ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತೆರಡು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತೆರಡು

“ಅವತ್ತೆಲ್ಲ ಅವಳ ಜೊತೆ ಮಾತಾಡಲಿಲ್ಲ. ಮಾತಾಡಬೇಕು ಅನ್ನಿಸಲಿಲ್ಲ. ಮುಖ ಕಂಡರೆ ಸಾಕು, ಮನಸ್ಸಿನಲ್ಲಿ ದ್ವೇಷ ಭುಗಿಲ್ ಅಂತ ಎದ್ದು ಏನು ಮಾಡಿಬಿಡುತ್ತೋ ಏನೋ ಅಂತ ಭಯವಾಗುತ್ತಿತ್ತು. ರಾತ್ರಿ ಊಟಕ್ಕೆ ಕೂತಿದ್ದಾಗ ಮಕ್ಕಳ ಎದುರಿಗೇನೆ ‘ನೀವು ಯಾವತ್ತು ಹೋಗುವುದು ಊರಿಗೆ?’ ಅಂತ ಕೇಳಿದಳು. ಝೆಮಸ್ಟ್‌ವೊದಲ್ಲಿ ಜಿಲ್ಲಾ ಸಭೆಗೆ ಹೋಗಬೇಕಾಗಿತ್ತು. ಯಾವತ್ತು ಹೋಗುತ್ತೇನೆ ಅಂತ ಹೇಳಿದೆ. ‘ಊರಿಗೆ ಹೋಗುವುದಕ್ಕೆ ಏನಾದರೂ ರೆಡಿ ಮಾಡಿಕೊಡಬೇಕಾದದ್ದು ಇದೆಯಾ’ ಅಂತ ಕೇಳಿದಳು. ನಾನು ಮಾತಾಡಲಿಲ್ಲ. ಊಟ ಮುಗಿಸಿ ಸ್ವಲ್ಪ ಹೊತ್ತು ಸುಮ್ಮನೆ ಕೂತಿದ್ದೆ. ಎದ್ದು ಓದುವ ರೂಮಿಗೆ ಹೊರಟುಹೋದೆ. ಇತ್ತೀಚೆಗೆ ಅವಳು ನನ್ನ ಓದುವ ರೂಮಿಗೆ ಬರುತ್ತಾ ಇರಲಿಲ್ಲ, ಅದೂ ರಾತ್ರಿ ಅಷ್ಟು ಹೊತ್ತಿನಲ್ಲಿ. ತುಂಬ ಸಿಟ್ಟು ಮಾಡಿಕೊಂಡಿದ್ದೆ. ಇದ್ದಕ್ಕಿದ್ದ ಹಾಗೇ ಗೊತ್ತಿರುವ ಹೆಜ್ಜೆಯ ಸಪ್ಪಳ ಕೇಳಿಸಿತು. ಯುರೈಯಾನ ಹೆಂಡತಿಯ ಹಾಗೆನೇ ಮಾಡಿದ ಪಾಪವನ್ನು ಬಚ್ಚಿಟ್ಟುಕೊಳ್ಳುವುದಕ್ಕೇ ಇಂಥ ಅವೇಳೆಯಲ್ಲಿ ಅವಳು ನನ್ನ ರೂಮಿಗೆ ಬರುತ್ತಿದ್ದಾಳೆ ಅನ್ನುವ ದುಷ್ಟ, ಭಯಂಕರ ಯೋಚನೆ ಮನಸ್ಸಿನಲ್ಲಿ ಸುಳಿಯಿತು. ಹೆಜ್ಜೆ ಸದ್ದು ಕೇಳುತ್ತಾ ‘ನನ್ನ ನೋಡುವುದಕ್ಕೇ ಬರುತ್ತಿರಬಹುದಾ? ಹಾಗಿದ್ದರೆ ನಾನಂದುಕೊಂಡದ್ದು ಸರಿ’ ಅಂದುಕೊಂಡೆ. ಬಾಯಿಬಿಟ್ಟು ಹೇಳಲಾರದಂಥ ದ್ವೇಷ ಎದೆಯಲ್ಲಿ ತುಂಬಿಕೊಂಡಿತ್ತು. ಸದ್ದು ಹತ್ತಿರ ಬಂತು. ನನ್ನ ರೂಮಿನ ಬಾಗಿಲು ದಾಟಿಕೊಂಡು ಡ್ರಾಯಿಂಗ್‌ರೂಮಿಗೆ ಹೋಗುತ್ತಿರಬಹುದಾ? ಇಲ್ಲ. ಬಾಗಿಲು ಕಿರ್ ಅಂದಿತು. ಬಾಗಿಲಲ್ಲಿ ನಿಂತಿದ್ದಳು, ಎತ್ತರವಾದ, ಚೆಲುವಾದ, ಅಂಜಿಕೆ, ಹಿಂಜರಿಕೆ, ನಾಚಿಕೆ, ಯಾಚನೆಗಳನ್ನು ಬಚ್ಚಿಡಲು ಬಯಸುವ ಆದರೆ ತಟ್ಟನೆ ಅವಳ ಭಾವ ಅರ್ಥವಾಗಿಬಿಡುವಂಥ ತುಂಬಿದ ಕಣ್ಣುಗಳ ಸುಂದರಿ. ಇನ್ನೇನು ಸತ್ತೇಹೋಗಿಬಿಡುತ್ತೇನೆ ಅನ್ನುವಷ್ಟು ಹೊತ್ತು ಉಸಿರು ಬಿಗಿಹಿಡಿದುಕೊಂಡು ಕೂತಿದ್ದೆ. ಅವಳನ್ನೇ ನೋಡುತ್ತಾ ಸಿಗರೇಟು ತೆಗೆದು ಹಚ್ಚಿಕೊಂಡೆ.
‘ಇದೇನಿದು, ನಿಮ್ಮ ಜೊತೆ ಮಾತಾಡೋದಕ್ಕೆ ಬಂದರೆ ಸಿಗರೇಟು ಹಚ್ಚುತ್ತಿದ್ದೀರಲ್ಲಾ, ಸರಿಯಾ?’ ಅನ್ನುತ್ತಾ ಹತ್ತಿರ ಬಂದು, ಸೋಫಾದ ಮೇಲೆ ನನಗೆ ಒರಗಿದಂತೆ ಕೂತಳು. ಅವಳ ಮೈ ತಗುಲದ ಹಾಗೆ ದೂರ ಸರಿದೆ.
‘ಭಾನುವಾರ ನಾನು ಸಂಗೀತ ನುಡಿಸುವುದು ನಿಮಗಿಷ್ಟವಿಲ್ಲ ಅಂತ ಕಾಣುತ್ತದೆ’ ಅಂದಳು.
‘ಹಾಗೇನಿಲ್ಲ’, ಅಂದೆ.
‘ನನಗೇನೂ ಗೊತ್ತಾಗಲ್ಲವಾ?’ ಅಂದಳು.
‘ಗೊತ್ತಾಗಿದ್ದರೆ ಬಹಳ ಸಂತೋಷ. ಬೆದೆ ಬಂದ ನಾಯಿ ಹಾಗೆ ಆಡುತ್ತಾ ಇದೀಯಾ..ನಿನ್ನ ಕೆಟ್ಟ ಬುದ್ಧಿ ನಿನಗೇ ಸರಿ,’ ಅಂದೆ.
‘ನೀವು ಹೀಗೆ ಕುದುರೆಗಾಡಿಯವರ ಥರಾ ಮಾತಾಡೋದಾದರೆ ನಾನು ಹೊರಟು ಹೋಗ್ತೇನೆ’ ಅಂದಳು.
‘ಧಾರಾಳವಾಗಿ ಹೋಗಬಹುದು. ಆದರೆ ಜ್ಞಾಪಕ ಇರಲಿ. ನನಗೆ ಮನೆಯ ಮರ್ಯಾದೆ ಮುಖ್ಯ!’ ಅಂದೆ.
‘ಏನಾಗಿದೆ ನಿಮಗೆ ಇವತ್ತು?’ ಅಂತ ಕೇಳಿದಳು.
‘ಮಾತಾಡಬೇಡ, ತೊಲಗು ಇಲ್ಲಿಂದ,’ ಅಂದೆ.
‘ಅವಳು ಅರ್ಥ ಆಗದೆ ಇರುವವಳ ಥರ ನಾಟಕ ಆಡಿದಳೋ, ಅಥವಾ ನಿಜವಾಗಿ ಅರ್ಥ ಆಗಲೇ ಇಲ್ಲವೋ ಗೊತ್ತಿಲ್ಲ. ಬೇಜಾರು ಮಾಡಿಕೊಂಡಳು. ಸಿಟ್ಟು ಮಾಡಿಕೊಂಡಳು. ವಾಪಸ್ಸು ಹೊರಟವಳು ರೂಮಿನ ಮಧ್ಯವೇ ಸುಮ್ಮನೆ ನಿಂತುಕೊಂಡಳು.
‘ಬರ್ತಾ ಬರ್ತಾ ನಿಮ್ಮದು ಅತೀ ಆಯಿತು. ಎಂಥಾ ದೇವತೆ ಆದರೂ ತಪ್ಪು ಕಂಡುಹಿಡೀತೀರಿ’ ಅನ್ನುತ್ತಾ ಹಿಂದೆ ಒಂದು ಬಾರಿ ನಾನು ತಪ್ಪು ತಿಳಿದು ನನ್ನ ತಂಗಿಯನ್ನು ಬಾಯಿಗೆ ಬಂದಹಾಗೆ ಬಯ್ದದ್ದು ಜ್ಞಾಪಿಸಿದಳು. ಅದನ್ನು ನೆನೆದರೆ ಈಗಲೂ ನನಗೆ ನಾಚಿಕೆ ಆಗುತ್ತದೆ. ನನ್ನ ಮನಸ್ಸಿಗೆ ನೋವು ಮಾಡಬೇಕು ಅಂತಲೇ ಅವಳು ಆ ಮಾತು ಎತ್ತಿ ಕುಟುಕಿದಳು. ‘ಅವಳಿಗೇ ಹಾಗಂದವರು ನೀವು, ನನ್ನ ಬಗ್ಗೆ ಹೀಗೆ ಅನ್ನುವುದು ಹೆಚ್ಚಾ?’ಅಂದಳು.
‘ಅವಮಾನ ಮಾಡುತ್ತಾಳೆ, ತಲೆ ತಗ್ಗಿಸುವ ಹಾಗೆ ಮಾಡುತ್ತಾಳೆ, ಮರ್ಯಾದೆ ತೆಗೆಯುತ್ತಾಳೆ, ಆಮೇಲೆ ನನ್ನದೇ ತಪ್ಪು ಅನ್ನುತ್ತಾಳೆ’ ಅಂದುಕೊಂಡೆ, ಮನಸ್ಸಿನಲ್ಲೇ. ಇದ್ದಕ್ಕಿದ್ದ ಹಾಗೇ ಎಂದೂ ಬರದೆ ಇದ್ದ ಭಯಂಕರ ಕೋಪ ಬಂದುಬಿಟ್ಟಿತು. ಹೇಗಾದರೂ ಸರಿ, ನನ್ನ ಕೋಪ ಅವಳ ಮೇಲೆ ತೋರಿಸಿಕೊಳ್ಳಲೇ ಬೇಕು ಅನ್ನುವ ಆಸೆ, ಅವತ್ತೇ ಮೊದಲು, ಹುಟ್ಟಿತ್ತು. ಧಿಡೀರಂತ ಎದ್ದೆ. ಅವಳ ಮೇಲೆ ನುಗ್ಗಿದೆ. ಹಾಗೆ ಎದ್ದು ನುಗ್ಗಿ ಹೋಗುತ್ತಿರುವಾಗಲೂ ನನಗೆ ಕೋಪಬಂದಿದೆ ಎಂದು ಮನಸ್ಸಿಗೆ ಗೊತ್ತಾಗುತ್ತಿತ್ತು, ‘ಹೀಗೆ ಕೋಪ ತೋರಿಸಿಕೊಳ್ಳುವುದು ಸರಿಯಾ?’ ಅಂತ ನನ್ನೇ ಕೇಳಿಕೊಳ್ಳುತ್ತಿದ್ದೆ. ‘ಖಂಡಿತ ಸರಿ, ಹಾಗೆ ತೋರಿಸುವುದರಿಂದ ಅವಳಿಗೆ ಒಂದಿಷ್ಟು ಭಯ ಇರುತ್ತದೆ’ ಅನ್ನಿಸಿತು. ಕೋಪ ತಡೆದುಕೊಳ್ಳುವ ಬದಲು ಇನ್ನಷ್ಟು ಕೆರಳಿಸಿಕೊಂಡೆ. ಕೋಪ ಧಗಧಗ ಉರಿಯುತ್ತಿದೆಯಲ್ಲ ಎಂದು ಸಂತೋಷಪಟ್ಟೆ.
‘ಈಗ ನೀನು ಹೋಗದಿದ್ದರೆ ಕೊಂದು ಹಾಕಿಬಿಡುತ್ತೇನೆ’ ಎಂದು ಕಿರುಚಿದೆ. ಅವಳ ತೋಳು ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ಬೇಕು ಅಂತಲೇ ಕೋಪ ಹೆಚ್ಚುಮಾಡಿಕೊಳ್ಳುತ್ತಾ ದನಿ ಎತ್ತರಿಸಿ ಕೂಗಾಡುತ್ತಿದ್ದೆ. ಅವಳಿಗೆ ತುಂಬ ಭಯವಾಗಿತ್ತು. ಶಕ್ತಿಯೇ ಇಲ್ಲದವಳಂತೆ ಸುಮ್ಮನೆ ನಿಂತಿದ್ದಳು.
‘ಏನಾಗಿದೆ ನಿಮಗೆ ಇವತ್ತು, ಯಾಕೆ ಹೀಗಾಡುತ್ತಿದ್ದೀರಿ?’ ಅಂತ ಕೇಳಿದಳು.
‘ಇನ್ನೊಂದು ಕ್ಷಣ ನೀನಿಲ್ಲಿದ್ದರೆ ನಾನು ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ. ಗೆಟ್ ಔಟ್’ ಅಂತ ಚೀರಿದೆ.
“ಇಚ್ಛೆ ಬಂದಂತೆಲ್ಲ ಹರಿಯುತ್ತಿದ್ದ ಕೋಪವನ್ನು ಖುಷಿಯಾಗಿ ಅನುಭವಿಸುತ್ತಾ ಇದ್ದೆ. ಇನ್ನೂ ವಿಶೇಷವಾದದ್ದೇನಾದರೂ ಮಾಡಿ ನನಗೆಂಥ ಕೋಪ ಬಂದಿದೆ ಅನ್ನುವುದನ್ನು ತೋರಿಸಿಕೊಳ್ಳಬೇಕು. ಅವಳನ್ನು ಚೆನ್ನಾಗಿ ಚಚ್ಚಬೇಕು, ಕೊಲ್ಲಬೇಕು. ಇಲ್ಲ ಹಾಗೆ ಮಾಡಬಾರದು. ಟೇಬಲ್ಲಿನ ಮೇಲಿದ್ದ ಪೇಪರ್ ವೇಟನ್ನು ತೆಗೆದುಕೊಂಡು, ಹೋಗು ಅಂತ ಕೂಗುತ್ತಾ, ಅವಳಿಗೆ ತಾಗಬಾರದು ಆದರೆ ಪಕ್ಕದಲ್ಲೇ ಹೋಗಬೇಕು ಹಾಗೆ ಗುರಿ ಇಟ್ಟು ತೂರಿ ಎಸೆದೆ. ಹೋದಳು. ಬಾಗಿಲಲ್ಲಿ ನಿಂತಳು. ಅವಳು ನೋಡುತ್ತಿರುವಾಗ, ಅವಳು ನೋಡಲಿ ಅಂತಲೇ, ಟೇಬಲ್ಲಿನ ಮೇಲಿದ್ದ ವಸ್ತುಗಳನ್ನು, ಇಂಕ್‌ ಬಾಟಲು, ಕ್ಯಾಂಡಲು ಸ್ಟಾಂಡುಗಳನ್ನು ನೆಲಕ್ಕೆ ಬೀಸಿ ಬೀಸಿ ಒಗೆದೆ. ಹೊರಟು ಹೋದಳು. ತಕ್ಷಣ ಸುಮ್ಮನಾದೆ.
“ಒಂದು ಗಂಟೆ ಕಳೆದಮೇಲೆ ಆಯಾ ಬಂದು ನನ್ನ ಹೆಂಡತಿಗೆ ಹಿಸ್ಟೀರಿಯಾ ಬಂದಿದೆ ಅಂದಳು. ಅವಳ ರೂಮಿಗೆ ಹೋದೆ. ಬಿಕ್ಕಳಿಸುತ್ತಿದ್ದಳು. ನಗುತ್ತಿದ್ದಳು. ಮಾತಾಡಲು ಆಗುತ್ತಿರಲಿಲ್ಲ. ಇಡೀ ಮೈ ಅದುರುತ್ತಿತ್ತು. ನಾಟಕ ಆಡುತ್ತಿರಲಿಲ್ಲ. ನಿಜವಾಗಿಯೂ ಸಫರ್ ಮಾಡುತ್ತಿದ್ದಳು.
“ಬೆಳಗಿನ ಜಾವದ ಹೊತ್ತಿಗೆ ಸುದಾರಿಸಿಕೊಂಡಳು. ನಾವು ಪ್ರೀತಿ ಎಂದು ಕರೆಯುತ್ತೇವಲ್ಲ ಅದರ ಪ್ರಭಾವದಲ್ಲಿ ರಾಜಿಯಾದೆವು.
“ಹಾಗೆ ರಾಜಿ ಆದಮೇಲೆ, ಬೆಳಗ್ಗೆ, ನನಗೆ ಟ್ರುಕಾಚೆವಸ್ಕಿ ಬಗ್ಗೆ ಅಸೂಯೆ ಅಂತ ಒಪ್ಪಿಕೊಂಡೆ. ಅವಳಿಗೆ ಯಾವುದೇ ಕನ್ಫ್ಯೂಶನ್ ಇರಲಿಲ್ಲ. ತುಂಬ ಸಹಜವಾಗಿ ನಕ್ಕಳು. ಅಂಥಾವನ ಬಗ್ಗೆ ಮೋಹ ಹುಟ್ಟುತ್ತದೆ ಅಂದುಕೊಳ್ಳುವುದು ಹಾಸ್ಯಾಸ್ಪದ ಅನ್ನುವಹಾಗೆ.
‘ಯಾವಳೇ ಡೀಸೆಂಟ್‌ಆದ ಹೆಂಗಸು ಅಂಥಾವನ ಸಂಗೀತಬಿಟ್ಟು ಬೇರೆ ಏನಾದರೂ ಆಸೆಪಡುವುದಕ್ಕೆ ಸಾಧ್ಯವೇ? ನೀವು ಹೇಳಿದರೆ ಇನ್ನುಮೇಲೆ ಅವನ ಮುಖ ಕೂಡ ನೋಡುವುದಿಲ್ಲ. ಗೆಸ್ಟುಗಳನ್ನು ಕರೆದಿದ್ದರೆ ಏನಂತೆ, ಈ ಭಾನುವಾರ ಅವನ ಜೊತೆ ಸೇರಿ ಸಂಗೀತ ನುಡಿಸುವುದೂ ಇಲ್ಲ. ನನಗೆ ಹುಷಾರಿಲ್ಲ, ಪ್ರೋಗ್ರಾಮು ಕ್ಯಾನ್ಸಲ್‌ ಆಗಿದೆ ಅಂತ ಅವನಿಗೆ ಒಂದು ಚೀಟಿ ಕಳಿಸಿಬಿಡಿ’ ಅಂದಳು. ‘ಯಾರೇ ಆಗಲಿ, ಅದರಲ್ಲೂ ಅವನು, ನನ್ನ ಜೊತೆ ಆಟ ಆಡಬಹುದು ಅಂದುಕೊಂಡರೆ ಬೇಜಾರಾಗುತ್ತೆ. ನನಗೆ ಅಭಿಮಾನ ಜಾಸ್ತಿ. ಯಾರೂ ನನ್ನ ಬಗ್ಗೆ ಹಾಗೆ ಲೈಟಾಗಿ ಯೋಚನೆಮಾಡಬಾರದು’ ಅಂದಳು.
“ಸುಳ್ಳು ಹೇಳುತ್ತಿರಲಿಲ್ಲ. ಆಡುತ್ತಿರುವ ಮಾತನ್ನೆಲ್ಲ ಪೂರಾ ನಂಬಿಕೊಂಡಿದ್ದಳು. ಹೀಗೆ ಮಾತಾಡಿ ಅವನ ಬಗ್ಗೆ ತಿರಸ್ಕಾರ ಬೆಳೆಸಿಕೊಳ್ಳಬಹುದು, ಅವನು ತನ್ನ ಮುಟ್ಟದ ಹಾಗೆ ಕೋಟೆಕಟ್ಟಿಕೊಳ್ಳಬಹುದು ಅಂದುಕೊಂಡಿದ್ದಳು. ಆದರೆ ಆಗಲಿಲ್ಲ, ಎಲ್ಲವೂ, ವಿಶೇಷವಾಗಿ, ದುಷ್ಟ ಸಂಗೀತ, ಅವಳಿಗೆ ವಿರುದ್ಧವಾಗಿದ್ದವು. ಆ ಮಾತು ನಿಲ್ಲಿಸಿದೆವು. ಭಾನುವಾರ ಬಂತು. ಗೆಸ್ಟುಗಳು ಬಂದರು. ಅವಳು ಅವನ ಜೊತೆ ಸೇರಿ ಸಂಗೀತ ನುಡಿಸಿದಳು.
(ಮುಂದುವರೆಯುವುದು)

Rating
No votes yet