ಕುರಿತೋದದೆಯುಂ ಕಾವ್ಯಪ್ರಯೋಗಪರಿಣಿತ ಮತಿಗಳ್

ಕುರಿತೋದದೆಯುಂ ಕಾವ್ಯಪ್ರಯೋಗಪರಿಣಿತ ಮತಿಗಳ್

ಎಲ್ಲ ಹಳ್ಳಿಗಳಲ್ಲಿಯೂ ಇರುವಂತೆ ನಮ್ಮ ಊರಿನಲ್ಲಿಯೂ, ಊರಿನ ಮಧ್ಯದಲ್ಲಿ ಒಂದು ದೇವಸ್ಥಾನ ಇದೆ. ಅದು ಪ್ರಸನ್ನ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ. ದೇವಸ್ಥಾನದ ಮುಂದೆ ವಿಶಾಲವಾದ ಕಲ್ಯಾಣಿ. ಸುತ್ತಲೂ ಬ್ರಾಹ್ಮಣರ ಮನೆಗಳು. ಒಂದು ಸಾಲಿನಲ್ಲಿ ಎಂಟು ಮತ್ತೊಂದು ಸಾಲಿನಲ್ಲಿ ಆರು ಮನೆಗಳು.

ದೇವಸ್ಥಾನದ ಎದುರಿಗೆ ಒಂದು ಮನೆ, ದೇವಸ್ಥಾನಕ್ಕೆ ನೇರ ಹಿಂದೆ ಒಂದು ಮನೆ. ಹೀಗಿತ್ತು ನನ್ನ ಸ್ವಗ್ರಾಮವಾದ ವೆಂಕಟಯ್ಯನ ಛತ್ರ. ಈ ಊರಿಗೆ ಸುಮಾರು ೪೦೦ ವರ್ಷಗಳ ಇತಿಹಾಸ ಇದೆ ಎಂದು ನನ್ನ ತಂದೆ ತಾಯಿಯಿಂದ ತಿಳಿದಿದ್ದೆ. ಶ್ರೀ ವೆಂಕಟಯ್ಯಂಗಾರ್ ಎಂಬುವರು ಇಲ್ಲಿ ಬಂದು ದೇವಸ್ಥಾನ ಕಲ್ಯಾಣಿ ಮತ್ತು ಅಗ್ರಹಾರವನ್ನು ನಿರ್ಮಿಸಿ ಅಲ್ಲಿ ಬ್ರಾಹ್ಮಣರ ಕುಟುಂಬಗಳು ವಾಸಿಸಲು ಅನುಕೂಲ ಮಾಡಿ ಈ ಊರನ್ನು ಕಟ್ಟಿದರು ಮತ್ತು ಅದರಿಂದಲೇ ಇದಕ್ಕೆ ವೆಂಕಟಯ್ಯನ ಛತ್ರ ಎಂಬ ಹೆಸರು ಬಂತು ಎಂಬುದು ಈ ಗ್ರಾಮದ ಇತಿಹಾಸದಿಂದ ತಿಳಿದು ಬರುತ್ತದೆ.

ಅಗ್ರಹಾರದ ಹಾಗೆಯೇ ಆ ಊರಿನಲ್ಲಿ ಬ್ರಾಹ್ಮಣರಿಗೆ ಮತ್ತು ದೇವಸ್ಥಾನಕ್ಕೆ ದತ್ತಿ ಬಿಟ್ಟ ಜಮೀನುಗಳನ್ನು ಸಾಗುವಳಿ ಮಾಡಲು ರೈತಾಪಿ ಜನರು ಸಹಾ ಇಲ್ಲಿ ಬಂದು ನೆಲೆಸಿದರು. ಅಂದಿನ ಸಾಮಾಜಿಕ ವ್ಯವಸ್ಥೆಯಂತೆ, ಲಿಂಗಾಯಿತರ ಕೇರಿ, ಉಪ್ಪಲಿಗರ ಕೇರಿ, ಬ್ರಾಹ್ಮಣರ ಅಗ್ರಹಾರ ಮತ್ತು ಇತರೇ ಚಾತಿಯವರಿಗೆ ಬೇರೆ ಬೇರೆ ಕೇರಿಗಳು ಇದ್ದವು, ನಾನು ಈ ಊರಿನಲ್ಲಿ ನನ್ನ ಬಾಲ್ಯವನ್ನು ಕಳೆದ ಸಮಯದಲ್ಲೂ ಸಹಾ ಈ ಎಲ್ಲಾ ಕೇರಿಗಳು ಇದ್ದುದ್ದನ್ನು ಕಂಡಿದ್ದೇವೆ.

ವಿಶೇಷ ಸಂದರ್ಭಗಳಲ್ಲಿ ಹಬ್ಬಹರಿದಿನಗಳಲ್ಲಿ ನಮ್ಮೂರಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಉತ್ಸವಗಳು ನಡೆಯುತ್ತಿದ್ದವು. ಮನೆಗೊಂದಾಳಿನಂತೆ ಎಲ್ಲ ಜಾತಿಯವರೂ ಬಂದು ಈ ಎಲ್ಲಾ ಕಾರ್ಯಕ್ರಮಗಳನ್ನೂ ತುಂಬ ಉತ್ಸಾಹದಿಂದ ನಡೆಸುತ್ತಿದ್ದರು. ಆಗೆಲ್ಲ ಹಳ್ಳಿಯ ಜನ ಹೆಚ್ಚು ಸ್ವಾವಲಂಬಿಗಳಾಗಿದ್ದರು. ಎಲ್ಲದಕ್ಕೂ ಸರ್ಕಾರದ ಸಹಾಯವನ್ನು ಎದುರು ನೋಡುತ್ತಿರಲಿಲ್ಲ. ತಾವಾಗಿಯೇ ಸಾಮಾನು ಸರಂಜಾಮುಗಳನ್ನು ಒದಗಿಸಿಕೊಂಡು, ಮಾಡುವ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿಮುಗಿಸುತ್ತಿದ್ದರು. ಊರಿಗೊಂದು ಗೋಮಾಳ, ಒಂದು ಕೆರೆ ಇದ್ದೇ ಇರುತ್ತಿತ್ತು. ನನ್ನೂರಿನ ಮುಂದೆ ಬಂಡಿಗೆರೆ ಎಂಬ ಕೆರೆ ಇತ್ತು. ಈಗಲೂ ಇದೆ. ಆದರೆ ಅದು ಅಭಿವೃದ್ಧಿಯ ಹೆಸರಿನಲ್ಲಿ ಈಗ ನಡೆಯುತ್ತಿರುವ ಒತ್ತುವರಿ ಮತ್ತು ಇತರ ಅರ್ಥಹೀನ ಕಾರ್ಯಕ್ರಮಗಳಿಗೆ ಬಲಿಯಾಗಿ ಬರಿ ಮೈದಾನವಾಗಿದೆ. ಅದರ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶ. ಈಗ ಬರಡಾಗಿ ದಾರುಣಪರಿಸ್ಥಿತಿಯಲ್ಲಿದೆ.

ಸುಗ್ಗಿ ಕಾಲವಾದ ಮೇಲೆ ಊರಿನವರೆಲ್ಲ ಮನೆಗೊಂದಾಳಿನಂತೆ ಕೂಡಿ ಕೆರೆಯ ಹೂಳೆತ್ತುತ್ತಿದ್ದರು. ಅಲ್ಲಿ ಸಂಗ್ರಹವಾದ ಗೋಡು ಅಂದರೆ ಕೆರೆಯಲ್ಲಿ ತುಂಬಿದ್ದ ಮೆಕ್ಕಲುಮಣ್ಣನ್ನು ಗುಡ್ಡೆ ಮಾಡಿ ಹೊರಕ್ಕೆ ತೆಗೆದು ಕೆರೆಯ ಆಳವನ್ನು ಹೆಚ್ಚಿಸುತ್ತಿದ್ದರು. ಅಲ್ಲಿ ಸಂಗ್ರಹವಾದ ಗೋಡನ್ನು ಹರಾಜು ಮಾಡಲಾಗುತ್ತಿತ್ತು. ಕೆರೆಯ ಮುಂದಿನ ಗದ್ದೆಯವರೇ ಅದನ್ನು ಕೊಂಡು ತಮ್ಮ ತಮ್ಮ ಜಮೀನಿಗೆ ಫಲವತ್ತು ಹೆಚ್ಚಿಸಲು ಉಪಯೋಗಿಸುತ್ತಿದ್ದರು. ಹರಾಜಿನಿಂದ ಬಂದ ಹಣವನ್ನು ಊರೊಟ್ಟಿನ ಹಣ ಎಂದು ಊರಿನ ಪಟೇಲ ಅಥವಾ ಗೌಡನ ಹತ್ತಿರ ಜೋಪಾನವಾಗಿ ಇರಿಸಲಾಗುತ್ತಿತ್ತು. ಈ ಹಣವನ್ನು ಊರಿನ ಯಾವುದಾದರೂ ಪೊದು ಕೆಲಸಕ್ಕೆ ವಿನಿಯೋಗಿಸುತ್ತಿದ್ದರು. ಹೀಗಿತ್ತು ಅಂದಿನ ವ್ಯವಸ್ಥೆ. ಕೆರೆಯ ಹೂಳೆತ್ತಲು ಹಳ್ಳಿಜನ ಸರ್ಕಾರದ ಬಜೆಟ್‍ಗೆ ಕಾಯುತ್ತಿರಲಿಲ್ಲ. ಈ ರೀತಿ ಪೊದು ಕೆಲಸ ಯಾರ ಹಂಗಿಲ್ಲದೇ ವರ್ಷಾವರ್ಷ ನಡೆಯುತ್ತಿತ್ತು. ಇಂಥ ಕೆಲಸಗಳಿಗೆ ಈಗ ಎಷ್ಟೊಂದು ರೀತಿಯ ಫೈಲುಗಳ ಹಾರಾಟ, ಪುಂಡು ರಾಜಕಾರಣಿಯ ಕೈವರಸೆ, ಕಾಂಟ್ರಾಕ್ಟುದಾರನಿಂದ ದರೋಡೆ, ಎಂಬಿತ್ಯಾದಿ ಕಾರ್ಯಕ್ರಮಗಳಿವೆ. ಇಷ್ಟೆಲ್ಲಾ ಮಾಡಿದರೂ ಕಡೆಗೆ ಕಳಪೆ ಕಾಮಗಾರಿಯಿಂದಾಗಿ ಯಾವ ಪ್ರತಿಫಲವೂ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಲಾಯತಸ್ಮೈ ನಮಃ ಎಂದು ಸುಮ್ಮನಾಗಬೇಕಾದ ಹತಾಶ ಸ್ಥಿತಿ.

ನಮ್ಮ ಕಣ್ಣ ಮುಂದೆ ಇದ್ದು ಈಗ ಮಾಯವಾದ ಅಂದಿನ ಸ್ಥಿತಿಯ ಒಂದು ಇಣುಕು ನೋಟವಷ್ಟೆ ಈವರೆಗೂ ನಾನು ಹೇಳಿದ್ದು, ನಾನು ದಾಖಲಿಸಬೇಕಾದ ಮುಖ್ಯ ವಿಷಯ ಇದೋ ಇನ್ನು ಮುಂದೆ, ನಿಮ್ಮ ಕಣ್ಣಮುಂದೆ. ಹೀಗೆಯೇ ಒಂದು ಹಬ್ಬದ ದಿನ, ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಸಂಭ್ರಮ. ವಿಶೇಷ ಪೂಜೆ ದಿನವಿಡೀ ನಡೆಯುತ್ತಲಿತ್ತು. ಅಂದು ಸಂಜೆ ದೇವರಿಗೆ ಅಲಂಕಾರ ಮಾಡಿ, ದೇವಸ್ಥಾನವನ್ನೆಲ್ಲ ಸುಣ್ಣ ಬಳಿದು ಸಿಂಗಾರಮಾಡಿ ಮುಖ್ಯ ಪೂಜೆಗಾಗಿ ಸಜ್ಜು ಮಾಡಿದ್ದರು. ಪೂಜೆ ಪ್ರಾರಂಭವಾಯಿತು. ದೇವಸ್ಥಾನದಲ್ಲಿ ಊರಿನ ಜನವೆಲ್ಲ ಜಮಾಯಿಸಿದ್ದರು. ಗರ್ಭಗುಡಿಯ ಒಳಗೆ ಮುಖ್ಯಪೂಜಾರಿಗಳು ಪೂಜಾವಿಧಿಗಳನ್ನು ಒಂದೊಂದಾಗಿ ಪೂರ್ತಿ ಮಾಡಿ ಮಹಾಮಂಗಳಾರತಿಯ ಘಟ್ಟಕ್ಕೆ ಬಂದರು. ನಮ್ಮೂರಿನ ದೇವಸ್ಥಾನದಲ್ಲಿ ಒಂದು ರಿವಾಜಿತ್ತು. ನಮ್ಮ ವಂಶಜರಿಗೆ ಅಲ್ಲಿ ಮೊದಲ ತೀರ್ಥದ ಮರ್ಯಾದೆ. ಅದಾದ ನಂತರ ದೇವಸ್ಥಾನದ ಹಿಂದಿನ ಮನೆಯರಿಗೆ ಎರಡನೇ ತೀರ್ಥದಮರ್ಯಾದೆ ನಂತರ ಮಿಕ್ಕವರಿಗೆ.

ಮಂಗಳಾರತಿಯ ಘಟ್ಟಕ್ಕೆ ಬಂದ ಪೂಜಾರರು, ಮಂಗಳಾರತಿಯ ನಂತರ ತೀರ್ಥ ಕೊಡಬೇಕಲ್ಲ, ಆಗ ಅಲ್ಲಿಯ ಬ್ರಾಹ್ಮಣ ಗೋಷ್ಠಿಯಲ್ಲಿ ದೇವಸ್ಥಾನದ ಹಿಂದಿನ ಮನೆ ಯಜಮಾನರು ಬಂದಿಲ್ಲ ಎಂಬುದನ್ನು ಗಮನಿಸಿದರು. ಗರ್ಭಗುಡಿಯ ಒಳಗಿಂದ ಹೊರಕ್ಕೆ ಬಂದು ಮುಂದಿನ ಸಾಲಿನಲ್ಲಿ ಆ ದೇವಸ್ಥಾನದ ರಿವಾಜಿನಂತೆ ಎಲ್ಲರಿಗಿಂತ ಮುಂದೆ ನಿಂತು ವೇದ ಘೋಷ ಮಾಡುತ್ತಿದ್ದನನ್ನ ಅಪ್ಪನ ಬಳಿಬಂದರು. ಬಂದು “ಶ್ರೀನಿವಾಸಯ್ಯಂಗಾರ್ಯ ಈ ಹಿಂದಿನ ಮನೆ ಯಜಮಾನರು ಇನ್ನೂ ಬಂದಿಲ್ಲವಲ್ಲ. ಅವರನ್ನು ಬೇಗ ಬರಹೇಳಿ. ಮಹಾಮಂಗಳಾರತಿ ಮಾಡದೇ ಇನ್ನು ತಡ ಮಾಡಲು ಸಾಧ್ಯವಿಲ್ಲ” ಎಂದರು.

ಇದನ್ನು ಕೇಳಿದ ನನ್ನ ಅಪ್ಪ, ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತಿದ್ದ ನಮ್ಮ ಮನೆ ಆಳನ್ನು ಕರೆದು “ಲೋ, ಆ ಕನ್ನಡಕದ ಐನೋರಮನೆಗೆ ಹೋಗಿ ಮಂಗಳಾರತಿಗೆ ಹೊತ್ತಾಯಿತು. ತಕ್ಷಣ ಬರೋಕೆ ಹೇಳು” ಎಂದು ಅಪ್ಪಣೆ ಮಾಡಿದರು. ಆ ಊರಿನಲ್ಲಿ ಎಲ್ಲರಿಗಿಂತ ಮೊದಲು ಕನ್ನಡಕ ಹಾಕಿಕೊಂಡವರು ಆ ಗುಡಿ ಹಿಂದಿನ ಯಜಮಾನರು ಅದಕ್ಕೇ ಊರಿನ ಜನ ಅವರನ್ನು ‘ಕನ್ನಕಡದ ಐನೋರು’ ಎಂದೇ ಕರೆಯುತ್ತಿದ್ದರು. ಅವರ ನಿಜ ನಾಮಧೇಯದ ಪ್ರಸ್ತಾಪ ಇಲ್ಲಿ ಅಪ್ರಸ್ತುತ. ಆ ಊರಿನಲ್ಲಿ ಮೊದಲು ಕಿರಾಣಿ ಅಂಗಡಿ ಇಟ್ಟಿದ್ದ ನನ್ನ ಅಪ್ಪನನ್ನು ಜನ ‘ಅಂಗಡಿ ಐನೋರು’ ಎಂದೇ ಕರೆಯುತ್ತಿದ್ದರು. (ಅಯ್ಯನವರು ಎಂಬ ಶಬ್ದ ಆಡು ಮಾತಿನಲ್ಲಿ ಐನೋರು ಎಂದಾಗಿರಬೇಕು).

ಗುಡಿಯ ಹಿಂದೆಯೇ ಇದ್ದ ಅವರ ಮನೆಗೆ ಓಡಿಹೋಗಿ ತಕ್ಷಣವೇ ತಿರುಗಿ ಬಂದ ನಮ್ಮ ಮನೆ ಆಳು, “ಬುದ್ಧೀ, ಕನ್ನಡಕದ ಐನೋರು ರಾಮಣ್ಯ ಓತ್ತವರಂತೆ, ಈಗಲೇ ಬತ್ತಾರಂತೆ, ಒಸಿತಡೀಬೇಕೆಂತೆ”. ಎಂಬ ಸಂದೇಶವನ್ನು ನನ್ನ ಅಪ್ಪನಿಗೆ ತಿಳಿಸಿದ. ಇಲ್ಲಿವರೆಗೂ ಈ ನಿರೂಪಣೆ ಒಂದು ಸಾಮಾನ್ಯ ಘಟನೆಯ ನಿರೂಪಣೆಯಾಗಿದೆ. ಎಲ್ಲೆಲ್ಲೂ ನಡೆಯುವ ಘಟನೆ. ಇದಕ್ಕೆ ಅತ್ಯಂತ ಮೆರುಗನ್ನು ಕೊಟ್ಟದ್ದು ಮುಂದಿನ ಮಾತು. ನಮ್ಮ ಆಳು ನನ್ನ ಅಪ್ಪನಿಗೆ ಹೇಳಿದ ಈ ಮಾತನ್ನು ಕೇಳಿಸಿಕೊಂಡ ಸುಬ್ಬಪ್ಪ ಎಂಬ ಆ ಊರಿನ ಪ್ರಮುಖರಲ್ಲಿ ಒಬ್ಬರು. ಹೇಳಿದ ಮಾತುಗಳು ಅತ್ಯಂತ ಮಾರ್ಮಿಕ ಮತ್ತು ಅರ್ಥಪೂರ್ಣ. ಅವರ ಮಾತನ್ನು ಅವರ ಹೇಳಿದ ಶೈಲಿಯಲ್ಲಿಯೇ ಹೇಳಿದ್ದೇನೆ.

“ಅಲ್ಲ ಬುದ್ಧಿ, ರಾಮಣ್ಯ, ಅಂದ್ರೇನ

ರಾಮ, ತನ್ನ ತಮ್ಮ ಲಕ್ಸಮಣ ರಾವಣತ್ರ ಏಟು ತಿಂದುಬುಟ್ಟು

ಜ್ಞಾನ ತಪ್ಪಿ ಬಿದ್ದುಬುಟ್ಟಾಗ ಏನಂದ ಏಳಿ.

ರಾಜ್ಯ ಓಗ್ಲಿ, ಎಡ್ತಿ ಓಗ್ಲಿ, ತಮ್ಮ ಸಿಕ್ಕಾನ, ನನ್ ತಮ್ಮ

ಓಗ್ಬುಟ್ರೆ, ನಾನು ಪಿರಾಣ ಬುಟ್‍ಬುಡ್‍ತಿವನಿ ಅನ್ನಿಲ್ವ ಏಳಿ

ಆದ್ರೆ ಈ ಕನ್ನಡಕದ ಐನೋರು ತನ್‍ತಮ್ಮನ ಮೇಲೇ ಕೋರ್ಟಲ್ಲಿ ವ್ಯಾಜ್ಯ ಆಕವ್ರೆ. ಇಂಗ್ ಮಾಡ್ಬುಟ್ಟು ರಾಮಾಣ್ಯ ಓತ್ತವರಲ್ಲ ಇದೇನ ಬುದ್ಧಿ, ಓಸಿ ನೀವೆ ಏಳಿ. ಇದ್ರಲ್ಲೇನಾರ ಅರ್ತ ಇದ್ದೈತಾ?” 

ಕನ್ನಡಕದ ಐನೋರಿಗೂ ಅವರ ತಮ್ಮನಿಗೂ ಆಸ್ತಿಗಾಗಿ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಇದನ್ನು ಕೇಳಿದ ಅಲ್ಲಿದ್ದ ಎಲ್ಲರೂ ಆಶ್ವರ್ಯದಿಂದ ಮೂಕರಾದರು. ಇಷ್ಟಕ್ಕೂ ಸುಬ್ಬಪ್ಪ ಅಕ್ಷರಸ್ಥನಲ್ಲ. ಯಾವ ಶಾಲೆಯಲ್ಲೂ ಕಲಿತವನಲ್ಲ. ಆದರೆ ರಾಮಾಯಣದ ಬಗ್ಗೆ ಅವನಿಗಿದ್ದ ಅರಿವು ಸಂಸ್ಕೃತ ಓದಿದ್ದ, ಅಲ್ಲಿದ್ದ ಬ್ರಾಹ್ಮಣ ಸಮೂಹದಲ್ಲಿ ಯಾರಿಗೂ ಇರಲಿಲ್ಲ.

ನನ್ನ ಅಪ್ಪ, ಸುಬ್ಬಪ್ಪನನ್ನು ಉದ್ದೇಶಿಸಿ;

“ನೀನೇ ನಿಜವಾದ ವಾಲ್ಮೀಕಿ ಸುಬ್ಬಪ್ಪ. ಸಂಸ್ಕೃತ ಓದಿದ್ದೇವೆ, ವೇದ ಓದಿದ್ದೇವೆ ಎಂದು ಬೀಗುವ ನಾವೆಲ್ಲ ಮೂರ್ಖರು. ನಿನ್ನ ಜ್ಞಾನದ ಮುಂದೆ ನಮ್ಮದೆಲ್ಲವನ್ನೂ ನಿವಾಳಿಸಿ ಒಗೆಯಬೇಕು” ಎಂದರು.

ಆ ಗುಂಪಿನಲ್ಲಿ ಅಂದು ನಾನು ಈ ಘಟನೆಗೆ ಮೂಕಪ್ರೇಕ್ಷಕನಾಗಿದ್ದುದ್ದು ನನ್ನ ಅದೃಷ್ಟ ಎಂದೇ ಹೇಳಬೇಕು.

ಈಗ ಹೇಳಿ ಕನ್ನಡಿಗರು “ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮಿತಿಗಳಲ್ಲವೆ?” – ಕವಿರಾಜಮಾರ್ಗಕಾರನ ಮಾತು ಎಷ್ಟು ಸತ್ಯ

Rating
No votes yet

Comments

Submitted by kavinagaraj Mon, 03/10/2014 - 08:07

'ಹೇಳುವುದು ಆಚಾರ, ಮಾಡುವುದು . . . .' - ಇದು ಅನಾದಿ ಕಾಲದಿಂದಲೂ ಪ್ರಚಲಿತ ನಡವಳಿಕೆ! ತಿದ್ದುವವರು ಯಾರು? ಅವರನ್ನು ಅವರೇ ತಿದ್ದಿಕೊಳ್ಳಬೇಕು.