ಕೊಳಲನೂದುವ ಚದುರನಿಗೆ
ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ
ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿ
ತಂಪು ತುಂಬಿಹ ಹರುಷದುಲಿಯೂದೆ ಕೊಳಲು;
ಮಂಪರೇರಿಸಿ ಮತ್ತೆ ಸೆಳೆಯುತ್ತ ಬಗೆಬಗೆಯ-
-ಲಿಂಪುಗಳ ತೋರುತಲಿ ಮನವ ಪೆರ್ಚಿಸುತ!
-ಹಂಸಾನಂದಿ
(ಅನುವಾದಿಸುವಾದ ಸಲಹೆ ನೀಡಿದ ಗೆಳೆಯ ಎಂ.ಜಿ.ಹರೀಶ್ ಅವರಿಗೆ ವಂದನೆಗಳು)
ಕೊ: ನಾಳೆ ಬರುವ ಕೃಷ್ಣಾಷ್ಟಮಿಯ ಸಮಯಕ್ಕೆ ಅತಿ ಸುಂದರವಾದ ಎರಡು ಸಂಸ್ಕೃತ ಶ್ಲೋಕಗಳನ್ನು ಅನುವಾದಿಸಿ ಹಂಚಿಕೊಳ್ಳುವುದು ಬಹಳ ಸಂತಸ ತಂದ ಸಂಗತಿ. ಕೊಳಲನೂದುವ ಚದುರನಾರೇ ಪೇಳಮ್ಮ ಅನ್ನುವುದು ವ್ಯಾಸರಾಯರ ಒಂದು ಜನಪ್ರಿಯ ರಚನೆ, ಹಾಗಾಗಿ ತಲೆಬರಹವನ್ನು ಹೀಗಿಟ್ಟದ್ದು.
ಕೊ.ಕೊ: ಎಸೆ ಎನ್ನುವುದು ಶೋಭಿಸು ಎನ್ನುವ ಅರ್ಥದ ದೇಶ್ಯ ಪದ, ಹರಿದಾಸರು ತಮ್ಮ ರಚನೆಗಳಲ್ಲಿ ಬಳಸಿದ್ದಾರೆ; ಉದಾಹರಣೆಗೆ, "ಶಶಿ ಮುಖದ ನಸುನಗೆಯ ಬಾಲೆ, ಎಸೆವ ಕರ್ಣದ ಮುತ್ತಿನ ಓಲೆ!" ಎನ್ನುವ ಅನುಪಲ್ಲವಿ ಇರುವ ಕನಕದಾಸರ ರಚನೆ "ವರವ ಕೊಡು ಎನಗೆ ವಾಗ್ದೇವಿ".
ಕೊ.ಕೊ.ಕೊ: ಪೆರ್ಚಿಸು = ಉಕ್ಕುವಿಕೆ, ಹೊರಸೂಸುವಿಕೆ , ಹಿಗ್ಗುವಿಕೆ ಹೀಗೆಲ್ಲ ಅರ್ಥ ಬರುವ ಒಂದು ದೇಶ್ಯ ಪದ. "ಹಾ ಹಂತ ಹಾ ಹಂತ ಮನೋ ಧುನೋತಿ" ಎಂಬ ಸಾಲಿಗೆ ಕೃಷ್ಣನ ಸೊಬಗನ್ನು ಕಂಡು ಅಯ್ಯೋ ಅಯ್ಯೋ ಅದೇನು ಸೊಗಸು ಎಂದು ಉದ್ಗರಿಸುವ ಮನಸ್ಸಿಗೆ ಇದೇ ಸರಿಯಾದ ಭಾವವೆಂದು ಈ ಪದವನ್ನು ಬಳಸಿದೆ.
ಚಿತ್ರ: ಬೆಳವಾಡಿಯ ವೀರನಾರಾಯಣ ದೇವಾಲಯದಲ್ಲಿನ ವೇಣುಗೋಪಾಲ ಮೂರ್ತಿ. Picture Courtesy: - Dr Ronald Dengler who took the picture, and Kathie Brobeck, for sharing the picture