ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತನಾಲ್ಕು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತನಾಲ್ಕು

“ಎರಡು ದಿನಗಳ ನಂತರ ಮೀಟಿಂಗಿಗೆ ಹೊರಟೆ. ಹೋಗಿಬರುತ್ತೇನೆಂದು ಹೆಂಡತಿಗೆ ಹೇಳಿದಾಗ ಮನಸ್ಸು ಲಘವಾಗಿತ್ತು, ಸಮಾಧಾನವಾಗಿತ್ತು.
“ಜಿಲ್ಲಾ ಕೇಂದ್ರಗಳ ಲೋಕವೇ ಬೇರೆ. ಮಾಡಲು ಬೇಕಾದಷ್ಟು ಕೆಲಸಗಳಿರುತ್ತವೆ. ಕೌನ್ಸಿಲ್ಲು ಮೀಟಿಂಗು ದಿನಕ್ಕೆ ಹತ್ತು ಹತ್ತು ಗಂಟೆಗಳಂತೆ ಎರಡು ದಿನ ನಡೆಯಿತು. ಎರಡನೆಯ ದಿನ ಸಭೆಯಲ್ಲಿದ್ದಾಗ ನನ್ನ ಹೆಂಡತಿಯ ಪತ್ರ ಬಂತು. ಅಲ್ಲೇ ಆಗಲೇ ಓದಿದೆ. ಮಕ್ಕಳು, ಚಿಕ್ಕಪ್ಪ, ಆಯಾ, ಶಾಪಿಂಗು, ಇತ್ಯಾದಿಗಳನ್ನೆಲ್ಲ ಬರೆದಿದ್ದಳು. ಆಮೇಲೆ ನಡುವೆ ಎಲ್ಲೋ, ತೀರ ಸಾಮಾನ್ಯ ಸಂಗತಿ ಅನ್ನುವ ಹಾಗೆ, ಟ್ರುಚಾಶೆವ್ಸ್ಕಿ ಬಂದಿದ್ದ, ತಂದುಕೊಡುತ್ತೇನೆ ಎಂದಿದ್ದ ಹಾಡುಗಳನ್ನು ತಂದುಕೊಟ್ಟ, ಮತ್ತೊಮ್ಮೆ ಸಂಗೀತದ ಕಾರ್ಯಕ್ರಮ ಕೊಡೋಣ ಎಂದ, ಬೇಡ ಎಂದು ಹೇಳಿದೆ ಅಂತ ಬರೆದಿದ್ದಳು.
“ಹಾಡು ತಂದುಕೊಡುತ್ತೇನೆ ಅಂತ ಹೇಳಿದ್ದು ನನಗೆ ನೆನಪಿರಲಿಲ್ಲ. ಸದ್ಯ ತೊಲಗಿದ ಅಂದುಕೊಂಡಿದ್ದೆ. ಮತ್ತೆ ಬಂದಿದ್ದ ಅಂತ ತಿಳಿದು ಕಿರಿಕಿರಿ ಅನ್ನಿಸಿತು. ತುಂಬಾ ಕೆಲಸ ಇದ್ದದ್ದರಿಂದ ಆ ಬಗ್ಗೆ ಯೋಚನೆಮಾಡುವುದಕ್ಕೆ ಆಗಲಿಲ್ಲ. ಸಂಜೆ ನಾನು ಇಳಿದುಕೊಂಡಿದ್ದ ವಸತಿಗೆ ಹೋದಮೇಲೆ ಕಾಗದವನ್ನ ಮತ್ತೆ ಓದಿದೆ. ಆಗ ಅನ್ನಿಸಿತು, ನಾನು ಇಲ್ಲದಿದ್ದಾಗ ಅವನು ಬಂದದ್ದು ಮಾತ್ರ ಅಲ್ಲ, ಇಡೀ ಕಾಗದವೇ ಅಸಹಜವಾಗಿದೆ ಅಂತ. ಕಟ್ಟಿಹಾಕಿದ್ದ ಅಸೂಯೆಯ ನಾಯಿ ತಪ್ಪಿಸಿಕೊಂಡು ಎರಗುವುದಕ್ಕೆ ಬೊಗಳಾಡುತ್ತಿತ್ತು. ಅದರ ಸರಪಳಿ ಬಿಚ್ಚುವುದಕ್ಕೆ ಅಂಜಿದೆ. ಇದೆಂಥಾ ಕೆಟ್ಟ ಅಸೂಯೆ! ಅವಳು ಬರೆದಿದ್ದರಲ್ಲಿ ತಪ್ಪು ಅನ್ನಿಸುವಂಥಾದ್ದು ಏನಿದೆ ಅಂತ ಕೇಳಿಕೊಂಡೆ.
“ಮಲಗುವುದಕ್ಕೆ ಹೋದೆ. ಮಾರನೆಯ ದಿನದ ಕೆಲಸಗಳ ಬಗ್ಗೆ ಯೋಚನೆ ಮಾಡಿದೆ. ಇಂಥ ಮೀಟಿಂಗುಗಳು ಇದ್ದಾಗ, ಹೊಸ ಜಾಗದಲ್ಲಿ ಮಲಗಿದಾಗ ನನಗೆ ನಿದ್ದೆ ಸಾಮಾನ್ಯವಾಗಿ ಬರುವುದಿಲ್ಲ. ಆದರೆ ಅವತ್ತು ಒಳ್ಳೆಯ ನಿದ್ರೆ ಬಹಳ ಬೇಗನೇ ಬಂದಿತ್ತು. ಶಾಕ್ ಹೊಡೆದ ಹಾಗೆ ಆಗಿ ತಟ್ಟನೆ ಎದ್ದುಬಿಟ್ಟೆ. ಒಂದೊಂದು ಸಾರಿ ಹಾಗೆ ಆಗುತ್ತದಲ್ಲಾ? ಅವಳ ಯೋಚನೆ ಬಂತು. ಅವಳನ್ನು ನಾನು ಭೋಗಿಸುತ್ತಿದ್ದ ಚಿತ್ರ ಮನಸ್ಸಿಗೆ ಬಂತು. ಈಗ ಅವನೂ ಅವಳೂ ಏನು ಮಾಡುತ್ತಿರಬಹುದು ಅನ್ನಿಸಿತು. ಎದೆಯ ತುಂಬ ಭಯ ಮತ್ತೆ ಉಗ್ರವಾದ ಕೋಪ ತುಂಬಿಕೊಂಡಿತು. ನನ್ನೊಳಗೇ ವಾದ ವಿವಾದ ಶುರುವಾಯಿತು. ‘ನಾನ್‌ಸೆನ್ಸ್. ಹೀಗೆ ಯೋಚನೆ ಮಾಡಬಾರದು. ಅವರಿಬ್ಬರ ನಡುವೆ ಅಂಥಾದ್ದೇನೂ ಇಲ್ಲ, ಇರಲೂ ಇಲ್ಲ. ಇಂಥಾ ಭಯಂಕರ ಕಲ್ಪನೆ ಮಾಡಿಕೊಂಡು ಅವಳನ್ನೂ ಕೀಳುಮಾಡಿ ನನ್ನನ್ನೂ ಯಾಕೆ ಕೀಳುಮಾಡಿಕೊಳ್ಳಬೇಕು? ಅವನೋ ಹೇಳೀಕೇಳೀ ಸಂಬಳಕ್ಕೆ ಕರೆದುಕೊಂಡು ಬಂದ ಪಿಟೀಲು ಕೊಯ್ಯುವವನು. ಶುದ್ಧ ಅಯೋಗ್ಯ. ಇವಳು, ಮರ್ಯಾದಸ್ಥ ಹೆಂಗಸು. ಮಕ್ಕಳ ತಾಯಿ. ನನ್ನ ಹೆಂಡತಿ. ನಾನು ಅಂದುಕೊಳ್ಳುತ್ತಿರುವುದೆಲ್ಲ ಅಸಂಬದ್ಧ.’ ನನ್ನ ಇನ್ನೊಂದು ಮನಸ್ಸು ಬೇರೆ ಥರ ಹೇಳುತ್ತಿತ್ತು. ‘ಹಾಗೇ ಆಗಿರುತ್ತೆ. ನಾನು ಅವಳನ್ನು ಮದುವೆ ಆಗಿದ್ದೂ ಅದಕ್ಕೇ, ಮದುವೆಗೆ ಮುಂಚೆ ಇಷ್ಟಪಟ್ಟಿದ್ದೂ ಅದಕ್ಕೇ, ಅವಳ ಜೊತೆ ಬದುಕುತ್ತಾ ಇರುವುದೂ ಅದಕ್ಕೇ. ಎಲ್ಲಾ ಗಂಡಸರೂ ಇಷ್ಟಪಡುವುದೂ ಅದನ್ನೇ. ಈ ಪಿಟೀಲಿನವನೂ ಅವಳಿಂದ ಬಯಸುವುದು ಕೂಡಾ ಅದನ್ನೇ. ಅವನಿಗೆ ಹೇಗೂ ಮದುವೆ ಆಗಿಲ್ಲ. ಒಳ್ಳೆಯ ಆರೋಗ್ಯ ಇದೆ, (ಅವನು ಹೇಗೆ ಮಾಂಸವನ್ನು ಹಲ್ಲಿನಲ್ಲಿ ಸರಾಗವಾಗಿ ಕಚ್ಚಿ ತಿಂದಿದ್ದ, ಕೆಂಪು ತುಟಿಗಳನ್ನು ಲೋಟಕ್ಕೆ ಒತ್ತಿ ಹೇಗೆ ವೈನು ಹೀರಿದ್ದ ಅನ್ನುವ ನೆನಪು ಬಂದಿತು), ತಿಂದು ತಿಂದು ಚೆನ್ನಾಗಿ ಕೊಬ್ಬಿದ್ದಾನೆ, ನೀತಿ ನಿಯಮ ಏನೂ ಇಲ್ಲದೆ ಕೈಗೆ ಸಿಕ್ಕ ಖುಷಿಯನ್ನು ಸಿಕ್ಕಾಗಲೇ ಅನುಭವಿಸುವಂಥವನು. ಮತ್ತೆ, ಇಬ್ಬರಿಗೂ ಸಂಗೀತದಲ್ಲಿ ಆಸಕ್ತಿ, ಅದು ಮನಸ್ಸನ್ನು ತೀರ ಸುಸಂಸ್ಕೃತವಾಗೇ ಕೆರಳಿಸುತ್ತದೆ, ಇನ್ನು ಅವನನ್ನು ತಡೆಯುವವರು ಯಾರು? ಅವಳು ತಡೆದಾಳೋ? ಅವಳು? ಯಾರು ಅವಳು? ದೊಡ್ಡ ರಹಸ್ಯ. ಮದುವೆಯಾಗಿ ಇಷ್ಟು ವರ್ಷವಾದರೂ ಅವಳು ಒಗಟಾಗಿಯೇ ಉಳಿದಿದ್ದಾಳಲ್ಲಾ? ಅವಳು ನನಗೆ ಗೊತ್ತೇ ಇಲ್ಲ. ಗೊತ್ತಿರುವುದು ಏನಿದ್ದರೂ ಅವಳ ಪ್ರಾಣಿಬುದ್ಧಿ ಮಾತ್ರ. ಪ್ರಾಣಿಗೆ ಯಾವ ಕಟ್ಟುಪಾಡು ತಾನೇ ಇರುತ್ತದೆ.
“ಅವತ್ತು ಸಂಜೆ, ಕ್ರೂಟ್ಸರ್ ಸೊನಾಟಾ ನುಡಿಸಿದ ಮೇಲೆ, ಅವರು ಒಂದು, ಕೊಂಚ ಅಶ್ಲೀಲತೆಯ ಸ್ಪರ್ಶವಿದ್ದ ಶೃಂಗಾರ ಗೀತೆ ನುಡಿಸಿದ್ದು ನೆನಪಿಗೆ ಬಂತು. ಅವರ ಮುಖ ಹೇಗಿತ್ತು ಅನ್ನುವುದನ್ನು ಜ್ಞಾಪಿಸಿಕೊಳ್ಳುತ್ತಾ ಅದೇಕೆ ನಾನು ಆಗ ಹಾಡು ಕೇಳದೆ ಹೊರಟುಹೋದೆ ಎಂದು ಕೇಳಿಕೊಂಡೆ. ಅವತ್ತು ಸಂಜೆಯೇ ಅವರಿಬ್ಬರ ನಡುವೆ ಇದ್ದ ಅಡೆ ತಡೆ ಹೊರಟು ಹೋಗಿತ್ತಲ್ಲವಾ? ನನ್ನನ್ನು ನೋಡಿ ವೀಕಾಗಿ, ಅಯ್ಯೋ ಅನ್ನಿಸುವ ಹಾಗೆ, ಆನಂದ ತುಂಬಿಕೊಂಡಿದ್ದ ಮುಗುಳು ನಗೆ ನಕ್ಕಿದ್ದು, ನಾನು ಪಿಯಾನೋ ಹತ್ತಿರ ಹೋದಾಗ ಕೆಂಪಗಾಗಿದ್ದ ಅವಳ ಮುಖದ ಮೇಲಿನ ಬೆವರು ಹನಿಗಳನ್ನು ಒರೆಸಿಕೊಂಡಿದ್ದು, ಅವರಿಬ್ಬರೂ ಒಬ್ಬರನ್ನೊಬ್ಬರು ನೋಡದೆ ದೃಷ್ಟಿ ತಪ್ಪಿಸಿಕೊಳ್ಳುತ್ತಾ ಇದ್ದದ್ದು, ರಾತ್ರಿ ಊಟಮಾಡುವಾಗ ಅವಳು ವೈನ್ ಬಗ್ಗಿಸುತ್ತಾ ಒಂದಿಷ್ಟೇ ಇಷ್ಟು ನಸುನಗುತ್ತಾ ಅವನನ್ನು ನೋಡಿದ್ದು, ಹೌದೋ ಅಲ್ಲವೋ ಅನ್ನುವಂಥ ಆ ನಗು...ಆ ನೋಟ...ಭಯ ಆಯಿತು. ‘ಹೌದು, ಎಲ್ಲಾ ಮುಗಿದು ಹೋಗಿದೆ’ ಎಂದು ನನ್ನೊಳಗೆ ಒಂದು ದನಿ ಹೇಳಿದರೆ, ಇನ್ನೊಂದು ದನಿ ‘ಏನೋ ಆಗಿದೆ ನನಗೆ, ಅದಕ್ಕೇ ಹೀಗೆ ಯೋಚನೆ ಮಾಡುತ್ತಿದ್ದೇನೆ’ ಅನ್ನುತ್ತಿತ್ತು. ಒಬ್ಬನೇ ಮಲಗಿದ್ದೆ. ಕತ್ತಲು. ಅಂಜಿಕೆ ಅನ್ನಿಸಿತು. ಎದ್ದು ದೀಪ ಹಚ್ಚಿದೆ. ಹಳದೀ ವಾಲ್ ಪೇಪರು ಅಂಟಿಸಿದ್ದ ರೂಮು ಭಯ ಹುಟ್ಟಿಸಿತು. ಸಿಗರೇಟು ಹಚ್ಚಿದೆ. ಯೋಚನೆಗಳು ಸುಮ್ಮನೆ ಸುತ್ತುತ್ತಾ ಪರಸ್ಪರ ವಿರೋಧವಾದ ತೀರ್ಮಾನಗಳು ಹುಟ್ಟುತಿರುವಾಗ ಆಗುವಂತೆಯೇ ಆ ವಿರೋಧಗಳೆಲ್ಲ ಮರೆಯಾಗಲಿ ಅಂತ ಆಸೆಪಡುತ್ತಾ ಒಂದಾದಮೇಲೆ ಒಂದು ಸಿಗರೇಟು ಸೇದಿದೆ.
“ಇಡೀ ರಾತ್ರಿ ನಿದ್ರೆ ಬರಲಿಲ್ಲ. ಬೆಳಗಿನ ಜಾವ ಐದು ಗಂಟೆಗೇ ಎದ್ದೆ. ಈ ಟೆನ್ಷನ್ ಇಟ್ಟುಕೊಂಡು ಇರುವುದಕ್ಕೆ ಆಗುವುದಿಲ್ಲ ಅನ್ನಿಸಿತು. ಎದ್ದೆ. ಗಾಡಿ ಸಿದ್ಧಮಾಡುವುದಕ್ಕೆ ಮೇನೇಜರನಿಗೆ ಹೇಳಿ ಕಳುಹಿಸಿದೆ. ಅರ್ಜೆಂಟಾದ ಕೆಲಸ ಬಂದಿದೆ, ಮಾಸ್ಕೋಗೆ ಹೋಗುತ್ತಿದ್ದೇನೆ, ನನ್ನ ಬದಲು ಇಂಥ ಸದಸ್ಯರು ಮೀಟಿಂಗಿಗೆ ಬರುತ್ತಾರೆ ಎಂದು ಕಾಗದ ಬರೆದಿಟ್ಟು ಎಂಟು ಗಂಟೆಗೆ ಗಾಡಿ ಹತ್ತಿ ಹೊರಟುಬಿಟ್ಟೆ.”
(ಮುಂದುವರೆಯುವುದು)

Rating
No votes yet