ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತೊಂದು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತೊಂದು

“ನನ್ನ ಅವಳ ಸಂಬಂಧ ಹೀಗಿತ್ತು--ಅವನು ನಮ್ಮ ಮನೆಗೆ ಬಂದಾಗ. ಅವನು-ಅವನ ಹೆಸರು ತ್ರುಖಾಶೆವ್ಸ್‌ಕಿ-ಮಾಸ್ಕೊಗೆ ಬಂದವನೇ ನಮ್ಮ ಮನೆಗೆ ಬಂದ. ಬೆಳಗ್ಗೆ. ಗೌರವದಿಂದಲೇ ಬನ್ನಿ ಅಂದೆ. ಒಂದು ಕಾಲದಲ್ಲಿ ಬಹಳ ಪರಿಚಯ ಇದ್ದವನು. ಆ ಹಳೆಯ ಸ್ನೇಹ ಮಾತಿನಲ್ಲೂ ತೋರಿಸಲು ಬಂದ. ನನಗೆ ಇಷ್ಟವಾಗಲಿಲ್ಲ. ಹೊಸಬರನ್ನು ಮಾತಾಡಿಸುವ ಹಾಗೆ ಮಾತಿನಲ್ಲಿ ಸ್ವಲ್ಪ ದೂರ ಇಟ್ಟುಕೊಂಡೇ ಆಡಿದೆ. ಅವನೂ ಮಾತನ್ನ ಹಾಗೇ ಬದಲಾಯಿಸಿಕೊಂಡ. ನೋಡಿದ ತಕ್ಷಣ ಯಾಕೋ ಇಷ್ಟ ಆಗಲಿಲ್ಲ. ಆದರೂ ಯಾವುದೋ ಶಕ್ತಿ ಅವನನ್ನ ದೂರಮಾಡದ ಹಾಗೆ ತಡೆದಿತ್ತು. ಬಿಗುವಾಗಿ ಮಾತಾಡಿ, ಹೋಗಿ ಬನ್ನಿ ಅಂತ ಹೇಳಿ, ನನ್ನ ಹೆಂಡತಿಯನ್ನು ಪರಿಚಯ ಮಾಡಿಕೊಡದೆ ಇರಬಹುದಾಗಿತ್ತು. ಹಾಗೆ ಮಾಡಲಿಲ್ಲ. ‘ನೀವು ವಯಲಿನ್ ನುಡಿಸುವುದು ಬಿಟ್ಟುಬಿಟ್ಟಿದ್ದೀರಂತೆ’ ಅಂತ, ಉದ್ದೇಶಪೂರ್ವಕವಾಗಿ ಕೇಳಿದೆ. ‘ಇಲ್ಲ, ಮೊದಲಿಗಿಂತ ಹೆಚ್ಚು ನುಡಿಸುತ್ತೇನೆ’ ಅಂದ. ‘ನೀವೂ ನುಡಿಸುತ್ತಿದ್ದಿರಲ್ಲ, ಈಗಲೂ ಅಭ್ಯಾಸ ಇಟ್ಟುಕೊಂಡಿದ್ದೀರಾ’ ಅಂತ ಕೇಳಿದ. ‘ಇಲ್ಲ, ಬಿಟ್ಟುಬಿಟ್ಟಿದೀನಿ, ನನ್ನ ಹೆಂಡತಿ ಚೆನ್ನಾಗಿ ನುಡಿಸುತ್ತಾಳೆ’ ಅಂದೆ. ಆಶ್ಚರ್ಯ ಅಂದರೆ, ಅವನು ನಮ್ಮ ಮನೆಗೆ ಬಂದ ಮೊದಲನೆಯ ದಿನವೇ, ಮಾತಾಡಿದ ಮೊದಲ ಅರ್ಧಗಂಟೆಯಲ್ಲೇ, ಅವನ ಭೇಟಿಯಿಂದ ಆಗುವ ಅನಾಹುತಗಳನ್ನೆಲ್ಲ ಆಗಲೇ ಕಂಡುಬಿಟ್ಟಿದ್ದೆನೋ ಅನ್ನುವ ಹಾಗೆ, ನಮ್ಮ ಮಾತಿನಲ್ಲಿ ವರ್ತನೆಯಲ್ಲಿ ವಿಚಿತ್ರವಾದ ಬಿಗಿ ಇತ್ತು. ಅವನಾಡುವ, ನಾನಾಡುವ ಒಂದೊಂದೂ ಮಾತನ್ನು, ನಮ್ಮ ವರ್ತನೆಯ ಒಂದೊಂದೂ ವಿವರವನ್ನು ಬಹಳ ಮುಖ್ಯ ಅನ್ನುವ ಹಾಗೆ ಗಮನಿಸುವುದಕ್ಕೆ ತೊಡಗಿದ್ದೆ.
“ನನ್ನ ಹೆಂಡತಿಯ ಪರಿಚಯ ಮಾಡಿಸಿಕೊಟ್ಟೆ. ತಕ್ಷಣ ಮಾತು ಸಂಗೀತದ ಕಡೆ ಹೊರಳಿತು. ‘ಬೇಕಾದರೆ ಅವಳ ಜೊತೆಗೆ ಸಂಗೀತದ ಪ್ರಾಕ್ಟೀಸಿಗೆ ಬರುತ್ತೇನೆ’ ಅಂದ. ನನ್ನ ಹೆಂಡತಿ ಮನಸ್ಸು ಸೆಳೆಯುವ ಹಾಗೆ ಡ್ರೆಸ್ಸುಮಾಡಿಕೊಂಡಿದ್ದಳು (ಕೆಲವು ತಿಂಗಳಿಂದ ಯಾವಾಗಲೂ ಹಾಗೇ ಇರುತ್ತಿದ್ದಳು). ಡಿಸ್ಟರ್ಬ್ ಆಗುವಷ್ಟು ಚೆನ್ನಾಗಿ ಕಾಣುತ್ತಿದ್ದಳು. ನೋಡಿದ ಕೂಡಲೆ ಅವನು ಇಷ್ಟವಾಗಿಬಿಟ್ಟಿದ್ದ ಅವಳಿಗೆ. ಪಿಯಾನೋ ನುಡಿಸುವಾಗ ಅವನು ವಯಲಿನ್ ನುಡಿಸುವುದಕ್ಕೆ ಜೊತೆಯಾಗುತ್ತಾನೆ ಅಂತ ಅವಳಿಗೆ ಸಂತೋಷವಾಗಿತ್ತು. ವಯಲಿನ್ ನುಡಿಸುವುದಕ್ಕೆ ಅಂತಲೇ ಆಗಾಗ ಥಿಯೇಟರಿನಿಂದ ಯಾರನ್ನಾದರೂ ಕರೆಸುತ್ತಿದ್ದಳು. ಅವಳಿಗೆ ಆಗಿದ್ದ ಸಂತೋಷ ಮುಖದಲ್ಲಿ ಎದ್ದು ಕಾಣುತ್ತಿತ್ತು. ನನ್ನ ಮುಖ ನೋಡಿದಳು. ನನ್ನ ಫೀಲಿಂಗು ಅರ್ಥವಾಗಿ ತಟ್ಟನೆ ಮುಖದ ಭಾವ ಬದಲಾಯಿಸಿಕೊಂಡಳು. ನಮ್ಮ ಮೋಸದಾಟ ಶುರುವಾಗಿತ್ತು. ಏರ್ಪಾಡು ನನಗೂ ಇಷ್ಟವಾಯಿತು ಅನ್ನುವ ಹಾಗೆ ಒಂದಿಷ್ಟೇ ನಗು ಮುಖದಮೇಲೆ ಇಟ್ಟುಕೊಂಡು ಕೂತಿದ್ದೆ. ಎಲ್ಲ ಲಂಪಟರೂ ಹೆಂಗಸರನ್ನು ನೋಡುವ ಹಾಗೇ ಅವನೂ ನನ್ನ ಹೆಂಡತಿಯನ್ನು ನೋಡುತ್ತಿದ್ದ. ನಾವು ಮಾತಾಡುತ್ತಿದ್ದ ಸಂಗೀತದ ವಿಷಯದಲ್ಲೇ ಆಸಕ್ತಿ ಇರುವವನ ಹಾಗೆ ನಾಟಕ ಮಾಡುತ್ತಿದ್ದ. ಅದರಲ್ಲಿ ನಿಜವಾಗಿ ಆಸಕ್ತಿ ಇರಲೇ ಇಲ್ಲ ಅವನಿಗೆ. ನನ್ನ ಹೆಂಡತಿ ಉದಾಸೀನವಾಗಿ ಇರುವ ಹಾಗೆ ತೋರಿಸಿಕೊಳ್ಳುತ್ತಿದ್ದಳು. ಆದರೆ, ನನ್ನ ಸುಳ್ಳು ನಗುವಿನ ಹಿಂದೆ ಇದ್ದ ಅಸೂಯೆ ಅವಳಿಗೆ ಚೆನ್ನಾಗಿ ಗೊತ್ತಾಗಿತ್ತು, ಅವನ ಆಸೆಯ ನೋಟವೂ ಗೊತ್ತಾಗಿತ್ತು. ಅವಳು ಡಿಸ್ಟರ್ಬ್ ಆಗಿದ್ದಳು. ಅವಳ ಮುಖದಲ್ಲಿ ಮೊಟ್ಟ ಮೊದಲ ಬಾರಿಗೆ ಹೊಸ ಹೊಳಪು ಕಾಣಿಸಿತು. ಬಹುಶಃ ನನ್ನ ಅಸೂಯೆಯಿಂದಲೇ ಅವರಿಬ್ಬರ ಮಧ್ಯೆ ಮೈ ಜುಂಅನ್ನಿಸುವಂಥ ವಿದ್ಯುತ್ ಪ್ರವಾಹ ಗುಟ್ಟಾಗಿ ಹರಿಯುತ್ತಿದ್ದ ಹಾಗೆ ಕಾಣಿಸಿತು. ಇವಳ ಮನಸ್ಸಿನ ಭಾವ ಅವನ ಮುಖದಲ್ಲಿ, ಅವನ ಮನಸ್ಸಿನ ಭಾವ ಇವಳ ಮುಖದಲ್ಲಿ. ಅವಳು ನಾಚಿದಾಗ ಅವನ ಮುಖ ಕೆಂಪಾಗುತ್ತಿತ್ತು, ಅವನು ನಕ್ಕಾಗ ಅವಳೂ ನಗುತ್ತಿದ್ದಳು. ಸಂಗೀತದ ಬಗ್ಗೆ, ಪ್ಯಾರಿಸ್ಸಿನ ಬಗ್ಗೆ, ಕೆಲಸಕ್ಕೆ ಬಾರದ ಸಣ್ಣಪುಟ್ಟ ಸಂಗತಿಗಳ ಬಗ್ಗೆ ಮಾತಾಡಿದೆವು. ಹೊರಡಲು ಎದ್ದುನಿಂತ. ನಗುತ್ತಾ ಇದ್ದ. ಕೊಂಚವೇ ನಡುಗುತ್ತಾ ಇದ್ದ ತೊಡೆಗಳು ಕಾಣದಂತೆ ಹ್ಯಾಟು ಅಡ್ಡ ಇಟ್ಟುಕೊಂಡಿದ್ದ. ನನ್ನ ಮುಖ, ಅವಳ ಮುಖ, ನೋಡುತ್ತಾ ಇದ್ದ. ನಾವು ಏನು ಮಾಡುತ್ತೇವೋ ಏನು ಹೇಳುತ್ತೇವೋ ಅಂತ ಕಾಯುತ್ತಾ ಇದ್ದ. ಆ ಕ್ಷಣದ ವಿವರಗಳು ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿವೆ. ಮತ್ತೆ ಮನೆಗೆ ಬಾ ಅಂತ ಕರೆಯದೆ ಇರಬಹುದಾಗಿತ್ತು. ಹಾಗೆಮಾಡಿದ್ದರೆ ಆಮೇಲೆ ಏನೇನು ನಡೆಯಿತೋ ಅದೆಲ್ಲ ಆಗುತ್ತಲೇ ಇರಲಿಲ್ಲ. ಅವನನ್ನು ದಿಟ್ಟಿಸಿದೆ, ಅವಳನ್ನು ನೋಡಿದೆ. ‘ನನಗೆ ಹೊಟ್ಟೆಕಿಚ್ಚಿದೆ ಅಂದುಕೊಳ್ಳಬೇಡ,’ ‘ಹೆದರಿಕೊಂಡಿದ್ದೇನೆ ಅಂದುಕೊಂಡೆಯಾ?’ ಅಂತ ಅವರಿಬ್ಬರ ಜೊತೆ ಮನಸ್ಸಿನಲ್ಲೇ ಮಾತಾಡಿಕೊಳ್ಳುತ್ತಾ ‘ಬಿಡುವಾಗಿದ್ದಾಗ ಸಾಯಂಕಾಲದ ಹೊತ್ತು ಬಂದು ನನ್ನ ಹೆಂಡತಿಯ ಪಿಯಾನೋ ಜೊತೆಗೆ ವಯಲಿನ್ ನುಡಿಸಿ’ ಅಂತ ಕರೆದೆ. ತಟ್ಟನೆ ನನ್ನ ನೋಡಿದಳು. ಆಶ್ಚರ್ಯ ಆಗಿತ್ತು ಅವಳಿಗೆ. ನಾಚಿಕೊಂಡಳು. ಭಯಾನೂ ಆಗಿತ್ತೋ ಏನೋ. ‘ನಿಮ್ಮ ಜೊತೆಯಲ್ಲಿ ನುಡಿಸುವಷ್ಟು ಚೆನ್ನಾಗಿ ಪಿಯಾನೊ ಬರುವುದಿಲ್ಲ ನನಗೆ’ ಅಂದಳು. ಹಾಗಂದಿದ್ದಕ್ಕೆ ನನಗೆ ರೇಗಿತು. ‘ಇಲ್ಲ, ಇಲ್ಲಾ, ನೀವು ಬರಲೇಬೇಕು’ ಅಂದೆ. ಅವನ ತಲೆಯ ಹಿಂಭಾಗ ನೋಡುತ್ತ, ಮಧ್ಯಕ್ಕೆ ತೆಗೆದಿದ್ದ ಬೈತಲೆ, ಕಪ್ಪು ಉದ್ದ ಕೂದಲಿಗೂ ಕಾಲರಿಗೂ ನಡುವೆ ಕಾಣುತ್ತಿದ್ದ ಬಿಳಿಯ ಹೆಡತಲೆ, ಯಾವುದೋ ಹಕ್ಕಿಯ ಹಾಗೆ ಕುಪ್ಪಳಿಸುತ್ತ ನಡೆದು ಹೋದದ್ದು ಕಂಡು ಏನೋ ವಿಚಿತ್ರವಾಗಿ ಅನ್ನಿಸಿತು. ಅವನು ಇದ್ದಷ್ಟೂ ಹೊತ್ತು ಮನಸ್ಸಿಗೆ ಹಿಂಸೆಯಾಗುತ್ತಿತ್ತು. ಅದನ್ನ ಬಚ್ಚಿಟ್ಟುಕೊಳ್ಳುವುದಕ್ಕೆ ಆಗಲಿಲ್ಲ. ‘ಅವನು ಮತ್ತೆ ನಮ್ಮ ಮನೆಗೆ ಬರುವುದು ಬಿಡುವುದು ನನ್ನ ಇಷ್ಟ’ ಅಂದುಕೊಂಡೆ. ಭಯ ಇದೆ ಅಂತ ಒಪ್ಪಿಕೊಂಡಿದ್ದರೆ ನನಗೇ ಅವಮಾನ ಆಗುತ್ತಿತ್ತು. ಪಕ್ಕದ ರೂಮಿನಲ್ಲಿ ಹೆಂಡತಿ ನನ್ನ ಮಾತು ಕೇಳಿಸಿಕೊಳ್ಳುತ್ತಿದ್ದಾಳೆ ಎಂದು ಗೊತ್ತಿದ್ದೇನೇ ‘ಇವತ್ತು ಸಾಯಂಕಲಾ ತಪ್ಪದೆ ವಯಲಿನ್ ತೆಗೆದುಕೊಂಡು ಬನ್ನಿ’ ಅಂತ ಜೋರಾಗಿ ಹೇಳಿದೆ. ಆಗಲಿ ಅನ್ನುತ್ತಾ ಹೊರಟುಹೋದ.
“ಸಾಯಂಕಾಲ ವಯಲಿನ್ ತಂದ. ಇಬ್ಬರೂ ನುಡಿಸಿದರು. ಸಂಗೀತಕ್ಕೆ ಏರ್ಪಾಡು ಮಾಡುವುದಕ್ಕೇ ಬಹಳ ಸಮಯ ಹಿಡಿಯಿತು. ಅವರಿಗೆ ಬೇಕಾದ ಸಂಗೀತ ಸಿಗಲಿಲ್ಲ. ಅವನು ತಂದಿದ್ದ ಹಾಡುಗಳು ಅವಳಿಗೆ ಅಭ್ಯಾಸ ಇರಲಿಲ್ಲ. ನನಗೆ ಸಂಗೀತ ಬಹಳ ಇಷ್ಟ. ಅವರ ಸಂಗೀತಾಭ್ಯಾಸಕ್ಕೆ ಸಾಧ್ಯವಾದಷ್ಟೂ ಸಹಾಯ ಮಾಡಿದೆ. ಸ್ಟ್ಯಾಂಡು ಸರಿಯಾಗಿ ಜೋಡಿಸಿ, ಪಕ್ಕದಲ್ಲೇ ನಿಂತು, ಸ್ವರಗಳನ್ನು ಬರೆದಿದ್ದ ಹಾಡಿನ ಪುಸ್ತಕದ ಹಾಳೆಗಳನ್ನು ತಿರುಗಿಸಿದೆ. ಒಂದೆರಡು ಚಿಕ್ಕ ಪುಟ್ಟ ಹಾಡು ನುಡಿಸಿದರು. ಒಂದೆರಡು ಆಲಾಪನೆಗಳು. ಆಮೇಲೆ ಮೊಝಾರ್ಟ್‌ನ ಒಂದು ಚಿಕ್ಕ ಸೊನಾಟಾ. ಬಹಳ ಚೆನ್ನಾಗಿ ನುಡಿಸುತ್ತಿದ್ದ. ವಯಲೆನ್ನಿನಿಂದ ಅದ್ಭುತವಾಗಿ ನಾದ ಹೊರಡಿಸುತ್ತಿದ್ದ. ಅವನ ಸ್ವಭಾವಕ್ಕೆ ಹೊಂದಿಕೆ ಆಗದ ಅತ್ಯುತ್ತಮ ಟೇಸ್ಟು ಇತ್ತು ಅವನಿಗೆ.
“ನನ್ನ ಹೆಂಡತಿಗಿಂತ ನಿಪುಣನಾಗಿದ್ದ ಸಂಗೀತದಲ್ಲಿ. ಹಾಡನ್ನು ತಕ್ಕ ಜಾಗದಲ್ಲಿ ಎತ್ತಿಕೊಳ್ಳುವುದಕ್ಕೆ ಸಹಾಯಮಾಡುತ್ತಾ, ಆಗಾಗ ಅವಳ ಪಿಯಾನೋ ಚಾತುರ್ಯ ಮೆಚ್ಚಿಕೊಳ್ಳುತ್ತಾ ಇದ್ದ. ಯಾರೂ ಮೆಚ್ಚಿಕೊಳ್ಳುವ ಹಾಗೆ ನಡೆದುಕೊಂಡ. ನನ್ನ ಹೆಂಡತಿ ಕೇವಲ ಸಂಗೀತದಲ್ಲಿ ಮಾತ್ರ ಆಸಕ್ತಿ ಇರುವ ಹಾಗೆ ಸಹಜವಾಗಿ, ಸರಳವಾಗಿ ಇದ್ದಳು. ಕೇವಲ ಸಂಗೀತದಲ್ಲಿ ಮಾತ್ರ ಇಂಟರೆಸ್ಟ್‌ ಇರುವವನ ಹಾಗೆ ನಾನೂ ನಟನೆಮಾಡಿದೆ. ಆದರೆ ಅವತ್ತು ಇಡೀ ಸಂಜೆ ಅಸೂಯೆಯಿಂದ ಕುದ್ದು ಹೋಗಿದ್ದೆ. ಅವರಿಬ್ಬರ ನೋಟ ಕಲೆತ ಕ್ಷಣಗಳಲ್ಲಿ ಮೇಲೆ ಬೀಳಲು ಅಡಗಿ ಹೊಂಚು ಹಾಕುತ್ತಿದ್ದ ಪ್ರಾಣಿಗಳನ್ನು ಕಂಡೆ. ಸಾಮಾಜಿಕ ಸ್ಥಾನಮಾನಗಳನ್ನೂ ಮರೆತು ‘ತಿನ್ನಲಾ?’ ಎಂಬ ಪ್ರಶ್ನೆಯೂ ‘ಧಾರಾಳವಾಗಿ’ ಅನ್ನುವ ಉತ್ತರವೂ ಕೇಳಿಸಿತು ನನ್ನ ಮನಸ್ಸಿಗೆ.
“ನನ್ನ ಹೆಂಡತಿ, ಮಾಸ್ಕೋದವಳು, ನೋಡುವುದಕ್ಕೆ ಅಷ್ಟು ಚೆನ್ನಾಗಿರಬಹುದೆಂದು ಅವನು ಊಹೆ ಕೂಡ ಮಾಡಿರಲಿಲ್ಲ ಅಂತ ಕಾಣುತ್ತದೆ. ಅವಳೂ ಆಸೆಪಡುತ್ತಿದ್ದಾಳೆ ಅನ್ನುವುದು ಅವನಿಗೆ ಗೊತ್ತಾಗಿರಲೇಬೇಕು. ಈ ದರಿದ್ರ ಗಂಡನನ್ನು ಅವಾಯ್ಡ್‌ಮಾಡುವುದು ಹೇಗೆ ಅನ್ನುವುದಷ್ಟೇ ಪ್ರಶ್ನೆ ಆಗಿತ್ತೋ ಏನೋ. ನಾನು ಪರಿಶುದ್ಧವಾಗಿದ್ದಿದ್ದರೆ ಇದೆಲ್ಲ ತಿಳಿಯುತ್ತಲೇ ಇರಲಿಲ್ಲ. ಅವನ ಹಾಗೆಯೇ ನಾನೂ ಮದುವೆಗೆ ಮುಂಚೆ ಹೆಂಗಸರನ್ನು ಬೇಟೆ ಆಡಿದವನೇ. ಅವನ ಮನಸ್ಸು ತೆರೆದಿಟ್ಟ ಪುಸ್ತಕದ ಹಾಗೆ ಗೊತ್ತಾಗುತ್ತಿತ್ತು. ಮೈಯಾಸೆ ಇದ್ದ ಕೆಲವು ಕ್ಷಣಗಳನ್ನು ಬಿಟ್ಟರೆ ನನ್ನ ಬಗ್ಗೆ ಅವಳಿಗೆ ಇದ್ದದ್ದು ಬರೀ ಕಸಿವಿಸಿ, ಕೋಪ; ಇವನು ಹೊಸಬ, ಸುಸಂಸ್ಕೃತ, ಒಳ್ಳೆಯ ಸಂಗೀತಗಾರ; ಇಬ್ಬರೂ ಪಕ್ಕ ಪಕ್ಕ ನಿಂತುಕೊಂಡು ನುಡಿಸುತ್ತಿದ್ದಾರೆ; ಅದರಲ್ಲೂ ವಯಲಿನ್ ಸಂಗೀತ ಸೂಕ್ಷ್ಮಮನಸ್ಸಿನವರ ಮೇಲೆ ಬಹಳ ಇನ್ಫ್ಲುಯೆನ್ಸು ಮಾಡುತ್ತದೆ; ಅವನು ಅವಳನ್ನು ಗೆದ್ದುಬಿಡುತ್ತಾನೆ; ಹಿಂಡಿ ಹಿಪ್ಪೆಮಾಡಿ ಬೆರಳ ತಾಳಕ್ಕೆ ತಕ್ಕ ಹಾಗೆ ಕುಣಿಯವಹಾಗೆ ಮಾಡಿಕೊಳ್ಳುತ್ತಾನೆ, ಸಂಶಯವೇ ಇಲ್ಲ ಅನ್ನಿಸಿ ನನ್ನ ಮನಸ್ಸು ಒದ್ದಾಡಿ ಹಿಂಸೆಪಟ್ಟಿತು. ಆದರೂ, ಅಥವಾ ಅದೇ ಕಾರಣಕ್ಕೆ, ಅಥವಾ ಹೆಂಡತಿಗೆ ಬೇಜಾರಾಗಬಾರದು ಅಂತ, ಅಥವಾ ಅವನನ್ನು ಕಂಡು ಭಯಪಟ್ಟಿಲ್ಲ ಅಂತ ತೋರಿಸಿಕೊಳ್ಳುವುದಕ್ಕೆ, ಅಥವಾ ನನ್ನನ್ನೇ ಮೋಸಮಾಡಿಕೊಳ್ಳುವುದಕ್ಕೆ, ಅವನ ಜೊತೆ ಬಹಳ ಪೊಲೈಟಾಗಿ ನಡೆದುಕೊಂಡೆ. ಅವನನ್ನು ಆಗಲೇ ಅಲ್ಲೇ ಕೊಂದುಬಿಡಬೇಕು ಅನ್ನುವ ಆಸೆಯನ್ನು ಅದುಮಿಟ್ಟುಕೊಳ್ಳುವುದಕ್ಕೆ ಅಂತಲೇ ಅತೀ ಉಪಚಾರ ಮಾಡಿದೆ, ಊಟಕ್ಕೆ ಕೂತಾಗ ಒಳ್ಳೊಳ್ಳೆಯ ವೈನು ತರಿಸಿಕೊಟ್ಟೆ, ಅವನ ಸಂಗೀತವನ್ನು ಬಾಯಿತುಂಬಾ ಹೊಗಳಿದೆ, ಅವನ ಜೊತೆ ಮಾತಾಡುವಾಗ ನಗು ಮಾಸದ ಹಾಗೆ ನೋಡಿಕೊಂಡೆ, ‘ಮುಂದಿನ ಭಾನುವಾರವೂ ಬಂದು ನನ್ನ ಹೆಂಡತಿಯ ಜೊತೆ ಸಂಗೀತ ನುಡಿಸಿ, ಸಂಗೀತ ಅಂದರೆ ಇಷ್ಟಪಡುವ ಸ್ನೇಹಿತರನ್ನೂ ಕರೆಯುತ್ತೇನೆ’ ಅಂದೆ. ಅವತ್ತು ಸಾಯಂಕಾಲ ಇಷ್ಟೆಲ್ಲ ಆಯಿತು.
ಪಾಡ್ನಿಶೇವ್ ತುಂಬ ಹಿಂಸೆಪಡುತ್ತಾ ಸೀಟಿನಲ್ಲಿ ಅತ್ತ ಇತ್ತ ಸರಿದಾಡುತ್ತಿದ್ದ. ವಿಚಿತ್ರವಾದ ಧ್ವನಿ ಹೊರಡಿಸುತ್ತಿದ್ದ. ಬಹಳ ಕಷ್ಟಪಟ್ಟು ಸಮಾಧಾನವಾಗಿ ಮಾತಾಡುತ್ತಿದ್ದ.
“ಅವನು ಎಲ್ಲಾದರೂ ಹತ್ತಿರ ಇದ್ದರೇ ಸಾಕು ನನಗೆ ವಿಚಿತ್ರವಾಗಿ ಕಸಿವಿಸಿ ಆಗುತ್ತಿತ್ತು. ಇದೆಲ್ಲಾ ಆಗಿ ಒಂದು ಮೂರು ನಾಲ್ಕು ದಿನ ಆದಮೇಲೆ, ಒಂದು ಸಾರಿ ನಾನು ಎಕ್ಸಿಬಿಶನ್ನಿಗೆ ಹೋಗಿ ವಾಪಸ್ಸು ಬಂದಿದ್ದೆ. ನನ್ನ ಆಂಟೆರೂಮಿಗೆ ಹೋಗುತ್ತಿದ್ದಂತೆ ಎದೆಯ ಮೇಲೆ ಕಲ್ಲುಚಪ್ಪಡಿಯಷ್ಟು ಭಾರ ಇದೆ ಅನ್ನಿಸಿತು. ಯಾಕೆ ಅಂತ ಗೊತ್ತಾಗಲಿಲ್ಲ. ನನ್ನ ಓದುವ ರೂಮಿಗೆ ಹೋಗುತ್ತಿದ್ದ ಹಾಗೆ ಹೊಳೆಯಿತು. ಅವನನ್ನು ಜ್ಞಾಪಿಸುವಂಥಾದ್ದು ಏನೋ ನೋಡಿದ್ದೇನೆ ಅನ್ನಿಸಿತು. ವಾಪಸ್ಸು ವೆರಾಂಡಾಕ್ಕೆ ಹೋದೆ. ಕರೆಕ್ಟು. ಅಲ್ಲಿ ಅವನ ಓವರ್‌ಕೋಟು ಇತ್ತು. ಹೊಸಾ ಫ್ಯಾಶನ್ನಿನದು. (ಆಗ ನನಗೆ ಗೊತ್ತಿರಲಿಲ್ಲ. ಅವನಿಗೆ ಸಂಬಂಧಪಟ್ಟಿದ್ದನ್ನೆಲ್ಲಾ ತುಂಬ ಗಮನಕೊಟ್ಟು ನೋಡುತ್ತಿದ್ದೆ.) ರಿಸೆಪ್ಶನ್ ರೂಮಿಗೆ ಹೋದೆ. ಹಾಲ್ ಮುಖಾಂತರ ಹೋಗಲಿಲ್ಲ, ಮಕ್ಕಳ ರೂಮಿನಿಂದ ಹೋದೆ. ಲೀಸಾ ಓದುತ್ತಾ ಕೂತಿದ್ದಳು. ಆಯಾ ಪುಟ್ಟ ಮಗುವನ್ನು ಕೂರಿಸಿಕೊಂಡು ಮೇಜಿನ ಮೇಲೆ ಬಾಟಲಿನ ಮುಚ್ಚಳವನ್ನ ಬುಗುರಿಯ ಹಾಗೆ ತಿರುಗಿಸುತ್ತಾ ಆಟ ಆಡಿಸುತ್ತಿದ್ದಳು. ಡಾನ್ಸ್ ರೂಮಿನ ಬಾಗಿಲು ಹಾಕಿತ್ತು. ಸ್ವರಗಳ ಆಲಾಪನೆ arpeggio ಕೇಳುತ್ತಿತ್ತು. ಅವರು ಮಾತಾಡುವ ಸದ್ದು ಸಣ್ಣದಾಗಿ ಕೇಳುತ್ತಾ ಇತ್ತು. ಏನು ಮಾತಾಡುತ್ತಿದ್ದರೋ ಗೊತ್ತಾಗಲಿಲ್ಲ.
“ಬೇಕು ಅಂತಲೇ ಪಿಯಾನೋ ಜೋರಾಗಿ ನುಡಿಸುತ್ತಾ ಇದ್ದರೋ, ಬೇರೆ ಸದ್ದು, ಮುತ್ತಿಡುವ ಶಬ್ದ, ಕೇಳದಿರಲಿ ಅಂತ! ದೇವರೇ! ಆ ಕ್ಷಣದಲ್ಲಿ ನನ್ನೊಳಗೆ ಇದ್ದ ದೆವ್ವ ಕಂಡಂತಾಗಿದ್ದನ್ನು ನೆನೆಸಿಕೊಂಡರೆ ಈಗಲೂ ಮೈ ನಡುಗುತ್ತದೆ! ಎದೆ ಹಿಂಡಿದಂತಾಗಿ, ಒಂದು ಕ್ಷಣ ಎದೆ ಬಡಿತ ನಿಂತು, ಸುತ್ತಿಗೆಯಿಂದ ರಪರಪ ಬಡಿದಂತೆ ಬಡಿದುಕೊಂಡಿತು. ನನ್ನ ಬಗ್ಗೆ ನನಗೇ ಅಯ್ಯೋ ಅನ್ನಿಸುವುದಕ್ಕೆ ಶುರುವಾಯಿತು. ಅಗಾಧವಾಗಿ ಕೋಪಬಂದಾಗ ಎಲ್ಲರಿಗೂ ಹೀಗೇ ಆಗುತ್ತದೆ. ‘ಎಲ್ಲಾರ ಎದುರಿಗೆ! ಮಕ್ಕಳ ಎದುರಿಗೆ! ಆಯಾ ಎದುರಿಗೆ!’ ಅನ್ನುವ ಯೋಚನೆ ಬಂತು. ನನ್ನ ಮುಖ ಕೆಟ್ಟಿತ್ತೋ ಏನೋ. ಲಿಸಾ ವಿಚಿತ್ರವಾಗಿ ನನ್ನ ಕಣ್ಣನ್ನೇ ನೋಡುತ್ತಿದ್ದಳು. ‘ಏನು ಮಾಡಲಿ? ಒಳಕ್ಕೆ ಹೋಗಲಾ? ಆಗಲ್ಲ. ವಾಪಸ್ಸು ಹೋಗಲಾ? ಇಲ್ಲ, ವಾಪಸ್ಸು ಹೋಗಬಾರದು. ಏನು ಮಾಡಲಿ ದೇವರೇ?’ ಮನಸ್ಸು ಕೇಳುತ್ತಿತ್ತು. ನನ್ನ ಪರಿಸ್ಥಿತಿ ಅರ್ಥವಾದವಳ ಹಾಗೆ ಆಯಾ ನನ್ನನ್ನೇ ನೋಡುತ್ತಿದ್ದಳು. ‘ಒಳಕ್ಕೆ ಹೋಗೇ ಬಿಡುತ್ತೇನೆ’ ಅಂದುಕೊಂಡು ತಟ್ಟನೆ ರೂಮಿನ ಬಾಗಿಲು ತೆಗೆದುಬಿಟ್ಟೆ. ಪಿಯಾನೋ ಎದುರಿಗೆ ಕೂತಿದ್ದ. ಅವನ ದೊಡ್ಡ ಬಿಳೀ ಬೆರಳುಗಳು ಪಿಯಾನೋ ಮನೆಗಳ ಮೇಲೆ ಆಡುತ್ತಾ arpeggio ಗಳನ್ನು ನುಡಿಸುತ್ತಿದ್ದವು. ಪಿಯಾನೋ ಕರ್ವ್‌ ಇರುವ ಎಡೆಯಲ್ಲಿ ನಿಂತು ತೆರೆದುಕೊಂಡಿರುವ ಹಾಡಿನ ಪುಸ್ತಕದ ಹಾಳೆಯನ್ನೇ ಬಗ್ಗಿ ನೋಡುತ್ತಾ ಇದ್ದಳು. ನಾನು ಒಳಗೆ ಬಂದದ್ದನ್ನು ಮೊದಲು ನೋಡಿದ್ದು, ಅಥವಾ ಕೇಳಿಸಿಕೊಂಡದ್ದು ಅವಳೇ. ಭಯ ಆಗಿದ್ದೂ ತೋರಿಸಿಕೊಳ್ಳಲಿಲ್ಲವೋ ಅಥವಾ ಭಯ ಆಗಿರಲೇ ಇಲ್ಲವೋ ಗೊತ್ತಾಗಲಿಲ್ಲ. ನನ್ನ ಕಂಡು ಅಂಜಲಿಲ್ಲ, ಅಲುಗಾಡಲೂ ಇಲ್ಲ. ನಾಚಿಕೊಂಡಳು. ಅದೂ ನಿಧಾನವಾಗಿ ನಾಚಿಕೆ ಇಷ್ಟಿಷ್ಟೇ ಅವಳ ಮುಖದ ಮೇಲೆ ಹರಡಿಕೊಂಡಿತು.
“ ‘ನೀವು ಬಂದದ್ದು ಒಳ್ಳೆಯದಾಯಿತು. ಭಾನುವಾರ ಏನು ನುಡಿಸಬೇಕು ಅಂತ ನಾವು ತೀರ್ಮಾನ ಮಾಡುವುದಕ್ಕೇ ಆಗಿಲ್ಲ’ ಅಂದಳು. ನಾವಿಬ್ಬರೇ ಇದ್ದಾಗ ಅವಳು ಯಾವತ್ತೂ ಅಂಥ ಧ್ವನಿಯಲ್ಲಿ ಮಾತಾಡಿರಲಿಲ್ಲ. ಅವನನ್ನೂ ಸೇರಿಸಿಕೊಂಡ ಹಾಗೆ ‘ನಾವು’ ಅಂತ ಆಕೆ ಹೇಳಿದ್ದು ಹಿಡಿಸಲಿಲ್ಲ. ಕೋಪ ಬಂತು. ಮಾತಿಲ್ಲದೆ ಕೈ ಮುಂದೆ ಚಾಚಿದೆ. ಅವನು ನನ್ನ ಕೈ ಒತ್ತಿ ಹಿಡಿದು ಕುಲುಕುತ್ತಾ, ನನಗೆ ವ್ಯಂಗ್ಯ ಅನ್ನಿಸಿದ ಧ್ವನಿಯಲ್ಲಿ, ‘ಭಾನುವಾರಕ್ಕೆ ಸಂಗೀತ ಪ್ರಾಕ್ಟೀಸು ಮಾಡುತ್ತಿದ್ದೇವೆ, ಬೆಥೋವೆನ್‌ನ ಕಷ್ಟವಾದ ಪಿಯಾನೋ ಮತ್ತು ವಯಲಿನ್ ಸೊನಾಟಾ ನುಡಿಸುವುದೋ ಅಥವಾ ಚಿಕ್ಕ ಚಿಕ್ಕ ಹಾಡುಗಳನ್ನು ನುಡಿಸುವುದೋ ತೀರ್ಮಾನ ಮಾಡಲು ಆಗಿಲ್ಲ,’ ಅಂದ. ಎಷ್ಟು ಸರಳವಾಗಿ, ಸಹಜವಾಗಿ ಮಾತಾಡಿದನೆಂದರೆ ತಪ್ಪು ತಿಳಿಯುವುದಕ್ಕೆ ಅವಕಾಶವೇ ಇರಲಿಲ್ಲ. ಆದರೂ ಸುಳ್ಳು ಹೇಳುತ್ತಿದ್ದಾರೆ, ನನಗೆ ಮೋಸ ಮಾಡುವ ತೀರ್ಮಾನ ಮಾಡಿಕೊಂಡಿದ್ದಾರೆ ಅನ್ನಿಸುತ್ತಿತ್ತು.
“ಅಸೂಯೆ ಇರುವ ಗಂಡಸಿಗೆ - ನಮ್ಮ ಸಮಾಜದಲ್ಲಿ ಅಸೂಯೆ ಇಲ್ಲದ ಗಂಡಸು ಒಬ್ಬನೂ ಇಲ್ಲ- ತುಂಬ ಹಿಂಸೆ ಕೊಡುವ ಸಂಗತಿ ಅಂದರೆ ಗಂಡು ಹೆಣ್ಣುಗಳು ಅಪಾಯಕಾರಿ ಅನ್ನಿಸುವಷ್ಟು ಸಮೀಪದಲ್ಲಿರುವ ಅವಕಾಶ ಕೊಡುವ ಸಂಪ್ರದಾಯ ಇದೆಯಲ್ಲ ಅದೇನೇ. ಬಾಲ್‌ಗಳು ನಡೆಯುವಾಗ, ಅಥವಾ ಡಾಕ್ಟರು ಹೆಂಗಸರನ್ನು ಪರೀಕ್ಷೆ ಮಾಡುವಾಗ, ಅಥವಾ ಕಲೆ, ಶಿಲ್ಪ, ಮುಖ್ಯವಾಗಿ ಸಂಗೀತದ ಅಭ್ಯಾಸದಲ್ಲಿ ತೊಡಗಿರುವಾಗ, ಗಂಡಸರು ಹೆಂಗಸರು ಪರಸ್ಪರ ಸಮೀಪದಲ್ಲಿದ್ದರೆ ಅದು ತಪ್ಪಲ್ಲ, ಅನಿವಾರ್ಯ, ಕೇವಲ ಹೊಟ್ಟೆಕಿಚ್ಚಿನ ಗಂಡ ಮಾತ್ರ ತಪ್ಪು ತಿಳಿಯುತ್ತಾನೆ ಅನ್ನುವ ಭಾವನೆ ನಮ್ಮ ಸೊಸೈಟಿಯಲ್ಲಿದೆ. ಆದರೂ ಈ ಕಲೆಗಳ ಕಾರಣದಿಂದಲೇ, ಅದರಲ್ಲೂ ಮುಖ್ಯವಾಗಿ ಸಂಗೀತದಿಂದಲೇ, ಹಾದರ ಹುಟ್ಟಿಕೊಳ್ಳುತ್ತದೆ ಅನ್ನುವುದು ಎಲ್ಲರಿಗೂ ಗೊತ್ತು.
“ನನ್ನೊಳಗೆ ಹುಟ್ಟಿದ ಕನ್ಫ್ಯೂಶನ್ ತೋರಿಸಿಕೊಂಡು ಅವರನ್ನೂ ಕನ್ಫ್ಯೂಸ್ ಮಾಡಿದೆ. ಬಹಳ ಹೊತ್ತು ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಪೂರಾ ತುಂಬಿರುವ ಬಾಟಲಿಯನ್ನು ತಲೆಕೆಳಗುಮಾಡಿ ಹಿಡಿದರೆ ಸ್ವಲ್ಪ ಹೊತ್ತು ಏನೂ ಚೆಲ್ಲುವುದೇ ಇಲ್ಲವಲ್ಲ ಹಾಗೆ. ಅವನನ್ನು ಬೈದು ಮನೆಯಿಂದ ಒದ್ದು ಓಡಿಸಬೇಕು ಅನ್ನಿಸಿತ್ತು. ಮರ್ಯಾದೆ ಹೋಗುವ ಹಾಗೆ ನಡೆದುಕೊಳ್ಳಬಾರದು ಅನ್ನಿಸುತ್ತಿತ್ತು. ಹಾಗೇ ನಡೆದುಕೊಂಡೆ. ಏನೂ ಆಗಿಲ್ಲವೇನೋ, ಆಗಿದ್ದಕ್ಕೆಲ್ಲ ನನ್ನ ಒಪ್ಪಿಗೆಯೂ ಇದೆಯೇನೋ ಅನ್ನುವ ಹಾಗೆ. ಅವನಿಂದ ನನ್ನ ಮನಸ್ಸಿಗೆ ಹಿಂಸೆಯಾದಷ್ಟೂ ಅವನ ಜೊತೆ ಹೆಚ್ಚು ಹೆಚ್ಚು ಮರ್ಯಾದೆಯಿಂದ ನಡೆದುಕೊಳ್ಳುತ್ತಿದ್ದೆ. ‘ನಿಮ್ಮ ಟೇಸ್ಟಿನಲ್ಲಿ ನಂಬಿಕೆ ಇದೆ, ಬೇಕಾದ ಹಾಡು ಆರಿಸಿಕೊಳ್ಳಿ’ ಅಂದೆ. ಅವನ ಆಯ್ಕೆಯನ್ನು ಒಪ್ಪಿಕೊ ಅಂತ ಅವಳಿಗೂ ಹೇಳಿದೆ. ನಾನು ದಿಢೀರನೆ ಒಳಗೆ ನುಗ್ಗಿದ್ದು, ಆಗ ಹುಟ್ಟಿಕೊಂಡ ಇರುಸುಮುರಿಸಿನ ಮೌನ ಇವೆಲ್ಲ ಅಳಿಸಿಹೋಗುವಷ್ಟು ಸ್ವಲ್ಪ ಹೊತ್ತು ಇದ್ದು, ಅದೇ ಆಗ ತಾನೇ ಭಾನುವಾರದ ಹಾಡುಗಳನ್ನು ಆಯ್ಕೆಮಾಡಿಕೊಂಡಾಯಿತೋ ಎಂಬಂತೆ, ಹೋಗಿ ಬರುತ್ತೇನೆ ಎಂದು ಹೇಳಿ ಹೊರಟುಬಿಟ್ಟ. ಯಾವ ಹಾಡು ನುಡಿಸಬೇಕು ಅನ್ನುವುದು ಮುಖ್ಯ ಅಲ್ಲವೇ ಅಲ್ಲ, ಅವರಿಗೆ ಮುಖ್ಯವಾಗಿದ್ದದ್ದೇ ಬೇರೆ ಅಂತ ನನಗೆ ಗ್ಯಾರಂಟಿಯಾಗಿಬಿಟ್ಟಿತ್ತು.
“ವಿಶೇಷ ಸೌಜನ್ಯದಿಂದ ವೆರಾಂಡಾದವರೆಗೂ ಹೋಗಿ ಅವನನ್ನು ಕಳಿಸಿಕೊಟ್ಟೆ. (ಇಡೀ ಕುಟುಂಬದ ಶಾಂತಿ ಸಮಾಧಾನಗಳನ್ನು ಹಾಳುಮಾಡಲು ಬಂದವನನ್ನು ಬಾಗಿಲವರೆಗೆ ಹೋಗಿ ಬೀಳ್ಕೊಡದೆ ಇನ್ನೇನು ಮಾಡಬೇಕು?) ಅವನ ಮೃದುವಾದ ಬಿಳಿಯ ಕೈಗಳನ್ನು ಬೆಚ್ಚಗೆ ಹಿಡಿದು, ಕುಲುಕಿ, ಕಳಿಸಿಕೊಟ್ಟೆ.”
(ಮುಂದುವರೆಯುವುದು)

Rating
No votes yet