ಕ್ರೂಟ್ಸರ್ ಸೊನಾಟಾ: ಅಧ್ಯಾಯ ಏಳು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಏಳು

“ಹೌದು. ಅವಳು ಧರಿಸಿದ್ದ ಜರ್ಸಿಗೆ, ಅವಳ ಉಡುಪಿನ ನಿರಿಗೆಗಳಿಗೆ, ಅವಳ ಗುಂಗುರುಕೂದಲಿಗೆ ಮರುಳಾದೆ, ಸೆರೆಯಾದೆ.
“ನನ್ನನ್ನು ಸೆರೆಹಿಡಿಯುವುದು ಸುಲಭವಾಗಿತ್ತು. ಕೃತಕವಾದ ಪರಿಸರದಲ್ಲಿ, ಹಾಟ್ ಹೌಸಿನಲ್ಲಿ ಬೆಳೆಯುವ ಸೌತೆಕಾಯಿಯ ಹಾಗೆ ಬೆಳೆದಿದ್ದೆ. ಅತಿ ಸಮೃದ್ಧವಾದ ಊಟ ಉಪಚಾರ, ಮೈಮುರಿಯುವಂಥ ಕೆಲಸ ಇಲ್ಲ, ಮನಸ್ಸನ್ನು ಕ್ರಮಬದ್ಧವಾಗಿ ಕೆರಳಿಸಿಕೊಳ್ಳುವುದೇ ಕೆಲಸ. ನನಗೆ ಇತ್ತೀಚಿನವರೆಗೂ ಇದು ಗೊತ್ತಾಗಿರಲಿಲ್ಲ. ಈಗ ಗೊತ್ತಾಗಿದೆ. ಬೇರೆಯವರಿಗೆ ಗೊತ್ತಾಗುತ್ತಿಲ್ಲವಲ್ಲ ಎಂದು ಹಿಂಸೆಯಾಗುತ್ತದೆ. ಸ್ವಲ್ಪ ಹೊತ್ತಿನ ಮೊದಲು ಆ ಹೆಂಗಸು ಮಾತಾಡುತ್ತಿದ್ದಳಲ್ಲ ಹಾಗೆ ನಾನ್‌ಸೆನ್ಸ್ ಮಾತಾಡುತ್ತಾರೆ ಎಲ್ಲರೂ.
“ಈ ಬೇಸಗೆಯಲ್ಲಿ, ನಮ್ಮ ಎಸ್ಟೇಟಿನಿಂದ ಸ್ವಲ್ಪ ದೂರದಲ್ಲಿ, ರೈತರು ರೇಲ್ವೆ ಹಳಿ ಹಾಕುತಿದ್ದರು. ರೈತರರ ಊಟ ಗೊತ್ತಲ್ಲ, ಬ್ರೆಡ್ಡು, ಕ್ವಾಸ್, ಮತ್ತೆ ಈರುಳ್ಳಿ. ಇಷ್ಟು ತಿಂದು ಚುರುಕಾಗಿರುತ್ತಾರೆ, ಬಯಲಲ್ಲಿ ಮೈಮುರಿದು ದುಡಿಯುತ್ತಾರೆ. ಆರೋಗ್ಯವಾಗಿ, ನಗುನಗುತ್ತಾ ಬದುಕುತ್ತಾರೆ. ಅದೇ ರೈತ ರೇಲು ಕೆಲಸಕ್ಕೆ ಬಂದರೆ ಪಾರಿಡ್ಜು, ಮತ್ತೆ ಒಂದು ಪೌಂಡು ಮಾಂಸ ಸಿಗುತ್ತದೆ. ಮಾಂಸ ತಿಂದದ್ದಕ್ಕೆ ಪ್ರತಿಯಾಗಿ ದಿನಕ್ಕ ಹದಿನಾರು ಗಂಟೆ ದುಡಿಯುತ್ತಾನೆ, ಸಾವಿರದಿನ್ನೂರು ಪೌಂಡು ಭಾರ ಎಳೆಯುತ್ತಾನೆ, ಎತ್ತುತ್ತಾನೆ, ಇಳಿಸುತ್ತಾನೆ. ಅವನ ಕೆಲಸಕ್ಕೆ ಅಷ್ಟು ಊಟ ಬೇಕು.
“ಮತ್ತೆ ನಾವು, ದಿನಾ ಎರಡು ಪೌಂಡು ಮಾಂಸ ತಿನ್ನುತ್ತೀವಿ, ಮೀನು, ಹಣ್ಣು, ಎಲ್ಲ ಥರದ ಡ್ರಿಂಕು ತೆಗೆದುಕೊಳ್ಳುತ್ತೀವಿ. ಹೇಗೆ ಕರಗಿಸುತ್ತೀವಿ ಅದನ್ನು? ಮೈ ಸುಖದ ಲೋಲುಪತೆಯಲ್ಲಿ. ವಾಲ್ವು ತೆರೆದಿದ್ದರೆ ಸರಿ. ಇಲ್ಲ ಮದುವೆಗೆ ಕೆಲವು ದಿನ ಮೊದಲು ನನ್ನ ವಾಲ್ವು ಮುಚ್ಚಿದ್ದ ಹಾಗೆ ಮುಚ್ಚಿಬಿಟ್ಟಿದ್ದರೆ, ತಕ್ಷಣವೇ ಉದ್ರೇಕ ಹುಟ್ಟುತ್ತದೆ. ಕಾದಂಬರಿ, ಕಾವ್ಯ, ಸಂಗೀತ, ಸೋಮಾರಿ ಶ್ರೀಮಂತ ಬದುಕು ಎಲ್ಲ ಸೇರಿಕೊಂಡು ಆಕಾರಗೆಟ್ಟ ಪ್ರೀತಿಯ ಕನಸು ಹುಟ್ಟುತ್ತದೆ. ನಾನೂ ಪ್ರೀತಿಗೆ ಬಿದ್ದೆ. ಆ ಪ್ರೀತಿಯಲ್ಲಿ ಫೀಲಿಂಗಿತ್ತು, ಕಾವ್ಯ ಇತ್ತು, ಪರವಶತೆ ಇತ್ತು. ಆದರೆ ಇವೆಲ್ಲ ಹುಟ್ಟಿದ್ದು ಹೆಣ್ಣಿನ ಅಮ್ಮನ ಕಾರಣದಿಂದ. ಹೆಣ್ಣಿನ ತೆಳ್ಳನೆ ಸೊಂಟ, ಉಬ್ಬಿದ ಎದೆ ಎದ್ದು ಕಾಣುವ ಹಾಗೆ ಚೆಲುವಾದ ಬಟ್ಟೆಗಳನ್ನು ಹೊಲಿದುಕೊಟ್ಟ ದರ್ಜಿಗಳ ಕಾರಣದಿಂದ. ಹೆಣ್ಣಿನ ಅಮ್ಮ ಏರ್ಪಾಡು ಮಾಡಿದ ಬೋಟಿಂಗ್ ಇರದಿದ್ದರೆ, ಹೆಣ್ಣು ಚೆಲುವಾದ ಬಟ್ಟೆ ತೊಡದೆ ಯಾವಾಗಲೂ ಮನೆಯಲ್ಲಿರುವಾಗ ತೊಡುವಂಥ ಆಕಾರವಿಲ್ಲದ ಗೌನು ತೊಟ್ಟು ಓಡಾಡುತ್ತಿದ್ದಾಗ ಅವಳನ್ನು ನೋಡಿದ್ದಿದ್ದರೆ, ನಾನು ಮರುಳಾಗುತ್ತಲೇ ಇರಲಿಲ್ಲ. ಹೀಗೆಲ್ಲ ಆಗುತ್ತಲೇ ಇರಲಿಲ್ಲ.”
(ಮುಂದುವರೆಯುವುದು)

Rating
No votes yet