ಕೋತಿ ಮನಸ್ಸು

ಕೋತಿ ಮನಸ್ಸು

ಚಿತ್ರ

ಹೇ,ಕೋತಿ ಮನಸೇ

ನಿನ್ನ ಕಪಿಮುಷ್ಟಿಯಲಿ ಸಿಕ್ಕ ನಾ

ಬರೆದಿದ್ದೇನು, ಹರಿದಿದ್ದೇನು

ಒಳಗೊಂದು ವಿವೇಕ ಜಾಗೃತವಾಗದಿರೆ

ನೀ ಹೋದ ಮಾರ್ಗದಲಿ ನಾನೂ ಸಾಗಿದರೆ

ಬಿದ್ದ ಕೆಸರಲಿ ಒದ್ದಾಡುವುದ ನೋಡುವರು ಎಲ್ಲಾ

ನಗುವರು ಎಲ್ಲಾ

ಅವರಿಗೆ ನಿನ್ನ ಚೇಷ್ಟೆಯ ಅರಿವಿಲ್ಲ|

 

ಜನರ ಕಣ್ಣಿಗೆ  ಕಾಣುವುದು ಐದಡಿಯ ನಾನು

ನೀನೆಲ್ಲಿ ಕಾಣುವಿ,ಮೋಸಗಾರುತಿ ನೀನು

ಅರೆ, ಇವ ಕೆಸರಲಿ ಬೀಳುವುದೆಂದರೇನು?

ಹಣೆಯಲಿ ಪಟ್ಟೆ ವೀಭೂತಿ ಹೊಳೆಯುತಿದೆಯಲ್ಲಾ!

 

ಅಂದು ಇವನೇ ಅಲ್ಲವೇ

ನೀತಿ ನ್ಯಾಯದ ಪಾಠ ಹೇಳಿದ್ದು!

ಇವನೇ ಅಲ್ಲವೇ,ಧರ್ಮ ಭೋದನೆ ಮಾಡಿದ್ದು!

ಮಾತಿಗೂ ನಡತೆಗೂ ಹೊಂದಾಣಿಕೆಯಿಲ್ಲದ ಮೋಸಗಾರ!!

ಇನ್ನೇನು ಕೇಳಬೇಕೋ,ಜನರ ಬಾಯಿಂದ!!

 

ಹೇ, ಕೆಟ್ಟ  ಮನಸೇ

ನಿನ್ನ ಕಟ್ಟಿಹಾಕಲೇ ಬೇಕು

ಕಬ್ಬಿಣದ ಸರಪಳಿಯಿಂದ

ಗಟ್ಟಿತನವ ಉಳಿಸಲೇ ಬೇಕು

ನಿನ್ನ ಮೆಟ್ಟಿ ನಿಲಲೇ ಬೇಕು||

Rating
No votes yet

Comments

Submitted by partha1059 Sat, 10/19/2013 - 07:46

ಮನಸಿನ ನಿಯಂತ್ರಣ ನೀವು ಹೇಳಿದಂತೆ ಕಷ್ಟವೆ. ಆದರೆ ಸತತ ಸಾದನೆಯಿಂದ ಸಾದ್ಯ. ಹೊರಗಿನ ಮಾತು ಮುಗಿದರೆ ಒಳಗೇ ಮಾತು ಪ್ರಾರಂಭ, ಮನಸ್ಸಿನ ವಿಮರ್ಶೆ, ಅದನ್ನು ನೀವಾಗಲೆ ಪ್ರಾರಂಬಿಸಿದ್ದೀರ

Submitted by nageshamysore Sun, 10/20/2013 - 02:05

ಹರಿಹರಪುರ ಶ್ರೀಧರರೆ, ಜಿತೇಂದ್ರಿಯರನ್ನು ಬಿಟ್ಟಿದ್ದಲ್ಲ ಮನವೆಂಬೀ ಮರ್ಕಟದ ಲೀಲೆ. ನೀತಿ ಪಾಠ ಹೇಳುವವರಲ್ಲಿ ಈ ಮರ್ಕಟದ ಹತೋಟಿಯನ್ನು ಹೆಚ್ಚಿನ ಸ್ತರದಲ್ಲಿ ನಿರೀಕ್ಷಿಸುತ್ತಾರಾಗಿ, ಆ ಕಾಯಕ ನಿರತರಿಗೆ ಸ್ವಂತ ಕಾಮನೆ ಮತ್ತು ಸಾಮಾಜಿಕ ಕಾಳಜಿಯ ನಡುವಿನ ತೆಳುದಾರದ ಮೇಲೆ ಸರ್ಕಸ್ ಮಾಡುವ ಅನಿವಾರ್ಯ ಹೆಚ್ಚೆಚ್ಚು ಕಾಡುತ್ತವೆ. ಅದನ್ನು ಮೀರಿದ ಘಟ್ಟ ಅಂತರ್ಪರಿವೀಕ್ಷಣೆ - ಮರ್ಕಟಕೆ ಲಂಗುಲಗಾಮು ಹಾಕುವ ಜಿತೇಂದ್ರಿಯ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಹವಣಿಕೆ. ಬಹುಶಃ ಮನುಜ ಪ್ರಜ್ಯೆ ಜ್ಞಾನೋದಯದತ್ತ ನಡೆದಿರುವಾಗ, ಈ ಚಡಪಡಿಕೆ, ಗೊಂದಲಗಳನ್ನು ದಾಟಲೆಬೇಕಾದ ಅನಿವಾರ್ಯವೊ ಏನೊ? ಸ್ಪೈಡರ ಮ್ಯಾನ್ ಸರಣಿಯ ಒಂದು ಮಾತು ನೆನಪಾಗುತ್ತಿದೆ - 'ಹೆಚ್ಚಿನ ಶಕ್ತಿ, ಬಲ, ಅಧಿಕಾರದೊಂದಿಗೆ ಹೆಚ್ಚಿನ ಜವಾಬ್ದಾರಿಯೂ ತಂತಾನೆ ನಿರೀಕ್ಷಿಸಲ್ಪಡುತ್ತದೆ'. ಅಂತ ನಿರೀಕ್ಷೆಗಳ ನಡುವೆ ಕೆಲಸ ಮಾಡುವಾಗ 'ಮನ ಮರ್ಕಟ ಮರ್ದನ' ನಿರಂತರವಾಗಿ ನಡೆವ ಪ್ರಕ್ರಿಯೆ. ಹಾಗಾಗಿ ಅದಕ್ಕೆ ಕಳವಳಿಸುವ ಬದಲು ಆವಾಹಿಸಿ ನಿಭಾಯಿಸುವ ಕಾರ್ಯತಂತ್ರವೆ ಸೂಕ್ತವೇನೊ?
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
 

Submitted by hariharapurasridhar Sun, 10/20/2013 - 20:19

In reply to by nageshamysore

ನಿಜ ಹೇಳಲೇ, ನಾಗೇಶ್ ...ನಿಮ್ಮ ಪ್ರತಿಕ್ರಿಯೆಯೇ ಅದ್ಭುತ! ಮನಸ್ಸಿಗೆ ತೋಚಿದ್ದನ್ನು ಗೀಜಿದ್ದು ಈ ಕವನ. ಅದಕ್ಕೆ ಅರ್ಧ ಗಂಟೆ ಮೀಸಲು ಅಷ್ಟೆ. ಕಳವಳ ಖಂಡಿತಾ ಇಲ್ಲ. ಮನದ ಹೊಯ್ದಾಟ ಎಲ್ಲರಿಗೂ ಇದ್ದದ್ದೇ. ಅಷ್ಟೆ.