ಕೂಪ 5

ಕೂಪ
ಅಧ್ಯಾಯ ೨
೩
ಮೂರ್ತಿಗಳು ಹೊರಟಿದ್ದನ್ನು ಮತ್ತು ಸಂಕೇತ ಅವರ ಹಿಂದೆ ಹೋದದ್ದನ್ನು ಪ್ರಸನ್ನ ಗಮನಿಸಿದ. ಅವರನ್ನು ಹಿಂಬಾಲಿಸಿ ಮನೆಯವರೆಗೂ ತಲುಪಿದ. ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಪ್ರಸನ್ನ; ’ನಮಸ್ತೆ ಸರ್ ನಾನು ಪ್ರಸನ್ನ ನರಸೀಪುರ ಅಂತ, ಫ್ರೀಲ್ಯಾನ್ಸ್ ಪತ್ರಕರ್ತ. ಸಂಕೇತ ಶ್ರೀಮುಖಿ ಅವರ ಮಗ ಅಲ್ವಾ? ನೀವು ಏನಾಗಬೇಕು ಸರ್ ಅವನಿಗೆ? ನಿಮಗೆ ಅಭ್ಯಂತರ ಇಲ್ಲಾಂದ್ರೆ ಹೇಳಿ’.
’ನನ್ನ ಮಗಳ ಮಗ, ನನಗೆ ಮೊಮ್ಮಗ ಆಗಬೇಕು. ಬನ್ನಿ ಒಳಗೆ. ಪೇಪರ್ ನಲ್ಲಿ ನಿಮ್ಮ ಲೇಖನ ಓದ್ತಾ ಇರ್ತೀನಿ. ಸುಮಾರು ಪತ್ರಿಕೆಗಳಿಗೆ ಬರೀತೀರ. ಯಾವ್ದಾರ ಒಂದು ಪತ್ರಿಕೆಯಲ್ಲಿ ನೆಲೆ ನಿಲ್ಲಬಹುದಲ್ಲಾ’
ಇಲ್ಲ ಸರ್. ಇವತ್ತಿನ ಬಯಾಸ್ಡ್ ಪತ್ರಿಕೋದ್ಯಮ ನನಗೆ ಒಗ್ಗಲ್ಲ. ಒಂದೇ ಪತ್ರಿಕೆಯಲ್ಲಿ ಕೆಲಸಕ್ಕೆ ಅಂತ ಸೇರಿಕೊಂಡ್ರೆ ಅವರ ನಿಯಮಗಳಿಗೆ ಅನುಸಾರವಾಗಿ ಬರೀಬೇಕು. ನಿರ್ಭೀತಿಯಿಂದ ಬರೆಯೋಕೆ ಆಗೊಲ್ಲ. ನನಗೆ ತೋಚಿದ್ದನ್ನ ನಿರ್ಭಯವಾಗಿ ಬರೀಬೇಕು.’
ತುಂಬಾ ಒಳ್ಳೇದಪ್ಪ. ಏನ್ ನಮ್ಮನ್ನ ಹಿಂಬಾಲಿಸ್ಕೊಂಡು ಬಂದಿದೀರ?
’ಏನಿಲ್ಲ ಸರ್, ಖಾನ್ ಭಾಷಣ ಮಾಡ್ತಾ ಇರ್ಬೇಕಾದರೆ ನಿಮ್ಮ ಕಣ್ಣಲ್ಲಿ ನೀರು ಬರ್ತಿತ್ತು, ಆಮೇಲೆ ಕೋಪ ಕಾಣ್ತಿತ್ತು, ನಂತರ ಹತಾಶೆಯಾಗಿ ಬದಲಾಗಿ, ನೀವು ಎದ್ದು ಹೊರಟುಬಿಟ್ರಿ. ಯಾಕೆ ಸರ್? ಏನಾಯ್ತು?’
’ಅಂಥದ್ದೇನಿಲ್ಲಪ್ಪ, ನಾನು ಇಲ್ಲಿನ ಬುದ್ಧಿವಂತ ಜೀವನಕ್ಕೆ ಒಗ್ಗೊಲ್ಲ, ಅಷ್ಟೆ, ಬಿಟ್ಬಿಡಿ.
’ಸರಿ ಸರ್ , ಈ ವಯಸ್ಸಲ್ಲಿ ಅಷ್ಟೊಂದು ಕ್ಷಾತ್ರ ನಿಮ್ಮ ಮುಖದಲ್ಲಿ ಕಾಣಿಸಿದ್ದು ನೋಡಿ, ಹೊಸ ವಿಷಯಗಳನ್ನ ತಿಳ್ಕೋಬೇಕು ಅನ್ನಿಸ್ತು. ಅವರ ಭಾಷಣದಲ್ಲಿ ದೋಷ ಇದೆ ಅನ್ನೋದು ಗೊತ್ತಾಯ್ತು. ಅದರ ಬಗ್ಗೆ ನಾನೇ ತಿಳ್ಕೊಳೋ ಪ್ರಯತ್ನ ಮಾಡ್ತೀನಿ’
ಅವನ ಕಣ್ಣಲ್ಲಿ ಪ್ರಾಮಾಣಿಕತೆಯನ್ನು ನೋಡಿದ ಮೂರ್ತಿಗಳು ಅವನಿಗೆ ಕುಳಿತುಕೊಳ್ಳುವಂತೆ ಸೂಚಿಸಿದರು; ’ಕೇಳು ಏನ್ ಬೇಕು?, ಸಂಕೇತ ನೀನೂ ಇಲ್ಲೇ ಕೂತ್ಕೋ’.ಸಂಕೇತ ಪ್ರಸನ್ನ ಸೋಫಾದ ಮೇಲೆ ಕೂತು ಮೂರ್ತಿಗಳ ಮಾತನ್ನು ಕೇಳಲು ಉದ್ಯುಕ್ತರಾದರು. ಮೂರ್ತಿಗಳು ಸೋಫಾದ ಮೇಲೆ ಚಕ್ಕಮಕ್ಕಳ ಹಾಕಿ ಕೂತು, ಕಣ್ಮುಚ್ಚಿ; ಖಾನ್ ಹೇಳಿದ್ದರಲ್ಲಿ ಏನು ತಪ್ಪಿದೆ ಅನ್ನೋದು ನಿಮ್ಮ ಪ್ರಶ್ನೆ ಅಲ್ವಾ? ವಜ್ರ ಇದೆ ಅಂದ್ಕೋ ಅದನ್ನ ಅಲಂಕಾರಕ್ಕೆ ಬಳಸಬಹುದು, ನೆಲ ಕೊರೆಯೋ ಸಾಧನಕ್ಕೆ ಅಳವಡಕವಾಗಿ ಬಳಸಬಹುದು, ಅದರ ಮೂಲಕ ಬೆಳಕು ಹಾಯಿಸಿ ವಿವಿಧ ಬಣ್ಣಗಳನ್ನ ತೋರಿಸುವ ಸಲುವಾಗಿ ಬಳಸಬಹುದು, ಶಬ್ದದ ಉತ್ಕೃಷ್ಟತೆಯನ್ನ ಹೆಚ್ಚಿಸೋಕೆ ಬಳಸಬಹುದು, ಹೀಗೆ ಹಲವಾರು ಉಪಯೋಗಗಳಿವೆ, ಆದರೆ ವಜ್ರದ ಮೂಲಗುಣವೊಂದಿದೆ ಅದು ಕಠಿಣ ಮತ್ತು ಹೊಳಪು. ಹೊಳಪಿಗೆ ನಾವು ಅದನ್ನು ಉಜ್ಜಿ ಉಜ್ಜಿ ಹೊಳಪಾಗಿಸುತ್ತೇವೆ ಅಷ್ಟೆ, ನಾವು ನೋಡುವ ರೀತಿಯಲ್ಲಿ ವಜ್ರವನ್ನು ಊಹಿಸಿಕೊಳ್ತೀವಿ. ಒಬ್ಬರಿಗೆ ಆಭರಣವಾಗಿ, ಇನ್ನೊಬ್ಬರಿಗೆ ಕೈಗಾರಿಕೆಗೆ ಅನುಕೂಲಕರ ವಸ್ತುವಾಗಿ , ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಣುತ್ತೆ. ಅದು ನೋಡುವ ರೀತಿಯ ಮೇಲೆ ನಿಂತಿದೆ. ಅದೇ ಥರ ವಚನಗಳೂ ಕೂಡ. ಕೆಲವರಿಗೆ ಜಾತಿ ಸಮಸ್ಯೆಯನ್ನು ಹೋಗಲಾಡಿಸುವ ಪ್ರಯತ್ನವಾಗಿ, ಇನ್ನೊಬ್ಬರಿಗೆ ಅದೊಂದು ದೊಡ್ಡ ಚಳುವಳಿಯಾಗಿ, ಮತ್ತೊಬ್ಬರಿಗೆ ಹೋರಾಟವಾಗಿ, ವೇದಿಕೆಯಾಗಿ, ಸಮಾನತೆಯಾಗಿ, ಸ್ತ್ರೀವಾದಕ್ಕೆ ಹೊಂದಿಕೆಯಾಗಿ ಥರಾವರಿಯಾಗಿ ಕಾಣುತ್ತೆ. ಆದರೆ ಇದೆಲ್ಲದ್ದಕ್ಕೂ ಮೀರಿ ವಚನಗಳಲ್ಲಿ ಒಂದು ಸತ್ಯ ಇದೆ ಅದನ್ನ ಮರೆಮಾಚಿ ಇವರುಗಳು ಭಾಷಣದಲ್ಲಿ ಅವರದ್ದೇ ಥಿಯರಿಗಳನ್ನ ಹೇರುತ್ತಿರೋದು ಅಷ್ಟಾಗಿ ಸರಿ ಕಾಣಲಿಲ್ಲಪ್ಪ. ಅದಕ್ಕೆ ಕಣ್ಣೀರು, ಸಿಟ್ಟು, ಹತಾಶೆಯಾಗಿ ಹೊರಬಂದುಬಿಟ್ಟೆ.’
ಅಂದರೆ ನೀವು ಹೇಳ್ತಿರೋದು ವಚನಗಳನ್ನ ಇವರುಗಳೆಲ್ಲಾ ಸರಿಯಾಗಿ ಅರ್ಥ ಮಾಡ್ಕೊಂಡಿಲ್ಲ ಅಂತ, ಅಥವಾ ಇವರ ಥಿಯರಿ ಸರಿ ಇಲ್ಲ ಅಂತ, ಹಾಗಿದ್ದಾಗ ನಿಮ್ಮ ಥಿಯರಿಯೂ ಸಹ ಯಾವುದೋ ಪ್ರಭಾವಕ್ಕೆ ಒಳಗಾಗಿ ಆಗಿರಬಹುದಲ್ವಾ? ಅಥವಾ ನಿಮ್ಮ ಥಿಯರಿಯನ್ನ ನೀವೂ ಇನ್ನೊಬ್ಬರ ಮೇಲೆ ಒತ್ತಾಯ ಮಾಡ್ತಿದೀರಿ ಅಂತಾಗಲ್ವಾ?
ಹಾಗನ್ನಿಸಬಹುದು, ಸತ್ಯವನ್ನು ಶೋಧಿಸುವುದರಲ್ಲಿ ತಪ್ಪಿಲ್ಲವಲ್ಲ. ಅವರ ವಾದವನ್ನ ತಪ್ಪು ಅಂತ ಹೇಳ್ಬೇಕಾದರೆ ನಮ್ಮದೂ ವಾದ ಅಂತಲೇ ಆಗುತ್ತೆ, ಆದರೆ ಸತ್ಯ ಯಾವುದರಲ್ಲಿದೆ ಅನ್ನೋದು ಮುಖ್ಯ. ಯಾವುದೇ ವಿಷಯವನ್ನ ಹೇಗೆ ಬೇಕಾದರೂ ತಿರುಚಿ ಅದಕ್ಕೊಂದು ಹೋರಾಟದ ಆಯಾಮ ಕೊಟ್ಟುಬಿಡಬಹುದು. ಆದರೆ ಅದು ವಾಸ್ತವವಾಗಿ ಹಾಗಿತ್ತೇ, ಅನ್ನೋದರ ಮೇಲೆ ಅಲ್ವಾ ಸತ್ಯ ನಿಂತಿರೋದು?
ಸರಿ ಸರ್, ಹಾಗಿದ್ದರೆ ಅವರ ಮಾತಿನಲ್ಲಿ ಇದ್ದ ತಪ್ಪೇನು?
ಸಂಕೇತನಿಗೂ ಕುತೂಹಲ ಉಕ್ಕುತ್ತಿತ್ತು, ತಾತ ಇಷ್ಟೊಂದು ಮಾತಾಡುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ಜೀವನಮಾನದುದ್ದಕ್ಕೂ ತಾತನೆಂಬ ವ್ಯಕ್ತಿಯ ಮುಖವನ್ನೇ ನೋಡಿರರದ ನಾನು ಧುತ್ತೆಂದು ಪ್ರತ್ಯಕ್ಷವಾದ ಈ ತಾತ ಈಗ ಕುತೂಹಲದ ಮೊಟ್ಟೆ ಒಡೆದು ಹೊರ ಬರುತ್ತಿದ್ದಾನೆ. ಏನಿರಬಹುದು ಈ ತಾತನ ತಲೆಯೊಳಗೆ. ಯಾವ ಭಂಡಾರವನ್ನ ಒಡೆಯುತ್ತಿದ್ದಾನೆ ಈ ತಾತ. ಎಂದೆಲ್ಲಾ ಯೋಚಿಸಿ ಗಲ್ಲಕ್ಕೆ ಕೈ ಹಚ್ಚಿ ಕೂತ.
’ಮೊದಲನೆಯದು ಅದೊಂದು ಚಳುವಳಿ ಅಲ್ಲ. ತಮ್ಮ ಅಧ್ಯಾತ್ಮದ ಅನುಭವಗಳನ್ನು ಹಂಚಿಕೊಳ್ಳಲು ಏರ್ಪಡಿಸಿಕೊಂಡ ಮಾಧ್ಯಮ. ಎಲ್ಲರಂತೆಯೇ ವಚನಗಳೂ ಕೂಡ ದೇವರ ಹುಡುಕಾಟದಲ್ಲಿ, ತೊಡಗಿಸಿಕೊಂಡ ಸಾಹಿತ್ಯ, ಅದನ್ನು ಬಲವಂತವಾಗಿ ಚಳುವಳಿ,ಹೋರಾಟ ಎಂದೆಲ್ಲಾ ಹಣೆಪಟ್ಟಿ ಕಟ್ಟುವುದು ಅಷ್ಟು ಸರಿಯಾದ ಮಾರ್ಗವಲ್ಲ.
ಹಾಗಾದ್ರೆ ನಾವು ಇಷ್ಟು ವರ್ಷ ಓದಿರೋದೆಲ್ಲಾ, ಈಗ ಮಕ್ಕಳಿಗೆ ಹೇಳ್ತಿರೋದೆಲ್ಲಾ ಸುಳ್ಳಿನ ಕಂತೆ ಅಂತಾಗುತ್ತೆ.
ಹೌದು , ಇಷ್ಟು ವರ್ಷ ನಾನೂ ಹಾಗೇ ಪಾಠ ಮಾಡಿದ್ದೆ. ಈಗಲೂ ಅದೇ ರೀತಿಯಲ್ಲೇ ಇದೆ. ಆದರೆ ಸತ್ಯ ಗೊತ್ತಾದಮೇಲೆ ಮಕ್ಕಳಿಗೆ ಏನಂತ ಹೇಳೋದು? ವಚನಕಾರರು ಅಧ್ಯಾತ್ಮವನ್ನ ಬಿಟ್ಟು ಸಮಾಜ ಸುಧಾರಕರಾದರು ಅನ್ನೋದನ್ನ ಹೇಳಿದರೆ ವಚನಕಾರರ ಸಾಧನೆಗೆ ಮಸಿ ಮೆತ್ತಿದ ಹಾಗಲ್ವಾ? ಪಾರಮಾರ್ಥಿಕವಾಗಿ ಬದುಕಿದ ಮಹಾನ್ ಸಂತರನ್ನ ಬ್ರಿಟಿಷ್ ವಸಾಹತು ವಿದ್ವಾಂಸ ಕಣ್ಣಿನಲ್ಲಿ ನೋಡಿ ನಮ್ಮ ಮಹಾತ್ಮರನ್ನ ಬೀದಿಗೆ ತಂದು ನಿಲ್ಲಿಸಿದೀವಿ.
ಸರ್ ಇದರ ಬಗ್ಗೆ ನಾನೊಂದು ಲೇಖನ ಬರೀತೀನಿ, ನಿಮ್ಮ ಹತ್ತಿರ ಮಾತಾಡಬೇಕು. ನೀವು ಯಾವಾಗ ಫ್ರೀ ಇರ್ತೀರ ಹೇಳಿ ಆಗ ಬರ್ತೀನಿ.
’ಇಲ್ಲಪ್ಪ, ಬಂದು ಎರಡು ತಿಂಗಳಾಗ್ತಿದೆ. ಊರ ಕಡೆ ಏನಾಗಿದ್ಯೋ ಗೊತ್ತಿಲ್ಲ. ಇವನ ಎಕ್ಸಾಂ ಗೆ ಇನ್ನೂ ಆರು ತಿಂಗಳಿದೆ. ಅಷ್ಟು ದಿನ ನಾನಿಲ್ಲಿ ಇರೋಕಾಗಲ್ಲಪ್ಪ. ತೋಟ ಇದೆ. ಟ್ಯೂಷನ್ ಇದೆ. ಎರಡು ತಿಂಗಳು ಇನ್ನೊಬ್ಬ ಮೇಷ್ಟ್ರನ್ನ ಹೇಗೋ ಹೊಂದಿಸಿ ಬಂದಿದೀನಿ. ನಾನಿಲ್ಲ ಅಂದ್ರೆ ಗಲಾಟೆ ಮಾಡ್ತಾವೆ ಹುಡುಗ್ರು. ಇವನನ್ನ ಊರಿಗೆ ಕರ್ಕೊಂಡು ಹೋಗಿ ಅಲ್ಲೇ ಓದಿಸಬೇಕು ಅಂತ ಇದೆ. . ಆದರೆ ಇವನ ಮನಸಲ್ಲಿ ಏನಿದೆ. ಅದರ ಜೊತೆಗೆ ಶ್ರೀಮುಖಿಯ ಬಳಗದವರು ಇವನನ್ನ ಅವಳ ಉತ್ತರಾಧಿಕಾರಿ ಅನ್ನೋ ಹಾಗೆ ನೋಡ್ತಿದಾರೆ. ಹಾಗಾಗಿ ನಿರ್ಧಾರ ನನ್ನ ಕೈಲಿಲ್ಲ. ಇಷ್ಟು ದಿವಸ ಇಲ್ಲದೆ ಇದ್ದ ನಾನು, ಈಗ ಧುತ್ತಂತ ಬಂದು ’ನಡಿ ಹೋಗೋಣ’ ಅಂದ್ರೆ ಇವನ ಮನಸ್ಸಲ್ಲಿ ಏನಾಗುತ್ತೆ , ಅನ್ನೊದೆಲ್ಲಾ ಯೋಚಿಸ್ತಿದೀನಿ. ಕಣ್ಮರೆಯಾದ ವ್ಯಕ್ತಿ ಕಣ್ಣೆದುರು ಬಂದಾಗ ಅವನ ಸಂಬಂಧ ಕೃತಕ. ಕಾಲ ಕಳೀತಾ ಕೃತಕತೆ ಮಾಯವಾಗಿ ಸ್ವಾಭಾವಿಕವಾಗಬಹುದೇನೋ...
ಸಂಕೇತ ಯೋಚಿಸುತ್ತಿದ್ದ. ಅಮ್ಮ ಹೇಳ್ತಿದ್ದ ವಿಷಯಕ್ಕೂ ತಾತ ಹೇಳುವ ವಿಷಯಕ್ಕೂ ತುಂಬಾ ವ್ಯತ್ಯಾಸಗಳಿವೆ. ಅಮ್ಮ ಖಚಿತವಾಗಿ ಹೀಗೇ ಅಂತ ಯಾವುದನ್ನೂ ಹೇಳ್ತಿರ್ಲಿಲ್ಲ. ಯಾವುದೋ ಪುಸ್ತಕದ ಸಾಲುಗಳನ್ನ ಹೇಳ್ತಾ ಅದರ ಆಧಾರದ ಮೇಲೆ ಮಾತಾಡೋಳು, ತಾತ ಸ್ವತಃ ತಾನೇ ಸಂಶೋಧನೆ ನಡೆಸಿ ಮಾತಾಡ್ತಿರೋ ಹಾಗಿದೆ. ಸಂಕೇತ ಹೇಳಿದ: ’ತಾತ ಸಧ್ಯ ಬರೋದು ಕಷ್ಟ, ಎಕ್ಸಾಂ ಆದಮೇಲೆ ಖಂಡಿತವಾಗಿ ಅಲ್ಲಿಗೆ ಬರ್ತೀನಿ, ನಿನ್ನ ಜೊತೆಲಿರ್ತೀನಿ. ಆದರೆ ಅಲ್ಲೀವರೆಗೂ ನೀನು ನನ್ನ ಜೊತೆ ಇಲ್ಲೇ ಇರ್ಬೇಕು’
ಶ್ರೀನಿವಾಸ ಮೂರ್ತಿ ಮೌನವಾದರು. ವಾರಕ್ಕೊಮ್ಮೆ ಹೋಗಿ ಬರೋದು ಕಷ್ಟವಲ್ಲ. ಆದರೂ ಅಲ್ಲಿ ನಾನಿಲ್ಲ ಅಂದ್ರೆ ತೋಟದ ನಿಗಾ ವಹಿಸೋ ಜನ ಬೇಕಲ್ಲ. ಸರಕಾರ ಕೂಲಿಗಾಗಿ ಕಾಳು ಅಂತ ಮಾಡಿ ಎಲ್ಲರನ್ನ ಸೋಮಾರಿಗಳನ್ನಾಗಿಸಿದೆ. ದುಡಿಯಕ್ಕೆ ಮೈ ಬಗ್ಗದೆ ಕಳ್ಳ ಬೀಳ್ತಾರೆ ಪೋಲಿಗಳು. ತೋಟದಲ್ಲಿ ಕಾಯಿ ಕದಿಯೋದು, ಬೇಲಿ ಹಾರೋದು, ಮನೆ ಮುಂದೆ ಇಸ್ಫೀಟು ಇತ್ಯಾದಿ ಆಡೋದು, ಯಾರಾದ್ರೂ ಇದಾರೆ ಅಂದ್ರೆ ಆ ಕಡೆ ಸುಳಿಯಲ್ಲ. ಕೆಲಸಕ್ಕೆ ಹಚ್ಚದ ಸರಕಾರ ದುಡ್ಡು ಕೊಟ್ಟು ಅದ್ಯಾಕಾದ್ರೂ ಜನರನ್ನ ಸಾಕುತ್ತೋ ನಾ ಕಾಣೆ. ರಂಗಸಾಮಿ ಗೆ ಹೇಳಿದ್ರೆ ನಿಗಾ ವಹಿಸ್ಕತಾನೆ, ಸ್ವಲ್ಪ ಸೋಮಾರಿ , ಆದ್ರೂ ಕೈ ಶುದ್ದ ಇದೆ. ಇಲ್ಲಿದ್ದು ನಾನೇನು ಮಾಡ್ಬೇಕು. ಇವನಿಗೆ ಬೇಯ್ಸಿ ಹಾಕಬೇಕು. ಇವನ ಬೌದ್ಧಿಕತೆಗೆ ನೀರೆರಿಬೇಕಾ? ಇಲ್ಲ ’ಇದೀನಿ’ ಅಷ್ಟೆ ಅನ್ನೋ ಭಾವದಲ್ಲಿದ್ರೆ ಒಳ್ಳೇದು. ಆದ್ರೂ ಒಮ್ಮೊಮ್ಮೆ ನಾಲಿಗೆ ಅಳತೆ ತಪ್ಪುತ್ತೆ. ಸುಳ್ಳುಗಳ ಕಂತೆಯನ್ನ ಸುಮ್ಮನೆ ಬಿಡೋದರ ಬದಲು ವಾದ ಮಾಡುವ ಹುಚ್ಯಾಕೆ. ನೋಡೋಣ, ನನ್ನ ಪರೀಕ್ಷೆ ಆಗಿ ಹೋಗಲಿ.,
’ಸರಿ ಸಂಕೇತ, ಆದರೆ ಒಂದು ಮಾತು, ನಾನು ನನ್ನ ದುಡ್ಡಲ್ಲಿ ಅಡುಗೆ ಮಾಡಿ ಇಕ್ತೀನಿ, ನಿಮ್ಮಮ್ಮನ ದುಡ್ಡು ನನಗೆ ಬೇಡ.
ಸರಿ...
ಪ್ರಸನ್ನ ನೀವಿನ್ನು ಹೊರಡಿ, ನಾಳೆ ಇದೇ ಸಮಯಕ್ಕೆ ಬನ್ನಿ, ಬಾಗಿಲಿನ ಹತ್ತಿರ ಬಂದ ಮೂರ್ತಿಗಳು, ಅವನು ಸ್ಕೂಲಿಗೆ ಹೋಗಿರ್ತಾನೆ, ಆಗ ಬನ್ನಿ
ಯಾಕೆ ಅಂದ್ರು ಪ್ರಸನ್ನ
ಅವನ ಅಮ್ಮನ ವಿರುದ್ದದ ಹೇಳಿಕೆಗಳನ್ನ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಅವನಿನ್ನೂ ಬೆಳೆದಿಲ್ಲ. ಅದಾಗೋದು ಬೇಡ. ಅವನ ಕಣ್ಣಲ್ಲಿನ ಅಮ್ಮ ಹಾಗೇ ಇರಲಿ.
ಕೂಪ
ಅಧ್ಯಾಯ ೨
೩
ಪ್ರಸನ್ನ ಮನೆಗೆ ಬಂದಾಗ ರಾತ್ರಿ ಹತ್ತುಗಂಟೆಯಾಗಿತ್ತು. ಹೊತ್ತು ಹೋಗೋದೇ ಗೊತ್ತಾಗೊಲ್ಲ ಎನ್ನುತ್ತಾ ಸೋಫಾದ ಮೇಲೆ ಕೂತ. ಬೆಲ್ ರಿಂಗಾಗಿ ಬಂದವನು ದಿಲೀಪ ಎನ್ನುವುದು ಗೊತ್ತಾಗಿ ಸೋಫಾದ ಮೇಲೆಯೇ ಅಡ್ಡಾದ. ಹೈ ಎಂದವನೇ ಅಮ್ಮನಿಗೆ ಊಟಕ್ಕೆ ಹೇಳಿದ. ’ಬಾರೋ ಒಟ್ಗೆ ಊಟ ಮಾಡೋಣ’ ಎನ್ನುತ್ತಾ ದಿಲೀಪನನ್ನೂ ಎಳೆದ. ದಿಲೀಪ ಪ್ರಸನ್ನನ ಗೆಳೆಯ. ಭಟ್ಟರ ಪತ್ರಿಕೆಯಲ್ಲಿ ಕೆಲಸಕ್ಕಿದ್ದ. ದಿಲೀಪ: ಏನೋ ನಿಂದು ಗಲಾಟೆ. ನಿನ್ನ ಲೇಖನಗಳು ಸತ್ಯ ಕಣೋ ಆದರೆ ನೀನು ಅವುಗಳನ್ನ ಗಂಭೀರವಾಗಿ ಬರೀತೀಯ. ಅದಿರ್ಲಿ ಭಟ್ಟರನ್ನ ಎದುರು ಹಾಕ್ಕೊಳೋ ಗೋಜು ನಿನಗ್ಯಾಕೆ. ಸುಮ್ನೆ ಇರಬಾರದಾ?
’ಡಬಲ್ ಸ್ಟಾಂಡರ್ಡ್ ಮನುಷ್ಯ ಆ ಯಪ್ಪ. ನಿಂಗೊತ್ತಲ್ಲ ಮೊದಲು ಆ ಯಪ್ಪನ ಪತ್ರಿಕೆಗೂ ಬರೀತಿದ್ದೆ. ಆದರೆ ಅವರ ತಪ್ಪನ್ನ ಎತ್ತಿ ತೋರಿಸಿದ್ದಕ್ಕೆ ನನ್ನ ಲೇಖನಗಳನ್ನ ನಿಲ್ಲಿಸಿದ್ರು. ಅಷ್ಟೊಂದು ಸ್ವರತಿ ಇರೋ ಮನುಷ್ಯನ್ನ ನಾನು ನೋಡಿಲ್ಲಪ್ಪ. ಏನ್ ಹೊಗಳಿಕೊಂಡು ಬರೀತಾನೆ ನಾನು ಆ ದೇಶ ಸುತ್ತಿದೆ ಈ ದೇಶ ನೋಡಿದೆ ಅಂತಾನೆ, ಆಮೇಲೆ ಒಮ್ಮೆಲೇ ಐದಾರು ಪುಸ್ತಕ ಬಿಡುಗಡೆ ಮಾಡ್ತಾನೆ, ಸ್ವಂತ ಮೀಡಿಯಾ ಹೌಸ್ ಶುರು ಮಾಡ್ತಾನೆ, ಅದೂ ಇನ್ನೊಬ್ಬರ ಹೆಸರಲ್ಲಿ, ಪುಸ್ತಕ ಪ್ರಕಾಶನಕ್ಕೆ ಇಳೀತಾನೆ ಮತ್ತದೇ ಬೇನಾಮಿ ಹೆಸರಲ್ಲಿ. ಎಷ್ಟು ದುಡ್ಡು ದುಡೀತಾನೋ ನಿಮ್ ಬಾಸ್, ಇನ್ನು ಅದರಲ್ಲಿ ಬರೋ ಲೇಖನಗಳು ದೇವರಿಗೇ ಪ್ರೀತಿ.
’
ನೋಡು ನಿನಗೆ ಜನಪ್ರಿಯತೆ ಇಲ್ಲ ಅಂತ ಕೊರಗ್ಬೇಡ. ನನ್ನ ಲೇಖನಗಳು ಎಲ್ಲ ಮಜವಾಗಿ ಓದ್ತಾರೆ ಅದಕ್ಕೆ ನನ್ನ ಹಿಂದೆ ಬೀಳ್ತಾರೆ. ನೀನು ನನ್ನ ಹಾಗೆ ಬರಿ. ಯಾಕೆ ನನ್ನ ಲೇಖನಗಳಲ್ಲಿ ವಸ್ತು ಇರಲ್ವಾ?
’ನನಗೆ ಕೊರಗಿಲ್ಲ, ಅದು ಬಿಡು, ನಿನ್ನ ಲೇಖನಗಳಲ್ಲಿ ವಸ್ತುಗಿಂತ ಪನ್ ಗಳು ಜಾಸ್ತಿ ಇರುತ್ತೆ. ಅದನ್ನ ಲೇಖನ ಅಂತಾರೇನೋ. ಡಿವಿಜಿ ಅವರು ಬರೆದಿರೋ ಪತ್ರಿಕೋದ್ಯಮ ಬಗೆಗಿನ ಲೇಖನ ಒದು. ವಸ್ತುನಿಷ್ಟ, ರೂಪನಿಷ್ಟವಾದಂತಹ ವರದಿ ಇರ್ಬೇಕು. ನಾಕು ಜನ ಕೂತು ಹರಟೆ ಹೊಡೆದ ಹಾಗೆ ಲೇಖನ ನಗಾಡ್ಕೊಂಡು ಬರೆದ್ರೆ ಅದನ್ನ ಲೇಖನ ಅಂತಾರೇನೋ... ಪದಗಳನ್ನ ಟ್ವಿಸ್ಟ್ ಮಾಡಿ ಪನ್ ಮಾಡಿ ಬರೆದು ಮೈಲೇಜ್ ಗಿಟ್ಟಿಸಿಕೊಳ್ಳಬಹುದು, ಅದಕ್ಕೊಂದು ಲೈಂಗಿಕ ಅರ್ಥ ಬರೋ ಹಾಗೆ ಬರೆದು ಇನ್ನೂ ಮೈಲೇಜ್ ಗಿಟ್ಟಿಸಿಕೊಳ್ಳಬಹುದು. ಆದರೆ ನಿನ್ನನ್ನ ನೋಡಿ ಮುಂದೆ ಬರೋ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅದನ್ನೇ ಫಾಲೋ ಮಾಡ್ತಾರೆ. ಅದೇ ಲೇಖನದ ಶೈಲಿ ಅಂತಾರೆ. ಆಗ ಒಂದಿಡೀ ಪತ್ರಿಕೋದ್ಯಮದ ದಿಕ್ಕು ಸಡಿಲವಾಗಿಬಿಡುತ್ತೆ. ಇದನ್ನ ನೀನೊಬ್ನೇ ಅಲ್ಲ ಇಡೀ ಪ್ರಪಂಚ ನೋಡ್ತಿರುತ್ತೆ. ಮೊನ್ನೆ ’ಬಾಲ್ ಗ್ರಹ ದೋಶ’ ಅಂತ ಒಂದು ಲೇಖನ ಬರೆದೆ. ಏನೋ ಅದು? ಯಾರೋ ಮಿನಿಷ್ಟ್ರು ಬಾಲ್ ಪದ ಬಳಸಿ ಬೈದ ಅನ್ನೊದನ್ನ ಹೀಗೆ ಪನ್ ಮಾಡಿ, ’ಅವನ ಬಾಲ್ ಗ್ರಹ ದೋಶಕ್ಕೆ ಪರಿಹಾರ ಇಲ್ವೇ?’ ಅಂತ ಕೇಳಿದೀಯ ಏನದರರ್ಥ. ಎಷ್ಟು ಪೋಲಿ ಅನ್ನಿಸುತ್ತೆ. ವರದಿ, ಲೇಖನ ಪ್ರಬಂಧ, ವಿಡಂಬನೆ, ಹಾಸ್ಯ, ಲಲಿತ ಬರಹ, ಇವೆಲ್ಲಾ ಬೇರೆ ಬೇರೆ ಕಣೋ.. ದಿನ ಪತ್ರಿಕೆಯೊಂದರಲ್ಲಿ ಮಧ್ಯಪುಟದಲ್ಲಿ ಇಂತಹ ಹೆಡ್ ಲೈನ್, ಬೆಳಗಿನ ಜಾವ ಸ್ಕೂಲ್ ಹುಡುಗರಿಂದಾದಿಯಾಗಿ ಎಲ್ರೂ ಓದ್ತಾರೆ ಅಂತಹ ಕಡೆ ಈ ಹೆಡ್ ಲೈನಲ್ಲಿ ಲೇಖನ,. ಅಹಾ...! ಹೊಯ್ಕೋ ನಿನ್ನ ಮೈಲೇಜಿಗೆ. ಒಂದು ಪ್ರಶ್ನೆ ಕಣೋ , ಸಮಾಜಕ್ಕೆ ಏನುಪಯೋಗ ಇದರಿಂದ. ವಸ್ತುನಿಷ್ಟವಾಗಿ ಗಂಭೀರವಾಗಿ ಬರೀರಿ, ನಿನಗೆ ಬರೆಯಕ್ಕೆ ಬರುತ್ತೆ. ಆ ಭಟ್ಟ ಹೇಳ್ತಾನೆ ಅಂತ ನೀನು ಬರೀತೀಯ. ದುಡ್ಡಿಗೊಸ್ಕರ ಒಂದು ಪೀಳಿಗೆನ ಹಾಳು ಮಾಡೋದು ಸರೀನಾ?
ನೀ ಏನೇ ಹೇಳಿದ್ರೂ ಜನ ನನ್ನ ಲೇಖನಾನ ಮೆಚ್ಚಿಕೊಳ್ತಾರೆ ಆಮೇಲೆ ನಾನು ಹಿಂದೂ ಬ್ರಾಂಡ್ ಲೀಡರ್ ಆಗ್ತೀನಿ ನೋಡ್ತಿರು. ಸತ್ತ್ವ ಪೂರ್ಣ ಲೇಖನ ವಸ್ತುನಿಷ್ಟ .. ಇವೆಲ್ಲಾ ಡಿವಿಜಿ / ಶ್ಯಾಮರಾಯರ ಕಾಲಕ್ಕೆ ಹೋಯ್ತು. ಇವಾಗೇನಿದ್ರೂ ಹೀಗೆ ಬರೆದ್ರೆ ಜನ ಒಪ್ತಾರೆ. ಚಪ್ಪರಿಸಿಕೊಂಡು ನೋಡ್ತಾರೆ. ಇನ್ನೊಂದು ವರ್ಗದ ಜನಕ್ಕೆ ಉರಿ ಬೀಳುತ್ತೆ. ಅಧಿಕಾರ ಮತ್ತು ಮನ್ನಣೆ ಅನ್ನೊದು ಇಂತಹ ಉರಿಯ ಮೇಲಿಂದನೇ ಹುಟ್ಟೋದು. ಹ್ಮ್ ಬಿಡು, ನಿನ್ನ ಸ್ಟೈಲ್ ನಿನ್ನದು ನನ್ನ ಸ್ಟೈಲ್ ನನ್ನದು. ಏನಂತೆ ಶ್ರೀಮುಖಿ ತಾತನ ಕತೆ. ಅದೇ ಶ್ರೀ ಮುಖಿ ತಂದೆಯ ಕತೆ.
ನಿನಗೆ ಹೇಗೆ ಗೊತ್ತಾಯ್ತು.
ನೀನು ಎಲ್ಲಿ ಹೋದ್ರೂ ನಮ್ಮ ಭಟ್ಟರು ಹಿಂದೆ ಇರ್ತಾರೆ. ನೀನು ಅಂದ್ರೆ ಅವರಿಗೆ ಟೆರರ್ ಮಾರಾಯ. ನೀನು ಬರೆದ್ರೆ ಅದನ್ನ ವಿರೋಧಿಸೋಕೆ ಹತ್ತಾರು ಪುಸ್ತಕ ಹಿಡ್ಕೊಂಡು ಓದಿದ್ರೂ ಸಾಲದು. ಅದು ನಿನ್ನ ಕ್ಯಪಾಸಿಟಿ,. ಆದರೆ ನಿನ್ನ ಲೇಖನ ಓದೋರು ಕಮ್ಮಿ. ಮಜ ಏನ್ ಗೊತ್ತಾ ಆ ಕಮ್ಮಿ ಅನ್ನೊ ಸಂಖ್ಯೆ ದಿನೇ ದಿನೇ ಜಾಸ್ತಿ ಆಗ್ತಿದೆ. ನೀನೂ ನನ್ನ ಹಾಗೆ ಬ್ರಾಂಡ್ ಆಗಿಬಿಡ್ತೀಯ ನೋಡ್ತಿರು.
ನೀನೂ ಬೇಡ ನಿನ್ನ ಬ್ರಾಂಡೂ ಬೇಡ, ನನಗೆ ಸತ್ಯ ಮುಖ್ಯ ಅಷ್ಟೆ.
#ಕೂಪ ಮುಂದುವರೆಯುವುದು...