ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತೆಂಟು

ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತೆಂಟು

“ನಿಮಗೆ ವಿಚಿತ್ರ ಅನ್ನಿಸಬಹುದು. ನನ್ನ ರೂಮಿನಿಂದ ಹೊರಟು, ಪರಿಚಿತವಾದ ರೂಮುಗಳನ್ನೆಲ್ಲ ಹಾದು ಹೋಗುತ್ತಿರುವಾಗ ‘ಏನೂ ಆಗಿಲ್ಲವೋ ಏನೋ’ ಅನ್ನುವ ಭಾವನೆ ಮತ್ತೆ ಹುಟ್ಟಿತು. ಔಷಧಿಗಳ ವಾಸನೆ ಮೂಗು ತುಂಬಿತು. ‘ಇಲ್ಲ, ಕೊಲೆ ಆಗಿದೆ’ ಅಂದುಕೊಂಡೆ. ಪ್ಯಾಸೇಜು ದಾಟಿ ಮಕ್ಕಳ ರೂಮಿನ ಮುಂದೆ ಹೋಗುವಾಗ ಪುಟ್ಟ ಲೀಸಾ ಕಾಣಿಸಿದಳು. ಅವಳಿಗೆ ಭಯ ಆಗಿತ್ತು. ನನ್ನ ಐದೂ ಜನ ಮಕ್ಕಳು ಅಲ್ಲೇ ಇದ್ದಾರೆ, ನನ್ನೇ ನೋಡುತ್ತಿದ್ದಾರೆ ಅನ್ನಿಸಿತು. ಬೆಡ್ ರೂಮಿನ ಹತ್ತಿರ ಬಂದೆ. ನರ್ಸು ಬಾಗಿಲು ತೆರೆದು, ನಾನು ಒಳಗೆ ಕಾಲಿಟ್ಟಕೂಡಲೆ ಹೊರಟು ಹೋದಳು. ಮೊದಲು ನನ್ನ ಕಣ್ಣಿಗೆ ಬಿದ್ದದ್ದು ಕುರ್ಚಿಯ ಮೇಲೆ ಹಾಕಿದ್ದ ಅವಳ ಲೈಟ್ ಕಲರಿನ ಡ್ರೆಸ್ಸು. ರಕ್ತಮೆತ್ತಿಕೊಂಡಿತ್ತು. ಯಾವಾಗಲೂ ಗೋಡೆಯ ಕಡೆ ಮಲಗುತ್ತಿದ್ದವಳು ಈಗ ನಮ್ಮ ಡಬಲ್ ಬೆಡ್ಡಿನ ನನ್ನ ಬದಿಯಲ್ಲಿ ಮೊಳಕಾಲು ಮೇಲೆತ್ತಿ ಮಡಿಸಿಕೊಂಡು ಮಲಗಿದ್ದಳು. ನಾಲ್ಕೈದು ದಿಂಬುಗಳನ್ನಿಟ್ಟು ಅದಕ್ಕೆ ಅವಳ ಬೆನ್ನು ಒರಗಿಸಿದ್ದರು. ಡ್ರೆಸಿಂಗ್ ಜಾಕೆಟ್ಟು ಸಡಿಲ ಮಾಡಿದ್ದರು. ಗಾಯಕ್ಕೆ ಏನೋ ಹಾಕಿ ಸುತ್ತಿದ್ದರು. ಅಯೋಡೀನ್ ವಾಸನೆ ರೂಮಿನ ತುಂಬ ಇತ್ತು. ಅವಳ ಕೆನ್ನೆ, ಮೂಗಿನ ಒಂದು ಭಾಗ, ಮತ್ತೆ ಒಂದು ಕಣ್ಣು ಊದಿಕೊಂಡಿತ್ತು. ಅವಳು ನನ್ನನ್ನು ಹಿಂದಕ್ಕೆ ಎಳೆದಾಗ ನನ್ನ ಮೊಳಕೈ ತಗುಲಿ ಆದ ಪೆಟ್ಟು ಅದು. ಅವಳ ಮುಖ ಚೆನ್ನಾಗಿರಲಿಲ್ಲ. ಅಸಹ್ಯ ಆಗುವ ಹಾಗೆ ಇತ್ತು. ಹೊಸ್ತಿಲ ಮೇಲೆ ನಿಂತುಕೊಂಡೆ.
“ಅವಳ ಅಕ್ಕ ‘ಹತ್ತಿರ ಹೋಗಿ’ ಅಂದಳು. ‘ಕ್ಷಮಿಸಿ ಅಂತ ಕೇಳುತ್ತಾಳೋ ಏನೋ. ಕ್ಷಮಿಸಲಾ? ಸಾಯುತ್ತಿದ್ದಾಳೆ, ಕ್ಷಮಿಸಿಬಿಡುತ್ತೇನೆ’ ಅಂದುಕೊಂಡೆ. ಉದಾರವಾಗಿರಬೇಕು ಅಂತ ತೀರ್ಮಾನ ಮಾಡಿದ್ದೆ. ಹತ್ತಿರಕ್ಕೆ ಹೋದೆ. ಕಷ್ಟಪಟ್ಟು ಕಣ್ಣು ತೆರೆದಳು. ಒಂದು ಕಣ್ಣು ಊದಿತ್ತು. ಕಷ್ಟಪಡುತ್ತಾ, ತಡವರಿಸುತ್ತಾ ಮಾತಾಡಿದಳು. ‘ನಿಮ್ಮ ಹಟ ಸಾಧಿಸಿಬಿಟ್ಟಿರಿ. ಕೊಂದುಬಿಟ್ಟಿರಿ ನನ್ನ.’ ಸಾವಿಗೆ ಅಷ್ಟು ಹತ್ತಿರ ಇದ್ದರೂ, ನೋವನ್ನೂ ಮೀರಿ ನನಗೆ ಚಿರಪರಿಚಿತವಾದ ಅವಳ ಮೃಗೀಯ ದ್ವೇಷ ಕಾಣಿಸಿಕೊಂಡಿತು. ‘ಮಕ್ಕಳು...ನಿಮ್ಮ ಹತ್ತಿರ ಬಿಡಲ್ಲ...’ ಅಕ್ಕನತ್ತ ನೋಡಿದಳು, ‘ಅವಳು...ಕರಕೊಂಡು ಹೋಗುತ್ತಾಳೆ’ ಅಂದಳು. ನನಗೆ ಬಹಳ ಮುಖ್ಯ ಅನ್ನಿಸಿದ್ದ ಅವಳ ಮೋಸ, ಅಪರಾಧ-ಅವು ಮಾತಾಡುವುದಕ್ಕೇ ಯೋಗ್ಯವಲ್ಲ ಅನ್ನಿಸಿತ್ತು ಅವಳಿಗೆ.
‘ನನಗೆ ಇಂಥಾ ಗತಿ ಬಂತಲ್ಲಾ ಅಂತ ಖುಷಿ ಪಡಿ’ ಅನ್ನುತ್ತಾ ಬಾಗಿಲ ಕಡೆಗೆ ನೋಡಿದಳು. ಬಿಕ್ಕಳಿಸಿದಳು. ಬಾಗಿಲ್ಲಿ ಅವಳ ಅಕ್ಕ ಮಕ್ಕಳನ್ನು ನಿಲ್ಲಿಸಿಕೊಂಡಿದ್ದಳು. ‘ಎಂಥಾ ಕೆಲಸ ಮಾಡಿದ್ದೀರಿ ನೋಡಿ’ ಅಂದಳು.

“ಮಕ್ಕಳನ್ನು ನೋಡಿದೆ. ಊದಿಕೊಂಡ ಅವಳ ಮುಖ ನೋಡಿದೆ. ಮೈಮರೆತುಬಿಟ್ಟೆ. ನಾನು, ನನ್ನ ಹಕ್ಕು, ನನ್ನ ಜಂಬ, ಎಲ್ಲ ಮರೆಯಾಗಿದ್ದವು. ಅವಳು ಮನುಷ್ಯಳಾಗಿ ಕಂಡಿದ್ದಳು. ನನ್ನ ಅಹಂಕಾರಕ್ಕೆ ಪೆಟ್ಟು ಕೊಟ್ಟಿದ್ದ ಎಲ್ಲ ಸಂಗತಿಗಳು, ನನ್ನ ಅಸೂಯೆ ಎಲ್ಲವೂ ಕ್ಷುಲ್ಲಕ ಅನ್ನಿಸಿದವು. ನಾನು ಮಾಡಿದ್ದು ಎಂಥ ಅಗಾಧವಾದ ಕೆಲಸ ಅಂತ ಗೊತ್ತಾಯಿತು. ಅವಳ ಕಾಲಿಗೆ ಬಿದ್ದು, ಅವಳ ಕೈಗೆ ನನ್ನ ಮುಖ ಒತ್ತಿ “ಕ್ಷಮಿಸು” ಅಂತ ಕೇಳಬೇಕು ಅನ್ನಿಸಿತು. ಧೈರ್ಯ ಬರಲಿಲ್ಲ.
“ಸುಮ್ಮನೆ ಕಣ್ಣು ಮುಚ್ಚಿಕೊಂಡು ಮಲಗಿದ್ದಳು. ಮಾತಾಡುವುದಕ್ಕೆ ಶಕ್ತಿ ಇರಲಿಲ್ಲ. ಅವಳ ಮುಖದ ಮಾಂಸಖಂಡಗಳು ಅದುರಿದವು. ಮುಖ ಹಿಂಡಿಕೊಂಡಳು. ಆಯಾಸಪಡುತ್ತಾ ನನ್ನ ಕೈಯನ್ನು ದೂರಕ್ಕೆ ನೂಕಿದಳು.
“ಯಾಕೆ ಹೀಗಾಯಿತು? ಯಾಕೆ? ಅಂದಳು.
“ಕ್ಷಮಿಸಿಬಿಡು, ಅಂದೆ.
“ಕ್ಷಮೆ? ನಾನ್‌ಸೆನ್ಸ್...ನಾನು ಸಾಯದೆ ಇದ್ದರೆ...ಅರ್ಧ ಮುಂದಕ್ಕೆ ಬಗ್ಗಿ ನನ್ನ ಕಣ್ಣನ್ನೇ ನೋಡುತ್ತಾ ‘ಐ ಹೇಟ್ ಯೂ’ ಅಂದಳು. ಸನ್ನಿ ಹಿಡಿವಳಂತೆ ಬಡಬಡಿಸಿದಳು. ಯಾವ ಭಯ ಅವಳನ್ನು ಮುತ್ತಿತ್ತೊ...’ಶೂಟ್! ನನಗೇನೂ ಭಯಾ ಇಲ್ಲ!...ಎಲ್ಲಾರನ್ನೂ ಸಾಯಿಸಿಬಿಡು...! ಹೊರಟು ಹೋದ...! ಹೋಗಿಬಿಟ್ಟ...!’
“ಅದೇ ಸ್ಥಿತಿಯಲ್ಲಿದ್ದುಬಿಟ್ಟಳು. ನಮ್ಮನ್ನು ಯಾರನ್ನೂ ಗುರುತು ಹಿಡಿಯಲಿಲ್ಲ. ಅವತ್ತು ಮಧ್ಯಾಹ್ನದ ಹೊತ್ತಿಗೆ ಹೋಗಿಬಿಟ್ಟಳು. ಅದಕ್ಕೆ ಮೊದಲೇ ನನ್ನನ್ನು ಪೋಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಜೈಲಿಗೆ. ಕೇಸಿನ ವಿಚಾರಣೆಗೆ ಕಾಯುತ್ತಾ ಹನ್ನೊಂದು ತಿಂಗಳು ಜೈಲಿನಲ್ಲಿದ್ದೆ. ನಾನು, ನನ್ನ ಸ್ವಭಾವ, ನನ್ನ ಬದುಕು ಎಲ್ಲಾದರ ಬಗ್ಗೆ ಯೋಚನೆಮಾಡಿದೆ. ಮೂರನೆಯ ದಿನ ಅರ್ಥ ಆಯಿತು. ಅವತ್ತು ನನ್ನ ಅಲ್ಲಿಗೆ ಕರೆದುಕೊಂಡು ಹೋಗಿದ್ದರು.”
ಮುಂದುವರೆಸಬೇಕು ಅಂದುಕೊಂಡರೂ ಬಿಕ್ಕಳಿಕೆ, ಅಳು ತಡೆಯಲಾಗಲಿಲ್ಲ ಅವನಿಗೆ. ಸ್ವಲ್ಪ ಹೊತ್ತು ಅತ್ತು, ಮತ್ತೆ ಮುಂದುವರೆಸಿದ.
“ಅವಳನ್ನು ಕಾಫಿನ್ನಿನಲ್ಲಿ ಮಲಗಿಸಿದ್ದರಲ್ಲ, ಆಗ ಗೊತ್ತಾಯಿತು...”
ಮತ್ತೆ ಬಿಕ್ಕಳಿಸಿದ.
“ಹೆಣದ ಮುಖ ನೋಡಿದಾಗ ಎಂಥಾ ಕೆಲಸ ಮಾಡಿದೆ ಅಂತ ಗೊತ್ತಾಯಿತು. ನಾನು, ನಾನೇ, ನಾನೇ ಅವಳನ್ನ ಕೊಂದುಬಿಟ್ಟಿದ್ದೆ. ನಾನು ಕೊಲೆಮಾಡಿದ್ದರಿಂದಲೇ ಅವಳು, ಓಡಾಡುತ್ತಾ, ಮಾತಾಡುತ್ತಾ, ಜಗಳವಾಡುತ್ತಾ, ನಗುತ್ತಾ, ಜೀವಂತವಾಗಿದ್ದ ಅವಳು ಈಗ ತಣ್ಣಗೆ, ಮೈ ಸೆಟೆದು, ಹೆಣವಾಗಿ ಮಲಗಿದ್ದಾಳೆ. ಇನ್ನು ಎಂದಿಗೂ ಎಲ್ಲೂ ಯಾರಿಂದಲೂ ಇದಕ್ಕೆ ಪರಿಹಾರ ಇಲ್ಲ...ಅನುಭವಿಸಿದವರಿಗೇ ಗೊತ್ತಾಗುತ್ತದೆ...ಅಯ್ಯೋ! ಅಯ್ಯೋ!” ಅತ್ತು ಸುಮ್ಮನಾದ.
ಬಹಳ ಹೊತ್ತು ಸುಮ್ಮನೆ ಕೂತಿದ್ದೆವು. ಬಿಕ್ಕಳಿಸುತ್ತಿದ್ದ. ಅವನ ಮೈ ಅದುರುತ್ತಿತ್ತು. ಮಾತಿಲ್ಲದೆ ಕೂತಿದ್ದ. ಮುಖ ಇಳಿಬಿದ್ದಿತ್ತು. ತುಟಿ ಬಿಗಿದಿತ್ತು.
ಇದ್ದಕ್ಕಿದ್ದ ಹಾಗೆ “ಹೌದು, ಈಗ ಗೊತ್ತಿರುವುದೆಲ್ಲ ಆಗಲೇ ಗೊತ್ತಿದ್ದಿದ್ದರೆ ಎಲ್ಲಾ ಬೇರೆ ಥರ ಇರುತ್ತಿತ್ತು. ಏನು ಕೊಟ್ಟಿದ್ದರೂ ಅವಳನ್ನು ಮದುವೆ ಆಗುತ್ತಿರಲಿಲ್ಲ. ನಾನು ಮದುವೆ ಆಗಲೇಬಾರದಾಗಿತ್ತು” ಅಂದ.
ಮತ್ತೆ ಕೊಂಚ ಹೊತ್ತು ಮೌನವಾಗಿದ್ದ.
“ಕ್ಷಮಿಸಿ” ಅನ್ನುತ್ತಾ ನನ್ನತ್ತ ಬೆನ್ನು ತಿರುಗಿಸಿ, ಕಂಬಳಿ ಎಳೆದುಕೊಂಡು ಸೀಟಿನ ಮೇಲೆ ಉದ್ದವಾಗಿ ಮಲಗಿಬಿಟ್ಟ. ಬೆಳಗಿನ ಎಂಟು ಗಂಟೆಯ ವೇಳೆಗೆ ನಾನು ಇಳಿಯುವ ಸ್ಟೇಷನ್ನು ಬಂತು. ಅವನಿಗೆ ಹೇಳಿಬಿಟ್ಟು ಇಳಿಯೋಣ ಎಂದು ಅವನ ಹತ್ತಿರಕ್ಕೆ ಹೋದೆ. ಅವನು ಮಲಗಿದ್ದನೋ, ನಿದ್ದೆ ಬಂದಿರುವ ಹಾಗೆ ನಟನೆ ಮಾಡುತ್ತಿದ್ದನೋ ಗೊತ್ತಾಗಲಿಲ್ಲ. ಅವನ ಭುಜ ತಟ್ಟಿದೆ. ಕಂಬಳಿ ಎಸೆದು ಕಣ್ಣು ತೆರೆದ. ಅವನು ಮಲಗಿಯೇ ಇರಲಿಲ್ಲ ಅನ್ನುವುದು ಮುಖ ನೋಡಿದ ಕೂಡಲೆ ತಿಳಿಯಿತು.
“ಗುಡ್ ಬೈ” ಅಂದೆ. ನನ್ನ ಕೈ ಮುಂದೆ ಚಾಚಿದೆ. ಅವನು ನನ್ನ ಕೈ ಹಿಡಿದು ಒಂದಿಷ್ಟೆ ನಕ್ಕ. ಅದನ್ನು ನೋಡಿ ನನ್ನ ಕಣ್ಣು ತುಂಬಿ ಬಂದಿತು.
ಕಥೆ ಮುಗಿಸುತ್ತಾ ಹೇಳಿದ ಮಾತನ್ನೆ ಮತ್ತೆ ಹೇಳಿದ: “ಕ್ಷಮಿಸಿಬಿಡಿ.”
(ಮುಗಿಯಿತು)

Rating
No votes yet