ಕುಣಿತ ಗೊತ್ತಿಲ್ಲದವರು ರಂಗಸ್ಥಳ ಓರೆ ಎಂದರಂತೆ

ಕುಣಿತ ಗೊತ್ತಿಲ್ಲದವರು ರಂಗಸ್ಥಳ ಓರೆ ಎಂದರಂತೆ

ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು [http://www.prajavani.net/nov232005/35373200501123.php|ಮುಂದಿಟ್ಟರು]. ಅದಕ್ಕೆ ಪ್ರತಿಕ್ರಿಯೆಯಾಗಿ [http://www.prajavani.net/dec142005/37588200501214.php|ಚ. ಹ. ರಘುನಾಥ] ಅವರು ಸದ್ಯಕ್ಕೆ ಅನುವಾದದ ತಂತ್ರಾಂಶ ತುಂಬ ದೂರದ ಕನಸು. ಅತೀ ಅಗತ್ಯವಾಗಿ ಆಗಬೇಕಾದ ಇತರೆ ಕೆಲಸಗಳೇ ಬಾಕಿ ಇವೆ ಎಂದು ಬರೆದರು. ಈ ವಿಷಯವನ್ನು ನಾನೂ ಒಪ್ಪುತ್ತೇನೆ. ರಘುನಾಥ ಅವರು ತಮ್ಮ ಮಾತಿಗೆ ಉದಾಹರಣೆಯಾಗಿ ಕನ್ನಡದಲ್ಲಿ ಇನ್ನೂ ಹಲವಾರು ರೀತಿಯ ಕೀಲಿಮಣೆಗಳು ಚಾಲ್ತಿಯಲ್ಲಿರುವುದನ್ನು ಪ್ರಸ್ತಾಪಿಸಿದರು. ಹಾಗೆಯೇ ಹಲವರು ಇಂಗ್ಲಿಶ್ ಲಿಪಿಯಲ್ಲಿ ಕನ್ನಡವನ್ನು ಬರೆದು (ಟೈಪಿಸಿ) ಇಮೈಲ್ ಮಾಡುವುದನ್ನು ಪ್ರಸ್ತಾಪಿಸಿದರು. ಅವರ ಪ್ರಕಾರ ಕನ್ನಡದಲ್ಲಿ ಬೆರಳಚ್ಚು ಮಾಡುವುದನ್ನು ಕಲಿಯುವುದು ಒಂದು ಹೆಚ್ಚಿನ ಕೆಲಸ. ನಾನು ಕೇಳುತ್ತೇನೆ -"ನೀವು ಹುಟ್ಟುವಾಗ ಇಂಗ್ಲಿಶ್ ಕೀಲಿಮಣೆಯನ್ನು ಕಲಿತುಕೊಂಡೇ ಹುಟ್ಟಿ ಬಂದಿರೇ? ಇಂಗ್ಲಿಶ್ ಕೀಲಿಮಣೆ ಕಲಿಯುವುದು ನಿಮಗೆ ಕಷ್ಟವಾಗಲಿಲ್ಲ. ಅದು ಒಂದು ಹೆಚ್ಚಿನ ಕೆಲಸವಾಗಲಿಲ್ಲ. ಕನ್ನಡದ ಕೀಲಿಮಣೆ ಕಲಿಯುವುದು ಮಾತ್ರ ಯಾಕೆ ಹೆಚ್ಚಿನ ತೊಂದರೆಯ ಕೆಲಸ ಎಂದೆನಿಸುತ್ತದೆ?". ರಘುನಾಥ ಅವರ ಮಾತುಗಳಿಗೆ ನನ್ನ ವಿಶೇಷವಾದ ಅಡ್ಡಿಯೇನಿಲ್ಲ.

ಈಗ [http://www.prajavani.net/dec212005/38394200501221.php|ಸುಭಾಷ್ ಹೂಗಾರ] ಅವರ ಪ್ರತಿಕ್ರಿಯೆಯನ್ನು ಗಮನಿಸೋಣ. ಅವರ ಲೇಖನದಲ್ಲಿ ಏನೇನೂ ಮಾಹಿತಿಯಿಲ್ಲ. ಕೇವಲ ಆರಾಮ ಕುರ್ಚಿ ತನಿಖಾವರದಿ ಎನ್ನಲು ಅಡ್ಡಿಯಿಲ್ಲ. ಒಂದು ಲೇಖನ ಬರೆಯುವವರು ಮೂಲಭೂತವಾದ ಅಧ್ಯಯನ ಮಾಡಬೇಕು ಎಂಬ ಮೂಲಭೂತವಾದ ಸಿದ್ಧಾಂತವನ್ನೇ ಹೂಗಾರರು ಕಲಿತಿಲ್ಲ ಎನ್ನುವುದು ಅವರ ಲೇಖನದಿಂದ ವೇದ್ಯವಾಗುತ್ತದೆ. ಕನ್ನಡವನ್ನು ಗಣಕದಲ್ಲಿ ಅಳವಡಿಸಲು ಎಷ್ಟೆಲ್ಲ ಕೆಲಸಗಳು ನಡೆದಿವೆ, ಎಷ್ಟೆಲ್ಲ ತಂತ್ರಾಂಶಗಳು ಲಭ್ಯವಿವೆ - ಈ ವಿಷಯಗಳ ಬಗ್ಗೆ ಸ್ವಲ್ಪವೂ ಮಾಹಿತಿ ಸಂಗ್ರಹಿಸದೆ ಬರೆದಿದ್ದಾರೆ. ಕೊನೆಯಲ್ಲಿ ಬರೆಯುತ್ತಾರೆ -"ಆದರೆ, ಸದ್ಯಕ್ಕೆ ಕನ್ನಡ ಪದಗಳನ್ನು ಇಂಗ್ಲಿಶ್ ಅಕ್ಷರಗಳ ಮೂಲಕ ಬರೆಯಬಹುದು ಎನ್ನುವ ಸಲಹೆ ಸೂಕ್ತವೆನ್ನಿಸುತ್ತದೆ". ಸ್ವಾಮಿ ಹೂಗಾರರೆ, ನಿಮಗೆ ವಿಷಯಜ್ಞಾನವಿಲ್ಲದಿದ್ದರೆ ಸುಮ್ಮನೆ ಬಾಯಿಮುಚ್ಚಿ ಕುಳಿತುಕೊಳ್ಳಿ. ಕನ್ನಡವನ್ನು ಇಂಗ್ಲಿಶ್ ಮೂಲಕ ಬರೆಯಬೇಕಾದ ಕಾಲ ಎಂದೋ ಕಳೆದುಹೋಗಿದೆ. [http://www.prajavani.net/may192004/wedi.asp|ಪ್ರಜಾವಾಣಿ ಪತ್ರಿಕೆಯಲ್ಲೇ] ಈ ಬಗ್ಗೆ ಸವಿವರವಾದ ಲೇಖನ ಒಂದು ವರ್ಷದ ಹಿಂದೆಯೇ ಬಂದಿತ್ತು (ಆ ಲೇಖನ ಚಿತ್ರಗಳ ಸಹಿತ [http://www.bhashaindia.com/Patrons/Kannada/kannadaonwindows.htm?lang=kn|ಇಲ್ಲಿದೆ]). ನಿಮಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸಲು ಗೊತ್ತಿಲ್ಲವೆಂದಾದರೆ ಅದು ಸಾಧ್ಯವೇ ಇಲ್ಲವೆಂಬಂತಹ ಹೇಳಿಕೆ ನೀಡಬೇಡಿ. ಪ್ರಜಾವಾಣಿ ಪತ್ರಿಕೆಯನ್ನು ಕನಿಷ್ಠ ೪೦ ಲಕ್ಷ ಮಂದಿ ಓದುತ್ತಾರೆ. ಇಷ್ಟು ಜನರನ್ನು ತಪ್ಪು ದಾರಿಗೆಳೆಯಬೇಡಿ. ಲೇಖನ ಬರೆಯುವ ಮೊದಲು ಸ್ವಲ್ಪ ಸಂಶೋಧನೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ.

ಸಿಗೋಣ,
ಪವನಜ

Rating
No votes yet

Comments