ಕೂಪ 3

ಕೂಪ 3

ಚಿತ್ರ

ಅಧ್ಯಾಯ ೨

ತಾತನ ಎದೆ ಮೇಲೆ ಕೈಯಿಟ್ಟು ಮಲಗಿದಾಗ ಸಾವಿರ ಅನುಮಾನಗಳು ತಲೆ ಹೊಕ್ಕು ಕಾಡತೊಡಗಿದವು. ಅಮ್ಮ ತನ್ನ ಜೀವನದ ಕತೆಗೆ ತಾನೇ ದುರಂತ ನಾಯಕಿಯಾಗಿದ್ದು ಯಾಕೆ? ಯಾವ ಆಸೆ ಅಮಿಶಗಳಿಗೆ ಅವಳು ಬಲಿಯಾದದ್ದು.? ನನ್ನನ್ನು ಸಾಕೋಕೆ ಅಂತ ಅವಳು ಬೇರೆ ದಾರಿ ತುಳಿದುಬಿಟ್ಟಳಾ? ಏನಿದು ಪಂಥಗಳು,ಸಿದ್ಧಾಂತಗಳು? ತಾತಂಗೆ ಕೇಳಿದ್ರೆ ಉತ್ತರ ಸಿಗಬಹುದಾ? ಇಷ್ಟಕ್ಕೂ ನಾನು ಇಷ್ಟು ಸಲೀಸಾಗಿ ತಾತನನ್ನ ಒಪ್ಪಿಕೊಂಡಿದ್ದು ಹೇಗೆ? ಈ ವ್ಯಕ್ತಿಯನ್ನ, ’ತಾತ’ ಅಂತ ಅಮ್ಮ ನನ್ನ ಮನಸ್ಸಿನಲ್ಲಿ ರಿಜಿಸ್ಟರ್ ಮಾಡಿಸಿಲ್ಲ. ಆದರೂ ಈ ವ್ಯಕ್ತಿ ಹೇಗೆ ಹತ್ತಿರವಾಗಿಬಿಟ್ಟ. ಅದೂ ಕೆಲವೇ ದಿನಗಳಲ್ಲಿ. ಅಮ್ಮನನ್ನ ಮಣ್ಣು ಮಾಡಿ ಬಂದ ಮೇಲೆ ತಾತ ಬಾಗಿಲಲ್ಲಿ ಹಾಜರಿದ್ದ. ’ಯಾರು’ ಅಂದೆ. ಪರಿಚಯ ಹೇಳಿಕೊಂಡ. ಅದೂ ನಗುನಗುತ್ತಲೇ. ಸಾವಿನ ಮನೆಯಿದು ಎಂಬ ಸಾಮಾನ್ಯಜ್ಞಾನ ಇಲ್ಲದ ಈ ವ್ಯಕ್ತಿ ನನಗೆ ತಾತನಾ? ಎಂದೆಲ್ಲಾ ಅನ್ನಿಸಿತು. ಆದರೆ ತಾತ ತುಂಬಾ ಓದಿಕೊಂಡವರು ಅನ್ನೋದು ಅವರ ಜೊತೆ ಮಾತಾಡ್ತಾ ಗೊತ್ತಾಯ್ತು. ವಿಶೇಷವೆಂದರೆ ಅಮ್ಮ ಮನೆ ಬಿಟ್ಟು ಬಂದ ನಂತರ ತಾತ ಹೆಚ್ಚು ಅಂತರ್ಮುಖಿಯಾದರಂತೆ. ಇಷ್ಟು ವರ್ಷ ಬೆಳೆಸಿದ ಮಗಳು ಏಕಾ ಏಕೀ ತನ್ನ ನಂಬಿಕೆಯ ಬುಡವನ್ನೇ ಪ್ರಶ್ನಿಸಿ ಹೋದಳಲ್ಲ ಎಂದೆಲ್ಲಾ ಯೋಚಿಸಿ ಖಿನ್ನರಾದರಂತೆ. ತಾತ ಏನನ್ನೂ ಬಾಯಿಬಿಟ್ಟು ಹೇಳುವುದೇ ಇಲ್ಲ. ಕೆದಕಿ ಕೆದಕಿ ಕೇಳಬೇಕು. ಕೇಳಿದರೆ’ ಅವೆಲ್ಲಾ ಮುಗಿದು ಹೋದ ಕತೆ ಬಿಡು, ಈಗ್ಯಾಕೆ’ ಎನ್ನುವ ತಪ್ಪಿಸಿಕೊಳ್ಳುವ ಮಾತನ್ನೇ ಆಡುತ್ತಿರುತ್ತಾರೆ. ನನ್ನ ತಾಯಿಯ ಈ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕೆಂದ ಹಂಬಲ ನನಗಿಲ್ಲವೇ? ಇನ್ಯಾರನ್ನ ಕೇಳಬೇಕು, ಸಜ್ಜನರನ್ನೇ ಅಥವ ಅವರ ಆ ಗುಂಪನ್ನೇ? ಸದಾ ಸಿಗರೇಟ್, ಹೆಂಡದ ಅಮಲಿನಲ್ಲಿರುವ ಅವರನ್ನು ಹೇಗೆ ಕೇಳುವುದು? ತಾತ ಸಣ್ಣಗೆಗೊರಕೆ ಹೊಡೀತಿದಾರೆ. ಒಬ್ಬನೇ ಮಲಗಿ ರೂಢಿಯಾಗಿರೋ ನನಗೆ ಈ ಗೊರಕೆ, ನಿದ್ದೆಗೆ ಆಸ್ಪದೇ ಕೊಡುತ್ತಿಲ್ಲ. ಅಮ್ಮನ ರೂಮಿನಲ್ಲಿ ಹೋಗಿ ಮಲಗ್ತೀನಿ. ಒಂದು ಸರ್ತಿಯಾದರೂ ಅಮ್ಮ ನನ್ನನ್ನ ತನ್ನ ಹತ್ತಿರ ಮಗ ಎನ್ನುವ ಪ್ರೀತಿಯಿಂದ ಮಲಗಿಸಿಕೊಳ್ಳಲಿಲ್ಲ. ಫೋಟೋಗೋಸ್ಕರವಾಗಿ ಒಮ್ಮೊಮ್ಮೆ ಮಲಗಿಸಿಕೊಳ್ತಿದ್ದು ಬಿಟ್ಟರೆ. ಅದೆಂತಹ ಹುಚ್ಚು ಅಮ್ಮನಿಗೆ ಈ ಸೋಷಿಯಲ್ ಮೀಡಿಯಾದಲ್ಲಿ. ಯಾರೋ ನಾಲ್ಕು ಮಂದಿ ಹಾಕುವ ಲೈಕು ಕಾಮೆಂಟಿನಾಸೆಗೆ ಕೃತಕ ಭಾವಗಳನ್ನು ತರಿಸಿಕೊಳ್ಳೋದು. ಭಾವಗಳು ಒಳಗಿನಿಂದ ತಾನೇ ತಾನಾಗಿ ಬರಬೇಕಲ್ವಾ? ಇಷ್ಟಕ್ಕೂ ಆ ಭಾವಗಳು ನನಗಿವ್ಯಾ? ತುಂಬಾ ದಿನದಿಂದ ಈ ರೂಮಿನ ವಸ್ತುಗಳನ್ನು ಮುಟ್ಟಿಲ್ಲ. ತಾತ ಇಲ್ಲಿ ದಿನಾ ಕಸ ಗುಡಿಸೋರು ಅಷ್ಟೆ. ಯಾವ ವಸ್ತುಗಳನ್ನೂ ಮುಟ್ಟಿತ್ತಿರಲಿಲ್ಲ. ಅಮ್ಮನ ದೊಡ್ಡ ಫೋಟೊ ಇದೆ. ಹಸಿರು ಹಿನ್ನೆಲೆಯಲ್ಲಿ , ಕತ್ತು ಮೇಲೆ ಮಾಡಿ ಗಲ್ಲದ ಮೇಲೆ ಕೈಯಿಟ್ಟು ಅಚ್ಚರಿ, ನಾಚಿಕೆ, ಕುತೂಹಲವೆಲ್ಲವನ್ನ ತೋರಿಸುವ ಫೋಟೊ. ಎಷ್ಟು ಚೆನ್ನಾಗಿದಾಳೆ ಅಮ್ಮ. ನಿಜಕ್ಕೂ ಸುಂದರಿ. ರಾಶಿ ರಾಶಿ ಪುಸ್ತಕಗಳಿವೆ. ಚಿಗುವೆರಾ, ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ,ಗದ್ದರ್, ಸಜ್ಜನ್ ಅಂಕಲ್ ಪುಸ್ತಕ ’ಬೆಳಕಿನೆಡೆಗೆ’ ಭಟ್ ಅವರ ಪುಸ್ತಕಗಳಿವೆ, ’ದೇವರಲ್ಲದ ತಾಯಿ’, ಹೀರೋ ಜಯಕುಮಾರ್ ಬಗ್ಗೆ ಪುಸ್ತಕ ಏನಿದರ ಹೆಸರು ’ದೂರದಾರಿಯ ಪಯಣಿಗ’ ಇನ್ನೊಬ್ಬ ಹೀರೋ ಸಂದರ್ಶನ್ ಬಗ್ಗೆ. ’ಸಿರಿಯ Some ದರ್ಶನ’ ಅಬ್ಬಬ್ಬಾ ಮೂವತ್ತು ಪುಸ್ತಕ ಬರೆದಿದಾರೆ. ಅಷ್ಟು ಟೈಮ್ ಎಲ್ಲಿರುತ್ತೋ ಅವರ ಹತ್ರ. ಪೇಪರ್ ಟಿವಿ ಗಳಲ್ಲಿ ಆ ಈ ಸೆಮಿನಾರ್ ಗಳಲ್ಲಿ ಓಡಾಡ್ತಾ ಹೇಗೆ ಬರೀತಾರೋ? ಸ್ಟ್ರೇಂಜ್. ವರ್ಷದಲ್ಲಿ ೮ ಪುಸ್ತಕ ಅಂತೂ ಗ್ಯಾರಂಟಿ ಬರುತ್ತೆ. ಅದೇನೋ ಟಾರ್ಗೆಟ್ ಅಂತೆಲ್ಲಾ ಫೇಸ್ ಬುಕ್ಕಿನಲ್ಲಿ ಹಾಕ್ಕೊಂಡಿರ್ತಾರೆ. ಅಮ್ಮ ಇವರ ಪುಸ್ತಕದ ವಿಮರ್ಶೆಯನ್ನ ತನ್ನ ಪೇಜ್ ನಲ್ಲಿ ಹಾಕ್ತಾಳೆ. ಮಾರ್ಕೆಟ್ ಮಾಡ್ತಾಳೆ. ಇವಳ ಪೋಸ್ಟ್ ನ ನೂರಾರು ಮಂದಿ ಶೇರ್ ಮಾಡ್ತಾರೆ. ನೂರು ಮಂದಿಯಲ್ಲಿ ೧೦ ಜನ ಕೊಂಡುಕೊಂಡರೂ ಸಾಕು. ಪುಸ್ತಕ ಬಿಕರಿಯಾದಂತೆ... ಭಟ್ ಅವರ ಮಾರ್ಕೆಟಿಂಗ್ ಬುದ್ದಿ ದೊಡ್ಡದು. ಅಮ್ಮ ಅಂತಿದ್ದಳು ನೀನು ಕೂಡ ಹೀಗೆ ಪುಸ್ತಕಗಳನ್ನ ಬರೀಬೇಕು ಅಂತ. ;ಇಷ್ಟು ಚಿಕ್ಕದಾ’ ಅಂತ ಕೇಳಿದ್ದೆ. ಹೌದು ಭಟ್ ಅವರ ಪುಸ್ತಕ ತುಂಬಾ ಚಿಕ್ಕದು. ಮಾಮೂಲಿ ಸೈಜಿನ ಪುಸ್ತಕಗಳಂತಲ್ಲ. ಅಂಗೈಯಲ್ಲಿ ಹಿಡ್ಕೊಂಡ್ರೆ ಸಾಕು. ಪುಸ್ತಕ ಅಂತ ಅನ್ನಿಸೋದೇ ಇಲ್ಲ, ಮೊಬೈಲ್ ಹಿಡ್ಕೊಂಡಂಗೆ ಇರುತ್ತೆ. ಎರಡೂ ಕೈಯಲ್ಲಿ ಬರೆದು ಬಿಸಾಡಿಬಿಡ್ತಾರೇನೋ ಕಾದಂಬರಿಗಳನ್ನ. ನಗು ಬರುತ್ತೆ. ’ಇಂತಹ ಗಬ್ಬು ಪುಸ್ತಕಗಳನ್ನ ನಾನ್ಯಾಕೆ ಬರೀಲಿ?’ ಅಂದಿದ್ದೆ. 
 
ನೀನು ಎಂತಹ ಪುಸ್ತಕ ಬರೆದಿದ್ದೀ ಅನ್ನೋದು ಮುಖ್ಯ ಅಲ್ಲ ಎಷ್ಟು ಬರೆದಿದೀಯ ಅನ್ನೋದು ಮುಖ್ಯ ಆಗುತ್ತೆ ಆಗ ನಿನಗೊಂದು ಅವಾರ್ಡ್ ಬಂದೇ ಬರುತ್ತೆ. ಅದೇ ಬುದ್ದಿವಂತಿಕೆ. ಒಮ್ಮೆ ಅವಾರ್ಡ್ ಬಂತೂ ಅಂತ ಇಟ್ಕೋ ಆಗ ಸರ್ಕಾರದ ಸವಲತ್ತುಗಳು, ಸಾಹಿತ್ಯದ ಗುಂಪಿನಲ್ಲಿ ನಿಂಗೊಂದು ಹೆಸರು ಎಲ್ಲಾ ಸಿಗುತ್ತೆ. ಈಗೆಲ್ಲಾ ಇದೇ ಟ್ರೆಂಡ್, ವೆಸ್ಟ್ರನ್ ಕಂಟ್ರೀಸ್ ನಲ್ಲೂ ಕೂಡ ಹೀಗೇ ಇದೆ. ಬಸ್ ನಲ್ಲಿ ಓದಕ್ಕೆ, ಟೈಂ ಪಾಸ್ ಮಾಡಕ್ಕೆ ಅಂತ ಚಿಕ್ಕ ಪುಸ್ತಕಗಳು ಬರ್ತಾವೆ, ಅಂತವನ್ನ ಬರೆದೋರಿಗೆ ಅಲ್ಲಿ ಮನ್ನಣೆ ಇದೆ. ಅಂತಹ ಪುಸ್ತಕಗಳು ಹೆಚ್ಚು ಬಂದಾಗ ಆ ಭಾಷೆಯ ಸಾಹಿತ್ಯ ಎಷ್ಟು ಶ್ರೀಮಂತ ಅನ್ನಿಸುತ್ತೆ. ಊಹಿಸ್ಕೋ, ಒಂದು ನಾವಿರ ಪುಸ್ತಕಗಳು ಒಂದು ಭಾಷೆಯಲ್ಲಿ ಕಾಣುತ್ತೆ ಅಂದಾಗ ಬೇರೆ ದೇಶ ಭಾಷೆಯ ಜನರ ಮನಸ್ಸಿನ ಮೇಲೆ ಆಗುವ ಪರಿಣಾಮ ಎಂಥದ್ದು ಅಂತ. ಅಂದಿದ್ದಳು ಅಮ್ಮ
 
ತಾತನಿಗೆ ಇದನ್ನೆಲ್ಲಾ ಕೇಳಬೇಕು. ಕೆಲವೊಂದು ನನ್ನ ವಯಸ್ಸಿಗೆ ಮೀರಿದ ಪ್ರಶ್ನೆ ಅಂತ ನನಗೇ ಗೊತ್ತಾಗ್ತಿರುತ್ತೆ. ಆದರೂ ಮನಸ್ಸು ನಿಲ್ಲೊಲ್ಲ. ನನ್ನ ಪ್ರೆಂಡ್ಸ್ ಮತ್ತವರ ಫಾಮಿಲಿ ಕಣ್ಣಲ್ಲಿ ನಾನೊಬ್ಬ ’ಅತಿ’ ಆಡೋ ಹುಡುಗ. ಕೊಂದುಬಿಟ್ಟೆಯಲ್ಲಮ್ಮ ನನ್ನ. ಸ್ವಾಭಾವಿಕ ಮಾತುಗಳನ್ನಾಡದ, ನಡೆಯನ್ನು ತಿಳಿಯದ ನನ್ನನ್ನು ಯಾರು ಒಪ್ಪಿಕೊಳ್ತಾರೆ. ಎಲ್ಲರಿಗೂ ನಾನೊಬ್ಬ ಅಹಂಕಾರಿಯಂತೆ ಅತೀ ಬುದ್ಧಿವಂತನಂತೆ ಕಾಣ್ತೀನಿ. ಅದನ್ನ ಹೆಮ್ಮೆ ಅಂತ ಹೇಗೆ ಧರಿಸಿಕೊಂಡು ಬದುಕಬೇಕು ಹೇಳು. ಅಮ್ಮನ ಟೇಬಲ್ಲಿನ ಮೇಲೆ ಕೂತರೆ ಅಮ್ಮನ ನೆನಪಾಗುತ್ತೆ. ಬಾಗಿಲು ತೆರೆದಿಟ್ಟಾಗ ಅಮ್ಮ ಇಲ್ಲಿ ಕೂತು ಏನನ್ನೋ ಓದುತ್ತಾ ಬರೆಯುತ್ತಾ ಇರ್ತಿದ್ದಳು. ನಾನು ಸೋಫಾದ ಮೇಲೆ ಅಮ್ಮನಿಗಾಗಿ ಕಾಯ್ತಾ ಕೂತಿರ್ತಿದ್ದೆ. ಅಮ್ಮನನ್ನ ಡಿಸ್ತರ್ಬ್ ಮಾಡೊ ಹಾಗಿರಲಿಲ್ಲ. ಆಡಕ್ಕೆ ಹೊರಗೆ ಹೋಗೋ ಹಾಗಿರ್ಲಿಲ್ಲ. ಹೋದ್ರೂ ಯಾರೂ ನನ್ನ ಸೇರಿಸಿಕೊಳ್ತಿರ್ಲಿಲ್ಲ. ಹ್ಮ್, ಎಷ್ಟು ಪುಸ್ತಕಗಳನ್ನ ಇಟ್ಕೊಂಡಿದಾಳೆ ಅಮ್ಮ. ಡ್ರಾವರ್ ನೊಳಗೆ ಡೈರಿಗಳಿವೆ. ಅಮ್ಮನ ಡೈರಿಗಳಾ? ಓದಬಹುದಾ?೧೩ ಡೈರಿಗಳಿವೆ. ಅಂದರೆ ನಾನು ಹುಟ್ಟಕ್ಕೆ ಮುಂಚಿನಿಂದ ಅಥವಾ ಹುಟ್ಟಿದಾಗಲಿಂದ ಅಮ್ಮ ಡೈರಿ ಬರೆದಿಡ್ತಿದಾಳಾ. ಅದೊಂದು ಕುತೂಹಲದ ಮೊಟ್ಟೆ ಮರಿ ಹಾಕಿ ಸಂಕೇತನನ್ನ ಡೈರಿ ಓದುವ ಹಾಗೆ ಮಾಡಿಬಿಟ್ಟಿತು. ತಾತ ಅವರ ಮನೆಗೆ ಬಂದಿದ್ದು ಅವನಿಗೆ ಮೊದಲ ಅಚರಿಯಾದರೆ ಡೈರಿ ಅವನಿಗೆ ಎರಡನೆಯದು. ಏನಿರಬಹುದು ಅಮ್ಮನ ಬದುಕಿನಲ್ಲಿ. ಇದುವರೆಗೂ ತನಗೆ ಕಾಣದ ಮುಖದ ಪರದೆಯನ್ನು ಈ ಡೈರಿ ಸರಿಸಿಬಿಡಬಹುದಾ? ತಲೆ ಕೊಡವಿಕೊಂಡರೂ ಕುತೂಹಲ ತಣಿಯಲಿಲ್ಲ. ಅವಳ ವ್ಯಕ್ತಿಗತ ಬದುಕಿನ ವಿವರಗಳನ್ನ ನಾನು ನೋಡಬಹುದಾ ಅನ್ನೋ ಪ್ರಶ್ನೆಯನ್ನ ತಾತನ ಹತ್ರ ಕೇಳಬೇಕು.
 
ತಾತ ಇನ್ನೊಬ್ಬರ ಬದುಕಿನ ವ್ಯಕ್ತಿಗತ ವಿಷಯಗಳನ್ನ ನಾವು ಓದಬಹುದಾ?
 
ನಿಮ್ಮಮ್ಮನ ಡೈರಿ ಸಿಕ್ಕಿದ್ಯಾ? 
 
ಹೌದು ತಾತ,
 
ನಿನ್ನ ಮನಸ್ಸಲ್ಲಿ ಈಗಾಗಲೇ ನಿಮ್ಮಮ್ಮನ ಬಗ್ಗೆ ಬೇಕಾದಷ್ಟು ಗೊಂದಲಗಳಿವೆ. ಅವುಗಳಿಗೆ ಅದರಲ್ಲಿ ಪರಿಹಾರ ಸಿಗುತ್ತೆ ಅನ್ನಿಸಿದ್ರೆ ಓದು. ಆದರೆ ಅದರಿಂದ ಇನ್ನೂ ಗೊಂದಲಗಳು ಹೆಚ್ಚಾಗ್ಬಹುದು. ಡೈರಿ ಓದೋ ವಿಚಾರ ಪ್ರತಿಯೊಬ್ಬರಿಗೂ ಅವರದೇ ಆದ ಖಾಲಿಜಾಗವನ್ನ ಅವರ ಮನಸ್ಸಿನಲ್ಲಿ ಸೃಷ್ಟಿಸ್ಕೋತಾರೆ. ಆ ಜಾಗದಲ್ಲಿ ಅವರಿಗೆ ಬೇಕಾದ್ದನ್ನ ಇಟ್ಕೊಟಾರೆ. ಅದಕ್ಕೆ ಈ ಡೈರಿ. ಆ ಡೈರಿಯಲ್ಲಿ ಅವರ ಎಲ್ಲಾ ಕೆಲಸಗಳಿಗೆ ಸಮರ್ಥನೆ ಇರುತ್ತೆ, ಹಾಗೆ ಎಲ್ಲವನ್ನ ನಿಷ್ಪಕ್ಷಪಾತವಾಗಿ ಬರೀಬೇಕು ಅಂದ್ರೆ ಅವರು ತುಂಬಾ ಬೆಳೆದಿರ್ಬೇಕು ಅಥವ ಸ್ಥಿತಪ್ರಜ್ಞತೆ ಅಂತಾರಲ್ಲ ಹಂಗಾಗಿರ್ಬೇಕು. ಇರಲಿ. ನಿಮ್ಮಮ್ಮನ ಬಗ್ಗೆ ನಿನಗೆ ತಿಳ್ಕೊಳೋ ಕುತೂಹಲ ಇದೆ, ಓದು.
 
ತಾತ ನಿನಗೆ ಇಲ್ವಾ. ನಿನಗೆ ಮಗಳು, ಅವಳ ಈ ಥರದ ಕ್ರಿಯೆಗಳಿಗೆ ನೀನು ಕಾರಣಾನ ಅಲ್ವಾ ಅಂತ ಪ್ರಶ್ನೆ ಬರೊಲ್ವಾ ನಿಂಗೆ. ನಿಂಜೊತೆ ಇದ್ದಾಗ ಅಮ್ಮ ಹೇಗಿದ್ಳು. ಆಮೇಲೆ ಹೇಗೆ ಬದಲಾದಳು ಅದೆಲ್ಲಾ ತಿಳ್ಕೋಬೇಕು ಅಂತ ಅನ್ನಿಸಿದೆ.
 
ಸಂಕೇತ ನೀನಿನ್ನೂ ಏಳನೇ ಕ್ಲಾಸ್ ೧೩ ವರ್ಷದವನು ಅಷ್ಟೆ. ಅದೆಲ್ಲಾ ನಿನಗೆ ಅರ್ಥವಾಗೊಲ್ಲಪ್ಪ. ನಮ್ಮ ವಯಸ್ಸಿಗೆ ಅನುಭವಕ್ಕೆ ಸಿಕ್ಕಷ್ಟನ್ನೆ ನಾವು ಬಾಚ್ಕೊಳ್ಳಬೇಕೆ ಹೊರತು, ಬಲವಂತವಾಗಿ ನಮ್ಮನ್ನ ನಾವು ಅರಳಿಸಿಕೊಳ್ಳಬಾರದು. ಬಲವಂತವಾಗಿ ಅರಳಿದ ಹೂಗಳು ಬೇಗ ಬಾಡಿ ಹೋಗ್ತಾವೆ
 
ಸರಿತಾತ ನಾನಾಗಲೇ ಅರಳಿದೀನಿ ಅನ್ಸುತ್ತೆ. ನನ್ನ ಫ್ರೆಂಡ್ಸ್ ಗೆ ಗೊತ್ತಾಗ್ದಿರೋ ಎಷ್ಟೋ ಸೂಕ್ಷ್ಮ ವಿಷಯಗಳು ನನಗೆ ಗೊತ್ತಾಗುತ್ತೆ. ಯಾರು ಕಪಟಿಗಳು, ಯಾರು ಒಳ್ಳೆಯವರು, ಯಾರು ನಾಟಕ ಮಾಡ್ತಿರೋರು, ಅಥವಾ ಯಾರ ಹತ್ರ ಹೇಗಿದ್ರೆ ನಮ್ ಕೆಲ್ಸ ಆಗುತ್ತೆ,  ಯಾರನ್ನ ಹೇಗೆ ಸಿಕ್ಕಿಸಬೇಕು, ದ್ವೇಷವನ್ನ ಹೇಗೆ ಮುಂದುವರೆಸಿಕೊಂಡು ಹೋಗ್ಬೇಕು, ಅದೆಲ್ಲಕ್ಕಿಂತ ಸಮಾಜದಲ್ಲಿ ನನ್ನನ್ನ ಹೇಗೆ ಬಿಂಬಿಸ್ಕೋಬೇಕು ಅಂತೆಲ್ಲಾ ಅಮ್ಮ ಹೇಳ್ತಿರ್ತಾಳೆ. ಮೊದ ಮೊದಲು ನನಗೆ ಅರ್ಥವಾಗ್ತಿರ್ಲಿಲ್ಲ. ಆದರೆ ಅಮ್ಮ ಅದನ್ನ ಬಿಡಿಸಿ ಬಿಡಿಸಿ ಹೇಳೋಳು. ಅಮ್ಮ ನನ್ನನ್ನ ಅವಳ ವಾರಸುದಾರ ಅಂತ ಅಂದ್ಕೊಂಡು ಹೋರಾಟದ ಹಾದಿಯನ್ನ ಹೇಳ್ಕೊಡ್ತಿದ್ಳು. ಸ್ಕೂಲಿನಲ್ಲಿ ನನ್ನ ಟರ್ನ್ ಮುಗಿದು ಇನ್ನೊಬ್ಬನ ಟರ್ನ್ ಬಂದಾಗ ನನಗೆ ಹಿಂಸೆ ಆಗ್ತಿತ್ತು. ನನಗೆ ಅರ್ಹತೆ ಇದ್ರೂ ಪೂರ್ತಾ ಟರ್ನ್ ನನಗೆ ಯಾಕೆ ಕೊಡಲ್ಲ ಅಂತೆಲ್ಲಾ ಕೇಳ್ತಿದ್ದೆ. ಅದಕ್ಕೆ ಅಮ್ಮ ನೀನು ನನ್ನ ಮಗ ಅಂತ ತಿರಸ್ಕಾರ ಅಥವಾ ಹಿಂದಕ್ಕೆ ತಳ್ಳೋ ಪ್ಲಾನ್ ಮಾಡ್ತಿರ್ಬಹುದು , ನೀನು ಹೋರಾಡು, ಇದನ್ನ ಶೋಷಣೆ ಅಂತ ಹೇಳು , ಅನ್ನೋರು. ನಾನು ಹಾಗೇ ಹೇಳ್ತಿದ್ದೆ. ಅವರು ’ ಎಲ್ಲರಿಗೂ ಅವಕಾಶವಾಗ್ಲಿ ಅಂತ ಮಾಡೋದು, ನಿನ್ನೊಬ್ಬನಿಗೇ ಅಲ್ಲ ಆ ಲೀಡರ್ ಪಟ್ಟ ಇರೋದು’ ಅಂತ ವ್ಯಂಗ್ಯವಾಗಿ ಅಂದ್ರು. ಅದಕ್ಕೆ ಉತ್ತರ ಕೊಡಕ್ಕಾಗದೆ ಸುಮ್ಮನಿದ್ದೆ. ಆದರೆ ನನ್ನ ಬಾಯಿಂದ ಶೋಷಣೆ ಪದ ಕೇಳಿದ ಹೆಡ್ ಮಾಸ್ಟರ್ ಗಲಿಬಿಲಿಯಾಗಿದ್ದಂತೂ ಹೌದು. ನನ್ನನ್ನ ತಮಾಷೆಗೆ ಅನ್ನೋ ಹಾಗೆ ’ಏನೋ ಶೋಷಣೆ’’ ಅನ್ನೋರು. ಅದರ ಹಿಂದಿನ ವ್ಯಂಗ್ಯ ನನಗೆ ಗೊತ್ತಾಗಿಬಿಡ್ತಿತ್ತು,  ನನ್ನ ಫ್ರೆಂಡ್ಸ್ ಗೆ ನಾನು ಪೇಪರ್ ನಲ್ಲಿ ಬರೀತೀನಿ ಅಂತ ತೋರಿಸಿದ್ದೆ. ನನ್ನ ಬರಿಯೋದನ್ನ ಅಮ್ಮ ತಿದ್ದಿ ಪೇಪರ್ ಗೆ ಕಳಿಸೋಳು, ಒಮ್ಮೊಮ್ಮೆ ಅಮ್ಮನೇ ಬರೆಯೋಳು, ನನ್ ಫೋಟೊ ಬರೋದು. ಎಲ್ಲಾ ಫ್ರೆಂಡ್ಸ್ ನನ್ನನ್ನ ಹೆಂಗೆ ಬರೀತೀಯ ಅಂತ ಕೇಳೋರು , ನಾನು ಅದೊಂದು ಸಾಮಾನ್ಯ ಕ್ರಿಯೆ, ಅಥವಾ ಪ್ರತಿಭೆ ಹಾಗೇ ಹುಟ್ಟಿಕೊಂಡು ಬರುತ್ತೆ. ಲೇಖನದ ವಸ್ತು ಅಥವಾ ಕತೆಯ ವಸ್ತು ಮನಸ್ಸಲ್ಲಿ ಮೂಡುತ್ತೆ ಅಂತ ದೊಡ್ಡ ಬರಹಗಾರರ ಹಾಗೆ ಹೇಳ್ತಿದ್ದೆ. ಪೆದ್ದುಗಳು ಬಾಯ್ಬಿಟ್ಕೊಂಡು ಕೇಳೋರು. ಇಷ್ಟೆಲ್ಲಾ ಅಮ್ಮ ನನಗೆ ಹೇಳ್ಕೊಟ್ಟಿದಾಳೆ ಆದರೆ ಅದೆಲ್ಲದ ಜೊತೆಗೆ ನನ್ನಲ್ಲಿ ಆತ್ಮಸಾಕ್ಷಿ ಅಂತಾರಲ್ಲ, ಅಂದ್ರೆ ’ಒಳಮನಸ್ಸಿಗೆ ಗೊತ್ತಾಗುತ್ತೆ ಇದು ನಾನಲ್ಲ ಅನ್ನೋದು’ ಅದು ಬೆಳೀತಿತ್ತು. ಇದನ್ನ ಅಮ್ಮನ ಹತ್ರ ಹೇಳಿದ್ರೆ ಅವಳು ಬಡಿತಾಳೆ ಅಂತಾನೂ ಗೊತ್ತು. 
 
ಸರಿ ನೀನು ಈ ವಯಸ್ಸಿಗೆ, ವಯಸ್ಸಿಗೆ ಮೀರಿದ ವಿಷಯಗಳನ್ನ ಸೂಕ್ಷ್ಮಗಳನ್ನ ಅರ್ಥ ಮಾಡ್ಕೊಳೋ ಮಟ್ಟಕ್ಕೆ ಬಂದಿದೀಯ. ನಿನಗೆ ಬಾಲ್ಯವೇ ಇಲ್ಲವಲ್ಲೋ.... ಆಯ್ತು ಅವಳ ವಿಷಯದಲ್ಲಿ ನಿನಗೇನು ಬೇಕು ಕೇಳು ಹೇಳ್ತೀನಿ. ಈಗ ಮಲ್ಕೋ
 
ಸಂಕೇತನಿಗೆ ನಿದ್ರೆ ಹತ್ತಲಿಲ್ಲ.ಏನೇನು ಕೇಳಬೇಕು. ಅನ್ನೋದನ್ನ ಮನಸ್ಸಿನಲ್ಲಿಯೇ ಬರೆದುಕೊಳ್ಳತೊಡಗಿದ. ನಿಧಾನಕ್ಕೆ ಎದ್ದು ಅದೆಲ್ಲವನ್ನ ಪೇಪರಿನ ಮೇಲೆ ಬರೆದ
 
ಅಮ್ಮನ ಹುಟ್ಟು ಬಾಲ್ಯಗಳು
ಅವಳ ಅಪ್ಪ ಅಮ್ಮ ಬಂಧುಗಳು
ಕಳೆದುರುಳಿದ ದಿನಗಳು
ಯಾವ ಕಾರಣ ಅವಳನ್ನ ನೂಕಿದ್ದು
ಯಾವ ರೀತಿ ಅವಳನ್ನು ಬಾಚಿದ್ದು
ಸ್ಕೂಲು ಕಾಲೇಜು ಮೈಲಿಗಲ್ಲು
ಪರಿಚಯ, ಸ್ನೇಹಿತರು ಮತ್ಯಾರು
ಹೋರಾಟದ ಮೊದಲ ದಿನ
ಮದುವೆ ಸಂಭ್ರಮ ಊಟ ಕೂಟ
ಎಲ್ಲ ಬಿಟ್ಟು ಹೋದದ್ದೆಲ್ಲಿಗೆ
ಸಾಧಿಸಿದ್ದೇನು
 
 
#ಕೂಪ ಮುಂದುವರೆಯುವುದು...
 

Rating
No votes yet