ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತೈದು

ಕ್ರೂಟ್ಸರ್ ಸೊನಾಟಾ:ಅಧ್ಯಾಯ ಇಪ್ಪತ್ತೈದು

ಅಧ್ಯಾಯ ಇಪ್ಪತ್ತೈದು
ಕಂಡಕ್ಟರು ಬಂದ. ನಮ್ಮ ಮೇಣದ ಬತ್ತಿ ಉರಿದು ಚಿಕ್ಕದಾಗಿರುವುದನ್ನು ಕಂಡು ಆರಿಸಿದ. ಹೊಸ ಮೇಣದ ಬತ್ತಿ ಕೊಡಲಿಲ್ಲ. ಬೆಳಕು ಹರಿಯುತ್ತಿತ್ತು. ಅವನು ನಮ್ಮ ಬೋಗಿಯಲ್ಲಿರುವಷ್ಟು ಹೊತ್ತು ಪಾಸ್‌ಡ್ನಿಶೆವ್ ಸುಮ್ಮನೆ ಕೂತಿದ್ದ. ದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದ. ಅವನು ಹೋದಮೇಲೆ ಕಥೆ ಮತ್ತೆ ಮುಂದುವರೆಸಿದ. ಅರೆಗತ್ತಲು ಅರೆಬೆಳಕಿನಲ್ಲಿ ಅವನ ಮುಖ ಕಾಣುತ್ತಿರಲಿಲ್ಲ. ಕಿಟಕಿಗಳ ಕಟಕಟ ಸದ್ದು, ರೈಲಿನ ಲಯಬದ್ದ ಓಲಾಟ, ಮಲಗಿದ್ದ ಕ್ಲಾರ್ಕಿನ ಗೊರಕೆ ಇವು ಮಾತ್ರ ಕೇಳುತ್ತಿದ್ದವು. ಪಾಡ್ನಿಶೆವ್ನ ಧ್ವನಿಯಲ್ಲಿ ನೋವು ತುಂಬಿತ್ತು, ಗಂಭೀರವಾಗಿತ್ತು, ಸ್ವಲ್ಪ ಉದ್ರೇಕವೂ ಇತ್ತು.
“ಇಪ್ಪತ್ತನಾಲ್ಕು ಮೈಲಿ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡಿದೆ. ಆಮೇಲೆ ರೈಲಿನಲ್ಲಿ ಎಂಟು ಗಂಟೆ. ಗಾಡಿಯ ಪ್ರಯಾಣ ತುಂಬ ಖುಷಿಯಾಯಿತು. ಇಬ್ಬನಿ ಇತ್ತು. ತಣ್ಣನೆ ಗಾಳಿ. ಸೂರ್ಯ ಥಳಥಳಾ. ಗಾಡಿಯ ಗಾಲಿಯ ಗುರುತು ಮೆತ್ತನೆ ರಸ್ತೆಯಮೇಲೆ ಮೂಡುವಂಥ ಬೆಳಗಿನ ಹೊತ್ತು. ಬೆಳಕು ಹೆಚ್ಚಿದಂತೆ ನನ್ನ ಮನಸ್ಸು ಹಗುರವಾಗುತ್ತಿತ್ತು. ಗಾಡಿಗೆ ಕಟ್ಟಿದ್ದ ಕುದುರೆಗಳು, ಮನೆಗಳು, ಹೊಲಗಳು, ದಾರಿಯಲ್ಲಿ ಎದುರಾಗುವ ಜನ, ನಾನು ಎಲ್ಲಿಗೆ ಹೋಗುತ್ತಿದ್ದೇನೆ ಅನ್ನುವುದೇ ಮರೆತು ಹೋಯಿತು. ಸುಮ್ಮನೆ ಹೀಗೇ ಹೋಗುತ್ತಿದ್ದೇನೆ, ಯಾವ ಕಾರಣಕ್ಕೆ ಮನೆಗೆ ಧಾವಿಸುತ್ತಿದ್ದೇನೋ ಅದು ಬರೀ ಊಹೆ, ಅಂಥದ್ದೇನೂ ಇಲ್ಲ ಅನ್ನಿಸುತ್ತಿತ್ತು. ಈ ಮರೆವು ಸಂತೋಷ ತಂದಿತ್ತು. ಎಲ್ಲಿಗೆ ಹೋಗುತ್ತಿದ್ದೇನೆ ಅನ್ನುವುದು ಮನಸ್ಸಿಗೆ ಬಂದಾಗ, ‘ಅದನ್ನು ಈಗಲೇ ಯಾಕೆ ಯೋಚನೆಮಾಡುವುದು, ಎಲ್ಲಾ ಸರಿಹೋಗುತ್ತದೆ, ಅಲ್ಲಿಗೆ ಹೋದಾಗ ನೋಡೋಣ, ಸುಮ್ಮನೆ ಚಿಂತೆ ಬೇಡ’ ಅಂದುಕೊಳ್ಳುತ್ತಿದ್ದೆ. ರೈಲು ಸ್ಟೇಷನ್ನಿಗೆ ಅರ್ಧ ದಾರಿ ಹೋಗಿದ್ದೆ ಅನ್ನುವಾಗ ನಮ್ಮ ಗಾಡಿ ಮುರಿದು ಹೋಯಿತು. ರಿಪೇರಿ ಮಾಡುವವರೆಗೆ ಕಾದಿರಬೇಕಾಯಿತು. ಅದರಿಂದ ಏನೇನೆಲ್ಲ ಆಯಿತು...ನಾನು ಹಿಡಿಯಬೇಕಿದ್ದ ಎಕ್ಸ್‌ಪ್ರೆಸ್ ತಪ್ಪಿ ಹೋಗಿ ಮೇಲ್ ಗಾಡಿ ಹತ್ತಬೇಕಾಯಿತು; ಸಂಜೆ ಐದಕ್ಕೆ ಮಾಸ್ಕೋ ತಲುಪುವ ಬದಲಾಗಿ ಮಧ್ಯ ರಾತ್ರಿ ಮೀರಿದಮೇಲೆ ಹೋಗಿ ಸೇರುವಹಾಗಾಯಿತು.
“ಗಾಡಿಯ ರಿಪೇರಿ, ಅದು ಆಗುವವರೆಗೆ ಕಾದದ್ದು, ದಾರಿ ಪಕ್ಕದ ಹೋಟೆಲಿನಲ್ಲಿ ಊಟಮಾಡಿದ್ದು, ಹೋಟೆಲಿನವನ ಜೊತೆ ಹರಟೆ ಹೊಡೆದದ್ದು, ಇವೆಲ್ಲ ನನ್ನ ಗಮನವನ್ನು ಮತ್ತೂ ಎಲ್ಲೆಲ್ಲೋ ಚೆದುರಿಸಿದವು. ಮತ್ತೆ ಹೊರಡುವ ವೇಳೆಗೆ ಬಿಸಿಲು ಇಳಿದಿತ್ತು. ಪ್ರಯಾಣ ಹಿತವಾಗಿತ್ತು. ಸಣ್ಣಗೆ ಇಬ್ಬನಿ ಬೀಳುತ್ತಿತ್ತು. ಅಮಾವಾಸ್ಯೆಯ ಮುಸ್ಸಂಜೆ. ಒಳ್ಳೆಯ ರಸ್ತೆ, ಒಳ್ಳೆಯ ಕುದುರೆ, ಗಾಡಿಹ ಒಡೆಯುತ್ತಿದ್ದ ಒಳ್ಳೆಯ ಹರಟೆಮಲ್ಲ; ಮನೆಗೆ ಹೋದಾಗ ಏನು ಕಾದಿದೆ ಅನ್ನುವುದನ್ನೂ ಮರೆತು, ಅಥವಾ ಏನು ಆಗುತ್ತದೆ ಎಂದು ಗೊತ್ತಿದ್ದರಿಂದಲೇ ಬದುಕಿನ ಈ ಖುಷಿಗಳ ರುಚಿಯನ್ನು ಕೊನೆಯ ಬಾರಿಗೆ ನೋಡಿಬಿಡಬೇಕೆಂದು, ಒಂದೊಂದು ಕ್ಷಣವನ್ನೂ ಎನ್‌ಜಾಯ್‌ಮಾಡುತ್ತಿದ್ದೆ.
“ರೈಲು ಹತ್ತುತ್ತಿದ್ದ ಹಾಗೇ ಈ ಸಮಾಧಾನ ಸತ್ತುಹೋಯಿತು. ರೈಲಿನಲ್ಲಿ ಮಾಡಿದ ಎಂಟು ಗಂಟೆಗಳ ಪ್ರಯಾಣ ನಾನು ಬದುಕಿರುವವರೆಗೂ ಮರೆಯಲಾರೆ. ರೈಲಿನ ಬೋಗಿ ಹತ್ತಿ ಕೂತ ತಕ್ಷಣವೇ ನಾನು ಆಗಲೇ ಮನೆಗೆ ಹೋಗಿ ತಲುಪಿಬಿಟ್ಟಿದ್ದೇನೆ ಅನ್ನಿಸುವುದಕ್ಕೆ ಶುರುವಾಯಿತು. ಪ್ರಯಾಣವೇ ಹೀಗೆ. ಮನಸ್ಸಿಗೆ ಏನೇನೋ ಯೋಚನೆಗಳು ಬರುತ್ತವೆ. ರೈಲಿನಲ್ಲಿ ಕೂತ ಕ್ಷಣದಿಂದ ಮನಸ್ಸಿನ ಮೇಲೆ ಹಿಡಿತ ತಪ್ಪಿ ಹೋಯಿತು. ನನ್ನ ಅಸೂಯೆಯ ಬೆಂಕಿ ಹೊತ್ತಿ ಉರಿಯುವಹಾಗೆ ಮಾಡುವಂಥ ನೂರಾರು ಚಿತ್ರಗಳು, ಒಂದಕ್ಕಿಂತ ಒಂದು ಅಶ್ಲೀಲವಾದವು, ಒಂದೇ ಸಮನೆ, ಅತ್ಯಂತ ಸ್ಪಷ್ಟವಾಗಿ, ಖಚಿತವಾಗಿ, ಮನಸ್ಸಿನಲ್ಲಿ ಮೂಡುತ್ತಿದ್ದವು. ನಾನು ಇಲ್ಲದಿರುವಾಗ ಅವಳೇನು ಮಾಡಿರಬಹುದು, ನನಗೆ ಹೇಗೆ ಮೋಸಮಾಡಿರಬಹುದು ಅನ್ನುವ ಚಿತ್ರಗಳು. ಕೋಪದಿಂದ ಕುದಿಯುತ್ತಿದ್ದೆ, ಅವಮಾನದಿಂದ ನಾಚಿಕೆಯಿಂದ ನರಳುತ್ತಿದ್ದೆ, ಈ ನರಳಾಟವನ್ನು ಸುಖಿಸುತ್ತಲೂ ಇದ್ದೆ, ಮನಸ್ಸು ಮೂಡಿಸಿದ ಚಿತ್ರಗಳನ್ನು ಕಣ್ಣು ಕೀಳದೆ ದಿಟ್ಟಿಸುತ್ತಿದ್ದೆ, ಅವನ್ನು ಅಳಿಸಲಾರದವನಾಗಿ, ಕಂಡ ಚಿತ್ರಗಳಿಗೆ ಮತ್ತಷ್ಟು ವಿವರ ಸೇರಿಸಿಕೊಳ್ಳುತ್ತಾ ಇದ್ದೆ. ಆ ಕಲ್ಪನೆಯ ಚಿತ್ರಗಳನ್ನು ನೋಡಿಕೊಂಡಷ್ಟೂ ಅವು ನಿಜವೇ ಹೌದು ಅನ್ನುವ ನಂಬಿಕೆ ಬೆಳೆಯುತ್ತಿತ್ತು. ಅವು ಹಾಗೆ ತೀರ ಸ್ಪಷ್ಟವಾಗಿ ಕಾಣುತ್ತಿರುವುದೇ ಅವು ಸತ್ಯ ಅನ್ನುವುದಕ್ಕೆ ಸಾಕ್ಷಿ ಎಂದು ತಿಳಿದೆ. ಯಾವುದೋ ದೆವ್ವ ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಕಿವಿಯಲ್ಲಿ ಭಯಂಕರವಾದ ವಿಚಾರಗಳನ್ನು ಪಿಸುಗುಡುತ್ತಿತ್ತು. ಎಷ್ಟೋ ವರ್ಷಗಳ ಹಿಂದೆ ಟ್ರುಕಾಶೆವ್ಸ್‌ಕಿಯ ಅಣ್ಣನ ಜೊತೆ ಆಡಿದ್ದ ಮಾತುಗಳು ನೆನಪಿಗೆ ಬಂದವು. ಅವನ್ನೆಲ್ಲ ಟ್ರುಕಾಶೆವ್ಸ್‌ಕಿ ಮತ್ತು ನನ್ನ ಹೆಂಡತಿಗೆ ಅಪ್ಲೈಮಾಡಿಕೊಂಡು ನನ್ನ ಮನಸ್ಸನ್ನು ನಾನೇ ಹಿಂಡಿಕೊಂಡೆ.
“ಟ್ರುಕಾಶೆವ್ಸ್‌ಕಿಯ ಅಣ್ಣ ಒಂದು ಸಾರಿ ಸಿಕ್ಕಿದ್ದ. ‘ಏನಯ್ಯಾ, ಸೂಳೆಯರ ಮನೆಗೆ ಹೋಗುತ್ತೀಯಾ?’ ಅಂತ ಕೇಳಿದ್ದಕ್ಕೆ, ‘ಅಂಥಾ ಕಡೆಗೆ ನಮ್ಮಂಥವರು ಹೋದರೆ ಹೆಸರೂ ಹಾಳು, ಆರೋಗ್ಯವೂ ಹಾಳು, ಕೊಳಕು ಜಾಗ ಅದು. ಬೇಕು ಅನ್ನಿಸಿದಾಗ ಮರ್ಯಾದಸ್ಥರಾದ ಮದುವೆಯಾದ ಹೆಂಗಸರೇ ಸಿಗುತ್ತಾರೆ’ ಅಂದಿದ್ದ. ಈಗ ನೋಡಿದರೆ ಅವನ ತಮ್ಮನಿಗೆ ನನ್ನ ಹೆಂಡತಿ ಸಿಕ್ಕಿದ್ದಳು. ‘ನಿಜ. ಅವಳೇನೂ ಈಗ ಪ್ರಾಯಕ್ಕೆ ಬಂದವಳಲ್ಲ. ಸ್ವಲ್ಪ ದಪ್ಪ ಅನ್ನಿಸುವ ಹಾಗೆ ಇದ್ದಾಳೆ, ಎಡಗಡೆ ದವಡೆಯ ಪಕ್ಕದ ಹಲ್ಲು ಬಿದ್ದು ಹೋಗಿದೆ, ಆದರೇನಂತೆ, ಸಿಕ್ಕಿದವಳನ್ನೇ ಮಜಾ ಮಾಡಿದರೆ ಆಯಿತು. ಹೇಗಿದ್ದರೂ ಕಾಯಿಲೆಯ ಭಯ ಇಲ್ಲ. ನಾನು ಇಟ್ಟುಕೊಂಡಿದ್ದೇನಲ್ಲಾ ಅದಕ್ಕೆ ಅವಳು ಹೆಮ್ಮೆಪಡಬೇಕು’ ಅಂತ ಅವನು ಅಂದುಕೊಳ್ಳುತ್ತಿರಬಹುದು ಅಂದುಕೊಂಡೆ.
“ನನ್ನ ಇನ್ನೊಂದು ಮನಸ್ಸು ‘ಇಲ್ಲ, ಹೀಗೆಲ್ಲ ಯೋಚನೆಮಾಡಬಾರದು, ಅಂಥದೇನೂ ಆಗಿರುವುದಿಲ್ಲ, ಅಂಥಾವನ ಮಟ್ಟಕ್ಕೆ ಇಳಿಯುತ್ತೇನಾ ಅಂತ ಆಕೆ ಕೇಳಿರಲಿಲ್ಲವಾ?’ ಅಂದುಕೊಂಡಿತು. ಹೇಳಿದ್ದಳು. ಸುಳ್ಳು ಯಾಕೆ ಹೇಳಿರಬಾರದು. ಎಷ್ಟೊಂದು ಸಲ ಸುಳ್ಳು ಹೇಳಿದ್ದಾಳಲ್ಲಾ ಅನ್ನುವ ಯೋಚನೆ ಬಂದಿತು. ಮತ್ತೆ ಎಲ್ಲ ಮೊದಲಿನಿಂದ ಶುರುವಾಯಿತು. ನಾನಿದ್ದ ಬೋಗಿಯಲ್ಲಿ ಇನ್ನು ಇಬ್ಬರೇ ಇಬ್ಬರು ಬೇರೆಯವರು ಇದ್ದರು. ಒಬ್ಬ ಮುದುಕಿ, ಮತ್ತೆ ಅವಳ ಗಂಡ. ಮಧ್ಯೆ ಯಾವುದೋ ಸ್ಟೇಶನ್ನಿನಲ್ಲಿ ಇಳಿದು ಹೋದರು. ಒಬ್ಬನೇ ಆದೆ. ಬೋನಿನಲ್ಲಿ ಸಿಕ್ಕುಬಿದ್ದ ಪ್ರಾಣಿಯಹಾಗಿದ್ದೆ. ತಟ್ಟನೆ ಎದ್ದೆ. ಕಿಟಕಿಯ ಹತ್ತಿರ ಹೋದೆ. ಅತ್ತ ಇತ್ತ ಬೋಗಿಯ ಉದ್ದಕ್ಕೂ ಜೋರಾಗಿ ವಾಕ್ ಮಾಡಿದೆ. ಹಾಗೆ ಮಾಡಿದರೆ ರೈಲು ಬೇಗ ಹೋಗುತ್ತದೇನೋ ಅಂತ. ಖಾಲಿ ಸೀಟುಗಳು, ಶಬ್ದಮಾಡುವ ಕಿಟಕಿಗಳು. ನಮ್ಮ ಈ ರೈಲಿನ ಹಾಗೇ.”
ಪಾಡ್ನಿಶೆವ್ ತಟ್ಟನೆ ಎದ್ದು ನಿಂತ. ಒಂದೆರಡು ಹೆಜ್ಜೆ ನಡೆದಾಡಿದ. ಮತ್ತೆ ಕೂತ.
“ರೈಲಿನ ಬೋಗಿಗಳೆಂದರೆ ಭಯ. ಯಾವಾಗಲೂ. ಸರಿ. ಬೇರೆ ಏನಾದರೂ ಯೋಚನೆ ಮಾಡೋಣ ಅಂದುಕೊಂಡೆ. ನಾನು ಮಧ್ಯಾಹ್ನ ಊಟ ಮಾಡಿದ್ದ ಹೋಟೆಲಿನವನ ಬಗ್ಗೆ ಯೋಚನೆಮಾಡಿದರೆ ಹೇಗೆ..ಅವನಿಗೆ ಉದ್ದ ಗಡ್ಡ ಇತ್ತು. ಅವನ ಜೊತೆ ಮೊಮ್ಮಗ ಇದ್ದ. ನನ್ನ ಮಗ ವಾಸ್ಯಾನದೇ ವಯಸ್ಸು. ವಾಸ್ಯಾ, ಹೌದು, ಯಾವತ್ತಾದರೂ ಒಂದು ದಿನ ಪಿಟೀಲಿನವನು ಅಮ್ಮನಿಗೆ ಮುತ್ತುಕೊಡುತ್ತಾ ಇರುವುದು ನೋಡಿಬಿಡುತ್ತಾನೆ, ಪಾಪ, ಆ ಮಗುವಿಗೆ ಹೇಗನ್ನಿಸಬಹುದು? ಅವಳಿಗೇನಂತೆ, ಅವಳು, ಅವಳ ಲವ್ವು...ಮತ್ತೆ ಅದೇ ಯೋಚನೆಗಳು ತಲೆ ಎತ್ತಿದವು. ಬೇಡ. ಆಸ್ಪತ್ರೆಯ ಇನ್ಸ್‌ಪೆಕ್ಷನ್ನಿಗೆ ಹೋಗಿದ್ದೆವಲ್ಲಾ ನಿನ್ನೆ, ಆ ಪೇಶೆಂಟು ಡಾಕ್ಟರ ಬಗ್ಗೆ ಕಂಪ್ಲೇಂಟು ಹೇಳಿದ್ದ. ಡಾಕ್ಟರಿಗೆ ಟ್ರುಕಾಶೆವ್ಸ್‌ಕಿಯ ಥರದ್ದೇ ಮೀಸೆ ಇತ್ತು. ಊರಿಗೆ ಹೋಗುತ್ತೇನೆ ಅಂತ ಹೇಳಿ ನನಗೆ ಮೋಸ ಮಾಡುವುದಕ್ಕೆ ಅವನಿಗೆ ಎಷ್ಟು ಧೈರ್ಯ, ಅವಳಿಗೆ ಎಷ್ಟು ಧೈರ್ಯ...ಮತ್ತೆ ಅದೇ. ಏನೇ ಯೋಚನೆಮಾಡಿದರೂ ಮನಸ್ಸು ಅವನ ಕಡೆಗೇ ತಿರುಗುತ್ತಿತ್ತು. ಒದ್ದಾಡಿದೆ. ಅನುಮಾನ ಪಡುತ್ತಾ, ನನಗೇನೂ ನಿಜವಾಗಿ ಗೊತ್ತಿಲ್ಲವೆಂದು ನೋಯುತ್ತಾ, ನಿರ್ಧಾರಮಾಡಲು ಆಗದೆ, ಅವಳನ್ನು ಪ್ರೀತಿಸಬೇಕೋ ದ್ವೇಷಮಾಡಬೇಕೋ ತಿಳಿಯದೆ ಒದ್ದಾಡಿದೆ. ಹಿಂಸೆ ತಡೆಯಲಾರದೆ, ರೈಲು ನಿಂತಾಗ ಇಳಿದು ಹೋಗಿ ಹಳಿಯ ಮೇಲೆ ಮಲಗಿ ಪ್ರಾಣ ಬಿಟ್ಟರೆ ಈ ಒದ್ದಾಟದಿಂದ ಪಾರಾಗಬಹುದಲ್ಲಾ ಅನ್ನುವ ಯೋಚನೆ ಬಂದಿತು. ನನ್ನ ಬಗ್ಗೆ ನನಗೇ ಅಯ್ಯೋ ಅನ್ನಿಸುತ್ತಾ ಇತ್ತು. ಅವಳ ಬಗ್ಗೆ ದ್ವೇಷ, ಸೇಡು. ನಾನು ಸೋತೆ ಅನ್ನುವ ಅವಮಾನ, ಅವನು ಗೆದ್ದ ಅನ್ನುವ ರೊಚ್ಚು, ದ್ವೇಷ ಕುದಿಯುತ್ತಿತ್ತು. ನಾನು ಸತ್ತರೆ ಅವಳು ಫ್ರೀ ಆಗಿಬಿಡುತ್ತಾಳೆ. ಹಾಗಾಗಬಾರದು ಅವಳೂ ನರಳಬೇಕು. ನಾನು ಒದ್ದಾಡಿದ ಹಾಗೇ ಒದ್ದಾಡಬೇಕು ಅಂದುಕೊಂಡೆ. ಒಂದೊಂದು ಸ್ಟೇಶನ್ನಿನಲ್ಲಿ ರೈಲು ನಿಂತಾಗಲೂ ಇಳಿದು ಹೋಗುತ್ತಿದ್ದೆ. ಯಾರೋ ಕುಡಿಯುತ್ತಿದ್ದರು. ನಾನೂ ವೋಡ್ಕಾ ಕುಡಿದೆ. ನನ್ನ ಪಕ್ಕದಲ್ಲಿ ನಿಂತಿದ್ದ ಯಹೂದಿಯೂ ಕುಡಿದ. ಏನೇನೋ ಮಾತು ಶುರುಮಾಡಿದ. ನನ್ನ ಬೋಗಿಯಲ್ಲಿ ಒಬ್ಬನೇ ಇರುವುದನ್ನು ತಪ್ಪಿಸಿಕೊಳ್ಳಬೇಕು ಅಂತ ಅವನ ಥರ್ಡ್‌ಕ್ಲಾಸ್ ಬೋಗಿಗೆ ಹೋಗಿ ಕೂತೆ. ಹೊಗೆಯ ವಾಸನೆ, ಜನ ತಿಂದು ಎಸೆದಿದ್ದ ಸೂರ್ಯಕಾಂತಿ ಬೀಜದ ಸಿಪ್ಪೆಗಳ ಗಲೀಜು. ಅವನ ಪಕ್ಕದಲ್ಲೆ ಕೂತೆ. ಏನೇನೋ ಹರಟಿದ. ಏನೇನೋ ಕಥೆ ಹೇಳಿದ. ಅವನ ಮಾತು ಕಿವಿಗೆ ಬೀಳುತ್ತಿತ್ತು, ಅರ್ಥವಾಗುತ್ತಿರಲಿಲ್ಲ. ಮನಸ್ಸಿನ ತುಂಬ ನನ್ನದೇ ಯೋಚನೆಗಳು. ಅವನಿಗೂ ತಿಳಿಯಿತು. ಸ್ವಲ್ಪ ಗಮನಕೊಟ್ಟು ಕೇಳಿ ಅಂದ. ನಾನು ಎದ್ದು ಮತ್ತೆ ನನ್ನ ಬೋಗಿಗೇ ವಾಪಸ್ಸು ಬಂದೆ. ಸಮಾಧಾನವಾಗಿ ಕೂತು ಯೋಚನೆಮಾಡಿ ನೋಡಬೇಕು, ನನಗೆ ಇಂಥ ಯೋಚನೆಗಳು ಬರುತ್ತಾ ಇರುವುದಕ್ಕೆ ಕಾರಣವಿದೆಯೋ, ಹೀಗೆ ನರಳುವುದಕ್ಕೆ ಕಾರಣವಿದೆಯೋ ನೋಡಬೇಕು ಅಂದುಕೊಂಡೆ. ಆದರೆ ಒಂದೇ ಕ್ಷಣದಲ್ಲಿ ಸಮಾಧಾನ ಹಾರಿ ಹೋಗಿ ಮತ್ತೆ ಅವೇ ಅಸಂಬದ್ಧ ಚಿತ್ರ, ಭ್ರಮೆಗಳು ಮನಸ್ಸನ್ನು ತುಂಬಿಕೊಂಡವು. ‘ಹಿಂದೆಲ್ಲ ಎಷ್ಟು ಸಾರಿ ಹೀಗೆ ಅಸೂಯೆಪಟ್ಟು ನರಳಿಲ್ಲ, ಆಮೇಲೆ ಅಂದುಕೊಂಡದ್ದೆಲ್ಲ ಸುಳ್ಳು ಅಂತ ಗೊತ್ತಾಗಿಲ್ಲ, ಈಗಲೂ ಹಾಗೇ ಆಗುತ್ತದೆ. ಗ್ಯಾರಂಟಿ ಹಾಗೇ ಆಗುತ್ತದೆ, ನನಗೆ ಗೊತ್ತು. ಮನೆಗೆ ಹೋಗುತ್ತೀನಿ, ಆರಾಮವಾಗಿ ಮಲಗಿರುತ್ತಾಳೆ, ಎಬ್ಬಿಸುತ್ತೀನಿ, ನನ್ನ ನೋಡಿ ಖುಶಿ ಆಗುತ್ತಾಳೆ, ಅವಳ ಮುಖ ನೋಡುತ್ತಾ, ಅವಳ ಮಾತು ಕೇಳುತ್ತಾ ಅಂಥಾದ್ದೇನೂ ನಡೆದಿಲ್ಲ, ಅಂದುಕೊಂಡದ್ದೆಲ್ಲ ಭ್ರಮೆ ಅಂತ ಗೊತ್ತಾಗುತ್ತದೆ’ ಅನ್ನಿಸಿತು. ‘ಹಾಗಾದರೆ ಎಷ್ಟು ಚೆನ್ನಾಗಿರುತ್ತದೆ! ಇಲ್ಲ, ಹಿಂದೆ ಎಷ್ಟೋ ಬಾರಿ ಹಾಗೆ ಆಗಿದೆ, ಈಗ ಮತ್ತೆ ಹಾಗೇ ಆಗುವುದಿಲ್ಲ’ ಅನ್ನುವ ಮಾತು ಕೂಡ ನನ್ನೊಳಗೇ ಕೇಳಿಸಿತು. ಮತ್ತೆ ಅದೇ ಒದ್ದಾಟ, ಹಿಂಸೆ. ಹೆಂಗಸರ ಚಪಲ ಹತ್ತಿಸಿಕೊಂಡು ಕಾಯಿಲೆ ತಂದುಕೊಂಡ ಯುವಕ ಯಾರಾದರೂ ಸಿಕ್ಕರೆ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಿಲ್ಲ, ನನ್ನ ಆತ್ಮವನ್ನು ದೆವ್ವಗಳು ಹೇಗೆ ಛಿದ್ರ ಛಿದ್ರಮಾಡುತ್ತಿವೆ ಅನ್ನುವುದನ್ನು ತೋರಿಸಿಬಿಡುತ್ತೇನೆ! ಅವಳ ಮೈಯಮೇಲೆ ನನಗೆ ಸಂಪೂರ್ಣ ಹಕ್ಕು ಇದೆ, ಅಧಿಕಾರ ಇದೆ, ಅದು ನನ್ನದೇ ಮೈಯಿ ಅಂದುಕೊಂಡಿದ್ದೆ. ಆದರೆ ಅವಳ ಮೈ ಅವಳದೇ, ನನಗೆ ಅದರ ಮೇಲೆ ಯಾವ ಅಧಿಕಾರವೂ ಇಲ್ಲ, ಅವಳಿಗೆ ಇಷ್ಟ ಬಂದಂತೆ ಬಳಸಿಕೊಳ್ಳಬಹುದು, ನನಗೆ ಇಷ್ಟವಾಗದಿದ್ದರೂ ಏನೂ ಮಾಡಲಾರೆ ಅನ್ನಿಸಿತು. ಅವಳಿಗೂ ಏನೂ ಮಾಡಲಾರೆ, ಅವನಿಗೂ ಏನೂ ಮಾಡಲಾರೆ. ಹಾಡಿನಲ್ಲಿ ಬರುತ್ತಾನಲ್ಲಾ ವಾಂಕಾ, ಅವನು ನೇಣಿಗೆ ಏರಲು ಹೋಗುವಾಗ ಕೂಡ ಹುಡುಗಿಯ ಸಕ್ಕರೆ ತುಟಿಗಳಿಗೆ ಮುತ್ತಿಟ್ಟದ್ದನ್ನು ಹಾಡುತ್ತಾ ಹೋದವನು, ಈ ದುಷ್ಟ ಕೂಡ ಅಂಥವನೇ. ಗೆದ್ದೇ ಗೆಲ್ಲುತ್ತಾನೆ. ಸತ್ತರೂ ಗೆಲುವು ಅವನದೇ. ಅವಳು ಈಗಾಗಲೇ ತಪ್ಪು ಮಾಡಿರದೆ ಇದ್ದರೆ-ಮಾಡುವುದಕ್ಕೆ ಅವಳಿಗೆ ಆಸೆ ಇದೆ ಅಂತ ನನಗೆ ಗೊತ್ತು-ಇನ್ನೂ ಭಯಂಕರ. ಅವಳು ಅಪರಾಧಿ ಆಗಿದ್ದರೆ, ಅದು ನನಗೆ ಸ್ಪಷ್ಟವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ನನಗೆ ಏನು ಬೇಕು ಎಂದು ಹೇಳಲು ಆಗುತ್ತಿರಲಿಲ್ಲ. ಅವಳು ಆಸೆ ಪಡಲೇಬೇಕಾದದ್ದನ್ನು ಆಸೆಪಡಬಾರದು ಎಂದು ನಾನು ಆಸೆಪಡುತ್ತಿದ್ದೆ. ಹುಚ್ಚು, ಪೂರಾ ಹುಚ್ಚು.
(ಮುಂದುವರೆಯುವುದು)

Rating
No votes yet