ಕೆಮಿಕಲ್ ಟೆಸ್ಠರ್
ನಾವು ತಿನ್ನುವ ಆಹಾರದಲ್ಲಿ ಪ್ರತಿಶತ ಐವತ್ತು ಭಾಗ ನಮ್ಮ ಆರೋಗ್ಯಕ್ಕಾಗಿ, ಇನ್ನೂ ಐವತ್ತು ಭಾಗ ಅನಾರೋಗ್ಯಕ್ಕಾಗಿ.
ಅಷ್ಟು ಪ್ರಮಾಣದಲ್ಲಿ ಪ್ರತೀ ಹಣ್ಣು ,ಹಂಪಲು ತರಕಾರಿಗಳು ರಾಸಾಯನಿಕ ಯುಕ್ತವಾಗಿದೆ ಎಂದು ಹೇಳಲು ಈ ಒಂದು ಮಾತನ್ನು ಒಬ್ಬ ದೊಡ್ಡ ವೈದ್ಯರು ಹೇಳಿದ್ದಾರೆ ಎಂಬುದನ್ನು ನಾನು ಓದಿದ ನೆನಪು. ಅದಕ್ಕೆ ಪೂರಕವಾದ ಒಂದು ವಿಚಾರ ಇಲ್ಲಿದೆ.
ಇತ್ತೀಚೆಗೆ ನಾನು ನನ್ನ ಆತ್ಮೀಯ ಗೆಳೆಯನ ಮನೆಗೆ ಕುಟುಂಬ ಸಮೇತವಾಗಿ ಹೋಗಿದ್ದೆ. ಹೋಗುವಾಗ ಮಾಮೂಲಿಯಂತೆ ಬಾಳೆ,ಸೇಬು ಹಣ್ಣುಗಳನ್ನ ತೆಗೆದುಕೊಂಡು ಹೋಗಿದ್ದೆ.
ಗೆಳೆಯನ ಪತ್ನಿಯ ಕೈಗೆ ಅವುಗಳನ್ನು ಇಟ್ಟು ಮಾತನಾಡಲು ಕುಳಿತೆವು.
ಆದರೆ ನನ್ನ ಮಕ್ಕಳು ಹಣ್ಣು ಬೇಕು ಎಂದು ಹಠ ತೆಗೆದರು. ನನ್ನ ಹೆಂಡತಿ ಎರಡು ಬಾಳೆ ಹಣ್ಣುಗಳನ್ನು ತಂದು ಮಕ್ಕಳ ಕೈಗೆ ಇಟ್ಟಳು, ಅದನ್ನು ಕಂಡ ನನ್ನ ಗೆಳೆಯ ಸ್ವಲ್ಪ ನಿಲ್ಲಿ ಎಂದು ಒಳಗಡೆ ಹೋಗಿ
ಒಂದು ಬಾಳೆ ಒಂದು ಸೇಬು ಹಣ್ಣನ್ನು ತೆಗೆದುಕೊಂಡು ಬಂದು ಮನೆಯ ಮಧ್ಯದಲ್ಲಿದ್ದ ಕಂಪ್ಯೂಟರ್ ಮುಂದಿನ box ಅನ್ನು open ಮಾಡಿದ, ಅದರಲ್ಲಿದ್ದ ಸೂಜಿಯಂತಹ ಒಂದು ಚಿಕ್ಕ ಪಿನ್ನಿಗೆ ಹಣ್ಣನ್ನು ಒಮ್ಮೆ ಚುಚ್ಚಿ ತೆಗದ, ಕೆಲವೇ ಸೆಕೆಂಡುಗಳಲ್ಲಿ ಅವನ ಕಂಪ್ಯೂಟರ್ ಪರದೆಯ ಮೇಲೆ ವಿಧವಿಧವಾದ ಅಂಕಿ ಸಂಖ್ಯೆಗಳು ಬಂದವು. ಅದರಲ್ಲಿ ಅವನ ಮನೆಯಲ್ಲಿರುವ ಸದಸ್ಯರ ಹೆಸರು ಸಮೇತ ಬಂದಿತು, ವೈಯಕ್ತಿಕವಾಗಿ ಆ ವ್ಯಕ್ತಿ ಈ ಬಾಳೆಹಣ್ಣನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬಹುದು ಇದರಲ್ಲಿ ಎಷ್ಟು ಪ್ರಮಾಣದಲ್ಲಿ ರಾಸಾಯನಿಕಗಳಿವೆ ಎಂಬ ಪಟ್ಟಿಯನ್ನ ಕಂಡೆ, ಅಲ್ಲದೆ ಈ ಹಣ್ಣು ತಿನ್ನಲು ಯೋಗ್ಯವೆ ಎಷ್ಟು ಪ್ರಮಾಣದಲ್ಲಿ ತಿನ್ನಲು ಯೋಗ್ಯ ಎಷ್ಟು ಪ್ರಮಾಣದಲ್ಲಿ ತಿಂದರೆ ಏನಾಗಬಹುದೆಂಬ ಸಂಪೂರ್ಣ ವಿವರ ಅದರಲ್ಲಿತ್ತು.
ಅದನ್ನು ಓದಿದ ಮೇಲೆ ನನ್ನ ಸ್ನೇಹಿತ ನನಗೆ ಹೇಳಿದ್ದು ಮಕ್ಕಳ ಕೈಲಿದ್ದ ಹಣ್ಣುಗಳು ತಿನ್ನಲು ಯೋಗ್ಯವಲ್ಲ ದಯವಿಟ್ಟು ಇದನ್ನು ಪಕ್ಕದಲ್ಲೇ ಇರುವ ಗೋಬರ್ ಗ್ಯಾಸ್ ತೊಟ್ಟಿಗೆ ಹಾಕಿಬಿಡು ವಿದ್ಯುತ್ತಾದರೋ ಉತ್ಪಾದನೆಯಾಗುತ್ತದೆ ಎಂದ. ರಾಸಾಯನಿಕಗಳನ್ನು ಏಕೆ ಮಕ್ಕಳಿಗೆ ತಿನ್ನಿಸುತ್ತೀಯ ಎಂದ.
ಮಕ್ಕಳಿಗೆ ನನ್ನ ಕೖಯಾರೆ ವಿಷ ಕೊಡುತ್ತಿದ್ದೇನೆ ಎಂದು ನೆನೆದು ಒಂದು ಕ್ಷಣ ದಂಗಾಗಿ ಹಣ್ಣು ಕಸಿದು ಬಿಸಾಕಿ ಅವರ ಮನೆಯಲ್ಲಿ ತಯಾರಿಸಿದ ಲಡ್ಡು ಕೈಗಿಟ್ಟು ಮಕ್ಕಳಿಗೆ ಸಮಾಧಾನ ಪಡಿಸಿದೆ.
ಈ ಮಸಿನ್ ನೋಡಿ ಒಂದು ಪ್ರಶ್ನೆಯನ್ನು ಕೇಳಿದೆ. ಆಯಿತು ಈ ಪೆಟ್ಟಿಗೆ ಮತ್ತು ಕಂಪ್ಯೂಟರ್ ಮನೆಯಲ್ಲಿ ಇರುವುದರಿಂದ ಪ್ರತಿಬಾರಿ ಸಂತೆಯಿಂದ ಹಣ್ಣುಗಳನ್ನು ತಂದು ಈ ರೀತಿ ಪರೀಕ್ಷೆ ಮಾಡಿ ರಾಸಾಯನಿಕ ಯುಕ್ತ ಹಣ್ಣುಗಳು ಎಂದು ತಿಳಿದ ಮೇಲೆ ಇದೇ ರೀತಿ ಬಿಸಾಕುತ್ತಾ ಹೋದರೆ ಹೇಗೆ ? ಎಂದೆ .
ಅದಕ್ಕೆ ನನ್ನ ಸ್ನೇಹಿತ ನಗುತ್ತಾ ತನ್ನ ಜೇಬಿನಿಂದ ಇನ್ನೊಂದು ತರ್ಮಾಮೀಟರ್ ಆಕಾರದ ಒಂದು ವಸ್ತುವನ್ನು ತೆಗೆದು (ಅದಕ್ಕೂ ಕೂಡ ಒಂದು ಚೂಪಾದ ಸೂಜಿ ಇತ್ತು) ಇದನ್ನು ಮಾರ್ಕೆಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ, ಅಲ್ಲಿ ಇರುವ ಹಣ್ಣುಗಳಿಗೆ ಒಂದು ಬಾರಿ ಚುಚ್ಚಿದರೆ ಸಾಕು ಇದರಲ್ಲಿ ಆ ಹಣ್ಣಿನಲ್ಲಿರುವ ರಾಸಾಯನಿಕಗಳ ಸಂಪೂರ್ಣ ವಿವರಣೆ ಬಂದು ಬಿಡುತ್ತದೆ. ಯಾವ ಪ್ರಮಾಣದಲ್ಲಿ ನಾವು
ರಾಸಾಯನಿಕ ಯುಕ್ತ ಹಣ್ಣುಗಳನ್ನು ಸೇವಿಸಬಹುದು ಎಂಬುದನ್ನು ಮನೆಯಲ್ಲಿ ನೋಡಿಕೊಂಡು ಹೋಗಿರುತ್ತೇವೆ. ಅದರಂತೆ ರಾಸಾಯನಿಕ ಮುಕ್ತ ಹಣ್ಣುಗಳನ್ನು ಖರೀದಿಸಿ ತಂದು ಸೇವಿಸುತ್ತವೆ, ಎಂದು ನಗಲಾರಂಭಿಸಿದ. ನನಗೆ ಒಂದು ಕಡೆ ಆಶ್ಚರ್ಯ ಇನ್ನೊಂದು ಕಡೆ ಸಂತೋಷ.
ಆದರೂ ಕುತೂಹಲಕ್ಕಾಗಿ ಒಂದು ಪ್ರಶ್ನೆ ಕೇಳಿದೆ. ನೀವು ಹಣವಂತರು ಇಂತಹ ಸಾಧನೆಗಳನ್ನ ಖರೀದಿಸಿ ಮನೆಯಲ್ಲಿಟ್ಟುಕೊಂಡು ನಿಮ್ಮ ಆರೋಗ್ಯವನ್ನು ಸೂಕ್ಷ್ಮವಾಗಿ ಕಾಪಾಡಿಕೊಳ್ಳುತ್ತೀರ , ಆದರೆ ನಮ್ಮಂತಹ ಮಧ್ಯಮ ವರ್ಗದವರು, ಬಡವರು ಏನು ಮಾಡಬೇಕು ಬಿಡಪ್ಪ ಎಂದು ಸುಮ್ಮನಾದೆ.
ಅದಕ್ಕೆ ನನ್ನ ಸ್ನೇಹಿತ ನಗುತ್ತಲೇ ಉತ್ತರಿಸಿದ ಅಯ್ಯೋ ......
ಈ ಮನೆಯಲ್ಲಿರುವ ಕಂಪ್ಯೂಟರ್ connected ಪೆಟ್ಟಿಗೆ ಕೇವಲ 4000.0 ರೂ ಗಳು ಅದರಂತೆ ಈ ನನ್ನ ಜೇಬಿನ ಲ್ಲಿರುವ ಥರ್ಮಾಮೀಟರ್ ನಂತಹ ಈ ಉಪಕರಣ ಕೇವಲ 1000.0 ರೂ. ಇಷ್ಟು ಕೊಟ್ಟು ಖರೀದಿಸುವಷ್ಟು ಹಣ ನಿನ್ನಲ್ಲಿದೆ ಎಂಬುದು ನನಗೆ ಗೊತ್ತು ಆದರೆ ನೀನು ಪ್ರಯತ್ನಿಸಿಲ್ಲ , ಇವು ನಮ್ಮೂರಿನ medical shop ನಲ್ಲಿ ದೊರೆಯುತ್ತವೆ, ಬೇಕಾದರೆ ತೆಗೆದುಕೊಂಡು ಹೋಗು ಎಂದ.
ನನಗೆ ಬಹು ಸಂತೋಷವಾಯಿತು ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸಿಕ್ಕರೆ ಯಾರು ತಾನೆ ಬಿಡ್ತಾರೆ ಹೇಳಿ. ಖರೀದಿಸಲು ನಡೆದೆ.
ಇದನ್ನ ಓದಿದ ನೀವು medical shop ನತ್ತ ಹೆಜ್ಜೆ ಹಾಕಬೇಡಿ. ಏಕೆಂದರೆ ನೀವು ಇಷ್ಟು ಹೊತ್ತು ಓದಿರುವುದು ಕೇವಲ ನನ್ನ ಕಾಲ್ಪನಿಕ ಒಂದು ಕಥೆ.
ಈ ರೀತಿಯ ಉಪಕರಣಗಳು ಬಹುಶ ಇನ್ನು ಬಂದಿರಲಿಕ್ಕಿಲ್ಲ. ಈ ನನ್ನ ಕಲ್ಪನೆಯಲ್ಲಿ ಮೂಡಿಬಂದ ಆ ಉಪಕರಣಗಳು ಅಷ್ಟೊಂದು ಕಡಿಮೆ ಬೆಲೆಗೆ ಸಿಗುವಂತಾದರೆ ಮುಂದೊಂದು ದಿನ ನಮ್ಮ ಮಕ್ಕಳಿಗೆ ರಾಸಾಯನಿಕ ಮುಕ್ತ ಆಹಾರ ಹೆಚ್ಚಿಗೆ ಸಿಗುವಂತಾಗಲಿ ಎಂದು ಆಶಿಸುವ...