ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎಂಟು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎಂಟು

“ಎಲ್ಲವೂ ಕರೆಕ್ಟಾಗಿ ಸೆಟ್ಟಾಗಿತ್ತು-ನನ್ನ ಪರಿಸ್ಥಿತಿ, ಅವಳ ಡ್ರೆಸ್ಸು, ನಮ್ಮ ಬೋಟಿಂಗು. ಬೋನಿಗೆ ಬಿದ್ದೆ. ಹಿಂದೆ ಇಪ್ಪತ್ತು ಸಾರಿ ತಪ್ಪಿಸಿಕೊಂಡಿದ್ದೆ, ಈಗ ಬಿದ್ದೆ. ಜೋಕು ಮಾಡುತ್ತಿಲ್ಲ. ಈಗಿನ ಕಾಲದ ಮದುವೆ ಅಂದರೆ ಬೋನು. ರೆಡೀ ಮಾಡಿಟ್ಟಿರುತ್ತಾರೆ. ಸಹಜವಾದ ಮದುವೆ ಹೇಗಿರುತ್ತದೆ? ಹುಡುಗಿ ವಯಸ್ಸಿಗೆ ಬಂದಳು, ಮದುವೆ ಮಾಡಬೇಕು. ಅಪ್ಪ ಅಮ್ಮ ಅರೇಂಜು ಮಾಡುತ್ತಾರೆ. ಸಿಂಪಲ್ಲು. ಈಗಲೂ ಮನುಷ್ಯರೆಲ್ಲ ಹಾಗೇ ಮಾಡುತ್ತಾರೆ. ಚೀನೀಯರು, ಹಿಂದೂಗಳು, ಮುಸಲ್ಮಾನರು, ಸಾಮಾನ್ಯ ಜನ, ಎಲ್ಲರೂ. ಇಡೀ ಮನುಷ್ಯ ಕುಲದ ಕುಟುಂಬಗಳಲ್ಲಿ ಶೇಕಡಾ ತೊಂಬತ್ತೊಂಬತ್ತು ಪಾಲು ನಡೆಯುವುದೇ ಹೀಗೆ. ಇನ್ನು ಶೇಕಡಾ ಒಂದಕ್ಕಿಂತ ಕಡಮೆ ಇದ್ದೇವಲ್ಲ, ನಾವು, ಆಧುನಿಕರು, ಕ್ರಾಂತಿಯ ಪಿತ್ಥ ಕೆದರಿದವರು, ಇದೆಲ್ಲ ತಪ್ಪು ಹೊಸ ಪದ್ಧತಿ ತರಬೇಕು ಅಂದುಕೊಂಡೆವು. ಅದೇನದು ಹೊಸ ಪದ್ಧತಿ? ಮದುವೆಗೆ ಬಂದ ಹುಡುಗಿಯರೆಲ್ಲ ಸಾಲಾಗಿ ಕೂತಿರಬೇಕು, ನಾವು ಮಾರ್ಕೆಟ್ಟಿನಲ್ಲಿ ಓಡಾಡುವವರ ಥರಾ ಒಬ್ಬೊಬ್ಬರನ್ನೇ ನೋಡುತ್ತಾ ನಮಗೆ ಬೇಕಾದವರನ್ನು ಆರಿಸಿಕೊಳ್ಳಬೇಕು. ಹುಡುಗಿಯರು ಕಾಯುತ್ತಾ, ಚಡಪಡಿಸುತ್ತಾ ಇರುತ್ತಾರೆ. ಜೋರಾಗಿ ಹೇಳುವುದಕ್ಕೆ ಧೈರ್ಯವಿಲ್ಲದೆ ಮನಸ್ಸಿನಲ್ಲೇ ‘ನನ್ನನ್ನು ಆರಿಸಿಕೊಳ್ಳೋ ಹುಡುಗಾ, ನನ್ನನ್ನ. ಅವಳನ್ನ ಬೇಡ. ಈ ತೋಳು ನೋಡು, ಈ ಸೊಂಟ ನೋಡು..’ ಅಂದುಕೊಳ್ಳುತ್ತಾ ಇರುತ್ತಾರೆ. ನಮಗೆ ಭಾರೀ ಖುಷಿಯಾಗುತ್ತದೆ. ನಮಗಾಗಿಯೇ ಇದೆಲ್ಲ ಏರ್ಪಾಡು ಅಂತ ಬೀಗುತ್ತಾ ಇರುತ್ತೇವೆ. ಆ ಕಡೆ ಈ ಕಡೆ ಓಡಾಡುತ್ತೇವೆ, ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆಮಾಡುತ್ತೇವೆ, ಮಹಿಳೆಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಹೇಳುತ್ತೇವೆ. ಒಂದು ಕ್ಷಣ ಮೈಮರೆತಾಗ ತಟಕ್ಕನೆ ಬೋನಿಗೆ ಬಿದ್ದಿರುತ್ತೇವೆ!”
“ಮತ್ತೇನು ಮಾಡಬೇಕು? ಹುಡುಗಿಯರೇ ಮುಂದೆ ಬರಬೇಕೇನು?” ನಾನು ಕೇಳಿದೆ.
“ಗೊತ್ತಿಲ್ಲ. ಮದುವೆ ಅನ್ನುವುದು ಸಮಾನತೆಯ ಪ್ರಶ್ನೆಯಾದರೆ ಆ ಸಮಾನತೆ ಸಂಪೂರ್ಣವಾಗಿರಬೇಕು. ಅರೇಂಜ್‌ಮಾಡಿದ ಮದುವೆ ಅಪಮಾನಕರವಾದರೂ ನಮ್ಮ ಪದ್ಧತಿಗಿಂತ ಸಾವಿರಪಾಲು ವಾಸಿ. ಅಲ್ಲಿ ಹಕ್ಕುಗಳು ಅವಕಾಶಗಳು ಸಮಾನವಾಗಿರುತ್ತವೆ. ಹೆಣ್ಣು ತೋರಿಸುವ ನಮ್ಮ ಪದ್ಧತಿಯಲ್ಲಿ ಅವಳು ಬರೀ ಗುಲಾಮಳು, ಪ್ರದರ್ಶನಕ್ಕೆ ಇಟ್ಟ ವಸ್ತು, ಅಥವಾ ಗಂಡನ್ನು ಹಿಡಿಯಲು ಒಡ್ಡಿದ ಬೋನು. ಹೆಣ್ಣು ತಾನೇ ಗಂಡನ್ನು ಆರಿಸಿಕೊಳ್ಳುವ ಪರಿಸ್ಥಿತಿ ಇಲ್ಲದಿರುವಾಗ ಇನ್ನೊಂದು ಅಸಹ್ಯಕರ ಅಭ್ಯಾಸ ಹುಟ್ಟಿಕೊಂಡಿದೆ. ಅದನ್ನ ಗೋಯಿಂಗ್ ಇನ್‌ ಟು ಸೊಸೈಟಿ ಅಂತ ಕರೀತೇವೆ. ನಿಜವಾಗಿ ಅದು ಗಂಡನ್ನು ಬೇಟೆ ಆಡುವುದರ ಇನ್ನೊಂದು ರೂಪ ಅಷ್ಟೆ.
“ಹೆಣ್ಣಿಗೋ ಅವಳ ಅಮ್ಮನಿಗೋ ‘ನೀವು ಗಂಡಿನ ಬೇಟೆಯಾಡುತ್ತಿದ್ದೀರಿ’ ಎಂದು ಹೇಳಿ ನೋಡಿ. ದೇವರೇ! ಹಾಗೆ ಹೇಳಿದವರುಂಟೆ! ಆದರೂ ಅವರು ಬೇಟೆ ಆಡುವುದು ಬಿಟ್ಟು ಬೇರೆ ಏನೂ ಮಾಡಲಾರರು, ಅದು ಬಿಟ್ಟು ಬೇರೆ ಕೆಲಸವೂ ಇಲ್ಲ. ಹಾರಿಬಲ್ ಅಂದರೆ ಎಳೆಯ, ಬಡತನದ, ಮುಗ್ಧ ಹೆಣ್ಣುಮಕ್ಕಳೂ ಇಂಥ ವಿಚಾರ ತಲೆಗೆ ತುಂಬಿಕೊಂಡಿದ್ದಾರೆ. ಇದನ್ನಾದರೂ ಪ್ರಾಮಾಣಿಕವಾಗಿ ಮಾಡುತ್ತಾರೋ. ಇಲ್ಲ. ಇದರಲ್ಲೂ ಬರೀ ಸುಳ್ಳು, ಬರೀ ಬೊಗಳೆ. ‘ನಮ್ಮ ಹುಡುಗಿ ಭಾಳಾ ಚೆನ್ನಾಗಿದಾಳೆ!’ ‘ಆರಿಜನ್ ಆಫ್ ಸ್ಪೀಸೀಸ್? ಬಹಳಾ ಇಂಟರೆಸ್ಟಿಂಗು. ಆದರೆ ನಮ್ಮ ಲಿಲೀಗೆ ಪೇಂಟಿಂಗ್ ಅಂದರೆ ಭಾಳಾ ಇಷ್ಟ!’ ‘ನೀವು ಪ್ರದರ್ಶನಕ್ಕೆ ಹೋಗಲ್ಲವಾ? ಎಷ್ಟು ಚೆನ್ನಾಗಿದೆ ಅಂತ!’ ‘ಅಲ್ಲಿಗೆ ಬರುವ ಟ್ರೊಯ್ಕಾಗಳು, ನಾಟಕ, ಸಂಗೀತ. ಅಬ್ಬಾ, ಅದ್ಭುತ!’ ‘ನಮ್ಮ ಲಿಸ್ಸೀಗೆ ಸಂಗೀತ ಅಂದರೆ ಪ್ರಾಣ.’ ಇಂಥ ಎಲ್ಲ ಮಾತುಗಳ ಹಿಂದೆ ಇರುವುದು ಒಂದೇ ಐಡಿಯಾ: ‘ನನ್ನ ತಗೊ. ನಮ್ಮ ಲಿಸ್ಸೀನ ಆರಿಸಿಕೊ. ಅವಳು ಬೇಡ, ನನ್ನ ಒಪ್ಪಿಕೋ. ಒಂದು ಸಾರಿ ಟ್ರೈ ಮಾಡಿ ನೋಡು!’ ಎಂಥಾ ಸುಳ್ಳು, ಎಷ್ಟು ಅಸಹ್ಯ!” ಟೀ ಮುಗಿಸಿ, ಟೀ ಮಾಡುವ ಸರಂಜಾಮುಗಳನ್ನೆಲ್ಲ ಎತ್ತಿಡಲು ತೊಡಗಿದ.
(ಮುಂದುವರೆಯುವುದು)

Rating
No votes yet