ಕೈದಾಳದ ಕೇಶವ

ಕೈದಾಳದ ಕೇಶವ

ಸತ್ಯಂ ಸತ್ಯಂ ಪುನ: ಸತ್ಯಂ, ಉದ್ಧೃತ್ಯ ಭುಜಮುಚ್ಯತೇ| ವೇದ ಶಾಸ್ತ್ರಾತ್ ಪರಂ ನಾಸ್ತಿ ನದೈವಂ ಕೇಶವಾತ್ಪರಂ|| ಸತ್ಯ,ಸತ್ಯ, ಎಂದು ಎರಡೂ ಭುಜಗಳನ್ನೂ ಮೇಲೆತ್ತಿ ಪ್ರಮಾಣಮಾಡಿ ಹೇಳುತ್ತೇನೆ, ವೇದಗಳಿಗೆ ಮೀರಿದ ಶಾಸ್ತ್ರವಿಲ್ಲ, ಕೇಶವನಿಗೆ ಮೀರಿದ ದೈವ ವಿಲ್ಲ. ಹೊಯ್ಸಳರು ಪರಮ ಪವಿತ್ರವಾದ ಈ ನಾಡಿನ ಶಿಲ್ಪಕಲೆ ಮತ್ತು ಸಂಸ್ಕೃತಿಗೆ ತಮ್ಮದೇ ಆದ ವಿಶಿಷ್ಟವಾದ ಕೊಡುಗೆಯನ್ನು ನೀಡುವುದರಮೂಲಕ ಕರ್ನಾಟಕದ ಮತ್ತು ಕನ್ನಡಿಗರ ಖ್ಯಾತಿಯನ್ನು ಉತ್ತುಂಗಕ್ಕೆ ಏರಿಸಿರುವುದನ್ನು ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯಗಳು ಅಭಿವ್ಯಕ್ತಗೊಳಿಸುತ್ತಿವೆ. ಇವುಗಳ ಸಾಲಿನಲ್ಲಿಯೇ ಬರುವ ಮತ್ತೊಂದು ದೇವಾಲಯ ವೆಂದರೆ ಕೈದಾಳದ ಶ್ರೀ ಚನ್ನಕೇಶವ ದೇವಾಲಯ. ಕೈದಾಳದ ಹಿಂದಿನ ಹೆಸರು ಕ್ರೀಡಾಪುರ, ಇದು ತುಮಕೂರಿನಿಂದ ೩ ಕಿಲೋಮೀಟರ್ ದೂರದಲ್ಲಿದೆ.ಇಲ್ಲಿನ ಕೇಶವನ ವಿಗ್ರಹ ವಾದರೂ ಕಲಾನೈಪುಣ್ಯದಲ್ಲಿ ವೇಲಾಪುರಿಯ[ಬೇಲೂರು] ಸೌಮ್ಯ ಕೇಶವನನ್ನು ಮೀರಿಸುವಂತಿದೆ. ಸ್ವತ: ಅಂದಿನ ಖ್ಯಾತ ಶಿಲ್ಪಿ ಅಮರ ಶಿಲ್ಪಿ ಜಕ್ಕಣ ನೇ ಈ ವಿಗ್ರಹವನ್ನು ಕೆತ್ತಿದನೆಂಬ ಹೆಗ್ಗಳಿಕೆಯ ದಂತ ಕಥೆ ಇದೆ. ದೇವಾಲಯವು ದ್ರಾವಿಡ ಮಾದರಿಯಲ್ಲಿದೆ.ದೇವಾಲಯವು ಕ್ರಿ.ಶ. ೧೧೫೦ ರಲ್ಲಿ ನಿರ್ಮಾಣಗೊಂಡಿದೆ. ವಿಜಯನಗರದ ಮಾದರಿಯಲ್ಲಿ ೭ ಹಂತದ ಗೋಪುರವಿದ್ದ ಕುರುಹು ಇದೆ. ದಂತಕಥೆ: ಕಡುಬಡತನದಿಂದ ಬೇಸತ್ತ ಶಿಲ್ಪಿ ಜಕ್ಕಣನು ಉದ್ಯೋಗ ಅರಸುತ್ತಾ ಹೊಯ್ಸಳ ಸಾಮ್ರಾಟ ವಿಷ್ಣುವರ್ಧನನಲ್ಲಿ ರಾಜಾಶ್ರಯ ಪಡೆದು ವೇಲಾಪುರಿಯ ಸೌಮ್ಯಕೇಶವ ದೇವಾಲಯ ನಿರ್ಮಾಣದಲ್ಲಿ ಪ್ರಧಾನ ಶಿಲ್ಪಿ ಯಾಗುತ್ತಾನೆ. ನಂತರ ತನ್ನ ತಂದೆಯನ್ನು ಅರಸಿಕೊಂಡುಬಂದ ಮಗ ಡಂಕಣನು ಬೇಲೂರು ದೇವಾಲಯದ ಮೂಲ ವಿಗ್ರಹದ ಶಿಲೆಯಲ್ಲಿನ ದೋಷವನ್ನು ಗುರುತಿಸುತ್ತಾನೆ. ಈ ವಿಷಯದಲ್ಲಿ ವಾಗ್ವಾದ ನಡೆದು ತಾನು ಕೆತ್ತಿರುವ ವಿಗ್ರಹದಲ್ಲಿ ದೋಷ ವಿದ್ದರೆ ದಂಡವಾಗಿ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವ ಪಣವಿಡುತ್ತಾನೆ. ನಂತರದ ಪರೀಕ್ಷೆಯಲ್ಲಿ ವಿಗ್ರಹದ ಗರ್ಭದಲ್ಲಿ ಕಪ್ಪೆ,ನೀರು ಮತ್ತು ಮರಳು ಇರುವುದು ಕಂಡು ಬರುತ್ತದೆ. ಆಡಿದ ಮಾತಿನಂತೆ ಜಕ್ಕಣನು ತನ್ನ ಬಲಗೈಯನ್ನು ತುಂಡಿರಿಸಿಕೊಂಡು ತನ್ನ ಹುಟ್ಟೂರಾದ ಕ್ರೀಡಾಪುರಕ್ಕೆ ಹಿಂದಿರುತ್ತಾನೆ.ಎಡಗೈಯಿಂದಲೇ ಹೆಚ್ಚಿನ ಶ್ರದ್ಧಾಭಕ್ತಿಯಿಂದ ಕಠಿಣ ಪರಿಶ್ರಮದಿಂದ ಈ ವಿಗ್ರಹವನ್ನು ಕೆತ್ತಿದನೆಂದು -ಪರಮಾತ್ಮನ ಪವಾಡವೆಂಬಂತೆ ಬಲಗೈ ಬಂದಿತೆಂದು " ಕೈ ಬಂದ ಊರು ಕೈ ದಳವು ನಂತರ ಕೈದಾಳವಾಯ್ತೆಂದು ದಂತ ಕಥೆ ಇದೆ. ಆದರೆ ಇದನ್ನು ಪುಷ್ಠೀಕರಿಸುವ ಶಾಸನಾಧಾರಗಳು ಲಭ್ಯವಿಲ್ಲ. ದೇವಾಲಯದ ಪ್ರವೇಶದ್ವಾರದ ಕಂಬದಲ್ಲಿರುವ ಉತ್ತರೀಯವನ್ನು ಹೊದ್ದಿರುವ ವ್ಯಕ್ತಿಯನ್ನು ಜಕ್ಕಣ ನೆಂದು ಗುರುತಿಸಲಾಗಿದೆ. ದೇವಾಲಯದ ಮೂಲ ವಿಗ್ರಹವು ಐದುವರೆ ಅಡಿ ಎತ್ತರ ಇದ್ದು ಎರಡೂವರೆ ಅಡಿ ಪಾಣಿ ಪೀಠದ ಮೇಲೆ ಪ್ರತಿಷ್ಠಾಪಿತವಾಗಿದೆ. ವಿಗ್ರಹದ ಮುಖಭಾವ ಆಭರಣಗಳ ಕೆತ್ತನೆಯಲ್ಲಿನ ಕೌಶಲ್ಯವು ಅತ್ಯದ್ಭುತವಾಗಿದೆ. ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆ ಇದೆ. ಕೈ ಬೆರಳುಗಳು ಮತ್ತು ಉಂಗುರದ ಮಧ್ಯದಲ್ಲಿ ಕಡ್ದಿಯನ್ನು ತೂರಿಸುವಷ್ಟು ಸ್ಥಳವಿರುವುದು, ಉಂಗುರವು ಹಿಂದೆ-ಮುಂದೆ ಚಲಿಸುವುದು ಆಶ್ಚರ್ಯವನ್ನುಂಟುಮಾಡುತ್ತದೆ. ದೇವಾಲಯದ ರಕ್ಷಣಾ ಗೋಡೆಯ ಕಿಂಡಿಗಳ ಮೂಲಕ ಹಾದು ಹೋಗುವ ಸೂರ್ಯನ ಕಿರಣಗಳು ಗರುಡನ ಕಿವಿಯ ಮೂಲಕ ಹಾಯ್ದು ದೇವಾಲಯದ ಕಿಂಡಿಗಳ ಮೂಲಕ ಕೇಶವನ ಪಾದದ ಮೇಲೆ ಬೀಳುವ ಅದ್ಭುತವನ್ನು ಕಾಣ ಬಹುದಾಗಿದೆ. ಯೂರೋಪಿನ ಥಾಮಸ ಯಂಗ್ ಕ್ರಿ.ಶ. ೧೮೦೨ ರಲ್ಲಿ ಪ್ರತಿಪಾದಿಸಿದ ಬೆಳಕಿನ ವಕ್ರೀಕರಣದ ಸಿದ್ಧಾಂತವನ್ನು ಕ್ರಿ.ಶ.೧೧೫೦ ರಲ್ಲಿಯೇ ಭಾರತೀಯರು ದೇವಾಲಯಗಳ ನಿರ್ಮಾಣದಲ್ಲಿ ಸಾಧಿಸಿ ಅಳವಡಿಸಿದ್ದರೆಂಬುದು ಭಾರತೀಯರ ಮಹತ್ತರ ಸಾಧನೆಯನ್ನು ಪ್ರತಿಬಿಂಬಿಸುತ್ತದೆ.

ಈಗ ನೀವೇ ಹೇಳಿ ಈ ಸಾಧನೆಗೆ ಪ್ರಥಮ ಭಾಜನರು ಜಕ್ಕಣನೇ? ಅಥವಾ ಥಾಮಸ್ ಯಂಗ್ ಎಂಬ ಪಾಶ್ಚಿಮಾತ್ಯನೇ?

ಈ ದೇವಾಲಯದ ಪಕ್ಕದಲ್ಲಿರುವ ಹೊಯ್ಸಳ ವಾಸ್ತು ಶಿಲ್ಪ ಶ್ರೀ ಗಂಗಾಧರೇಶ್ವರ ದೇವಾಲಯದ ಮೂಲ ವಿಗ್ರಹ ಮತ್ತು ಕಂಬಗಳ ಹೊಳಪು, ನುಣುಪು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ.

ಸಮೀಪದಲ್ಲೇ ಇರುವ ಗೂಳೂರಿನ ಗಣಪ  ತನ್ನ  ಗಾತ್ರದಿಂದ ಮತ್ತು ಶೀಘ್ರ ವರಪ್ರದ ಶಕ್ತಿಯಿಂದ ಪ್ರಸಿದ್ಧವಾಗಿದೆ. ಕೈದಾಳವು ತುಮಕೂರಿನಿಂದ ಕುಣಿಗಲ್ ಮುಕ್ಯ ರಸ್ತೆಯಲ್ಲಿ ಬರುವ ಗೂಳೂರಿನಿಂದ ಒಂದು ಕಿಲೋ ಮೀಟರ್ ದೂರದಲ್ಲಿದೆ.

ಮಾಹಿತಿ:ಟಿ.ವಿ.ನಟರಾಜ ಪಂಡಿತ್

ಮೊ:೯೯೬೪೫೩೬೧೫೦

Rating
No votes yet

Comments