ಕಿರುಗತೆ : ಬ್ಲ್ಯಾಕ್ ಮೇಲ್

ಕಿರುಗತೆ : ಬ್ಲ್ಯಾಕ್ ಮೇಲ್

ಕಿರುಗತೆ : ಬ್ಲ್ಯಾಕ್ ಮೇಲ್ 

 

          ವತ್ತಾರೆಯೇ ಎದ್ದು ತಿಮ್ಮಿ ಒಂದಿಷ್ಟು ಕಣಗಿಲು ಹೂಗಳನ್ನು ಕಿತ್ತಿಟ್ಟಿದ್ದಳು. ನೀಟಾಗಿ ಸ್ನಾನ ಮಾಡಲು ಒಂದೆರಡು ಕೊಡ ನೀರನ್ನು ತಂದಿಟ್ಟು  "ಎಲ್ಲೂ ಓಗ್ಬ್ಯಾಡ ಮೂದೇವಿ.. ಸ್ವಲ್ಪ ಗುಡಿಕಡೆ ಓಗ್ ಬರಾಣ".. ಅಂತ ಗಂಡ ಶಂಕ್ರನಿಗೆ ಹೇಳಿ, ತಲೆ ಸ್ನಾನಕ್ಕಾ ಗಿ  ಒಂದಿಷ್ಟು ಅಂಟ್ವಾಳ ಕಾಯಿಗಳನ್ನು ಉದುರಿಸಲು ಗಳ ತೆಗೆದುಕೊಂಡು ಹಿತ್ತಲಿಗೆ ಹೋದಳು.  ಶಂಕ್ರ  ನೀಟಾಗಿ ಹಲ್ಲುಜ್ಜಿ, ಒಂದಿಷ್ಟು ಬೊಗಸೆ ನೀರಿನಲ್ಲಿ ಮುಖ ತೊಳೆದುಕೊಂಡು ಸಿದ್ದಪ್ಪಾಜಿಯ ವಿಭೂತಿಯನ್ನು ನೀಟಾಗಿ ಕನ್ನಡಿ ಮುಂದೆ ನಿಂತು ಬಳಿದುಕೊಂಡನು. ತಿಮ್ಮಿ ಆರಾಮವಾಗಿ ಒಂದೂವರೆ ಕೊಡದಲ್ಲಿ ಅರ್ಧಗಂಟೆಗಳ ಕಾಲ ಬುಡಿಷ್ ಬುಡಿಷ್ ಎಂದು ಸ್ನಾನ ಮಾಡಿ, ಮಡಿ ಸೀರೆ  ಉಟ್ಟುಕೊಂಡು ನೀಟಾಗಿ ಬೊಟ್ಟು ಇಟ್ಟುಕೊಂಡಳು. ಇಬ್ಬರೂ ಹನುಮಪ್ಪನ ಗುಡಿ ಕಡೆ ನಡೆದರು..  ಅಲ್ಲಿನ ಹನುಮಪ್ಪ  ಸುತ್ಮುತ್ಲು ಹಳ್ಳಿಗಳಲ್ಲೇ ಭೋ ಫೇಮಸ್ಸು..  ಇಂತದ್ದು ಆಗಲ್ಲ ಅನ್ನೋ ಹಾಗಿಲ್ಲ. ವರ್ಷದಲ್ಲೊಮ್ಮೆ  ಹನುಮನಿಗೆ ಹರಕೆ ಸಲ್ಲಿಸಿ ಊರಿನವ್ರು ಕುರಿ ಕೋಳಿ ಕಡಿದು ಹಬ್ಬವನ್ನು ಮಾಡಿಕೊಳ್ಳುತ್ತಿದ್ದರು.  ಮದುವೆ ಆಗದೆ ಕಷ್ಟಪಡೋರು, ಆಗಿ ಕಷ್ಟಪಡೋರು, ಆದ್ರೂ ಮಕ್ಕಾಳಾಗದೆ ಕಷ್ಟಪಡೋರು, ಮಕ್ಕಳಾಗಿ ಕಷ್ಟಪಡೋರು ಇವರೆಲ್ಲರಿಗೂ ಹನುಮಪ್ಪನೇ ದಿವ್ಯೌಷಧ.  ಊರಿನವರಿಗೆ ಯಾವ ಪೀಡೆ ಪಿಶಾಚಿ ಮೆಟ್ಟುಕೊಂಡರೂ ಹನುಮಪ್ಪನಿಂದಲೇ ಅವಕ್ಕೆ ಮೋಕ್ಷ... ಉಫ್ ಅಂತ ಉಸಿರು ಬಿಟ್ಟು ನಾಲ್ಕು ಹೂವನ್ನ ಬಲಕ್ಕೆ ಉದುರಿಸಿದ್ರೆ ಸಾಕು.. ಆಗಲ್ಲ ಅನ್ನೋ ಕೆಲಸ ಯಾವ್ದೂ ಇಲ್ಲ..  ಹೀಗಾಗಿ ಊರಿನವರಿಗೆಲ್ಲ ಹನುಮಪ್ಪನನ್ನ ಕಂಡರೆ ಭೋ ಪ್ರೀತಿ. 

   ನಾಳೆ ತಿಮ್ಮಿಯ ಮೈದುನ ಹಾಗೂ ಗಂಡ  ಶಂಕ್ರನ ನಡುವೆ ಜಮೀನಿನ ಹಂಚಿಕೆ ವಿಷಯದಲ್ಲಿ ನ್ಯಾಯ  ಇತ್ಯರ್ಥ ಆಗಬೇಕಿತ್ತು.  ಸಿದ್ಧಯ್ಯನ ಕೆರೆ ಏರಿ ಕೆಳಗಡೆ ಇರೂ ಕಲ್ಲೇವಿನ ಪಕ್ಕದ ಜಮೀನು ತಮಗೇ ಸಿಗಬೇಕೆಂದು ಪ್ರಾರ್ಥಿಸುವ ಸಲುವಾಗಿ, ತಿಮ್ಮಿ ಗಂಡನ ಜೊತೆ ಗುಡಿಗೆ ಹೊರಟಿದ್ದಳು.  ಗುಡಿಯಲ್ಲಿ ಯಾರೂ ಇರಲಿಲ್ಲ.. ಗುಡಿ ಎಂದರೆ ಗುಡಿಯೇನಲ್ಲ.. ಒಂದೆರಡು ಸಣ್ಣ ಬಂಡೆಗಳ ಮಧ್ಯೆ ಪ್ರತಿಷ್ಟಾಪಿಸಿದ್ದ ಹನುಮನ ವಿಗ್ರಹವೊಂದನ್ನು ಬಿಟ್ಟು ಒಳಗಡೆ ಏನೂ ಇರಲಿಲ್ಲ.. ಭಕ್ತರೂ ಗುಡಿಯ ಹೊರಗೇ ನಿಂತು ಬೇಡಿಕೆ ಸಲ್ಲಿಸಬೇಕಾಗಿತ್ತು..  ಅಲ್ಲಿ ಸುತ್ತಮುತ್ತಲೂ ಯಾರೂ ಇರಲಿಲ್ಲ.. ಹಾಗಾಗಿ ಅಪ್ಪಣೆ ಕೇಳಲು ಪ್ರಶಸ್ತವಾದ ಸಮಯ!. ತಿಮ್ಮಿಯೇ ತಾನು ತಂದಿದ್ದ ಹೂವಿನಿಂದ  ಹನುಮನನ್ನು ಚೆನ್ನಾಗಿ ಅಲಂಕಾರ ಮಾಡಿದಳು.   " ಅಪ್ಪ.. ಆ ಜಮೀನು ನಮ್ಗೇ ಸಿಗಾಂಗಿದ್ರೆ,, ಊವುನ್ನ ಬಲುಕ್ ಬೀಳ್ಸು..."  ಅಂತ ಕೇಳಿಕೊಂಡಳು..  ಶಂಕ್ರ ಹನುಮನನ್ನೇ ನೋಡುತ್ತಾ ಕೈಮುಗಿದು ನಿಂತುಕೊಂಡ.

         ಬಹಳ ಸಮಯವೇನೂ ಆಗಿರಲಿಲ್ಲ.. ಹನುಮನ ವಿಗ್ರಹದಿಂದ ಹೂವು ಬಲಕ್ಕೆ ಬಿದ್ದಿತು. ಆಹಾ.. ತಿಮ್ಮಿಗೆ ಆದ ಖುಷಿ ಅಷ್ಟಿಷ್ಟಲ್ಲ.  ಇನ್ನೂ ತುಂಬಾ ಹೂಗಳು ಹನುಮನ ಮೇಲಿದ್ದವು, ಅಲ್ಲದೇ ಅಲ್ಲಿ ಮತ್ಯಾರೂ ಜನರಿಲ್ಲದ ಕಾರಣ ಮತ್ತೆ ತಿಮ್ಮಿ ಇನ್ನೊಂದು ಸಲ ಅದೇ ಅಪ್ಪಣೆಯನ್ನು ಕೇಳಿದಳು... ಸ್ವಲ್ಪ ಸಮಯದಲ್ಲಿಯೇ ಹೂವೊಂದು ಬಲಕ್ಕೆ ಬಿತ್ತು... ಆಹಾ ತಿಮ್ಮಿಗೆ ಖುಷಿಯೋ ಖುಷಿ,  ಈ ಸಲ ಕನ್ಫರ್ಮ್ ಆಯಿತು... .. ತಾವೇ ಮುಡಿಸಿದ ಹೂವಲ್ಲವೇ! ಇನ್ನೂ ತುಂಬಾ ಹೂವಿದೆಯಲ್ಲ..  ಇನ್ನೊಂದೆರಡು ಬಾರಿ ಏಕೆ ಅಪ್ಪಣೆ ಕೇಳಬಾರದೆಂದೆನಿಸಿತು.. ಕೇಳಿಯೇ ಬಿಟ್ಟಳು... ಆಗಲೂ ಬಲಕ್ಕೇ ಅಪ್ಪಣೆ ಆಯಿತು.. ತಿಮ್ಮಿಗೂ ಶಂಕ್ರನಿಗೂ ಬಹಳ ಖುಷಿ ಆಯಿತು.. ಇನ್ನೂ ಆ ಜಮೀನು ತಮಗೇನೆ!.. ಎಂದು ಖುಷಿಯಿಂದ ಮನೆಕಡೆ ನಡೆದರು...

ಮರುದಿನ ಊರಿನ ಹಿರಿಯವರೆಲ್ಲಾ ಸೇರಿ, ಕೆರೆಯ ಬಳಿ ಇದ್ದ ನೀರಾವರಿ ಜಮೀನನ್ನು ಶಂಕ್ರನ ತಮ್ಮ ಸಿದ್ಧನಿಗೆ ಹಂಚಿದರು ಮತ್ತು ಸೋಗೂರಿನ ಗದ್ದೆಯನ್ನು ಶಂಕ್ರನಿಗೆ ಕೊಡಿಸಿದರು.

        ಇದರಿಂದ ತಿಮ್ಮಿಗೆ ಆದ ದುಃಖ ಅಷ್ಟಿಷ್ಟಲ್ಲ.  ಹನುಮಪ್ಪ ಐದಾರು ಬಾರಿ ಬಲಕ್ಕೆ ಅಪ್ಪಣೆ ಕೊಟ್ಟಮೇಲೂ  ಜಮೀನು ಕೈತಪ್ಪಿ ಹೋಯಿತಲ್ಲ ಎಂದು ಮರುಗಿದಳು.. ಸಾಲದ್ದಕ್ಕೆ  ತಾವು ಸಾಕಿದ್ದ ಎರಡು ಎಮ್ಮೆಗಳು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.

ಬೆಳಕರೆಯಿತು, ಮತ್ತೊಂದು ದಿನವಾಯಿತು, ಇನ್ನೊಂದು ದಿನವಾಯಿತು ಆದರೂ ಎಮ್ಮೆಗಳ ಸುಳಿವಿಲ್ಲ.. "ಚಿರ್ತೇ ಗಿರ್ತೆ ಇಡ್ದೀತೋ ಏನೋ..!" ಅಂತ ಶಂಕ್ರ ತಿಮ್ಮಿಗೆ ಹೇಳಿದ. ತಿಮ್ಮಿಗೆ ಗಾಬರಿ ಆಯಿತು.. ಮಕ್ಕಳಥರ ಸಾಕಿದ ಎಮ್ಮೆಗಳು ಕಣ್ಮರೆಯಾಗಿದ್ದವು. ತಿಮ್ಮಿಗೆ ನೋವು ತಡೆಯಲಾಗಲಿಲ್ಲ.  ಆಮೇಲೆ ಶಂಕ್ರನೇ ಸಮಾಧಾನ ಮಾಡಿದ,"ಚಿಂತೆ ಬ್ಯಾಡ ನಾಳೆ ಹನ್ಮಪ್ಪುನ್ ಗುಡಿಗ್ ಓಗಾಣ.." ಎಂದ. 

             ಈ ಬಾರಿ ತಿಮ್ಮಿ ಹೂವನ್ನೂ ಕುಯ್ಯಲಿಲ್ಲ, ಸ್ನಾನವನ್ನೂ ಮಾಡಲಿಲ್ಲ.. ಬೆಳಗ್ಗೆ ಎದ್ದವಳೇ ಹಾಳುಮೋರೆಯಲ್ಲಿ ಹನುಮನ ಗುಡಿ ಮುಂದೆ ನಿಂತಳು. ಅಲ್ಲಿ ಅವಳನ್ನು ಬಿಟ್ಟು ಮತ್ತಾರು ಇರಲಿಲ್ಲ. ಹನುಮಪ್ಪನಿಗೆ ಹೇಳಿದಳು, " ನೋಡು,  ನನ್ನೆಮ್ಮೆ ಏನಾದ್ರೂ ಮನೆಗ್ ಬರ್ಲಿಲ್ಲ ಅಂದ್ರೇ... ಓದ್ಸಲ ಐದಾರ್ ಸಲ  ಬಲುಕ್ ಅಪ್ಣೆ ಕೊಟ್ರೂ ಕೆಲ್ಸ ಆಗ್ಲಿಲ್ವಲ್ಲ... ಈ ವಿಷ್ಯಾನ ಊರಾರ್ಗೆಲ್ಲಾ ಏಳ್ತೀನಿ.. ಗ್ಯಪ್ತಿ ಇಡ್ಕ..." ಎಂದು ಹೇಳಿ ಮನೆ ಕಡೆ ನಡೆದಳು.. ಶಂಕ್ರ ಇನ್ನೂ ಹಾಸಿಗೆಯ ಮೇಲೇ ಮಲಗಿದ್ದ..  ಕೊಟ್ಟಿಗೆಯ ಬಳಿ ಕಳೆದುಹೋಗಿದ್ದ ಎಮ್ಮೆಗಳು ಬಂದು ನಿಂತಿದ್ದವು..

 

Rating
No votes yet

Comments