ಕ್ಯಾಲೆಂಡರಿಗಷ್ಟೇ ಸೀಮಿತವಾಗದಿರಲಿ - 2013

ಕ್ಯಾಲೆಂಡರಿಗಷ್ಟೇ ಸೀಮಿತವಾಗದಿರಲಿ - 2013

ಚಿತ್ರ

ಲ್ಲವೂ ಹೊಸತು..ಹೊಸತು. ಬಣ್ಣ ಮಾಸಿದ ಗೋಡೆಗಳ ಮೇಲೆ ಬಣ್ಣದ ಕಾಗದಗಳ ಶೃಂಗಾರ. ಅಲ್ಲಲ್ಲಿ ಊದಿದ ಬಲೂನುಗಳು, ಎಂದೂ ಕಾಣದ ಈ ಸಂಭ್ರಮ ಹೊಸ ವರ್ಷದ ಸ್ವಾಗತಕ್ಕಾಗಿ. 2012ನೇ ಇಸವಿಗೆ ವಿದಾಯ ಹೇಳಿ, 2013-ನೂತನ ವರ್ಷವನ್ನು ಸ್ವಾಗತಿಸುವ ತಯಾರಿ. ಹನ್ನೊಂದು ಗಂಟೆಯಿಂದ ವಿವಿಧ ರೀತಿಯ ಆಟಗಳು ಈ ಹನ್ನೆರಡರ ವಿದಾಯಕ್ಕಾಗಿ. ಗಂಟೆ ಹನ್ನೆರಡು ತೋರಿಸಿದ್ದೇ ತಡ, ಹಲೋ ಹ್ಯಾಪಿ ನ್ಯೂ ಇಯರ್..ಹಲೋ ಹ್ಯಾಪಿ ನ್ಯೂ ಇಯರ್ -ಮೊಬೈಲನ್ನು ಕಿವಿಗೆ ಹಿಡಿದುಕೊಂಡು ಹಲವರ ಬೊಬ್ಬೆ . ಇನ್ನು ಕೆಲವರು ಈ ಹೊತ್ಗೆ ನೆಟ್ ವರ್ಕ್ ಕೈ ಕೊಡ್ಬೇಕಾ ಅಂದುಕೊಂಡು ಎದುರು ಸಿಕ್ಕ ಮೊಬೈಲ್ ಗಳನ್ನು ಕೇಳುವ ಸಹನೆಯೂ ಇಲ್ಲದೆ ತೆಗೆದುಕೊಂಡು ನಂಬರ್ ಒತ್ತಲು ಶುರು. ಕ್ಷಣದಲ್ಲೇ ಹೋ ಎಂಬ ಮುಗಿಲು ಮುಟ್ಟುವ ಅರಚಾಟ..ಕೂಗು, ನಗು, ಕೇಕೆ, ಅದ್ಯಾವುದೋ ಉಲಾಲ ಉಲಾಲ ...ಇಂತಹ ಹಾಡುಗಳಿಗೆ ಮನಸೋ ಇಚ್ಚೆ ಹೆಜ್ಜೆ. ನಂತರ  ಕೇಕ್ ಕಟ್ ಮಾಡಿ ಎಲ್ಲರಿಗೂ ಹಂಚಿ ಶುಭಾಷಯ ವಿನಿಮಯ. ಕೆಲವರ ಕೈಲಿದ್ದ ಕೇಕ್ ಪಕ್ಕದವರ ಮುಖದ ಮೇಲೂ ತನ್ನ ಪ್ರತಿಬಿಂಬವನ್ನು ಮೂಡಿಸಿತ್ತು. ಇದು ನಮ್ಮ ಹಾಸ್ಟೆಲ್ ನಲ್ಲಿನ ಹೊಸ ವರ್ಷದ ಆಚರಣೆ. ಈ ಗಲಾಟೆಗಳಿಂದ ದೂರ ಹೋಗೋಣ ಅನ್ನಿಸಿ ಹೊರಗಡೆ ಬಂದರೆ, ರಾತ್ರಿವೇಳೆ ಸಹಾಯಕ್ಕಾಗಿ ಕೂಗಿದರೂ ತಮಗ್ಯಾಕೆ ಹೊಸಾ ಉಸಾಬರಿ ಅಂದುಕೊಳ್ಳುವಂತಹ ಜನರೂ ಅಂದು ರಸ್ತೆಗಳಲ್ಲೇ ಪಟಾಕಿಗಳನ್ನು ಸಿಡಿಸಿ, ಹಾಡುಗಳಿಗೆ ಹೆಜ್ಜೆ ಹಾಕಿಕೊಂಡು, ತಾವ್ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಹೋ..ಎಂದು ಅಲ್ಲೂ ಅರಚುತ್ತಿದ್ದರು. ಯಾರು ಯಾವ ನೋವನ್ನನುಭವಿಸುತ್ತಿದ್ದರೇನು? ನಮಗೆ ಹೊಸ ವರ್ಷ ಆಚರಣೆಯೇ ಮುಖ್ಯ ಎಂಬಂತಿತ್ತು.
ಹಳೆಯದನ್ನೆಲ್ಲಾ ಮರೆತು ಇಂದಿನಿಂದ ಹೊಸ ಜೀವನ ಆರಂಭಿಸೋಣ, ಕಹಿ ಅನುಭಗಳು,ಘಟನೆಗಳು ಇನ್ನೆಂದೂ ಮರುಕಳಿಸದಿರಲಿ ಇತ್ಯಾದಿ ಸಂದೇಶಗಳ ಪರಸ್ಪರ ವಿನಿಮಯ. ಎಲ್ಲಾ ಹೊಸತು ಹೊಸತು. ಎಷ್ಟು ದಿನ? ಕಳೆದ 2012 ನ್ನೂ ಇದೇ ರೀತಿಯಾಗಿ ಸ್ವಾಗತಿಸಿದ್ದೆವು. ಕಹಿ ಘಟನೆಗಳು ನಡೆಯದಿರಲಿ ಎಂಬ ಆಶಯವನ್ನೂ ಹೊಂದಿದ್ದೆವು. ಆದರೆ ಅದೆಷ್ಟು ಘಟನೆಗಳು ಜನರ ಮನದಲ್ಲಿ ಇನ್ನೂ ಮಾಸದ ಗಾಯಗಳಾಗಿಲ್ಲ. ಇಂದು ಹೊಸತು ಎನ್ನುವುದು ನಾಳೆಗೆ ಹಳೆಯದಾಗುತ್ತದೆ. ಕೇವಲ ಕ್ಯಾಲೆಂಡರ್ ಗಳ ಮೇಲೆ ಹೊಸ ವರ್ಷ,ಎಂದು ನಮೂದಾಗುತ್ತದೆಯೇ ಹೊರತು ಉಳಿದಂತೆ ಅದೇ ವಾರದ ಏಳು ದಿನಗಳು, ತಿಂಗಳಿನ 30 ದಿನಾಂಕಗಳು. ಇಷ್ಟೆಲ್ಲಾ ಪಟಾಕಿಗಳನ್ನು ಸಿಡಿಸಿಕೊಂಡು,ಪಾರ್ಟಿಗಳನ್ನು ಮಾಡಿಕೊಂಡು ಅದ್ದೂರಿಯಾಗಿ ಸ್ವಾಗತಿಸಿದ ಈ ವರ್ಷ 365 ದಿನಗಳ ನಂತರ ಹಳೇದು! ನಂತರ ಇನ್ನೊಂದು ಆಚರಣೆ ಕಾಲಚಕ್ರ ಹೀಗೇ  ಮುಂದುವರಿಯುತ್ತಿರುತ್ತದೆ.
ಸಾರ್ವಜನಿಕವಾಗಿ ಇಷ್ಟೆಲ್ಲಾ ಗದ್ದಲಗಳನ್ನು ಮಾಡಿಕೊಂಡು ಆಚರಿಸಿದ ಈ ಸಂದರ್ಭ ಕೇವಲ ಕ್ಷಣಿಕ. ಆ ಹೊತ್ತಿಗಷ್ಟೇ ಆಚರಣೆ, ಮರುದಿನ ಬೆಳಗಾದರೆ ಪುನಃ ಅದೇ ದಿನಗಳು, ರೂಢಿಯಾದ ಅಭ್ಯಾಸಗಳು. ಹದಗೆಟ್ಟಿರುವ ಸಮಾಜದಲ್ಲಿ ಸಂಸಾರ ನೊಗದ ಬಾರ ಹೊತ್ತು ಕೆಲಸಕ್ಕಾಗಿ ಮನೆಯಿಂದ ಹೊರ ಹೊರಟ ಮಹಿಳೆ, ಭವಿಷ್ಯದ ಗುರಿಯನ್ನು ಸಾಕಾರಗೊಳಿಸಲು ವಿದ್ಯಾಭ್ಯಾಸಕ್ಕಾಗಿ ಹೊರಟ ಹೆಣ್ಣು ತಾನು ಸುರಕ್ಷಿತವಾಗಿ ಹಿಂತಿರುಗಿ ಮನೆ ಸೇರುತ್ತೇನೆ ಎಂಬ ಯಾವುದೇ ರೀತಿಯ ಭರವಸೆಯಿಲ್ಲದ ಅಂಜಿಕೆಯ ದಿನಗಳು. ಹಣಕ್ಕಾಗಿ ಇನ್ನೊಬ್ಬರ ಕತ್ತು ಕುಯ್ದು ಸುಂದರ ಸಂಸಾರವನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡುವ ಸಮಾಜ ಘಾತುಕರು. ಸಮಾಜದ ಪ್ರಭಾವಿ ವ್ಯಕ್ತಿಗಳ ಅಟ್ಟಹಾಸಕ್ಕೆ ನಲುಗಿ ಭಯದಿಂದ ಜೀವನ ನಡೆಸಬೇಕಾಗಿರುವ ಜನಸಾಮಾನ್ಯರು. ಮನೆಮಗಳ ಸಾವಿನ ನ್ಯಾಯಕ್ಕಾಗಿ ದೇಶವೇ ಪ್ರತಿಭಟಿಸುತ್ತಿದ್ದರೂ ಮೌನ ಮುರಿಯದ ದೇಶದ ಮಂತ್ರಿಗಳು. ಇವರೆಲ್ಲಾ ಹೊಸಬರಾಗುವರೇ?
ಹಾಗಾದರೆ "ಹೊಸತನ" ಅನ್ನುವುದು ಎಲ್ಲದೆ? ಯಾವುದು ಹೊಸತನ? ಮನುಷ್ಯ ತನ್ನಲ್ಲಿರುವ ಕೆಟ್ಟ ಅಭ್ಯಾಸಗಳನ್ನು ದೂರಮಾಡಿ ಪ್ರಾಮಾಣಿಕವಾಗಿ ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಿ ಬಾಳುವುದು. ಅಂದರೆ ಅಂತರಂಗದಲ್ಲಿ ಹೊಸತನ್ನು ಅಳವಡಿಸಿಕೊಂಡು, ತನ್ನಂತೆ ಈ ಸಮಾಜದಲ್ಲಿ ಎಲ್ಲರೂ ಬಾಳಲು ಅರ್ಹರು,ತನ್ನಿಂದ ಇತರರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಸಾಮಾಜಿಕ ಪ್ರಜ್ಞೆಯಿಂದ ಬಾಳುವುದು. ಇಂತಹ ಆಲೋಚನೆಗಳು ಎಲ್ಲರಲ್ಲೂ ಬಂದಾಗ ಸಮಾಜದಲ್ಲಿ ಪ್ರತಿದಿನವನ್ನೂ ನಾವು ಹೊಸ ದಿನವನ್ನಾಗಿ ಆಚರಿಸಬಹುದು. ಸಮಾಜದ ಸ್ವಾಸ್ಥ್ಯ ಕೆಡಿಸುವ ಆಲೋಚನೆಗಳನ್ನು ದೂರ ಮಾಡಿ ಸುಸಂಸ್ಕೃತರಾಗಲು ಸಾಧ್ಯವಾಗದಿದ್ದರೆ ಈ ನೂತನ ವರ್ಷದಲ್ಲೂ ಕಹಿ ಅನುಭವಗಳಾಗುವುದು, ಮುಂದಿನ ವರ್ಷದಲ್ಲಿ ಮತ್ತದೇ ಸಂದೇಶ..ಅದೇ ಅಬ್ಬರ. ಹೊಸತು ಎನ್ನುವುದು ಕೇವಲ ಕ್ಯಾಲೆಂಡರಿಗಷ್ಟೇ ಸೀಮಿತ! ಹೀಗಾಗದಿರಲಿ ಎಂಬ ಆಶಯ. ಎಲ್ಲರ ಬಾಳಲ್ಲೂ ಹೊಸ ಬೆಳಕು ಮೂಡಲಿ ಈ ನೂತನ ವರ್ಷದಲಿ...

ಚಿತ್ರಕೃಪೆ:http://www.myspace.com/rafikischildren
 

Rating
No votes yet