'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .

'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .

ಪುಣ್ಯಕೋಟಿ ಗೋವಿನ ಕಥೆ ನಮಗೆಲ್ಲ ಮಕ್ಕಳ ಕಥೆಯಾಗಿ ಗೊತ್ತು. ನಮ್ಮೆಲ್ಲರ ಮೆಚ್ಚಿನದೂ ಆಗಿದೆ. ಆದರೆ ಅದಕೆ ಹೆಚ್ಚಿನ ಅರ್ಥಗಳು ಇವೆಯೇ ?

ಶ್ರೀ ಪಿ. ಲಂಕೇಶರು ತಮ್ಮ ಗದ್ಯ ಬರವಣಿಗೆಯ ಮೂಲಕ ಕನ್ನದ ಗದ್ಯವನ್ನೂ ಇಷ್ಟು ಚೆನ್ನಗಿ ಬರೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರು ಪುಣ್ಯಕೋಟಿ ಕಥೆಯ ಬಗ್ಗೆ ಏನು ಹೇಳಿದ್ದಾರೆ ? ಇದು ಕನ್ನಡಿಗರೆಲ್ಲರೂ ಓದಲೇಬೇಕಾದ ವಿಷಯವಾಗಿದೆ.

ಹಿಂದೊಮ್ಮೆ ಪುಣ್ಯಕೋಟಿಯ ಕಥೆ ಬಗ್ಗೆ ಶ್ರೀ ಕೆ.ವಿ.ಸುಬ್ಬಣ್ಣ ಅವರು ಬರೆದ ಒಂದು ಲೇಖನದ ಸಂಗ್ರಹವನ್ನು ಇತರ ಸಹೃದಯೀ ಓದುಗರಿಗಾಗಿ ಹಾಕಿದ್ದೆ. ಶ್ರೀ ಪಿ ಲಂಕೇಶ್ ಅವರೂ ಈ ಬಗ್ಗೆ ಬರೆದಿದ್ದಾರೆ.

ಪುಣ್ಯಕೋಟಿ ಎಂಬ ಹೆಣ್ಣೂ ಮಗಳು ಅರ್ಬುದ ಎಂಬ ದುಷ್ಟನ ಎದುರು ನಿಂತು 'ಈ ದೇಹವನ್ನು ನೀನು ಭಕ್ಷಿಸು ' ಎಂದದ್ದು ಒಂದು ನಾಟಕೀಯ ಚಿತ್ರ . ಅದು ವಿಚಿತ್ರ ಅರ್ಥಗಳಿಂದ ಕೂಡಿದ ದೃಶ್ಯ .
ಸಾವಿಗೆ ಅರ್ಥ ತರುವದು ಎಲ್ಲ ಸಜ್ಜನರು ಮಾಡಿದ ಕೆಲಸ . ಕ್ರಿಸ್ತನ ರಕ್ತದಿಂದ ಅವನ ದೇಶದ ರಕ್ತದಾಹ ಕೊಂಚ ಕಡಿಮೆಯಾಯಿತು . ಗಾಂಧಿಯ ರಕ್ತದಿಂದ ಮನುಷ್ಯನಾಳದ ಕ್ರೌರ್ಯ ಸ್ವಲ್ಪ ಕಾಲವಾದರೂ ತಣ್ಣಗಾಯಿತು.
ಆದರೆ ಈ ಸಜ್ಜನಿಕೆ , ನನ್ನ ದೇಹವನ್ನು , ಪ್ರಾಣವನ್ನು ಬೇಕಾದರೆ ಪಡೆದುಕೋ ಎಂದು ಹೇಳುವ ವ್ಯಕ್ತಿಯ ಶಕ್ತಿಯ ಮೂಲ ಯಾವುದು ? ಈ ಪ್ರಾಣದ ಅರ್ಪಣೆಯಿಂದ ಕ್ರೂರಿಯಾದ ಎದುರಾಳಿಯಲ್ಲಿ ಉತ್ತಮಿಕೆ ಮೂಡಲು ಕಾರಣ ಏನು ?
ನಾನು ಚರ್ಚಿಸಲಿರುವ ನಮ್ಮ ಜನಜೀವನದ ಅಂಗವಾಗಿ ಹೋಗಿರುವ ಒಂದು ಪದ್ಯ ಮಕ್ಕಳು ಓದಲೇಬೇಕಾದ ಪದ್ಯವೆಂದು , ಹಿರಿಯರು ಧ್ಯಾನಿಸಲೇಬೇಕಾದ ಪದ್ಯವೆಂದು ನಾನು ತಿಳಿದಿದ್ದೇನೆ. ಆದ್ದರಿಂದಲೇ ಸಾತ್ವಿಕ ವ್ಯಕ್ತಿಗಳ ತ್ಯಾಗಕ್ಕೆ ಇರಬಹುದಾದ ಸ್ಫೂರ್ತಿಗಳತ್ತ ನಿಮ್ಮ ಗಮನ ಸೆಳೆಯುತ್ತೇನೆ.
ಅರುಣಾದ್ರಿಯಲ್ಲೊಂದು ದಟ್ಟ ಕಾಡು , ಅಲ್ಲಿ ತೇಗ, ಹೂನ್ನೆ, ಬನ್ನಿ, ಪಾದ್ರಿ ಮರಗಳೆಲ್ಲ ಇವೆ . ನಾಗಸಂಪಿಗೆ , ಮಾವು , ನೇರಲಗಳಿವೆ . ಮೊಲ್ಲೆ ಮಲ್ಲಿಗೆ , ಮುಗುಳು ಸಂಪಿಗೆ , ಚೆಲ್ವ ಜಾಜಿ ಕೂಡ ಇವೆ. ಇನ್ನು ಪ್ರಾಣಿಗಳು ? ವರಾಹ , ಶಾರ್ದೂಲ , ಸಿಂಹ , ಕರಡಿ, ಕಾಡೆಮ್ಮೆ ಎಲ್ಲ ಇವೆ . ಜತೆಗೆ ಬೆಕ್ಕು , ಜಂಬೂಕ , ಹುಲಿ , ಗಿಳಿ , ಕಾಡು ಕೋಳಿ , ರಣ ಹದ್ದುಗಳೂ ಇವೆ . ಪಂಚವರ್ಣದ ಪಾರಿವಾಳ , ಸಂಚಿನೊಳು ಬರುವ ಕಿರುಬ , ಹೊಂಚಿ ಕಾಯುವ ಚಿರತೆ ಕೂಡ ಇವೆ.
ಇಲ್ಲಿರುವ ಗೊಲ್ಲ ಕಾಳಿಂಗ , ಅವನ ಆಕಳುಗಳಲ್ಲಿ ಒಂದು ಹಸು ಪುಣ್ಯಕೋಟಿ, ಆ ಕಾಡಿನಲ್ಲಿರುವ ಪ್ರ್‍ಆಣಿಗಳಲ್ಲಿ ಒಂದು ಮುಖ್ಯ ಪ್ರಾಣಿ ಅರ್ಬುದ ಎಂಬ ಹುಲಿ.
ಇದು 'ಗೋವಿನ ಹಾಡು' ಎಂಬುದು ನಿಮಗೆ ಈಗಾಗಲೇ ಗೊತ್ತಾಗಿರಬೇಕು. ನಾವು ಚಿಕ್ಕವರಿದ್ದಾಗ ನಮ್ಮ ಪಠ್ಯವಾಗಿದ್ದ ಇದನ್ನು ಮೊನ್ನೆ ಇದನ್ನು ಮತ್ತೆ ಓದಲು ಕೈಗೆತ್ತಿಕೊಂಡೆ . ಪದ್ಯ ಶುರುವಾದೊಡನೆ ನಮ್ಮನ್ನು ಖುಷಿಯಿಂದ ಬೆಚ್ಚಿಬೀಳಿಸುವದು ಅದರ ಅಚ್ಚಗನ್ನಡ ಪದಗಳು ಮತ್ತು ಸರಳ ಸುಂದರ ಪದ್ಯ ರಚನೆ .
ಇದೊಂದು ಅತ್ತ್ಯುತ್ತಮ ಕವನ. ಇದನ್ನು ಓದಿ ಮುಗಿಸುತ್ತಿದ್ದಂತೆ ಕಂಬನಿ ಸುರಿಯತೊಡಗುತ್ತದೆ. ಕನ್ನಡ ನುಡಿಗಟ್ಟಿನ ಚೆಂದದಿಂದ, ಕಿವಿಯಲ್ಲಿ ಇಂಗದ ಅನುರಣನದಿಂದ , ಇದೊಂದು ಸರಳ ಸುಂದರ ಕತೆಯಾದ್ದರಿಂದ . ಗೊಲ್ಲ ಕಾಳಿಂಗ ಮತ್ತು ಪುಣ್ಯಕೋಟಿಯ ಲೋಕ ಸ್ವಯಂಪೂರ್ಣವಾದದ್ದು. ಹಸಿರಿನ ತೊಟ್ಟಿಲಂತಿರುವ ಇಲ್ಲಿ ಮನುಷ್ಯ , ಹಸು , ಹುಲಿಯ ವೃತ್ತಾಂತವಿದೆ. ಕಾಳಿಂಗ ಮನುಷ್ಯನಂತೆ ವರ್ತಿಸುವಂತೆಯೇ ಪುಣ್ಯಕೋಟಿ ತನ್ನ ಸಾಧುಸ್ವಭಾವದಿಂದ , ಪರೋಪಕಾರೀ ಗುಣದಿಂಡ ಅಪ್ಪಟ ಹಸುವಿನಂತೆಯೇ ಇದೆ. ವ್ಯಾಘ್ರ ಅರ್ಬುದ ಕೂಡ ತನ್ನ ಭೀಕರತೆ , ಕ್ರೌರ್ಯದಿಂದ ಹುಲಿಯಂತೆಯೇ ಇದೆ. ಹಸು ಸಾಧುವಾಗಿರುವದು , ಹುಲಿ ಮಾಂಸ ತಿನ್ನುವದು , ಗೊಲ್ಲ ಹಾಲು ಪಡೆಯುವದು ಎಲ್ಲವೂ ಜೀವಿಯ ಧರ್ಮಕ್ಕೆ ತಕ್ಕುದಾಗಿಯೇ ಇದೆ. ಆದರೆ ಈ ಸರಳಕತೆ ಮಹೋನ್ನತ ಮೌಲ್ಯವೊಂದನ್ನು ಮಂಡಿಸುತ್ತದೆ . ಪುಣ್ಯಕೋಟಿ ಕೊಟ್ಟ ಮಾತಿಗೆ ತಪ್ಪಲಾರಳು; ತನ್ನ ನಂಬಿಕೆಯ ವಿರುದ್ಧ ನಡೆಯಲಾರಳು ; ಅದು ಆಕೆಗೆ ಜೀವದಷ್ಟೇ ಮುಖ್ಯ . ಈ ದೇಹ ಎಷ್ಟು ದಿನ ಇರುತ್ತದೆ ? ತನ್ನ ಈ ನಶ್ವರ ದೇಹವನ್ನು ಉಳಿಸಿಕೊಳ್ಳಲು ದೇಹವನ್ನು ಮೀರಿದ ಮೌಲ್ಯವನು ಬಲಿಕೊಡುವದೆ? ಎಲ್ಲ ಜೀವಿಗಳು ಇರುವದು ಅನ್ನ ಬಟ್ಟೆಯಿಂದ ಮಾತ್ರವಲ್ಲ , ತಮ್ಮ ಮೌಲ್ಯಗಳನ್ನು ಒಳಗೊಂಡ ಆತ್ಮಗೌರವದಿಂದ .
ಪ್ರಾಣಿಗಳ ಈ ಕತೆ ಎಲ್ಲ ಜೀವಿಗಳ ಬಗ್ಗೆ ಕೂಡ, ಮನುಷ್ಯರಿಗೂ ಅನ್ವಯವಾಗುವ ರೂಪಕ . ಈ ಬದುಕಿನಲ್ಲಿ ಸಾಧು ಪ್ರಾಣಿಗೆ ಹುಲಿಗೆ ಇರುವ ಹಲ್ಲು , ಉಗುರು , ಶಕ್ತಿ ಇಲ್ಲದಿರಬಹುದು . ಆದರೆ ಪ್ರ್‍ಆಣವನ್ನು ಲೆಕ್ಕಿಸದ ಧೈರ್ಯ , ಪ್ರೀತಿ, ಛಲ ಇವೆ. ಹಸುವಿನಂಥ ವ್ಯಕ್ತಿ ದುರ್ಬಲನಾಗಿ ಕಾಣಿಸಬಹುದು. ಆದರೆ ಕಲ್ಲನ್ನು ಕರಗಿಸಬಲ್ಲ ಮೌಲ್ಯ ಅವನಲ್ಲಿದೆ. ಹಾಗೆಯೇ ವ್ಯಾಘ್ರ ತನ್ನ ಸ್ವಧರ್ಮವಾದ ಹಿಂಸೆ , ಕ್ರೌರ್ಯ ಪಡೆದಿರಬಹುದು . ಅದರೆ ಆತ ಕೂಡ ಬದುಕಿರುವದು ತನ್ನ ಘನತೆಯಿಂದ , ಹಸಿವನ್ನು ಮೀರಿದ ಸ್ವವಿಮರ್ಶೆಯಿಂದ , ಪುಣ್ಯಕೋಟಿಯಲ್ಲಿ ತನ್ನ ಅಕ್ಕನನ್ನು ಕಾಣಬಲ್ಲ ಬೆಚ್ಚನೆಯ ಹೃದಯದಿಂದ.
ತನ್ನ ಹೆಸರು ಕೂಡ ಪದ್ಯದ ಕೊನೆಯಲ್ಲಿ ಗೀಚದೆ ಹೊರಟುಹೋದ ಅನಾಮಿಕ ಕವಿಯ ಕವನ ಇದು.
ಪುಣ್ಯಕೋಟಿಗೆ , ಪುಣ್ಯಕೋಟಿಯಂಥ ಮನುಷ್ಯರಿಗೆ ಆತ್ಮಗೌರವದ , ಪ್ರ್‍ಈತಿಯನ್ನೊಳಗೊಂಡ ಬದುಕು ಸಾಧ್ಯವಾಗುವದು ದೇವರಲ್ಲಿನ ನಂಬಿಕೆಯಿಂದಲೇ ? ಅಥವಾ ಇಲ್ಲಿಯ ಪರಮಾತ್ಮ ಕೇವಲ ನೈತಿಕತೆಯ ಮಾರ್ಗದರ್ಶಿಯೆ? ಈ ಗೋವು ಯಾರಿಗೂ ಕೆಟ್ಟದ್ದನ್ನು ಬಯಸಿದ ಪ್ರಾಣಿಯೆಲ್ಲ . ಮೃಗ ಜಗತ್ತಿನಲ್ಲಿಯೇ ಅತ್ಯಂತ ಸಾಧು ಪ್ರಾಣಿಯಾದ , ಸಹನೆ , ಪ್ರೀತಿ ತುಂಬಿದ , ಎಲ್ಲರಿಗೂ ಒಳ್ಳೆಯದನ್ನೇ ಬಯಸುವ , ನೀಡುವ ಪ್ರಾಣಿ ಹಸು. ಅದರ 'ದೇವರು ' ಪೂಜೆಯಲ್ಲ , ಮೂಢನಂಬಿಕೆಯಲ್ಲ. ಅಕಸ್ಮಾತ್ತಾಗಿಯೋ , ಉದ್ದೇಶಪೂರ್ವಕವಾಗಿಯೋ ಸೃಷ್ಟಿಯಾಗಿರುವ ಈ ಜಗತ್ತಿನಲ್ಲಿ ತನ್ನ ಪಾತ್ರವನ್ನು ನಿಸರ್ಗದ ನಿಯಮಕ್ಕೆ ತಕ್ಕಂತೆ ನಿರ್ವಹಿಸುವ , ಈ ನಿಸರ್ಗದ ನಿಯಮಕ್ಕೆ ತಲೆಬಾಗುವ ಗೋವಿನ ದೇವರು ಅದರ ಒಳ್ಳೆಯತನ. ಮಕ್ಕಳು ಇದನ್ನು ಕಲಿಯಬಹುದಾದರೆ ದೊಡ್ಡವರು ಈ ದೇವರ ಇನ್ನೊಂದು ಅರ್ಥವಾದ ನೈತಿಕತೆ , ಪರಿಶುದ್ಧ ಜೀವನ , ಆತ್ಮಗೌರವದ ಬದುಕಿನ ಅಗತ್ಯವನ್ನು ಮನಗಾಣಬಹುದು.
ಈ ಕವನವನ್ನು ನಾನು ಹುಡುಕಿ ಮತ್ತೆ ಓದಲು ಮುಖ್ಯ ಕಾರಣ ಇದು ಹಲವು ಅನಿಸಿಕೆಗಳನ್ನು ಕೆರಳಿಸಬಲ್ಲ ಕವನವೆನ್ನುವದು . 'ಗೋವಿನ ಹಾಡು' ಮಕ್ಕಳು ಓದಲೇಬೇಕಾದ ಪದ್ಯ .

--ಇದು ಪಿ ಲಂಕೇಶರ 'ಟೀಕೆ ಟಿಪ್ಪಣಿ'ಯಲ್ಲಿ ಇರುವ ಒಂದು ಲೇಖನದ ಸಾರ . ಅವರ ಗದ್ಯದ ಶೈಲಿ ಬಹಳ ಸುಂದರ . ಅವರ ಇತರ ಬರಹಗಳನು ಓದಿ ನೀವೂ ಆನಂದಿಸಿರಿ.

Rating
Average: 5 (1 vote)

Comments