ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತಾರು

ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತಾರು

“ಇನ್ನೊಂದು ಸ್ಟೇಷನ್ನು ಆದಮೇಲೆ ಕೊನೆಯ ಸ್ಟೇಷನ್ನು ಬರುತ್ತದೆ ಅನ್ನುವಾಗ ಟಿಕೆಟ್ ಕಲೆಕ್ಟರು ಬಂದ. ನನ್ನ ವಸ್ತುಗಳನ್ನು ಎತ್ತಿಕೊಂಡು ಬಾಗಿಲ ಹತ್ತಿರ ಹೋಗಿ ನಿಂತುಕೊಂಡೆ. ಇನ್ನೇನು ಕ್ಲೈಮ್ಯಾಕ್ಸು ಅನ್ನಿಸಿ ಕಳವಳ ಜಾಸ್ತಿಯಾಯಿತು. ಚಳಿ ಹೆಚ್ಚಾಗಿತ್ತು. ಹಲ್ಲು ಕಟಕಟ ಸದ್ದುಮಾಡುತ್ತಿದ್ದವು. ರೈಲಿಳಿದೆ. ಆಚೆಗೆ ಹೋಗುತ್ತಿರುವ ಜನರ ಗುಂಪಿನ ಜೊತೆ ಸೇರಿ ಯಾಂತ್ರಿಕವಾಗಿ ಹೊರಗೆ ನಡೆದೆ. ಕುದುರೆ ಗಾಡಿ ಹತ್ತಿದೆ. ಹೊರಟೆ. ದಾರಿಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಜನ ಇದ್ದರು. ಕೆಲವು ಕಟ್ಟಡಗಳ ಮುಂದೆ ವಾಚ್‌ಮ್ಯಾನು. ಬೀದಿದೀಪಗಳ ಬೆಳಕಿನಲ್ಲಿ ಕೆಲವು ಸಾರಿ ಗಾಡಿಯ ಮುಂದೆಬೀಳುತ್ತಾ ನಿಧಾನವಾಗಿ ಹಿಂದೆ ಸರಿದು ಹೋಗುತ್ತಿದ್ದ ನಮ್ಮದೇ ಗಾಡಿಯ ನೆರಳು. ಅರ್ಧ ಮೈಲಿ ಹೋಗಿರಬಹುದು. ಪಾದಗಳು ತಣ್ಣಗಾಗಿವೆ ಅನ್ನಿಸಿತು. ರೈಲಿನಲ್ಲಿದ್ದಾಗ ವುಲನ್ ಕಾಲು ಚೀಲ ತೆಗೆದು ಚೀಲದಲ್ಲಿಟ್ಟಿದ್ದು ನೆನಪಿಗೆ ಬಂತು. ‘ಎಲ್ಲಿ ಚೀಲ? ಇಲ್ಲಿದೆಯಾ? ಅಲ್ಲಿ? ಮತ್ತೆ ನನ್ನ ಪೆಟ್ಟಿಗೆ?’ ನನ್ನ ಲಗೇಜನ್ನೆಲ್ಲ ಮರೆತೇಬಿಟ್ಟಿದ್ದೆ ಅನ್ನುವುದು ಜ್ಞಾಪಕ ಬಂತು. ನನ್ನ ಹತ್ತಿರ ಲಗೇಜು ಟಿಕೆಟ್ ಇತ್ತು. ಮತ್ತೆ ವಾಪಸ್ಸು ಹೋಗುವುದರಲ್ಲಿ ಅರ್ಥವಿಲ್ಲ ಅನ್ನಿಸಿತು. ಸುಮ್ಮನಾದೆ.
“ಎಷ್ಟೇ ಪ್ರಯತ್ನಪಟ್ಟರೂ ಆಗ ನನ್ನ ಮನಸ್ಸಿನ ಸ್ಥಿತಿ ಹೇಗಿತ್ತು ಎಂದು ನೆನಪಿಗೆ ಬರುವುದೇ ಇಲ್ಲ. ಏನು ಯೋಚನೆಮಾಡುತ್ತಿದ್ದೆ? ಏನು ಬೇಕಾಗಿತ್ತು ನನಗೆ? ಗೊತ್ತಿಲ್ಲ. ಏನೋ ಭಯಂಕರವಾದದ್ದು, ಮುಖ್ಯವಾದದ್ದು, ನನ್ನ ಬದುಕಿನಲ್ಲಿ ಇಷ್ಟರಲ್ಲೇ ನಡೆಯಲಿದೆ ಅಂತ ಮಾತ್ರ ಅನ್ನಿಸುತ್ತಿತ್ತು. ಹಾಗನ್ನಿಸಿದ್ದರಿಂದ ಅದು ನಡೆಯಿತೋ, ಅಥವಾ ನಡೆಯಲೇಬೇಕಾದದ್ದು ಮೊದಲೇ ಮನಸ್ಸಿಗೆ ಹೊಳೆದಿತ್ತೋ ಗೊತ್ತಿಲ್ಲ. ಬಹುಶಃ ಮನಸ್ಸು ಖಾಲಿಯಾಗಿತ್ತು. ನನಗೆ ಏನೇನಾಗುತ್ತಿತ್ತು ಅನ್ನುವುದೆಲ್ಲ ಆಮೇಲೆ ನನಗೆ ಹೊಳೆದದ್ದೂ ಇರಬಹುದು. ನಮ್ಮ ಫ್ಲ್ಯಾಟಿನ ಮುಂದಿನ ಬಾಗಿಲವರೆಗೂ ಹೋದೆ. ಮಧ್ಯರಾತ್ರಿ ದಾಟಿತ್ತು. ಕೆಲವು ಕುದುರೆಗಾಡಿಗಳವರು ಗೇಟಿನ ಹತ್ತಿರ ಕಾಯುತ್ತಿದ್ದರು. ನಮ್ಮ ಫ್ಲ್ಯಾಟಿನ ಡಾನ್ಸ್ ರೂಮು, ಡ್ರಾಯಿಂಗ್ ರೂಮಿನಲ್ಲಿ ದೀಪ ಉರಿಯುತ್ತಿತ್ತು. ಯಾರಾದರೂ ಬಾಡಿಗೆಗೆ ಬಂದಾರೆಂದು ಕಾಯುತ್ತಿದ್ದರು. ರಾತ್ರಿ ಇಷ್ಟು ಹೊತ್ತಾಗಿದ್ದರೂ ನಮ್ಮ ಮನೆಯ ಕಿಟಕಿಗಳಲ್ಲಿ ದೀಪ ಯಾಕಿದೆ ಎಂದು ಯೋಚನೆಮಾಡದೆ ಮಹಡಿ ಹತ್ತಿ ಹೋದೆ. ಏನೋ ಭಯಂಕರವಾದದ್ದು ಆಗುತ್ತದೆ ಅಂತ ನಿರೀಕ್ಷೆ ಮಾಡುತ್ತಾ ಇದ್ದೆ. ಬೆಲ್ ಮಾಡಿದೆ. ಮೆಲ್ಲಗೆ ಮಾತಾಡುವ ಮೂರ್ಖ ಜವಾನ ಯೆಗೋರ್ ಬಾಗಿಲು ತೆಗೆದ. ಬಾಗಿಲು ತೆಗೆದಕೂಡಲೆ ಸ್ಟಾಂಡಿನ ಮೇಲೆ ಇತರ ಕೋಟುಗಳ ಜೊತೆ ನೇತು ಹಾಕಿದ್ದ ಅವನ ಕೋಟು ಕಣ್ಣಿಗೆ ಬಿತ್ತು. ಆಶ್ಚರ್ಯ ಆಗಬೇಕಾಗಿತ್ತು. ಆಗಲಿಲ್ಲ. ಹೀಗಾಗುತ್ತದೆ ಅನ್ನುವ ನಿರೀಕ್ಷೆ ಇತ್ತು. ಕೋಟು ಯಾರದು ಅಂತ ಕೇಳಿದೆ. ಟ್ರುಕಾಚೆವ್ಸ್‌ಕಿಯವರದು ಅಂದ ಯೆಗೋರ್. ಇನ್ನೂ ಯಾರಾದರೂ ಇದ್ದಾರಾ ಅಂತ ಕೇಳಿದೆ. ಯಾರೂ ಇಲ್ಲ ಸಾರ್ ಅಂದ. ಇನ್ನೂ ಯಾರಾದರೂ ಇದ್ದಾರು ಅನ್ನುವ ನನ್ನ ಅನುಮಾನವನ್ನು ದೂರಮಾಡುತ್ತಿದ್ದೇನೆ ಅನ್ನುವ ಸಂತೋಷದಲ್ಲಿ ಮಾತಾಡುತ್ತಿದ್ದ. ‘ಅದೇ, ಅದೇ’ ಅಂದುಕೊಂಡೆ. ‘ಮಕ್ಕಳು?’ ‘ಎಲ್ಲಾ ಮಲಗಿ ಬಹಳ ಹೊತ್ತಾಯಿತು’ ಅಂದ. “ಉಸಿರಾಡುವುದು ಕಷ್ಟವಾಗುತ್ತಿತ್ತು. ಏನೇ ಮಾಡಿದರೂ ತುಟಿಗಳು ನಡುಗುತ್ತಿದ್ದವು. ‘ನಾನು ಅಂದುಕೊಂಡ ಹಾಗೆ ಇಲ್ಲ. ಏನೋ ಆಗುತ್ತದೆ ಅಂದುಕೊಂಡಿದ್ದಾಗ ಏನೂ ಆಗದೇ ಎಲ್ಲಾ ಸರಿಯಾಗಿರುತ್ತಿತ್ತು. ಈಗ ಯಾವಾಗಲೂ ಇದ್ದ ಹಾಗೆ ಇಲ್ಲ. ನಾನು ಅಂದುಕೊಂಡ ಹಾಗೇ ಇದೆ. ಬರೀ ಕಲ್ಪನೆ ಅಂದುಕೊಂಡಿದ್ದೆ. ಇಲ್ಲಿ ಎಲ್ಲಾ ನಿಜವಾಗಿಬಿಟ್ಟಿದೆ’ ಅಂದುಕೊಂಡೆ.
“ಅಳು ಬಂತು. ಕುಸಿದು ಬಿದ್ದು ಹೋಗುತ್ತೇನೆ ಅನ್ನಿಸಿತು. ತಟ್ಟನೆ ನನ್ನ ಕಿವಿಯಲ್ಲಿ ಯಾವುದೋ ದೆವ್ವ ಹೇಳಿತು-‘ಅಳು, ಬಿದ್ದು ಹೊರಳಾಡು. ಅಲ್ಲಿ ಅವರು ಕೆಲಸ ಮುಗಿಸಿ, ಸುಳಿವು ಒಂದಿಷ್ಟೂ ಉಳಿಸದೆ, ಹೊರಟುಹೋಗಿರುತ್ತಾರೆ. ನೀನು ಹೀಗೇ ಬದುಕಿರೋ ವರೆಗೂ ಗೋಳಾಡುತ್ತಾ ನರಳುತ್ತಾ ಇರು.’ ನನ್ನ ಬಗ್ಗೆ ನನಗೇ ಇದ್ದ ಮರುಕ ಮಾಯವಾಯಿತು. ವಿಚಿತ್ರವಾದ ಸಂತೋಷ ತುಂಬಿಕೊಂಡಿತು. ನಂಬುತ್ತೀರೋ ಇಲ್ಲವೋ, ಈ ಅನುಮಾನಕ್ಕೆಲ್ಲ ಕೊನೆ ಬಂತು, ಅವಳಿಗೆ ಶಿಕ್ಷೆ ಕೊಡುತ್ತೇನೆ, ತೊಲಗಿಸಿಬಿಡುತ್ತೇನೆ, ಕೋಪ ತೀರಿಸಿಕೊಳ್ಳುತ್ತೇನೆ ಅನ್ನುವ ಸಂತೋಷ ಮನಸ್ಸಿನಲ್ಲಿ. ಕ್ರೂರವಾದ ಚತುರ ಮೃಗವಾಗಿದ್ದೆ.
“ತಾಳು, ಹೋಗಬೇಡ ಅನ್ನುತ್ತಾ ಡ್ರಾಯಿಂಗ್‌ರೂಮಿಗೆ ಹೊರಟಿದ್ದ ಯಗೋರ್‌ನನ್ನು ನಿಲ್ಲಿಸಿದೆ. ‘ತಗೋ, ಈ ಲಗೇಜು ಟಿಕೀಟು, ಸ್ಟೇಷನ್ನಿಗೆ ಹೋಗಿ ಲಗೇಜು ತೆಗೆದುಕೊಂಡು ಬಾ, ಹೊರಗೆ ಗಾಡಿ ಕಾಯುತ್ತಾ ಇದೆ, ಹೊರಡು’ ಅಂದೆ. ಅವನು ಓವರ್‌ಕೋಟು ತೆಗೆದುಕೊಳ್ಳಲು ಹೊರಟ. ಅಕಸ್ಮಾತ್ತು ಅವರನ್ನೇನಾದರೂ ಎಬ್ಬಿಸಿ ಬಿಟ್ಟಾನು ಅಂದುಕೊಂಡು ಯಗೋರ್‌ನ ಹಿಂದೆಯೇ ಅವನ ಪುಟ್ಟ ರೂಮಿನವರೆಗೆ ಹೋಗಿ, ಕೋಟು ಹಾಕಿಕೊಳ್ಳುವವರೆಗೆ ಕಾದು ನಿಂತಿದ್ದೆ. ಡ್ರಾಯಿಂಗ್‌ ರೂಮಿನ ಆಚೆ, ಇನ್ನೊಂದು ಕೋಣೆಯಿಂದ ತಟ್ಟೆ,ಚಮಚ, ಚಾಕು, ಫೋರ್ಕುಗಳ ಶಬ್ದ ಕೇಳುತ್ತಿತ್ತು. ಊಟಮಾಡುತ್ತಾ ಇರಬೇಕು ಅವರು. ಬೆಲ್ಲು ಮಾಡಿದ್ದು ಕೇಳಿಸಲಿಲ್ಲವೆಂದು ಕಾಣುತ್ತದೆ. ‘ಈಗ ಅವರು ಹೊರಗೆ ಬರದೆ ಇದ್ದರೆ ಸಾಕು’ ಅನ್ನಿಸಿತು. ಯಗೋರ್ ಕೋಟು ಹಾಕಿಕೊಂಡ. ಅದಕ್ಕೆ ಅಸ್ಟ್ರಾಖಾನ್ ಕಾಲರು ಇತ್ತು. ಹೋದ. ಅವನ ಹಿಂದೆಯೇ ಹೋಗಿ ಬಾಗಿಲು ಹಾಕಿಕೊಂಡು ಬಂದೆ. ಒಬ್ಬನೇ ಇದ್ದೇನೆ, ಈಗಲೇ ಏನಾದರೂ ಮಾಡಬೇಕು ಅನ್ನಿಸಿ ಒಂದು ಥರಾ ದಿಗಿಲಾಯಿತು. ಏನು ಮಾಡಬೇಕು, ಹೇಗೆ ಅನ್ನುವುದು ಇನ್ನೂ ಗೊತ್ತಿರಲಿಲ್ಲ. ಎಲ್ಲಾ ಮುಗಿಯಿತು, ಅವಳು ತಪ್ಪು ಮಾಡಿರುವ ಬಗ್ಗೆ ಅನುಮಾನವೇ ಇಲ್ಲ, ಈಗಿಂದೀಗಲೇ ಶಿಕ್ಷೆ ಕೊಡುತ್ತೇನೆ, ಅವಳ ಜೊತೆ ಸಂಬಂಧ ಕಡಿದುಕೊಳ್ಳುತ್ತೇನೆ.
“ಮೊದಲೆಲ್ಲಾ ಅನುಮಾನಪಡುತ್ತಾ ‘ಇರಲಾರದು, ನಾನೇ ತಪ್ಪು ತಿಳಿದಿರಬಹುದು’ ಅಂದುಕೊಳ್ಳುತ್ತಾ ಏನೂ ಮಾಡದೆ ಸುಮ್ಮನೆ ಇದ್ದುಬಿಡುತ್ತಿದ್ದೆ. ಈಗ ಅಂಥ ಅನುಮಾನ ಸುಳಿಯಲೇ ಇಲ್ಲ. ಮನಸ್ಸು ಗಟ್ಟಿಯಾಗಿತ್ತು. ‘ನನಗೆ ಗೊತ್ತಾಗದ ಹಾಗೆ ಅವಳು ಅವನ ಜೊತೆ ರಾತ್ರಿ ಹೊತ್ತು ಒಬ್ಬಳೇ ಇದ್ದಾಳೆ! ಸ್ವಲ್ಪವಾದರೂ ಭಯ ಬೇಡವೆ, ಮಾನ ಮರ್ಯಾದೆ ಬೇಡವೆ! ಅಥವಾ ಮುಗ್ಧರು ಎಂದು ತೋರಿಸಿಕೊಳ್ಳುವುದಕ್ಕಾಗಿಯೇ ಹೀಗೆ ಧೈರ್ಯವನ್ನು ನಟಿಸುತ್ತಲೂ ಇರಬಹುದು. ಅನುಮಾನವೇ ಇಲ್ಲ.’ ನನಗೆ ಇದ್ದದ್ದು ಒಂದೇ ಯೋಚನೆ. ಏನಾದರೂ ಸುಳ್ಳು ನೆಪ ಹುಡುಕಿಕೊಂಡು, ಅವರ ಅಪರಾಧಕ್ಕೆ ಸಾಕ್ಷಿ ಇಲ್ಲದ ಹಾಗೆ ಮಾಡಿಬಿಟ್ಟರೆ, ಅವರ ತಪ್ಪನ್ನು ಪ್ರೂವ್ ಮಾಡುವ ಅವಕಾಶವೇ ಸಿಗದೆ ಹೋದರೆ ಅನ್ನುವ ಯೋಚನೆ. ಅವರು ತಪ್ಪು ಮಾಡುತ್ತಿರುವಾಗಲೇ ಹಿಡಿಯಬೇಕು ಎಂದು ಅವರು ಇದ್ದ ಡಾನ್ಸ್‌ ಹಾಲಿಗೆ ಹೋದೆ. ಡ್ರಾಯಿಂಗ್ ರೂಮಿನಿಂದ ಅಲ್ಲ, ಪ್ಯಾಸೇಜಿಗೆ ಹೋಗಿ, ಮಕ್ಕಳ ರೂಮನ್ನು ದಾಟಿ ಹೋದೆ.
“ಮೊದಲ ರೂಮಿನಲ್ಲಿ ಹುಡುಗರು ಮಲಗಿದ್ದರು. ಎರಡನೆಯ ರೂಮಿನಲ್ಲಿ ಆಯಾ ನಿದ್ರೆಯಲ್ಲಿ ಪಕ್ಕಕ್ಕೆ ಹೊರಳಿದಳು. ಇನ್ನೇನು ಎದ್ದಾಳು ಅನ್ನಿಸಿತು. ಇದೆಲ್ಲಾ ಗೊತ್ತಾದಾಗ ಅವಳು ಏನಂದುಕೊಳ್ಳಬಹುದು? ನನ್ನ ಬಗ್ಗೆ ನನಗೇ ಮರುಕ ಹುಟ್ಟಿ, ಕಣ್ಣೀರು ತಡೆಯಲಾರೆ ಅನ್ನಿಸಿ, ಮಕ್ಕಳನ್ನು ಎಬ್ಬಿಸಬಾರದೆಂದು, ತುದಿ ಬೆರಳಮೇಲೆ ಬೇಗ ಬೇಗ ಹೋಗಿ ನನ್ನ ಓದುವೆ ಕೋಣೆಗೆ ಸೇರಿ, ಸೋಫಾ ಮೇಲೆ ಬಿದ್ದು, ಅತ್ತುಬಿಟ್ಟೆ.
“ನಾನು, ಇಂಥಾ ಪ್ರಾಮಾಣಿಕ, ಇಂಥಾ ಮನೆತನಕ್ಕೆ ಸೇರಿದವನು...ಮದುವೆಯಾಗಿ ಹೀಗಿರಬೇಕು, ಹಾಗಿರಬೇಕು ಎಂದು ಜೀವನಪೂರ್ತಿ ಕನಸು ಕಂಡಿದ್ದೆನಲ್ಲಾ...ಅವಳಿಗೆ ಯಾವತ್ತೂ ಮೋಸ ಮಾಡಿರಲಿಲ್ಲವಲ್ಲಾ... ಈಗ, ಐದು ಮಕ್ಕಳ ತಾಯಿ! ಅವನು ಯಾವನಿಗೋ ಕೆಂಪು ತುಟಿ ಇದೆ ಅಂತ ಅವನನ್ನು ತಬ್ಬಿಕೊಂಡಿದ್ದಾಳಲ್ಲಾ!
“ಇಲ್ಲ. ಅವಳು ಮನುಷ್ಯಳೇ ಅಲ್ಲ. ನಾಯಿ, ತೀಟೆ ಹತ್ತಿದ ನಾಯಿ! ಪಕ್ಕದ ರೂಮಿನಲ್ಲೇ ಅವಳು ಹೆತ್ತ ಮಕ್ಕಳು ಮಲಗಿವೆ, ಆಹಾಹಾ, ಮಕ್ಕಳು ಅಂದರೆ ಪ್ರಾಣ ಅನ್ನುವ ಹಾಗೆ ಆಡುತ್ತಿದ್ದಳು! ಮತ್ತೆ, ನನಗೆ ಬರೆದ ಹಾಗೆ ಕಾಗದ ಬರೆಯುವುದಕ್ಕೆ ಎಷ್ಟು ಧೈರ್ಯ! ಈಗ ನಾಚಿಕೆ ಇಲ್ಲದೆ ಅವನ ಮೇಲೆ ಬಿದ್ದು ಹೊರಳಾಡುತ್ತಾ ಇದ್ದಾಳೆ. ಯಾರಿಗೆ ಗೊತ್ತು? ಯಾವಾಗಲೂ ಹೀಗೇ ಇದ್ದಳೋ ಏನೋ? ಈ ಮಕ್ಕಳು ಕೂಡ ಜವಾನನಿಗೆ ಹುಟ್ಟಿದವು ಇರಬಹುದು. ನಾನು ಸುಮ್ಮನೆ ನನ್ನ ಮಕ್ಕಳು ಅಂದುಕೊಂಡಿದ್ದೇನೆ! ನಾನು ನಾಳೆ ಏನಾದರೂ ಬಂದಿದ್ದಿದ್ದರೆ, ಅಚ್ಚುಕಟ್ಟಾಗಿ ತುರುಬು ಕಟ್ಟಿಕೊಂಡು, ಸೊಂಟ ಬಳುಕಿಸುತ್ತಾ ಹತ್ತಿರ ಬಂದು ಬಿನ್ನಾಣ ಮಾಡುತ್ತಿದ್ದಳು. (ಅವಳ ಆಕರ್ಷಕವಾದ ಮುಖದ ಒಂದೊಂದು ವಿವರವನ್ನೂ ಮನಸ್ಸು ದ್ವೇಷದಿಂದ ವಿವರ ವಿವರವಾಗಿ ಕಲ್ಪಿಸಿಕೊಂಡಿತು.) ಅಸೂಯೆಯ ಮೃಗ ನನ್ನ ಎದೆಯಲ್ಲೇ ಬಚ್ಚಿಟ್ಟುಕೊಂಡು ಇಂಚಿಂಚಾಗಿ ಕಿತ್ತು ಕಿತ್ತು ತಿನ್ನುತ್ತಿತ್ತು ನನ್ನ. ಆಯಾ ಏನಂದುಕೊಳ್ಳುತ್ತಾಳೆ? ಮತ್ತೆ ಯಗೋರ್? ಪುಟಾಣಿ ಲೀಸಾ! ಏನೋ ನಡೆಯುತ್ತಾ ಇದೆ ಎಂದು ಅವಳಿಗೆ ಆಗಲೇ ಗೊತ್ತು. ಎಂಥಾ ಸುಳ್ಳು, ಎಂಥಾ ಧೈರ್ಯ! ಇಂಥಾ ನಾಯಿ ಥರಾ ಪ್ರೀತಿ ನನಗೆ ಗೊತ್ತಿಲ್ಲವಾ’ ಅಂದುಕೊಂಡೆ.
“ಏಳಬೇಕು ಅನ್ನಿಸಿತು. ಆಗಲಿಲ್ಲ. ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ನಿಲ್ಲುವುದಕ್ಕೆ ಆಗಲಿಲ್ಲ. ‘ಹಾರ್ಟ್‌ ಅಟಾಕ್ ಆಗುತ್ತದೋ ಏನೋ. ನನ್ನ ಕೊಂದುಬಿಡುತ್ತಾಳೆ. ಅವಳಿಗೆ ಬೇಕಾಗಿರುವುದೂ ಅದೇ. ಸಾಯಿಸುವುದು ಅವಳಿಗೆ ಮಕ್ಕಳ ಆಟ. ಇಲ್ಲ, ನಾನೇ ಅವಳನ್ನ ಕೊಂದರೆ? ಇಲ್ಲ. ಸತ್ತು ಸುಖವಾಗಿದ್ದುಬಿಡುತ್ತಾಳೆ. ನಾನು ಇಲ್ಲಿ ನರಳುತ್ತಾ ಇರುವಾಗ ಅವರು ಅಲ್ಲಿ ಊಟಮಾಡುತ್ತಾ, ನಗುತ್ತಾ, ಇನ್ನೇನೇನೋ ಮಾಡುತ್ತಾ, ಥೂ. ನಾನು ಬಳಸಿದ ಹೆಂಗಸು ಅನ್ನುವ ಸಂಕೋಚವೂ ಇಲ್ಲ ಅವನಿಗೆ. ಅವಳ ಜೊತೆ ಮಜಾ ಮಾಡಿದರೆ ಆರೊಗ್ಯಕ್ಕೇನೂ ತೊಂದರೆ ಇಲ್ಲವಲ್ಲಾ, ಅವನಿಗೆ ಅಷ್ಟು ಸಾಕು. ಹೋದವಾರವೇ ಅವಳ ಕತ್ತು ಹಿಸುಕಿ ಸಾಯಿಸಿಬಿದಬೇಕಾಗಿತ್ತು.’ ಅವಳು ನನ್ನ ಕೋಣೆಗೆ ಬಂದಿದ್ದಾಗ ಕೈಗೆ ಸಿಕ್ಕಿದ್ದನ್ನೆಲ್ಲ ಎಸೆದು ರಂಪಮಾಡಿದ್ದೆನಲ್ಲಾ ಅದು ನೆನಪಿಗೆ ಬಂದಿತು. ನೆನಪಿಗೆ ಬಂದದ್ದು ಅಷ್ಟೇ ಅಲ್ಲ, ಆಗಿನಂತೆಯೇ ಈಗಲೂ ಸಿಕ್ಕಿದ್ದನ್ನೆಲ್ಲ ಎಸೆದು ಚೂರು ಚೂರು ಮಾಡಬೇಕು ಅನ್ನಿಸಿತು. ಏನಾದರೂ ಮಾಡಬೇಕು ಅನ್ನುವುದು ಬಿಟ್ಟು ಉಳಿದೆಲ್ಲ ಮನಸ್ಸಿನಿಂದ ಜಾರಿಹೋಯಿತು. ಪ್ರಾಣಿಯೇ ಆಗಲಿ, ಮನುಷ್ಯರೇ ಆಗಲಿ ಅಪಾಯ ಬಂದಾಗ ಉದ್ರೇಕಗೊಂಡು ಒಂದು ಕ್ಷಣವನ್ನೂ ವ್ಯರ್ಥಮಾಡದೆ, ಖಚಿತವಾಗಿ, ಸ್ಪಷ್ಟವಾಗಿ, ಏನು ಮಾಡಬೇಕೋ ಅದನ್ನೇ ಮಾಡುವುದುಂಟಲ್ಲ ನಾನೂ ಹಾಗೇ ಇದ್ದೆ.”
(ಮುಂದದುವರೆಯುವುದು)

Rating
No votes yet