ಕೃಷ್ಣ

ಕೃಷ್ಣ

ಬೆಣ್ಣೆ ಕದ್ದು ಮೆದ್ದು ಬಂದ

ಕಣ್ಣು ಮುಚ್ಚಿ ಕತ್ತಲೆಂದ

ಮಣ್ಣು ತಿಂದು ಇಲ್ಲವೆಂದ

ಅಣ್ಣ ಚಾಡಿ ಬೇಡವೆಂದ

ಅಮ್ಮ ನನ್ನ ನಂಬು ಎಂದ

ನಮ್ಮ ಮುದ್ದು ಕಳ್ಳ ಕ್ರಿಷ್ಣ

 

ನಂಬೆ ನಿನ್ನ ಮುದ್ದು ಕಂದ

ಬಾಯಿ ತೆರೆದು ನೋಡು ಎಂದ

ತಾಯಿ ನೋಡೆ ಪುಟ್ಟ ಬಾಯಿ

ಗ್ರಹ ತಾರೆ ಧೃವ ಸೂರ್ಯ

ಸುತ್ತುತಿಹವು ಸಕಲ ಲೋಕ

ಮಹಾ ಮಹಿಮ ನಮ್ಮ ಕ್ರಿಷ್ಣ

 

ತೆರದ ಬಾಯ ಮುಚ್ಚಿ ತಾಯಿ

ಬಾಯಿ ತೆರೆದು ಕಣ್ಣು ತುಂಬಿ

ಬಾಚಿ ತಬ್ಬಿ ಮುತ್ತನಿಟ್ಟು

ದೃಷ್ಟಿ ತೆಗೆದು ಕಪ್ಪನಿಟ್ಟು

ಕೆಟ್ಟ ಕಣ್ಣು ಬೀಳದಿರಲಿ

ನಮ್ಮಪುಟ್ಟ ಕೃಷ್ಣಗೆಂದು

ಟೋಳಿಗೆಲ್ಲ ಸಿಹಿಯ ಕೊಟ್ಟು

ಆಡಿಕೊಳ್ಳಿರೆಂದು ಕಳುಹಿ

ಕಂದ ನಿನ್ನ ತಿಳಿಯದಾದೆ

ನೀನೆ ಸಕಲ ದೈವ ನನಗೆ

ನಿನ್ನ ಪಡೆದ ನಾನೆ ಧನ್ಯೆ

ಜಗದ ಗುರುವೆ ನಮನ ನಿನಗೆ

Rating
No votes yet