ಕೂಪ 2

ಕೂಪ 2

ಕೂಪ
ಅಧ್ಯಾಯ ೧

ಸ್ಕೂಲಿಗೆ ರಜ ಹಾಕಿ ಹದಿನೈದು ದಿನ ಆಯ್ತು. ತಾತ ಜೊತೇಲಿದಾರೆ. ಅದ್ಯಾಕೋ ತಾತ ಇಷ್ಟವಾಗ್ತಾರೆ. ಮನೆಯಲ್ಲಿರುವಾಗ ಒಂದು ಹಳೇ ಬನೀನು, ಪಂಚೆ ಇಷ್ಟೇ ತಾತನ ಡ್ರೆಸ್. ಮನೆಯೊಳಗೆ ಬಂದ ತಕ್ಷಣ ಹಾಲು ಕಾಸಿದ ವಾಸನೆ, ಬೇಳೆ ಬೇಯಿಸಿದ ವಾಸನೆ ಬಡಿಯುತ್ತೆ. ಇದು ಮನೆ ಅನ್ನಿಸುತ್ತೆ. ಮೊದಲೆಲ್ಲಾ ಸ್ವಿಗ್ಗಿಯಿಂದನೋ ಫ಼ುಡ್ ಪಾಂಡದಿಂದಲೋ ಬರೋದು. ಯಾರೋ ತರೋನು ಅದು ಕವರ್ ಗಳಲ್ಲಿ ಬರೋದು. ಮನೆಯಲ್ಲಿ ಬೇಯಿಸಿದ್ರೆ ಬರೋ ವಾಸನೆಗೆ ಮನೆ ಅಂತಾರೆ. ಎಲ್ಲೋ ಬೇಯಿಸಿ ತಂದದ್ದನ್ನ ತಿಂದ್ರೆ ಲಾಡ್ಜ್ ಅಂತಾರೆ. ಅಂತೂ ಆ ಪ್ಯಾಕ್ಡ್ ಊಟಾನ ತಿಂದು ತಿಪ್ಪೆಗೆಸಿತಿದ್ವಿ. ಅಮ್ಮ ಹೆಚ್ಚಾಗಿ ಅಡುಗೆ ಮಾಡಿದ್ದು ಅಂದ್ರೆ ಯಾವ್ದಾದ್ರೂ ಹಬ್ಬ ಅಂತ ಬಂದಾಗ ಅದೂ ಯಾರೂ ಅವರನ್ನ ಹಬ್ಬಕ್ಕೆ ಕರೀಲಿಲ್ಲ ಅಂದಾಗ ಮಾತ್ರ. ಹೋಳಿಗೆ ಪಾಯ್ಸ ಎಲ್ಲವೂ ಹೋಟೇಲಿಂದ ಬರೋದು. ನಮ್ ಜಾತಿಯೋರೇ ತೆಗೆದಿರೋ ಮೆಸ್ ಇದೆ. ಕಾಲ್ ಮಾಡಿದ್ರೆ ಬಾಳೆ ಎಲೆ ಸಮೇತ ಊಟ ಬರುತ್ತೆ. ಥೇಟ್ ಮನೆಯೂಟದ ಹಾಗೆ ಅಂತಿರ್ತಾಳೆ ಅಮ್ಮ. ಮನೆಯೂಟ ಅಂದ್ರೆ ಮನೆಯಲ್ಲಿ ಅಡುಗೆ ಮಾಡಿ ಸಂಭ್ರಮ ಪಡ್ತಾ, ಮಾತಾಡ್ತಾ,ನಗೆಯಾಡ್ತಾ ತಿನ್ನುವ ಊಟ. ಹೋಟೇಲಿಂದ ಪಾರ್ಸಲ್ ತಂದು ಮನೆಯಲ್ಲಿ ತಿನ್ನೋ ಊಟ ಅಲ್ಲ ಅಂತ ಅಮ್ಮನಿಗೆ ಯಾಕೆ ಅರ್ಥವಾಗೊಲ್ಲ. ನನ್ನ ಫ್ರೆಂಡ್ಸ್ ಎಲ್ಲರೂ ನಮ್ಮನೇಲಿ ಇವತ್ತು ಅಮ್ಮ ಅದು ಮಾಡಿದ್ಳು, ಇದು ಮಾಡಿದ್ಳು ಅಂತಿದ್ದಾಗ ನನಗೆ ಸಂಕೋಚವಾಗೋದು. ನನ್ನ ಬಾಕ್ಸಿಗೆ ಬ್ರೆಡ್ ನ ಹಲ್ಲೆಗಳು ಇಲ್ಲಾಂದ್ರೆ ಹೋಟೇಲಿನ ಇಡ್ಳಿ ಇರೋದು. ಹಬ್ಬದ ದಿನ ಫ್ರೆಂಡ್ಸ್ ಫೋನ್ ಮಾಡಿದಾಗ ಅನ್ನೋರು  ತೋರಣ ಕಟ್ತಿದೀನೋ, ಅಮ್ಮನಿಗೆ ತರಕಾರಿ ಹೆಚ್ಚಿ ಕೊಡ್ತಿದೀನಿ, ಅನ್ನೋರು ಒಳಗಿಂದ ಕೂಗು ಕೇಳಿಸೋದು, ’ಹುಶಾರಾಗಿ ಹೆಚ್ಚೋ ಬೆರಳು ನೋಡ್ಕೊ ಗಾಯ ಮಾಡ್ಕೊಂಡ್ಬಿಟ್ಟೀಯ’ ಅವರ ಅಮ್ಮಂದಿರು ಎಷ್ಟು ಜೋಪಾನ ಮಾಡ್ತಾರೆ ಮಕ್ಕಳನ್ನ, ಅದೇ ರೀತಿ ಕೆಲಸಕ್ಕೂ ಹಚ್ಚುತಾರೆ. ನನ ಮನಸ್ಸು ಕಂಪೇರ್ ಮಾಡಕ್ಕೆ ಶುರು ಮಾಡ್ತಿತ್ತು. ಇಲ್ಲಿ ಅಮ್ಮ ಯಾರ್ದಾದ್ರೂ ಮನೆಗೆ ಕರ್ಕೊಂಡ್ ಹೋಗೋರು. ಅಲ್ಲಿ ಊಟ. ಮತ್ತದೇ ಇವರದೇ ಮಾತು. ಪ್ಯಾನೆಲ್ ಡಿಸ್ಕಷನ್ ಆಗಬೇಕಾದರೆ ನಮ್ಮ ಧ್ವನಿ ಹೇಗಿರಬೇಕು. ವಿಷಯಗಳನ್ನ ಯಾರು ಕೊಡ್ತಾರೆ ಇಂಥವೇ.... ಹಬ್ಬದ ವಾತಾವರಣಕ್ಕಿಂತ ಮತ್ತೊಂದು ಚಾನೆಲ್ ನ ಡಿಸ್ಕಷನ್ ಅನ್ನಿಸೋದು. ನನ್ನನ್ನ ನೋಡೋರು. ಬೋರ್ ಆಗ್ತಿದ್ಯಾ? ಅಂತ ಆ ಮನೆಯವರು ಕೇಳಿದ್ರೆ. ಅಮ್ಮ ಅನ್ನೋಳು,’ ಇಲ್ಲ ಅವನಿಗೂ ಇದರಲ್ಲಿ ಆಸಕ್ತಿ ಇದೆ. ನನ್ನ ವಾರಸುದಾರ ಅವನು. ನನ್ನ ಪ್ರೊಫೆಸರ್ ನಂಜುಂಡಯ್ಯನವರ ಹಾಗೆ ವಿಚಾರವಾದಿ ಆಗ್ತಾನೆ. ಅದಕ್ಕೆ ಈಗ್ಲಿಂದಾನೆ ಇದೆಲ್ಲಾ ಕೇಳಿಸ್ಕೊಳ್ಳಲಿ ಬಿಡಿ. ನಾನು ಪೆಚ್ಚಾಗಿ ನಗ್ತಿದ್ದೆ. ಆ ಮನೆಯ ಮಕ್ಕಳು ಬಾಲ್ಕನಿಯಲ್ಲೋ ಗ್ರೌಂಡಿನಲ್ಲೋ ಆಡ್ತಿರೋರು. ನನಗೆ ಆ ಅವಕಾಶ ಇಲ್ಲ. ತೀರ ಬೇಸರವಾಗಿ ಅಮ್ಮನ ಮುಖ ನೋಡಿದ್ರೆ . ಹೋಗು ಆಡ್ಕೋ ಹೋಗು. ಅನ್ನೋರು. ಹಿಂದೆನೇ ಮಕ್ಕಳನ್ನ ಬೆಳೆಸೋ ಬಗ್ಗೆ ದೊಡ್ಡ ಉಪನ್ಯಾಸ ಕೇಳ್ತಿತ್ತು. ಮಕ್ಕಳನ್ನ ಆಡಕ್ಕೆ ಬಿಡ್ಬೇಕು. ಜೊತೆಗೆ ವಿಚಾರವಾದವನ್ನೂ ತುಂಬಬೇಕು. ಅಂತೆಲ್ಲಾ... ಈ ದ್ವಂದ್ವ ನೀತಿಯಿಂದ ಅಮ್ಮ ತುಂಬಾ ಒಗಟಾಗಿ, ಜಿಗುಟಾಗಿ ಕಾಣೋಳು.
ಒಂದು ಹಬ್ಬದ ದಿನ ಮನೆಗೆ ಎಲ್ಲರನ್ನ ಕರೆದಿದ್ಳು. ಎಲ್ರೂ ಅಂದ್ರೆ ಅವಳ ಕಾಮ್ರೇಡ್ ಗಳು. ಇಲ್ಲಿ ನಗರಲ್ಲಿ ಕೂತು , ಎಸಿ ರೂಮಲ್ಲಿ ಕುಡೀತಾ ಸಿಗರೇಟು ಸೇದ್ತಾ ಬಡತನದ ಬಗ್ಗೆ ದೇಶದ ಬಗ್ಗೆ ದೊಡ್ಡದಾದ ಚರ್ಚೆ ಶುರುವಾಗಿತ್ತು. ಸಜ್ಜನ್, ಭಟ್, ಮನೀಶ್,ಕರುಣಾ ಅಂಕಲ್ಗಳು, ಪಾಟೀಲ್ ಆಂಟಿ ಎಲ್ರೂ ಬಂದಿದಾರೆ. ಮಾತಿನ ಕಾವು ಏರ್ತಿತ್ತು. ನಾನು ಸುಮ್ಮನೆ ಸೋಫಾದ ಮೇಲೆ ಕೂತಿದ್ದೆ. ಅವರ ಮಾತುಗಳು ನನ್ನ ತಲೆ ಮೇಲಿಂದ ಹಾದು ಹೋಗ್ತಿತ್ತು. ನಾನು ಎದ್ದು ಹೋಗೋ ಹಾಗೂ ಇರ್ಲಿಲ್ಲ. ನನ್ನ ಪಕ್ಕ ಕರುಣಾ ಅಂಕಲ್ ಕೂತಿದ್ರು. ಮಾತಿಗೊಮ್ಮೆ ನಗ್ತಾ ನನ್ನ ತೊಡೆ ಮೇಲೆ ಪೆಟ್ಟು ಕೊಡ್ತಾ ಇದ್ರು. ಅಮ್ಮ, ಸಜ್ಜನ್ ಮತ್ತೆ ಭಟ್ ಅಂಕಲ್ ಮಧ್ಯೆ ಕೂತಿದ್ಳು. ಮರ್ಯಾದಾ ಹತ್ಯೆ ಆದ ಆ ದಲಿತ ಹುಡುಗಿಯ ಪರವಾಗಿ ಹೋರಾಟದ ಸ್ವರೂಪ ಏನೂ ಅನ್ನೋದರ ಬಗ್ಗೆ ಚರ್ಚೆ. ಅಮ್ಮ ಅಂದ್ಳು, ಟೌನ್ ಹಾಲ್ ಮುಂದೆ ಕ್ಯಾಂಡಲ್ ಹಚ್ಚೋಣ, ಪ್ರತಿಭಟನೆ ಮಾಡೋಣ, ಪರ್ಮಿಷನ್ ತಗೊಳೋದು ಮರ್ಯಾದ ಹತ್ಯೆ ಪ್ರತಿಭಟನೆಯ ವಿಷಯವಾಗಿ ಆದರೆ ಅದ್ರಲ್ಲಿ ಸೆಂಟ್ರಲ್ ಗೌರ್ಮೆಂಟ್ ವಿರುದ್ಧ ಘೋಷಣೆ ಕೂಗ್ಬೇಕು ಅಂತ ಮಾತಾಗಿದೆ. ಅಕೌಂಟಿಗೆ ದುಡ್ಡು ಬಂದಿದೆ. ಈ ಸರ್ತಿ ಸಜ್ಜನ್ ನಿನ್ ಕಡೆಯಿಂದ ಬಂದಿರೋದು. ನೆಕ್ಸ್ಟ್ ಟೈಮ್ ಇನ್ನೊಬ್ಬರನ್ನ ಸೆಟ್ ಮಾಡ್ಕೋ. ನಮ್ ಮೇಲೆ ರೈಟಿಸ್ಟ್ ಜನಕ್ಕೆ ಕಣ್ಣಿದೆ. ನಮ್ಮ ಅಕೌಂಟ್ ಡಿಟೈಲ್ಸ್ ನ ತಗೊಳೋದು ಅಷ್ಟು ಕಷ್ಟ ಅಲ್ಲ. ಅಮೌಂಟ್ ಹಾಕ್ಬೇದಾದರೆ ಅದಕ್ಕೆ ಬೇಕಾದ ಇನ್ ವಾಯ್ಸ್ ಗಳನ್ನ ಸೆಟ್ ಮಾಡ್ಕೊಂಡೇ ಹಾಕಿಸ್ಕೊಳ್ಳೋಣ’ ಸಜ್ಜನ್ ಅಂಕಲ್ ಅಮ್ಮನ ಕಡೆ ಮೆಚ್ಚುಗೆಯಿಂದ ನೋಡಿ ಅವಳನ್ನ ಬಾಚಿ ತಬ್ಬಿಕೊಂಡು ತುಟಿಗೆ ಮುತ್ತಿಟ್ಟುಬಿಟ್ಟರು. ಅಮ್ಮ ತಕ್ಷಣ ನನ್ನ ಕಡೆಗೊಂದು ಸರ್ತಿ ಸಜ್ಜನ್ ಕಡೆಗೊಂದು ಸರ್ತಿ ನೋಡಿದ್ರು. ಅಮ್ಮ, ಗಾಬರಿಯಾದ್ಯಾ ಸಂಕೇತ್, ಅಮ್ಮ ನನ್ನೋಳು ಅನ್ನೋದು ಇದೆ ಅಲ್ವಾ. ಅಂಕಲ್ ಗೂ ಅಷ್ಟೆ ತುಂಬಾ ಪ್ರೀತಿ. ಫ್ರೆಂಡ್ಸ್ ಗಳು ಹೀಗಿರ್ತಾರೆ. ಮುಕ್ತವಾದ ವಾತಾವರಣ ಇರೋದು ಸ್ವಾತಂತ್ರದ ಲಕ್ಷಣ . ಇವೆಲ್ಲಾ ನಿನಗೆ ಮುಂದೆ ಅರ್ಥವಾಗುತ್ತೆ. 
ನನಗೇನೂ ಅರ್ಥವಾಗಲಿಲ್ಲ. ಅಮ್ಮನ ಪ್ರಕಾರ ಫ್ರೆಂಡ್ಸ್ ಗಳು ಹೀಗಿದ್ರೆ ಅದು ಗಾಢವಾದ ಸ್ನೇಹ ಅಂತ. ಅದನ್ನ ನಂಬಿನೇ ಅಲ್ವಾ ನಾನು ಚಿನ್ಮಯಿಗೆ ಮುತ್ತಿಟ್ಟು ಹೆಡ್ ಮಾಸ್ಟರ್ ಕಡೆಯಿಂದ ಪನಿಶ್ಮೆಂಟ್ ತಗೊಂಡಿದ್ದು. ಅವತ್ತು ಹಬ್ಬ ಮುಗೀತಾ ಬಂತು. ರಾತ್ರಿ ಊಟ ಮುಗ್ಸಿ ಎಲ್ರೂ ಮನೆಗೆ ಹೋಗ್ತಾರೆ ಅಂತಂದುಕೊಂಡೆ. ಎಲ್ರೂ ಉಳ್ಕೊಂಡ್ರು. ಮನೇಲಿ ಥ್ರೀ ಬೆಡ್ ರೂಮ್ಸ್ . ನಿದ್ದೆ ಬರುವ ಹಾಗಾಗಿ ನಾನು ನನ್ನ ರೂಮ್ ಗೆ ಹೋದೆ. ನನ್ನ ಪಕ್ಕದ ರೂಮಲ್ಲಿ ಅಮ್ಮ ಮತ್ತೆ ಸಜ್ಜನ್ ಅಂಕಲ್ ಮಾತಾಡೋದು ಕೇಳಿಸ್ತಿತ್ತು. ಮಧ್ಯೆ ನೀರಿಗೆ ಅಂತ ಎದ್ದಾಗ ಗೊತ್ತಾಗಿದ್ದು, ಅಮ್ಮ ಸಜ್ಜನ್ ಅಂಕಲ್ ಒಂದ್ರೂಮು, ಭಟ್ ಮತ್ತೆ ಪಾಟೀಲ್ ಆಂಟಿ ಒಂದ್ರೂಮು, ಮನೀಶ್ ಹಾಲಿನಲ್ಲಿ ಸೋಫಾದ ಮೇಲೆ ಮಲ್ಗಿದಾರೆ. ಕರುಣಾ ಎಲ್ಲಿ...? ನನ್ನ ರೂಮ್ ಗೆ ವಾಪಾಸ್ ಬಂದಾಗ ನನ್ನ ಬೆಡ್ ಮೇಲೆ ಮಲಗಿದ್ರು. ಅಮ್ಮ ಮತ್ತೆ ಸಜ್ಜನ್ ಅಂಕಲ್  ಮದ್ವೆಯಾಗದೆ ಹೀಗೆ ಒಟ್ಟಿಗೆ ಯಾಕೋ ಮನಸ್ಸಿಗೆ ಕಿರಿ ಕಿರಿ ಅನ್ನಿಸ್ತು. ಬೆಳಗ್ಗೆ ಅಮ್ಮನ್ನ ಕೇಳ್ಬೇಕು ಅಂದ್ಕೊಂಡೆ... ಮನೆಯಲ್ಲಿ ಅಮ್ಮ ಅನ್ನೋ ವ್ಯಕ್ತಿ ನೇರವಾಗಿ ಇದ್ದಿದ್ರೆ ಎಲ್ಲ ಸರಿ ಇರುತ್ತೆ. ಈ ದರಿದ್ರಕ್ಕೆ ಆ ಅಮ್ಮ ಅನ್ನೋಳೇ ನೆಟ್ಟಗಿಲ್ಲ. ಇನ್ನು ಇದಕ್ಕೆ ಮಾನ ಮರ್ಯಾದೆ ಎಲ್ಲಿಂದ ಬರ್ಬೇಕು? ಹೆಡ್ ಮೇಸ್ಟ್ರು ಕೂಗಾಡ್ತಿದ್ದಿದ್ದಕ್ಕೆ ಅರ್ಥ ಇದೆ ಅಂತ ಆಗ ಅನ್ನಿಸ್ತು.
 
 
ಅಧ್ಯಾಯ ೧

ಅವರವರೆಲ್ಲಾ ಒಂದೇ, ಹಡಬೆಗಳು ಶುದ್ಧ ಹಡಬೆಗಳು. ಅದೇನು ಅವರುಗಳು ಮಾತ್ರ ಶ್ರೀಮುಖಿ ಜೊತೆ ಇರ್ಬಹುದು, ನಾನಿದ್ರೆ ಏನು ತಪ್ಪು. ಇಲ್ಲೂ ನನ್ನನ್ನ ದೂರ ಇಡ್ತಾರೆ. ಇರ್ಲಿ ಇರ್ಲಿ ಒಂದಲ್ಲಾ ಒಂದಿನ್ನ ಅವರವರಲ್ಲೇ ಗಲಾಟೆಗಳಾಗುತ್ತೆ. ಆಗ ಗೊತ್ತಾಗುತ್ತೆ. ನಾನು ಬೆಂಕಿ ಹಚ್ಚೋದೇನೂ ಬೇಡ. ಅದೇ ಆಗುತ್ತೆ. ಅವಳಿಗಾಗಿಯೇ ಆಗುತ್ತೆ. ಇಕ್ಬಾಲ್ ಖಾನನ ಆಲೋಚನೆ ಮುಂದುವರೆಯುತ್ತಿತ್ತು. ನಾಡಿನ ಚಿಂತಕರ ಪೈಕಿ ಅವನೂ ಒಬ್ಬ, ಶೈವ  ಪಂಗಡವನ್ನ ಅತಿಯಾಗಿ ಅಭ್ಯಾಸ ಮಾಡಿ ಅದ್ರಲ್ಲಿನ ಚಳುವಳಿಕಾರಕ ವಿಷಯಗಳನ್ನ ಹುಡುಕಿ ಹುಡುಕಿ ಅದರಲ್ಲಿನ ಸಾಹಿತ್ಯವನ್ನ ದೊಡ್ಡ ಚಳುವಳಿ ಅಂತ ಬಿಂಬಿಸಿ ತಾನು ಆ ಪಂಗಡದ ಉದ್ದಾರಕ ಅನ್ನೋ ಪಟ್ಟಕ್ಕಾಗಿ ಆಸೆಪಡುವ ಜಾತ್ಯಾತೀತವಾದಿ, ಸಮಾಜವಾದಿ. ದೊಡ್ಡ ಬಂಗಲೆ, ಓಡಾಡಲಿಕ್ಕೆ ಕಾರು, ಬೇಕೆನಿಸಿದಾಗ ತಾನೇ ಬೇನಾಮಿ ಹೆಸರಿನಲ್ಲಿ ವಚನ ಸಾಹಿತ್ಯದ ಮೇಲೆ ಸೆಮಿನಾರುಗಳನ್ನ ಆಯೋಜಿಸಿ ಹೆಸರು ಮಾಡುತ್ತಿದ್ದ. ಶ್ರೀಮುಖಿ , ಸಜ್ಜನ, ಭಟ್, ಜೊತೆಗೆ ಹೆಚ್ಚು ಒಡನಾಡುತ್ತಿದ್ದರೆ ತನಗೂ ಒಂದಲ್ಲಾ ಒಂದು ದಿನ ಸಾಹಿತ್ಯ ಅಕಾಡೆಮಿ ಬರಬಹುದು ಎಂದು ಗೊತ್ತಿತ್ತು. ಭಟ್ ಪತ್ರಿಕೋದ್ಯಮಿ ತಿಂಗಳಿಗೊಂದರಂತೆ ಪುಸ್ತಕಗಳನ್ನು ಬರೆದು ಬಿಸಾಡುತ್ತಿದ್ದ. ಫೇಸ್ ಬುಕ್ಕಿನಲ್ಲಿ ಹಾಕಲು ಯೋಗ್ಯವಾದ ಬರಹಗಳನ್ನು ಅತ್ಯಾಕರ್ಶಕವಾಗಿ ಮುದ್ರಿಸಿ, ತನ್ನ ಕಥಾಚಂದ್ರಿಕೆ ಎಂಬ ಗ್ರೂಪಿನಲ್ಲಿನ ಹಿರಿ ಕಿರಿಯ ಲೇಖಕರ ಕೈಲಿ ಅದರ ಕೈಲಿ ರಿವ್ಯೂ ಬರೆಸಿ ತಾನೊಬ್ಬ ಮಹಾನ್ ಲೇಖಕ ಎಂಬ ಇಮೇಜ್ ಕೊಟ್ಟುಕೊಳ್ಳುತ್ತಿದ್ದ. ಅವನ ಬಾಲಬಡುಕರು ಹತ್ತು ಹಲವು ಜನ ಅದರಲ್ಲಿ ಇಕ್ಬಾಲ್ ಖಾನ್ ಕೂಡ ಒಬ್ಬ. ತಾನೂ ಆ ಭಟ್ ಥರ ವರ್ಷಕ್ಕೆ ಏನಿಲ್ಲವೆಂದರೂ ಏಳೆಂಟು ಪುಸ್ತಕಗಳನ್ನು ಬರೆದು ಬಿಸಾಡಬೇಕು. ಸಾಹಿತ್ಯ ಪ್ರಪಂಚದಲ್ಲಿ ಒಂದು ಸ್ಥಾನ ನಿರ್ಮಿಸಿಕೊಳ್ಳಬೇಕು ಎಂದೆಲ್ಲಾ ಕನಸು ಕಾಣುತ್ತಿದ್ದ. ಅದರೊಟಿಗೆ ಶ್ರೀಮುಖಿ, ವಯಸ್ಸು ೩೮ ಆದರೂ ಸುಂದರಿ, ಈ ಭಟ್ ಮತ್ತು ಸಜ್ಜನ್ ಅವಳನ್ನ ಅದಾಗಲೆ ತಮ್ಮೊಟ್ಟಿಗೆ ಸೇರಿಸಿಕೊಂಡಿದ್ದಾರೆ. ಬೇಕೆಂದಾಗ ಸಲುಗೆಯ ನೆಪದಲ್ಲಿ ಅವಳನ್ನು ನೇವರಿಸುವುದು ಹೋರಾಟದ ನೆಪದಲ್ಲಿ ಸ್ವಾತಂತ್ರ, ಮುಕ್ತತೆಯ ಪರದೆಯಲ್ಲಿ ಎಲ್ಲವನ್ನೂ ಅನುಭವಿಸುತ್ತಿದ್ದಾರೆ. ಆದರೆ ನನಗೆ ಮಾತ್ರ ಅದರಲ್ಲಿ ಪಾಲಿಲ್ಲ. ಇದೆಂತಹ ಒಡಕು. ಈ ಬಾರಿ ದೊಡ್ಡದೊಂದು ಸೆಮಿನಾರ್ ಆಯೋಜಿಸಿ ಶೈವ ಪಂಗಡದ ಮುಖಂಡರನ್ನ ಕರೆದು ನನ್ನ ಶಕ್ತಿ ಪ್ರದರ್ಶನ ಮಾಡಲೇಬೇಕು. ಹೇಗಿದ್ದರೂ ಆ ತುಂಬಿನೂರು ಮಠದ ಸ್ವಾಮೀಜಿ ನನ್ನೊಟ್ಟಿಗೆ ಬರುತ್ತಾರೆ. ಬಾಯಿಗೆ ಬಂದಂತೆ ಹರಟುತ್ತಾನೆ. ಅದು ವೈರಲ್ ಆಗುತ್ತದೆ. ಅಷ್ಟು ಸಾಕು ನನ್ನ ಹೆಸರು ಓಡಾಡೋದಕ್ಕೆ. 
ಆ ಭಟ್ ತಾನೊಬ್ಬನೇ ದೊಡ್ಡ ಸಾಹಿತಿ ಅಂತ ಬಿಂಬಿಸಿಕೋತಾನೆ. ಒಂದು ಡೆಪ್ತ್ ಇಲ್ಲ ಏನಿಲ್ಲ. ಥೋ! ಆದರೂ ಅವನು ಆ ವ್ಯಾಟ್ಸಾಪ್ ಗ್ರೂಪ್ ನ ಅಡ್ಮಿನ್, ಜೊತೆಯಲ್ಲಿಯೇ ಇದೀವಿ, ನನ್ನನ್ನೂ ಅಡ್ಮಿನ್ ಮಾಡಿಟ್ಟಿರು, ನಿನಗೆ ಸಿಗ್ನಲ್ ಸಿಗದೆ ಇದ್ದಾಗ ನಾನು ನೋಡ್ಕೋತೀನಿ ಅಂದೆ. ಇಲ್ಲ, ಯಾರನ್ನೂ ಅವನ ಪರ್ಮಿಷನ್ ಇಲ್ಲದೆ ಸೇರಿಸಿಕೊಳ್ಳಕ್ಕೆ ಬಿಡಲ್ಲ. ತಾನೊಬ್ಬನೇ ಸರ್ವಾಧಿಕಾರಿ ಅನ್ನೋ ಧೋರಣೆ ಅವನಿಗೆ. ಎಲ್ರೂ ಅವನ ಮಾತಿಗೆ ಹೂಗುಟ್ಟುತಿದ್ದರೆ ಅವನು ಅಹಂಕಾರದಲ್ಲಿ ಮೆರೀತಾನೆ. ಇದುವರೆಗೂ ಮುವತ್ತು ಪುಸ್ತಕ ಬರೆದಿದ್ದಾನೆ. ಅವನ ಪತ್ರಿಕೆಯಲ್ಲಿ ಅವನೇ ಬರೆದ ಅಂಕಣಗಳನ್ನ ಸೇರಿಸಿ ಪುಸ್ತಕ ಮಾಡ್ತಾನೆ. ಅದಕ್ಕೆ ನಾನು ಬೇನಾಮಿ ಪ್ರಕಾಶಕ. ದುಡ್ಡು ಅವನದ್ದು , ಹೆಸರು ನನ್ನದು. ಯಾರಾದ್ರೂ ಕೇಳಿದ್ರೆ, ’ನನಗೆ ಮಾರಾಟದ ಹುಚ್ಚಿಲ್ಲ. ನನ್ನ ಅಭಿಮಾನಿಗಳೇ ನನ್ನ ದೊಡ್ಡ ಶಕ್ತಿ’ ಅಂತೆಲ್ಲಾ ಬಡಾಯಿ ಕೊಚ್ಚಿಕೊಳ್ತಾನೆ. ಅವನ ಹಿಂಬದಿಯಲ್ಲಿ ಜನ ಶರಣು ಶರಣಾರ್ಥಿ ಅಂತ ಕೂಗೆಬ್ಬಿಸ್ತಾರೆ. ಅವನನ್ನ ಗುರುಗಳ ಸ್ಥಾನದಲ್ಲಿ ನೋಡ್ತಾರೆ. ಪರಮ ಅಸಹ್ಯ ಆದರೂ ಅವನು ಸಧ್ಯದ ಅವಶ್ಯಕತೆ. ಹಾಗಾಗಿ ಮನಸ್ಸಿಗೆ ಬರೋ ಈ ಭಾವಗಳನ್ನ ಜೋರಾಗಿ ಹೇಳೋ ಹಾಗಿಲ್ಲ. 
ಸಜ್ಜನ್ ಸೆಮಿನಾರ್ ಆಯೋಜನೆ ಮಾಡ್ತಿದಾನೆ. ನನಗೂ ಕರೀಬಹುದು ಮಾತಾಡಕ್ಕೆ. ನಾನವರ ಟ್ರಂಪ್ ಕಾರ್ಡ್ ಅಂತ ಗೊತ್ತಿದೆ. ಜಾತಿಯಲ್ಲಿ ಮುಸ್ಲಿಂ ಆದರೆ ಅಸ್ಖಲಿತವಾಗಿ ಕನ್ನಡವನ್ನ ಅದರಲ್ಲೂ ಶೈವಸಾಹಿತ್ಯವನ್ನ ಹೇಳ್ತೀನಿ. ಅಲ್ಲಲ್ಲಿ ತಕ್ಷಣಕ್ಕೆ ಕೋಟ್ ಮಾಡ್ತೀನಿ. ಅದು ನನ್ನ ಸ್ಟ್ರೆಂಗ್ತ್ . ಸಜ್ಜನ ಅಷ್ಟು ಸುಲಭಕ್ಕೆ ನನ್ನ ಬಿಡಲ್ಲ. ಆದರೆ ಈ ಸರ್ತಿ ನನ್ನ ಮಾತುಗಳನ್ನ ವಿವಾದದ ಮಟ್ಟಿಗೆ ತಿರುಗಿಸಿಕೊಂಡರೆ ನಾನು ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ತೀನಿ. ಇಲ್ಲೂ ತೊಡಕಿದೆ. ಎಲ್ಲಾ ಪತ್ರಿಕೆಗಳ ಮುಖ್ಯಸ್ತರು ಭಟ್ ಗ್ಯಾಂಗಿನವರೇ. ಅವನೇ ನಿಲ್ಲಿಸಿ ಆರಿಸಿದವರು. ಆ ಭಟ್ ಕೂಡ ಹಾಗೆ ಸರಿ ಸುಮಾರು ಎಲ್ಲಾ ಪೇಪರಿನಲ್ಲೂ ಕೆಲಸ ಮಾಡಿದಾನೆ, ಬಿಟ್ಟು ಬರಬೇಕಾದರೆ ಅಲ್ಲಿ ತನ್ನ ಅಧಿಕಾರವನ್ನ ಸ್ಥಾಪಿಸಿ ಬಂದಿದಾನೆ. ತನ್ನವರನ್ನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದಾನೆ. ಮಹಾನ್ ಚಾಲಾಕಿ. ತನ್ನ ಜಾತಿಯ ಜನಗಳನ್ನ ಕೂರಿಸಿ ತಾನು ಆಡಿಸೋ ಹಾಗೆ ಮಾಡಿಕೊಳ್ತಾನೆ. ಸಾಮ್ರಾಜ್ಯ ವಿಸ್ತರಣೆ ಮಾಡಿಕೊಳ್ತಾನೆ. ಬಿಸಿನೆಸ್ ಮೈಂಡ್ ಬಡ್ಡೀಮಗ. ಜೊತೆಗೆ ರಾಜಕೀಯನೂ ಸರಿಯಾಗೇ ಗೊತ್ತಿದೆ ಅವನಿಗೆ. ನಾವು ಎಷ್ಟೇ ಶಕ್ತಿವಂತರಾದರೂ ಅವನ ಮೆದುಳಿಗೆ ಸಲಾಂ ಹೊಡೀಬೇಕು. ನಾನು ಎಷ್ಟೇ ವಿವಾದಾಸ್ಪದ ಮಾತಾಡಿದರೂ ಅದನ್ನ ಅವನಿಗೆ ತಕ್ಕಂತೆ ತಿರುಗಿಸಿ ಅಥವಾ ಮರೆಯಿಸಿ ಪ್ರಿಂಟ್ ಮಾಡಿಸ್ತಾನೆ. ಅದೇ ಸಜ್ಜನ್ ಮಾತಾಡೋದನ್ನ ಬೇಕಂತಾನೆ ವಿವಾದ ಮಾಡಿ ಅವನಿಗೆ ಹೆಸರು ಕೊಡಿಸ್ತಾನೆ. ಏನಾದ್ರೂ ಕೇಳಿದ್ರೆ, ’ಕೇಸ್ ಆದ್ರೆ ನೀನ್ ಬರ್ತೀಯಾ? ನೀನು ವಿವಾದ ಮಾಡ್ಲೇಬೇಕು ಅಂತ ಮಾತಾಡ್ತೀಯ, ಆದರೆ ಸಜ್ಜನ ಸಹಜವಾಗಿ ಮಾತಾಡ್ತಾನೆ ಅದು ತಾರ್ಕಿಕವಾಗಿರುತ್ತೆ. ನಾಳೆ ನಿನ್ನ ಮಾತಿಗೆ ಬಲಪಂಥದವರು ಬಡೀದ್ರೆ ಉತ್ತರ ನಿನ್ ಹತ್ರ ಇದ್ಯಾ?’ ಅಂತಾನೆ. 
ಇದೆಲ್ಲಾ ಬೇಡ ಅಂತ ನಾನೇ ಪತ್ರಿಕೆ ಮಾಡ್ಬೇಕು ಅಂತ ಹೊರಟೆ. ಬೇನಾಮಿ ಹೆಸರಲ್ಲಿ, ’ಪ್ರಜಾಸಂಗತಿ’ ಅಂತ ಆದರೆ ಅದರ ಸರ್ಕ್ಯುಲೇಷನ್ ನೂರು ಕೂಡ ಮುಟ್ಟಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಎಷ್ಟೇ ಹೈಪ್ ಕೊಟ್ರೂ ಅದಕ್ಕೆ ಮಾನ್ಯನೆ ಸಿಗಲಿಲ್ಲ. ಈ ಬಲಪಂಥದವರಿಗೆ ಅದು ಹೇಗೆ ಗೊತ್ತಾಯ್ತೋ, ಅದರ ಹಿಂದೆ ನಾನಿದೀನಿ ಎಳೆದಾಡಿಬಿಟ್ರು. ಈಗ್ಲೂ ಅಷ್ಟೆ, ಅದ್ರಲ್ಲಿ ಬರೋ ಪ್ರತಿಯೊಂದೂ ಲೇಖನವಕ್ಕೂ ಟಾಂಗ್ ಕೊಡ್ತಾರೆ. ಪತ್ರಿಕೆಯ ಹೆಸರನ್ನ  ಮೂರುದಿನಗಳ ’ರಜಾಸಂಗತಿ’ ಅಂತ ಮಾಡಿಬಿಟ್ಟಿದ್ದಾರೆ. ಈ ವಿಷಯ ಭಟ್ ಗೆ ಗೊತ್ತಾಗಿಯೇ ಇ ರುತ್ತೆ. ಆದ್ರೂ ಸುಮ್ನಿದಾನೆ ಅಂದ್ರೆ ಅವನ ತಲೇಲಿ ಏನೋ ಓಡ್ತಿರುತ್ತೆ. ಅದೇನೇ ಇರಲಿ, ಭಟ್ ಜೊತೆಗಿದ್ರೆ ನನಗೆ ಸಿಗೋ ಮನ್ನಣೆ ಬೇರೆ. ಅವನೊಟ್ಟಿಗೆ ಗುರುತಿಸ್ಕೊಳ್ಬೇಕು. ಜೊತೆಗೆ ನಿಂತು ಹಲ್ಕಿರಿದು ಫೋಟೊದಲ್ಲಿ ಬೀಳ್ಬೇಕು. ಮುಂದಿನ ಸೆಮಿನಾರ್, ಸಂವಿಧಾನ ಉಳಿಸುವಲ್ಲಿ ಧರ್ಮದ ಪಾತ್ರ ಅಂತೇನೋ ಕೊಟ್ಟಿದ್ದಾನೆ. ಅವರೇನು ಕೊಟ್ರೂ ನಾನು ಹೇಳೋದು ಒಂದೇ... ಹಿಂದೂ ಗ್ರಂಥಗಳನ್ನ ಸುಟ್ಟು ಬೂದಿ ಮಾಡದ ಹೊರತು ಸಂವಿಧಾನದ ಉಳಿವಿಲ್ಲ, ಆ ಧರ್ಮ ಸತಿ ಪದ್ಧತಿಯನ್ನ ಅನುಮೋದಿಸ್ತು ಅಂತಹ ಧರ್ಮವನ್ನ ನಂಬುವವರು ಮೂರ್ಖರು’ ಅಂತ ಹೇಳಿದ್ರೆ ಸಾಕು. ಬಲ ಪಂಥದವರು ರೊಚ್ಚಿಗೆದ್ದು ಮಾತಾಡ್ತಾರೆ, ನನಗೆ ಮೈಲೇಜ್ ಸಿಗುತ್ತೆ. 
#ಕೂಪ ಮುಂದುವರೆಯುವುದು...

Rating
No votes yet

Comments

Submitted by shreekant.mishrikoti Sun, 02/10/2019 - 15:28

ಅದ್ಭುತ ಬರವಣಿಗೆ ! ತುಂಬಾ ಧನ್ಯವಾದಗಳು