ಕುವೆಂಪು ಹುಟ್ಟಿದ ಊರಿಗೆ, ಮೂವತ್ತು ವರ್ಷಗಳಾದ ಮೇಲೆ ಮತ್ತೆ ಹೋದಾಗ

ಕುವೆಂಪು ಹುಟ್ಟಿದ ಊರಿಗೆ, ಮೂವತ್ತು ವರ್ಷಗಳಾದ ಮೇಲೆ ಮತ್ತೆ ಹೋದಾಗ

ಕುವೆಂಪು - ಚಿತ್ರ ಕೃಪೆ: ಕುವೆಂಪು ಡಾಟ್ ಕಾಂ ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ ಹೋಗಿದ್ದು. ಕುವೆಂಪು ತೀರಿಕೊಂಡರು ಅನ್ನುವ ಸುದ್ದಿ ತಿಳಿದ ದಿನ ಮತ್ತೆ ಆಮೇಲೆ ಹಲವು ದಿನ ನಿಷ್ಕಾರಣವಾಗಿಯೋ ಅನ್ನುವ ಹಾಗೆ ಮನಸ್ಸು ಮಂಕಾಗಿತ್ತು. ನನಗೇನು ಕುವೆಂಪು ಗೊತ್ತಿರಲಿಲ್ಲ. ಅವರ ಜೊತೆ ಮಾತಾಡಿದವನೂ ಅಲ್ಲ. ಆದರೂ ಅವರ ಕಾದಂಬರಿ ಓದಿ ನನ್ನದೇ ಆ ಲೋಕ ಅನ್ನುವ ಹಾಗೆ ಆ ಜನರನ್ನೂ, ಕಾಡನ್ನೂ, ಒಂಟಿ ಮನೆಗಳನ್ನೂ, ಕತ್ತಲು, ಸೂರ್ಯೋದಯ, ಸಂಜೆ, ಎಲ್ಲವನ್ನೂ ಒಳಗೇ ನಿರ್ಮಿಸಿಕೊಂಡಿದ್ದೆ. ಬೇರೆ ಯಾವ ಲೇಖಕರೂ ಹೀಗೆ ಒಂದು ಜಗತ್ತನ್ನೇ ನನಗೆ ಉಡುಗೊರೆಯಾಗಿ ಕೊಟ್ಟಿರಲಿಲ್ಲ. ಅಂಥ ಒಂದು ಜೀವ ಇಲ್ಲವಾಯಿತೇ ಎಂದು ಆಗ ಮಂಕಾಗಿದ್ದೆ ಅನ್ನಿಸುತ್ತದೆ.
ಇರಲಿ. ಇಪ್ಪತ್ತೈದು ವರ್ಷಗಳ ಹಿಂದೆ ಶಿವಮೊಗ್ಗದ ಸುತ್ತಮುತ್ತಲ ಕಾಡುಗಳಲ್ಲಿ ಅಲೆದಾಡಿದ್ದೆಲ್ಲ ಈಗ ಮತ್ತೆ ನೆನಪಿಗೆ ಬಂದಿತ್ತು. ಕುಪ್ಪಳಿಯಲ್ಲಿ ಐದು ದಿನ ಕಳೆಯುತ್ತೇನೆ, ನನ್ನೊಡನೆ ಎಳೆಯ ಮನಸ್ಸುಗಳೂ ಇರುತ್ತವೆ. ಕುವೆಂಪು ಓಡಾಡಿದ ಜಾಗಗಳಲ್ಲಿ ಇವತ್ತಿನ ಕಿರಿಯರೊಡನೆ ಓಡಾಡುತ್ತೇನೆ ಅನ್ನುವ ಹುಮ್ಮಸ್ಸಿನಲ್ಲಿಯೇ ಕುಪ್ಪಳಿಗೆ ಹೋದೆ.
ಹಿಂದೆ ಇದ್ದದ್ದು ಈಗ ಇಲ್ಲ ಎಂದು ಹಲುಬುವುದರಲ್ಲಿ ಅರ್ಥವಿಲ್ಲ. ಇವತ್ತಿನ ಜನಕ್ಕೆ ಇವತ್ತು ಸಿಕ್ಕದ್ದೇ ನಿಜ ಅಂತಲೂ ಗೊತ್ತಿದೆ. ತೀರ್ಥಹಳ್ಳಿಯಲ್ಲಿ ನದಿಯ ದಂಡೆಯ ಮೇಲೇ ಇರುವ ಪ್ರವಾಸಿ ಬಂಗಲೆಗೆ ಹೋದಾಗ ಬೆಳಕು ಹರಿಯುತ್ತಿತ್ತು. ಎಳೆ ಬಿಸಿಲಲ್ಲಿ ತುಂಗೆ ಹರಿಯುವುದು ಕಾಣುತ್ತಿತ್ತು. ಕೇಳುತ್ತಿರಲಿಲ್ಲ. ನದಿಗೆ ಅಡ್ಡಲಾಗಿ ಕಟ್ಟಿದ್ದ ದೊಡ್ಡ ಸೇತುವೆ ಬಿಳಿಯ ಬಣ್ಣ ಬಳಿದುಕೊಂಡು ನದಿಗಿಂತ ತಾನೇ ಗಮನಸೆಳೆಯುವಂತೆ ನಿಂತಿತ್ತು. ಬಿಳಿಯ ಕಮಾನು ಸೇತುವೆ ಕಾಮನಬಿಲ್ಲು ಅಲ್ಲ. ಕಾನೂರು ಹೆಗ್ಗಡತಿಯಲ್ಲಿ ಓದಿದ್ದ ಕಲ್ಲು ಸಾರ ನೆನಪಿಗೆ ಬಂತು. ಹಾಗೆಯೇ ತುಂಗೆಯ ಒಡಲಲ್ಲಿ ನದಿಗೆ ಬಿದ್ದ ಕನಸಿನಂತೆ ಇದ್ದ ಕಲ್ಲುಬಂಡೆಗಳು, ಶತಮಾನಗಳ ಕಾಲ ನೀರಿನ ವಾಹಕ್ಕೆ ಸಿಕ್ಕು ಕಲ್ಪಿಸಿಕೊಳ್ಳಲೂ ಆಗದ, ಆದರೆ ನೋಡಿದ ಕೂಡಲೆ ಇವು ಇರಬೇಕಾದ್ದೇ ಹೀಗೆ ಎಂಬಂಥ ಆಕಾರ ಪಡೆದುಕೊಂಡಿದ್ದ ಕಲ್ಲುಗಳ ಸಂತೆಯನ್ನೂ ನೋಡಲಿಲ್ಲ. ನೆನಪಿನಂದಲೇ ಪುಳಕಿತನಾಗಿ ಕುಪ್ಪಳಿಗೆ ಕಾರಿನಲ್ಲಿ ಆರಾಮವಾಗಿ ಹೋದೆ.
ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ದಾರಿಯ ಎರಡು ಬದಿಯೂ ಹಸಿರೇನೋ ಧಾರಾಳವಾಗಿ ಕಾಣುತ್ತದೆ. ಪರವಾಗಿಲ್ಲ. ಕಾಡು ಇನ್ನೂ ಇದೆ ಮೂವತ್ತು ವರ್ಷವಾದರೂ ಅಂತ ಅಂದುಕೊಂಡೆ. ಸಿಕ್ಕಿತು. ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಗೆ ದಾರಿ ಅನ್ನುವ ಬೋರ್ಡು. ಅದೇ ಮಲೆನಾಡಿನ ಮನೆಯಂಥ ಹೊಸ ಕಟ್ಟಡ. ಮೂವತ್ತು ವರ್ಷದ ಹಿಂದಿನ ನೆನಪು ಕೈ ಕೊಟ್ಟಿತ್ತು. ಅದೇ ಕುವೆಂಪು ಮನೆ ಅಂದುಕೊಂಡೆ. ಅಲ್ಲ, ಅದು ಬೇರೆ ಇದೆ, ಇದು ಪ್ರತಿಷ್ಠಾನದ ಕಟ್ಟಡ. ಅಲ್ಲಿ ನಾನು ಮತ್ತು ಗೆಳೆಯ ಕಲಾವಿದ ಚಂದ್ರಶೇಖರ್ ಸಿಗರೇಟು ಸೇದಲು ಕಾಂಪೌಂಡಿನ ಆಚೆಗೆ ಬಂದೆವು. ಕುವೆಂಪು ಮನೆಯ ಆವರಣದಲ್ಲಿ ಸಿಗರೇಟು ಸೇದಲು ಮನಸ್ಸಾಗಲಿಲ್ಲ. ವಾಚ್ ಮನ್ ಒಬ್ಬಾತ ಇದ್ದ. ಒಮ್ಮೆಗೇ ಒಂದು ನೂರೈವತ್ತು ಹುಡುಗಿಯರು, ಮೂವತ್ತು ನಲವತ್ತು ಗಂಡಸರನ್ನು ಆ ಜಾಗದಲ್ಲಿ ಕಂಡು ಆಶ್ಚರ್ಯವಾಗಿತ್ತೊ? ತೀರ್ಥಹಳ್ಳಿಯ ಬಸ್‌ಸ್ಟ್ಯಾಂಡಿನಲ್ಲೂ ಎಲ್ಲ ಆಟೋದವರೂ ಕುಪ್ಪಳಿಗಾ ಅಂತ ಅವತ್ತು ಬಸ್ಸಿಳಿದವರನ್ನು ವಿಚಾರಿಸುತ್ತಿದ್ದರಲ್ಲ! ಯಾವ ಊರು ಅಂತ ವಿಚಾರಿಸಿಕೊಂಡ. ಮೈಸೂರು ಅಂದೆ. ಚಂದ್ರಶೇಖರ ನನ್ನದು ಬೆಂಗಳೂರು ಅಂದರು. ನೀಟಾಗಿ ಶೇವ್ ಮಾಡಿದ್ದ ಮುಖ. ಮೂವತ್ತರ ಸಮೀಪದ ವಯಸ್ಸು. ಅಚ್ಚುಕಟ್ಟಾಗಿ ಕ್ರಾಪ್ ಮಾಡಿಕೊಂಡಿದ್ದ ತಲೆ. ಪಕ್ಕಾ ಮಲೆನಾಡಿನ ಕೊಂಚ ವಿದ್ಯಾವಂತ ಅನ್ನಿಸುವಂಥ ಮುಖ. ದೊಡ್ಡ ಮನುಷ್ಯರು ಸಾರ್ ಕುವೆಂಪು. ಅವರಿದ್ದ ಜಾಗ ಎಲ್ಲ ಹೋಗಿ ಬನ್ನಿ ಅಂದ. ಆಮೇಲೆ ಇದ್ದಕ್ಕಿದ್ದ ಹಾಗೇ ಕುವೆಂಪು ಪದ್ಯಗಳನ್ನು ಒಂದಾದಮೇಲೆ ಒಂದರಂತೆ ಅದೇ ಆಗ ಓದಿಕೊಂಡವನಂತೆ ಹೇಳ ತೊಡಗಿದ. ಎಪ್ಪತ್ತು ವರ್ಷಗಳ ಹಿಂದಿನ ಪದ್ಯಗಳು ಈ ವಾಚ್‌ಮನ್‌ ಮಾನಪ್ಪನ ಬಾಯಲ್ಲಿ ಕೇಳುತ್ತ ಕಾಡಿಗೆಲ್ಲ ಜೀವ ಬಂದಂತೆ ಅನಿಸಿತು.

ಸಂಜೆ ಅಲ್ಲೆ ಕಾಲಳತೆ ದೂರದಲ್ಲಿರುವ ಗುಡ್ಡಕ್ಕೆ ಹೋದೆವು. ಶಿಬಿರಕ್ಕೆ ಬಂದಿದ್ದ ಮಕ್ಕಳು, ಅಂದರೆ ದೊಡ್ಡವರೂ ಇದ್ದರೆನ್ನಿ. ನಮ್ಮ ಜೊತೆ ಶಿವಾರೆಡ್ಡಿ ಬಂದಿದ್ದರು. ಆತ ಅಲ್ಲಿರುವ ಕುವೆಂಪು ಅಧ್ಯಯನ ಕೇಂದ್ರದ ಜವಾಬ್ದಾರಿ ಹೊತ್ತವರು. ಮೂರು ನಾಲ್ಕು ವರ್ಷಗಳಿಂದ ಕುವೆಂಪು ಅವರ ಮೈ ಮೇಲೆ ಬಂದಿದ್ದಾರೆ. ಕುವೆಂಪು ಬರೆದಿರುವುದನ್ನೆಲ್ಲ ಆ ಸುತ್ತ ಮುತ್ತಲ ಪ್ರದೇಶದಲ್ಲಿ ಸಾಕ್ಷಾತ್ತಾಗಿ ಕಂಡು, ಬಂದವರಿಗೆಲ್ಲ ಕಾಣಿಸಬೇಕು ಅನ್ನುವ ದೀಕ್ಷೆ ಹೊತ್ತಿದ್ದಾರೆ ಶಿವಾರೆಡ್ಡಿ. ಕವಿಮನೆಯ ಹತ್ತಿರದಿಂದ ಕವಿಶೈಲಕ್ಕೆ ನಮ್ಮನ್ನೆಲ್ಲ ಹತ್ತಿಸಿದರು. ಫಾರೆಸ್ಟಿನವರು ಅಚ್ಚುಕಟ್ಟಾಗಿ ಕಲ್ಲಿನ ಮೆಟ್ಟಿಲು ಮಾಡಿದ್ದಾರೆ. ಅಲ್ಲಲ್ಲಿ ಅಷ್ಟಷ್ಟು ದೂರಕ್ಕೆ ಕಲಾವಿದ ಶಿವಪ್ರಸಾದ್ ನಿರ್ಮಿಸಿರುವ ಕಲ್ಲಿನ ಕಂಬಗಳು, ಮಂಟಪಗಳು. ಯಾಕೋ ಆಧುನಿಕ ಪಿಕ್ ನಿಕ್‌ ಜಾಗದಂತಿದೆ ಅನ್ನಿಸಿತು. ರೆಡ್ಡಿ ಹೇಳಿದ್ದೂ ಅದೇ. ಅಚ್ಚುಕಟ್ಟಾದ ಮಣ್ಣಿನ ಕಾಲು ದಾರಿ ಮಾಡಿಸಿ ಅಂತ ಬಡಕೊಂಡೆ ಸಾರ್ ಕೇಳಲಿಲ್ಲ ಅಂತ.
ಹೋಗುತ್ತ ಹೋಗುತ್ತ ಅಗೋ ಅಲ್ಲಿ ಭೂತದ ಸ್ಲೇಟು. ಅದೇ, ಮಲೆನಾಡಿನ ಚಿತ್ರಗಳಲ್ಲಿ ಬರುತ್ತದಲ್ಲ ಕುವೆಂಪು ತಮ್ಮ ಬಾಲ್ಯದಲ್ಲಿ ಕಂಡ ಮುಗ್ಧ ಕಲ್ಪನೆ, ಅದೇ ಭೂತದ ಸ್ಲೇಟು. ಆ ಭೂತ ಕವಿಮನೆಯ ಆಚೆ ಇರುವ ಇನ್ನೊಂದು ಗುಡ್ಡದಲ್ಲಿದ್ದ ಭೂತ ಬಳಸುತ್ತಿತ್ತು. ಆ ಭೂತ ದಿನಾ ಬೆಳಗ್ಗೆ ಹೊತ್ತು ಬಂದು ತನ್ನ ದೊಣ್ಣೆಯಿಂದ ಕಲ್ಲುಬಂಡೆಯ ಮೇಲೆ ಠಣ್ ಎಂದು ಕುಟ್ಟಿ ಕವಿಯ ಅಜ್ಜಯ್ಯನನ್ನು ಎಬ್ಬಿಸುತ್ತಿತ್ತು. ಆ ಬಂಡೆ ನಾಳೆ ತೋರಿಸುತ್ತೇನ ಅಂದರು ರೆಡ್ಡಿ. ಇಗೋ, ಇಲ್ಲಿ ನಿಮ್ಮ ಬಲಗಡೆ ಕಾಣುತ್ತದಲ್ಲ, ಆ ಬಂಡೆಯ ಮೇಲೆ ಬನ್ನಿ. ನಿಶ್ಶಬ್ದವಾಗಿರಿ. ಸಂಜೆಯ ಮೌನ ಮನಸ್ಸಿಗೆ ಇಳಿಯಲಿ. ಇಗೋ ಇಲ್ಲಿ ನಿಂದ ನಾಲ್ಕಡಿ ಎತ್ತರದ ಕಲ್ಲಿದೆಯಲ್ಲ, ಅದೇ ಶಿಲಾತಪಸ್ವಿ. ಆ ಹೆಸರಿನ ಪದ್ಯ ಅಲ್ಲಿ ಗಟ್ಟಿಯಾಗಿ ಓದಿದೆ. ಸಂಜೆ ಇಳಿ ಬೆಳಕಿನಲ್ಲಿ, ನಿಶ್ಶಬ್ದವಾಗಿ ಕೂತ ನೂರು ಎಳೆಯ ಮನಸ್ಸುಗಳ ಒಳಕ್ಕೆ ಆ ಪದ್ಯ ಸರಾಗವಾಗಿ ಇಳಿಯಿತು. ಸುಮಾರು ನಾಲ್ಕು ಪುಟ ಉದ್ದವಾದ ಪದ್ಯ ಬಯಲಲ್ಲಿ ಗಟ್ಟಿಯಾಗಿ ಓದಿದರೂ ದಣಿವಾಗಲಿಲ್ಲ. ಕನ್ನಡದ ಲಯ ಗೊತ್ತಿತ್ತು ಬರೆದದ್ದನ್ನ ಓದುವುದಕ್ಕೆ ಆಯಾಸವಾಗುವುದಿಲ್ಲ. ಓದುತ್ತ ಓದುತ್ತ ನಮಗೆಲ್ಲ ಅಲ್ಲಿ, ಎಷ್ಟೋ ದಶಕಗಳ ಹಿಂದೆ ವಾಕಿಂಗ್ ಬರುತ್ತ ಕಲ್ಲು ಕಂಡು, ಕಲ್ಲು ಏನೋ ಕಾಣಿಸಿ, ಕವಿತೆ ಮೂಡಿಸಿಕೊಂಡ ಕುವೆಂಪು ಕಾಣಿಸುತ್ತಿದ್ದಾರೆ, ಕೈಗೆ ಸಿಗುವಂತಿದ್ದಾರೆ ಅನ್ನಿಸಿತು. ಅವತ್ತು ರಾತ್ರಿ ಹುಡುಗಿಯರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ವಾಚ್‌ಮನ್ ಮಾನಪ್ಪ ನನ್ನ ಹತ್ತಿರ ಬಂದು, ಹೇಳಬೇಕೋ ಬೇಡವೋ ಅನ್ನುವ ಹಾಗೆ ಸಂಕೋಚ ಪಡುತ್ತಾ, ನೀವು ಪದ್ಯ ಓದಿದ್ದು ತುಂಬ ಚೆನ್ನಾಗಿತ್ತು ಸಾರ್, ಭಾಳ ಖುಶೀ ಆತು ಅಂದ. ಒಂದು ಕ್ಷಣ ಜಂಬ ಪಟ್ಟೆ.
ಕವಿಶೈಲ ಹತ್ತಿದೆವು. ಅಲ್ಲಿ ಕುವೆಂಪು, ವೆಂಕಣ್ಣಯ್ಯ, ಬಿಎಂಶ್ರೀ ತಮ್ಮ ಹೆಸರು ಕೆತ್ತಿದ್ದ ಬಂಡೆ ಇದೆ. ಆ ಕೆತ್ತನೆಗಳ ಸುತ್ತಲೂ ಬಿಳಿಯ ಬಣ್ಣ ಬಳಿದು ಎದ್ದು ಕಾಣುವಂತೆ ಮಾಡಿದ್ದಾರೆ. ಹಾಗೆಯೇ ಆ ಬಂಡೆಯ ಮೇಲೆ ಅಸಂಖ್ಯಾತ ಹುಡುಗರ, ಹುಡುಗಿಯ ಹೆಸರುಗಳು, ಐ ಲವ್ ಯೂಗಳೂ ಇವೆ. ತಪ್ಪೇನು? ಹಿರಿಯರು ಆ ಹೆಸರುಗಳನ್ನು ಕೆತ್ತಿದಾಗ ಅವರೂ ಇವತ್ತಿನ ಹುಡುಗರ ಮನಸ್ಥಿತಿಯಲ್ಲಿಯೇ ಇದ್ದರೋ ಏನೋ! ಮರೆತಿದ್ದೆ. ಶಿಲಾತಪಸ್ವಿ ಬಂಡೆಯ ಹತ್ತಿರ ತಿಮ್ಮಪ್ಪ ಅನ್ನುವ ಹೆಸರು ಮಸುಕು ಮಸುಕಾಗಿ ಕಾಣುತ್ತದೆ. ಕುವೆಂಪು ಅವರ ಎಳೆವೆಯ ಗೆಳೆಯ. ಮಲೆನಾಡಿನ ಚಿತ್ರಗಳು ಓದಿದವರಿಗೆ ಗೊತ್ತಲ್ಲ. ಅದಕ್ಕೆ ಎದ್ದು ಕಾಣುವ ಭಾಗ್ಯವಿಲ್ಲ. ಮತ್ತೆ ಕವಿಶೈಲ ಅನ್ನುವುದು ಕುವೆಂಪು ಇಟ್ಟ ಹೆಸರು. ಅದನ್ನು ಕಲ್ಲಿನ ಮೇಲೆ ಬರೆದೆ ಅನ್ನುತ್ತಾರೆ. ಈಗ ತೀರ ಮಸುಕು ಮಸುಕಾಗಿ ಕಾಣುತ್ತದೆ.
ಅಲ್ಲಿಂದ ಮುಳುಗುವ ಸೂರ್ಯ, ತೆರೆ ತೆರೆಯಾದ ಬೆಟ್ಟಗಳ ಸಾಲು. ರೊಮ್ಯಾಂಟಿಕ್ ಅಂತ ಬುದ್ಧಿವಂತರು ಕರೆಯುತ್ತಾರಲ್ಲ, ಅದು ಅಲ್ಲಿ ತೀರ ತೀರ ವಾಸ್ತವ ಅನ್ನಿಸುತ್ತದೆ. ಕವಿಶೈಲದಲ್ಲಿ ಎಂಬ ಹೆಸರಿನಲ್ಲಿ ಕುವೆಂಪು ಬರೆದಿರುವ ಸಾನೆಟ್ಟುಗಳನ್ನು ಓದಿದೆವು. ರೊಮ್ಯಾಂಟಿಕ್ ಅನ್ನಿಸಲಿಲ್ಲ. ಆದರೆ ಭಾಷೆ ಎಷ್ಟೇ ತಿಣುಕಿದರೂ ಭಾಷೆಯಿಲ್ಲದ ಚೆಲುವಿನ ಸಮನಾಗಲಾರದು.
ಕಾಡಿನ ಕತ್ತಲು ಅನುಭವಿಸುತ್ತ ಇಳಿದೆವು. ಮರುದಿನ ಕವಿಶೈಲದ ಹಿಂದಿನ ಗುಡ್ಡದ ಕಾಡುಗಳಲ್ಲಿ ಅಲೆದೆವು. ಅಯ್ಯೋ. ದೂರಕ್ಕೆ ದಟ್ಟ ಹಸಿರಿನ ವನಸಿರಿಯಂತೆ ಕಾಣುವ ಗುಡ್ಡದ ಕಾಡು ಬರೀ ಟೊಳ್ಳು. ಬರೀಜಿಗ್ಗು. ಒಂದಾದರೂ ದೊಡ್ದ ಮರ ಇಲ್ಲ. ತೇವ ಇಲ್ಲ. ಜೀರುಂಡೆಗಲ ಸದ್ದಿಲ್ಲ. ಕಾಡಿಗೇ ವಿಶಿಷ್ಟವಾದ ಸಾವಿರ ಮರಗಳ, ಒದ್ದೆ ನೆಲದ, ಕೊಳೆತ ಎಲೆಗಳ ವಾಸನೆ ಇಲ್ಲ. ಇಲ್ಲಿರುವ ಮರಗಳನ್ನೆಲ್ಲ ಇಂಥ ರಾಜಕಾರಣಿ ಕಡಿದು ಸಾಗಿಸಿದ್ದಾನೆ ಎನ್ನುವ ವಿವರ ಕೇಳಿದೆ. ಮರಗಳು ಕಾಡಿನಲ್ಲಿ ಯಾಕಿರಬೇಕು? ಆಗಲಿ ಅವು ನಮ್ಮ ಕುರ್ಚಿ, ಸೋಫಾ, ಮನೆಯ ಬಾಗಿಲು, ದೇವರ ಮಂದಾಸನ. ಚಿತ್ರಬರೆಯಲು ಬರದ ಕಲಾವಿದ ಕಾಡಿನ ಚಿತ್ರ ತಪ್ಪು ತಪ್ಪಾಗಿ ಬರೆದು ರಬ್ಬರ್ ತೆಗೆದುಕೊಂಡು ಅಳಿಸಿದರೆ ಹೇಗಿರುತ್ತದೋ ಹಾಗಿತ್ತು ಆ ಕಾಡು ಎಂಬ ಹೆಸರಿನ ಲಾಲ್ ಬಾಗು. ಪಿಚ್‌ ಅನ್ನಿಸಿತು.
ಕವಿಮನೆಗೆ ಬಂದೆವು. ಮನೆಯ ಮುಂದಿದ್ದ ದೊಡ್ಡ ದೊಡ್ದ ಮರಗಳಲ್ಲಿ ಒಂದೆರಡು ಮಾತ್ರ ಉಳಿದಿವೆ. ಮಿಕ್ಕಂತೆ ಶ್ರೀಮಂತರ ಮನೆಯ ಮುಂದಿರುವಂಥ ಅಚ್ಚುಕಟ್ಟಾದ ಲಾನ್. ಮಲೆನಾಡಿನಲ್ಲಿ ಬೆಳೆಯುವ ವೆರೈಟಿಯ ಹುಲ್ಲೂ ಅಲ್ಲ. ಆದರೂ ಕುವೆಂಪು ಕೂತು ಕಾಡು ನೋಡಿದ, ವರ್ಡಸ್‌ವರ್ತ್ ಓದಿದ, ಕಾನೂರು ಮನೆಯ ಜಗಳಗಳು ಇತ್ಯರ್ಥವಾದ ಜಗಲಿಗಳು ಇರುವ, ಸಾಕ್ಷಿ ಹೇಳುವ ಕಡೆಗೋಲಿನ ಆಡುಗೆ ಮನೆ ಇರುವ ಸ್ಮಾರಕ ಅದು. ಮನೆಯ ಒಂದೊಂದು ಮೂಲೆಯೂ ಕುವೆಂಪು ಕಾದಂಬರಿಗಳ ಒಂದೊಂದು ಪುಟವನ್ನು ಮನಸ್ಸಿಗೆ ತರುತ್ತವೆ. ತಂದುಕೊಂಡದ್ದಾಯಿತು.
ನವಿಲುಕಲ್ಲಿಗೆ ಹೋದೆವು. ಹದಿನಾರು ಕಿಲೋಮೀಟರ್. ತೀರ ನಾಲ್ಕೂವರೆಗೇ ಎದ್ದು, ಬಸ್ಸಿನಲ್ಲಿ ಅಷ್ಟುದೂರ ಹೋಗಿ, ಮತ್ತೆ ಎರದು ಕಿಲೋಮೀಟರ್ ಬೆಳಗಿನ ಜಾವದ ಕತ್ತಲಲ್ಲಿ ಮೌನವಾಗಿ ನಡೆದದ್ದು ಅಪೂರ್ವ ಅನುಭವ. ನೆತ್ತಿ ತಲುಪಿ ಸುತ್ತಲೂ ಹಬ್ಬಿರುವ ಸಹ್ಯಾದ್ರಿಯ ಶಿಖರಗಳು ಇಷ್ಟಿಷ್ಟೆ ಬೆಳಕಿಗೆ ಮೈ ಒಡ್ಡುತ್ತ ತಣ್ಣಗೆ ಸೂರ್ಯ ಮೇಲೇರಿ, ಮಂಜು ಕರಗುತ್ತ, ನಾವೂ ಸ್ಪಷ್ಟವಾಗುತ್ತ, ಅಲ್ಲಿ ಯಾವ ಪದ್ಯವನ್ನೂ ಓದಬೇಕೆನಿಸಲಿಲ್ಲ. ನವಿಲುಗಳು ಕಾಣದಿದ್ದರೂ ಮಕ್ಕಳಿಗೆ ಹೇರಳ ನವಿಲುಗರಿ ಸಿಕ್ಕಿದವು. ಕುವೆಂಪು ಆಗ ಅಲ್ಲಿಗೆ ನಡೆದೇ ಬರುತ್ತಿದ್ದರಂತೆ.
ಅವತ್ತು ಇನ್ನೊಬ್ಬ ಮುದುಕ ಸಿಕ್ಕ. ಕುವೆಂಪು ಅಭಯಾರಣ್ಯದ ಕಾವಲುಗಾರನಂತೆ. ದೊಗಲೆ ಖಾಕಿ ಚಡ್ಡಿ, ಒಂದೆರಡು ಗುಂಡಿಗಳು ಕಳೆದುಹೋಗಿದ್ದ ಖಾಕಿ ಅರ್ಧತೋಳಿನ ಶರ್ಟು, ಜಜ್ಜಿ ಹೋದಂತಿದ್ದ ಮೂಗು, ಕಪ್ಪು ಬಣ್ಣ, ಹಲ್ಲುದುರಿ ಬೊಚ್ಚಾದ ಬಾಯಿ. ಪುಟು ಪುಟು ನಡೆಯುತ್ತಾ ಉತ್ಸಾಹದಿಂದ ಪುಟಿಯುತ್ತಿದ್ದ. ನಮ್ಮ ಹುಡುಗಿಯರು ಯಾರೂ ಅವನನ್ನು ಕ್ಯಾರೆ ಅನ್ನದಿದ್ದರೂ. ಇವನು ಮಂದಣ್ಣ ಸಾರ್ ಅಂತ ರೆಡ್ಡಿ ಹೇಳಿದ್ದರು. ಅಲ್ಲಿರುವ ಮರ ಗಿಡಗಳ ಹೆಸರನ್ನೆಲ್ಲ, ಉಪಯೋಗವನ್ನೆಲ್ಲ ಬಲ್ಲವನಂತೆ. ಅಗೋ ಅಲ್ಲೊಂದು ಮರ ಇದೆ, ಅದರ ಹೆಸರು ಜಗಳಗಂಟಿ ಅಂತೆ. ಬೋರ್ಡು ಹಾಕಿದ್ದಾರೆ. ಅಂಥ ಹೆಸರುಗಳನ್ನೆಲ್ಲ ಇವನ್ನೇ ಕೇಳಿ ತಿಳಿದದ್ದಂತೆ. ಇಗೋ ಈ ಮರದ ಎಲೆಗಳನ್ನು ನೀರಿನಲ್ಲಿ ನೆನೆಸಿ, ಜಜ್ಜಿ ತಲೆಗೆ ಹಚ್ಚಿಕೊಂಡರೆ ಒಳ್ಳೆ ಶಾಂಪೂ ಸ್ನಾನ ಆಗುತ್ತೆ ಅಂತ ಅವನು ಹೇಳಿದ್ದೇ ತಡ, ನಮ್ಮೊಡನೆ ಇದ್ದ ಮಹಿಳೆಯರು ಒಂದು ಹೊರೆ ಸೊಪ್ಪು ಅವನಿಂದ ಕೀಳಿಸಿಕೊಂಡರು.
ನಾಲ್ಕು ರಾತ್ರಿಗಳು. ಬಹಳ ವರ್ಷಗಳ ನಂತರ ಕಂಡ ಅಪ್ಪಟ ಕತ್ತಲು. ಆಕಾಶದ ತುಂಬ ಪ್ರಖರವಾಗಿ ಹೊಳೆಯುತ್ತಿದ್ದ ನಕ್ಷತ್ರಗಳು. ಹಿತವಾದ ಚಳಿ. ಪಕ್ಕದ ಪ್ರತಿಷ್ಠಾನದ ಬೆಳಕು ಒಂದು ಅಂಗೈ ಅಗಲ ಬೆಳಕಾಗಿ ಮತ್ತೆ ಕಾಡಿನ ಕತ್ತಲು. ಕತ್ತಲನ್ನು ನೋಡೋಣ ಬನ್ನಿ ಅಂತ ಕೆಲವರನ್ನ ಕರೆದುಕೊಂಡು ಹೋಗುತ್ತಿದ್ದೆ. ಆ ಕತ್ತಲಲ್ಲೂ, ದಿನದ ಶಿಬಿರದ ಕೆಲಸ ಮುಗಿಸಿ, ತಮಗೆ ಬೇಕಾದವರಿಗೆ ಫೋನು ಮಾಡಲು ಸಿಗ್ನಲು ಸಿಗುತ್ತಾ ಅಂತ ಕೊಂಚ ಭಯದಿಂದ, ಜನ ಇದ್ದಾರಲ್ಲ ಅಂತ ಕೊಂಚ ಧೈರ್ಯದಿಂದ ಮೊಬೈಲಿನ ಗುಂಡಿಗಳನ್ನು ಒತ್ತುತ್ತಾ ಅದರ ಮಿಂಚು ಬೆಳಕನ್ನು ಕವಿಗೆ ಹತ್ತಿಸಿಕೊಂಡು, ತಮ್ಮ ಮುಖ ಒಂದಿಷ್ಟೆ ಬೆಳಗಿಸಿಕೊಳ್ಳುವ ಹುಡುಗಿಯರು. “ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ” ಅಂದಿದ್ದರು ಕುವೆಂಪು. ನನಗೆ ಈಗ ಕಂಡದ್ದು ದಿನ ನಿತ್ಯದ ಅವೇ ಮಾಮೂಲು ಮಾತುಗಳನ್ನು ಆದಲು ಆಗುತ್ತಿಲ್ಲವಲ್ಲಾ ಅಂತ ಸುಮ್ಮ ಸುಮ್ಮನೇ ಆತಂಕಪಡುತ್ತಾ, ಮೊಬೈಲನ್ನು ಶಪಿಸಿಕೊಳ್ಳುತ್ತಾ ತಡವರಿಸುತ್ತಿದ್ದ ಜನ. ಸುತ್ತ ಕತ್ತಲಲ್ಲಿ, ಕತ್ತಲಲ್ಲಿ ಕರಗಿದ ಮರಗಳಲ್ಲಿ, ಸಾವಧಾನವೇ ಸಾವಧಾನ. ನಮ್ಮ ಮನಸ್ಸುಗಳಲ್ಲಿ ಅದು ಯಾಕಿಲ್ಲವೋ!
ಸಿಬ್ಬಲುಗುಡ್ಡೆಗೆ ಹೋದೆವು. ಅದೇ, ದೇವರು ರುಜು ಮಾಡಿದ ಜಾಗ. . ಈಗ ನಿಜವಾಗಿ ಗಣೇಶನ ಗುಡಿ ಎದ್ದಿದೆ. ಒಂದು ನಿಮಿಷವೂ ಬಿಡದಂತೆ ಅಲ್ಲಿರುವ ಎಲ್ಲ ಗಂಟೆಗಳನ್ನು ಬಾರಿಸುತ್ತ ಯಾವ ಗಂಟೆಯ ಶ್ರುತಿ ಹೇಗೆ ಎಂದು ಕುಮಾರ ಎಂಬ ಸಂಗೀತಜ್ಞ ಪರೀಕ್ಷೆ ಮಾಡುತ್ತಿದ್ದ. ಬೆಳ್ಳಕ್ಕಿಗಳು ಹಾರುತ್ತಿರಲಿಲ್ಲ. ಹಿಂದೆ ನೋಡಿ ನೆನಪಿನಲ್ಲಿ ಉಳಿದಿದ್ದ ಸಿಬ್ಬಲುಗುಡ್ಡೆ ಸತ್ತುಹೋಯಿತು.
ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿ ಓಡಾಡಿದ ಜಾಗಗಳಲ್ಲೆಲ್ಲ ಅದೇ ದಾರಿಯಲ್ಲಿ ನಾಲ್ಕುದಿನ ಓಡಾಡಿ ಕುವೆಂಪುವನ್ನು ಮತ್ತಷ್ಟು ನಮ್ಮವರನ್ನಾಗಿ ಮಾಡಿಕೊಳ್ಳೋಣ ಎಂದು ರೆಡ್ಡಿಯೊಡನೆ ಒಪ್ಪಂದಮಾಡಿಕೊಂಡು ವಾಪಸ್ಸು ಬಂದೆ.

ಓದುಗರ ಗಮನಕ್ಕೆ: ಸಂಪಾದನೆ: ಚಿತ್ರ ಸೇರ್ಪಡೆ. (ಡಿ. ೨೪. ೨೦೦೬), ಚಿತ್ರ ಕೃಪೆ: ಕುವೆಂಪು.com

Rating
No votes yet

Comments