ಕ್ರೂಟ್ಸರ್ ಸೊನಾಟಾ: ಅಧ್ಯಾಯ ಒಂಬತ್ತು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಒಂಬತ್ತು

“ನಿಮಗೆ ಗೊತ್ತಾ” ಪಾಸ್‌ಡ್ನಿಶೆವ್ ಟೀಪುಡಿಯನ್ನೂ ಸಕ್ಕರೆ ಡಬ್ಬಿಯನ್ನೂ ಚೀಲಕ್ಕೆ ಹಾಕುತ್ತ ಕೇಳಿದ, “ನಿಮಗೆ ಗೊತ್ತಾ, ಜಗತ್ತನ್ನು ನರಳುವ ಹಾಗೆ ಮಾಡುವ ಹೆಣ್ಣಿನ ಶಕ್ತಿ ಈಗ ನಾನು ಹೇಳಿದ ಸಂಗತಿಗಳಿಂದಲೇ ಹುಟ್ಟಿದ್ದು.”
“ಹೆಂಗಸಿನ ಶಕ್ತಿ ಅಂದರೇನು? ಹೆಣ್ಣಿಗೆ ಹಕ್ಕುಗಳಿಲ್ಲ, ದಮನಕ್ಕೆ ಒಳಗಾಗಿದ್ದಾಳೆ ಅನ್ನುತ್ತಾರೆ. ಕಾನೂನುಗಳೆಲ್ಲ ಗಂಡಸರ ಪರವಾಗಿಯೇ ಇವೆಯಲ್ಲ?” ನಾನು ಕೇಳಿದೆ.
“ಕರೆಕ್ಟು. ಅದೇ, ಈ ಅಸಾಮಾನ್ಯವಾದ ಶಕ್ತಿಗೆ ಅದೇ ಕಾರಣ. ಅತ್ಯಂತ ಕೀಳು ಮಟ್ಟದ ಅಪಮಾನಕ್ಕೆ ಗುರಿಯಾಗಿರುವುದರಿಂದಲೇ ಹೆಣ್ಣಿಗೆ ಇಡೀ ಜಗತ್ತನ್ನು ಆಳುವ ಶಕ್ತಿ ಬಂದುಬಿಟ್ಟಿದೆ. ಯಹೂದಿಗಳನ್ನು ನೋಡಿ, ಹೆಂಗಸರ ಹಾಗೆಯೇ ಅವರೂ ಅಪಮಾನಕ್ಕೆ ಒಳಗಾದವರು. ತಮ್ಮ ದುಡ್ಡಿನ ಶಕ್ತಿಯಿಂದ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ‘ನಾವು ಬರೀ ವ್ಯಾಪಾರಿಗಳು ಅನ್ನುತ್ತೀರಾ? ಸರಿ, ನಾವು ಬರೀ ವ್ಯಾಪಾರಿಗಳಾಗಿದ್ದೇ ನಿಮ್ಮನ್ನು ವಶಮಾಡಿಕೊಳ್ಳುತ್ತೇವೆ’ ಅನ್ನುತ್ತಾರೆ ಯಹೂದಿಗಳು. ‘ನಾವು ಬರೀ ಭೋಗ ವಸ್ತುಗಳು ಅನ್ನುತ್ತೀರಾ? ಸರಿ, ಆ ಭೋಗದ ಬಲದಿಂದಲೇ ನಿಮಗೆ ಲಗಾಮು ಹಾಕುತ್ತೇವೆ’ ಅನ್ನುತ್ತಾರೆ ಹೆಣ್ಣುಗಳು.
“ಹೆಣ್ಣಿಗೆ ಹಕ್ಕುಗಳಿಲ್ಲ, ಅಂದರೆ ಅವಳಿಗೆ ಓಟು ಮಾಡುವ ಹಕ್ಕಿಲ್ಲ, ನ್ಯಾಯಾಧೀಶಳಾಗುವ ಹಕ್ಕಿಲ್ಲ, ಇತ್ಯಾದಿಗಳು ಮುಖ್ಯವಲ್ಲ. ಪ್ರೀತಿ ಪ್ರಣಯ ಸಂಬಂಧಗಳಲ್ಲಿ ಅವಳು ಗಂಡಿಗೆ ಸಮಾನಳಲ್ಲ ಅನ್ನುವುದು ಮುಖ್ಯ. ಬೇಡದಿದ್ದರೆ ಮದುವೆಯಾಗದಿರುವ, ಬೇಕಾದ ಗಂಡನ್ನು ಆರಿಸಿಕೊಳ್ಳುವ ಅವಕಾಶ ಅವಳಿಗಿಲ್ಲ. ಗಂಡು ಅವಳನ್ನು ಆಯ್ಕೆ ಮಾಡಿಕೊಳ್ಳಬೇಕು, ಅಷ್ಟೆ. ಅಸಹಜವಲ್ಲವೇ! ತನ್ನ ಜೊತೆಗಾತಿಗೆ ಇಲ್ಲದಿರುವ ಹಕ್ಕು ಅವಕಾಶಗಳು ಗಂಡಸಿಗೆ ಯಾಕಿರಬೇಕು? ಆಯ್ಕೆಯ ಅವಕಾಶ, ಹಕ್ಕು ಇಲ್ಲದಿರುವುದರಿಂದಲೇ ಹೆಣ್ಣು ಬಿನ್ನಾಣ ವೈಯ್ಯಾರಗಳ ಮೂಲಕ ಗಂಡನ್ನು ಆಳುತ್ತಾಳೆ. ಗಂಡು ಹೆಣ್ಣನ್ನು ಆಯ್ಕೆಮಾಡಿಕೊಳ್ಳುವಂತೆ ತೋರುತ್ತದೆ, ಆದರೆ ನಿಜವಾಗಿ ಗಂಡನ್ನು ಆಯ್ಕೆಮಾಡಿಕೊಳ್ಳುವುದು ಹೆಣ್ಣೇ. ಒಂದು ಸಾರಿ ಅವಳ ವಶನಾದರೆ ಮುಗಿಯಿತು. ಅವನನ್ನು ಬೇಕಾದ ಹಾಗೆ ಬಳಸಿಕೊಳ್ಳುತ್ತಾಳೆ, ದುರುಪಯೋಗಮಾಡಿಕೊಳ್ಳುತ್ತಾಳೆ, ಗಂಡಸರ ಮೇಲೆ ತನ್ನ ಹಿರಿಮೆಯನ್ನು ಸ್ಥಾಪಿಸಿಬಿಡುತ್ತಾಳೆ.”
“ಹೆಂಗಸಿನ ಈ ವಿಶೇಷವಾದ ಶಕ್ತಿ ಎಲ್ಲಿಯಾದರೂ ಕಣ್ಣಿಗೆ ಬೀಳುವುದುಂಟೇ?”
“ಯಾಕೆ, ಕಾಣುತ್ತಿಲ್ಲವಾ? ಎಲ್ಲಾ ಕಡೆಯಲ್ಲೂ, ಎಲ್ಲದರಲ್ಲೂ. ದೊಡ್ಡ ಸಿಟಿಗಳಲ್ಲಿರುವ ಅಂಗಡಿಗಳಿಗೆ ಹೋಗಿ ನೋಡಿ. ಲಕ್ಷಾಂತರ ಅಂಗಡಿಗಳು. ಅಲ್ಲಿರುವ ಸಾಮಗ್ರಿಗಳನ್ನು ತಯಾರುಮಾಡುವುದಕ್ಕೆ ಬೇಕಾದ ಶ್ರಮ ಎಷ್ಟೆಂಬುದನ್ನು ಊಹೆ ಮಾಡುವುದಕ್ಕೂ ಆಗುವುದಿಲ್ಲ. ಸಿಟಿಯಲ್ಲಿರುವ ಹತ್ತು ಅಂಗಡಿಗಳಲ್ಲಿ ಒಂಬತ್ತರಲ್ಲಿರುವ ವಸ್ತುಗಳಿಂದ ಗಂಡಸರಿಗೇನಾದರೂ ಉಪಯೋಗವಿದೆಯೆ? ಲಕ್ಷುರಿಯನ್ನು ಬಯಸಿ ಉಳಿಸಿಕೊಂಡಿರುವವರು ಹೆಂಗಸರು. ಫ್ಯಾಕ್ಟರಿಗಳನ್ನು ಎಣಿಸಿ ನೋಡಿ. ಅವುಗಳಲ್ಲಿ ಬಹು ಸಂಖ್ಯೆಯವು ಹೆಂಗಸರಿಗೆ ಬೇಕಾದ ಆಭರಣ, ಉಡುಪು, ಅಲಂಕಾರ ವಸ್ತುಗಳನ್ನ ತಯಾರು ಮಾಡುತ್ತವೆ. ಕೋಟಿಗಟ್ಟಲೆ ಜನ, ಅದೆಷ್ಟೋ ತಲೆಮಾರುಗಳಿಂದ, ತಮ್ಮ ಜೊತೆಗಾತಿಯರ ಚಪಲ, ಬಯಕೆಗಳನ್ನು ತೀರಿಸಲು ದುಡಿಯುತ್ತಲೇ ಬಂದಿದ್ದಾರೆ.
“ಹೆಂಗಸರು, ರಾಣಿಯರ ಹಾಗೆ, ಹತ್ತರಲ್ಲಿ ಒಂಬತ್ತು ಭಾಗ ಗಂಡಸರನ್ನು ಯುದ್ಧ ಖೈದಿಗಳ ಹಾಗೆ ಅಥವ ಕಠಿಣ ಸಜೆಗೆ ಗುರಿಯಾದ ಖೈದಿಗಳ ಹಾಗೆ ಹಿಡಿದಿಟ್ಟುಕೊಂಡಿದ್ದಾರೆ. ಹೆಣ್ಣನ್ನು ದೀನಳನ್ನಾಗಿ ಮಾಡಿದ್ದರಿಂದ, ಅಪಮಾನಮಾಡಿದ್ದರಿಂದ, ಗಂಡಸಿಗೆ ಇರುವಂಥದೇ ಸಮಾನ ಹಕ್ಕುಗಳನ್ನು ಹೆಣ್ಣಿಗೆ ಕೊಡದೆ ಇರುವುದರಿಂದ ಹೆಂಗಸು ಹೀಗಾಗಿದ್ದಾಳೆ. ನಮ್ಮಲ್ಲಿರುವ ಮೈಯಾಸೆಯನ್ನೇ ನಮ್ಮ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳುತ್ತಾರೆ ಹೆಂಗಸರು. ಅವರ ಬಲೆಯಲ್ಲಿ ನಮ್ಮನ್ನು ಹಿಡಿದು ಕೆಡವುತ್ತಾರೆ.
“ನಮ್ಮ ಇಂದ್ರಿಯಗಳ ಮೇಲೆ ದಾಳಿ ಮಾಡುವುದಕ್ಕೆ ಹೆಂಗಸರು ಎಂಥ ಆಯುಧ ತಯಾರುಮಾಡಿಕೊಂಡಿದ್ದಾರೆ! ಹೆಣ್ಣಿನ ಎದುರಲ್ಲಿ ಯುವಕನಾಗಲೀ ಮುದುಕನೇ ಆಗಲಿ ಸಮಾಧಾನವಾಗಿ ಇರುವುದಕ್ಕೆ ಸಾಧ್ಯವೇ ಇಲ್ಲ. ಯಾವುದೇ ಹಬ್ಬ ನೋಡಿ, ಅಥವಾ ನಮ್ಮ ಬಾಲ್-ರೂಮುಗಳನ್ನೇ ನೋಡಿ. ಅಲ್ಲೆಲ್ಲ ತನಗೆ ಎಂಥ ಪ್ರಭಾವ ಬೀರುವ ಶಕ್ತಿ ಇದೆ ಎಂದು ಹೆಣ್ಣಿಗೆ ಗೊತ್ತು. ಅವಳ ಮುಖದ ಮೇಲಿರುವ ಲೋಕವನ್ನೇ ಗೆದ್ದಂಥ ನಗುವೇ ಅದನ್ನು ತೋರಿಸುತ್ತದೆ.
“ಯುವಕನೊಬ್ಬ ಹೆಣ್ಣಿನತ್ತ ಹೆಜ್ಜೆ ಹಾಕಿದರೆ ಸಾಕು, ಹಾಗೇ ಅಫೀಮಿನಂಥ ಪ್ರಭಾವಕ್ಕೆ ಸಿಕ್ಕಿಬೀಳುತ್ತಾನೆ. ತಲೆ ಕೆಟ್ಟು ಹೋಗುತ್ತದೆ. ತುಂಬ ಅಲಂಕಾರ ಮಾಡಿಕೊಂಡ ಹೆಂಗಸರನ್ನು ನೋಡಿದಾಗ ಮೊದಲೆಲ್ಲ ನನಗೆ ಕಸಿವಿಸಿಯಾಗುತ್ತಿತ್ತು, ಭಯವಾಗುತ್ತಿತ್ತು. ತಲೆಗೆ ಕೆಂಪು ವಸ್ತ್ರ ಸುತ್ತಿಕೊಂಡು ಉಬ್ಬಿದ ನಿರಿಗೆಯ ಲಂಗ ಹಾಕಿಕೊಂಡ ಸಾಮಾನ್ಯ ಹೆಂಗಸೇ ಆಗಲಿ, ಬಾಲ್ ರೂಮ್ ಡ್ರೆಸ್ಸು ತೊಟ್ಟ ನಮ್ಮ ಶ್ರೀಮಂತ ವರ್ಗದ ಹೆಂಗಸೇ ಆಗಲಿ, ಮನಸ್ಸೆಲ್ಲ ಗಲಿಬಿಲಿಯಾಗುತ್ತಿತ್ತು. ಈಗ ಅಪಾಯ, ಅಪಾಯ, ಹೆಲ್ಪ್, ಹೆಲ್ಪ್ ಅಂತ ಕೂಗಿಕೊಳ್ಳಬೇಕು ಅನಿಸುತ್ತದೆ.”
“ನಗುತ್ತಾ ಇದ್ದೀರಿ. ಇದು ಜೋಕಲ್ಲ, ಸೀರಿಯಸ್ಸು” ಸಿಟ್ಟುಮಾಡಿಕೊಂಡು ಹೇಳಿದ. “ನನಗೆ ನಂಬಿಕೆ ಇದೆ. ಆ ಕಾಲ ಬರುತ್ತದೆ, ಇಡೀ ಜಗತ್ತಿಗೆ ಗೊತ್ತಾಗುವ ಕಾಲ-ಈಗ ನಮ್ಮ ಹೆಂಗಸರು ಮಾಡಿಕೊಳ್ಳುತ್ತಾರಲ್ಲ ಹಾಗೆ, ಮೈಯಾಸೆಯನ್ನು ಮೈಸುಖದ ಚಪಲವನ್ನು ಕೆರಳಿಸುವಂಥ ಅಲಂಕಾರ ಮಾಡಿಕೊಳ್ಳಲು ಅವಕಾಶಮಾಡಿಕೊಟ್ಟ ಸಮಾಜವೊಂದು ಇರಲು ಹೇಗೆ ಸಾಧ್ಯ ಎಂದು ಆಶ್ಚರ್ಯ ಪಡುವ ಕಾಲ, ಬೇಗ ಬಂದೇ ಬರುತ್ತದೆ. ಜೂಜಾಟಕ್ಕೆ ನಿಷೇಧ ಇದೆ, ಆದರೆ ಹೆಂಗಸರು ಗಂಡಸರ ಮನಸ್ಸನ್ನು ಕೆರಳಿಸುವಹಾಗೆ ಡ್ರೆಸ್ಸು ತೊಟ್ಟು ಓಡಾಡುವುದಕ್ಕೆ ನಿಷೇಧ ಇಲ್ಲ.ಇದು ಪ್ರಾಣಿಗಳನ್ನು ಹಿಡಿಯಲು ಬೋನು ಒಡ್ಡುವುದಕ್ಕಿಂತ ಕೆಟ್ಟದ್ದು.”
(ಮುಂದುವರೆಯುವುದು)

Rating
No votes yet