ಕೈಗಾರಿಕಾ ಅಭಿವೃದ್ಧಿ.... ಎಂಬ ಭ್ರಾಮಕ ಜಗತ್ತಿನಲ್ಲೊಂದು ಸುತ್ತು....!

ಕೈಗಾರಿಕಾ ಅಭಿವೃದ್ಧಿ.... ಎಂಬ ಭ್ರಾಮಕ ಜಗತ್ತಿನಲ್ಲೊಂದು ಸುತ್ತು....!

ರೈತರಿಗೆ ಉಚಿತ ವಿದ್ಯುತ್, ಗುಜರಾತ್‌ ಮಾದರಿಯಲ್ಲಿ ಕೈಗಾರಿಕೆ ಅಭಿವೃದ್ಧಿ, ಎನ್‌ಆರ್ಐ ಹೂಡಿಕೆಗೆ ಪೂರಕವಾಗಿ ವಿಶೇಷ ಎನ್‌ಆರ್ಐ ಘಟಕ... ಇದೆಲ್ಲವೂ ಕರ್ನಾಟಕದಲ್ಲಿ ಬಿಜೆಪಿ ಸರಕಾರ "ಅನುಷ್ಠಾನ"ಕ್ಕೆ ತಂದಿರುವ ವಿಶೇಷ ನಿರ್ಣಯಗಳು...!

ಇವೆಲ್ಲ ರಾಜಕೀಯ ವರಸೆಗಳೇ... ಇಲ್ಲಾ ವಾಸ್ತವಾಂಶವೇ ? ಗೊತ್ತಾಗದ ಪರಿಸ್ಥಿತಿಯಲ್ಲಿ ರಾಜ್ಯದ ಜನರಿದ್ದಾರೆ. ಒಂದು ರೀತಿಯ ಭ್ರಾಮಕ ಜಗತ್ತನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದರೆ ತಪ್ಪಲ್ಲ. ಬಿ.ಎಸ್.ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ. ಅಷ್ಟರಲ್ಲಾಗಲೇ ಅನೇಕ ಎಡರು ತೊಡರುಗಳು ಬಂದು ಹೋಗಿವೆ. ಈಗ ಮತ್ತೆ ಶಾಕ್ ಟ್ರೀಟ್‌ಮೆಂಟ್‌ ವಿದ್ಯುತ್‌ ಕ್ಷೇತ್ರದಿಂದಾಗುತ್ತಿದೆ...!
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸದೇ ಹೋದರೆ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಬೇಕಾದೀತು ಎಂಬ ಭೀತಿ..! ಹೀಗಾಗಿ ರೈತರಿಗೆ ಉಚಿತ ವಿದ್ಯುತ್‌ ಆಗಸ್ಟ್‌ ಒಂದರಿಂದಲೇ ಜಾರಿ ಎಂಬ ಘೋಷಣೆಯೂ ಹೊರಬಿತ್ತು. ಆದರೆ ಅದು ಜಾರಿಗೊಂಡಿದೆಯೇ ಎಂದರೆ ಹೌದು ಎಂಬ ಉತ್ತರ ಬಂದೀತು. ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ರೈತರಿಗೆ ಉಚಿತ ವಿದ್ಯುತ್‌ ಎಂಬುದು "ಕನಸು" ಆಗಿದೆ.

ವಾಸ್ತವಾಂಶ ತಿಳಿಸಿ...

ಸರಕಾರ ವಾಸ್ತವಾಂಶ ಹೊರಗೆಡಹಲು ಹಿಂದೇಟು ಹಾಕುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಉಚಿತ ವಿದ್ಯುತ್ ಪೂರೈಸುವುದು ಕಷ್ಟ ಸಾಧ್ಯ. ಯಾಕೆಂದರೆ ವಿದ್ಯುತ್ ಶಕ್ತಿಯ ಸಮರ್ಪಕ ಬಳಕೆಯಾಗುತ್ತಿಲ್ಲ. ಅನೇಕ ವಿದ್ಯುತ್ ಘಟಕಗಳ ಸ್ಥಾಪನೆ ಮಾಡುವ ಉದ್ದೇಶ ಇದೆ ಎಂದು ಸರಕಾರ ಹೇಳುತ್ತಿದೆ. ಆದರೂ ಈಗ ಲಭ್ಯವಿರುವ ವಿದ್ಯುತ್‌ ಶಕ್ತಿ ತೀರಾ ಕಡಿಮೆ. ಹೀಗಿರುವಾಗ ರೈತರಿಗೆ ಉಚಿತ ವಿದ್ಯುತ್ ಸರಕಾರದ ರಾಜಕೀಯ ವರಸೆಯಲ್ಲದೇ ಮತ್ತೇನು ಎಂಬ ಪ್ರಶ್ನೆ ಉದ್ಭವವಾಗುತ್ತದೆ.
ರಾಜ್ಯದ ಪ್ರಗತಿಯಲ್ಲಿ ವಿದ್ಯುತ್‌ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಹಾಗೆ ನೋಡಿದರೆ ಜಲ ವಿದ್ಯುತ್‌ ಅತ್ಯಂತ ಕಡಿಮೆ ವೆಚ್ಚದ್ದಾಗಿದ್ದರೂ ರಾಜ್ಯದಲ್ಲಿ ಅದನ್ನು ಸರಿಯಾಗಿ ಬಳಸಲಾಗುತ್ತಿಲ್ಲ. ಜಲವಿದ್ಯುತ್ ನಿರ್ವಹಣೆ ಕುರಿತ ಸರಿಯಾದ ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣ. ಸರಕಾರ ಇದನ್ನೆಲ್ಲಾ ಜನರೆದುರು ಬಹಿರಂಗಗೊಳಿಸಿ ಸಹಕರಿಸುವಂತೆ ಕೇಳದ ಹೊರತು ವಿದ್ಯುತ್‌ ಕ್ಷಾಮ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಎಫ್‌ಕೆಸಿಸಿಐ ಎನರ್ಜಿ ಕಮಿಟಿ ಅಧ್ಯಕ್ಷ ಎಂ.ಜಿ.ಪ್ರಭಾಕರ್.
ಕೈಗಾರಿಕಾ ಕ್ಷೇತ್ರ ಗಮನಿಸಿದರೆ ಕಳೆದ ಹದಿನೈದು ವರ್ಷದ ಹಿಂದೆ ಏನು ವಿದ್ಯುತ್‌ ಶಕ್ತಿ ಬಳಸುತ್ತಿದ್ದರೋ ಅದೇ ಪ್ರಮಾಣದ ವಿದ್ಯುತ್‌ ಶಕ್ತಿ ಈಗಲೂ ಬಳಕೆಯಾಗುತ್ತಿದೆ. ಅಂದರೆ ಕಳೆದ ೧೫ ವರ್ಷ ಸರಾಸರಿ ೪೫೦೦ ಮಿಲಿಯ ಮೆಗಾ ವ್ಯಾಟ್‌ ವಿದ್ಯುತ್‌ ಅಷ್ಟೇ ಬಳಕೆಯಾಗಿದೆ. ಇದೇ ಅವಧಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಬಳಕೆಯಾದ ವಿದ್ಯುತ್ ಗಮನಿಸಿದರೆ ಎಂಥವರಿಗೂ ಆಶ್ಚರ್ಯವಾದೀತು. ೪ಸಾವಿರ ಮಿಲಿಯ ಮೆಗಾ ವ್ಯಾಟ್‌ ಇದ್ದಂಥ ವಿದ್ಯುತ್‌ ಶಕ್ತಿ ಬಳಕೆ ಕಳೆದ ವರ್ಷ ೧೧ ಸಾವಿರ ಮಿಲಿಯ ಮೆಗಾ ವ್ಯಾಟ್‌ಗೇರಿದೆ. ಆದರೆ ಕೃಷಿ ಕ್ಷೇತ್ರದ ಉತ್ಪಾದನೆ ಎಷ್ಟು ? ಎಂಬುದೇ ಈಗ ಯಕ್ಷ ಪ್ರಶ್ನೆ...!
ಇನ್ನು ಕೈಗಾರಿಕೆ ಕ್ಷೇತ್ರ ಅಭಿವೃದ್ಧಿಯಲ್ಲಿದೆ ಎಂದು ಪ್ರತಿ ವರ್ಷ ಅಂಕಿ ಅಂಶಗಳು ಹೊರಬರುತ್ತವೆ. ಅವು ಎಷ್ಟು ಸಾಚಾ... ಅಭಿವೃದ್ಧಿಯ ಸೂಚ್ಯಂಕಗಳು ಯಾವುವು ? ವಿದ್ಯುತ್ ಬಳಕೆ, ಉತ್ಪಾದನೆಗಳು ಗಮನಾರ್ಹ ಅಂಶಗಳಲ್ಲವೇ ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತದೆ.
ಈ ಎಲ್ಲ ಅಂಶಗಳ ಬಗ್ಗೆ ಎಫ್‌ಕೆಸಿಸಿಐನ ರಾಜ್ಯ ಎನರ್ಜಿ ಕಮಿಟಿ ಅಧ್ಯಕ್ಷರಾದ ಎಂ.ಜಿ.ಪ್ರಭಾಕರ್ ಅವರು ಏನು ಹೇಳ್ತಾರೆ ಗೊತ್ತಾ ? ರಾಜ್ಯ ಸರಕಾರ ಈ ಎಲ್ಲ ಅಂಶಗಳನ್ನು ನಿರ್ಲಕ್ಷಿಸಿದೆ. ವಿದ್ಯುತ್‌ ಪೂರೈಕೆ ವೇಳೆ ಉಂಟಾಗುವ ನಷ್ಟ ತಡೆಯಲು ಕ್ರಮ ಕೈಗೊಂಡರೂ ಒಂದಿಷ್ಟು ವಿದ್ಯುತ್‌ ಉಳಿತಾಯ ಮಾಡಿದಂತಾಗುತ್ತದೆ. ಆದರೆ ಈ ಬಗ್ಗೆ ಯಾರು ಕೂಡಾ ಗಮನಹರಿಸಿಲ್ಲ. ಛತ್ತೀಸ್‌ಘಡದಿಂದ ವಿದ್ಯುತ್‌ ತರುವುದು ತುಂಬಾ ತುಟ್ಟಿಯಾದ ವಿಚಾರ. ಆದರೂ ಅದು ಕೂಡಾ ಕಷ್ಟದ ಕೆಲಸ. ಇಷ್ಟೆಲ್ಲಾ ಸಮಸ್ಯೆ ಇಟ್ಟುಕೊಂಡು ಕೈಗಾರಿಕಾ ಅಭಿವೃದ್ಧಿ ಬಗ್ಗೆ ಯಾವ ಕ್ರಮ ಕೈಗೊಂಡರೂ ಅದು ಯಶಸ್ವಿಯಾಗೋದು ಕಷ್ಟ ಸಾಧ್ಯ. ಅಗತ್ಯ ಸೌಕರ್ಯ ಒದಗಿಸುವ ಕಡೆಗೆ ಸರಕಾರ ಗಮನಹರಿಸದ ಹೊರತು ಕೈಗಾರಿಕಾ ಕ್ಷೇತ್ರ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಹೇಳ್ತಾರೆ ಪ್ರಭಾಕರ್ ಅವರು.
ಬಾಯಾರಿದಾಗ ಬಾವಿ ತೋಡಿದರು ಎಂಬ ಮಾತು ವಿದ್ಯುತ್‌ ಕ್ಷಾಮದ ಈ ವೇಳೆ ಸರಕಾರದ ನಿಲುವಿಗೆ ಸೂಕ್ತ ಎಂದೆನಿಸುತ್ತದೆ. ಒಟ್ಟಿನಲ್ಲಿ ಕೈಗಾರಿಕಾ ಕ್ಷೇತ್ರ ಅಂಧಕಾರದಲ್ಲಿದ್ದರೂ ಅಭಿವೃದ್ಧಿ ಎಂಬ ಭ್ರಮೆಗೇನೂ ಕೊರತೆಯಾಗಿಲ್ಲ ಎಂದು ಹೇಳಲು ಅಡ್ಡಿಯಿಲ್ಲ.

Rating
No votes yet