ಕುತ್ಯಾರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ
ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪಕುಲಸಚಿವರಾಗಿರುವ ಶ್ರೀ ಪ್ರಭಾಕರ ನೀರ್ಮಾರ್ಗ ಅವರು ಕಳೆದ ಎರಡು- ಮೂರು ದಶಕಗಳಿಂದ ಆಧುನಿಕ ಕನ್ನಡ ಕಾದಂಬರಿಗೆ ತಮ್ಮದೇ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತ ಬಂದವರು. ಇವರ ಲೇಖನಿಯಿಂದ ಹರಿದುಬಂದ ಸುಮಾರು ಹದಿನಾಲ್ಕು ಕಾದಂಬರಿಗಳು ಕರಾವಳಿಯ ಸಾಂಸ್ಕೃತಿಕ ಬಹುತ್ವವನ್ನು ಹಲವು ವಿನ್ಯಾಸಗಳ ಮೂಲಕ ಪ್ರಕಟಗೊಳಿಸಿವೆ. ಇವರ ಬಹುತೇಕ ಬರಹಗಳು ಶಾಸ್ತ್ರೀಂii ಅನ್ನುವ ನಿರ್ಧಿಷ್ಟ ಚೌಕಟ್ಟಿಗೆ ಒಳಪಡದೆ ಕರಾವಳಿಯ ಮಣ್ಣಿನ ಗುಣವನ್ನು ಹೊರಸೂಸಿವೆ. ಸಾಮಾಜಿಕ ಸಂಬಂಧಗಳು ಮತ್ತು ಸ್ಥಿತಿಗತಿಗಳನ್ನು ತಳಮಟ್ಟದಿಂದ ನೋಡುವ ಪ್ರಯತ್ನ ಇವರ ಕಾದಂಬರಿಗಳಲ್ಲಿ ಹಾಸುಹೊಕ್ಕಾಗಿವೆ. ಹೀಗೆ ಪ್ರಾದೇಶಿಕ ಸಂಸ್ಕೃತಿಯ ತಾತ್ವಿಕತೆಯ ನೆಲೆಯಲ್ಲಿ ಇವರ ಕಾದಂಬರಿಗಳು ಅಧ್ಯಯನಯೋಗ್ಯವೆನಿಸಿವೆ.
ಕಾದಂಬರಿಗಳಲ್ಲಿ ಪ್ರಾದೇಶಿಕ ಸಂಸ್ಕೃತಿ (ನೀರ್ಮಾರ್ಗರ ಕಾದಂಬರಿಗಳ ಹಿನ್ನೆಲೆಯಲ್ಲಿ) ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವು ಉಡುಪಿ ಜಿಲ್ಲೆಯ ಕುತ್ಯಾರಿನ ಪರಶುರಾಮ ಕ್ಷೇತ್ರದ ಭಾರ್ಗವ ಭವನದಲ್ಲಿ ಬರುವ ಜನವರಿ ೧೬ರಂದು ಶನಿವಾರ ನಡೆಯಲಿದೆ. ಸಾಹಿತ್ಯಾಸಕ್ತರ ಬಳಗ, ಮಂಗಳೂರು, ಸೈಂಟ್ ಮೇರಿಸ್ ಪ್ರಥಮದರ್ಜೆ ಕಾಲೇಜು ಶಿರ್ವ ಮತ್ತು ಕುತ್ಯಾರಿನ ಪರಶುರಾಮ ಕ್ಷೇತ್ರದ ಆಶ್ರಯದಲ್ಲಿ ಈ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ಕರಾವಳಿಯ ಜನಜೀವನವನ್ನು, ಅನನ್ಯತೆಯನ್ನು ಬಿಂಬಿಸುವ ಕಾದಂಬರಿಗಳಲ್ಲಿ ಪ್ರಕಟಗೊಂಡ ಪ್ರಾದೇಶಿಕ ಸಂಸ್ಕೃತಿಯ ಆಯಾಮಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಪ್ರಭಾಕರ ನೀರ್ಮಾರ್ಗರ ಕಾದಂಬರಿಗಳನ್ನು ಮರುಓದಿಗೆ ಒಳಪಡಿಸಲು ಪ್ರಯತ್ನಿಸುವುದು ಇಲ್ಲಿನ ಕೇಂದ್ರ ಕಾಳಜಿಯಾಗಿದೆ. ಅಂದು ಬೆಳಿಗ್ಗೆ ಮುಂಬೈನ ಉದ್ಯಮಿ ವಿವೇಕ್ ಶೆಟ್ಟಿ ಈ ವಿಚಾರ ಸಂಕಿರಣವನ್ನು ಅಧಿಕೃತವಾಗಿ ಉದ್ಘಾಟಿಸದ್ದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ ಕೆ. ಂನ್ನಪ್ಪಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜಾನಪದ ವಿದ್ವಾಂಸರಾದ ಪ್ರೊ. ಅಮೃತ ಸೋಮೇಶ್ವರ ಅವರು ಆಶಯ ಭಾಷಣ ಮಾಡಲಿದ್ದಾರೆ. ಕಾಪು ವಿಭಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್,ಶಿರ್ವದ ಸೈಂಟ್ ಮೇರಿಸ್ ಕಾಲೇಜಿನ ಪ್ರಾಂಶುಪಾಲ ಡಾ ಜೋನ್ ಕ್ಲಾರೆನ್ಸ್ ಮಿರಾಂಡಾ, ಕುತ್ಯಾರಿನ ಪರಶುರಾಮ ಕ್ಷೇತ್ರದ ದರ್ಮದರ್ಶಿ ಪಂ. ಶಂಭುದಾಸ್, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಚಿದ ಶೆಟ್ಟಿ ಸಮಾರಂಭದ ಮುಖ್ಯ ಅತಿಥಿಗಳಾಗಿರುತ್ತಾರೆ. ನಂತರ ನಡೆಯುವ ಮೊದಲ ಗೋಷ್ಠಿಯಲ್ಲಿ ಕಾದಂಬರಿಗಳಲ್ಲಿ ಪ್ರಾದೇಶಿಕ ಸಂಸ್ಕೃತಿಯ ನಿರೂಪಣೆ ಎಂಬ ವಿಷಯದ ಕುರಿತು ಡಾ ಯು. ಮಹೇಶ್ವರಿ, ನೀರ್ಮಾರ್ಗರ ಕಾದಂಬರಿಗಳಲ್ಲಿ ಪ್ರಕಟಗೊಂಡ ಸಂಸ್ಕೃತಿಯ ಸ್ವರೂಪ ಎಂಬ ವಿಷಯದ ಕುರಿತು ಶ್ರೀಮತಿ ಸಾಯಿಗೀತಾ, ನೀರ್ಮಾರ್ಗರ ಕಾದಂಬರಿಗಳಲ್ಲಿ ಪ್ರಕಟಗೊಂಡ ಜಾನಪದ ಜಗತ್ತು ಎಂಬ ವಿಷಯದ ಕುರಿತು ವಿಶ್ವನಾಥ ಬದಿಕಾನ ಪ್ರಬಂಧ ಮಂಡಿಸಲಿದ್ದಾರೆ. ಕಿಶೋರ್ ಕುಮಾರ್ ರೈ ಶೇಣಿ ಗೋಷ್ಠಿಯ ಸಮನ್ವಯಕಾರರಾಗಿರುತ್ತಾರೆ.
ಈ ಸಂದರ್ಭದಲ್ಲಿ ಪ್ರಭಾಕರ ನೀರ್ಮಾರ್ಗರ ಹದಿನೈದನೇ ಕಾದಂಬರಿ ಕುಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಮ್ ಮೋಹನ ಆಳ್ವ ಬಿಡುಗಡೆಗೊಳಿಸಲಿದ್ದು ಮಂಗಳೂರು ವಿ.ವಿ ಸಿಂಡಿಕೇಟ್ ಸದಸ್ಯ ಪಿ.ವಿ ಮೋಹನ್ ಸಮಾರಂಭದ ಮುಖ್ಯ ಅತಿಥಿಗಳಾಗಿರುತ್ತಾರೆ. ನಂತರ ನೀರ್ಮಾರ್ಗರೊಂದಿಗೆ ಮುಕ್ತ ಸಂವಾದ ನಡೆಯಲಿದ್ದು ಇದರಲ್ಲಿ ಕೆ. ಎಲ್ ಕುಂಡಂತಾಯ, ಡಾ. ಕೆ. ಎಂ ಲೋಕೇಶ್, ರಘುರಾಮ ಶೆಟ್ಟಿ, ಭವಾನಿ ಶಂಕರ್, ಗಣೇಶ್ ಅಮೀನ್ ಸಂಕಮಾರ್, ಭಾಲಕೃಷ್ಣ ಶೆಟ್ಟಿ, ಮುದ್ದು ಮೂಡುಬೆಳ್ಳೆ ಮೊದಲಾದವರು ಭಾಗವಹಿಸಲಿದ್ದಾರೆ. ವಾಮನ ನಂದಾವರ ಸಂವಾದದ ಅಧ್ಯಕ್ಷತೆ ವಹಿಸಲಿದ್ದು ದುಗ್ಗಪ್ಪ ಕಜೆಕಾರ್ ಸಮನ್ವಯಕಾರರಾಗಿರುತ್ತಾರೆ. ಅಪರಾಹ್ನ ನಡೆಯುವ ಎರಡನೇ ಗೋಷ್ಠಿಯಲ್ಲಿ ನೀರ್ಮಾರ್ಗರ ಕಾದಂಬರಿಗಳಲ್ಲಿ ಕರಾವಳಿಯ ಪ್ರಾದೇಶಿಕ ಇತಿಹಾಸ ಎಂಬ ವಿಬಾರದ ಕುರಿತು ಬಿ. ಆನಾರ್ದನ ಭಟ್ ಹಾಗೂ ನೀರ್ಮಾರ್ಗರ ಕಾದಂಬರಿಗಳಲ್ಲಿ ಮೌಲ್ಯಗಳ ಪಲ್ಲಟ ಎಂಬ ವಿಷಯದ ಕುರಿತು ಎಚ್ ರಮೇಶ್ ಕೆದ್ಲಾಯ ಪ್ರಬಂದ ಮಂಡಿಸಲಿದ್ದಾರೆ. ಡಾ ಗಣನಾಥ ಎಕ್ಕಾರು ಗೋಷ್ಠಿಯ ಸಮನ್ವಯಕಾರರಾಗಿರುತ್ತಾರೆ. ನೀರ್ಮಾರ್ಗರ ಕಾದಂಬರಿ: ಯುವ ಸ್ಪಂದನ ಎಂಬ ಮೂರನೇ ಗೋಷ್ಠಿಯಲ್ಲಿ ನೀರ್ಮಾರ್ಗರ ತಂಬಿಲ ಕಾದಂಬರಿಯ ಕುರಿತು ಕು ಸಂಧ್ಯಾ ಶೆಣೈ ಹಾಗೂ ಧೀಂಗಿಣ ಕಾದಂಬರಿಯ ಕುರಿತು ಕು ಸುಮಂಗಲಾ ಪ್ರಬಂಧ ಮಂಡಿಸಲಿದ್ದಾರೆ. ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಗೋಷ್ಠಿಯ ಸಮನ್ವಯಕಾರರಾಗಿರುತ್ತಾರೆ.
ಸಂಜೆ ನಡೆಯುವ ಸಮಾರೋಪ ಸಮರಂಭದಲ್ಲಿ ಮಂಗಳಗಂಗೋತ್ರಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ ಬಿ. ಶಿವರಾಮ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದು ಶಿರ್ವದ ಎಮ್ ಎಸ್ ಆರ್ ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವಿಚಾರ ಸಂಕಿರಣದ ಅಂಗವಾಗಿ ಕರಾವಳಿಯ ಸಾಂಸ್ಕೃತಿಕ ಗುರುತುಗಳನ್ನು ಅನಾವರಣಗೊಳಿಸುವ ವಸ್ತು ಪ್ರದರ್ಶನ ಮತ್ತು ವೀಡಿಯೋ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮುಖ್ಯವಾಗಿ ಸಾಹಿತ್ಯಾಸಕ್ತ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಗಮನದಲ್ಲಿರಿಸಿಕೊಂಡು ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬಯಸುವ ಆಸಕ್ತರು kannada@sify.comಈ ವಿಳಾಸಕ್ಕೆ ಮೇಲ್ ಮಾಡಬಹುದು
Comments
ಉ: ಕುತ್ಯಾರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ
In reply to ಉ: ಕುತ್ಯಾರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ by sankru
ಉ: ಕುತ್ಯಾರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ