ಕಿರುಗತೆ : ಭಂಡ ಬಾಡಿಗೆದಾರರು.
ಕಿರುಗತೆ : ಭಂಡ ಬಾಡಿಗೆದಾರರು.
ಮನೆಕಟ್ಟುವ ಮುಂಚೆಯೇ ಆ ಬಲ್ಬ್ ಅನ್ನು ಚಾವಣಿಗೆ ನೇತು ಹಾಕಲಾಗಿತ್ತು. ಆ ಮನೆಯಲ್ಲಿ ಇದ್ದದ್ದು ಒಂದು ವಿಶಾಲವಾದ ಕೋಣೆಯಷ್ಟೇ.. ಬಹುಶಃ ಕಟ್ಟಿದವನು ಒಳ್ಳೆಯ ಇಂಜಿನಿಯರ್ ಅಲ್ಲದೆ ಇರಬಹುದು. ಅಥವಾ ಅದರ ಹಿಂದೆ ಮತ್ತೇನು ಉದ್ದೇಶವಿತ್ತೋ ತಿಳಿಯದು. ಮನೆ ಕಟ್ಟಿಯಾದ ಮೇಲೆ ಮನೆಯನ್ನ ಬಾಡಿಗೆಗೆ ಕೊಡಲಾಯಿತು. ನಂತರ ಮಾಲಿಕನ ಸುಳಿವಿಲ್ಲ. ಮನೆಯ ಮಾಲಿಕ ಹತ್ತಿರವಿಲ್ಲದಿದ್ದರೆ ಬಾಡಿಗೆದಾರನಿಗೆ ಅದೇನೋ ಖುಷಿ. ಮಾಲಿಕ ಕಿತ್ತುಕೊಳ್ಳುವುದಾದರೂ ಏನನ್ನು?.. ಬಾಡಿಗೆಯನ್ನಷ್ಟೇ!.. ಮನೆಯಲ್ಲಿ ವಾಸಮಾಡಿದ ಕೃತಜ್ಞತೆಗಾದರೂ ಹಣ ಕೊಡಬೇಡವೆ?. ಇಲ್ಲ... ಆ ವಿನಮ್ರತೆ ಆ ಬಾಡಿಗೆದಾರರಿಗಿರಲಿಲ್ಲ. ಮನೆಯಮಾಲಿಕ ಬಂದ ಮೇಲೆ ನೋಡಿಕೊಳ್ಳೋಣ ಎಂದು ಸುಮ್ಮನಿದ್ದರು. ಆದರೆ ಎಷ್ಟುದಿನ ಕಳೆದರೂ ಮಾಲಿಕನ ಸುಳಿವಿಲ್ಲ. ಬಾಡಿಗೆದಾರರು ಚಿಂತಿಸಿದರು... ಬಹುಕಾಲ ವಾಸಿಸಿದ ಮೇಲೆ ಈ ಮನೆ ನಮ್ಮದೇ ಅಲ್ಲವೇ..?.. ಅಷ್ಟೊತ್ತಿಗಾಗಲೇ ಮಕ್ಕಳು ಮರಿಗಳು ಬೆಳೆದು ಕುಟುಂಬ ಬಹುದೊಡ್ಡದಾಗಿತ್ತು. ವಿಶಾಲವಾದ ಕೋಣೆಯ ನಡುವೆ ಗೋಡೆಗಳನ್ನು ನಿರ್ಮಿಸಿಕೊಳ್ಳಲಾಯಿತು.. ಅದಕ್ಕಾಗಿ ಮಾಲಿಕನನ್ನು ಕೇಳಬೇಕೆಂದೂ ಯಾರೂ ಯೋಚಿಸಲಿಲ್ಲ.. ಕೋಣೆಗಳನ್ನು ಮಾಡಿಕೊಂಡ ಮೇಲೆ ವೈಯಕ್ತಿಕ ಏಕಾಂತತೆ, ಗೌಪ್ಯತೆ ಬೇಡವೇ...?, ಸರಿ ಅದಕ್ಕಾಗಿ ಯಾರೂ ಮತೊಬ್ಬರ ಕೋಣೆಗೆ ಬರುವ ಹಾಗಿಲ್ಲವೆಂದು ತಮ್ಮತಮ್ಮಲ್ಲಿಯೇ ತೀರ್ಮಾನ ಮಾಡಿಕೊಂಡರು.. ಸ್ವಾರ್ಥ ಅವರನ್ನು ಎಷ್ಟು ಅತಿರೇಕಕ್ಕೆ ಕಳಿಸಿತೆಂದರೆ, ಅಪ್ಪಿತಪ್ಪಿ ಒಬ್ಬರು ಮತ್ತೊಬ್ಬರ ಕೋಣೆಗೆ ಹೋದರೆ ಬಾರೀ ಜಗಳವೆ ಆಗಿ ಮೂಗು ಮುಸುಡಿ ಕಿತ್ತು ಹೋಗುತ್ತಿತ್ತು. ಮೇಲೆ ಉರಿಯುತ್ತಿರುವ ಬಲ್ಬ್ ಗೆ ಯಾರೂ ತೆರಿಗೆ ಕಟ್ಟುತ್ತಿರಲಿಲ್ಲ.. ವಿದ್ಯುತ್ ಸರಬರಾಜು ನಿಗಮದವರು ಬಹುಶಃ ಮಾಲಿಕನ ಮಾವನೋ, ದೊಡ್ಡಪ್ಪನೋ ಇರಬೇಕು... ಆ ಕಾರಣಕ್ಕಾಗಿಯೇ ಇನ್ನೂ ಫ್ಯೂಸ್ ತೆಗೆದಿಲ್ಲ ಎಂದು ಮನೆಯವರೆಲ್ಲಾ ಭಾವಿಸುತ್ತಿದ್ದರು. ಒಮ್ಮೆ ಯಾವುದೋ ಕೋಣೆಯ ಒಬ್ಬ ಬಂದು, ತನಗೆ ಮನೆಯ ಮಾಲಿಕ ಕನಸಿನಲ್ಲಿ ಕಾಣಿಸಿಕೊಂಡ ಎಂದು ಆ ಕೋಣೆಯವರಲ್ಲಿ ಹೇಳಿದ.. "ಪರವಾಗಿಲ್ಲ ಬಿಡು... ಕನಸಲ್ಲವೇ!" ಎಂದು ಅವರೆಲ್ಲ ಸುಮ್ಮನಾದರು.. ಇನ್ನೂ ಒಂದೆರಡು ಸಲ ಕನಸಿನಲ್ಲಿ ಮಾಲಿಕ ಕಾಣಿಸಿಕೊಂಡ ಮೇಲೆ ಈತನಿಗೆ ಗಾಬರಿ ಆಯಿತು... ಆತ ಕೋಣೆಯ ಎಲ್ಲರಿಗೂ ಹೇಳಿದ " ನೋಡಿ, ಮನೆಯ ಮಾಲಿಕ ನಾವು ಬಾಡಿಗೆ ಕೊಡುತ್ತಿಲ್ಲವೆಂದು ಬಹಳ ಕುಪಿತಗೊಂಡಂತಿದೆ.. ಬಹುಶಃ ಆತ ಸದ್ಯದಲ್ಲಿಯೇ ಬರಬಹುದು. ಇಲ್ಲಿಂದ ಹೊರಡಿ ಎಂದು ಹೇಳಿದರೆ ಎಲ್ಲಿಗೆ ಹೋಗುವುದು..? ಅದಕ್ಕಾಗಿಯಾದರೂ ಅವನಿಗೆ ವಿನಮ್ರರಾಗೋಣ.".
ಕೋಣೆಯ ಕೆಲವರು ಈತನ ಮಾತಿಗೆ ತಲೆಕೆಡಿಸಿಕೊಳ್ಳಲಿಲ್ಲ. ಮತ್ತೆ ಕೆಲವರು ಆತ ಹೇಳಿದಂತೆ ಕೇಳಿದರು..
ವಿನಮ್ರತೆ ಅವರನ್ನು ಬಹಳ ಮೃದುವಾಗಿ ಮಾಡಿತು... ಕೋಣೆಯೊಳಗೊಳಗೆ ಆಗುತ್ತಿದ್ದ ವೈಮನಸ್ಯ ಹಾಗೂ ಸಣ್ಣ ಸಣ್ಣ ಜಗಳಗಳು ಬಹುಮಟ್ಟಿಗೆ ನಿಂತವು... ಆ ಕೋಣೆಯವರಿಗೆ ಅನ್ನಿಸಿತು, ಉಳಿದ ಕೋಣೆಯವರಿಗೂ ಹೀಗೆ ಇರಲು ಹೇಳಿದರೆ ಎಷ್ಟು ಚೆನ್ನ... ಆದರೆ ಅವರುಗಳ ಕೋಣೆಗೆ ಹೋಗುವ ಧೈರ್ಯ ಮಾಡುವರಾರು..? ಕೆಲವರು ಹೋಗಲು ಒಪ್ಪಿದರು... ಹೋಗಿ ಕೆಲವು ಕೋಣೆಯವರನ್ನು ಮನವೊಲಿಸಿದರು. ಇನ್ನು ಕೆಲವು ಕೋಣೆಯವರಿಂದ ಮೂಗು ಮುಸುಡಿ ಜಜ್ಜಿಸಿಕೊಂಡು ಬಂದರು. ಯಾರಲ್ಲಿ ವಿನಮ್ರತೆ ಹುಟ್ಟಿತೊ ಅವರು ಮೃದುವಾದರು.. ಆ ಮೃದುತ್ವದ ಲಾಭವನ್ನು ಇತರರು ದುರುಪಯೋಗ ಪಡಿಸಿಕೊಂಡರು. ಪೂರ್ಣ ಸಮಧಾನವಿಲ್ಲದಿದ್ದರೂ ಮೃದುತ್ವ ಅವರನ್ನು ತೃಪ್ತಿದಾಯಕವಾಗಿಯೇ ಇಟ್ಟಿತ್ತು. ಅವರೆಲ್ಲರೂ ಮನೆಯ ಮಾಲಿಕನನ್ನು ನೋಡಲು ಕಾತುರದಿಂದಿದ್ದರು. ಅಷ್ಟರಲ್ಲೇ ಮತ್ಯಾವುದೋ ಕೋಣೆಯಲ್ಲೊಬ್ಬನಿಗೂ ರಾತ್ರಿ ಕನಸಿನಲ್ಲಿ ಮನೆಯ ಮಾಲಿಕ ಕಾಣಿಸಿಕೊಂಡನು. ಆ ಕೋಣೆಯ ಜನರೂ ವಿನಮ್ರರಾದರು. ಆದರೆ ನಮ್ಮಂತೆ ಇತರರಾಗಬೇಕು ಅನ್ನುವ ಆಶಯಕ್ಕೆ ಬದಲಾಗಿ ಉಳಿದವರ ಕೋಣೆಯ ಮೇಲೂ ತಾವು ಹಿಡಿತ ಸಾಧಿಸಬೇಕೆಂದುಕೊಂಡರು. ಮನೆಯ ಮಾಲಿಕನಿಗಾಗಿ ನಮ್ಮ ಹೋರಾಟ ಎಂದರು.. ಅಲ್ಲಿ ವಿನಮ್ರತೆ ಉಳಿಯಲಿಲ್ಲ. ಬೇರೆಯವರ ಕೋಣೆಗೆ ನುಗ್ಗಿದರು. ಮನೆಯಮಾಲಿಕ ನಮಗೆ ಆದೇಶವಿತ್ತಿದ್ದಾನೆ, ನೀವು ನಮ್ಮಲ್ಲಿ ಒಂದಾಗಬೇಕು ಅಂದರು.. ಕೆಲವರು ಅವರ ಮಾತನ್ನು ಕೇಳಿ ಅವರಲ್ಲಿ ಒಂದಾದರು. ಮತ್ತೆ ಕೆಲವರು, ನಮಗೂ ಮಾಲಿಕ ಆದೇಶವಿತ್ತಿದ್ದಾನೆ. ನಿಮ್ಮೊಡನೆ ನಾವು ಸೇರುವ ಅಗತ್ಯವಿಲ್ಲ ಎಂದರು. "ನೀವು ಕಂಡಿರಬಹುದಾದ ಮಾಲಿಕ, ಕನಸಿನ ಭ್ರಮೆಯಷ್ಟೆ.. ನಾವು ಹೇಳುವ ಮಾಲಿಕನನ್ನು ಒಪ್ಪುವುದಾದರೆ ನಿಮಗಿಲ್ಲಿ ಜಾಗ.. ಇಲ್ಲ.. ಅವನು ಮನೆ ಖಾಲಿ ಮಾಡಿಸುವುದಿರಲಿ, ನಾವೇ ನಿಮ್ಮನ್ನು ಹೊರಗೋಡಿಸುತ್ತೇವೆ ಎಂದರು.
ಅವರ ಗಂಟಿಕ್ಕಿದ ಹುಬ್ಬುಗಳಿಗೆ ಕೋಣೆಯ ಜನರಲ್ಲಿ ಕೆಲವರು ಹೆದರಿ, ಅವರಂತೇ ಕೇಳಿದರು.. ಮತ್ತೆ ಕೆಲವರು ಕೇಳಲಿಲ್ಲ.. ದ್ವಂದ್ವಾಭಿಪ್ರಾಯಗಳಿಗಾಗಿ ಮತ್ತೆ ಕಿತ್ತಾಟ ಆರಂಭವಾಯಿತು. ವಿನಮ್ರತೆ ಹೊರಟು ಹೋಯಿತು. ತಾವು ಕಿತ್ತಾಡುತ್ತಿರುವುದಾದರೂ ಏತಕ್ಕೆ ಎಂಬುದನ್ನು ಅವರು ತಿಳಿಯದಾದರು. ಚಾವಣಿಯ ಬಲ್ಬ್ ಮಾತ್ರ ಉರಿಯುವುದನ್ನು ನಿಲ್ಲಿಸಲಿಲ್ಲ.
ಮಳೆಗಾಲದಲ್ಲಿ ಮಳೆ ವಿಪರೀತವಾದಾಗ ಒಂದು ಕೋಣೆ ಸೋರಲು ಶುರುವಾಯಿತು.. ಬಹಳ ಕಾಲ ಆ ಕೋಣೆಯ ಜನರೆಲ್ಲರೂ ಮಳೆಯ ಆರ್ದ್ರತೆಯನ್ನು ಸಹಿಸಿಕೊಂಡೇ ಇದ್ದರು.. ಯಾರೋ ಒಬ್ಬನಿಗೆ ತಲೆಕೆಟ್ಟಿತು.. ಮನೆಯ ಮೇಲೇರಿ ಚಾವಡಿಯನ್ನು ಸರಿಪಡಿಸಿಯೇ ಬಿಡುವೆನೆಂದು ಮನೆ ಹತ್ತಿದನು. ಮಳೆಯ ಕಾರಣ ಗೋಡೆಗಳು ಜಾರುತ್ತಿದ್ದವು. ಆದರೂ ಕೊನೆಗೂ ಕಷ್ಟಪಟ್ಟು ಹತ್ತಿಯೇ ಬಿಟ್ಟನು. ಆದರೆ ಅಲ್ಲಿ, ಯಾರೋ ಮೊದಲೆ ಹೆಂಚನ್ನು ಸರಿಪಡಿಸುತ್ತಿರುವಂತೆ ಕಂಡಿತು.. ಸುರಿಯುವ ಮಳೆಯಲ್ಲಿ ಕೊಡೆಯೂ ಇಲ್ಲದೆ ಆತ ತನ್ನ ಕೆಲಸದಲ್ಲಿ ನಿರತವಾಗಿದ್ದನು. ಒಂದೆರಡು ಬಾರಿ ಕೂಗಿದರು ತಿರುಗಿ ನೋಡಲಿಲ್ಲ... ಆಮೇಲೆ ಈತ, ಅವನ ಹತ್ತಿರವೇ ಹೋಗಿ "ನಿನ್ನ ಕೆಲಸಕ್ಕೆ ನನ್ನಿಂದೇನಾದರು ಸಹಾಯವಾಗ ಬಹುದೇ?" ಎಂದು ಕೇಳಿದನು... ಹೆಂಚನ್ನು ಸರಿಪಡಿಸುತ್ತಿದ್ದವನು ಇವನ ಕೈಗೆ ಮುರಿದು ಹೋದ ಒಂದು ಹೆಂಚನ್ನು ಕೊಟ್ಟು "ಇದನ್ನು ಸ್ವಲ್ಪ ಇಟ್ಟಿಕೊಂಡಿರು... ಹೊಸದೊಂದು ಹೆಂಚನ್ನು ತರುವೆನೆಂದು ಹೇಳಿ ಎತ್ತಲೋ ಹೋಗಿ ಸ್ವಲ್ಪ ಹೊತ್ತಿನ ನಂತರ ಮತ್ತೆ ಬಂದನು.. ಇಬ್ಬರೂ ಸೇರಿ ಸೋರುತ್ತಿರುವ ಮೇಲ್ಚಾವಣಿಯನ್ನು ಸರಿ ಮಾಡಲು ಪ್ರಯತ್ನಿಸಿದರು. ಈತ ಕೇಳಿದ " ಅದು ಸರಿ, ನೀನ್ಯಾಕಯ್ಯ ನಮ್ಮ ಕೋಣೆ ಸರಿ ಮಾಡುತ್ತಿದ್ದೀಯಾ... ?"
ಆ ವ್ಯಕ್ತಿ ಹೇಳಿದ "ಕೋಣೆ ನಿನ್ನದಿರಬಹುದು... ಮನೆ ನನ್ನದಲ್ಲವೇನಪ್ಪಾ...?"
"ಓಹ್ .. ಅಂದರೆ ಈ ಮನೆಯ ಮಾಲಿಕ ನೀನೋ...?". ಎಂದು ಆತ ಉದ್ಗಾರ ತೆಗೆದ...
"ಹೌದಪ್ಪ....."
"ಮತ್ತೇಕಯ್ಯ , ಬಾಡಿಗೆ ವಸೂಲಿಗೆ ಒಮ್ಮೆಯೂ ಬರಲಿಲ್ಲ... ದುಡ್ಡು ಹೆಚ್ಚಾಗಿರುವುದೇ ಅಥವಾ ಬೆಲೆ ತಿಳಿದಿಲ್ಲವೇ?.. ಒಮ್ಮೆಯಾದರೂ ಬಾಡಿಗೆ ಒಯ್ಯಲಿಲ್ಲವಲ್ಲಯ್ಯ.!!. ಬೇಡ!.. ನಿನ್ನ ಮನೆಯನ್ನು ನೋಡುವುದಕ್ಕಾದರೂ ಬರಬಾರದೇ..?"
ಆ ವ್ಯಕ್ತಿ ನಗುತ್ತಾ ಹೇಳಿದ "ನನಗಿರುವುದು ಇದೊಂದೇ ಮನೆಯಲ್ಲಪ್ಪ.......".
Comments
ಉ: ಕಿರುಗತೆ : ಭಂಡ ಬಾಡಿಗೆದಾರರು.
ರೂಪಕ ಅರ್ಥವತ್ತಾಗಿದೆ. ಅಭಿನಂದನೆಗಳು.