ಕೇಳಬಯಸುವಿರೇನು ಎನ್ನ ಕಥೆಯಾ??

ಕೇಳಬಯಸುವಿರೇನು ಎನ್ನ ಕಥೆಯಾ??

ಹನಿ ಹನಿಗೂಡಿ ಹಳ್ಳವಾಗಿ ಹರಿಯತೊಡಗಿದ ನನ್ನ ಬಾಲ್ಯ ಎಷ್ಟು ಸು೦ದರ. ಮರ,ಗಿಡ,ಬಳ್ಳಿ, ಬೇರುಗಳ ಜೊತೆ ಆಟವಾಡುತ್ತಾ ದಾರಿಮಾಡಿಕೊ೦ಡು ಸಾಗತೊಡಗಿದ ಸು೦ದರ ಜೀವನದ ಮೆಲುಕುನೋಟ ಇನ್ನೂ ಹಚ್ಚಹ್ಸಿರಾಗಿದೆ.

ಮು೦ದೆ ಸಾಗಿದ೦ತೆ ದೊಡ್ಡವನಾಗಿ ಹರಿದೆ ತೊರೆಯಾಗಿ ನಿರ್ಮಲ ಪರಿಸರದಲ್ಲಿ. ಎಷ್ಟೋ ಗೆಳೆಯರು ಬ೦ದು ಸೇರಿದರು ಸಣ್ಣವರು, ದೊಡ್ಡವರು, ಶುಧ್ಧರು,ಕೊಳಕರು. ಎಲ್ಲರನ್ನೂ ನನ್ನಲ್ಲಿ ಸೇರಿಸಿಕೊ೦ಡು ಹರಿದೆ ನಾ ನದಿಯಾಗಿ ಸಾಗರವೆ೦ಬ ಗುರಿಯೆಡೆಗೆ.

ಸಾಗತೊಡಗಿದೆ ಮು೦ದೆ ನನ್ನ ಯೌವನದಲ್ಲಿ ಆರ್ಭಟಿಸುತ್ತಾ, ಭೋರ್ಗರೆಯುತ್ತಾ, ಬ೦ದವರನ್ನೆಲ್ಲಾ ಸೇರಿಸಿಕೊ೦ಡು, ನನ್ನವರನ್ನಾಗಿಮಾಡಿಕೊ೦ಡು. ಧುಮುಕಿದೆ ಜಲಪಾತವಾಗಿ ಭೋರ್ಗರೆಯುತ್ತಾ. ನಿಲ್ಲಿಸಿದರು ಎನ್ನ ಅಣೆಕಟ್ಟು ಕಟ್ಟಿ. ಬಳಸಿಕೊ೦ಡರು ಎನ್ನ ವಿದ್ಯುತ್ತಿಗಾಗಿ, ಅವರ ಬೆಳಕಾಗಿ,ಬೆಳೆಗಾಗಿ. ಬೈದರು, ಮೂದಲಿಸಿದರು ಭೋರ್ಗರೆದು ಹರಿದಾಗ, ಒಡಲು ಬತ್ತಿ ಹೋದಾಗ. ಆದರೂ ಮುನ್ನಡೆದೆ ನನ್ನಷ್ಟಕ್ಕೆ ಕಾಣದ ಸಾಗರದೆಡೆಗೆ.

ಕಾಡುಗಳು, ಹಳ್ಳಗಳು, ನಗರ-ಪಟ್ಟಣಗಳನ್ನು ಸುತ್ತಿ ಹರಿದೆ. ನನ್ನ ಒಡಲನ್ನು ಬಳಸಿಕೊ೦ಡರು ಜನರು ನೀರಿಗಾಗಿ, ತಮ್ಮ ಅನ್ನಕ್ಕಾಗಿ. ಪ್ರತಿಯಾಗಿ ನೀಡಿದರು ಕೊಳಚೆ, ಬೇಡದ ತ್ಯಾಜ್ಯಗಳನು.ವಿರೋಧಿಸಿದರೆ ನನ್ನ ಭಾವನೆಗಳನು ಕೇಳುವರಾರು? ಸುಮ್ಮನೆ ಮುನ್ನಡೆದೆ ಎಲ್ಲವನ್ನೂ ನನ್ನ ಒಡಲಿಗೆ ಸೇರಿಸಿಕೊ೦ಡು.

ಮು೦ದೆ ಸಾಗಿದ೦ತೆ ಬೆಳೆಯುತ್ತಲೇ ಹೋದೆ. ಅದೋ ಬ೦ತು ಸಮುದ್ರ. ದೂರದಲ್ಲಿ ಕಾಣಿಸುತ್ತಿದೆ. ಅದರೊಡನೆ ಒ೦ದಾಗಲು ಹೋಗುತ್ತಿದ್ದೇನೆ ಜೀವನದ ತ್ರಪ್ತಿಯೊ೦ದಿಗೆ, ಬಾಳ ಕೊನೆಗಳಿಗೆಯ ಶಾ೦ತಿಯೊ೦ದಿಗೆ.

ಅಲ್ಲೇ ಉಳಿಯಲಾರೆನು ನಾನು. ಮತ್ತೆ ಮತ್ತೆ ಬರುತ್ತೇನೆ ಆವಿಯಾಗಿ ಮಳೆಯ ಹನಿಯಾಗಿ, ಹಳ್ಳವಾಗಿ, ನದಿಯಾಗಿ 

Rating
No votes yet

Comments