ಕೋಡುವಳ್ಳಿಯ ಕರೆ ( ‍ ಚಂದ್ರಾ ಚಂದ್ರಾ..)

ಕೋಡುವಳ್ಳಿಯ ಕರೆ ( ‍ ಚಂದ್ರಾ ಚಂದ್ರಾ..)

ಭಾಗ - 2

ಎಲ್ಲರು ಮಾತನಾಡುತ್ತ , ಮನೆಯಲ್ಲಿ ಗಲಾಟೆ ಎಬ್ಬಿಸುತ್ತಲೆ ಊಟದ ಕೊಟಡಿಯಲ್ಲಿ ಸೇರಿ ಇಡ್ಲಿ ತಿಂದು ಗಸಗಸೆ ಪಾಯಸಿ ಕುಡಿದರು. ಮನೆಯಲ್ಲಿ ಎಂದು ಪಾಯಸ ಕುಡಿಯದ ಕೀರ್ತನ ಇಲ್ಲಿ ಎರಡು ಲೋಟ ಕುಡಿದಿದ್ದಳು, ಅಚಲ ಇಲ್ಲಿಯ ತಿಂಡಿಯನ್ನು ತನ್ನ ಕೇರಳದ ಇಡ್ಲಿಯಂತದೆ ತಿಂಡಿ 'ಪುಟ್ಟು'ವಿಗೆ ಹೋಲಿಸುತ್ತ ಸಾಕಷ್ಟು ತಿಂದಳು. ಶಾಲಿನೆ ಒಬ್ಬಳೆ ಸ್ವಲ್ಪ ಗಂಭೀರವಾಗಿದ್ದವಳು. ಅವರು ತಿನ್ನುತ್ತಿರಬೇಕಾದಲ್ಲಿ, ಚಿತ್ರಾಳ ಚಿಕ್ಕಪ್ಪ  ಹಾಗು ಮಕ್ಕಳು ಅಬಿ, ಅಜಯ್ ಸಹ ಜೊತೆ ಸೇರಿದರು, ಅವರಿಬ್ಬರ ಮಾತುಗಳು ಎಲ್ಲರಿಗು ಇಷ್ಟವಾಯಿತು. 

 
ಚಿತ್ರಾಳ ಚಿಕ್ಕಪ್ಪ, 
"ಚಿತ್ರಾ, ತಿಂಡಿ ತಿಂದಾದ ಮೇಲೆ, ಸುಮ್ಮನೆ ಹಾಗೆ ನಮ್ಮ ಕೋಡುವಳ್ಳಿಯನ್ನೊಮ್ಮೆ ಸುತ್ತಿಬನ್ನಿ, ತುಂಬಾ ದೂರವೆಲ್ಲ ಹೋಗಬೇಡಿ, ಕಾಫಿ ತೋಟಕ್ಕೆ ನಿಧಾನ ಹೋದರಾಯಿತು, ಈವತ್ತು ಬೇಡ, ದೇವಾಸ್ಥಾನ ತೋರಿಸು, ಮನೆಗೆ ಬೇಗ ಊಟಕ್ಕೆ ಬಂದು ಬಿಡಿ, ಊಟವಾದ ನಂತರ ವಿಶ್ರಾಂತಿ ,  ಸಂಜೆ ನಮ್ಮ ವ್ಯಾನಿನಲ್ಲಿ ಎಲ್ಲರು ಚಿಕ್ಕಮಗಳೂರಿಗೆ ಹೋಗಿ ಬರೋಣ   ಎಲ್ಲರು ನಮ್ಮ ಊರು ನೋಡಲಿ. ನಾಳೆ ಬೆಳಗ್ಗೆ ಆರರ ಒಳಗೆ ಸಿದ್ದರಾಗಿ,  ಮುಳ್ಳಯ್ಯನ ಗಿರಿಗೆ ಹೋಗೋಣ,  ಬೇಗ ಹೋದರೆ, ಹಿಮದ ನಡುವೆ ಗಿರಿ ನೋಡಲು ಚಂದ, ಡ್ರೈವರ್ ಬಾಬುಗೆ ಹೇಳ್ತೀನಿ, ಅಲ್ಲಿಂದ ಬಾಬಬುಡನ್ ಗಿರಿ, ಎಲ್ಲ ನೋಡೋಣ, ಕಲ್ಲತ್ತ ಗಿರಿಯ ಫಾಲ್ಸ್ ಈಗ ತುಂಬಾ ಚೆನ್ನಾಗಿದೆ, ಬೇಕಿದ್ದಲ್ಲಿ ನೀವೆಲ್ಲ ಅಲ್ಲಿ ನೀರಲ್ಲಿ ಸ್ನಾನ ಮಾಡಬಹುದು, ಆದರೆ ಮೇಲೆ ಹತ್ತಿ ಹೋಗಬಹುದು, ನಾಡಿದ್ದು ಯಥಾಪ್ರಕಾರ ಬೆಳವಾಡಿ, ಹಳೆಬೀಡು ಬೇಲೂರು ನೋಡಿ ಬರುವ.  ಎಲ್ಲರಿಗು ಇಷ್ಟವಾದರೆ ಒಂದು ದಿನ ಶೃಂಗೇರಿ ಹೊರನಾಡು. ಮತ್ತೆ ನಮ್ಮ ಕಾಫಿ ಅಡಕೆ ತೋಟ ನೋಡುವದಕ್ಕೆ ನಿಮಗೆ ಎರಡು ದಿನ ಬೇಕು, ಈಗ ನನಗೆ ಸ್ವಲ್ಪ ಕೆಲಸವಿದೆ ಹೊರಗೆ ಹೋಗಿ ಬರುವೆ, ಸಂಜೆ ಬಾಬು ಜೊತೆ ಚಿಕ್ಕಮಗಳೂರಿಗೆ ಹೋಗಿ ಬನ್ನಿ " ಎನ್ನುತ್ತ ಅವರು ಹೊರಟರು. 
 
 ಚಿತ್ರಾ ಎಲ್ಲರ ಜೊತೆ ಹೊರಹೊರಟಳು, ಬೆಳಗಿನ ಬಿಸಿಲು ಹಿತಕರವೆನಿಸಿತ್ತು. ಹಸಿರು ನಡುವಿನ ಪುಟ್ಟ ಹಳ್ಳಿ. ಬೆಂಗಳೂರಿನ ವಾಹನಗಳ ಹೊಗೆ, ಟಾರು ರಸ್ತೆ, ಕಾಂಕ್ರಿಟ್ ಬಿಲ್ಡಿಂಗ್ ಗಳ   ನಡುವೆ ಇರುವ ಕೀರ್ತನ, ಹಾಗು ಶಾಲಿನಿಗಂತು ಯಾವುದೋ ಸ್ವರ್ಗಕ್ಕೆ ಬಂದ ಸಂಭ್ರಮ. ಚಿತ್ರಾ ಹಾಗು ಅಚಲ ಸಹ ನೆಮ್ಮದಿಯಾಗಿದ್ದರು. ಪುಟ್ಟಹಳ್ಳಿಯಾದರು ಸುತ್ತಡಲು ಸಾಕಷ್ಟು ಜಾಗವಿತ್ತು, 
 
ಮನೆಯಿಂದ ಹೊರಬರುವಾಗಲೆ ಚಿತ್ರಾ ಹೇಳಿದಳು
" ನೋಡು ಈ ದಾರಿಯಲ್ಲಿ ನಡೆದು ಹೋದರು, ನಮ್ಮ  ತೋಟಕ್ಕೆ ಹೋಗಬಹುದು, ಆದರೆ ತುಂಬಾ ಸಮಯವಾಗುತ್ತೆ, ಅದಕ್ಕೆ ನಾಳೆ ನಾಡಿದ್ದು ಹೋಗೋಣ. ಎಲ್ಲರು ಕೋಡುವಳ್ಳಿ ಸುಮ್ಮನೆ ಸುತ್ತಾಡೋಣ. ಕೋಡುವಳ್ಳಿ ಎಂದರೆ ಊಟಿ ಇದ್ದಹಾಗೆ ಇದೆ. ಸುತ್ತಲು  ಬೆಟ್ಟಗುಡ್ಡ ಎಲ್ಲ. ನಮ್ಮೂರಿನಲ್ಲಿ ದೇವಿರಮ್ಮ   ದೇವಾಲಯವಿದೆ, ಎಲ್ಲರು ಅದಕ್ಕೆ ಹೋಗೋಣ" 
 
ಬಿಸಿಲೇರುವವರಿಗು ಸುತ್ತಿದ್ದರು, ಹಳ್ಳಿಯ ಜನ ಕೆಲವರು ಮನೆಬಾಗಿಲಲ್ಲಿ ನಿಂತು ಸುತ್ತುತ್ತಿರುವ ಈ ಪಟ್ಟಣದ ಹೆಣ್ಣುಮಕ್ಕಳನ್ನು ಕುತೂಹಲದಿಂದ ನೋಡಿದರು,"ತಮ್ಮಯಪ್ಪನವರ ಮನೆ ಮಕ್ಕಳು" ಎಂದುಕೊಂಡರು. 
ದೇವಿರಮ್ಮನ ದರ್ಶನವು ಆಯಿತು. ಮದ್ಯಾನ್ಹ ಮನೆಗೆ ಬರುವಾಗ ಊಟಸಿದ್ದವಿತ್ತು. ಎಲ್ಲರು ಊಟ ಮುಗಿಸಿ ತಮ್ಮ ಮೇಲಿನ ಕೋಣೆ ಸೇರಿದರು. ಚಿತ್ರಾ, ಅಚಲ, ಕೀರ್ತನ ಮಾತನಾಡುತ್ತ ನಿದ್ದೆ ಹೋದರು, 
 
ಶಾಲಿನಿ ನಿದ್ದೆ ಬಂದವಳಂತೆ ಮಂಚದ ಮೇಲೆ ಕಣ್ಣು ಮುಚ್ಚಿ ಮಲಗಿದ್ದಳು, ಅದು ತನ್ನ ಸ್ನೇಹಿತೆಯರ ಜೊತೆ ಮಾತು ತಪ್ಪಿಸಲು, ಆದರೆ ಅವಳ ಮನದಲ್ಲಿ ಎಂತದೋ ಸಂಘರ್ಷ ನಡೆದಿತ್ತು. ಇದೇಕೆ ಹೀಗೆ ಆಗುತ್ತಿದೆ. ಈ ಮನೆಯಲ್ಲಿ , ಈ ಹಳ್ಳಿಯಲ್ಲಿ ಸುತ್ತಾಡುವಾಗ ತನ್ನ ಮನಕ್ಕೆ ಅದೇನೊ ಆಗುತ್ತಿದೆ. ಏನೆಂದು ಅವಳಿಗೆ ಅರ್ಥವಾಗುತ್ತಿಲ್ಲ. ಈ ಜಾಗವನ್ನೆಲ್ಲ ಮೊದಲೆ ಯಾವುದೊ ಸಿನಿಮಾದಲ್ಲಿಯೊ ಎಲ್ಲಿಯೋ ನೋಡಿರುವಂತೆ ಅನ್ನಿಸುತ್ತಿದೆ. ಆದರೆ ಅದು ಸಿನಿಮಾ ನೆನಪುಗಳಲ್ಲ, ಈ ಜಾಗಕ್ಕು ತನಗು ಅದೇನೊ ಸಂಬಂಧವಿದೆ ಎಂದು ಮನಸ್ಸು ನುಡಿಯುತ್ತಿದೆ. ಸುಮ್ಮನೆ ಕಣ್ಣು ಮುಚ್ಚಿದಳು ಅವಳು. ನಿದ್ದೆಯ ಜೊಂಪೊಂದು ಎಳೆದಂತಾಯ್ತು. 
 
"ಚಂದ್ರಾ......ಚಂದ್ರಾ....."  ಯಾರೋ ಕೂಗಿದಂತಾಯ್ತು.
 
 ತಟ್ಟನೆ ಅವಳಿಗೆ ಮತ್ತೆ ಎಚ್ಚರವಾಯಿತು, ಪಕ್ಕಕ್ಕೆ ತಿರುಗಿ ನೋಡಿದಳು. ಶಾಲಿನಿ, ಗೆಳತಿಯರೆಲ್ಲ ನಿದ್ರಿಸುತ್ತಿದ್ದರು. ಕೈ ಚಾಚಿ ಮೊಬೈಲ್ ಹಿಡಿದು ಸಮಯ ನೋಡಿದಳು, ಸಂಜೆ ನಾಲಕ್ಕು ಘಂಟೆ. ಮತ್ತೆ ನಿದ್ರೆ ಬರುತ್ತಿಲ್ಲ, ಎಲ್ಲರನ್ನು ಎಬ್ಬಿಸುವ ಎಂದು ಯೋಚಿಸಿದವಳು, ಅದಕ್ಕೆ ಮನಬಾರದೆ ಸುಮ್ಮನಾದಳು. ಹಾಗೆ ಎದ್ದು ಶಬ್ದವಾಗದಂತೆ ಬಾಗಿಲು ತೆರೆದು, ನಡೆಯುತ್ತ, ಮೆಟ್ಟಲಿಳಿದು ಕೆಳಗೆ ಬಂದಳು. 
 
ಕೆಳಗೆ ಚಿತ್ರಾಳ ಚಿಕ್ಕಮ್ಮ ಕಾಫಿ ತಯಾರಿ ನಡೆಸಿದ್ದರು.
ಶಾಲಿನಿಯನ್ನು ಕಂಡು,
"ಏಕಮ್ಮ ನಿನಗೆ ನಿದ್ರೆ ಬರಲಿಲ್ಲವ, ಶಾಲಿನಿ ಎಂದಲ್ಲವ ನಿನ್ನ ಹೆಸರು, ಬೆಂಗಳೂರಿನಲ್ಲಿ ಎಲ್ಲಿಯಾಯ್ತು ನಿನ್ನ ಮನೆ," ಎಂದೆಲ್ಲ ವಿಚಾರಿಸಿದರು. 
 
ಹಾಗೆ ಅವರ ಜೊತೆ ಮಾತನಾಡುತ್ತ, ಊಟದ ಕೋಣೆಯನ್ನೆಲ್ಲ ಸುತ್ತಲು ಕಣ್ಣಾಡಿಸುವಾಗ ಗೋಡೆಯ ಮೇಲೆ ಕೆಲವು ಭಾವಚಿತ್ರಗಳಿದ್ದವು, ಕುತೂಹಲದಿಂದ ಎದ್ದು ಹತ್ತಿರ ಹೋಗಿ ನೋಡಿದಳು. 
"ಇವೆಲ್ಲ ತುಂಬಾ ಹಳೆಯ ಪೋಟೊಗಳಮ್ಮ,  ನಮ್ಮವರ ಅಪ್ಪ ತಾತ ಅಜ್ಜಿ ಮುಂತಾದವು, ಕೆಲವರು ಚಿತ್ರ ಯಾರದು ಅಂತ ನನಗು ಗೊತ್ತಿಲ್ಲ ಆದರು ಅದನ್ನೆಲ್ಲ ಅಲ್ಲಿಂದ ತೆಗೆಯುವ ಹಾಗಿಲ್ಲ ನೋಡು, ನಿಮ್ಮ ಚಿತ್ರಾಳ ಚಿಕ್ಕಪ್ಪನಿಗೆ ಕೋಪವೆ ಬಂದುಬಿಡುತ್ತದೆ" ಎಂದು ನಗಾಡಿದರು.  
 
ಒಂದು ಪೋಟೋದ ಎದುರಿಗೆ ಶಾಲಿನಿ ನಿಂತು ಬಿಟ್ಟಳು. ಇದು ಯಾವುದೊ ಪರಿಚಿತ ಮುಖದಂತಿದೆ, ಹೌದು ನೋಡಲು ಚಿತ್ರಾಳ ಮುಖದ ಹಾಗಿದೆ
"ಆಂಟಿ, ಈ ಪೋಟೊ ಯಾರದು ಹೂವಿನ ಹಾರ ಹಾಕಿದೆಯಲ್ಲ" ಶಾಲಿನಿ ಕೇಳಿದಳು. 
 
ಆಕೆಯೊಮ್ಮೆ ಅದರತ್ತ ನೋಡಿ, ಸ್ವಲ್ಪ ತಗ್ಗಿದ ದ್ವನಿಯಲ್ಲಿ
"ಅದು ನಮ್ಮ ಚಿತ್ರಾಳ ತಾಯಿಯ ಪೋಟೋ ಶಾಲಿನಿ,  ನನಗೆ ವಾರಗಿತ್ತಿಯಾಗಬೇಕು ಸಂಭಂದದಲ್ಲಿ, ಆದರೆ ನಾನು ಈ ಮನೆಗೆ ಬರುವಾಗಲೆ ಅವರು ಬದುಕಿರಲಿಲ್ಲ, ಚಿಕ್ಕವಯಸ್ಸಿನಲ್ಲಿಯೆ ಹೋದರಂತೆ ಅವರು ಸಾಯುವಾಗ, ಚಿತ್ರಾಳಿಗೆ ಆಗ ಒಂದು ವರ್ಷ ಅಷ್ಟೆ ಇರಬಹುದೇನೊ" 
 
ಶಾಲಿನಿಗೆ, ಚಿತ್ರಾಳ ಬಗ್ಗೆ ಅಯ್ಯೋ ಅನ್ನಿಸಿತು, ಪಾಪ ಚಿಕ್ಕವಯಸಿನಲ್ಲಿ ತಾಯಿಯನ್ನು ಕಳೆದುಕೊಂಡವಳು, ಹಾಗೆ ಪೋಟೋ ನೋಡುತ್ತ
 
"ಆಂಟಿ, ಅವರ ಪಕ್ಕ ಇರುವ ಮತ್ತೊಂದು ಹುಡುಗಿ ಯಾರು ಜೊತೆಯಲ್ಲಿ ನಿಂತಿದ್ದಾರಲ್ಲ" ಎಂದಳು.
 
"ಹೌದಲ್ವ, ನನಗು ಸರಿಯಾಗಿ ತಿಳಿಯದು, ಇವರೊಮ್ಮೆ ಆ ಮಗು ಆಕೆಯ ತಂಗಿ ಅಂದಂತೆ ನೆನಪು, ಅಕ್ಕ ತಂಗಿಯರ ಫೋಟೊ" ಎಂದರು ಚಿತ್ರಾಳ ಚಿಕ್ಕಮ್ಮ. 
 
ಶಾಲಿನಿ , ಚಿತ್ರಾಳ ಅಮ್ಮನನ್ನು , ಪಕ್ಕದಲ್ಲಿದ ಮತ್ತೊಂದು ಮಗುವನ್ನು ನೋಡುತ್ತ ನಿಂತಂತೆಯೆ ಅವಳ ಮೈಯೆಲ್ಲ ಎಂತದೋ ನಡುಕ ಉಂಟಾಯ್ತು,  ಆ ಹುಡುಗಿಯ ಚಿತ್ರ ನೋಡುತ್ತಿರುವಂತೆ ಅವಳ ಹೊಟ್ಟೆಯಲ್ಲಿ ಎಂತದೊ ಹಿಂಸೆ. ಮನದಲ್ಲಿ ಏನೇನೊ  ಅರ್ಥವಾಗದ ಭಾವ. ಮುಂದೆ ಯಾವ ಪ್ರಶ್ನೆ ಕೇಳಲಾಗಲಿಲ್ಲ. ಕಾಲುಗಳಲ್ಲಿ ಸೋಲು ಉಂಟಾದಂತೆ ಅನುಭವ. ನಡೆದು ಬಂದು, ಮತ್ತೆ ಕುರ್ಚಿಯಲ್ಲಿ ಕುಳಿತಳು. ಚಿತ್ರಾಳ ಚಿಕ್ಕಮ್ಮ ಕಾಫಿ ಸಿದ್ದಮಾಡುವದರಲ್ಲಿ, ಉಳಿದ ಮೂವರು ಕೆಳಗಿಳಿದು ಬಂದರು. 
 
ಚಿತ್ರಾಳು
"ಏನೆ ಶಾಲಿ, ಮತ್ತೆ ನಮ್ಮ ಚಿಕ್ಕಮ್ಮನ ಹತ್ತಿರ ಮಸ್ಕಾ ಹೊಡೆಯುತ್ತಿದ್ದಿ,  ಗಸಗಸೆ ಪಾಯಸದ ನೆನಪು ಮತ್ತೆ ಬಂತಾ" ಎನ್ನುತ್ತಿರುವಂತೆ ಎಲ್ಲರು ನಗಲು ಪ್ರಾರಂಬಿಸಿದರು. 
 
ಎಲ್ಲರು ಮತ್ತೆ ಸಿದ್ದವಾಗಿ ಕೆಳಗೆ ಬರುವಾಗ ವ್ಯಾನ್ ಸಹ ನಿಂತಿತ್ತು, ನಾಲ್ವರ ಜೊತೆಗೆ ಚಿತ್ರಾಳ ಚಿಕ್ಕಮ್ಮನ ಇಬ್ಬರು ಮಕ್ಕಳು ಅಭಿ ಅಜಯ್ ಸಹ ಸೇರಿದರು, ಡ್ರೈವರ್ ಬಾಬು ಸಹ ಇವರನ್ನು ಕರೆದೋಯ್ಯಲು ಸಿದ್ದನಿದ್ದ. 
 
ಚಿಕ್ಕಮಗಳೂರೇನು ದೂರವೆ, ಮಾತನಾಡುತ್ತಲೆ ತಲುಪಿದರು, ಅವನು "ಚಿಕ್ಕಮಗಳೂರು-ಬೇಲುರು"  ಮುಖರಸ್ತೆಯಲ್ಲಿ ಜೀಪ್ ನಿಲ್ಲಿಸಿ. ನೀವೆಲ್ಲ ಎಷ್ಟು ಬೇಕಾದರು ಸುತ್ತಾಡಿ ಬನ್ನಿ, ಬೇಕಾದರೆ ಮಕ್ಕಳನ್ನು ನಾನು ಜೀಪಿನಲ್ಲಿಯೆ ಇಟ್ಟು ಕೊಂಡಿರುತ್ತೇನೆ ಎಂದ, 
 
ಆದರೆ ಅಭಿ ಮತ್ತು ಅಜಯ್ ಬಾಬು ಜೊತೆ ಇರಲು ಒಪ್ಪದೆ ತಾವು ಸುತ್ತಲು ಬರುವದಾಗಿ ಹಟ ಹಿಡಿದಾಗ, ಅವರನ್ನು ಕರೆದೋಯ್ದರು ಹೊರಗೆ ಸುತ್ತಲು. ಅಲ್ಲಿ ಇರುವ ಬಜಾರ ಎಲ್ಲ ಸುತ್ತಾಡಿ, ಬೇಲೂರು ರಸ್ತೆಯಲ್ಲಿ ಬರುವಾಗ ,
"ನೋಡೆ, ಇಲ್ಲು ಪಾನಿಪೂರಿ ಅಂಗಡಿ ಇದೆ" ಕೀರ್ತನ ಕೂಗಿದಳು.
"ನಿನಗೇನು ಬಂತೆ, ಬೆಳಗಿನಿಂದ ಅಷ್ಟು ತಿಂದಿದ್ದಿ, ಮತ್ತೆ ಪಾನಿಪೂರಿ ಅನ್ನುತ್ತಿ "  ಶಾಲಿನಿ ರೇಗಿಸಿದಾಗ,
"ಅಯ್ಯೊ ನಾನು ಪಾನಿಪೂರಿ ಅಂಗಡಿ ಇದೆ ಅಂದೆ ಅಷ್ಟೆ , ತಿನ್ನುತ್ತೇನೆ ಎಂದು ಎಲ್ಲಿ ಹೇಳಿದೆ " ಎಂದಳು, 
ಆದರೆ ನಾಲ್ವರು ಸೇರಿ ಪಾನಿಪೂರಿ ತಿನ್ನುವುದು ಮಾತ್ರ ಬಿಡಲಿಲ್ಲ. ಮಕ್ಕಳು ಅವರ ಜೊತೆ ಸೇರಿದರು. ಜೀಪಿನ ಹತ್ತಿರ ಹಿಂದೆ ಬಂದಾಗ ಸಂಜೆ ಏಳುವರೆ , ಬಾಬು
"ಏನ್ರಮ್ಮ ಹೋಗ್ತಾ, ಇಲ್ಲಿ ದೊಡ್ಡಮಗಳೂರಿನಲ್ಲಿ ಕೋದಂಡರಾಮ ದೇವಾಲಯ ವಿದೆ ನೋಡಿ ಹೋಗೋಣವೆ" ಎಂದ, 
ಎಲ್ಲರೂ ಆಗಲಿ ಎಂದು ಒಪ್ಪಿದರು, 
 
"ಕೋದಂಡ ರಾಮನ ದೇವಾಲಯದ ವಿಶೇಷ ಏನು ಗೊತ್ತ, ಅಲ್ಲಿಯ ಪುರೋಹಿತ  ಕಣ್ಣನವರು ಕನ್ನಡ ಪ್ರೇಮಿ, ಸಾಮಾನ್ಯವಾಗಿ ಇರುವ ಸಂಸ್ಕೃತ ಮಂತ್ರವನ್ನು ಬಿಟ್ಟು ಅಲ್ಲಿ ಅರ್ಚನೆ, ಮಂಗಳಾರತಿ ಎಲ್ಲವನ್ನು ಅವರೆ ಕನ್ನಡದಲ್ಲಿ ರೂಪಿಸಿರುವ ಮಂತ್ರರೂಪದಲ್ಲಿ ಹೇಳಿ ಪೂಜಿಸುತ್ತಾರೆ" ಎಂದು ಚಿತ್ರಾ ಹೇಳಿದಾಗ ಎಲ್ಲರಿಗೂ ಕುತೂಹಲ. 
ಕೋದಂಡರಾಮ ದೇವಾಲಯದ ಬೇಟಿ ಮುಗಿಸಿ, ಮನೆ ತಲುಪಿದಾಗ ಎಲ್ಲರಿಗು ಸುಸ್ತು. ಚಿತ್ರಾ ಚಿಕ್ಕಮ್ಮನ ಬಲವಂತಕ್ಕೆ ಊಟ ಮುಗಿಸಿ ಎಲ್ಲರು, ಮೇಲಿನ ರೂಮು ಸೇರಿದರು.  ಅದೇನೊ ಚಿತ್ರಾಳ ತಂದೆಯಾಗಲಿ, ಚಿಕ್ಕಪ್ಪನಾಗಲಿ ಕಾಣಲಿಲ್ಲ.
 
 ಬೆಳಗಿನಿಂದ ದಣಿದ ಅವರಿಗೆ ನಿದ್ರಾ ದೇವಿ ಆವರಿಸಿದರೆ, ಶಾಲಿನಿ ಒಬ್ಬಳಿಗೆ ಮಾತ್ರ   ಎಚ್ಚರ , ಹಾಗು ನಿದ್ರೆಯ ಆಟ. ಪೋಟೋದಲ್ಲಿ ನೋಡಿದ್ದ ಚಿತ್ರಾಳ ಅಮ್ಮನ ಮುಖವೆ ಪದೆ ಪದೆ ಎದುರಿಗೆ ಬಂದು ನಿಲ್ಲುತ್ತಿತ್ತು. 
ಹೊರಗೆ ಯಾರೊ "ಚಂದ್ರಾ....ಚಂದ್ರಾ.."  ಎಂದು ಕೂಗಿದಂತೆ ಶಬ್ದ,  
ಯಾರಿರಬಹುದು ಈ  ಚಂದ್ರಾ?  ಅವಳಿಗೆ ಚಿಂತೆ ಹಾಗು ಮಂಪರು.
ಹಾಗೆ ಹೊರಳಾಡುತ್ತ ಕಡೆಗೆ ನಿದ್ದೆಗೆ ಶರಣಾದಳು
-----------------------------------------
ಮುಂದುವರೆಯುವುದು.....
Rating
No votes yet