ಕೊಳಕು ರಾಜಕಾರಣ ಮತ್ತು ಚಂದಮಾಮ ಮಕ್ಕಳ ಕಥೆಯ ಧರ್ಮಸೂಕ್ಷ್ಮ, ನ್ಯಾಯ, ಸಂವಿಧಾನ ಮುಂತಾದವು

ಕೊಳಕು ರಾಜಕಾರಣ ಮತ್ತು ಚಂದಮಾಮ ಮಕ್ಕಳ ಕಥೆಯ ಧರ್ಮಸೂಕ್ಷ್ಮ, ನ್ಯಾಯ, ಸಂವಿಧಾನ ಮುಂತಾದವು

'ಅವರ' ಮತಗಳಿಂದ ಗೆಲ್ಲುವುದು ನನಗೆ ಬೇಕಿಲ್ಲ ; 'ನೀವು' ಗಳೆಲ್ಲ ಒಟ್ಟಾಗಿ ನನಗೇ ಮತ ಹಾಕಿ ; ನನಗೆ ಮತ ಹಾಕದವರ ಹಿತವನ್ನು ನಾನು ಕಾಯುವುದಿಲ್ಲ ಮುಂತಾದ ಮಾತುಗಳನ್ನು ಈಗ ನಡೆದಿರುವ ಚುನಾವಣೆಯ ಪ್ರಚಾರದಲ್ಲಿ ಕೇಳುತ್ತಿದ್ದೇವೆ. ಚುನಾವಣೆಯಲ್ಲಿ ಗೆಲ್ಲಲು ಏನು ಬೇಕಾದರೂ ಮಾಡುತ್ತಿರುವ ಸ್ಪರ್ಧಿಗಳನ್ನು, ಪಕ್ಷಗಳನ್ನು ನೋಡುತ್ತಿದ್ದೇವೆ. ಈ ಸಮಯದಲ್ಲಿ ನಾನು ಇತ್ತೀಚಿಗೆ ಓದಿದ 'ಚಂದಮಾಮ' ಪತ್ರಿಕೆಯ ಕೆಲವು ಕಥೆಗಳು ಧರ್ಮಸೂಕ್ಷ್ಮ, ನ್ಯಾಯ, ಸಂವಿಧಾನ ಮುಂತಾದ ಮೌಲ್ಯಗಳನ್ನು ಎತ್ತಿ ಹಿಡಿಯುವಂತದ್ದು ಇದ್ದು ಒಂದನ್ನು ಈಗ ನಿಮ್ಮೊಡನೆ ಹಂಚಿಕೊಳ್ಳಬಯಸುವೆ. ( ಈ ಚಂದಮಾಮ ಪತ್ರಿಕೆಯು ಈಗ ನಿಂತುಬಿಟ್ಟಿದೆ. ಇದು ಮಕ್ಕಳ ಪತ್ರಿಕೆ ಆಗಿದ್ದರೂ ಕೂಡ ಅಬಾಲವೃದ್ಧರಾದಿಯಾಗಿ ಅಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗಿತ್ತು. ಇದರ ಕೆಲವು ಸಂಚಿಕೆಗಳು ಅಂತರ್ಜಾಲದ www.chandamama.in ತಾಣದಲ್ಲಿ ಸಿಗುತ್ತವೆ)

ಒಂದು ವಿಕ್ರಮ ಮತ್ತು ಬೇತಾಳ ಕಥೆ - ಒಬ್ಬ ರಾಜ, ಅವನ ರಾಜ್ಯದ ಗಡಿಭಾಗದ ಜನರು ರಾಜನ ಬಳಿ ಬಂದು ಅಲ್ಲಿನ ಅರಣ್ಯದಲ್ಲಿ ಒಬ್ಬ ರಾಕ್ಷಸ ಇದ್ದಾನೆ ಎಂದು ತಿಳಿಸಿ ಅವನನ್ನು ಕೊಲ್ಲಲು ಬಿನ್ನವಿಸುತ್ತಾರೆ. ರಾಜನು ಹೆಚ್ಚು ವಿಚಾರಿಸಿದಾಗ ಜನಗಳು ಅವನ ಗಾತ್ರಕ್ಕೂ ಅವನ ಅಪಾರ ದೈಹಿಕ ಶಕ್ತಿಗೂ ಹೆದರಿದ್ದಾರೆ, ಆದರೆ ಆತ ಯಾರಿಗೂ ತೊಂದರೆ ಕೊಟ್ಟದ್ದಿಲ್ಲ ; ಅವನ ಶಕ್ತಿಯ ಪ್ರಯೋಗ ಏನಿದ್ದರೂ ಆತನ ಆತ್ಮ ರಕ್ಷಣೆಗೆ ಮಾತ್ರ ಎಂದು ತಿಳಿದು ಬರುತ್ತದೆ. ರಾಜನು ಜನರ ಭಯ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮತ್ತು ಅಗತ್ಯವಿದ್ದಲ್ಲಿ ಭಯಭೀತ ಜನರ ತಾತ್ಕಾಲಿಕ ಪುನರ್ವಸತಿಗಾಗಿ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾನೆ.
ಜನರು ಗೊಣಗುತ್ತ ಹೋಗುತ್ತಾರೆ.
ಈ ರಾಕ್ಷಸನನ್ನು ಮಟ್ಟ ಹಾಕಲು ಏಕೆ ಉದಾಸೀನ ಮಾಡಿದ ? ಆ ರಾಕ್ಷಸನನ್ನು ಏಕೆ ಕೊಲ್ಲಲಿಲ್ಲ ? ಅವನ ಶಕ್ತಿಗೆ ಹೆದರಿದನೇ? ಎಂದು ಬೇತಾಳವು ರಾಜ ವಿಕ್ರಮನನ್ನು ಕೇಳುತ್ತದೆ. ( ಈ ವಿಕ್ರಮ, ಬೇತಾಳ ಯಾರು, ಏನು ಅಂತ ನಿಮಗೆ ಗೊತ್ತಿದೆ ಅಂತ ನಾನು ತಿಳಿದುಕೊಂಡಿದ್ದೇನೆ)
ವಿಕ್ರಮನು ರಾಜನ ಕ್ರಮವನ್ನು ಬೆಂಬಲಿಸುತ್ತಾನೆ ಅವನು ಹೇಳುತ್ತಾನೆ - ಕ್ರೂರ ಪ್ರಾಣಿಯನ್ನು ಕೂಡ ಅದು ಜನಕ್ಕೆ ತೊಂದರೆ ಕೊಡದಿದ್ದರೆ ಅದನ್ನು ಕೊಲ್ಲುವಂತಿಲ್ಲ , ರಾಕ್ಷಸರು ಕೂಡ ಮಾನವರ ಒಂದು ಜಾತಿಯೇ, ರಾಜ್ಯಾಂಗ (ಸಂವಿಧಾನ) ದ ಒಳಗೆ ಎಲ್ಲ ಜಾತಿಯವರಿಗೂ ಬದುಕಿ ಕೊಂಡಿರುವ ಹಕ್ಕು ಕೊಡಲ್ಪಟ್ಟಿದೆ, ( ವಾವ್! ) ಒಂದು ಕುಲಕ್ಕೆ ಸೇರಿದವರನ್ನೋ ಒಂದು ಜಾತಿಗೆ ಸೇರಿದವರನ್ನೋ ಯಾವ ತಪ್ಪೂ ಇಲ್ಲದೆ ದಂಡಿಸುವುದು ರಾಜನೀತಿ ಆಗಲಾರದು. ಪುರಾಣಕಾಲದಲ್ಲಿ ಕೂಡ ಮಾನವ ಜಾತಿಗೆ ತೊಂದರೆ ಕೊಟ್ಟ ರಾಕ್ಷಸರನ್ನು ಮಾತ್ರ ವಿಷ್ಣು ಅವತಾರವನ್ನು ಎತ್ತಿ ಕೊಂದಿದ್ದಾನೆ ಎಂದು ಕೇಳಿದ್ದೇವೆ (ಹಿಯರ್, ಹಿಯರ್ , ಗಮನಿಸಿ - 'ಎಂದು ಕೇಳಿದ್ದೇವೆ' ) ತಪ್ಪು ಮಾಡಿದವರನ್ನು ದಂಡಿಸುವುದು ರಾಜನೀತಿಯೇ ಹೊರತು ತಪ್ಪು ಮಾಡದವರನ್ನು ದಂಡಿಸುವುದು ಅಲ್ಲ . ಅಕಾರಣವಾದ ದ್ವೇಷವು ರಾಜನೀತಿಗೆ ವಿರುದ್ಧವಾದದ್ದು.

ನೋಡಿ, ಮಕ್ಕಳ ಕಥೆಯ ಚಂದಮಾಮ ಕೂಡ ಈ ಕಾಲದ ಮೌಲ್ಯ ಗಳನ್ನು ಗುರುತಿಸಿ ಅವುಗಳನ್ನು ಮಕ್ಕಳ ಕಥೆಯ ಮೂಲಕ ಸಮಾಜದಲ್ಲಿ ಬಳಕೆಗೆ ತರಲು ಹೇಗೆ ಪ್ರಯತ್ನಿಸುತ್ತಿತ್ತು ಅಂತ! ಅಂತಹ ಒಂದು ಪತ್ರಿಕೆ ನಿಂತಿರುವುದು ತುಂಬ ದುಃಖದ ಸಂಗತಿ.

Rating
No votes yet