ಕೆಲವು ಕರ್ಡಿಶ್ ಕವಿತೆಗಳು
ಕೆಲವು ಕರ್ಡಿಶ್ ಕವಿತೆಗಳು
(ಓಮಿದ್ ವರಜಾನ್ದೆಯವರ ಇಂಗ್ಲೀಷ ಅನುವಾದದಿಂದ)
ಘನತೆ
(ಬರೋಜ್ ಅಕ್ರಾಯಿ)
ಧೂಳು ಹಾಗೂ ಮಂಜಿನ ನಡುವೆ
ಬೂದುಬಣ್ಣದ ಟ್ರಕ್ಕೊಂದು ಬರುತ್ತದೆ
ಮೂವರು ಮಹಿಳೆಯರು ಕಾಯುತ್ತಿದ್ದಾರೆ
ಸೈನ್ಯದ ಕೋಟೆ ಗೋಡೆಗೆ ಆನಿಸಿ
ಒಬ್ಬಳು ಅಳುತ್ತಿದ್ದಾಳೆ
ಇನ್ನಿಬ್ಬರು ನಗುತ್ತಿದ್ದಾರೆ
ಟ್ರಕ್ಕಿನೊಳಗೆ ಇಬ್ಬರು ಯುವಕರು
ಈಸುತ್ತಿದ್ದಾರೆ ತಮ್ಮ ರಕ್ತದ ಮಡುವಲ್ಲಿ
ಟ್ರಕ್ಕಿನೊಳಗಿದ್ದ ಮೂರನೆಯವ
ತನ್ನ ಮೀಸೆ ತೀಡಿಕೊಳ್ಳುತ್ತಲಿದ್ದಾನೆ.
ಬಲಿದಾನ
(ಜಲಾಲ್ ಮಾಲಾಷಾ)
ಬಿಳಿ ಪಾರಿವಾಳ
ವೊಂದು ಒಯ್ಯುತ್ತಿತ್ತು ಶಾಂತಿಸಂದೇಶ
ಘಾಸಿ ನಾಡಿನಿಂದ
ಇತಿಹಾಸಕ್ಕೆ
ಆಗ ಬಂದರು ಬೇಟೆಗಾರರು
ಎಸೆದರು ಶರಜಾಲವನ್ನು
ಥಟ್ಟನೆ
ಭೂಮಿ ಬೊಬ್ಬೆಯಿಕ್ಕಿತು
ಆಕಾಶ ಎಚ್ಚೆತ್ತಿತು
ಪಾರಿವಾಳದ ರಕ್ತ
ಜಗತ್ತಿನ ಮೇಲೆ ಬಿತ್ತು
ಬಿಂದು
ಬಿಂದು
ಬಿಂದು
Rating