ಕೆಡಿಪಿ ಮೀಟಿಂಗು

ಕೆಡಿಪಿ ಮೀಟಿಂಗು

ಪ್ರತೀ ತಿಂಗಳ ಐದನೇ ತಾರೀಖಿನಂದು ಕರ್ಣಾಟಕದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಪಂಚಾಯತ್ ಕಛೇರಿಗಳಲ್ಲಿ "ಕರ್ಣಾಟಕ ಪ್ರಗತಿ ಕಾರ್ಯಕ್ರಮ" (ಕೆ.ಡಿ.ಪಿ) ಎಂಬ ಹೆಸರಿನಡಿಯಲ್ಲಿ ಸಭೆ ನಡೆಸಲಾಗುತ್ತದೆ/ನಡೆಸಬೇಕೆಂಬ ಕಾನೂನೇ ಇದೆ. ಇದು ಕೆ.ಡಿ.ಪಿ. ಮೀಟಿಂಗ್ ಎಂದೇ ವಿಶ್ವವಿಖ್ಯಾತವಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆ ಹಿಂದಿನ ತಿಂಗಳಿನಲ್ಲಿ ವಿವಿಧ ಸರಕಾರಿ ಕಾರ್ಯಕ್ರಮಗಳ ಅನುಷ್ಠಾನ ಯಾವ ಹಂತದಲ್ಲಿದೆ, ಇಲ್ಲಿಯವರೆಗೂ ಎಷ್ಟು ಹಣ ಬಿಡುಗಡೆಯಾಗಿದ್ದು, ಎಷ್ಟು ವ್ಯಯಿಸಲಾಗಿದೆ, ಯಾವ ಕಾಮಗಾರಿ ನಡೆಸಲಾಗಿದೆ, ಯಾರು ಫಲಾನುಭವಿಗಳು, ಇವೇ ಮುಂತಾದ ವಿಷಯಗಳ ಪರಿಶೀಲನೆ ಈ ಸಭೆಯ ವ್ಯಾಪ್ತಿಯಲ್ಲಿ ಬರುತ್ತದೆ.

ಕೆ.ಡಿ.ಪಿ ಮೀಟಿಂಗ್-ಗಳಲ್ಲಿ ತಾಲೂಕು ಪಂಚಾಯ್ತಿಯ ಪರವಾಗಿ ಮೂವರು ಪದಾಧಿಕಾರಿಗಳು- ಅಂದರೆ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಕಾರ್ಯನಿರ್ವಹಣಾಧಿಕಾರಿ- ಮಾತ್ರವೇ ಇರುತ್ತಾರೆ. ಇದಲ್ಲದೇ ಇನ್ನೊಂದು ಬಗೆಯ ಸಭೆಯಿದೆ. ಅದು ಸಾಮಾನ್ಯಸಭೆ (ಜನರಲ್ ಬಾಡಿ (body) ಮೀಟಿಂಗ್). ಇದರಲ್ಲಿ ಪಂಚಾಯ್ತಿಯ ಎಲ್ಲಾ ಸದಸ್ಯರುಗಳೂ ಇರುತ್ತಾರೆ. ಇದಲ್ಲದೇ, ಮೂರು ಸ್ಥಾಯಿ ಸಮಿತಿಗಳು (standing committee) ತಮ್ಮದೇ ಆದ ಸಭೆಗಳನ್ನು ನಡೆಸುತ್ತವೆ. 

ಆದರೆ ಈ ಸಭೆಗಳಲ್ಲಿ ನಡೆಯುವ ಚರ್ಚೆ ನಿಜವಾಗಿಯೂ ಏನು, ಯಾಕೆ, ಹೇಗೆ ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದಲ್ಲಿ ಬೇತಾಳನ ಬೆನ್ನು ಹತ್ತಿದ ವಿಕ್ರಮನಂತೆ ಆಗುತ್ತದೆ. ನಿಜವಾಗಿಯೂ ಈ ಸಭೆ ಒಂದು ಅತ್ಯುತ್ತಮ ಪ್ರಹಸನ. ಪ್ರಶ್ನೆ ಕೇಳುವವನಿಗೂ, ಉತ್ತರ ಹೇಳುವವನಿಗೂ ಗೊತ್ತಿರುತ್ತದೆ ಇದೆಲ್ಲಾ ಬರೀ ತೋರಿಕೆಗಾಗಿ ಎಂದು. ಇಲ್ಲಿ ಬರೀ ಪಂಚಾಯ್ತಿ ಅಧ್ಯಕ್ಷರೋ, ಉಪಾಧ್ಯಕ್ಷರೋ, ಯಾ ಸದಸ್ಯರುಗಳ ವ್ಯವಹಾರ ಮಾತ್ರವನ್ನು ಲೇವಡಿ ಮಾಡುತ್ತಿಲ್ಲ. ಇವರಷ್ಟೇ, ಯಾ ಇವರಿಗಿಂತಲೂ ಹೆಚ್ಚಿಗೆ ಭ್ರಷ್ಟರಾದ ತಾಲೂಕು ಮಟ್ಟದ ಅಧಿಕಾರಿಗಳೂ ಕೂಡ ತಮ್ಮ ಇಲಾಖೆ ವ್ಯವಹಾರಗಳನ್ನು ಸಾಧ್ಯವಾದಷ್ಟೂ ಮಟ್ಟಿಗೆ ಮುಚ್ಚಿಡಲು, ದಾರಿ ತಪ್ಪಿಸುವ/ಅಸಮಂಜಸ ಮಾಹಿತಿ ನೀಡಲು, ನುಣುಚಿಕೊಳ್ಳುವ ಪ್ರಯತ್ನ ಮಾಡಲು ಯಾವ್ಯಾವ ಮಾರ್ಗಗಳನ್ನು ಅನುಸರಿಸುತ್ತಾರೆ ಎಂದು ಗಮನಿಸುತ್ತಾ ಹೋದಲ್ಲಿ "ಮಠ" ಚಿತ್ರಕ್ಕೂ ಮಿಗಿಲಾದ ವಿಡಂಬನಾತ್ಮಕ ಚಲನಚಿತ್ರಗಳನ್ನು ನಿರ್ದೇಶಿಸಬಹುದು. ನಾನು ನೋಡಿದ ಪ್ರಕಾರ ಇರುವವರಲ್ಲಿ ಶೇ 99% ಭ್ರಷ್ಟರೇ. ಎಲ್ಲೋ 1% ಪ್ರಮಾಣಿಕರು ಇರಬಹುದು ಅಷ್ಟೇ, ಅವರಲ್ಲೂ ಸಿ-ದರ್ಜೆಯ ಗುಮಾಸ್ತರೇ ಜಾಸ್ತಿ, ಅಧಿಕಾರಿಗಳು ಕಡಿಮೆ.

Rating
No votes yet