ಕಿಸ್ನ

ಕಿಸ್ನ

ಕಿಸ್ನ....ಲೇ ಮಗಾ ಕಿಸ್ನ....ಜಲ್ದಿ ಬಾರ್ಲ ಇಲ್ಲಿ....ಮಗೀನ ಆಕಡೀಕೆ ಕರ್ಕೊಂಡು ಓಗ್ಲಾ...ನಂಗೆ ಬೋ ಕೆಲ್ಸ ಐತೆ. ಇನ್ನೂ ಊಟ ಮುಗ್ಸಿ ಕೆಲ್ಸಕ್ಕೆ ಓಯ್ಬೇಕು. ಜಲ್ದಿ ಬಾರ್ಲ ಮಗ.

ಅವ್ವ ಬಂದೆ ಇರವ್ವ....ತಮಟೆ ಸರಿ ಮಾಡ್ತಿವ್ನಿ...

ಕೆಂಪಿ ಅಡಿಗೆ ಮನೆಯಲ್ಲಿ ಒಲೆ ಊದುತ್ತಾ ಆ ಹೊಗೆಗೆ ಕಣ್ಣಲ್ಲಿ ಬರುತ್ತಿದ್ದ ನೀರನ್ನು ಒರೆಸಿಕೊಳ್ಳುತ್ತಿದ್ದಳು. ಕೆಂಪಿಗೆ ಈ ರೀತಿ ಏನಾದರೂ ಆದರೆ ಮಾತ್ರ ಕಣ್ಣೀರು ಬರುತ್ತಿತ್ತೆ ವಿನಃ ನಿಜವಾದ ಕಣ್ಣೀರು ಅವಳ ಕಣ್ಣಿನಲ್ಲಿ ಬತ್ತಿ ಹೋಗಿತ್ತು. ಕೆಂಪಿಯ ಗಂಡ ಕರಿಯ ತನ್ನ ಪುರುಷತ್ವದ ಪ್ರತೀಕವಾಗಿ ನಾಲ್ಕು ಜನ ಮಕ್ಕಳನ್ನು ಪ್ರಸಾದವಾಗಿ ಕೆಂಪಿಗೆ ನೀಡಿ ಕಾಲ್ಕಿತ್ತಿದ್ದ.

ಬಡತನಕ್ಕೆ ಮಕ್ಕಳು ಅಧಿಕ ಎಂಬಂತೆ ಇದ್ದ ಬಡತನದಲ್ಲಿ ನಾಲ್ಕು ಜನ ಮಕ್ಕಳನ್ನು ಹೇಗೆ ಸಾಕುವುದೋ ತಿಳಿಯದೆ ತನ್ನ ತವರು ಮನೆಯ ಕುಲಕಸುಬಾದ ದೊಂಬರಾಟವನ್ನು ನಡೆಸಿಕೊಂಡು ಸಂಸಾರ ತೂಗಿಸಲು ಶುರುಮಾಡಿದಳು.

ಕರಿಯ ಕೆಂಪಿಯನ್ನು ಬಿಟ್ಟು ಹೋದಾಗ ದೊಡ್ಡ ಮಗ ಕೃಷ್ಣನಿಗೆ ೮ ವರ್ಷ, ನಂತರ ಮೂವರು ಹೆಣ್ಣು ಮಕ್ಕಳು ಮಲ್ಲವ್ವ,ಯಲ್ಲಮ್ಮ ಹಾಗೂ ತಾಯವ್ವ. ಕೃಷ್ಣ ಹುಟ್ಟಿದಾಗ ಕಪ್ಪಗಿದ್ದನೆಂದು ಕೇರಿಯ ಮಂದಿಯಲ್ಲ ಕೃಷ್ಣ ಇದ್ದಂಗೆ ಇದಾನೆ ಎನ್ನುತ್ತಿದ್ದರು. ಹಾಗಾಗಿ ಅದೇ ಹೆಸರು ಖಾಯಂ ಆಗಿ ಹೋಯ್ತು. ಆದರೆ ಕೆಂಪಿಗೆ ಬಾಯಿ ತಿರುಗದೆ ಕಿಸ್ನ... ಕಿಸ್ನ ಎಂದೇ ಕರೆಯುತ್ತಿದ್ದಳು. ಈಗ ಕೃಷ್ಣನಿಗೆ ೧೪ ವರ್ಷಗಳು.

ಇವರಿಗಿದ್ದ ಆಸ್ತಿ ಎಂದರೆ ನಾಲ್ಕು ಕಂಬಗಳು ಒಂದು ತಂತಿ,ಒಂದು ತಮಟೆ, ಒಂದೆರೆಡು ಕಬ್ಬಿಣದ ರಿಂಗುಗಳು, ಒಂದು ಹಗ್ಗದ ಚಾಟಿ ಇಷ್ಟೇ. ಕೆಂಪಿ ಮಕ್ಕಳನ್ನು ಕರೆದುಕೊಂಡು, ಕೃಷ್ಣ ಆ ಆಸ್ತಿಯನ್ನು ಹೊತ್ತುಕೊಂಡು ರಸ್ತೆ ಬದಿಯಲ್ಲೋ ಎಲ್ಲದಾರೂ ಒಂದು ಕಡೆ ಕಂಬಗಳನ್ನು ಕಟ್ಟಿ ಅದರ ಮೇಲೆ ತಂತಿ ಯನ್ನು ಕಟ್ಟಿ ಕೃಷ್ಣ ಅದರ ಮೇಲೆ ನಡೆದರೆ ಇನ್ನುಳಿದ ಮಕ್ಕಳಲ್ಲಿ ಮಲ್ಲವ್ವ ಮತ್ತು ಯಲ್ಲಮ್ಮ ಕಬ್ಬಿಣದ ರಿಂಗುಗಳಿಂದ ಕಸರತ್ತು ಮಾಡುತ್ತಿದ್ದರೆ, ಕೊನೆಯಲ್ಲಿ ತಾಯವ್ವ ಹೋಗಿ ಎಲ್ಲರ ಬಳಿ ಕೈಚಾಚುತಿದ್ದಳು.

ನೆರೆದಿದ್ದ ಜನರಲ್ಲಿ ಒಳ್ಳೆಯವರು ಇದ್ದರೆ ಒಂದೆರೆಡು ಕಾಸನ್ನು ಹಾಕಿ ಹೋಗುತ್ತಿದ್ದರು. ಇಲ್ಲವಾದರೆ ಅವರು ಪ್ರದರ್ಶನ ನೀಡುವಷ್ಟು ಹೊತ್ತು ನಿಂತು ನೋಡಿ ನಂತರ ತಮಗೇನೂ ಗೊತ್ತೇ ಇಲ್ಲ ಎನ್ನುವಂತೆ ಕೈ ಬೀಸಿಕೊಂಡು ಹೊರಟು ಹೋಗುತ್ತಿದ್ದರು. ಮೊದಮೊದಲು ಕಾಸು ಕೊಡದೆ ಹೋದವರನ್ನು ಕೆಂಪಿ ಮನಸಾರೆ ಬೈದು ಕೊಳ್ಳುತ್ತಿದ್ದಳು... ಆದರೆ ಈಚೀಚೆಗೆ ಅದನ್ನು ಬಿಟ್ಟು ಬಿಟ್ಟಿದ್ದಾಳೆ. ಬಂದದ್ದಷ್ಟು ಬರಲಿ ಎಂದುಕೊಂಡು ಸುಮ್ಮನಾಗುತ್ತಾಳೆ.

ಒಮ್ಮೊಮ್ಮೆ ಐವತ್ತು, ನೂರು...ಒಮ್ಮೊಮ್ಮೆ ಹತ್ತು ಇಪ್ಪತ್ತು, ಒಮ್ಮೊಮ್ಮೆ ಅದೂ ಇಲ್ಲ...ಅದರಲ್ಲಿ ಯಾಮಾರಿ ಪೋಲೀಸರ ಕೈಗೆ ಏನಾದರೂ ಸಿಕ್ಕರೆ ಸಂಪಾದಿಸಿದರಲ್ಲಿ ಅವರಿಗೊಂದಷ್ಟು ಕೊಡಬೇಕಿತ್ತು. ಏನೂ ಸಂಪಾದನೆ ಇಲ್ಲದಿದ್ದರೆ ಕೋಪದಲ್ಲಿ ಹಾಕಿದ್ದ ಕಂಬಗಳನ್ನು ಕಿತ್ತು ಹೋಗುತ್ತಿದ್ದರು. ಒಂದೆರೆಡು ಬಾರಿ ಕೆಲವರು ಸಾಂತ್ವನ ತೋರಿದರೆ, ಮತ್ತೆ ಕೆಲವರು ಬುದ್ಧಿ ಹೇಳುತ್ತಿದ್ದರು. ಅಲ್ಲಮ್ಮ ಈಗೆಲ್ಲ ಜನ ಎಲ್ಲಿ ನೋಡುತ್ತಾರೆ ಇದನ್ನೆಲ್ಲಾ, ಬೇರೆ ಏನಾದರೂ ಕೆಲಸ ನೋಡಿಕೊಳ್ಳಬಾರದ ಎಂದು.

ಕರಿಯ ಇದ್ಧಷ್ಟು ದಿವಸ ಒಂದು ಸ್ಲಮ್ಮಿನಲ್ಲಿ ಇದ್ದ ಕೆಂಪಿ ಮತ್ತು ಮಕ್ಕಳು ನಂತರ ಬೀದಿಗೆ ಬಿದ್ದಿದ್ದರು. ಪ್ರತಿದಿನದ ಪ್ರದರ್ಶನದ ನಂತರ ಯಾವುದಾದರೂ ಮರದ ಕೆಳಗೋ, ಇಲ್ಲ ತಾವು ಬಿಡಾರ ಹೂಡಿದ್ದ ಫುಟ್ ಪಾತ್ ಮೇಲೋ ಅಲ್ಲೇ ನೆಲೆಸುತ್ತಿದ್ದರು. ಕೆಲದಿನದಿಂದ ಮೋರಿ ರಿಪೇರಿಗೆಂದು ರಸ್ತೆ ಬದಿಯಲ್ಲಿ ಹಾಕಿದ್ದ ದೊಡ್ಡ ದೊಡ್ಡ ಸಿಮೆಂಟಿನ ಪೈಪುಗಳೇ ಇವರಿಗೆ ಮನೆ ಆಗಿದ್ದವು. ಅಲ್ಲೇ ಅಡಿಗೆ, ಊಟ ನಿದ್ರೆ ಎಲ್ಲ ಆಗಿತ್ತು.

ಕೃಷ್ಣ ಪ್ರತಿದಿವಸ ಕಂಬಿಯ ಮೇಲೆ ನಡೆದೂ ನಡೆದೂ ಅದರಲ್ಲಿ ಪರಿಣತಿ ಪಡೆದಿದ್ದ. ಮೊದಮೊದಲು ಕೋಲನ್ನು ಹಿಡಿದು ನಡೆಯುತ್ತಿದ್ದ ಈಗೀಗ ಏನೂ ಸಹಾಯವಿಲ್ಲದೆ ಆರಾಮಾಗಿ ನಡೆಯುತ್ತಾನೆ. ಒಮ್ಮೆ ಇವರು ರಸ್ತೆ ಬದಿಯಲ್ಲಿ ಪ್ರದರ್ಶನ ಕೊಡುತ್ತಿದ್ದಾಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಕೆಂಪಿಯ ಬಳಿ ಬಂದು ನಾವು ಸಿನೆಮಾದವರು, ನಮ್ಮ ಸಿನೆಮಾದಲ್ಲಿ ಇದೆ ರೀತಿ ಒಂದು ದೃಶ್ಯ ಇದೆ ನಿನ್ನ ಮಗನನ್ನು ಕಳಿಸಿ ಕೊಡುತ್ತೀಯ ದುಡ್ಡು ಕೊಡುತ್ತೀನಿ ಎಂದು ಕೇಳಿದ್ದಕ್ಕೆ, ಗಾಭರಿಯಾದ ಕೆಂಪಿ ಇಲ್ಲ ಕಳಿಸುವುದಿಲ್ಲ ಎಂದಿದ್ದಳು.

ಅಂದು ವೈಶಾಖ ಮಾಸ, ಅಗ್ನಿ ನಕ್ಷತ್ರ ಹುಟ್ಟಿತ್ತು...ಬಿಸಿಲು ನೆತ್ತಿ ಸುಡುತ್ತಿತ್ತು. ಅಂದು ಕೆಂಪಿಯ ಬಿಡಾರ ಒಂದು ಪಾರ್ಕಿನ ಪಕ್ಕದಲ್ಲಿ ತಮ್ಮ ಪ್ರದರ್ಶನ ಕೊಡುತ್ತಿತ್ತು. ಕೃಷ್ಣ ಕಂಬಿಯ ಮೇಲೆ ಆಡಿಸಿ ನೋಡು...ಬೀಳಿಸಿ ನೋಡು... ಉರುಳಿ ಹೋಗದು ಎಂದು ಹಾಡು ಹೇಳಿಕೊಂಡು ಕಂಬಿಯ ಮೇಲೆ ನಡೆಯುತ್ತಿದ್ದರೆ ಕೆಳಗಡೆ ನಿಂತಿದ್ದ ಮಕ್ಕಳು ಚಪ್ಪಾಳೆ ಹೊಡೆದು ನಗುತ್ತಿದ್ದರು.

ಇದ್ದಕ್ಕಿದ್ದಂತೆ ಕೆಂಪಿ ನೆಲಕ್ಕೆ ಬಿದ್ದಳು. ತಕ್ಷಣ ಕೃಷ್ಣ ಮೇಲಿಂದ ಕೆಳಕ್ಕೆ ಹಾರಿ ಕೆಂಪಿಯ ಬಳಿ ಬಂದ. ಮೂವರು ಹೆಣ್ಣು ಮಕ್ಕಳು ಕೆಂಪಿಯ ಬಂದು ಕೆಂಪಿಯ ಕೈ ಹಿಡಿದು ಅಮ್ಮ ಅಮ್ಮ ಕೂಗುತ್ತಿದ್ದರು. ಸುತ್ತಲೂ ನೆರೆದಿದ್ದ ಜನ ಒಬ್ಬೊಬ್ಬರಾಗೆ ಅಲ್ಲಿಂದ ಹೊರಟರು. ಯಾರೋ ಒಬ್ಬ ವಯಸ್ಸಾದ ವ್ಯಕ್ತಿ ೧೦೮ ಕ್ಕೆ ಫೋನ್ ಮಾಡಿ ಅವರೂ ಹೊರಟರು.

ಸ್ವಲ್ಪ ಹೊತ್ತಿನಲ್ಲಿ ಬಂದ ಆಂಬುಲೆನ್ಸ್ ನಲ್ಲಿ ಕೆಂಪಿಯನ್ನು ಹಾಕಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಪರೀಕ್ಷೆ ಮಾಡಿದ ಡಾಕ್ಟರ್ ಕೆಂಪಿಯನ್ನು ಎಬ್ಬಿಸಿ ಏನಮ್ಮ ನಿಮ್ಮ ಕಡೆಯವರು ಯಾರೂ ಇಲ್ಲವ?

ಯಾಕ್ ಸಾಮಿ? ಏನಾಗದೆ ನಂಗೆ? ಈ ಮಕ್ಳು ಬುಟ್ರೆ ಬೇರೆ ಯಾರೂ ಇಲ್ಲ ಸಾಮಿ.. ಅದೇನೂ ಅಂತ ಹೇಳ್ರಲ

ಅಲ್ಲೇ ಇದ್ದ ಕೃಷ್ಣ ಡಾಕ್ಟರ್ ಏನು ಹೇಳುತ್ತಾರೋ ಎಂದು ಗಾಭರಿಯಂದ ಕೇಳುತ್ತಿದ್ದ.

ನೋಡಮ್ಮಾ ನಿಂಗೆ ಕ್ಯಾನ್ಸರ್ ಇದೆ. ಇನ್ನು ನೀನು ಜಾಸ್ತಿ ದಿನ ಬದುಕಲ್ಲ. ಒಂದು ಆಪರೇಶನ್ ಮಾಡಬೇಕು.. ಅದು ಮಾಡಿದರೆ ಇನ್ನೊಂದು ಸ್ವಲ್ಪ ದಿನ ಬದುಕಬಹುದು...ಏನೇ ಸರ್ಕಾರಿ ಆಸ್ಪತ್ರೆ ಆದರೂ ಸ್ವಲ್ಪವಾದರೂ ಖರ್ಚು ಆಗೇ ಆಗುತ್ತದೆ. ನೋಡು ಒಂದು ಐವತ್ತು ಸಾವಿರ ಇದ್ದರೆ ತೆಗೆದುಕೊಂಡು ಬಾ ಆಪರೇಶನ್ ಮಾಡೋಣ ಎಂದರು.

ಆ ಮಾತು ಕೇಳಿದ ಕೆಂಪಿ ಸುಮ್ಮನೆ ಒಮ್ಮೆ ನಕ್ಕು... ಅಲ್ ಕಣ್ ಸಾಮಿ ಐವತ್ತು ಸಾವ್ರ ಇದ್ದಿದ್ದ್ರೆ ನಾವ್ಯಾಕೆ ಹಿಂಗ್ ಇರ್ತಿದ್ವಿ ಯೋಳಿ.... ಬುಡಿ ಬುಡಿ... ಆ ಭಗವಂತ ಮಡಗ್ದಂಗೆ ಆಯ್ತದೆ.... ಎಂದು ಮಕ್ಕಳನ್ನು ಕರೆದುಕೊಂಡು ಪೈಪಿನ ಬಳಿ ಬಂದು ಮಲಗಿದಳು.

ಎಲ್ಲವನ್ನೂ ಕೇಳಿಸಿಕೊಂಡ ಕೃಷ್ಣನಿಗೆ ತಟ್ಟನೆ ಏನೋ ಹೊಳೆಯಿತು...ಮೊದಲ ಬಾರಿ ಸಿನೆಮಾದವರು ಬಂದು ಕೇಳಿದಾಗ ಕೆಂಪಿ ಆಗಲ್ಲ ಎಂದು ಹೇಳಿ ಕಳಿಸಿದ್ದಳು. ಆದರೆ ಒಂದು ವಾರದ ಹಿಂದಷ್ಟೇ ಕೆಂಪಿಗೆ ತಿಳಿಯದ ಹಾಗೆ ಮತ್ತೆ ಬಂದು ಕೃಷ್ಣನನ್ನು ಕೇಳಿದ್ದರು. ಒಂದೇ ಒಂದು ದಿನ ಬಂದು ಹೋಗು ನಿನಗೆ ಹತ್ತು ಸಾವಿರ ಕೊಡುತ್ತೇನೆ ಎಂದು. ಆದರೆ ಕೆಂಪಿಗೆ ಹೆದರಿಕೊಂಡು ಆಗುವುದಿಲ್ಲ ಎಂದು ಹೇಳಿದ್ದ.

ಅವ್ವ ನೀನು ಮಕೊಂಡಿರು ನಾನು ಈಗ್ಲೇ ಬತ್ತೀನಿ ಎಂದು ಆ ಸಿನೆಮಾದವರು ಹೇಳಿದ್ದ ಜಾಗಕ್ಕೆ ಓಡಿ ಹೋದ. ಅಲ್ಲಿ ಇವನನ್ನು ಭೇಟಿ ಮಾಡಲು ಬಂದಿದ್ದವನ ಬಳಿ ಹೋಗಿ ಸಾರ್...ಸಾರ್ ನಾನು ನೀವು ಹೇಳಿದ ಹಾಗೆ ಮಾಡ್ತೀನಿ ಆದ್ರೆ ನಂಗೆ ಐವತ್ತು ಸಾವಿರ ಕೊಡ್ತೀರಾ... ನಮ್ಮ ಅವ್ವಂಗೆ ಹಿಂಗೆ ಕ್ಯಾನ್ಸರ್ ಆಗೈತೆ... ಆಪರೇಶನ್ ಮಾಡಬೇಕಂತೆ.... ಕೊಡ್ತೀರ...

ಸರಿ ಕಣೋ ಹುಡುಗ ನೀನು ನಾಳೆ ಬೆಳಿಗ್ಗೆ ಬಾ....ಬೆಳಿಗ್ಗೆ ಶೂಟಿಂಗ್ ಇರತ್ತೆ... ಅದು ಮುಗಿದ ಕೂಡಲೇ ದುಡ್ಡು ಕೊಡಿಸುತ್ತೇನೆ ಎಂದು ಕಳಿಸಿ ಕೊಟ್ಟ.

ಮರುದಿನ ಬೆಳಿಗ್ಗೆ ಕೆಂಪಿ ಏಳುವ ಮೊದಲೇ ಕೃಷ್ಣ ಶೂಟಿಂಗ್ ಜಾಗಕ್ಕೆ ಬಂದಿದ್ದ. ಕೃಷ್ಣನನ್ನು ಕರೆದುಕೊಂಡು ಒಂದು ಮಹಡಿಯ ಮೇಲೆ ಹೋದ ಪ್ರೊಡಕ್ಷನ್ ಬಾಯ್ ನೋಡೋ ಕೃಷ್ಣ ಅಲ್ಲಿ ನೀನು ಕಂಬಕ್ಕೆ ಕಂಬಿಯನ್ನು ಕಟ್ಟಿ ನಡೆಯುತ್ತೀಯ ಅಲ್ಲವ... ಇಲ್ಲಿ ಈ ಮಹಡಿಯಿಂದ ಆ ಮಹಡಿಗೆ ಕಂಬಿಯ ಮೇಲೆ ನಡೆಯಬೇಕು ಅಷ್ಟೇ. ನಿನ್ನ ಸುರಕ್ಷತೆಗೆ ನಾವು ಹಗ್ಗವನ್ನು ಕಟ್ಟಿರುತ್ತೇವೆ ಎಂದ.

ಅಷ್ಟೇನಾ ಸರ್.... ನಡೀತೀನಿ ಬಿಡಿ....ಆದ್ರೆ ದುಡ್ಡು..

ನೀನೇನೂ ಯೋಚನೆ ಮಾಡಬೇಡ ನೀನು ನಾಳೆಯೇ ನಿನ್ನ ತಾಯಿಗೆ ಆಪರೇಶನ್ ಮಾಡಿಸಬಹುದು ಎಂದು ಹೇಳಿ ಶೂಟಿಂಗ್ ಗೆ ಸಿದ್ಧ ಮಾಡಿದರು.

ಕೃಷ್ಣ ಉತ್ಸಾಹದಿಂದಲೇ ಕಂಬಿಯ ಮೇಲೆ ಕಾಲಿಟ್ಟ. ಆದರೆ ಪ್ರತಿದಿನ ಕಂಬದ ಮೇಲೆ ಸಣ್ಣ ಎತ್ತರದಲ್ಲಿ ನಡೆಯುತ್ತಿದ್ದವನಿಗೆ ಕೆಳಗೆ ನೋಡಿದ ಕೂಡಲೇ ತಲೆ ತಿರುಗಲು ಶುರುವಾಯಿತು. ಎರಡು ಹೆಜ್ಜೆ ಹಿಂದಿಟ್ಟು ಮನದಲ್ಲಿ ಅವ್ವನ ಪರಿಸ್ಥಿತಿ ನೆನೆಸಿಕೊಂಡು ಮುಂದಕ್ಕೆ ನಡೆಯಲು ಶುರು ಮಾಡಿದ. ಅರ್ಧ ದಾರಿ ಬರುತ್ತಿದ್ದ ಹಾಗೆ ಕೆಳಗೆ ಕಟ್ಟಿದ್ದ ಕಂಬಿ ಇದ್ದಕ್ಕಿದ್ದಂತೆ ಕಟ್ಟಾಯಿತು....

ಕ್ಷಣಾರ್ಧದಲ್ಲಿ ಅಲ್ಲಿ ಏನು ನಡೆಯುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಎಲ್ಲ ಮುಗಿದು ಹೋಗಿತ್ತು...ಕೃಷ್ಣನ ಸುರಕ್ಷತೆಗೆಂದು ಕಟ್ಟಿದ್ದ ಹಗ್ಗವೇ ಅವನ ಕುತ್ತಿಗೆಗೆ ಬಿಗಿದು ಅವನ ಪ್ರಾಣಪಕ್ಷಿ ಹಾರಿಹೋಗಿತ್ತು.

ತಕ್ಷಣ ಸಿನೆಮಾ ತಂಡಕ್ಕೆ ದೊಡ್ಡ ಆಘಾತ ಆಗಿತ್ತು....ಎಂಥಹ ಅನಾಹುತ ನಡೆದು ಹೋಯಿತು.... ಅವನ ತಾಯಿಯನ್ನು ರಕ್ಷಿಸಲು ಅವನು ಇಲ್ಲಿಗೆ ಬಂದ...ಈಗ ಅವನನ್ನು ಹೀಗೆ ನೋಡಿದರೆ ಅವಳು ನಿಜಕ್ಕೂ ಸತ್ತೇ ಹೋಗುತ್ತಾಳೆ..... ಆದರೂ ಏನು ಮಾಡೋದು... ಅವಳನ್ನು ಕ್ಷಮೆ ಕೇಳಿ ಅವರ ಕುಟುಂಬಕ್ಕೆ ಸಹಾಯ ಮಾಡೋಣ ಎಂದು ಆ ಪೈಪಿನ ಬಳಿ ಬಂದರು.

ಅಲ್ಲಿ ಆಗಲೇ ಜನ ತುಂಬಿದ್ದರು. ಪಕ್ಕದಲ್ಲೇ ಒಂದು ಆಂಬುಲೆನ್ಸ್ ಕೂಡ ನಿಂತಿತ್ತು. ಕೆಳಗಿಳಿದ ಸಿನೆಮಾ ತಂಡ ಪೈಪಿನ ಬಳಿ ಬಂದಾಗಲೇ ಗೊತ್ತಾಗಿದ್ದು ಕೆಂಪಿ ಸಹ ತನ್ನ ಇಹಲೋಕದ ಯಾತ್ರೆ ಮುಗಿಸಿದ್ದಾಳೆ ಎಂದು...

ಅಲ್ಲೇ ಪಕ್ಕದಲ್ಲೇ ಯಾರೋ ಮಾತಾಡುತ್ತಿದ್ದದ್ದು ಕಿವಿಗೆ ಬಿತ್ತು...ಸಾಯುವ ಸಮಯದಲ್ಲೂ ಕಿಸ್ನ....ಕಿಸ್ನಾ ಎಂದೇ ಪ್ರಾಣ ಬಿಟ್ಟಳು...ಯಾರೋಪ್ಪ ಕಿಸ್ನ ಎಂದರೆ...ಬಹುಶಃ ಮಗ ಇರಬಹುದು ಎನಿಸುತ್ತೆ

Rating
No votes yet

Comments

Submitted by RAMAMOHANA Fri, 08/23/2013 - 10:09

ಜಯಂತ್ ರವರೆ ಕಥೆ ಚೆನ್ನಾಗಿದೆ. ಮತ್ತೆ ಗಣೇಶ್ ಜಿಯ‌ ಬೇಸಿಗೆ ರಜೆಯ‌ ನಿಮ್ಮ ಉತ್ತರಕ್ಕೆ ನನಗೆ ನೆನಪಾದ‌ ಕಗ್ಗ ‍_
ಮ್ಱತನ‌ ಸಂಸಾರಕಥೆ ಶವವಾಹಕರಿಗೇಕೆ
ಹೆಂಡತಿಯು ಗೋಳಿಡಲಿ ಸಾಲಿಗನು ಬೊಬ್ಬಿಡಲಿ
ಜಿತಮನದಿ ದ್ಱತಿ ಗಟ್ಟಿ ಕೊಂಡೊಯ್ಯುತಿಹರವರು
ಧ್ಱತಿಯ‌ ತಳೆ ನೀನಂತು ಮಂಕುತಿಮ್ಮ.
ಧನ್ಯವಾದಗಳು
ರಾಮೋ.