ಕುರುಡ ಯಾರು ?
ಅಂದು ಬೆಳಿಗ್ಗೆ ಎಂದಿಗಿಂತ ತುಸು ಬೇಗನೆ ಎದ್ದಿದ್ದೆ.. ಮನದಲ್ಲಿ ಒಂಥರಾ ಸಂಭ್ರಮದ ವಾತಾವರಣ..ಇಂದಿಗೆ ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷವಾಯ್ತು...ಖುಷಿ ಅದಕ್ಕಲ್ಲ! ಇವತ್ತು ಸಿಗುವ ಬೋನಸ್ ಮತ್ತು ಸಂಬಳದಲ್ಲಾಗುವ ಹೆಚ್ಚಳ...!
ಅದೊಂತರ ನನ್ನ ಪಾಲಿಗೆ ಡಬಲ್ ಧಮಾಕ.. ಅದಕ್ಕೆ ಮನಸ್ಸು ಹುಚ್ಚು ಕೋಡಿಯಾಗಿತ್ತು.. ಬೇಗನೆ ರೆಡಿಯಾಗಿ ಆಫೀಸಿಗೆ ಹೊರಟೆ.
ಬಸ್ಸಿನಿಂದ ಇಳಿದವನೇ ದರ ದರನೆ ಆಫೀಸಿನ ಕಡೆ ಹೆಜ್ಜೆ ಹಾಕಿದೆ. ಆಫೀಸಿಗೆ ಸೇರಿದ ಮೊದಲ ವಾರ ಮಾತ್ರ ಇಷ್ಟು ಬೇಗ ಬಂದಿರಬಹುದೇನೋ..? ಗೊತ್ತಿಲ್ಲ! ಮನಸ್ಸು ಸುಮ್ಮನಿರದೆ ಏನೇನೋ ಪರ್ಸಂಟೇಜ್ ಲೆಕ್ಕದಲ್ಲಿ calculation ಮಾಡುತ್ತಿತ್ತು!!
ಸಾರ್.. ಸಾರ್.. ಯಾರದೋ ಶಬ್ದ ನನ್ನ ಮನಸಿನ ಗುಣಾಕಾರ , ಭಾಗಾಕರಕ್ಕೆ ಭಂಗ ತಂದಿತ್ತು.. ಹಿಂದಿರುಗಿ ನೋಡಿದರೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಚಾಲಕ ಅದೊಂದು ಚೀಟಿ ಹಿಡಿದು ಏನೋ ಕೇಳಕ್ಕೆ ಕೈ ಬೀಸಿ ಕರೆಯುತ್ತಿದ್ದ.
ಸಾರ್ ... ಇಲ್ಲಿ ನಿರ್ಮಲ ಹೈ- ಸ್ಕೂಲ್ ಎಲ್ಲಿ ಬರುತ್ತೆ.. ಆತ ವಿನಮ್ರವಾಗಿ ಕೇಳಿದ.. ಹೌದು ಈ ಅಡ್ರೆಸ್ಸ್ ನಂಗೆ ಗೊತ್ತು... "ಇಲ್ಲಿಂದ .. ಸ್ಟ್ರೈಟ್ ಹೋಗಿ... ಲೆಫ್ಟ್ ... ರೈಟ್...... " ನಾನು ತಡಬಡಿಸಿದೆ.. ಮತ್ತೊಂದು ಸುತ್ತಿನ ನೆನಪು ಮಾಡಿಕೊಂಡು ಪ್ರಯತ್ನಿಸಿದೆ.. "ಸ್ಟ್ರೈಟ್ ಹೋಗಿ .. ಫಸ್ಟ್ ಲೆಫ್ಟ್ ....ಅಲ್ಲ .. ರೈಟ್.... " ಛೆ ! ಅದ್ಯಾಕೋ ಆ ವಿಳಾಸ ಮನಸ್ಸಿಗೆ ಹತ್ತಲೇ ಇಲ್ಲ .. ಅಷ್ಟರಲ್ಲಿ ಆ ದಾರಿಯಲ್ಲಿ ಹಾದು ಬರುತ್ತಿದ್ದ ಕುರುಡನೊಬ್ಬ ನನ್ನ ಮಾತನ್ನು ಕೇಳಿಸಿದವನೇ .."ಸಾರ್ .. ಮುಂದೆ ಸ್ಟ್ರೈಟ್ ಹೋಗಿ ಫಸ್ಟ್ ಲೆಫ್ಟ್ ತಗೊಳ್ಳಿ ಆಮೇಲೆ ರೈಟ್ ತಗೊಳ್ಳಿ.. ಅಲ್ಲೇ ಇದೆ ನಿರ್ಮಲ ಹೈ -ಸ್ಕೂಲ್ ! "
ನನಗೆ ಬೆನ್ನಿಗೆ ಈಟಿಯಿಂದ ತಿವಿದ ಅನುಭವ. ಒಂದು ವರ್ಷದಿಂದ ಇದೇ ದಾರಿಯಲ್ಲಿ ಹೋಗುತ್ತಿದ್ದೇನೆ .. ಬರುತ್ತೇನೆ... ಆದರೂ ನನ್ನಿಂದ ಆ ವಿಳಾಸವನ್ನು ಹೇಳಲಾಗಲಿಲ್ಲ.. ಆದರೆ ಇವನು ಕುರುಡ... ಬರ ಬರನೆ ಹೇಳಿಬಿಟ್ಟ.. ಜಗದ ಪಾಲಿಗೆ ನಾನು ಕಣ್ಣಿದ್ದೂ ಕುರುಡನಾದೆ... ಒಂದು ವರ್ಷದಿಂದ ಹಾದು ಹೋಗುವ ದಾರಿಯ ಅಕ್ಕ ಪಕ್ಕವನ್ನು ಗುರುತಿಸುವಷ್ಟು ವಿವೇಚನೆ ಇಲ್ಲದ ನಾನು .. ವರ್ಷದ ಬೋನಸ್ ಗೆ ಅರ್ಹನೇ...ಮನಸ್ಸು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಲೇ ಇತ್ತು.. ಮನಸಿನ ಸಂಭ್ರಮವು ಮಾಸಿತ್ತು..
ಮುಂದಿನ ಪ್ರತಿಯೊಂದು ಹೆಜ್ಜೆಯೂ ನನಗೆ ಭಾರವಾಗುತ್ತಾ ಹೋಯಿತು..
Comments
ಉ: ಕುರುಡ ಯಾರು ?
ಉ: ಕುರುಡ ಯಾರು ?