ಕೃಷ್ಣ ಚೆಲುವೆಯ ಚಿತ್ರ

ಕೃಷ್ಣ ಚೆಲುವೆಯ ಚಿತ್ರ

ಚಿತ್ರ


 
ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, 'ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ  ಕೊಡಲು ಸ್ವಲ್ಪ ತಡವಾಯಿತು'.
 
ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು ತುಂಬಿಕೊಂಡ. 'ನಿಮ್ಮಿಂದ ತುಂಬಾ ಉಪಕಾರವಾಯಿತು. ನನ್ನ ಹೆಂಡತಿಯ ನೆನಪಿಗೆ ಇದಕ್ಕಿಂತ ಒಳ್ಳೇದು ನಾನಿನ್ನೇನೂ ನಿರೀಕ್ಷೆ ಮಾಡ್ಲಿಲ್ಲ. ನಿಮ್ಮ ಕ್ಯಾಮರಾದಲ್ಲಿ ಆದಿನ ಫ಼ೋಟೊ ತೆಗೆಯದೆ ಹೋಗಿದ್ದರೆ ಅವಳ ನೆನಪಿಗೆ ಅಂತ ನನ್ನ ಹತ್ರ ಇನ್ನೇನೂ ಇರ್ಲಿಲ್ಲ'
 
ಸುದೀಪ ದೀರ್ಘ ನಿಟ್ಟುಸಿರು ಬಿಟ್ಟ.  ಅವನ ಮುಖದಲ್ಲೀಗ ದಿವ್ಯ ಸಮಾಧಾನವಿತ್ತು. 
 
ಸುದೀಪನ ಅಮ್ಮ ಅಪ್ಪ ದೆಹಲಿಯಲ್ಲಿ ವಾಸ್ತವ್ಯದಲ್ಲಿದ್ದಾರೆ. ಸುದೀಪ ಬೆಂಗಳೂರಿನಲ್ಲಿ ದೊಡ್ಡ ಕಂಪನಿಯಲ್ಲಿ ಉದ್ಯೋಗಿ ಮತ್ತು ಈಗಿರುವ ದೊಡ್ಡ ಬಂಗಲೆಯ ಒಡೆಯ. ರಾಜು ಇಲ್ಲಿ ಮನೆಯ ಕೆಲಸ ಸುಮಾರು ಎರಡು ವರ್ಷದಿಂದ ಮಾಡುತ್ತಿದ್ದಾನೆ.  
 
ಸುದೀಪನಿಗೀಗ ಕಳೆದ ಎರಡು ತಿಂಗಳುಗಳಿಂದ ನಡೆದುಹೋದ ಘಟನೆಗಳು ನೆನಪಿನ ತೇರಾಗಿ  ಉರುಳತೊಡಗಿದವು.
 

 
ಆಗಸ್ಟ್ ತಿಂಗಳಲ್ಲಿ ರಾಜು ತನ್ನ ಊರಿಗೆ ಒಂದು ವಾರದ ರಜಾ ಹಾಕಿ ಹೋಗಿದ್ದ. ಹೋಗುವಾಗ ತಲೆ ಕೆರೆಯುತ್ತಾ ಹೇಳಿದ್ದ. 'ಅಣ್ಣ, ನನ್ ಮದ್ವೆ ಊರಲ್ಲಿದೆ. ನನ್ ಮಾವ್ನ ಮಗ್ಳೆ ಅವ್ಳು. ಅವ್ರೂ ಬಡವ್ರೇ. ಜಾಸ್ತಿ ಖರ್ಚು ಇಲ್ದೆ ಮದ್ವೆ. ಕರ್ದಿಲ್ಲ ಅಂತ ಅನ್ಕೊ ಬೇಡಿ. ನಾನು ಹೆಂಡ್ತಿ ಜೊತೆ ನಿಮ್ಮ್ ಔಟ್ ಹೌಸ್ನಲ್ಲಿರ್ತೀನಿ. ಅವ್ಳೂ ಈ ಮನೆ ಕೆಲ್ಸ ಮಾಡ್ಕೊಂಡಿರ್ತಾಳೆ. ಆಗ್ಬಹುದಾ?' 
 
ಸುದೀಪ ಗೋಣುಹಾಕಿ, 'ಆಯ್ತು ರಾಜು, ಮನೆ ಇಬ್ರು ಸೇರಿ ನೀಟಾಗಿಡಿ, ಸಂಬಳ ಎಲ್ಲ ಆಮೇಲೆ ಮಾತಾಡೋಣ' ಅಂದಿದ್ದ.
 
ಅದಾಗಿ ಒಂದು ವಾರ ಕಳೆದು ರಾಜು ಪತ್ನಿ ಸಮೇತ ಹಾಜರು. ಇಬ್ಬರೂ ಸುದೀಪನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಅವನು ರಾಜುಗಿಂತ ಮೂರು ನಾಲ್ಕು ವರ್ಷ ದೊಡ್ಡವನಿರಬಹುದು. ಇಬ್ಬರೂ 'ಅಣ್ಣಾ' ಅಂತ ನಮಸ್ಕರಿಸುವಾಗ ಅವನಿಗೆ ಏನು ಹೇಳಲೂ ಗೊತ್ತಾಗಲಿಲ್ಲ. ಅವರಿಬ್ಬರಿಗು ಉಡುಗೊರೆಯಾಗಿ ಸ್ವಲ್ಪ ಹಣ ಕವರಿನಲ್ಲಿಟ್ಟು ಕೊಟ್ಟ. 
 
ಸುದೀಪ ಆ ದಿನ ರಾಜೂನ ಹೆಂಡತಿಯನ್ನು ನೋಡಿದ್ದು. ಕೃಷ್ಣ ಸುಂದರಿ. ಸ್ವಲ್ಪ ಸಂಕೋಚ ಸ್ವಭಾವ. ಆದರೆ, ರಾಜೂನ ಜೊತೆ ಬಹಳ ಸಲಿಗೆ ಮತ್ತು ನಗು ಇತ್ತು. ಇಬ್ಬರೂ ಲವ್ ಬರ್ಡ್ಸ್ ಥರ  ಕಾಣಿಸಿದ್ದರು!  ರಾಜು ಅವಳನ್ನು ಕರೆಯುತ್ತಿದ್ದದ್ದು ’ಸುವ್ವಿ’ ಅಂತ.  ಅವಳ ಪೂರ್ತಿ ಹೆಸರು ಏನೆಂದು ಸುದೀಪ ಕೇಳಲಿಲ್ಲ.
 

 
ಒಂದು ರಜಾ ದಿನ ಸುದೀಪ ಕ್ಯಾಮರಾ ಹೆಗಲಿಗೇರಿಸಿ ಯಾವುದೋ ಪಿಕ್ನಿಕ್ ಅಂತ ಹೊರಗೆ ಗಡಿಬಿಡಿಯಲ್ಲಿ ಹೊರಟಿದ್ದ. 'ರಾಜು, ನಾನು ಬರೋದು ಇನ್ನು ರಾತ್ರಿ. ಮನೆ ಕಡೆ ಹುಷಾರು’ ಅಂದ. ರಾಜು ಲಗುಬಗೆಯಿಂದ ಹತ್ತಿರ ಬಂದು ತಲೆ ಕೆರೆದುಕೊಳ್ಳುತ್ತ ನಿಂತ.  ಏನೋ ಕೇಳುವ ಹವಣಿಕೆ ಇತ್ತು. 
 
’ಏನು ರಾಜೂ?’. 
 
’ಅಣ್ಣ, ನಿಮ್ಗೆ ಗೊತ್ತಲ್ಲ. ನನ್ ಮದ್ವೆ ಭಾಳ ಸರಳವಾಗಿತ್ತು. ನಮ್ ಮದ್ವೆ ಫ಼ೋಟೊ ಒಂದೂ ಇಲ್ಲ. ಊರಲ್ಲಿ ಯಾರ ಹತ್ರನೂ ಕ್ಯಾಮರಾ ಇಲ್ಲ. ನಂಗೆ, ನನ್ ಹೆಂಡತಿ ಫ಼ೋಟೊ ಒಂದು ಚೆಂದಾಗಿ ತೆಗ್ದುಕೊಡ್ಬೇಕು’ ಅಂದ.
 
ತಲೆ ಆಡಿಸಿ, ’ಈಗ್ಲೆ ತೆಗೀಲಾ?’ ಎಂದು ಸುದೀಪ ಅವಸರಿಸಿದ.  ’ಹಾಂ.. ’ ಅಂತ ರಾಜು ಓಡಿದ. ಎರಡೇ ನಿಮಿಷದಲ್ಲಿ ಸುವ್ವಿಯನ್ನು ಕರೆದು ಅವನೆದುರು ನಿಲ್ಲಿಸಿ ಬಿಟ್ಟ.
 
 ’ಇಬ್ರದೂ ತೆಗಿತೀನಿ ಬೇಗ ನಿಂತ್ಕೊಳಿ’ ಸುದೀಪ ಹೇಳಿದ.
 
’ಬೇಡಣ್ಣ, ಅವ್ಳದ್ದು ಸಾಕು, ಚೆನ್ನಾಗಿ ಮುಖ ಬರೋ ಹಾಗೆ ತೆಗೀರಿ. ನಂದು ಇನ್ನೊಂದು ಸರಿ ತೆಗೀರಿ. ಯಾಕಂದ್ರೆ,  ಆಷಾಢ ಅಂತ ಅವ್ಳು ಊರಿಗ್ ನಾಳೆನೆ ಹೋಗ್ತಾ ಇದಾಳೆ’
 
’ಸರಿ, ಬಾಮ್ಮ, ಇಲ್ಲಿ ನಿಂತ್ಕೊ, ಎಲ್ಲಿ ಈ ಕಡೆ ನೋಡು’ ಅಂತ ಕ್ಯಾಮರ ಸರಿಪಡಿಸಿಕೊಂಡ ಸುದೀಪ.  ರಾಜೂನ ಹೆಂಡತಿ ಸುಂದರಿಯೆ. ಹೊಳಪು ಕಣ್ಣುಗಳು, ತೆಳುವಾದರೂ ಮುಖದಲ್ಲಿ ಮುಗ್ಧ ಕಳೆ, ಅವಳ ಮಂದಹಾಸದಲ್ಲಿ ಮಕ್ಕಳ ನಗುವಿದ್ದಂತೆ ಅವನಿಗನಿಸಿತು.  ಹಾಗೆಯೆ ಅವಸರದಲ್ಲಿಯೆ ಎರಡು ಚಿತ್ರ ಕ್ಲಿಕ್ಕಿಸಿದ. ಹಾಗೆ ಮಾಡುವಾಗ  ಸರಿಯಾಗಿ ಫ಼ೋಕಸ್ ಮಾಡದೆ ಇರುವುದು ಅವನಿಗೆ ತಿಳಿಯಲೇ ಇಲ್ಲ!
 
ಸುದೀಪ ಲಗುಬಗೆಯಲ್ಲಿ ಹೊರ ಹೊರಡುವಾಗ ಗಕ್ಕನೆ ಬಗ್ಗಿ ’ಊರಿಗೆ ಹೋಗಿಬರ್ತೀನಿ ಅಣ್ಣ. ಆಶೀರ್ವಾದ ಮಾಡಿ’ ಅಂದಳು ಸುವ್ವಿ.
 

 
ಗೆಳೆಯರೊಡನೆ ಒಳ್ಳೆಯ ದಿನವೊಂದನ್ನು ಕಳೆದು ಸುದೀಪ ಮನೆಗೆ ರಾತ್ರಿ ಬಂದಾಗ ರಾಜು ಬಾಗಿಲು ತೆಗೆದ. ’ಹೆಂಡತೀನ ಊರಿಗೆ ಕಳಿಸಿದ್ಯಾ ರಾಜು’ ಅಂತ ಕೇಳಿ, ಮಲಗಲು ಹೋದ. ’ಹೂಂ.. ಅಣ್ಣಾ’ ಅಂದ ರಾಜು. ಹೆಂಡತಿ ಊರಿಗೆ ಹೋದ ಬೇಸರ ಅವನ ಮುಖದಲ್ಲಿತ್ತು.
 
ಇವೆಲ್ಲ ಆಗಿ ಹದಿನೈದು ದಿನಗಳಾಗಿರಬೇಕು.  ರಾಜು ಒಂದು ಬೆಳಿಗ್ಗೆ ಸುದೀಪನ ರೂಂಗೆ ಬಂದು, ’ಅಣ್ಣಾ’ ಎಂದು ಕರೆದ.
 
ಅವನ ಧ್ವನಿಯಲ್ಲಿ ಘಾಬರಿ ಇತ್ತು. ’ಊರಲ್ಲಿ ಸುವ್ವಿ ತುಂಬಾ ಖಾಯಿಲೆ ಮಲಗಿದಾಳಂತೆ.  ಈಗ ಊರಿಂದ ಫ಼ೋನ್ ಬಂದಿತ್ತು.  ಈಗಲೇ ಊರಿಗೆ ಹೋಗ್ತೀನಿ. ಕರಕೊಂಡೇ ಬರ್ತಿನಿ.  ಮನೆ ಎಲ್ಲ ಕ್ಲೀನ್ ಮಾಡಿದೀನಿ.  ನೀವು ಎರಡು ದಿನ ಹೋಟೆಲ್ನಲ್ಲೆ ಊಟ ಮಾಡಿ ಅಣ್ಣ’ ಅಂದ.  
 
ಅವನ ಕೈಗೆ ಖರ್ಚಿಗೆ ಅಂತ ಸ್ವಲ್ಪ ಹಣ ಕೊಟ್ಟ ಸುದೀಪ.
 

 
ರಾಜು ಹೋದ ಮರುದಿನ ಸುದೀಪನಿಗೆ ಫ಼ೋನ್ ಮಾಡಿದ. ಅವನ ಧ್ವನಿ ಅವನಿಗಾದ ಆಘಾತವನ್ನು ಹೇಳುತ್ತಿತ್ತು. 
 
‘ಅಣ್ಣಾ.. ನನ್ ಹೆಂಡ್ತಿ ತೀರ್ಕೊಂಡ್ಬಿಟ್ಲು’ ಗದ್ಗದಿತನಾಗಿ ಹೇಳುತ್ತಿದ್ದ.  ’ಏನಾಯ್ತು ಅಂತ ನೋಡೋದ್ರೊಳ್ಗೆ ಯಾವುದೋ ಮಾರಿ ಖಾಯಿಲೆಗೆ ತುತ್ತಾಗಿಬಿಟ್ಲು.....’
 
ಸುದೀಪ ಏನು ಹೇಳಲೂ ತೋಚದೆ, ‘ಸಮಾಧಾನ ಮಾಡ್ಕೊ ರಾಜು... ದುಡ್ಗಿಡ್ ಬೇಕಿದ್ರೆ ಹೇಳು ಕಳಿಸ್ತೀನಿ’ ಅಂದ.
 
ಹದಿನೈದು ದಿನ ಕಳೆದು ರಾಜು ಪ್ರೇತ ಕಳೆ ಹೊತ್ತು ಮನೆಯ ಕೆಲಸಕ್ಕೆ ಹಾಜರಾದ.
 
ಒಂದು ದಿನ ರಾಜು, ‘ಅವತ್ತು ನನ್ ಹೆಂಡ್ತಿ ಫ಼ೋಟೊ ತೆಗೆದಿದ್ರಿ ನೆನಪಿದ್ಯಾ. ಅದರದ್ದು ಒಂದು ಪ್ರಿಂಟ್ ಹಾಕಿ ಕೊಡಿ.  ಅವಳ ನೆನಪಿಗೆ ಅಂತ ಅದೊಂದು ಬೇಕೇ ಬೇಕು ಅಣ್ಣ.  ನೀವು ತೆಗೆದೆ ಫ಼ೋಟೊ ಬಿಟ್ರೆ ಅವಳ ನೆನಪಿಗೆ ಇನ್ಯಾವುದೂ ಇಲ್ಲ’
 
ಸುದೀಪನಿಗೆ ಈಗ ನೆನಪಾಯ್ತು ಆ ದಿನ ಸುವ್ವಿಯ  ಫ಼ೋಟೋ ಅವಸರದಲ್ಲಿ ತೆಗೆದಿದ್ದು.   ‘ಆಯ್ತು ರಾಜು.. ಅದನ್ನ ಪ್ರಿಂಟ್ ಹಾಕಿ, ಫ಼್ರೇಮ್ ಹಾಕಿ ಕೊಡ್ತೀನಿ’ ಅಂದ.
 
ತಕ್ಷಣ ರೂಮಿಗೆ ಹೋಗಿ ಕ್ಯಾಮರ ತೆಗೆದ.  ಆ ದಿನ ತೆಗೆದ ಫ಼ೋಟೊಗಳನ್ನು ಒಂದೊಂದೆ ನೋಡುತ್ತಾ ಹೋದ.  ಅವನು ಮತ್ತು ಗೆಳೆಯರ ಫ಼ೋಟೋಗಳು ಎಲ್ಲ ಸುಂದರವಾಗಿಯೆ ಬಂದಿದ್ದವು.  ಹಾಗೆ ನೋಡುತ್ತಾ ಸುವ್ವಿಯ ಫ಼ೋಟೊಗಳನ್ನು ಹುಡುಕಾಡಿದ. ಅಲ್ಲಿ ಅವನಿಗೆ ದಿಗ್ಭ್ರಮೆ ಕಾದಿತ್ತು.  ಅವನು ತೆಗೆದ ಎರಡು ಫ಼ೋಟೊ ಶೂಟ್ ಕೆಟ್ಟದಾಗಿ ಬಂದಿತ್ತು.  ಸುವ್ವಿಯ ಚಿತ್ರ ಕಲಸಿಹೋಗಿದೆ. ಅದು ಯಾರ ಮುಖ ಅನ್ನುವುದು ಸ್ವಲ್ಪವೂ ಗುರುತಾಗುತ್ತಿಲ್ಲ!  ಆ ದಿನ ಅವಸರದಲ್ಲಿ ಫ಼ೋಕಸ್ ಮಾಡದೆ ಸುವ್ವಿಯ ಚಿತ್ರ ಕ್ಲಿಕ್ ಮಾಡಿಬಿಟ್ಟಿದ್ದ!!
 
ಅವನಿಗೆ ತಕ್ಷಣಕ್ಕೆ ನೆನಪಾದದ್ದು ರಾಜುವಿನ ಆಸೆ ತುಂಬಿದ ಮುಖ.  ಅವನಿಗೆ ಏನು ಸಮಾಧಾನ ಮಾಡಬೇಕೆನ್ನುವುದೇ ತಿಳಿಯುತ್ತಿಲ್ಲ. ಸುದೀಪನಿಗೆ ಒಂದು ವಿಷಯ ಮನಸ್ಸಿಗೆ ಹೊಕ್ಕಿದ್ದು, ತಾನು ‘ಫ಼ೋಟೊ ಸರಿಯಾಗಿ ತೆಗೆಯಲಾಗಿಲ್ಲ’ ಅಂದುಬಿಟ್ಟರೆ, ರಾಜು ಖಂಡಿತಕ್ಕೂ ಆಘಾತ ಪಡುತ್ತಾನೆನ್ನುವುದು.  ಅವನು ಫ಼ೋಟೊ ಕೇಳಿದಾಗ ತಾನು ಕೊಡುತ್ತೇನೆ ಎಂದು ಬೇರೆ ಹೇಳಿಬಿಟ್ಟಿದ್ದಾನೆ.  ಈಗ ಅವನನ್ನು ಮತ್ತು ಅವನ ನಿರಾಶೆಯನ್ನು ಎದುರಿಸುವುದಾದರೂ ಹೇಗೆ.  ಏನು ಮಾಡಲೂ ತಿಳಿಯದೆ ಚಡಪಡಿಸಿದ. 
 
ಮನಸ್ಸು ಹೇಳುತ್ತಿತ್ತು, ’ರಾಜು, ಸುವ್ವಿಯ ಫ಼ೋಟೊ ಕ್ಯಾಮರದಲ್ಲಿ ಇಲ್ಲ’ ಎಂದು ಹೇಳಿಬಿಡು.  ಆದರೆ ಹಾಗೆ ಹೇಳುವ ಧೈರ್ಯವಾಗಲಿ, ಅಂಥ ನಿರ್ಲಿಪ್ತತನವಾಗಲಿ  ಅವನಿಗೆ ಬರಲಿಲ್ಲ.
 

 
ದೀರ್ಘ ಯೋಚನೆಯಿಂದ ಸುದೀಪ ಹೊರಬಂದ. ಏನನ್ನೋ ಅವನು ನಿರ್ಧರಿಸಿದ್ದ. ೧೫ ದಿನಗಳ ರಜೆಯ ಪತ್ರ ಅವನು ತನ್ನ ಆಫ಼ೀಸಿಗೆ ಮೇಲ್ ಮಾಡಿದ.
 
ರಾಜೂನ ಕರೆದು ಹೇಳಿದ, ‘ರಾಜೂ. ಸ್ವಲ್ಪ ದಿನ ನಾನು ತಡವಾಗಿ ಬರುತ್ತೇನೆ. ನೀನು ನನಗಾಗಿ ಕಾಯುವುದು ಬೇಡ. ಊಟ ಟೇಬಲ್ ಮೇಲಿಟ್ಟು ಹೋಗಿಬಿಡು.’  ರಾಜು ‘ಹೂಂ’ ಅಂದ. ಅವನ ಮನಸ್ಸಿನಲ್ಲಿ ಏನು ಕೇಳಬೇಕೆನ್ನುವುದಿದೆ ಅನ್ನುವುದು ಸುದೀಪನಿಗೆ ತಿಳಿದಿತ್ತು.
 
ಆ ದಿನ ಸುದೀಪ ತನ್ನ ಕಾರಿನಲ್ಲಿ ಸುಮಾರು ಒಂದು ಘಂಟೆ ಪ್ರಯಾಣಿಸಿ ಆಚಾರ್ಯರ ಆ ಕಲಾ ಶಾಲೆಗೆ ಬಂದಿದ್ದ.  ತಾನು ಆ ಕಲಾ ಶಾಲೆಗೆ ವಿದ್ಯಾರ್ಥಿಯಾಗಿ ಸೇರುವ ಬಗ್ಗೆ ಆಶಯ ವ್ಯಕ್ತಪಡಿಸಿದ. ಹಾಗೆಯೆ, ಕಲೆಯ ಗಂಧ ಗಾಳಿ ತನಗೆ ತಿಳಿಯದು ಅನ್ನುವುದನ್ನು ಆಚಾರ್ಯರಿಗೆ ತಿಳಿಸಿದ.  
 
ಕಲೆಯ ಆ ಉದ್ಧಾಮರು ನಕ್ಕರು. ’ಕಲಿಯುವ ತುಡಿತವಿದೆಯಲ್ಲ. ಅಷ್ಟು ಸಾಕು.  ಇವಿತ್ತಿನಿಂದಲೇ ಪ್ರಾರಂಭಿಸೋಣ’ ಅಂದರು.  ಸುದೀಪನಲ್ಲಿ ಚೈತನ್ಯದ ಬುಗ್ಗೆ ಉಕ್ಕಿ ಹರಿಯಿತು.
 
ಒಂದು ವಾರ ಹೇಗೆ ಕಳೆಯಿತೊ ಸುದೀಪನಿಗೆ ಮತ್ತು ಆಚಾರ್ಯರಿಗೆ ತಿಳಿಯಲೇ ಇಲ್ಲ. ಅವನ ಅದಮ್ಯ ಉತ್ಸಾಹ, ಕಲಿಯುವ ಏಕಾಗ್ರತೆ, ಗುರುಗಳಿಗೆ ಆಶ್ಚರ್ಯ ಉಂಟುಮಾಡುತ್ತಿತ್ತು. 
 
ತೈಲವರ್ಣದ ಅಪರಿಮಿತ ಆಯಾಮಗಳ ಪ್ರಯೋಗಗಳನ್ನು ಸುದೀಪ ಎರಡನೇ ವಾರದಲ್ಲೇ ತಿಳಿಯ ತೊಡಗಿದ.  ನೆರಳು ಬೆಳಕುಗಳನ್ನು ಹದವಾಗಿಸಿ ತನ್ನ ಕುಂಚದಿಂದ ಚಿತ್ರಿಸಲು ಪ್ರಯತ್ನಿಸುತ್ತಿದ್ದ.  ಅವನು ಆಲೋಚನಾ ಮಗ್ನನಾಗಿ ಚಿತ್ರಿಸುವ ಪರಿ ಗುರುಗಳನ್ನು ಕೂಡ ದಂಗುಬಡಿಸುತ್ತಿತ್ತು.
 
ಸುದೀಪನ ಕಲಿಕೆ ಮತ್ತೆ ಮುಂದುವರಿಯಿತು.  ೧೫ ದಿನಗಳ ರಜೆ ಮುಗಿಯಿತು. ಮತ್ತೆ ಹದಿನೈದು ದಿನಗಳ ರಜೆ ಮಂಜೂರಿಗೆ ಮೇಲ್ ಮಾಡಿದ.
 
ದಿನದ ಎಲ್ಲ ಸಮಯ ಕಲೆಯ ಕಲಿಯುವಿಕೆಯಲ್ಲೆ ಕಳೆಯತೊಡಗಿದ.  ಸರಿಯಾಗಿ ಊಟ ತಿಂಡಿ ತಿನ್ನುವುದನ್ನೇ ಅವನು ಮರೆತುಬಿಟ್ಟಿದ್ದ. ಮುಖದಲ್ಲಿ ಗಡ್ಡ ಮೀಸೆಗಳು ದಂಡಿಯಾದವು.  ಅವನ ಶ್ರಮದ ಅಗಾಧತೆಯ ಬಗ್ಗೆ ಆಚಾರ್ಯರಿಗೆ ಗೌರವ ಮೂಡಿತು. ಈ ಎರಡು ದಿನಗಳಿಂದ ಸುದೀಪ ಭಾವ ಚಿತ್ರಗಳನ್ನು ಚಿತ್ರಿಸುವ ಬಗೆಗೆ ಬಹಳ ಆಸಕ್ತಗೊಂಡಿದ್ದ.  ಚಿತ್ರಶಾಲೆಯ ಕೆಲವು ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಚಿತ್ರಿಸಿಯೂಬಿಟ್ಟ.  
 
ಸುದೀಪನಲ್ಲಿನ ಅಗಾಧ ಬದಲಾವಣೆ, ಅವನ ಕಲೆಯ ಹಂಬಲ ನೋಡಿ ಆಚಾರ್ಯರಿಗೆ ಇವನೊಬ್ಬ ದೊಡ್ಡ ಕಲಾವಿದನಾಗುವುದರಲ್ಲಿ ಸಂದೇಹವಿಲ್ಲ ಅನ್ನಿಸತೊಡಗಿತು.
 

 
ಆ ದಿನ ಸುದೀಪ ಚಿತ್ರಶಾಲೆಯಲ್ಲೆ ರಾತ್ರಿ ಕಳೆಯುತ್ತೇನೆ ಅಂದ.  ಅವನು ರಾತ್ರಿಯೆಲ್ಲ ಜಾಗರಣೆಯಲ್ಲಿ ಯಾವುದೋ ಚಿತ್ರ ಬಿಡಿಸುತ್ತಿದ್ದ.  ಬೆಳಿಗ್ಗೆ ಆಚಾರ್ಯರು ಬಂದಾಗಲೂ ಅವನು ಅದೇ ಏಕಾಗ್ರತೆಯಲ್ಲಿ ಮುಳುಗಿದ್ದ.  ಸುಮಾರು ಹೊತ್ತಾದ ಮೇಲೆ, ಅವನು ಆಚಾರ್ಯರನ್ನು ಕರೆದು, ‘ಸರ್, ಒಬ್ಬಳು  ಯುವತಿಯ ಚಿತ್ರವೊಂದನ್ನು ಬಿಡಿಸಿದ್ದೇನೆ.  ಇದು ನಾನು ನೋಡಿದ ವ್ಯಕ್ತಿಯನ್ನು ನೆನಪಿನಲ್ಲಿಟ್ಟು ಚಿತ್ರಣ ಮಾಡಿರುವುದು.  ಸಹಜವಾಗಿ ಮೂಡಿದೆಯ, ದಯವಿಟ್ಟು ತಿಳಿಸಿ’ ಅಂದ.
 
ವಿಮರ್ಶಾಪೂರ್ಣವಾಗಿ ಆ ಚಿತ್ರವನ್ನು ತದೇಕ ಆಚಾರ್ಯರು ನೋಡುತ್ತಲೇ ಇದ್ದರು. ಬಹಳ ಹೊತ್ತು ನೋಡಿದ ಮೇಲೆ ಅವರ ಬಾಯಿಂದ ಒಂದು ಉದ್ಗಾರ ಹೊರಟಿತು.  ‘ಸುದೀಪ್, ನೀವು  ಪೂರ್ಣ ಕಲಾವಿದರಾಗಿಬಿಟ್ಟಿರಿ.  ಈ ಚಿತ್ರ ನಿಮ್ಮ ಉತ್ಕ್ರುಷ್ಟ ಕೃತಿ.  ಒಬ್ಬ ಯುವತಿಯ ಮುಖ ಎಷ್ಟು ಸಹಜವಾಗಿ ಮೂಡಿ ಬಂದಿದೆ! ಈ ಮುಖ ಜೀವಕಳೆಯಿಂದ ತುಂಬಿಬಿಟ್ಟಿದೆ.  ನೆನಪಿನಲ್ಲಿ ಬಂದ ಮುಖವನ್ನು ಬಹಳ ಸುಂದರವಾಗಿ ಮೂಡಿಸಿದ್ದೀರ.  ಈ ವರ್ಷದ ಜಾಗತಿಕ ಚಿತ್ರ ಸ್ಪರ್ಧೆಗೆ ಈ ಚಿತ್ರ ಖಂಡಿತಕ್ಕೂ ಕಳುಹಿಸಲೇ ಬೇಕು!’
 

 
ಚಿತ್ರಶಾಲೆಯಿಂದ ಹೊರಡುತ್ತಾ ಆ ಯುವತಿಯ ಭಾವಚಿತ್ರ ತೆಗೆದುಕೊಂಡ ಸುದೀಪ.  ದಾರಿಯಲ್ಲಿ ಅಂಗಡಿಗಲ್ಲಿ ಅದಕ್ಕೊಂದು ಒಳ್ಳೆಯ ಫ಼್ರೇಮ್ ಹಾಕಿಸಿದ. ಅವನೊಳಗೆ ಆಶ್ಚರ್ಯ ತುಂಬಿಕೊಂಡಿತ್ತು.  ಕೇವಲ ತಿಂಗಳ ಹಿಂದೆ ಅವನೊಬ್ಬ ಚಿತ್ರಕಲೆಯ ಸಾಮಾನ್ಯ ಜ್ಞಾನವೂ ಇಲ್ಲದವನಾಗಿದ್ದ. ಈ ದಿನ ಗುರುಗಳ ಭಾರಿ ಹೊಗಳಿಕೆಗೆ ಪಾತ್ರನಾಗಿದ್ದ!  ಅವನೀಗ ಒಬ್ಬ ಕಲಾವಿದ.
 
ಸುದೀಪ ತನ್ನ ಮನೆ ಹೊಕ್ಕು ರಾಜುವನ್ನು ಕರೆದ. ಆ ವರ್ಣ ಚಿತ್ರವನ್ನು ಅವನ ಕೈಗೆ ಕೊಡುವಾಗ ರಾಜು  ಗದ್ಗದಿತನಾದ.  ಅವನ ಕಣ್ಣೀರು ತನ್ನ ಹೆಂಡತಿ ಸುವ್ವಿಯ ಸುಂದರ ಚಿತ್ರದ ಬಗೆಗಿನ ಸಂತೋಷ ಬಾಷ್ಪವಾಗಿತ್ತು, ಅವಳನ್ನು ಕಳೆದುಕೊಂಡ ದು:ಖದ ಧಾರೆಯೂ ಮತ್ತು ವಿಷಾದ ತುಂಬಿದ ಹೃದಯದ ಕಣ್ಣೀರೂ ಆಗಿತ್ತು.
 
ಔಟ್ ಹೌಸಿನಲ್ಲಿ ಗೋಡೆಯ ಮೇಲೆ ಕಾಣುವಂತೆ ರಾಜು ಸುವ್ವಿಯ ಚಿತ್ರವನ್ನು ಹಾಕಿ ಬಹಳ ಹೊತ್ತು ನೋಡುತ್ತಲೆ ನಿಂತ.  ಅವನಿಗೆ ನಿಜಕ್ಕು ಆ ಪುಟ್ಟ ಹೆಂಡತಿ ಜೀವಂತ ನಗುತ್ತಿರುವಂತೆ ಭಾಸವಾಗತೊಡಗಿತು. ಮತ್ತೆ ಸುದೀಪನ ಬಳಿ ಬಂದು ಹೇಳಿದ, ‘ಎಂಥ ಫ಼ೋಟೊ ತೆಗೆದುಬಿಟ್ಟಿದೀರ!  ಸಾಕ್ಷಾತ್ ಸುವ್ವಿಯೇ ಮತ್ತೆ ಮನೆಯಲ್ಲಿ ಬಂದು ನನ್ನ ನೋಡ್ತಿದಾಳೇನೊ ಅನ್ನುವ ಥರ ಕಾಣಿಸ್ತಿದೆ.  ನಿಮ್ಮ ಋಣ ಈ ಜನ್ಮದಲ್ಲಿ ತೀರ್ಸೋಕ್ಕೆ ಸಾಧ್ಯವಿಲ್ಲ ಅಣ್ಣ?’
 
ರಾಜು ಮತ್ತು ಸುವ್ವಿ ತನ್ನನ್ನು ಒಬ್ಬ ಕಲಾವಿದನನ್ನಾಗಿ ಪ್ರೇರೇಪಿಸಿದ ಘಟನೆಗಳನ್ನು ಮತ್ತೆ ಮತ್ತೆ ಸುದೀಪ ನೆನೆಯುತ್ತಲೇ ಅಚ್ಚರಿಯ ಗೊಂಬೆಯಾಗಿ ಕುಳಿತುಬಿಟ್ಟ. ವಿಷಾದ ಛಾಯೆ ಅವನ ಮುಖದಲ್ಲಿ ಮಡುಗಟ್ಟಿತು.  ರಾಜುವಿನ ಮಾತುಗಳು ಕಿವಿಗಳಿಗೆ ಬೀಳುತ್ತಲೆ  ಅವ್ಯಕ್ತ ಭಾವನೆಗಳಲ್ಲಿ ಅವನ ಕಣ್ಣುಗಳು ತುಂಬಿಕೊಂಡವು.
 
 
            ***

Rating
No votes yet

Comments