ಕೂಲಿಯ ಕೇಳದ ಕಾರ್ಮಿಕ(ಪ್ರೇರಕ ಪ್ರಸಂಗಗಳು)
ಒಂದು ಹೊಸ ರಸ್ತೆ ಹಾಕುವ ಕೆಲಸ ನಡೆದಿತ್ತು.ಎಲ್ಲ ಕೆಲಸಗಾರರು ನೆಲ ಅಗೆಯುವ,ಮಣ್ಣು ಒಗೆಯುವ
ಕೆಲಸದಲ್ಲಿ ತೊಡಗಿದ್ದರು.ಅದರಲ್ಲೊಬ್ಬ ದಷ್ಟ-ಪುಷ್ಟ ಕಾರ್ಮಿಕ ಅತ್ಯಂತ ಹುರುಪಿನಿಂದ ಮಣ್ಣು ಅಗೆಯುತ್ತಿದ್ದ.
ಅವನು ಅಂದಿನ ಹೊಸ ಕೂಲಿಕಾರ ಇರಬೇಕೆಂದು ನೋಡುತ್ತ ನಿಂತಿದ್ದ ಗುತ್ತಿಗೆದಾರನಿಗೆ ಅವನ ಕೆಲಸ
ಕಂಡು ಸಂತಸವಾಗಿತ್ತು.ದಿನದ ಕೆಲಸ ಮುಗಿದ ಮೇಲೆ ಕೂಲಿ ಕೊಡುವಾಗ ಅವನನ್ನು ಕರೆದು ಹೇಳಿದ
"ನಿನ್ನ ಕೆಲಸ ಕಂಡು ನನಗೆ ಬಹಳ ಸಂತೋಷವಾಗಿದೆ" ಅಲ್ಲೇ ನಿಂತ ಕಾರಕೂನನಿಗೆ ಹೇಳಿದ
"ಇವನಿಗೆ ದುಪ್ಪಟ್ಟು ಕೂಲಿ ಕೊಡು" ಎಂದು.
ಆದರೆ ಆ ಯುವಕ ಹೆಚ್ಚು ಕೂಲಿ ತೆಗೆದುಕೊಳ್ಳಲು ಒಪ್ಪಲಿಲ್ಲ.ಅಲ್ಲದೆ ದೊರೆತ ದಿನಗೂಲಿಯನ್ನು ಅಲ್ಲಿಯೇ
ಇದ್ದ ವೃದ್ಧ ಕೂಲಿಯವನ್ಗೆ ಕೊಟ್ಟ.ಇದನ್ನು ಕಂಡ ಗುತ್ತಿಗೆದಾರನಿಗೆ ಅಚ್ಚರಿಯಾಯಿತು.ಯುವ ಕಾರ್ಮಿಕನಿಗೆ
ಕೂಲಿ ತೆಗೆದುಕೊಳ್ಳದ ಕಾರಣ ಕೇಳಿದ.ಯುವಕ ಮುಷ್ಠಿ ಬಿಗಿದು ತೋರಿಸಿ "ನಾನು ದಿನವೂ ಕಠಿಣ
ವ್ಯಾಯಾಮ ಮಾಡುತ್ತೇನೆ.ಇಲ್ಲಿಂದ ಹಾದು ಹೋಗುವಾಗ ಇಲ್ಲಿಯ ಕೆಲಸ ಕಂಡು ಗುದ್ದಲಿ-ಸನಿಕೆಗಳಿಂದ
ಮಣ್ಣು ತೆಗೆಯುವ ಮನಸ್ಸಾಯಿತು.ಇದೂ ಒಂದು ತರಹ ವ್ಯಾಯಾಮವೇ ಎಂದು ತಿಳಿದು ಈ ಕೆಲಸ
ಮಾಡಿದೆ" ಎಂದು ಹೇಳಿ ಅಲ್ಲಿಂದ ಮುಂದೆ ಹೋಗಿಬಿಟ್ಟ.
ಆ ಯುವಕನಾರು ಗೊತ್ತೇ? ಜಗತ್ಪ್ರಸಿದ್ಧ ಮುಷ್ಠಿ ಕಾಳಗ ಮಲ್ಲ ಮಹಮ್ಮದ್ ಅಲಿ.
ಮಹಮ್ಮದ್ ಅಲಿ ಅಮೆರಿಕದ ಲೂಯಿವಿಲ್ ಗ್ರಾಮದಲ್ಲಿ 1942ರಲ್ಲಿ ಜನಿಸಿದ.ಬಡತನದಲ್ಲಿಯೇ ಬೆಳೆದನು.ಅವನು ಶಾಲೆಗೆ ಹೋಗುವಾಗ ಸೈಕಲ್ ಬಳಸುತ್ತಿದ್ದ.ಒಂದು ದಿನ ಸೈಕಲ್ ಕಳುವಾಗಲು ಪೋಲಿಸ್ ಕಚೇರಿಗೆ ತಕರಾರು ಕೊಡಲು ಹೋದ.ಪೋಲಿಸನ ಎದುರಿಗೆ 'ಕಳ್ಳ ಸಿಕ್ಕರೆ ಅವನನ್ನು ಗುದ್ದಿ ಮಣ್ಣು ಮುಕ್ಕಿಸುವೆ.'ಎಂದ.ಇದನ್ನು ಕೇಳಿದ ಪೋಲಿಸ 'ನೀನೇನು ಮುಷ್ಠಿ ಕಾಳಗ ಮಲ್ಲನೇ?' ಎಂದು ಕೇಳಲು,ಇಲ್ಲ ಎಂದಾಗ ಪೋಲಿಸನು ಇವನ ನಿಲುವು ಧೈರ್ಯ ಕಂಡು ನಾನು ನಿನಗೆ ಮುಷ್ಠಿ ಕಾಳಗ ಕಲಿಸುವೆ ಎಂದು ಕಲಿಸಿದ.ಮಹಮ್ಮದ್ ಅಲಿ ತನ್ನ 16ನೆಯ ವಯಸ್ಸಿನಲ್ಲಿಯೇ ಮುಷ್ಠಿ ಯುದ್ಧ ಕಲಿತನು.ಮುಂದೆ ಜಾಗತಿಕ ಚಾಂಪಿಯನ್ ಆದನು.
ಮಹಮ್ಮದ್ ಅಲಿ ಶಕ್ತಿಯ ಸದುಪಯೋಗವಾಗಬೇಕೆಂಬ ಹಿರಿಯಾಸೆ ಇಟ್ಟುಕೊಂಡವನು.ದುರ್ಬಲರ ರಕ್ಷಣೆಗಾಗಿ ಶಕ್ತಿಯನ್ನು ಬಳಸ ಬೇಕೆನ್ನುವವನು.'ಎಷ್ಟೂ ಸಕ್ಕರೆ ಹಾಕುವಿರೋ ಅಷ್ಟು ಸಿಹಿಯಾಗುವುದು' ಎಂಬ ಗಾದೆ ಮಾತಿನಂತೆ 'ಎಷ್ಟು ಕಷ್ಟ ಪಡುವಿರೊ ಅಷ್ಟು ಫಲ ದೊರಕುವುದು' ಎಂದು ಹೇಳುತ್ತಿದ್ದ.