ಕಿರುಗತೆ: ಶೋಕ ಮತ್ತು ನಾಲ್ಕು ಮರಿಕುರಿಗಳು.
ಅಧ್ಯಾಯ ೧:
ಶೇವ್ ಮಾಡದೇ ಬಿಟ್ಟ ಗಡ್ಡದ, ಬತ್ತಿದ ಮೊಗದ ಮೂಗಿಗೆ ಪಾರದರ್ಶಕವಾದ ಎರಡು ಸಣ್ಣ ಪೈಪುಗಳನ್ನು ಜೋಡಿಸಲಾಗಿತ್ತು. ಪಕ್ಕದಲ್ಲೊಂದು ದೊಡ್ಡ, ಬಣ್ಣ ಕಳೆದು ಕೊಂಡ ಆಕ್ಸಿಜನ್ ಸಿಲಿಂಡರ್, ಹಾಗೂ ಅದಕ್ಕೆ ಹೊಂದಿಕೊಂಡಂತೆ, ತುರ್ತುಪರಿಸ್ಥಿತಿಗಾಗಿ ಆಮ್ಲಜನಕದ ಮಾಸ್ಕ್ ಒಂದನ್ನು ಗೋಡೆಯ ಮೊಳೆಗೆ ನೇತು ಹಾಕಲಾಗಿತ್ತು. ಕಣ್ಣು ಬಿಡಲು ಬಲವಿದ್ದರೂ, ತನ್ನ ಸುತ್ತ ಇರುವವರ ಅಳುಮೊಗಗಳನ್ನು ನೋಡಲಾಗದೇ, ಕಣ್ಣುಮುಚ್ಚಿ ನಿದ್ರಿಸುತ್ತಿರುವಂತೆ ನಟಿಸುತ್ತ ತಿಮ್ಮಯ್ಯ ಮೇಷ್ಟರ ಮನಸ್ಸು, ತನ್ನ ಗತ ಭೂತವನ್ನು ನೆನೆಯುತಿತ್ತು. ಗತಿಸಿದ ಕಾಲದ ನೆನಹುಗಳು ಇಚ್ಚೆಯಿಲ್ಲದಿದ್ದರೂ, ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು, ಮನಸ್ಸಿನ ದೂರದರ್ಶನದ ನೇರಪ್ರಸಾರದಲ್ಲಿ ಭಿತ್ತರಗೊಳ್ಳುತ್ತಿದ್ದವು. ತಿಮ್ಮಯ್ಯ ಮೇಷ್ಟರ ಬಾಲ್ಯದ ದಿನಗಳು, ಹಳ್ಳಿಯ ಶಾಲೆಯಲ್ಲಿ ಓದಿ, ಮೆಟ್ರಿಕ್ ಪರೀಕ್ಷೆಯಲ್ಲಿ ಶಾಲೆಗೇ ಅತ್ಯಧಿಕ ಅಂಕಗಳಿಸಿ, ನೆಚ್ಚಿನ ಅಧ್ಯಾಪಕರಾದ ಶಾಮಣ್ಣನಿಂದ ಬಾಯ್ತುಂಬಾ ಹೊಗಳಿಸಿಕೊಂಡಿದ್ದು, ನಂತರ ಸಿಟಿಯ ಕಾಲೇಜಿನಲ್ಲಿ, ಪೇಟೆ ಜನರ ಮಧ್ಯೆ ತಾನು ಅಳುಕಿನ ಸ್ವಭಾವವನ್ನು ಬೆಳಸಿಕೊಂಡಿದ್ದು, ಕಷ್ಟಪಟ್ಟು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಶಾಮಣ್ಣನವರ ಆದರ್ಶವನ್ನು ತನ್ಮೂಲಕ ತೋರಿಸುವ ಅಭಿಲಾಷೆ ಹೊತ್ತಿದ್ದು, ಅದಕ್ಕಾಗಿಯೆ ಯಾವ ದುರಾಭ್ಯಾಸಕ್ಕೂ ಒಳಗಾಗದೇ, ತಾನಾಯಿತು ತನ್ನಪಾಡಾಯಿತೆಂಬಂತೆ ಓದಿ, ಪದವಿಪೂರ್ವ ಶಿಕ್ಷಣದಲ್ಲಿ ತನ್ನ ತರಗತಿಗೆ, ಎರಡನೇ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯಾಗಿ, ತನ್ನ ಸಹಪಾಠಿಗಳಿಂದ 'ಮಳ್ಳ' ಎಂಬ ಅಡ್ಡೆಸರನ್ನು ಹೊತ್ತಿದ್ದು, ಇವೆಲ್ಲವೂ ಮಿಂಚಿನಂತೆ ತಿಮ್ಮಯ್ಯನ ಮನಸ್ಸಿನಲ್ಲಿ ಬಂದು ಹೋದವು. ನಂತರ ಶಿಕ್ಷಕ ಹುದ್ದೆಗಾಗಿ ಟೀಸಿಹೆಚ್ ಮಾಡಿಕೊಂಡು ಸರ್ಕಾರೀ ಹುದ್ದೆ ಗಿಟ್ಟಿಸಿಕೊಂಡಿದ್ದು. ಊರಿನ ಪಟೇಲರ ಸಹಾಯದಿಂದ, ತನ್ನ ಹಳ್ಳಿಗೇ ವರ್ಗ ಮಾಡಿಸಿಕೊಂಡು ತನ್ನ ಗುರಿ ಸಾಧಿಸಿದೆನೆಂಬ ಛಲವನ್ನು ಮೆರೆದದ್ದು, ಮದುವೆಗಾಗಿ ಹಳ್ಳಿಹಳ್ಳಿಗಳನ್ನು ಮನೆ ಮನೆ ಯನ್ನು ಸುತ್ತಿ ತನ್ನ ಮನದನ್ನೆಯನ್ನು ಆರಿಸಿಕೊಂಡಿದ್ದು. ನಂತರ ಮುದ್ದಿನ ಮಡದಿಯ ಓಲೈಕೆಗಾಗಿ ಸಿಟಿಗೆ ವರ್ಗಾವಣೆ ಮಾಡಿಸಿಕೊಂಡು ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹಾರುವ ಕನಸು ಕಂಡಿದ್ದು. ಆ ಕನಸು ನನಸಾಗುವ ಮುನ್ನವೇ ತಾನು ಇಲ್ಲಿ ಆಸ್ಪತ್ರೆಯ ಪೈಪುಗಳ ಮಧ್ಯೆ ಜೀವಿಸಬೇಕಾದ ಪರಿಸ್ಥಿತಿ ಬಂದಿದ್ದು, ಇವೆಲ್ಲವೂ ತಿಮ್ಮಯ್ಯನ ಕಣ್ಣಲ್ಲಿ ಹನಿಯೊಂದನ್ನು ಇಳಿಸುವ ಪ್ರಯತ್ನದಲ್ಲಿದ್ದವು. ಆದರೆ ಸೊರಗಿ ಕೃಶವಾದ ಕಣ್ಣುಗಳಲ್ಲಿ ಕಣ್ಣೀರಿಗೂ ಬರವಿತ್ತು. ಮಡದಿ ಮಕ್ಕಳನ್ನು ಬಿಟ್ಟು ಹೇಗೆ ಹೋಗುವುದು?. ಹಾಗೆಂದು ತಾನು ಹೋಗುವಲ್ಲಿಗೆ ಅವರನ್ನು ಕರೆದೊಯ್ಯುವ ಹಾಗಿಲ್ಲ. ತಾನು ಅವರೊಂದಿಗೆ ಇರುವ ಹಾಗೂ ಇಲ್ಲವಲ್ಲ. ತನಗೇ ಈ ದುಸ್ಥಿತಿ ಬರಬೇಕೆ?.. ಎಷ್ಟೋ ದುರಾಭ್ಯಾಸವಿರುವ ಜನರು, ಬಡ್ಡಿಗೆ ದುಡ್ಡು ಬಿಟ್ಟು ತಿನ್ನುವ ಜನರು ಆರಾಮವಾಗಿಯೇ ಜೀವಿಸುತ್ತಿದ್ದಾರಲ್ಲ, ತಾನಾದರೂ ಯಾರಿಗೂ ಏನನ್ನೂ ಬಗೆದಿಲ್ಲ. ತನಗೇ ಈ ದುಸ್ಥಿತಿ ಒದಗಬೇಕೆ?. ಆದರೆ ಇದು ಜಿಜ್ಞಾಸೆಗೆ ತೊಡಗುವ ಸಮಯವಲ್ಲ, ಸಾವು ಇನ್ನೊಂದು ಗಳಿಗೆಯಲ್ಲಾದರೂ ಬರಬಹುದು ಇಲ್ಲಾ ಎರಡು ಗಳಿಗೆಯಲ್ಲಾದರೂ ಬರಬಹುದು.. ಸಾವೆಂಬ ಅತಿಥಿ ಬರುತ್ತೇನೆಂದರೆ ಆತನನ್ನು ಸ್ವಾಗತಿಸಲು ಸಿದ್ಧರಾಗಿಯೇ ಇರಬೇಕು. ಬಂದು ಕೂತು ಕಾಫಿ ಕುಡಿದು ಸುಮ್ಮನೆ ಹೋಗುವ ವ್ಯಕ್ತಿ ಅವನಲ್ಲ. ಅವನನ್ನು ಸ್ವಾಗತಿಸುವ ಹೊತ್ತಿಗೇ ಸ್ವಾಗತಿಸುವವರನ್ನು ಕೈಹಿಡಿದು ತನ್ನ ಜೊತೆ ಕರೆದುಕೊಂಡು ಹೋಗುವ ಅಭ್ಯಾಗತ ಆತ. ಕೊನೆ ಗಳಿಗೆಯಲ್ಲಿ ತಾನು ಯೋಚಿಸಬಹುದಂತದ್ದಾದರೂ ಏನನ್ನು? ತಿಮ್ಮಯ ಮೇಷ್ಟರಿಗೆ ತಿಳಿಯದಾಗಿತ್ತು. ಆ ಸಮಯ ಹಗಲುಗನಸುಗಳಿಗೆ ಪ್ರಶಸ್ತವಲ್ಲ. ತನ್ನ ಹೆಂಡತಿ ಮಕ್ಕಳನ್ನು ನೆನೆಯೋಣವೆಂದರೆ ನೆನೆದು ಪ್ರಯೋಜನವಿಲ್ಲ. ಅದರಿಂದ ಹೃದಯ ಭಾರವಾಗಿ ಸಾವು ಕೊಂಚ ಮುನ್ನವೇ ಬಂದು ಬಾಗಿಲು ತಟ್ಟಿದರೆ ಕಷ್ಟ!. ಮನಸ್ಸನ್ನು ನಿರ್ವಿಕಾರಗೊಳಿಸಿ, ವಿಚಾರಗಳನ್ನು ನಾಶಮಾಡೋಣವೆಂದರೆ ತಿಮ್ಮಯ ಮಹಾಯೋಗಿಯೇನಲ್ಲ. ಜೊತೆಗೆ ಮನಸ್ಸನ್ನು ತಿಳಿಯಾಗಿ ಇರಿಸಲು ಬಿಡದ ಕಾಯಿಲೆಯ ಬಾಧೆಕೂಡ!. ಸ್ವಲ್ಪ ಹೊತ್ತು ಹೀಗೆಯೆ ಗೊಣಗಾಡಿಕೊಂಡು ಸಾವನ್ನು ಎದುರು ನೋಡುತ್ತಿದ್ದ ತಿಮ್ಮಯ್ಯನಿಗೆ ಉಸಿರು ಬಿಗಿಯಲಾರಂಭಿಸಿತು, ವಿಫುಲವಾಗಿ ಆಮ್ಲಜನಕದ ಸರಬರಾಜಿದ್ದರೂ ಅದನ್ನು ಶ್ವಾಸದೊಳಗೆ ಸೇರಿಸಲಾರದಷ್ಟು ಚೈತನ್ಯ ಕಳೆಗುಂದಿತು. ಕನ್ನಡದ ಅಧ್ಯಾಪಕರಾಗಿದ್ದ ತಿಮ್ಮಯ್ಯನಿಗೆ ಕನ್ನಡವೆಂದರೆ ಅಚ್ಚು ಮೆಚ್ಚು. ಜನ್ಮಜನ್ಮಕ್ಕೂ ತಾನು ಕನ್ನಡದವನೇ ಆಗಬೇಕೆಂಬ ಒಣ ಅಭಿಮಾನವೂ ಕೂಡ. ಆದರೆ ತನ್ನ ಕೊನೆಯ ಉಚ್ವಾಸದ ವೇಳೆಗೆ ತನ್ನ ಕಣ್ಣೆದುರಿನಲ್ಲಿ ಕಂಡದ್ದು ಮೂವರು ಮಲೆಯಾಳಿ ನರ್ಸ್ ಗಳು!. ಕೇಳಿದ್ದು ಅವರ ಮೂಗಿನಲ್ಲಿ ಮಾತನಾಡಿದ ಮಲೆಯಾಳಿ ಶಬ್ದಗಳು!.
ಅಧ್ಯಾಯ ೨:
ಅಲ್ಲಿದ್ದ ಕೆಲವು ಉತ್ಸಾಹಿ ಸಂಬಂಧಿಕರು, ತಿಮ್ಮಯ್ಯನ ಸಾವಿನ ಸುದ್ಧಿ ಬರುತ್ತಲೇ ಊರಿನ ಜನರಿಗೆಲ್ಲಾ ತಿಳಿಸುವ ಮೊಟ್ಟಮೊದಲ ವ್ಯಕ್ತಿ ತಾವಾಗಬೇಕೆಂಬ ಆಸೆ ಹೊತ್ತು ತಮ್ಮ ಮೊಬೈಲ್ನೊಡನೆ ಬಿಸಿಯಾಗಿದ್ದರು. ಮನೆಯ ಮುಂದೆ ತಿಮ್ಮಯ್ಯನವರ ಲೌಕಿಕ ಶವ ಬಂದಿಳಿಯುವುದಕ್ಕೆ ಕನಿಷ್ಟ ನಾಲ್ಕು ಗಂಟೆಗಳಾದರೂ ಬೇಕು. ಬೆಂಗಳೂರಿನಿಂದ ಬರಬೇಕಲ್ಲವೇ!. ಶವದ ಮುಂದೆ ಅಳಲು ಶಕ್ತಿ ಕೊರತೆಯಾಗಬಹುದೆಂದು ಗ್ರಹಿಸಿ, ಸಂಬಂಧಿ ಹೆಂಗಸರು ಆಂಬುಲೆನ್ಸ್ ಬರುವ ಮುನ್ನವೆ ತಿಂಡಿ ಕಾಫಿಗಳನ್ನು ಸಿದ್ಧಪಡಿಸಿಕೊಂಡರು. ಸಾವಿನ ಸುದ್ಧಿ ಕೇಳುತ್ತಲೇ ರೋದನವು ಮುಗಿಲು ಮುಟ್ಟುವಂತಾಗಿತ್ತು. ಒಂಡು ಕಡೆ ಹೆಂಗಸರು ಅಳುವಲ್ಲಿ ಮಗ್ನವಾಗಿದ್ದರೆ ಮತ್ತೊಂದು ಕಡೆ ಸಮಾಧಾನಮಾಡುವಲ್ಲಿ ಮಗ್ನವಾಗಿದ್ದರು. ಇವರಿಗಿಂತಲೂ ಸ್ವಲ್ಪ ಮೇಲ್ಮಟ್ಟದ ಬುದ್ಧಿಯುಳ್ಳ ಹೆಂಗಸರು ಅಡಿಗೆ ಮನೆಯಲ್ಲಿ ತಿಂಡಿ ಕಾಫಿ ತಯಾರಿಸುವಲ್ಲಿ ಬಿಸಿಯಾಗಿದ್ದರು. ಸಾವಿನ ದಿನ, ಸತ್ತವರ ಮನೆಯವರಿಗೆ ಶೋಕ ತರುವಂತದ್ದಾದರೂ, ಸುತ್ತಮುತ್ತಲಿನ ಇತರ ಜನರಿಗೆ ಅದೊಂದು ಹಬ್ಬ. ಗುಂಪುಗೂಡಿ ಅವರಿವರ ವಿಷಯಗಳನ್ನು ಕುರಿತು ಚರ್ಚಿಸುವುದರಲ್ಲಿ ಮನುಷ್ಯಜೀವಿಗೆ ಅದೇನೋ ಅತಿಶಯವಾದ ಆನಂದ. ಕೊನೆಗೂ ಅತ್ತು ಅತ್ತೂ ಬೆಳಗಿನ ತಿಂಡಿ ಕರಗುವ ಹೊತ್ತಿಗೆ ಎಲ್ಲಾ ಹೆಂಗಸರೂ ಸುಮ್ಮನಾದರು. ಅಷ್ಟರಲ್ಲೇ ಕುಡಿದು ತೂರಾಡುತ್ತಾ ತಮ್ಮಟೆ ವಾದ್ಯದವರು ತಮ್ಮ ಪೀಪಿ ಊದಲು ಶುರುಮಾಡಿದ್ದೇ ತಡ!, ಹೆಂಗಸರಲ್ಲಿ ಮತ್ತೆ ನಾದ ಶಕ್ತಿ ಸಂಚಯವಾಗಿ ಮತ್ತೂ ಜೋರಾಗಿ ಅಳಲು ಆರಂಭಿಸಿದರು. "ಸ್ವಲ್ಪ ಹೊತ್ತು, ಸುಮ್ನಿರ್ರಪ್ಪಾ.. ನಿಮ್ಮ ದುಡ್ಡು ಕೊಡುತ್ತೇವೆ. ಸದ್ಯಕ್ಕೆ ನಿಮ್ಮ ಪೀಪಿಗೀಪಿ ಊದಬೇಡಿ" ಅಂತ ಯಾರೋ ತಮ್ಮಟೆಯವರಿಗೆ ಹೇಳಿ ಅವರನ್ನು ಸುಮ್ಮನಾಗಿಸಿದರು. ಮತ್ತೆ ಬಿದಿರು ಕಟ್ಟಿ ಅದರ ಮೇಲೆ ತಿಮ್ಮಯ್ಯನವರ ಲೌಕಿಕ ಶರೀರವನ್ನು ಇಟ್ಟು. ಚೆನ್ನಾಗಿ ಮೂಟೆ ಯ ದಾರದಿಂದ ಬಿಗಿದು ಅಲುಗಾಡದಂತೆ ಮಾಡಿ, ಚಟ್ಟಕಟ್ಟುವುದರಲ್ಲಿ ತಮಗೆ ಎಲ್ಲಿಲ್ಲದ ಪರಿಣತಿ ಎಂದು ಕೆಲವರು ತೋರಿಸಿಕೊಂಡರು. ಅವರಿಗೆ ಸ್ವಲ್ಪ ಮಟ್ಟಿಗಿನ ಹೊಗಳಿಕೆಯೂ ಪ್ರದಾನವಾಯಿತು. ಸುಖದುಃಖಗಳಿಗೆ ಅತೀತವಾಗಿ ಬಿದಿರಿನ ಮೇಲೆ ತಿಮ್ಮಯ್ಯ ಮಲಗಿದ್ದರು. ತನ್ನ ಶರೀರಕ್ಕೆ ಗಂಟೆಗಟ್ಟಲೆ ಮಾಡಿದ ಅಂತಿಮ ಶೃಂಗಾರ ಬೇಕಿತ್ತೇ? ಎನ್ನುವಂತೆ, ಸುತ್ತುವರಿದಿದ್ದ ಜನರನ್ನು ಮೂದಲಿಸುತ್ತಿರುವಂತೆ, ತಿಮ್ಮಯ್ಯನವರ ಬಿಗಿದ ತುಟಿ ಕಂಡುಬಂತು. ಸುಮಾರು ಇಪ್ಪತ್ತು ಸಾವಿರಗಳ ಖರ್ಚಿನಲ್ಲಿ ಅಂತಿಮ ಯಾತ್ರೆಯೂ ಆಯಿತು. ತಿಮ್ಮಯ್ಯ ಇಷ್ಟು ದುಬಾರಿ ಪ್ರಯಾಣ ಮಾಡಿದ್ದು ಇದೇ ಮೊದಲ ಸಲ. ಆದರೆ ಇದು ಪ್ರಯಾಣದ ಖರ್ಚಲ್ಲ. ತಿಮ್ಮಯ್ಯನವರನ್ನು ಬೀಳ್ಕೊಡಲು ಮಾಡಿದ ಖರ್ಚು. ಸಾವು, ಮನುಷ್ಯ ಜೀವನದ ಅತೀ ಪ್ರಮುಖವಾದ ಪ್ರಯಾಣವಾದರೂ, ವಿಧಿ, ಬಿಡಿಗಾಸನ್ನೂ ತೆಗೆದುಕೊಳ್ಳದೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು ಅದರ ಹೆಗ್ಗಳಿಕೆ.
ಅಧ್ಯಾಯ ೩:
ವ್ಯಕ್ತಿಯೇ ಅಳಿದ ಮೇಲೆ, ಉಳಿಯಬಹುದಾದ ಆಸೆಯಾದರೂ ಏನು?. ಆದರೂ ಸತ್ತವರ ಹೆಸರಿನಲ್ಲಿ ಬಾಯಿ ಚಪ್ಪರಿಸುವ ಸಂಪ್ರದಾಯ ಅಷ್ಟು ಸುಲಭವಾಗಿ ಬಿಟ್ಟು ಹೋಗಲಾರದು. ಮೂರನೇ ದಿನದ ತಿಥಿ, ಆರನೇ ದಿನದ್ದು, ಹನ್ನೆರಡನೆಯದ್ದು... ತಿಂಗಳದ್ದು ಹೀಗೇ ಸಾಗುತ್ತಾ ಹೋಗುತ್ತದೆ.. ತಿಮ್ಮಯ್ಯನ ಬಾಂಧವರ ಸಂಪ್ರದಾಯವೂ ಇದಕ್ಕೆ ವ್ಯತಿರಿಕ್ತವಾಗೇನಿರಲಿಲ್ಲ. ಸತ್ತ ಮೂರನೇ ದಿನದಿಂದಲೇ ಮೇಕೆ ಹುಡುಕುವ ಕಾರ್ಯ ಬಹು ಉತ್ಸಾಹದಿಂದ ನಡೆದಿತ್ತು. "ಗೌಡ್ನಳ್ಳೀಲ್ ಒಳ್ಳೆ ಎಳೆ ಮರಿಗಳ್ ಸಿಕ್ತಾವೆ... ಸಂಜೆ ಓಗ್ ನೋಡ್ಕಂಡ್ ಬರಣ.." ಎಂದು ಚಂದ್ರಪ್ಪ ಹೇಳಿದರು. "ಅವು, ಮ್ಯಾಕೆ ಮಾಂಸ, ಸರಿ ಓಗಲ್ಲಾ!... ಕುರುಬ್ರಳ್ಳಿಲ್ ನಂಗೊಬ್ರು ಗೊತ್ತಿದ್ದಾರೆ.. ಫೋನ್ ಮಾಡ್ ಕೇಳ್ತೀನ್ ತಡೀರಿ" ಅಂದ ನಾಗ್ರಾಜಣ್ಣ ಹೇಳಿದ್ರು. ಇವರಿಬ್ಬರೇ ಅಲ್ಲದೆ ಇನ್ನೂ ಒಂದು ನಾಲ್ಕೈದು ಜನ ಬಿಟ್ಟಿ ಸಜ್ಜೆಶನ್ ಕೊಟ್ಟು ಸೈ ಅಂತಾ ಅನ್ನಿಸ್ಕೊಂಡ್ರು.. ಆದರೂ ಕುರಿಯನ್ನು ದುಡ್ಡುಕೊಟ್ಟು ತರೋ ಕೆಲಸ ನಡೆದಿದ್ದು ಹನ್ನೆರಡನೇ ದಿನದ ತಿಥಿಯ ಎರಡುದಿನಕ್ಕೆ ಮೊದಲಷ್ಟೇ.. ಸಾಮಾನ್ಯವಾಗಿ ಕುರಿತರುವ ಕೆಲಸವನ್ನು ಸತ್ತವರ ಮನೆಯವರಿಗೆ ವಹಿಸುವ ಪದ್ಧತಿ ಇಲ್ಲ. ಏಕೆಂದರೆ ಶೋಕದ ಹೆಸರಲ್ಲಿ ರುಚಿ ಮರೆಯಬಹುದೆಂಬ ತಪ್ಪು ಅಭಿಪ್ರಾಯ ಬಂಧುಗಳದ್ದು. ಹಾಗಾಗಿ ಸತ್ತವರ ಕುಟುಂಬದವರಲ್ಲದ ಆದರೂ ಹತ್ತಿರದ ಸಂಬಂಧಿಗಳೇ ಈ ಕೆಲಸವನ್ನು ಅತಿ ನಾಜೋಕಾಗಿ ಮಾಡಿ ಮುಗಿಸಿ ತಮ್ಮ ಬಾಯಿಯ ತೀಟೆ ತೀರಿಸಿಕೊಳ್ಳುವರು. ಹನ್ನೆರಡನೆಯ ದಿನದ ತಿಥಿಗೆ ಎಲ್ಲಿಲ್ಲದ ಸಂಭ್ರಮ ಬೆಳಗ್ಗೆ ಆರರಿಂದಲೇ ನಡೆದಿತ್ತು. ತುಂಬಾ ಅಚ್ಚುಕಟ್ಟಾಗಿ ಅಡಿಗೆ ಕೆಲಸಮಾಡುವ ಭೀಮಣ್ಣನನ್ನು ಈ ಕಾರ್ಯಕ್ಕೆ ಕರೆತರಲಾಯಿತು. "ನೋಡಪ್ಪಾ, ನಮ್ಗೆ ಅಡ್ಗೇ ಅಂದ್ರೆ ಅಳ್ಳಿ ಸೈಡ್ ಮಾಡೋ ಅಡ್ಗೆ ಇದ್ದಂಗ್ ಇರ್ಬೇಕು.. ಸಿಟಿ ತರುದ್ ಮಾಡ್ಬ್ಯಡ.." ಅಂತ ರಾಮಣ್ಣ ಅಡುಗೆ ಭಟ್ಟನಿಗೆ ಹೇಳಿದ್ರು. "ಊಞ್.. ಮಟನ್ ಅಡ್ಗೆ ಎಲ್ಲಾ ಅಳ್ಳಿ ಕಡೇನೇ ಚೆಂದ.. ಅದೇ ಟೇಸ್ಟ್! .." ಎಂದು ಮಾತು ಸೇರಿಸಿದ ಅಭ್ಯಾಗತರಿಗೆ "ಊಞ್.. ಈ ಭಟ್ರು ಮಾಡದ್ ನೋಡಿದೀನಿ.. ಅದ್ಕೆ ಇವ್ರ್ಗೇ ಹೇಳಿದ್ದು.. ಸಿಟಿ ಕಡೆ ಮಾಡ್ದಂಗ್ ಮಾಡಿರ್ ಟೇಸ್ಟ್ ಬರಲ್ಲಾ. ಅಳ್ಳೀಕಡೇ ಅದೇನಾಕ್ ಮಾಡುದ್ರು ಸಕತ್ತಾಗೆ ಇರತ್ತೆ... ಈ ಕಡೆ ಏನೇನೋ ಆಕ್ಕಂಡ್ ಅಡ್ಗೆ ಆಳ್ಮಾಡ್ತಾರೆ ಭಟ್ರುಗುಳು" ಅಂತ ತನ್ನ ಆಯ್ಕೆಯ ಜಾಣ್ಮೆಯನ್ನು ತಾನೇ ಮೆಚ್ಚಿಕೊಂಡು ರಾಮಣ್ಣ ಹೇಳಿದ್ರು. ಸಿಟಿಯವರಿಗೆ ಹಳ್ಳಿ ಬಾಡೂಟದ ರುಚಿ ಸಿಕ್ಕೋದು ಇಂತಹ ತಿಥಿಗಳಲ್ಲಿಯೇ. ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿಯನ್ನು ಮಾತ್ರ ಅಚ್ಚುಕಟ್ಟಾಗಿ ನಿರ್ವಹಿಸಲೇಬೇಕು. ಕೆಲವರು ತಿಮ್ಮಯ್ಯನವರ ನೀಟಾದ ಒಂದು ಫೋಟೋಗೆ ಅಲಂಕಾರ ಮಾಡುವಲ್ಲಿ ಬಿಝಿಯಾಗಿದ್ದರು. ಫೋಟೋದ ಮುಂದೆ ಕುಡಿಯುವ ರಮ್ಮೂ ಸೇರಿದಂತೆ ಬಹುವಿಧವಾದ ತಿಂಡಿ ತಿನಿಸುಗಳನ್ನು ಇಡಲಾಗಿತ್ತು. ತಿಮ್ಮಯ್ಯ ತನ್ನ ಜೀವಿತಾವಧಿಯಲ್ಲಿ ಒಂದು ತೊಟ್ಟು ರಮ್ಮನ್ನೂ ಗಂಟಲಿಗೆ ಇಳಿಸಿದವರಲ್ಲ. ಬಾಡು ಚೆನ್ನಾಗಿ ಬೆಂದ ಕೂಡಲೆ ಚಿತ್ರಪಟಕ್ಕೆ ಎಡೆ ಇಡುವ ಸಿದ್ಧತೆಯೂ ನಡೆಯಿತು. ಸತ್ತಮೇಲೂ ನನ್ನನ್ನ ನನ್ನ ಪಾಡಿಗೆ ಇರೋದಕ್ಕೆ ಬಿಡಲ್ವಲ್ಲಪ್ಪಾ ಈ ಜನ ಅನ್ನೋ ರೀತಿಯಲ್ಲಿ ತಿಮ್ಮಯ್ಯ ಫೋಟೋದಲ್ಲಿ ಅಣುಕಿಸುವ ನಗೆ ಹೊತ್ತಿದ್ದರು. "ಊಟಕ್ಕೆ ಅವ್ರೂ ಇವ್ರೂ ಬರೋರ್ ಇರ್ತಾರೆ.. ಆಫಿಸ್ನಿಂದ ಬರೋರು, ಸ್ಕೂಲ್ನಿಂದ ಬರೋರು ತುಂಬಾ ಜನ.. ಊಟಕ್ಕೆ ಇಡೋದನ್ನ ತಡ ಮಾಡೋದು ಬೇಡ" ಎಂದು ತಮ್ಮ ಹಸಿವನ್ನು ಬೇರೆಯವರ ಮೇಲೆ ಹೋರಿಸಿ ಯಾರೋ ಸಲಹೆ ಕೊಟ್ಟರು. ಊಟಕ್ಕೆ ಬರೋಬ್ಬರಿ ಕಡಿದದ್ದು ನಾಲ್ಕು ಮರಿ ಕುರಿಗಳು. ಮನುಷ್ಯನ ಸಾವಿಗೇ ಏಕೆ ಅಂತಹ ಮರ್ಯಾದೆಯೋ ಗೊತ್ತಿಲ್ಲ. ಒಂದು ವೇಳೆ ಕುರಿಗಳ ಸಾವಿಗೂ ಅಷ್ಟೇ ಬೆಲೆ ಕೊಟ್ಟಿದ್ದರೆ!!, ಒಬ್ಬ ಮನುಷ್ಯ ಸತ್ತಾಗ ನಾಲ್ಕು ಕುರಿ ಕಡಿಯಬಹುದಾದರೆ, ನಾಲ್ಕು ಕುರಿ ಸತ್ತಾಗ ಹದಿನಾರು ಮನುಷ್ಯರನ್ನು ಕಡಿಯಬೇಕಾಗಿತ್ತು. ಆ ಹದಿನಾರು ಜನರ ತಿಥಿಗೆ ೬೪ ಕುರಿಗಳನ್ನು ಕಡಿಯಬೇಕಾಗಿತ್ತು.. ಗುಣೋತ್ತರ ಶ್ರೇಣಿಯ ಮೂಲಕ ಲೆಕ್ಕ ಹಾಕಬಹುದಾದರೆ ಕೇವಲ ೧೬ದಿನಗಳಲ್ಲಿ ಇಡೀ ಭಾರತದ ಜನಸಂಖ್ಯೆ ಸೊನ್ನೆಯಾಗಿ, ಇನ್ನೂ ನಲವತ್ತು ಕೋಟಿಜನರನ್ನು ಈ ಕಾರ್ಯಕ್ಕೆ ಪಾಕಿಸ್ಥಾನದಿಂದ ಬಳಸಿಕೊಳ್ಳಬಹುದಾಗಿತ್ತು. ಆದರೆ ಮನುಷ್ಯನ ಹೊರತಾಗಿ ಬೇರಾವ ಜೀವಿಗಳಿಗೂ ಈ ದುರಾಚರಣೆಯನ್ನು ಭಗವಂತ ಕಲಿಸಿಲ್ಲದ ಕಾರಣ ಜನಸಂಖ್ಯಾ ನಿಯಂತ್ರಣಕ್ಕೆ ಈ ಮಾರ್ಗ ಹುಡುಕೋದು ಸಮಂಜಸವಲ್ಲ. ಇಷ್ಟರ ಮೇಲಾಗಿ, ಬದುಕಿ ತಿಮ್ಮಯ್ಯ ಮಾಡಿದ್ದು, ಆ ನಾಲ್ಕು ಕುರಿಗಳು ಮಾಡಿದ್ದು ಏನೂ ಇಲ್ಲ. ಆದರೆ ಸಾವಿನ ಗಳಿಗೆಯಲ್ಲಿ ಅನುಭವಿಸಿದ ನೋವು ಒಂದೇ; "ಇನ್ನೂ ಉಳಿಯ ಬೇಕು". ಸಮಾರಾಧನೆಯಲ್ಲಿ ಬಡಿಸುವವರನ್ನು, ಕುಳಿತು ತಿನ್ನುವವರನ್ನು ನೋಡುವುದೇ ಎನೋ ಖುಷಿ. ಹಸಿದಾಗಲೇ ಮನುಷ್ಯನ ನಿಜವಾದ ಸ್ವರೂಪ ತಿಳಿಯುವುದಲ್ಲವೇ. ಕೊನೆಯ ಹಂತಿಯಲ್ಲಿ ತುಂಬಾ ಹಸಿದಿದ್ದ ಸ್ವಕುಟುಂಬದವರು ಊಟಕ್ಕೆ ಕುಳಿತಿದ್ದರು, ಪಕ್ಕದಲ್ಲಿಯೇ ತಿಮ್ಮಯ್ಯನವರ ಭಾವಚಿತ್ರವೂ ಹಸಿದಿರುವಂತೆ ಸಪ್ಪಗಾಗಿತ್ತು. ಊಟಬಡಿಸುವವರು ಎಲೆಯಮೇಲೆ ಬಡಿಸುವುದೇ ತಡ, ಹಸಿವು ತನ್ನ ವಿಶ್ವರೂಪವನ್ನು ಅಭಿವ್ಯಕ್ತಿಗೊಳಿಸಿತ್ತು. ಶೋಕವನ್ನೂ ನುಚ್ಚು ನೂರಾಗಿಸುವ ಶಕ್ತಿಯಿರುವುದು ಹಸಿದವನಿಗೆ ಸಿಗುವ ಊಟದಲ್ಲಷ್ಟೆ. ಊಟಕ್ಕೆ ಕುಳಿತ ತಿಮ್ಮಯ್ಯನವರ ಮಡದಿ "ರಾಮಣ್ಣ, ಸಾರಿಗೆ ಸ್ವಲ್ಪ ಉಪ್ಪು ಕಡಿಮೆ ಆಗಿದೆ ಅಲ್ವಾ?" ಎಂದು ಕೇಳಿದಾಗ, ಭಾವಚಿತ್ರದಲ್ಲಿದ್ದ ತಿಮ್ಮಯ್ಯನಿಗೆ ತಡೆಯಲಾರದ ನಗು ಬಂತು, ಬಿಗಿಯಾದ ಕಟ್ಟಿನಲ್ಲಿ ಅಡಕವಾಗಿದ್ದ ಚಿತ್ರ ನಕ್ಕಿದ್ದು ಯಾರಿಗೂ ಕಾಣಲಿಲ್ಲ.
Comments
ಉ: ಕಿರುಗತೆ: ಶೋಕ ಮತ್ತು ನಾಲ್ಕು ಮರಿಕುರಿಗಳು.
ಶೋಕ ಸಮಾರಂಭದ ಸುಂದರವಾದ ನಿರೂಪಣೆ!
>>ಒಬ್ಬ ಮನುಷ್ಯ ಸತ್ತಾಗ ನಾಲ್ಕು ಕುರಿ ಕಡಿಯಬಹುದಾದರೆ, ನಾಲ್ಕು ಕುರಿ ಸತ್ತಾಗ ಹದಿನಾರು ಮನುಷ್ಯರನ್ನು ಕಡಿಯಬೇಕಾಗಿತ್ತು. ಆ ಹದಿನಾರು ಜನರ ತಿಥಿಗೆ ೬೪ ಕುರಿಗಳನ್ನು ಕಡಿಯಬೇಕಾಗಿತ್ತು.>> ಮಾರ್ಮಿಕವಾದ ಮಾತು!!