ಕ್ಯಾಲೆಂಡರ್ ಬದಲಿಸುವ ಸಂಭ್ರಮ

ಕ್ಯಾಲೆಂಡರ್ ಬದಲಿಸುವ ಸಂಭ್ರಮ

ಚಿತ್ರ

ಕ್ಯಾಲೆಂಡರುಗಳಲ್ಲಿ ಹಲವು ವಿಧ - ರೋಮನ್ ಕ್ಯಾಲೆಂಡರ್, ಜೂಲಿಯನ್ ಕ್ಯಾಲೆಂಡರ್, ಗ್ರೆಗೋರಿಯನ್ ಕ್ಯಾಲೆಂಡರ್ ಇತ್ಯಾದಿ. ನಾವು ಈಗ ಜಗತ್ತಿನಾದ್ಯಂತ ದಿನ ನಿತ್ಯ ಬಳಸುವುದು ಗ್ರೆಗೋರಿಯನ್ ಕ್ಯಾಲೆಂಡರ್. ನೆನ್ನೆ 'ನ್ಯೂ ಇಯರ್' ಅಂತ ವಿಜೃಂಭಣೆಯಿಂದ ಆಚರಿಸಿದ್ದು ಈ ಕ್ಯಾಲೆಂಡರ್ ಬದಲಿಸುವ ಸಂಭ್ರಮವನ್ನೇ. 12 ತಿಂಗಳುಗಳನ್ನು ಉಲ್ಲೇಖಿಸುವ ಕ್ಯಾಲೆಂಡರ್ ಬದಲಿಸಲು ಭಾರತದಾದ್ಯಂತ, ಜಗತ್ತಿನಾದ್ಯಂತ ಸಂಭ್ರಮವೋ ಸಂಭ್ರಮ. ಇದೊಂದು ಜಗತ್ತಿನ ಹಬ್ಬವೇ ಆಗಿ ಮಾರ್ಪಾಡಾಗಿದೆ.
 
ಡಿಸೆಂಬರ್ 31, ರಾತ್ರಿ 12ಕ್ಕೆ ಸರಿಯಾಗಿ, ಕಾದುಕೊಂಡು ಆಚರಿಸುತ್ತಾರೆ. ಆಚರಿಸುವ ಪರಿ ಕೇಳಿದರೆ ವಿಚಿತ್ರ ಅನಿಸುತ್ತದೆ. 12ಕ್ಕೆ ಕೇಕ್ ಕತ್ತರಿಸಿ, ಕಿರಿಚುತ್ತಾ, ಒಬ್ಬರಿಗೊಬ್ಬರು ಕೇಕ್ ತಿನ್ನಿಸಿ, ನಂತರ ರಾತ್ರಿ ಇಡೀ ಜೀವಂತವಿರುವ ಜಾಗಗಳಿಗೆ ಹೋಗಿ ಕುಣಿದು ಕುಪ್ಪಳಿಸುವುದು. ಬೈಕಿನಲ್ಲಿ ರಾತ್ರಿ 'ಹ್ಯಾಪಿ ನ್ಯೂ ಇಯರ್' ಎಂದು ಕಿರುಚುತ್ತಾ ಗದ್ದಲ ಮಾಡುವುದು. ಕಂಠ ಮಟ್ಟ ಕುಡಿಯುವುದು, ಕುಡಿದು ತೂರಾಡುವುದು, ನೆಡೆಯಲು ಹೋರಾಡುವುದು. ನ್ಯೂ ಇಯರ್ ಅಂದ್ರೆ ಸಾಕು ಬಾರುಗಳಿಗೆ, ಪಬ್ಬುಗಳಿಗೆ, ಹೋಟೆಲುಗಳಿಗೆ ಹಬ್ಬ. ಬ್ರಿಟೀಷರು ನಮ್ಮ ದೇಶ ಬಿಟ್ಟರೂ, ಜನರ ಮನಗಳಲ್ಲಿ, ಮನೆಗಳ ಆಚರಣೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದುಹೋಗಿದ್ದಾರೆ.
 
ಭಾರತೀಯರು ಹೊಸ ವರ್ಷ ಎಂದು ಯುಗಾದಿಯನ್ನು ಆಚರಿಸುತ್ತಾರೆ. ಬೇವು-ಬೆಲ್ಲ ತಿನ್ನುವ ಮೂಲಕ ಜೀವನದ ಸಿಹಿ-ಕಹಿಗಳನ್ನು ಸ್ವೀಕರಿಸುತ್ತೇವೆ ಎಂಬ ಸಂಕೇತವನ್ನು ತೋರುತ್ತಾರೆ. ನ್ಯೂ ಇಯರ್ ಆಚರಣೆಗೆ ಕೇಕ್-ಮದಿರ ಸೇವನೆ ಯಾವ ಸಂಕೇತ ಎಂದು ನನಗೆ ಇನ್ನು ತಿಳಿಯಲಾಗಲಿಲ್ಲ. ಯುಗಾದಿ ಅಂತ ಕೇಳಿದ ಕೂಡಲೆ ನಮಗೆ ಕಬ್ಬು ನೆನಪಾಗುತ್ತದೆ, ನ್ಯೂ ಇಯರ್ ಅಂದ ಕೂಡಲೆ ಮನಸ್ಸಿನಲ್ಲಿ ಪಬ್ಬು ತಲೆದೋರುತ್ತದೆ. ಅಲ್ಲಾ ಸ್ವಾಮಿ, ಪಾಶ್ಚಾತ್ಯರಿಗೆ ಹಬ್ಬ-ಹರಿದಿನಗಳೇ ಕಮ್ಮಿ, ಅದಕ್ಕೆ ಅವರು ಇದನ್ನು ಆಚರಿಸಿತ್ತಾರೆ, ಆದರೆ ನಮ್ಮವರು ಇದನ್ನು ಯಾಕೆ ಅನುಕರಿಸುತ್ತಾರೊ ಗೊತ್ತಿಲ್ಲ. ಆದರೆ ನ್ಯೂ ಇಯರ್ ಸೆಲೆಬ್ರೇಷನ್ ನಮ್ಮ ದೇಶದಲ್ಲಿ ಹಾಸು ಹೊಕ್ಕಾಗಿರುವುದು ನಿಜ.
 
ಭಾರತ ಪ್ರಸ್ತಾಪ ಮಾಡಿದ 'ವಿಶ್ವ ಯೋಗ ದಿನ'ವನ್ನು ಜೂನ್ 21ರಂದು ಆಚರಿಸಿ, ಜಗತ್ತಿಗೆ ಮಾದರಿಯಾಗಿದೆ ಭಾರತ. ಎಲ್ಲಾ ರಾಷ್ಟ್ರಗಳು ಇದನ್ನು ಮನ್ನಿಸಿ, ನಮ್ಮ ದೇಶವನ್ನು ಕೊಂಡಾಡುತ್ತಿದೆ. ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ, ಆದರೆ ನಮ್ಮ ಮೋರೆ ಪಾಶ್ಚಾತ್ಯದತ್ತ ತಿರುಗಿದೆ. ನಮಗೆ ನ್ಯೂ ಇಯರ್ ಬೇಕಿದೆ. ಭಾರತದ ಸ್ವಾತಂತ್ರ್ಯ ದಿನದ ಆಚರಣೆ ತಪ್ಪಿಸಿದರೂ ತಪ್ಪಲ್ಲ, ನ್ಯೂ ಇಯರ್ ಆಚರಿಸುವುದು ಸೂಕ್ತ ಅನ್ನೋ ಮನೋಭಾವ ರೂಢಿಗೆ ಬಂದಿದೆ. ಯಾವುದನ್ನೂ ಸಹ ಆಚರಿಸುವ ಮುನ್ನ ಅದರ ಕಾರಣ ತಿಳಿದು ಆಚರಿಸಿದರೆ ಅದೆಷ್ಟು ಚೆಂದ ಅಲ್ವಾ?!!
 
ಜಗತ್ತೇ ಪರಿಸರ ರಕ್ಷಣೆಯ ಪರ ಹೋರಾಡುತ್ತ, ನಮ್ಮ ಓಜೋನ್ (ozone) ಪದರ ರಕ್ಷಿಸಲು ಪ್ರಯತ್ನಿಸುತ್ತಿದೆ. ಪ್ಯಾರಿಸ್ ಸಮ್ಮೇಳನದ ಮುಖಾಂತರ ಎಲ್ಲಾ ರಾಷ್ಟ್ರಗಳನ್ನು ಎಬ್ಬಿಸಿ, ಕಲುಷಿತ ಗಾಳಿಯನ್ನು ಕಡಿತಗೊಳಿಸುವ ಪ್ರಯತ್ನ ನಡೆಸುತ್ತಿದೆ. ಆದರೆ, ನಮ್ಮ ದೇಶದ ಸ್ವಚ್ಛ ಪಟ್ಟಣ ಎಂದು ಹೇಳಿಸಿಕೊಂಡು, ಸಾಂಸ್ಕೃತಿಕ ನಗರಿ ಎಂದು ಪ್ರಖ್ಯಾತವಾಗಿರುವ ನಮ್ಮ ಮೈಸೂರಿನಲ್ಲಿ, ಈ ವರ್ಷದಿಂದ ಆರಂಭಿಸಿ ನ್ಯೂ ಇಯರ್ ಪ್ರಯುಕ್ತ ಸುಡುಮದ್ದು ಪ್ರದರ್ಶನ (fireworks display) ತೋರಿಸುತ್ತಾರಂತೆ. ಪರಿಸರ ಮಾಲಿನ್ಯಕ್ಕೆ ನಮ್ಮ ರಾಜ್ಯದ ಹೊಸ ಸೃಜನಶೀಲ ಯೋಜನೆ ಮತ್ತು ಕೊಡುಗೆ ಇದಾಗಿದೆ. ಇದು ನ್ಯೂ ಯಾರ್ಕಿಗೆ ಸ್ಪರ್ಧೆ ಇರಬೇಕು!!
 
ಅಂತೂ ನ್ಯೂ ಇಯರ್ ಬಂದು ಜನರ ಜೇಬುಗಳಿಗೆ ಬಲು ದೊಡ್ಡ ಕತ್ತರಿ ಹಾಕಿರುವುದು ಹೌದು. ಸನ್ಮಾನ್ಯ ವಿಜಯ್ ಮಲ್ಯ ಅವರು ಕಿಂಗ್ ಫಿಷರ್ ಕ್ಯಾಲೆಂಡರ್ ಹಾಗು ನ್ಯೂ ಇಯರ್ ಪಾರ್ಟಿಗೆ ಪೋಲು ಮಾಡಿದ ಹಣ ಉಳಿಸಿದ್ದಿದ್ದರೆ, ನಮ್ಮ ದೇಶದ ಬ್ಯಾಂಕುಗಳಿಗೆ ಮತ್ತು ನಮ್ಮ ದೇಶಕ್ಕೆ ಟೋಪಿ ಹಾಕುವ ಸನ್ನಿವೇಶ ಬರುತ್ತಿರಲಿಲ್ಲವೇನೊ. ನ್ಯೂ ಇಯರ್ ಕೆಲವು ಲಾಭ ಹೊಂದಿರುವುದು ಹೌದು. ರಿಯಾಯಿತಿಗಳ ಸರಮಾಲೆ ದೊರೆಯುತ್ತದೆ, ಒಂದು ದಿನ ರಜೆ ಸಿಗುತ್ತದೆ, ಸರ್ಕಾರದ ಖಾತೆ ತುಂಬುತ್ತದೆ. ಆದರೆ ಇದರ ಆಚರಣೆಯ ಪರಿ ಹಾಗು ಆಚರಣೆಯ ಗಡಿ ಎಷ್ಟು ಎಂದು ತಿಳಿಯಬೇಕಿದೆ. ನಮ್ಮ ಹಬ್ಬಗಳ ಮಹತ್ವ ತಿಳಿದರೆ, ಅದಾಗದೆ ನಮಗೆ ನಮ್ಮ ದೇಶದ ಬಗೆಗಿನ ಅಭಿಮಾನ, ಗೌರವ ಹೆಚ್ಚುತ್ತದೆ ಹಾಗು ನಮ್ಮ ಮಿತಿ ಅರಿತು ನಮ್ಮತನವನ್ನು ಉಳಿಸುವಲ್ಲಿ ಉಪಯುಕ್ತವಾಗುತ್ತದೆ.

Rating
No votes yet