ಕುವೆಂಪು ಅಡ್ಡಾಡಿದ ಕುಪ್ಪಳಿಯಲ್ಲಿ...

ಕುವೆಂಪು ಅಡ್ಡಾಡಿದ ಕುಪ್ಪಳಿಯಲ್ಲಿ...

ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವ
ಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಬೇಡ ಅಂತ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ
ಬಸ್ಸು ಕುಪ್ಪಳಿಕ್ರಾಸ್ ಗೆ ನನ್ನ ಇಳಿಸಿದಾಗ ಗಂಟೆ ಮುಂಜಾನೆಯ ಒಂಬತ್ತಾಗಿತ್ತು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ಕುವೆಂಪು ಪ್ರತಿಷ್ಠಾನ, ಕುವೆಂಪು ಅಧ್ಯಯನ ಕೇಂದ್ರ ಕನ್ನಡ ವಿ.ವಿ ಹೀಗೆ ಮೂರು ಸಂಸ್ಥೆಗಳು  ಈ ಕಮ್ಮಟ
ಆಯೋಜಿಸಿದ್ದವು. ಹಾಗೂ ಇದು ಅವರ ಯಶಸ್ವಿ ಮೂರನೇ ವರ್ಷದ ಆಯೋಜನೆ.  ಊಟ ,ತಿಂಡಿ ಗಾಗಿ ತೀರ್ಥಹಳ್ಳಿಯಿಂದ ಬಂದ ಭಟ್ಟರು ಎಲ್ಲ ಶಿಬಿರಾರ್ಥಿಗಳ ತೂಕ ಎರಡು-ಮೂರುದಿನಗಳಲ್ಲಿ ಒಂದೆರಡು ಕೆಜಿ ಹೆಚ್ಚಿಗೆಯಾಗುವಂತೆ ನೋಡಿಕೊಂಡ್ರು....!

ನಮಗೆ ಓದಲು ಹಾಗೂ ನಮಗನಿಸಿದ ಟಿಪ್ಪಣಿ ಬರೆಯಲು ಮೊದಲೇ ಆಯ್ದ ಕತೆಗಳನ್ನು ಕಳಿಸಿಕೊಡಲಾಗಿತ್ತು.
  ಕೇವಲ ಮುವ್ವತ್ತು ಜನರಿಗೆ ಅವಕಾಶ ಅಂತ ಹೇಳಿದ ಆಯೋಜಕರು ಅವಕಾಶ ಕಲ್ಪಿಸಿದ್ದು ಸುಮಾರು ಐವ್ವತ್ತು ಜನರಿಗೆ. ನನ್ನಂತೆ ಪತ್ರಿಕೆ ಓದಿ ಅರ್ಜಿ ಹಾಕಿ
ಬಂದವರು ಕೇವಲ ಏಳೆಂಟು ಜನ ಉಳಿದೆಲ್ಲವರೂ ಆಹ್ವಾನಿತರು. ಅಂದರೆ ಕಾರ್ಯದರ್ಶಿಗಳ ಸ್ನೇಹಿತರು, ಅವರ ಶ್ರೀಮತಿಯರು  ಹೀಗೆ. ಬಹುಪಾಲು ಜನ ಅಧ್ಯಾಪಕರು. ಕತೆಗಳನ್ನು ಚರ್ಚೆ ನಡೆಯುವಾಗಲೇ ಓದುತ್ತಿದ್ದ ಮಹನೀಯರು. ಶಿಬಿರದ ನಿರ್ದೇಶಕರು  ಡಾ. ಕೆ ವಿ ನಾರಾಯಣ ಅವರು ಅವರ ಹೆಂಡತಿ (ದೋಪ್ದಿ ಕತೆಯ ಅನುವಾದಕಿ)ನೂ ಭಾಗವಹಿಸಿದ್ರು. ಉದ್ಘಾಟನೆ ಇತ್ಯಾದಿ ಮುಗಿದು ಶಿಬಿರದ ಆಶಯ ನಾರಾಯಣ ಅವರು ಹೇಳಿದ್ರು.
ಅವರ ಭಾಷೆ ತೂಕದ್ದು  ಬಳಸಿದ ಪದಗಳು ನನ್ನ ತಲೆಮೇಲಿಂದಲೇ ಹಾರಿಹೋದದ್ದೇ ಹೆಚ್ಚು. ನಾನು ಅರಿಕೆ ಮಾಡಿಕೊಂಡೆ..ಸಾದಾ ಸೀದಾ ಭಾಷೆ ಬಳಸಿ ಲೆಕ್ಕ ಪತ್ರ ಬರೆಯುವ/ನೋಡುವ ನನ್ನಂತಹದವರಿಗೆ ಇದು ಅರ್ಥ ಆಗೊಲ್ಲ ಅಂತ. ಬಹುಷ: ನಾರಾಯಣ ಅವರಿಗೆ ಇದು ಅಪಥ್ಯವಾಗಿತ್ತು..ಕಮ್ಮಟ ಮುಗಿಯುವವರೆಗೂ ಶೀತಲಸಮರ
ನಡೆದೇ ಇತ್ತು ನಮ್ಮಿಬ್ಬರ ನಡುವೆ. ನಾರಾಯಣ ಅವರೇ ಕತೆ ಆರಿಸಿದ್ದು ಆ ಕತೆಗಳ ಥೀಮ್ ಹೆಣ್ಣುತನ.ಇದನ್ನು ಬರೆದವರು ಲೇಖಕಿಯರು ಮಾತ್ರಅಲ್ಲ ಪುರುಷರು ಸಹ. ನಮ್ಮನ್ನು ಐದು ಆರು ಜನರ ಗುಂಪಾಗಿ ವಿಂಗಡಿಸಲಾಗುತ್ತಿತ್ತು. ಸುಮಾರು ಅರ್ಧಗಂಟೆ ನಮ್ಮನಮ್ಮಲ್ಲಿ ಚರ್ಚೆ ಮಾಡಿಕೊಂಡು ನಮ್ಮಲ್ಲಿಯೇ ಒಬ್ಬರು ಟಿಪ್ಪಣಿ
ಮಾಡಿಕೊಂಡು ನಮ್ಮ ಗುಂಪಿನ ನಿಲುವು ಕತೆಗಳ ಬಗ್ಗೆ ಹೇಳಬೇಕಾಗುತ್ತಿತ್ತು.ಪೂರಕವಾಗಿ ಉಳಿದವರು ಪ್ರಶ್ನೆ ಕೇಳುತ್ತಿದ್ದರು ಹಲವೊಮ್ಮೆ ನಾರಾಯಣ್ ಅವರೂ ಸಹ ಪ್ರಶ್ನೆಗಳ ಬಾಣ ಬಿಡುತ್ತಿದ್ದರು.ಪ್ರತಿಬಾರಿ ಚರ್ಚೆಗೆ  ಎರಡು ಕತೆ ಕೊಡಲಾಗುತ್ತಿತ್ತು. ನಮ್ಮ ಕನ್ನಡದ ಹೆಸರಾಂತರು ಬರೆದ ಕತೆಗಳು..ನಾ ಓದಿದಾಗ ನನಗನ್ನಿಸಿದ ಭಾವ ಬೇರೆ
ಆದರೆ ಗುಂಪಿನಲ್ಲಿ ಚರ್ಚಿಸಿದಾಗ ಅದು ಹೊಂದುವ ರೂಪವೇ ಬೇರೆ  ಈ ಮಾರ್ಪಾಟು ಅಚ್ಚರಿ ಗೊಳಿಸಿತ್ತು. ಆದರೆ
ಕಥೆಗಳನ್ನು ಮಥಿಸಿ ಮಥಿಸಿ ನೋಡಿದಾಗ ಸಿಗುವ ಆನಂದನೇ ಬೇರೆ...!

ನಾವು ಚರ್ಚಿಸಿದ ಕೆಲವು ಕತೆಗಳು ಹೀಗಿವೆ...

ಮೇಲೂರಿನ ಲಕ್ಷಮ್ಮ.....    ಮಾಸ್ತಿ
ಕರುಳ ಕತ್ತರಿ.......           ಶ್ಯಾಮಲಾ ಬೆಳಗಾಂವಕರ
ಹೊರಟು ಹೋದವನು---   ಡಾ. ವೀಣಾ ಶಾಂತೇಶ್ವರ್
ದೋಪ್ದಿ     -------         ಮೂಲ: ಮಹಾಶ್ವೇತಾ ದೇವಿ
ಕತೆಯಾದಳು ಹುಡುಗಿ--    ಯಶವಂತ  ಚಿತ್ತಾಲ
ದೇವರ ಹೂ------         ಡಾ. ಬೆಸಗರಹಳ್ಳಿ ರಾಮಣ್ಣ
ಶಕುಂತಲೆಯೊಂದಿಗೆ
ಕಳೆದ ಅಪರಾಹ್ನ-------   ವೈದೇಹಿ
ನಾಕನೇ  ನೀರು--           ನಾಗವೇಣಿ

ಕೊನೆಯ ಕತೆಯ ಲೇಖಕಿಯೂ ನಮ್ಮ ಜೊತೆಗಿದ್ರು.ನಮಗೆ ಮೂಡಿಬಂದ ಸಂದೇಹ ಅನುಮಾನ ಪ್ರಶ್ನೆಗಳಿಗೆ ಉತ್ತರಿಸಿದರು. ಹೀಗೆ ಬರೆದವರ ಜೊತೆ ಮುಖಾಮುಖಿ ಯಾಗುವುದು ಹೊಸ ಖುಷಿ ಕೊಟ್ಟಿತು.  ನಾಗವೇಣಿ ತಾವು
ಬೆಳೆದು ಬಂದ ಹಿನ್ನೆಲೆ ಮತ್ತು ಈಗಿನ ದಕ್ಷಿಣಕನ್ನಡ ಜಿಲ್ಲೆಯ ಪರಿಸ್ಥಿತಿ ಹೀಗೆ ವಿವರವಾಗಿ ಚರ್ಚಿಸಿದರು.ಕಮ್ಮಟದ
ಎರಡನೇ ದಿನ ಖ್ಯಾತ ಲೇಖಕ ಕುಂವಿ ಬಂದು ತಮ್ಮ ಅನುಭವ ಹಂಚಿಕೊಂಡಿದ್ದು ವಿಶೇಷವಾಗಿತ್ತು.ನಿರರ್ಗಳವಾಗಿ
ಮಾತಾಡೋ ಕುಂವಿ ಮಾತು ಕೇಳೋದು ಸೊಬಗು.

ಕೇವಲ ಧನಾತ್ಮಕ ಅಂಶ ಮಾತ್ರ ಹೇಳೋದಿಲ್ಲ.ಕಮ್ಮಟದಲ್ಲಿ ಹಲವಾರು ನ್ಯೂನತೆಗಳಿದ್ದವು.ಮುಖ್ಯವಾಗಿ ಅಭ್ಯರ್ಥಿಗಳ ಕೊರತೆ.ನಾ ಉಲ್ಲೇಖಿಸಿದ ಹಾಗೆ ಏಳೆಂಟು ಜನ ಅರ್ಜಿ ಗುಜರಾಯಿಸಿದವರು ಉಳಿದೆಲ್ಲ ಆಹ್ವಾನಿತರು.
ಹೀಗೆ ಬಂದವರು ತಾವೇ ಹೇಳಿಕೊಂಡಹಾಗೆ ಸಾಹಿತ್ಯದಲ್ಲಿ ಆಸಕ್ತಿಇದ್ದವರಲ್ಲ. ಸ್ನೇಹ ಪ್ರೀತಿಗೆ ಒತ್ತಾಯದಿಂದ ಮೂರುದಿನ ಚೇಂಜ್ ಅಂತ ಬಂದವ್ರು. ಕೆಲವರು ಕಾಲೇಜಿನ ಪ್ರೊಫೆಸರ್ರು. ಇನ್ನು ಚರ್ಚೆ ಏಕಮುಖವಾಗಿತ್ತು. ಯಾವಾಗ ಚರ್ಚೆಗೆ ತಳಹದಿಯಾಗಿ ಜಾತಿ ಮತ ಇರುತ್ತದೆಯೋ ಅಲ್ಲಿ ಅರ್ಥಪೂರ್ಣ ಚರ್ಚೆಯಾಗಲು ಸಾಧ್ಯವಿಲ್ಲ.
ಮೇಲಾಗಿ ನಾರಾಯಣ್ ಅವರು ಈಗಿನ ತಲೆಮಾರಿನ ವಸುಧೇಂದ್ರ,ಬೆಳಗೆರೆ,ಸುಮಂಗಲಾ ಮುಂತಾದವರ ಕೃತಿಗಳನ್ನು  ಸೀರಿಯಸ್ ಓದಿಗೆ ತಕ್ಕುದಲ್ಲ ಎಂದು ಅಪ್ಪಣೆ ಕೊಡಿಸಿದರು...! ಇನ್ನು ಭೈರಪ್ಪ ವೈಯುಕ್ತಿಕವಾಗಿ ಉದ್ಧಾರವಾದ್ರು.ನನ್ನ ಪರಿಸ್ಥಿತಿ ಅಭಿಮನ್ಯವಂತಾಗಿತ್ತು. ಕಾದಾಡುವುದು ವ್ಯರ್ಥ ಅಂತ ತಿಳಿದು ಮೌನಕ್ಕೆ ಶರಣಾಗಿದ್ದೆ.
ಓತಪ್ರೋತವಾಗಿ ದಲಿತ,ಸ್ತ್ರೀವಾದ, ಶೋಷಣೆ ಹೀಗೆ ಮಾತು ಹರಿದಿತ್ತು.ಅದು ಕಂಠ ಶೋಷಣೆಯೋ ಅಥವಾ ನನ್ನ
ಕರ್ಣಶೋಷಣೆಯೋ ಗೊತ್ತಾಗಲಿಲ್ಲ.

ಮೇಲಿನ ಎಲ್ಲ ಓರೆ ಕೋರೆಗಳ ನಡುವೆ ನಾ ಮೂರುದಿನ ಹಿತ ಅನುಭವಿಸಿದೆ. ಸುತ್ತ ಚಾಚಿದ ಹಸಿರು, ಆಹ್ಲಾದಕರ ಗಾಳಿ ವಾಹನಗಳ ಹೊಲಸಿಲ್ಲದೆ ನಳನಳಿಸುವ ರಸ್ತೆಗಳು. ಕುವೆಂಪು ಅಡ್ಡಾಡಿದ ದಾರಿ ಅವರ ಸಮಾಧಿ ಇರುವ
ಕವಿಶೈಲ. ಅಲ್ಲಿ ನಾವೆಲ್ಲ ಹಾಡುಹಾಡಿದ ಹುಣ್ಣಿಮೆಯರಾತ್ರಿ...ಮರುದಿನದ ಸೂರ್ಯೋದಯ. ಕುವೆಂಪು ಬಳಸೋ ಎಲ್ಲ ವಸ್ತುಗಳನ್ನು  ಜತನದಿಂದ ಕಾಪಾಡಿ ನೋಡುಗರಿಗೆ ಬೇರೆ ಲೋಕ ಪರಿಚಯಿಸೋ ಕವಿಮನೆ."ಬಾ ಫಾಲ್ಗುಣ ರವಿ...ದರ್ಶನಕೆ" ಬರೆದ ನವಿಲ್ ಗುಡ್ಡದ ಸೊಬಗು..,"ದೇವರು ರುಜು ಮಾಡಿದ" ಬರೆದ ಚಿಬ್ಬಲಗುಡ್ಡೆಯ ತುಂಗೆಯ
ಮನಮೋಹಕ ದೃಶ್ಯ...ಕಣ್ಣುತುಂಬ ತುಂಬಿಕೊಂಡು ನಲಿದೆ.

ಅಲ್ಲೆಲ್ಲೋ ದನಿಮೊಳಗುತ್ತಿತ್ತು..."ನೂರು ಮತದ ಹೊಟ್ಟ ತೂರಿ...ಎಲ್ಲ ತತ್ವದೆಲ್ಲೆ ಮೀರಿ...". ಅವರ ನೆಲದಲ್ಲಿ
ನೆರಳಬುಡದಲ್ಲಿ ಇದ್ದರೇನು..ಜಾತಿ ಪಂಥ ಹೀಗೆ ಭ್ರಾಂತಿಯ ಗೋಡೆ ಕಟ್ಟಿಕೊಂಡು..ಕಮ್ಮಟದ ನೆವದಲ್ಲಿ  ವಿಷಕಾರುತ
ಕುವೆಂಪು ಅವರ ನಿಜ ತತ್ವ ಅರಿಯದೇ ಇರುವ ದನಿಯೂ ಇತ್ತು.     

Rating
No votes yet

Comments