ಕುಂಡದಲ್ಲೊಂದು ಗೂಡು ಕಟ್ಟಿ....

ಕುಂಡದಲ್ಲೊಂದು ಗೂಡು ಕಟ್ಟಿ....

ಅಂದು ಭಾನುವಾರ (10-ಜುಲೈ-2005). ಬೆಳಿಗ್ಗೆ ತಡವಾಗಿ ಎದ್ದೆ. ಅಲ್ಲ ಎಚ್ಚರಿಸಿದ್ದು ಒಂದು ಪಕ್ಷಿಯ ಕೂಗು. ನಮ್ಮ ಮನೆಯ ತಾರಸಿಯಲ್ಲಿ ಎರಡು ಕೋಣೆಗಳಿವೆ ಹಾಗು ಬಟ್ಟೆ ಒಗೆಯಲು ಮತ್ತು ಒಣಗಿಸಲು ಸ್ವಲ್ಪ ತೆರೆದ ಜಾಗ. ಇಲ್ಲಿ ಹಲಾವಾರು ಗಿಡಗಳನ್ನು ಪಾಟ್ಗಳಲ್ಲಿ ಬೆಳೆಸಿದ್ದೇವೆ. ಆ ಕೂಗು ಬಂದಿದ್ದು ಅದೇ ಜಾಗದಿಂದ. ತಕ್ಷಣವೆ ಎದ್ದು ಹೋಗಿ ಕಿಟಕಿಯಿಂದ ಇಣುಕಿ ನೋಡಿದೆ. ಅಲ್ಲಿ ಕುಳಿತಿತ್ತು ಆ ಪಕ್ಷಿ. ಮೆಟ್ಟಿಲುಗಳ ಮೇಲಿದ್ದ ಒಂದು ಹಳೆಯ ಬಟ್ಟೆಯಿಂದ, ದಾರವೊಂದನ್ನು ತೆಗೆಯಲು ಯತ್ನಿಸುತಿತ್ತು. ಆಗಲೆ ನನಗೆ ಹೊಳೆಯಿತು ಈ ಪಕ್ಷಿ ಎಲ್ಲೋ ಗೂಡು ಕಟ್ಟುತ್ತಿದೆಯೆಂದು. ತುಂಬಾ ಪ್ರಯಾಸ ಪಟ್ಟು ಹೇಗೊ ಒಂದು ಎಳೆಯನ್ನು ಹೊರಗೆಳೆದ ಪಕ್ಷಿ, ನಾನಿದ್ದ ಕಿಟಕಿಯದುರಿನ ಗಿಡವೊಂದಕ್ಕೆ ಪುರ್ರನೆ ಹಾರಿ, ಅಲ್ಲಿ ಏನನ್ನೊ ಮಾಡಿ ಮತ್ತೆ ಹಾರಿ ಹೊರಟು ಹೋಯಿತು. ಸಂಭ್ರಮ, ಉದ್ವೇಗಗಳೊಡನೆ ಹೊರಗೆ ಹೋಗಿ ಆ ಗಿಡವನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದೆ. ಅದಾಗಲೆ ಗೂಡು ನಿರ್ಮಾಣದ ಕಾರ್ಯ ಶುರುವಾಗಿಬಿಟ್ಟಿತ್ತು. ನಾಲ್ಕಾರು ಗರಿಗಳ ನಡುವೆ ಕೆಲವು ದಾರ ನಾರುಗಳು ಹೆಣೆಯಲ್ಪಟ್ಟಿದ್ದವು.

ಈ ಪಕ್ಷಿಯ ಹೆಸರು ಬೂದು ಉಲಿಯಕ್ಕಿ ಅಥವಾ ಗದ್ದೆ ಟುವ್ವಿ ಎಂದು. ಇದನ್ನು ಇಂಗ್ಲೀಷಿನಲ್ಲಿ 'ಆಶಿ ವ್ರೆನ್ ವಾರ್ಬಲರ್' ಅಥವಾ 'ಆಶಿ ಪ್ರಿನಿಯ'  ಮತ್ತು ವೈಜ್ಙಾನಿಕವಾಗಿ 'ಪ್ರಿನಿಯ ಸೋಷಿಯಾಲಿಸ್' ಎಂದು ಕರೆಯುತ್ತಾರೆ. ಈ ಪಕ್ಷಿ, ಗುಬ್ಬಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ದೇಹದ ಮೇಲ್ಭಾಗವೆಲ್ಲಾ ಗ್ಫಢವಾದ ಬೂದು ಬಣ್ಣ ಕೆಳಭಾಗ ಮಾಸಿದ ಬಿಳಿ ಬಣ್ಣ. ಚಳಿಗಾಲದಲ್ಲಿ ಬೂದು ಬಣ್ಣ ಕಂದು ಬಣ್ಣಕ್ಕೆ ತಿರುಗುತ್ತದೆ. ಈ ಪಕ್ಷಿ ಭಾರತ, ಬಾಂಗ್ಲದೇಶ ಮತ್ತು ಶ್ರೀಲಂಕಾದಲ್ಲಿ ಕಂಡು ಬರುತ್ತದೆ. ತೋಟ, ಹುಲ್ಲುಗಾವಲು, ಕುರುಚಲು ಕಾಡು ಇದರ ವಾಸಸ್ಥಾನ. ಇದು ಮಾರ‍್ಚ್ ತಿಂಗಳಿನಿಂದ ಸೆಪ್ಟೆಂಬರ್ವರೆಗು ಗೂಡು ಕಟ್ಟಿ ಮರಿ ಮಾಡುವ ಕಾಲ. ಗೂಡು ಕೆಲವೊಮ್ಮೆ ಧರ್ಜಿ ಹಕ್ಕಿಗಳ ಹಾಗೆ ಎಲೆಗಳನು ಸೇರಿಸಿ ಕಟ್ಟಿದರೆ, ಕೆಲವೊಮ್ಮೆ ನಾರುಗಳನ್ನು ಹೆಣೆದು ಕಟ್ಟುತ್ತವೆ. ಕೆಂಪು ಬಣ್ಣದ ಮೊಟ್ಟೆಯ ಒಂದು ತುದಿಯಲ್ಲಿ ಕಪ್ಪು ಬಣ್ಣದ ಉಂಗುರದ ಗುರುತು ಉರುತ್ತದೆ. ಇದಿಷ್ಟು ಸಲಿಂ ಆಲಿಯವರು ಈ ಹಕ್ಕಿಯ ಬಗ್ಗೆ ನೀಡಿರುವ ವಿವರ.

ಗೂಡು ಪೂರ್ಣಗೊಳಿಸಲು ಸುಮಾರು ಹದಿನಾಲ್ಕು ದಿನಗಳು ಕಳೆದವು. ಆನಂತರ ಕೆಂಪು ಬಣ್ಣದ ಒಂದು ಮೊಟ್ಟೆ ಗೂಡಿನೊಳಗೆ ಕಾಣಿಸಿಕೊಂಡಿತು. ಎರಡನೆ ದಿನ ಇನ್ನೊಂದು, ಹೀಗೆ ನಾಲ್ಕು ದಿನಗಳಲಿ ನಾಲ್ಕು ಮೊಟ್ಟೆಗಳನ್ನು ಇಡಲಾಗಿತ್ತು. ಮುಂದಿನದು ಕಾವು ಕೊಡುವ ಸರದಿ. ಸುಮಾರು ಹದಿಮೂರು ದಿನಗಳ ನಂತರ ಬೆಳಿಗ್ಗೆ ಗೂಡನ್ನು ಪರಿಶೀಲಿಸಲು ಹೋದೆ. ಒಂದು ಮೊಟ್ಟೆಯಡೆದು ಮರಿ ಹೊರ ಬಂದಿತ್ತು. ಪುಕ್ಕಗಳಿಲ್ಲದ ಮರಿ ಮಾಂಸದ ಮುದ್ದೆಯಂತೆ ಕಂಡುಬರುತಿತ್ತು. ಮತ್ತೆ ಸ್ವಲ್ಪ ಸಮಯದ ಅನಂತರ ನೋಡಿದಾಗ ಇನ್ನೆರಡು ಮರಿಗಳು ಹೊರ ಬಂದಿದ್ದವು. ಇವು ಜೀವಂತವಾಗಿದ್ದವು ಎನ್ನುವುದಕ್ಕೆ ಇದ್ದ ಆಧಾರ, ತಮ್ಮ ರೆಕ್ಕೆಗಳನ್ನು ಬಡಿಯುತ್ತಿದಿದ್ದು. ಆದರೆ ಗೂಡಿನೊಳಗೆಲ್ಲೂ ಮೊಟ್ಟೆಯ ಚೂರುಗಳು ಕಾಣಲಿಲ್ಲ.

ತಮ್ಮ ಮರಿಗಳಿಗಾಗಿ ತಂದೆ,ತಾಯಿ ಎರಡೂ ಹಕ್ಕಿಗಳು ಬೇಟೆಯನ್ನು ತರುತ್ತಿದ್ದವು. ಪ್ರತಿ ಐದರಿಂದ ಹತ್ತು ನಿಮಿಷಗಳಿಗೊಮ್ಮೆ ಬೇಟೆಯನ್ನು ಕೊಕ್ಕಿನಲ್ಲಿ ಹಿಡಿದು ತಂದು, ಗುಟುಕು ನೀಡಿ ಮತ್ತೆ ಬೇಟೆಗೆ ಹೋಗಿ ಬಿಡುತ್ತಿದ್ದವು. ಮೊದಮೊದಲು ಮರಿಗಳು ಚಿಕ್ಕದಿದ್ದಾಗ ಹಕ್ಕಿಗಳು ಚಿಕ್ಕ ಬೇಟೆಯಾದ ನೊಣ, ಸಣ್ಣ ಲಾರ್ವಗಳನ್ನು ಹಿಡಿದು ತರುತ್ತಿದ್ದವು. ಮರಿ ಬೆಳೆದಂತೆಲ್ಲಾ ಬೇಟೆಯ ಗಾತ್ರವು ದೊಡ್ಡದಾಯಿತು. ಈಗ ಹಕ್ಕಿಗಳು ದೊಡ್ಡ ಬೇಟೆಯಾದ ಮಿಡತೆ ಮತ್ತು ದೊಡ್ಡ ಲಾರ್ವಗಳನು ತಂದು ಮರಿಗಳಿಗೆ ಆಹಾರವಾಗಿ ನೀಡುತ್ತಿದ್ದವು.

ಹೀಗೆ ಆಹಾರವನ್ನು ತಂದು ಕೊಡುವುದರ ಜೊತೆಗೆ ಮರಿಗಳು ಹಾಕಿದ ಹಿಕ್ಕೆಯನ್ನು ಹಕ್ಕಿಗಳು ಗೂಡಿನಿಂದ ಹೊರ ತೆಗೆದು ಕೊಂಡು ಹೋಗಿ ಬಿಸಾಡುತ್ತದೆ. ಹೀಗೆ ಮಾಡದಿದ್ದಲ್ಲಿ ಹಿಕ್ಕೆಯು, ಇರುವೆ ಮುಂತಾದ ಕೀಟಗಳನ್ನು ಆಕಷರ್ಿಸುತ್ತದೆ. ಹೀಗೆ ಆಕಷರ್ಿತವಾಗಿ ಕೀಟಗಳು ಬಂದಲ್ಲಿ ಅದು ಮರಿಗಳಿಗೆ ಕಂಟಕವಾಗಿ ಪರಿಣಮಿಸುತ್ತದೆ.

ನೋಡುನೋಡುತ್ತಿದ್ದಂತೆ ಮರಿಗಳು ಬೆಳೆಯಲಾರಂಭಿಸಿದವು. ಎರಡು ದಿನಗಳೊಳಗಾಗಿ ಪುಕ್ಕ ಮೂಡಲಾರಂಭಿಸಿತು. ಅವುಗಳನ್ನು ನೋಡೋಣವೆಂದು ಗೂಡಿನ ಬಳಿ ಹೋದರೆ, ತನ್ನ ತಾಯಿಯೇ ಬಂದಿತೇನೊ ಎಂಬಂತೆ ಬಾಯಿ ಕಳೆಯುತ್ತಿದ್ದವು. ಹುಟ್ಟಿದಾಗ ಮರಿಗಳು ಕುರುಡಾಗಿದ್ದವು ಆದರೆ ಒಂದು ವಾರ ಕಳೆದ ನಂತರ ಕಣ್ಣು ಬಿಟ್ಟು ನೋಡುತ್ತಿದ್ದವು.

ಹದಿನೈದು ದಿನಗಳು ಕಳೆದವು, ಅಂದು ಎಂದಿನಂತೆಯೆ ಎದ್ದು ಮರಿಗಳನ್ನು ನೋಡೋಣವೆಂದು ಕಿಟಕಿಯ ಬಳಿ ಹೋದೆ. ಸುಮಾರು ಹತ್ತು ನಿಮಿಷವಾದರು ತಾಯಿ ಹಕ್ಕಿ ಗೂಡಿನತ್ತ ಸುಳಿಯಲೆ ಇಲ್ಲ. ಏನೊ ಆಗಿರಬಹುದು ಎಂದು ಅನುಮಾನಿಸಿ, ಹೊರಗೆ ಹೋಗಿ ಗೂಡಿನೊಳಗೆ ಇಣುಕಿ ನೋಡಿದೆ. ಗೂಡೆಲ್ಲ ಖಾಲಿ!!! ಅಂದು ಬೆಳಿಗ್ಗೆಯೆ ಮರಿಗಳು ಗೂಡನ್ನು ತೊರೆದಿದ್ದವು. ಹಾಗೆಯೆ ನಿಂತಿರಬೇಕಾದರೆ, ತಾಯಿಯ ಎಚ್ಚರಿಕೆಯ ಕೂಗು ಕೇಳಿಬಂತು. ಹಾಗಾದರೆ ಇಲ್ಲೆ ಎಲ್ಲೊ ಮರಿಯಿರಬೇಕೆಂದು ತಿಳಿದು ಮರಳಿ ರೂಮಿನೊಳಗೆ ಬಂದು ಕಿಟಕಿಯ ಬಳಿ ಕಾಯುತ್ತ ನಿಂತೆ.

ಅಲ್ಲಿ ಇತ್ತು ಆ ಮರಿ . ಹತ್ತಿರದಲ್ಲೆ ಇದ್ದ ಇನ್ನೊಂದು ಗಿಡದ ಕೊಂಬೆಯ ಮೇಲೆ ಕುಳಿತಿತ್ತು. ತಾಯಿ ಹಕ್ಕಿ ಅದರ ಬಳಿ ಹೋಗಿ ಹಾರುವಂತೆ ಪ್ರೋತ್ಸಾಹಿಸುತಿತ್ತು. ತಕ್ಷಣವೆ ಹೋಗಿ ಮನೆಯವರೆಲ್ಲರನ್ನು ಕರೆದೆ. ಸುಮಾರು ಅರ್ಧ ಗಂಟೆಯ ಕಾಲ ತಾಯಿ ತನ್ನ ಮರಿಗಳಿಗೆ ಹಾರುವ ಪಾಠ ಹೇಳಿಕೊಡುತ್ತಿದ್ದನ್ನು ನೋಡಿ ಆನಂದಿಸಿದೆವು. ಸ್ವಲ್ಪ ಸಮಯದಲ್ಲೆ ಮರಿಗಳು ತಮ್ಮ ಹೊಸ ಪ್ರಪಂಚದಲ್ಲಿ ಲೀನವಾದವು.

ಮರು ವರ್ಷವು(2006) ಸಹ ಉಲಿಯಕ್ಕಿ ತನ್ನ ಗೂಡನ್ನು ಇದೆ ರೀತಿ ಕಟ್ಟಿತು. ಈ ಬಾರಿ ನಾಲ್ಕು ಮೊಟ್ಟೆಗಳನ್ನು ಇಡಲಾಗಿತ್ತು. ನಾಲ್ಕೂ ಮೊಟ್ಟೆಗಳು ಒಡೆದು ಮರಿಯಾದವು. ಆದರೆ ಐದನೆ ದಿನ ಒಂದು ಮರಿ ಅಸುನೀಗಿದ್ದು ಕಂಡು ಬಂತು. ತಂದೆ, ತಾಯಿ ತರುತ್ತಿದ್ದ ಆಹಾರದಲ್ಲಿ ಕೊರತೆಯೊ ಅಥವಾ ಉಳಿದ ಮರಿಗಳೊಂದಿಗೆ ಪೈಪೋಟಿಯ ವೈಫಲ್ಯವೊ ಅಂತು ಈ ಮರಿ ಬದುಕಲಿಲ್ಲ. ಆದರೆ ಉಳಿದ ಮರಿಗಳು ಬೆಳೆದು ದೊಡ್ಡವಾಗಿ ಗೂಡನ್ನು ತೊರೆದವು.

2007ರಲ್ಲಿ ಉಲಿಯಕ್ಕಿ ಈ ರೀತಿ ಗೂಡು ಕಟ್ಟಲಿಲ್ಲ?! ಮರುವರ್ಷ 2008ರ ಮೇ ತಿಂಗಳ ಕೊನೆಯಲ್ಲಿ ಮತ್ತೆ ನಮ್ಮ ಮನೆಯ ಬಳಿ ಕಾಣಿಸಿಕೊಂಡಿತು. ಈ ಬಾರಿ ಗೂಡು ಕಟ್ಟಲು ಸುಮಾರು ಹದಿನೈದು ದಿನಗಳು ಬೇಕಾದವು. ನಾಲ್ಕು ಮೊಟ್ಟೆಗಳು ಇಡಲಾಗಿತ್ತು. ಇವೆಲ್ಲ ಒಡೆದು ಮರಿಗಳು ಹೊರ ಬಂದವು. ಆರೋಗ್ಯವಂತವಾಗಿದ್ದ ಮರಿಗಳು ಹತ್ತು ದಿನಗಳು ಕಳೆದ ನಂತರ ಮೈತುಂಬ ಪುಕ್ಕಗಳನ್ನು ಮೂಡಿಸಿಕೊಂಡು ಮುದ್ದಾಗಿ ಕಾನುತ್ತಿದ್ದವು. ಇನ್ನೇನು ನಾಲ್ಕು ದಿನಗಳಲ್ಲಿ ಇವು ಗೂಡನ್ನು ಖಾಲಿ ಮಾಡುತ್ತವೆ ಎಂದು ಕೊಂಡಿದ್ದೆ. ಅಂದು ಭಾನುವಾರ, ಮಧ್ಯಾಹ್ನ ಊಟ ಮಾಡುತ್ತಿರ ಬೇಕಾದರೆ ಉಲಿಯಕ್ಕಿಗಳು ಒಂದೇ ಸಮನೆ ಕೂಗುತ್ತಿದ್ದವು. ಈ ರೀತಿ ಕೂಗುವುದು ಯಾರಾದರು ಗೂಡಿನ ಬಳಿ ಸುಳಿದಾಗ ಮಾತ್ರ. ಆ ಕ್ಷಣದಲ್ಲಿ ಅಲ್ಲಿ ಯಾರು ಇರುತ್ತಾರೆ ಎಂದು ಸುಮ್ಮನಾದೆ. ಊಟವಾದ ಬಳಿಕ ಮತ್ತೆ ಕಿಟಕಿಯ ಬಳಿ ಹೋಗಿ ಇಣುಕಿ ನೋಡಿದೆ. ಕೊಕ್ಕಿನಲ್ಲಿ ಆಹಾರವನ್ನು ಹಿಡಿದಿದ್ದ ಹಕ್ಕಿ. ದೂರದಲ್ಲಿ ತಂತಿಯ ಮೇಲೆ ಕುಳಿತಿತ್ತು. ಗೂಡಿನ ಹತ್ತಿರ ಸುಳಿಯಲು ಹೆದರುತಿತ್ತು. ಸುಮಾರು ಹತ್ತು ನಿಮಿಷವಾದರು ಇದೆ ರೀತಿ ವತರ್ಿಸುತ್ತಿದ್ದ ಹಕ್ಕಿಯನ್ನು ನೋಡಿ ನನಗೆ ಸಂದೇಹ ಉಂಟಾಗಿ ಹೊರಗೆ ಹೋದೆ. ನಾನು ಹೊರ ಹೋದ ತಕ್ಷಣ ಅಲ್ಲಿ ಮಲಗಿದ್ದ ಬೆಕ್ಕೊಂದು ಹೆದರಿ ಕೊಂಡು ಓಡಿತು. ಆ ಗಿಡದಲ್ಲಿ ಮರಿಗಳಿರಲಿ, ಗೂಡು ಕಟ್ಟಿದ್ದ ಗುರುತು ಸಹ ಇರಲಿಲ್ಲ.ಸಂಜೆಯವರೆಗು ಹಕ್ಕಿಗಳು ಕೊಕ್ಕಿನಲ್ಲಿ ಆಹಾರವನ್ನು ಹಿಡಿದು ತಮ್ಮ ಮರಿಗಳನ್ನು ಹುಡುಕುತ್ತಿದ್ದವು.


ಇಷ್ಟಾದರು ಈ ಹಕ್ಕಿ ಪಾಟಿನಲ್ಲಿಟ್ಟಿದ್ದ ಗಿಡವನ್ನೇಕೆ ಗೂಡು ಕಟ್ಟಲು ಆಯ್ಕೆ ಮಾಡಿಕೊಂಡಿತು ಎಂದು ಆಶ್ಚರ್ಯವಾಗುತ್ತದೆ. ಇದಕ್ಕೆ ಕಾರಣಗಳಿವೆ. ಕೆಲವು ಚಿಕ್ಕಚಿಕ್ಕ ಪ್ರಾಣಿ ಮತ್ತು ಪಕ್ಷಿಗಳು ಮನುಷ್ಯನ ಸಾಮೀಪ್ಯದಲ್ಲಿ ಜೀವಿಸಲು ಬಯಸುತ್ತವೆ. ಏಕೆಂದರೆ ಇವುಗಳಿಗೆ ಶತ್ರುಗಳಾದ ಹಾವು, ಓತಿ, ಮುಂಗುಸಿಯಂತಹ ಪ್ರಾಣಿಗಳು ಮನುಷ್ಯನಿಗು ಶತ್ರುಗಳು. ಮನುಷ್ಯ ಇಂತಹ ಪ್ರಾಣಿಗಳನ್ನು ತನ್ನ ಮನೆಯ ಬಳಿ ಸುಳಿಯಲು ಬಿಡಲಾರ. ಇದರ ಲಾಭಕ್ಕಾಗಿ ಚಿಕ್ಕಚಿಕ್ಕ ಪ್ರಾಣಿ ಮತ್ತು ಪಕ್ಷಿಗಳು ಮನುಷ್ಯನ ಸಾಮೀಪ್ಯದಲ್ಲಿ ಜೀವಿಸಲು ಬಯಸುತ್ತವೆ. (ಹಾಗೆಂದು ಈ ಪ್ರಾಣಿ, ಪಕ್ಷಿಗಳು ಅಪಾಯದಿಂದ ಸಂಪೂರ್ಣವಾಗಿ ಮುಕ್ತವಾಗುವುದಿಲ್ಲ. ಕಾಗೆ, ಮೈನಾ, ಬೆಕ್ಕಿನಂತಹ ಪ್ರಾಣಿಗಳ ಕಣ್ಣು ತಪ್ಪಿಸಿ ಬದುಕಬೇಕು)

ಏರುತ್ತಿರುವ ಜನಸಂಖ್ಯೆಯಿಂದಾಗಿ ನಮ್ಮೊಳಗೆ ಅತೀವ ಪೈಪೋಟಿಯುಂಟಾಗಿದೆ. ಕೆಲವು ವರ್ಷದ ಹಿಂದಿನವರೆಗು, ಜನ ಮನೆಯೆಂದರೆ ಒಂದಿಷ್ಟು ಜಾಗವನ್ನು ಕೈತೋಟಕ್ಕಾಗಿ ಮೀಸಲಾಗಿಡುತ್ತಿದ್ದರು. ಆದರೆ ಇಂದು ಭಾರತ ದೇಶದ ಬೆಂಗಳೂರಿನಂಥ ಮಹಾನಗರಗಳಲ್ಲಿ ಚದರ ಅಡಿಯು ಸಾವಿರಾರು ರೂಪಾಯಿ ಬೆಲೆ ಬಾಳುತ್ತವೆ. ಇಂಥ ಜಾಗಗಳಲಿ ಗಿಡ, ಮರ ಬೆಳಸಿದರೆ ಅದು ಮೂರ್ಖತನ ಎನ್ನುವಂತಾಗಿದೆ. ಹೀಗೆ ತನ್ನ ನೆಲೆಯನ್ನು ಕಳೆದು ಕೊಳ್ಳುತ್ತಿರುವ ಉಲಿಯಕ್ಕಿ ಯಂತಹ ಹಕ್ಕಿಗಳು ಪಾಟಿನಲ್ಲಿಟ್ಟಿರುವ ಗಿಡಗಳಲಿ ಗೂಡನ್ನು ಕಟ್ಟಿ ಬದುಕಿಗಾಗಿ ಹೋರಾಡುತ್ತಿವೆ ಎನ್ನುವುದು ಎಂಥ ವಿಚಿತ್ರವಾದ ಸತ್ಯ!!!!!

Rating
No votes yet

Comments