳ್ ಬರೋ ಮುಂಚೆ ಕಟ್ಟಿದ್ ಆಡ್ ಕಣಪ್ಪಾ.."

 

  "ಓ... ಗುರುಗಳ್ ಯಾರೂ ಇಲ್ವಾ ಹಂಗಿದ್ರೆ..?"

 

"ನಮ್ಗ್ಯಾವ ಗುರ್ಗಾಳು... ಬೇಡ್ಕಂಡ್ ತಿನ್ನೋರ್ಗೆ..."

 

   "ಓಕೆ.. ಗುರುಗಳಿಲ್ಲ ಅಂದ್ರೆ ಕಷ್ಟ ಆಗಲ್ವಾ... ಹಾಡ್ಬೇಕಾದ್ರೆ ತಪ್ಪಾದ್ರೆ ..?"

 

   "ತಪ್ಪೋ ನೆಪ್ಪೋ.. ಎಲ್ಲಾ ನಮ್ಮಪ್ಪ ಎಂಕ್ಟಪ್ಪುಂಗೇ ಸೇರಿದ್ದು..."

 

"ವೆಂಕಟಪ್ಪಂಗೇ...ಸೇ..ರಿದ್ದು. ಆದರೆ ಭಾಷೆಯಲ್ಲಿ ವ್ಯತ್ಯಾಸವಾದ್ರೆ ಅರ್ಥವೇ ಚೇಂಜ್ ಆಗುತ್ತಲ್ವೇ..."

 

"ಅರ್ತ್ವೋ ಗಿರ್ತ್ವೋ.. ಆಡೋ ನಂಗ್ ಅರ್ತಾದ್ರೆ, ಕೇಳುಸ್ಕಳ್ಳೋ ಅವ್ನಿಗರ್ತ ಆದ್ರೆ ಅಸ್ಟ್ ಸಾಕ್ ಅಲ್ವ್ರ...?"

 

"ಹಂಗಲ್ಲಪ್ಪಾ... ನೋಡು.. ಆಗಿಂದ ನೋಡ್ತಾ ಇದ್ದೀನಿ... 'ಹಾಡು' ಅನ್ನೋದಕ್ಕೆ ಬದಲಾಗಿ 'ಆಡು' ಅಂತಿದ್ದೀಯ... ಆಡು ಅಂದ್ರೆ ಮೇಕೆ ಅಂತಲ್ವೇ..?"

 

  "ಮ್ಯಾಕೋ ಕೆಳಕ್ಕೋ.. 'ನಾನಾಡ್ತೀನಿ' ಅಂದ್ರೆ ನಿನ್ ಮ್ಯಾಕೆ ಇಲ್ಲೇನ್ ಮಾಡುತ್ತಪ್ಪ..?... ಮ್ಯಾಕೆ ಅನ್ನೋ ಅರ್ತ ಬರಾಂಗೆ ನಾನೇನಾದ್ರು ಯೋಳಿದ್ರೆ ಮಾತ್ರ, ನೀನು 'ಆಡು' ಅಂದ್ರೆ 'ಮ್ಯಾಕೆ' ಅಂತ್ಕಳ್ಬೇಕು.. ಇಲ್ಲಾಂದ್ರೆ 'ಆಡು' ಅಂದ್ರೆ ಪದಾನೆಯ.. ಅದ್ ತಿಳಿಯಾಕು ಕಷ್ಟಪಡ್ಬೇಕೆ?" .

 

  "ನೋಡಪ್ಪಾ... ಇಲ್ಲೀವರ್ಗೂ ನಿಂಗ್ ಗೊತ್ತಿರ್ಲಿಲ್ಲ.. ಈಗ ಹೇಳ್ತೀನಿ ನೋಡು,  ಪದಗಳನ್ನ ಹೇಳೋದಕ್ಕೆ "ಹಾಡು" ಅನ್ಬೇಕು... "ಆಡು" ಅಂತ ಹೇಳಿದ್ರೆ ನೀನು ನಮ್ಮ ಭಾಷೆಯನ್ನ ಕೊಂದ ಹಾಗೆ ಆಗುತ್ತೆ..."

 

"ನೀವು ಸರ್ಯಾಕೆ ಇದ್ದೀರ... ನನ್ ಪಾಡಿಗ್ ನಾನ್ ಆಡ್ಕಂಡ್ರೆ ನಿಮ್ ಬಾಸೆ ನಾನ್ಯಾಕ್ ಕೊಂದೇನು..?"

 

"ನನ್ನದಲ್ಲಪ್ಪ.. ಕನ್ನಡ  'ನಮ್ಮದು' ... ನಾವೆಲ್ಲರೂ ಕನ್ನಡಿಗರಲ್ವಾ... ನೀನೂ ಕನ್ನಡಿಗ, ನಾನೂ ಕನ್ನಡಿಗ.. ನಾವೇ ನಮ್ಮ ಭಾಷೆಯನ್ನ ಉಳಿಸದಿದ್ರೆ ಹೇಗೆ ಹೇಳು..?."..

 

  "ಓ.. ಅದುಕ್ ನಾನೇನ್ ಮಾಡ್ಬೇಕ್ ಯೋಳಿ.. ಮಾಡಾಣಾಂತೆ.."

 

"ನಾನು ಹೇಳಿದ ಹಾಗೆ ಕೇಳು..... ಎಲ್ಲಿ ನಿನ್ನ ಪದ್ಯವನ್ನ ಇನ್ನೊಮ್ಮೆ ಹೇಳು ನೋಡೋಣ..."

 

ಆ ಹಾಡುಗಾರ ಮತ್ತೊಮ್ಮೆ ತನ್ನ ಪದ್ಯವನ್ನ ಸೊಗಸಾಗಿ ಹಾಡಿದ.

 

"ಮುದ್ದಿನ ಮೊಗವೊತ್ತು ಬೆಟ್ಟಾದ ತುದಿಯಾಗ..

ಸದ್ದಿಲ್ದೆ ಸುದ್ದಿಲ್ದೆ ಎದ್ದು ನಿಂತ ದೊರೆಯ..

......"

 

"ಓಕೆ ... ಸರಿಯಾದ ಕನ್ನಡದಲ್ಲಿ ಅದನ್ನು ಹೀಗೆ ಹೇಳಬೇಕು...

"ಮುದ್ದಿನ ಮೊಗಹೊತ್ತು ಬೆಟ್ಟದ  ತುದಿಯಾಗೆ

ಸದ್ದಿಲ್ಲದೆ ಸುದ್ದಿ ಇಲ್ದೆ ಎದ್ದು ನಿಂತ ದೊರೆಯ

ಕಾಲ ಹೊತ್ತುತ ಲಕ್ಷ್ಮಿ ಕುಂತಿದಾಳೆ..."

 

ತನ್ನ ಅರವತ್ತೈದು ವರ್ಷಗಳಲ್ಲಿ ಪಾಪ ಆತನಿಗೆ ಇದೇ ಮೊದಲು ತನ್ನ ಭಾಷೆಯ ಬಗ್ಗೆ ಇಷ್ಟು ಗೊಂದಲ ಸೃಷ್ಟಿ ಆಗಿದ್ದು. ಆದರೂ ಪಾಪ ಅವರು ಹೇಳಿ ಕೊಟ್ಟಂತೆಯೇ ಹೇಳಲು ಪ್ರಯತ್ನ ಪಡುತ್ತಾ ಕುಳಿತ...

ಕಿರಣ್ ಗೆ ಅದೇನೋ ಮಹತ್ತಾದದ್ದನ್ನು ಸಾಧಿಸಿದ ತೃಪ್ತಿ ಇತ್ತು...  ಹಳ್ಳಿಯವನು ತಾನು ಹಾಡಲು  ಪ್ರಯತ್ನಿಸಿದಾಗೆಲ್ಲಾ "ಆಹ... ಹೀಗೆ ಬರ್ಬೇಕು.. ಇದು ನಿಜವಾದ ಕನ್ನಡ " ಎಂದು ಹೇಳುತ್ತಿದ್ದ... ". 

 

ನಂತರ "ಸರಿಯಪ್ಪ.. ಇನ್ನು ಮುಂದೆ ಹೀಗೇ ರೂಢಿಸ್ಕೊಳ್ಳ್ಬೇಕು... ಇಲ್ಲಾಂದ್ರೆ ಕನ್ನಡದ ಕೊಲೆ ಮಾಡ್ದ ಹಾಗಾಗುತ್ತೆ..." ಎಂದು ಹೇಳಿ ಅವರಿಬ್ಬರೂ ಅಲ್ಲಿಂದ ಹೊರಟು ಹೋದರು...

 

ಪಾಪ ಲೋಕಾಭಿರಾಮವಾಗಿ ಪದ ಕಟ್ಟುತ್ತಿದ್ದ ಹಳ್ಳಿಯವ ಗೊಂದಲಕ್ಕೊಳಗಾಗಿ ಇನ್ನೇನನ್ನೋ ತಡವರಿಸಿ ಹಾಡುವುದಕ್ಕೆ ಶುರು ಮಾಡಿದ.. ಹಾಡಿನಿಂದ ಲಯ ಜಾರಿತು... ಶ್ರಾವ್ಯತೆ ಹೊರಟು ಹೋಯಿತು.. ಆತನಿಗೆ ಅನ್ನಿಸಿತು "ನಮ್ಮಪ್ಪ ಅವ್ವ ಮಾತಾಡಿದ್ ಬಾಸೆ ಮಾತಾಡದುಕ್ಕೆ  ಇಸ್ಟ್ ಏಗ್ ಬೇಕಾ.. ? ಎಂಕ್ಟಪ್ಪ... ಇನ್ಮುಂದೆ ನಿನ್ ಪದಾನ ಎಂಗಪ್ಪಾ ಆಡಾದು..."

 

ಮರದ ಮೇಲೆ ಕುಳಿತಿದ್ದ ಕೋಗಿಲೆಯೊಂದು ತನ್ನಷ್ಟಕ್ಕೆ ತಾನೆ ನಗುವುದಕ್ಕೆ ಶುರು ಮಾಡಿತು.

Rating
No votes yet

Comments