ಕಿರುಗತೆ : ಬಿಡಿಸಲಾರದ ಒಗಟು

ಕಿರುಗತೆ : ಬಿಡಿಸಲಾರದ ಒಗಟು

ಸೀಗೇ ಘಟ್ಟ ಅನ್ನೋ ಒಂದು ಮಲೆನಾಡಿನ ಪ್ರದೇಶದಲ್ಲಿ ಹುಲಿಬಾಯಿಂದ ತಮ್ಮ ಹಾಡಿಯ ಜನರನ್ನು  ಉಳಿಸಿಕೊಳುವುದಕ್ಕಾಗಿ,  ಹಾಡಿಯ ಜನರು ಹುಲಿಯಮ್ಮ ದೇವಿಗೆ ಹರಕೆ ಹೊತ್ತು ಕೊಂಡರಂತೆ..

' ಹುಲಿಯಮ್ಮ್ ತಾಯಿ.. ನಮ್ಮ ಆಡಿನಾಕ್ ಬರೋ ಆ ಹುಲಿನ ಎಂಗಾದ್ರು ಸಾಯ್ಸು..  ಅದ್ರು ಕಾಟ ತಡ್ಕೊಂಡ್ ತಡ್ಕೊಂಡ್ ಸಾಕಾಗೋಗಿದೆ....  ಇನ್ನದಿನೈದ್ ದಿವಸ್ದಾಗೆ  ಆ ಹುಲಿ ನಮ್ಮ್ ಕುಣ್ಕೆಗ್ ಬಿದ್ರೆ ಅಥವಾ ನಿನ್ಕಡೆಯಿಂದಾನೆ ಎಂಗಾದ್ರು ಸತ್ತ್ ಹೋದ್ರೆ... ನಿನ್ಗೆ ನಾಲ್ಕ್ ನಾಟಿ ಕೋಳಿ ಬಲಿಕೊಡ್ತೀವಿ... ನಿಂಗ್  ಒಪ್ಗೆ ಇದ್ರೆ ನಿನ್ಗ್ ಮುಡ್ಸಿರೋ ಕಣುಗ್ಲು ‘ಊ’ ನ ಬಲುಕ್ ಬೀಳ್ಸು... ಇಲ್ಲಾ..  ನಿನ್ ಕೈಯಲ್ ಆಗಾಕಿಲ್ಲ ಅಂದ್ರೆ ಅದೇ ‘ಊ’ನ ಎಡುಕ್ ಬೀಳ್ಸು....'.

ಸ್ವಲ್ಪ ಹೊತ್ತು ಆದ್ಮೇಲೆ ಅಲ್ ಕೂತ್ಕೋಂಡಿದ್ದ ಸಿದ್ಧ ಹೇಳ್ದ 'ಬಿತ್ತು..ಬಿತ್ತು...ಬಿತ್ತು... ಬಲುಕ್ ಅಪ್ಣೇ ಆಯ್ತು... ಇನ್ಯಾಕ್ ಚಿಂತೆ.. ಹುಲಿಯಮ್ ಎಲ್ಲಾ ನೋಡ್ಕಂತಾಳೆ.... ನಿಂಗಣ್ಣ ನಿನ್ ಮನೇವೆ ನಾಲ್ಕ್ ಕೋಳಿನ ಬಲಿ ಕೊಡನ ಕಣ್ಲಾ... ತುಂಬ ಸನ್ನಾಕಿವೆ...'
'ಅದ್ಕೇನಂತ್ ಬಿಡ್ಲಾ... ಊರ್ಕೆಲ್ಸುಕ್ಕಲ್ವಾ.. ಬ್ಯಾಡ ಅಂದೇನಾ..?' ಅಂತ ನಿಂಗ ಅಂದ.

ಹುಲಿಯಮ್ಮ ಹೂವನ್ನ ಬಲಕ್ಕೆ ಬೀಳಿಸಿ ಅಪ್ಪಣೆ ಕೊಟ್ಟಿದ್ದು ಹಾಡಿಯ ಜನರಿಗೆಲ್ಲಾ ತುಂಬಾ ಸಂತೋಷಕೊಟ್ಟಿತ್ತು... 'ಹುಲಿಯಮ್ಮ ಅಂದ್ರೇ ಸುಮ್ಕೇನ.. ಆ ಮುಂಡೇದು ಹುಲೀಗ್ ಐತೆ ಹಬ್ಬ..' ಅಂತ ನಂಜಣ್ಣ ಹೇಳಿದ.. ಆಮೇಲೆ ನಿಂಗಣ್ಣ ಹೇಳ್ದ...'ಅದ್ಯಾಕ್ರುಲ್ಲ ಆತ್ರುಕ್ಕೆ  ನಾಕ್ ಕೋಳಿ ಕೊಡ್ತೀನಿ ಅಂತ್ ಏಳಿದ್ರಿ... ಹುಲಿಯಮ್ಮೇನು ಬಾಡ್ ಗಳ್ಳೀ  ಅಂತ ಅಂದ್ಕಂಡೀರ... ಎಲ್ಡ್ ಕೋಳಿ ಅಂತ್ ಏಳಾಕ್ ಏನಾಗಿತ್ತು...' ಎಂದ.. ಪಾಪ ಆತನಿಗೆ ತನ್ನ ಮನೆಯವೇ ನಾಲ್ಕು ಕೋಳಿ ಬಲಿಕೊಡಬೇಕಾಗುತ್ತಲ್ಲ ಅಂತ ಒಳಗೊಳಗೆ ಸಂಕಟವಾಗಿತ್ತು. 'ಏ ಸುಮ್ಕಿರಲ.. ಆ ದೇವ್ತೇ  ಎದ್ರುಗೆ ಏನೇನೋ ಬೊಗಳ್ತಾ ಇದ್ದೀರಲ್ಲ.. ಆಮ್ಯಾಕ್ ಆಗೋ ಕೆಲ್ಸಾನು ಆಗಾಕ್ಕಿಲ್ಲ.. ಒಂದ್ ಸ್ವಲ್ಪೊತ್ತ್ ಸುಮ್ಕಿರ್ಬಾದ.. ಮುಂಡೇವ' ಅಂತ ಹಾಡಿ ನಾಯಕ ಬಿಲ್ಲಣ್ಣ ಹೇಳಿದ.

ನಿಂಗಣ್ಣನ ಮನೆ ಕೋಳಿ ಕೆಂಚಿ ಇವರು ಆಡುವ ಮಾತನ್ನ ಕೇಳಿಸಿಕೊಂಡು ಹುಂಜ ಕೆಂಪನಿಗೆ ಸುದ್ಧಿ ಮುಟ್ಟಿಸೋದಕ್ಕೆ ಹೋಯಿತು.. ಒಂದೇ ಉಸಿರಿನಲ್ಲಿ ಓಡಿ.... ಕೆಂಪಣ್ಣ ಕೆಂಪಣ್ಣ .. ಅಂತ ಉಸಿರು ಹೊಯ್ದುಕೊಳ್ಳುವುದಕ್ಕೆ ಶುರು ಮಾಡಿತು...
'ಅದ್ಯಾಕ್ ಕೆಂಪಿ... ಹಿಂಗ್ ಉಸ್ರು ಹುಯ್ತಾ ಇದ್ದೀಯ... ಅದೆಷ್ಟ್ ಸಲ ಹೇಳಿವ್ನ್ ನಿನ್ಗೆ, ಸುಮ್ನೆ ಕೆಂಪ ಅಂತ ಕರುದ್ರೆ ಸಾಕಾಗಕಿಲ್ವಾ.. ಕೆಂಪಣ್ಣ ಅಂತಾನೆ ಕರೀಬೇಕ...'  ಹುಂಜ ಸ್ವಲ್ಪ ಮುನಿಸಿಕೊಂಡಿತು..  ಕೆಂಪಿ ಹೇಳಿತು 'ಅದಂಗಿರ್ಲಿ ಬಿಡಣೋ... ಈ ವಿಸ್ಯ ಏನಾದ್ರು ನಿಂಗೊತ್ತಾದ್ರೆ, ಅಣ್ಣ ಅನ್ನಾಕು ಇರಲ್ಲ ತಮ್ಮ ಅನ್ನಾಕೂ ಇರಲ್ಲ ನೀನು...'  ಅಂತ ಸವಿಸ್ತಾರವಾಗಿ ಎಲ್ಲಾ ಹೇಳಿತು... ಗಾಬರಿಗೊಂಡ ಎಲ್ಲಾ ಕೋಳಿಗಳು ಸಂಜೆ ಒಂದೆಡೆ ಸೇರಿದವು..  ಕೆಂಪ ಎಲ್ಲಾ ಕೋಳಿಗಳನ್ನುದ್ದೇಶಿಸಿ ಹೇಳಿತು...'ಎಲ್ಲಾದ್ಕು ಒಂದು ಲಿಮಿಟ್ಟು ಅಂತ ಐತೆ... ಏನೀ ಮನುಷ್ರು ತಮ್ಮುನ್ನೇ ತಾವ್ ದೇವ್ರು ಅಂತಾ ಅಂದ್ಕಂಡಾವ್ರ...ನಮ್ಗೆ ನೆಟ್ಟುಗ್ ಒಂದ್ ನಾಲ್ಕ್ ವರ್ಷ ಬದ್ಕಾಕ್ ಬಿಡಲ್ಲ ಅಂದ್ರೆ!.. ಹೆಂಗ್ ಇವ್ರನ್ನ ಸಹಿಸ್ಕಳ್ಳಾದು... ಮಾರಮ್ಮ, ಕಾಳಮ್ಮ, ಬೋರಮ್ಮ ಅಂತ ನಮ್ಮ ಜಾತಿವ್ರ್ನೆಲ್ಲ ಹಿಂಗ್  ಕುಯ್ದಾಕಿದ್ರೆ, ನಮ್ ಪೀಳ್ಗೆ ಉಳಿಯದಾದ್ರು ಹೆಂಗೆ... ಹಿಂಗೇ ಬಿಟ್ರೆ ಆಗಾಕಿಲ್ಲ ನಾವೆಲ್ಲ ಇವತ್ತೇ ಕೋಳಮ್ಮುಂಗೆ ಹರಕೆ ಹೊತ್ಕೊಳ್ಳೋಣ..' ನಾಯಕ  ಕೆಂಪನ ಮಾತಿಗೆ ಬೆಲೆಕೊಟ್ಟು ಎಲ್ಲಾ ಕೋಳಿಗಳು ಕೋಳಮ್ಮ ದೇವಿ ಗುಡಿ ಹತ್ರ ಬಂದ್ವು... ಕೆಂಚಿ ಅಳುತ್ತಲೇ ಕೇಳಿದಳು..' ಕೋಳಮ್ಮ..  ನಮ್ಗೆಲ್ಲಾ ಕೋಳಿಗಳ್ಗೂ ನೀನೆ ಅಮ್ಮ...  ಈಗ ಬಂದಿರೂ ಸಂಕಷ್ಟದಿಂದ ನಮ್ಮುನ್ನ ಹೆಂಗಾದ್ರು ಮಾಡಿ ಕಾಪಾಡ್ಬೇಕು ತಾಯಿ... ಆ ಹುಲಿಯಮ್ಮುನಿಂದ ಆ ಹುಲಿಗೆ ಏನೂ ಆಗ್ದೇ ಇರ್ಲಿ... ಒಂದುವೇಳೆ ಹುಲಿ ಜೀವ ಉಳೀತು ಅಂದ್ರೆ ನಿಂಗ್ ಒಂದತ್ತು ಒಳ್ಳೆ ಹಾರೋ ಚಿಟ್ಟೆಯಂತ ಉಳಗಳನ್ನೋ ಇಲ್ಲಾ ದಪ್ಪ್ ಜೇಡಗಳನ್ನೋ  ಹಿಡ್ದು ಬಲಿ ಕೊಡ್ತೀವಿ... ' .. ಕೆಂಚಿ ಯ ಭಕ್ತಿ ನೋಡಿ ಕೆಂಪನಿಗೆ ಬಹಳ ಖುಷಿಯಾಯ್ತು...  'ಆಕಾಸ್ದಲ್ಲಾರೋ ಹುಳಗಳನ್ನ ಹಿಡ್ದು ಬಲಿಕೋಡಾದು ಸ್ವಲ್ಪ ಕಷ್ಟಾನೆಯ.. ಪುಣ್ಯಕ್ ಇನ್ನೊಂದನ್ನೂ ಹೇಳ್ ನಮ್ ತಲೆನೋವ್ ಕಡ್ಮೆ ಮಾಡ್ದೆ ಕೆಂಚಿ... ಆ ಮನುಷ್ರಿಂದ ನಮ್ ಜೀವ ಉಳೀತು ಅಂದ್ರೆ ಹಿತ್ಲು ತೋಟಕ್ಕೋಗ್ ಒಂದ್ ನೂರು ನೂರೈವತ್ತ್ ಒಳ್ಳೆ ಜೇಡ ತಂದು ಕೋಳಮ್ಮುಂಗೆ ಬಲಿಕೊಡಾಣ.. ಏನಂತಿರಲಾ..'  ಅಂತ ಉಳಿದ ಕೋಳಿಗಳನ್ನುದ್ದೇಶಿಸಿ ಕೇಳಿತು. ' ಎಲ್ಲಾ ಕೋಳಿಗಳು .. ಕೊಕೊಕ್ಕೋ.. ಅಂತ ಹರ್ಷ ವ್ಯಕ್ತಪಡಿಸಿದವು...

 

ಕೋಳಮ್ಮ ದೇವಿ ಗುಡಿ ಮೇಲೆ ಬಲೆ ಕಟ್ಟಿದ್ದ ಜೇಡ ಇವರ ಮಾತನ್ನ ಕೇಳುಸ್ಕೊಂಡು, ನೇರಳೇ ಮರದಲ್ಲಿ ದೊಡ್ಡದಾಗಿ ಬಲೆ ಕಟ್ಟಿದ್ದ ಕರಿಜೇಡದ ಬಳಿ  ನಡೆದುದ್ದೆಲ್ಲವನ್ನ ಚಾಚೂ ತಪ್ಪದೇ ಹೇಳ್ತು...
'ಕರಿಜೇಡಣ್ಣ... ಏನೋ ಕಸಕಡ್ಡಿ ತಿಂದ್ಕಂಡ್ ಇರ್ತಾವೆ ಅಂದ್ರೆ ನಮ್ ಬುಡುಕ್ಕೆ ಕೊಳ್ಳಿ ಇಡ್ತಾವೆ ಈ ಕೋಳಿ ಮುಂಡೇವು.... ಇವುಕ್ಕೆ ಸುಮ್ನೆ ಬಿಟ್ರೆ ಆಗಾಕ್ಕಿಲ್ಲ ಏನಾದ್ರು ಮಾಡ್ಲೇ ಬೇಕು.. ಆ ಕೆಂಪುನ್ ಕೊಬ್ಬು ಇಳಿಲೇ ಬೇಕು...'

'ವಸಿ ತಡ್ಕಳ್ಲಾ... ಇಲ್ಲಿ ದೊಡ್ಡವ್ನ್ ನಾನಾ ಇಲ್ಲಾ ನೀನಾ?.. ಎಲ್ಲಾ ನೀನೆ ಬೊಗ್ಳಿದ್ರೆ.. ನಾನೆಲ್ಲಿಗೋಗ್ಲಿ.. ಒಂದ್ ಕೆಲ್ಸಾ ಮಾಡಾಣ... ಇವತ್ತೇ ಎಲ್ಲಾ ಜೇಡಗಳ್ಗೂ ಈ ನೇರ್ಳೆ ಮರುದ್ ಹತ್ರ ಬರಾಕ್ ಏಳು.... ನಾನಿದುನ್ನೆಲ್ಲಾ ಸರಿ ಮಾಡ್ತೀವ್ನಿ...' ಅಂತ ಕರಿಜೇಡ ಹೇಳಿತು..

ಸಂಜೆ ಎಲ್ಲಾ ಜೇಡಗಳು ಹಳೇ ನೇರಳೆ ಮರದ ಹತ್ತಿರ ಜಮಾಯಿಸಿದವು.  ಕರಿಜೇಡ ಮಾತು ಶುರು ಮಾಡಿತು...' ನೋಡ್ರಲ್ಲಾ.. ಸಮಸ್ಯೆ ಸ್ವಲ್ಪ ಗಂಭೀರ್ವಾಗೈತೆ... ಸರಿಯಾಗ್ ಕೇಳುಸ್ಕಳ್ಳಿ... ಆ ಕೋಳಿಮುಂಡೇವು ಕೊಬ್ಬು ಜಾಸ್ತಿ ಆಗಿ ಕೋಳಮ್ಮುನತ್ರ ಏನೇನೋ ಹರ್ಕೆ ಒತ್ಕಂಡಾವೆ... ನಮ್ಮೆಲ್ಲರ್ನೂ ಆ ದೇವ್ರಿಗೆ ಬಲಿಕೊಡ್ತಾವಂತೆ... ಸ್ವಲ್ಪ ಜೋಪಾನ್ವಾಗಿರ್ರಿ...  ಅದ್ರೂ ಜೊತೆಗೆ ನಮ್ಮ್  ದೊಡ್ಡೊಟ್ಟೆ ಜೇಡಯ್ಯಂಗೆ ಹರ್ಕೆ ಹೊತ್ಕೊಳ್ಳಾಣ..ಅವ್ನೇ ಎಲ್ಲಾದ್ನು ಸರಿ ಮಾಡ್ತಾವ್ನೆ' ಅಂತ ಹೇಳಿ ನೇರಳೆ ಮರದ ಮೇಲಕ್ಕೆ ಎಲ್ಲಾ ಜೇಡಗಳನ್ನು ಕರೆದು ಕೊಂಡು ಹೋಯಿತು..

ಅಲ್ಲಿದ್ದ ದೊಡ್ಡೊಟ್ಟೆ ಜೇಡಯ್ಯ ದೇವರಿಗೆ ಎಲ್ಲರು ಕೈಮುಗಿಯುತ್ತ  ನಿಂತರು... ಕರಿಜೇಡಣ್ಣ   ತನ್ನ ಪ್ರಾರ್ಥನೆ ಶುರು ಮಾಡಿತು...' ನೋಡಪ್ಪಾ ಜೇಡಯ್ಯ... ನಾವೇನ್ ತಪ್ ಮಾಡೀವಿ ಅಂತ ಈ ಸಿಕ್ಸೇ... ನಮ್ಮಿಂದ ತಪ್ ಆಗೈತೆ ಅಂದ್ರೆ ಒಂದೆರಡ್ ದಿನ ಉಪಾಸ ಕೆಡ್ವು... ಆದ್ರೆ ಈ ಥರ ನಮ್ಮುನ್ನ ನಾಸ ಮಾಡಿದ್ರೆ ಎಂಗೇ ..? ಅಂತ.. ಆ ಕೋಳಿಗಳನ್ನ  ಆ ನಿಂಗಣ್ಣುನಿಂದ ಕಾಪಾಡು.. ಅಂಗೇ ಅವ್ರ್ ಹರ್ಕೆ ಈಡೇರ್ದಾಂಗ್ ಮಾಡು...  ಆ ಕೋಳಿ ಮುಂಡೇವಿಂದ ನಮ್ಮುನ್ನ ಕಾಪಾಡಿದ್ರೆ ನಿಂಗ್ ಒಂದ್ವಾರ್ದಲ್ಲೇ ಒಂದ್ ಸಾವ್ರ ದೊಡ್ಡ್  ನೊಣಗಳನ್ನ ಬಲೇಲ್ ಇಡ್ದು ನಿಂಗೊಪ್ಪಿಸ್ತೀವಿ...  ನಾವ್ಗುಳ್ ಬಲೆ ಆಕಿದ್ರೆ ಯಾವ್ ನೋಣ ತಾನೆ ಬೀಳಾಕ್ಕಿಲ್ಲ..... ' ಅಂತ ಹೇಳಿತು.

ಅಲ್ಲಿದ್ದ ಸಣಕಲು ಜೇಡ ಒಂದು...' ಏ ಅಲ್ಲೇನ್ರಲ್ಲಾ ನೋಡ್ತಾ ಇವ್ರಿ... ಇಡೀ ತೋಟುಕ್ಕೆ ಬಲೆ ಕಟ್ಟಾಣ ಬಂದ್ರಲ್ಲಾ...' ಅಂತು...

    ' ಅದ್ಯಾಕ್ಲಾ ಅಂಗಾಡ್ತಾ ಇದ್ದೀಯ.. ಇಲ್ಲಿ ದೊಡ್ಡವ್ನು ನಾನಾ ನೀನ... ಸ್ವಲ್ಪ ಬಾಯ್ ಅದುಮ್ಕಂಡ ಕುತ್ಕ..... ನೋಡ್ರಲ್ಲಾ ನಾನೇಳೋ ತನ್ಕ ಯಾರೂ ಏನೂ ಮಾಡ್ಬೇಡಿ... ಎಲ್ಲಾ ನಮ್ಮ ದೊಡ್ಡೊಟ್ಟೆ ಜೇಡಯ್ಯನೇ ನೋಡ್ಕಳ್ತಾನೆ... ಜೇಡಯ್ಯ ಅಂದ್ರೆ ಏನ್ ಸುಮ್ಕೇನಾ' ಅಂತ ಹಿರಿಜೇಡ  ದೇವರಮಹಿಮೆಯನ್ನ ಹೊಗಳಿತು...

ನೇರಳೇ ಮರದ ಕೆಳಗೆ ಸಗಣಿಗೊಬ್ಬರದ ಮೇಲೆ ಕುಳಿತುಕೊಂಡಿದ್ದ  ನೊಣ ಇವರ ಮಾತನ್ನ ಕೇಳಿಸಿಕೊಂಡು ಗಾಬರಿಯಿಂದ  ತಮ್ಮ ನಾಯಕನನ್ನು ಕಾಣೋದಕ್ಕೆ ಹಾರಿ ಹಾರಿ ಕಾಡಿನ ಮಧ್ಯಭಾಗಕ್ಕೆ ಬಂತು... ಮತ್ತು ನಡೆದ ವಿಷಯವನ್ನೆಲ್ಲಾ ಹೇಳಿತು..... 'ಅಣ್ಣಾ ಅಪ್ಪೀ ತಪ್ಪೀ ಕೂಡ  ಆ ಕಡೆ ಹೋಗಾದ್ ಬ್ಯಾಡ ಕಣಣ್ಣಾ... ವಿಸ್ಯ ತುಂಬಾ ಕಷ್ಟ್ವಾಗೈತೆ.... ಇಡೀ ತೋಟುಕ್ಕೆ ಆ ಜೇಡಗಳು ಬಲೆ ಕಟ್ತಾವಂತೆ.. ನಮ್ ಒಂದ್ಸಾವ್ರ ನೊಣಗಳುನ್ನ ಆ ದೊಡ್ಡೊಟ್ಟೆ ಜೇಡಯ್ಯ ದೇವ್ರಿಗೆ ಬಲಿಕೊಡ್ತಾವಂತೆ..'

      ' ನಿಜ ಏನ್ಲಾ ನೀನ್ ಏಳ್ತ ಇರಾದು... ನಾವ್ ಆ ಕಡೆ ಓಗ್ಲಿಲ್ಲಾ ಅಂದ್ರು ನಮ್ಮ್ ಜಾತಿವ್ರು ಅಲ್ಲಿ ಓಗೇ ಓಗ್ತಾವೆ ತಾನೆ... ಅದೆಂಗ್ಲಾ ಅವ್ರುನ್ನೆಲ್ಲ ಸಾಯಾಕ್ ಬಿಡಾದು... ಏನೂ ಚಿಂತೆ ಬ್ಯಾಡ ನಾನೇ  ನೊಣಮ್ಮ ದೇವಿಗೆ ಹರ್ಕೆ ಒತ್ಕಳ್ತೀನಿ... ಎಲ್ಲಾ ಸರಿ ಓಗ್ತಯ್ತೆ... ನೊಣಮ್ಮ ದೇವಿ ಮುನುದ್ರೆ ಊರಿಗೂರೆ ಕಾಲ್ರ ಬಂದು ಜಾಗ ಖಾಲಿ ಮಾಡುತ್ತೆ.. ನೊಣಮ್ಮ ದೇವಿ ಅಂದ್ರೆ ಕಡ್ಮೇನಾ....' ಅಂತ ಹೇಳಿತು..    ಅವುಗಳು ಮಾತಾಡುತ್ತಿದ್ದ ಮರದ ಕೆಳಗೆಯೇ ಹುಲಿ ಕೂತು, ಸತ್ತ ಎಮ್ಮೆಯೊಂದನ್ನು ತಿನ್ನುತ್ತಿತ್ತು. ಆಗತಾನೆ ಕೊಳೆತ ಎಮ್ಮೆ ಮಾಂಸ ತಿನ್ನುವಲ್ಲಿ ಈ ಹಿರಿ ನೊಣಕ್ಕೂ ಆ ಹುಲಿಗೂ ವಾಗ್ವಾದ ನಡಿದಿತ್ತು... ಈ ನೋಣ ಸ್ವಲ್ಪ ಮುಂಚೆ ತಾನೆ ಆ ಹುಲಿಗೆ ಗೋಳುಹಾಕಿ ಬಂದಿತ್ತು.

ಎರಡೂ ನೊಣಗಳು ಸುಂಯ್ ಅಂತ ಹಾರಿ ಮರದಿಂದ ಕೆಳಗೆ ಇಳಿದು ಆಕಾಶ ನೋಡಿ ಕೈಮುಗಿದವು... ಹಿರಿ ನೊಣ ಹೇಳಿತು..'ನೊಣಮ್ಮ ತಾಯಿ... ಈಗ ಬಂದಿರೋ ಸಂಕಟದಿಂದ ನಮ್ಮುನ್ನ ಕಾಪಾಡ್ಲೇ ಬೇಕು.. ಆ ಸೊಟ್ಕಾಲ್ ಜೇಡಗಳು ನಮ್ ಕುಲಾನೇ ನಾಸ ಮಾಡಾಕ್ ಒಂಚಾಕವೆ... ದಯವಿಟ್ಟು ಆ ಜೇಡಗಳ್ನ ಆ ಕೋಳಿ ಬಾಯಿಯಿಂದ ತಪ್ಸು... ಹಂಗೇ ನೀನ್ ನಮ್ಮುನ್ನ ಕಾದ್ರೆ.. ಈ ಸಲ ಭರ್ಜರಿ ಹರ್ಕೇನಾ  ಕೊಡ್ತೀವಿ... ಸಲ ಸಲ್ದಂಗೆ ಮನುಷ್ರಿಗೆ ಕಾಲ್ರ ಬರ್ಸಲ್ಲ... ಈ ಸಲ ಈ ಪೊಗ್ರಿನ್ ಹುಲಿಗೇ ಕಾಲ್ರ ಬರ್ಸಿ.. ನಿಂಗ್ ಬಲಿ ಕೊಡ್ತೀವಿ... ' ಅಂತ ಹೇಳಿ ಹುಲಿ ಕಡೆ ತಿರುಗಿತು...

ಆ ಹುಲಿಗೆ ಗಾಬರಿ ಹೆಚ್ಚಾಗಿ ಎದೆ ಹೊಡೆದುಕೊಳ್ಳುವುದಕ್ಕೆ ಶುರುವಾಯಿತು. ಯಾರ ಕಯ್ಯಿಂದಲಾದರೂ ತಪ್ಪಿಸಿಕೊಳ್ಳಬಹುದು ಈ ನೊಣಗಳು ಹರಡುವ ಕಾಯಿಲೆಯಿಂದ ತಪ್ಪಿಸಿಕೊಳ್ಳುವುದಕ್ಕೆ  ಸಾಧ್ಯವೇ ಇಲ್ಲ... ಅದೂ ಅಲ್ಲದೇ, ತಾನು ಈಗ ತಾನೆ ನೊಣಗಳು ಮುತ್ತಿದ್ದ ಕೊಳೆತ ಎಮ್ಮೆ ಮಾಂಸವನ್ನು ಸೇವಿಸಿತ್ತು. ಆದ್ದರಿಂದ ಅದು ತನಗೆ ಕಾಲರ ಬಂದೇ ಬಿಟ್ಟಿತು ಅಂತ ಭಾವಿಸಿ ಓಟಕ್ಕಿತ್ತಿತು... ಮತ್ತು ಹುಲಿಯಮ್ಮ ದೇವರ ಎದುರಿಗೆ ಬಂದು ನಡುಗುತ್ತಾ ನಿಂತಿತು...'ದೇವ್ರೇ.. ನಾನೇನ್ ತೆಪ್ ಮಾಡಿವ್ನಿ.. ಕಾಡ್ಗೇ ರಾಜ ಅಂತ ಏಳ್ತಾರೆ.. ನಾನ್ ನೋಡುದ್ರೆ ಆ ನೊಣಗಳ್ಗ್ ಎದ್ರಿ ನಿನ್ನತ್ರ ಬಂದಿವ್ನಿ.. ಯಾರ್ಕಯ್ಯಿಂದ ಬೇಕಾದ್ರು ಬದುಕ್ಬೌದು ಈ ಕಾಲ್ರ ಕಾಯ್ಲೆಯಿಂದ ಬದ್ಕಾಕಾಗಕಿಲ್ಲ...  ನೀನೆ ಏನಾದ್ರು ಮಾಡ್ಬೇಕ್ ಕಣವ್ವಾ... ನಿನ್ ದಯೆಯಿಂದ  ಆ ನೊಣಗಳ್ಗೆ ಜೇಡಗಳು ಏನೂ ಮಾಡ್ದೇ ಇರ್ಲಿ.  ಎಷ್ಟೆ ಆಗ್ಲಿ ನಾನೇ ನಿನ್ನ ವಾನ ಅಲ್ವಾ..ನನ್ಮೇಲೇ ಅಲ್ವಾ ತಾಯಿ ನೀನು ಕುತ್ಕಳ್ಳಾದು... ನೀನೇ ಕೈಬಿಟ್ರೆ ಎಂಗೇ... ನಂಗವೆಲ್ಲಾ ಗೊತ್ತಿಲ್ಲ... ನನ್ನುನ್ನ ಈ ಕಾಯ್ಲೇ ಇಂದ ಪಾರ್ ಮಾಡಿದ್ರೆ ಈ ಊರಿನಲ್ಲಿರೋ ಯಾರಾದ್ರು ಒಳ್ಳೆ ಕಟ್ಟುಮಸ್ತಾದ ಮನುಷ್ಯನ್ನ  ತಂದು ನಿಂಗ್ ಬಲಿ ಒಪ್ಪುಸ್ತೀನಿ... ' ಅಂತ ಹರಕೆ ಮಾಡಿಕೊಂಡಿತು.

ಎರಡು ದಿನ ಅಮಾವಾಸ್ಯೆ ತನಕ ಏನೂ ಬದಲಾವಣೆಗಳು ಕಾಣಲಿಲ್ಲ... ಅಮಾವಾಸ್ಯೆಯ ದಿನ ಎಲ್ಲಾ ದೇವರುಗಳು ಒಟ್ಟಿಗೆ ಸೇರಿದವು.,...  ಹುಲಿಯಮ್ಮ ಹೇಳಿತು ' ಸರಿ ಈಗ ಏನ್ ಮಾಡಾಣ....?'. 

 

END.

Rating
No votes yet

Comments