ಕೊಲೆಗಾರರು ಯಾರು ? ಒಂದು ಹಾಸ್ಯ ಲೇಖನ

ಕೊಲೆಗಾರರು ಯಾರು ? ಒಂದು ಹಾಸ್ಯ ಲೇಖನ

ಸಂಪದದಲ್ಲಿ ’ ಕೊಲೆಗಾರರು ಯಾರು ? ’ ಬರಹ ಓದುತ್ತಿದ್ದಂತೆ ನಾನು ಹಿಂದೊಮ್ಮೆ ಸುಧಾದಲ್ಲಿ ಓದಿದ ಹಾಸ್ಯ ಬರಹ ನೆನಪಾಯಿತು . ಅದು ಯಾರು ಬರೆದಿದ್ದದ್ದು ನೆನಪಿಲ್ಲ ; ವಿಷಯ ಮುಖ್ಯ ತಾನೆ ? ಓದಿ ಸಂತಸ ಪಡಿ .

ಒಬ್ಬ ಪತ್ತೇದಾರಿ ಸಾಹಿತ್ಯದ ಓದಿನ ಗೀಳಿನ ಮನುಷ್ಯ ಇರ್ತಾನೆ . ಅವನಿಗೆ ಒಂದ್ಸಲ ಓದಕ್ಕೆ ಏನೂ ಇಲ್ದೆ ತನ್ನ ಗೆಳೆಯನ ಹತ್ರ ಹೋಗಿ ಓದಕ್ಕೆ ಏನಾದ್ರೂ ಕೊಡೋ ಅಂತ ಕೇಳಿದಾಗ ಅವನು ಕೈಗೆ ಸಿಕ್ಕ ಪುಸ್ತಕಾನ ಕೊಟ್ಟು ಕಳಿಸ್ತಾನೆ . ಅದು ಷೇಕ್ಸಪಿಯರನ ಮ್ಯಾಕ್‍ಬೆತ್ ನಾಟಕದ ಅನುವಾದ . ಡಿ. ವಿ. ಜಿ ಅವರದ್ದು , ಹಳೆಗನ್ನಡ ಶೈಲಿಯಲ್ಲಿದೆ .
ಮರುದಿನ ಅವನು ಬಂದು ಪುಸ್ತಕ ವಾಪಸ್ ಕೊಡ್ತಾ ಹೇಳ್ತಾನೆ ... ನಂಗೆ ಮ್ಯಾಕ್‍ಬೆತ್ ಮಾಡಿದ್ದು ಅನ್ನಿಸ್ಲಿಲ್ಲ .
’ಏನೋ?’
’ಅದೇ ಮರ್ಡರು ’
’ಯಾಕೋ’
ಈಗ ಅವರ ನಡುವೆ ಚರ್ಚೆ . ನಾನಾ ಥಿಯರಿಗಳು . ಆ ನಾಟಕದಲ್ಲಿ ಆಗಿರೋ ಕೊಲೇನ ಯಾರು ಮಾಡಿದ್ದು ? ಅಂತ !
--ಕ್ಲಿಯರ್ ಆಗೇ ಇದೆಯಲ್ಲೋ ? ಮ್ಯಾಕ್‍ಬೆತ್ ಮಾಡಿದ್ದು ಅಂತ ?
-- ಅದ್ಯಾವ ಸೀಮೆ ಪತ್ತೇದಾರಿನೋ ? ಮೊದಲ ನೋಟಕ್ಕೆ ಕೊಲೆಗಾರ ಅನ್ನಿಸಿದೋನು ಕೊಲೆ ಮಾಡಿರೋದಿಲ್ಲ , ಇಷ್ಟೂ ಗೊತ್ತಿಲ್ವೇ ನಿಂಗೆ ?
--ನಾಯಕಿ ಇರ್ತಾಳಲ್ಲ ? ಅವಳೇ ಇರಬೇಕು . ಮೇಣದ ಬತ್ತಿ ಹಿಡಿದು ಸಂಶಯಾಸ್ಪದ ಆಗಿ ರಾತ್ರಿ ಹೊತ್ತು ಓಡಾಡ್ತ ಇರ್ತಾಳಲ್ಲ ?
ಒಂದು ವೇಳೆ ಅವಳಲ್ಲದಿದ್ರೆ ಯಾರನ್ನೋ ಬಚಾವು ಮಾಡೋಕೆ ಆ ತರ ಮಾಡ್ತಿರಬೇಕು . ನಮ್ಮ ಪತ್ತೇದಾರ ಅರಿಂಜಯ , ಮಧುಸೂಧನ ಪತ್ತೆ ಮಾಡಿರೋರು.
-- ನಂಗೆ ಅನ್ನಿಸುತ್ತೆ .. ನಾಟಕದ ಮೊದಲಿಗೆ ಯಾರೋ ಮೂರು ಜನ ಬಂದು ಹೋಗ್ತಾರಲ್ಲ , ಕಣಿ ಹೇಳೋರು ... ಅವರೇ ಇರಬೇಕು .. ಆಮೇಲೆ ಅವರು ಎಲ್ಲೂ ಕಾಣಿಸೋದೇ ಇಲ್ಲ ?
-- ಹೋಗಯ್ಯಾ , ಯಾವತ್ತಾದರೂ ಕೊಲೆಗಾರ ಗೆಸ್ಟ್ ಆರ್ಟಿಸ್ಟ್ ಆಗಿರ್ತಾನಾ ಒಂದೇ ಸಲ ಬಂದು ಹೋಗೋಕೆ ?
-- ಹಾಗಾದ್ರೆ ಮೊದಲು ಹೆಣ ನೋಡ್ದೋನು ಇರಬೇಕು , ಅಥವಾ ಶಾಮೀಲಾದ್ರೂ ಆಗಿರಬೇಕು ?
-- ಅದ್ಯಾಕೆ ಹಾಗಂತೀಯ ?
-- ಮೊದಲು ಹೆಣ ನೋಡಿದೋನು ಏನಯ್ಯ ಮಾಡ್ತಾನೆ ? ’ಯಪ್ಪೋ , ಇಲ್ಲೊಂದು ಖೂನಿ ! ’ ಅಂತ ಕಿರಿಚೋದು ಬಿಟ್ಟು ’ ಹಾ ಬಿದಿಯೆ .... ’ ಎಂದೇನೋ ಹಳಗನ್ನಡ ಪದ್ಯ ಹೇಳ್ತಾನಲ್ಲಯ್ಯಾ ? ಅಂದ್ರೆ ಮೊದ್ಲೇ ರೆಡಿ ಮಾಡ್ಕೊಂಡು ಬಂದಿದಾನೆ! ಪೋಲೀಸರು ಹಿಡಿದು ಒದ್ರೆ ನಿಜ ಹೇಳಿಯಾನು ! !.

ನೀವೂ ಮ್ಯಾಕ್ ಬೆತ್ ಓದಿ ನೋಡಿ , ನಿಮಗೂ ಏನಾದರೂ ತೋಚಬಹುದು ಯಾರು ಕೊಲೆಗಾರರು ಅಂತ ! ಎಂದು ಬರಹಗಾರರು ಸೂಚನೆ ಕೊಡ್ತಾರೆ !!

Rating
No votes yet

Comments