ಕೊರತೆ ಮರೆಯಿಸುವ ಗುಣಗಳು

ಕೊರತೆ ಮರೆಯಿಸುವ ಗುಣಗಳು

ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;

ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರಲೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!


ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):

ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||

-ಹಂಸಾನಂದಿ
 

ಕೊ: ಇದು ಕುಮಾರಸಂಭವದ ಮೊದಲ ಸರ್ಗದಲ್ಲಿ, ಕಾಳಿದಾಸ ಮಾಡುವ ಹಿಮಾಲಯದ ಪ್ರಶಂಸೆಯಲ್ಲಿ ಬರುವ ಒಂದು ಪದ್ಯ. ಹಿಮಾಲಯದಲ್ಲಿ ತಡೆಯಲಾರದಷ್ಟು ಚಳಿ, ಸುತ್ತ ಹಿಮರಾಶಿ ಇರುವುದು ನಿಜ. ಆದರೆ, ಆ ಪರ್ವತಶ್ರೇಣಿಯು ಸಕಲ ರತ್ನಗಳೂ ಸಿಗುವ ಜಾಗವಾಗಿದ್ದರಿಂದ, ಈ ಹಿಮರಾಶಿಯೊಂದು ಕೊರೆ, ತೊಂದರೆ ಎಂದು ಕಾಣುವುದೇ ಇಲ್ಲ ಅನ್ನುವುದು ಕವಿಯ ಅಂಬೋಣ.

ಕೊ.ಕೊ: ಚಂದಿರನ ಮೇಲೆ ಕಾಣುವ, ನಾವು ಈಗ ಮೊಲ, ಅಥವಾ ಜಿಂಕೆಯ ರೀತಿಯ ಚಿತ್ತಾರವನ್ನು ಕಲ್ಪಿಸಿಕೊಳ್ಳುವ, ಕರಿ ನೆರಳುಗಳನ್ನೇ ಇಲ್ಲಿ, ಚಂದಿರನ ಮೇಲಿನ ಮಚ್ಚೆ ಎಂದು ಕವಿ ಕರೆದಿದ್ದಾನೆ.


ಕೊ.ಕೊ.ಕೊ: ಈ ಕಾಳಿದಾಸನ ಪದ್ಯವನ್ನೋದಿದ ಇನ್ನಾರೋ ಕವಿ ಅವನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾನೆ ಕೆಳಗಿನ ಪದ್ಯದಲ್ಲಿ:

एको हि दोषो गुणसन्निपाते निमज्जतींदोः इति यो बभाषे
नूनम् न द्रुष्टं कविनापि तेन दारिद्रय दोषो गुणराशिनाशी

ಇದನ್ನು ನಾನು ಹಿಂದೆ ಈ ರೀತಿ ಅನುವಾದ ಮಾಡಿದ್ದೆ - ಮೂಲಕ್ಕಿಂತ ಸ್ವಲ್ಪ ಪದ ಜೋಡಣೆ ಬದಲಾಗಿದ್ದರೂ ಭಾವವುಳಿದಿದೆಯೆಂದು ಭಾವಿಸುತ್ತ ಹಾಗೇ ಹಾಕಿದ್ದೇನೆ:

ಗುಣಗಳ ಗುಂಪಲಿ ಒಂದೇ ಕೊರತೆ
ಚಂದ್ರನ ಬೆಳಕಲಿ ಕಲೆಯಂತೆ
ಮುಚ್ಚೀತೆಂದ ಕವಿ ತಾ ಕಾಣನು
ಲೋಕದ ನಿಜರೂಪದ ಮೋರೆ;
ಸಾವಿರ ಗುಣಗಳ ಮುಚ್ಚಿ ಹಾಕದೆ
ಒಂದೇ ಬಡತನವೆಂಬ ಕೊರೆ ?

Rating
No votes yet

Comments