ಕ್ರೂಟ್ಸರ್ ಸೊನಾಟಾ: ಅಧ್ಯಾಯ ಮೂರು

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಮೂರು

“ಹೇಳುತ್ತೇನೆ. ನಿಜವಾಗಿಯೂ ಕೇಳುತ್ತೀರಾ?”
“ಖಂಡಿತ” ಅಂದೆ.
ಸ್ವಲ್ಪಹೊತ್ತು ಸುಮ್ಮನಿದ್ದ. ಮುಖ ಉಜ್ಜಿಕೊಂಡ. ಶುರುಮಾಡಿದ.
“ಸರಿಯಾಗಿ ಹೇಳಬೇಕು ಅಂದರೆ ಮೊದಲಿನಿಂದ ಹೇಳಬೇಕು. ಹೇಗೆ ಮದುವೆಯಾದೆ, ಯಾಕೆ ಮದುವೆಯಾದೆ, ಮದುವೆಗೆ ಮೊದಲು ಹೇಗಿದ್ದೆ ಎಲ್ಲಾ ಹೇಳಬೇಕು.
“ಮದುವೆಗೆ ಮೊದಲು ಎಲ್ಲರ ಹಾಗೇ ಇದ್ದೆ. ನಮ್ಮಂಥ ಶ್ರೀಮಂತವರ್ಗದವರು ಇರುತ್ತಾರಲ್ಲ ಹಾಗೆ. ಉಡಾಳ. ನಮ್ಮದು ಜಮೀನುದಾರೀ ಮನೆ. ಯೂನಿವರ್ಸಿಟಿಯಲ್ಲಿ ಲಾ ಓದಿ ಡಿಗ್ರಿ ತೆಗೆದುಕೊಂಡೆ. ಮಾರ್ಷಲ್ ಆಫ್ ನೊಬಿಲಿಟಿ ಪದವಿ ಇತ್ತು. ಮೂವತ್ತನೆಯ ವಯಸ್ಸಿನಲ್ಲಿ ಮದುವೆಯಾದೆ. ಮದುವೆಗೆ ಮೊದಲು ಮಿಕ್ಕವರ ಹಾಗೇ ಲಂಪಟನಾಗಿದ್ದೆ. ಇರಬೇಕಾದದ್ದೇ ಹಾಗೆ ಅಂದುಕೊಂಡಿದ್ದೆ. ಲಂಪಟನಾಗಿದ್ದುಕೊಂಡು, ನಾನು ತುಂಬಾ ಪರಿಶುದ್ಧ, ತೂಂಬಾ ಆಕರ್ಷಕ, ತುಂಬಾ ನೈತಿಕತೆ ಇರುವವ ಅಂದುಕೊಂಡಿದ್ದೆ. ಜೊತೆಯ ಶ್ರೀಮಂತ ಹುಡುಗರು ತಾವೂ ಕೂಡಾ ಹಾಗೆಯೇ ಅಂದುಕೊಂಡಿದ್ದರು. ತಕ್ಕಮಟ್ಟಿಗೆ ಕಂಟ್ರೋಲ್‌ ಮಾಡಿಕೊಂಡು ಬ್ಯಾಚಲರ್‌ ಆಗಿದ್ದೆ. ನನ್ನ ಗೆಳೆಯರೊಂದಿಗೆ ನನ್ನನ್ನು ಹೋಲಿಸಿಕೊಂಡು, ‘ನನ್ನ ವಯಸ್ಸಿನ ಇತರರು ಪೋಲಿಬಿದ್ದು ಕುಲಗೆಟ್ಟುಹೋಗಿದ್ದರೂ ನಾನು ಮಾತ್ರ ಹಾಗಲ್ಲ’ ಎಂದು ನನ್ನ ಬಗ್ಗೆ ನಾನೇ ಹೆಮ್ಮೆಪಡುತ್ತಿದ್ದೆ. ಹೆಣ್ಣುಗಳನ್ನು ಮರುಳು ಮಾಡುತ್ತಿರಲಿಲ್ಲ. ಅಸಹಜವಾದ ಅಭಿರುಚಿಗಳೂ ಇರಲಿಲ್ಲ. ಲಂಪಟತನವೇ ನನ್ನ ಬದುಕಿನ ಪರಮಗುರಿಯೂ ಆಗಿರಲಿಲ್ಲ. ಆದರೆ ಸಮಾಜದ ನಿಯಮಗಳ ಪರಿಮಿತಿಯೊಳಗೆ, ನನ್ನ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು, ಲಂಪಟತನವನ್ನು ಎಂಜಾಯ್ ಮಾಡುತ್ತಾ ನಾನು ಅತ್ಯಂತ ನೈತಿಕ ವ್ಯಕ್ತಿ ಎಂದು ಮುಗ್ಧವಾಗಿ ನಂಬಿಕೊಂಡಿದ್ದೆ. ನನ್ನೊಡನೆ ಸಂಬಂಧ ಬೆಳೆಸಿಕೊಂಡ ಹೆಂಗಸರು ನನಗೊಬ್ಬನಿಗೇ ಮೀಸಲಾದವರೂ ಅಲ್ಲ. ಆ ಕ್ಷಣದ ಸುಖವನ್ನು ಬಿಟ್ಟು ಬೇರೆ ಏನನ್ನೂ ನಾನು ಕೋರಲಿಲ್ಲ. ಇದೆಲ್ಲ ಅಸಹಜ ಅಂದು ಕೊಂಡಿರಲಿಲ್ಲ. ಯಾರಿಗೂ ಮನಸ್ಸು ಕೊಡದೆ ಕೇವಲ ದುಡ್ಡು ಮಾತ್ರ ಕೊಡುತ್ತಿದ್ದುದರಿಂದ ನಾನು ಪ್ರಾಮಾಣಿಕನೆಂದೇ ತಿಳಿದಿದ್ದೆ. ನನಗೇ ಅಂಟಿಕೊಳ್ಳಲು ಬಯಸುವ, ಅಥವ ನನ್ನ ಮಗುವನ್ನು ಹೆರುವ ಹೆಂಗಸರನ್ನು ದೂರ ಇಡುತ್ತಿದ್ದೆ. ನನ್ನ ಭವಿಷ್ಯ ಅವರ ಕೈಯಲ್ಲಿ ಸಿಕ್ಕಿ ಬೀಳಬಾರದು ಅಂತ. ಅಥವಾ, ಮಕ್ಕಳೂ ಆಗಿದ್ದ, ನನಗೇ ಅಂಟಿಕೊಳ್ಳಬೇಕು ಅಂತ ಇದ್ದ ಹೆಂಗಸರೂ ಇದ್ದಿರಬಹುದು. ಆದರೆ ನನಗೆ ಅದು ತಿಳಿಯದಂತೆ ಎಚ್ಚರವಹಿಸುತ್ತಿದ್ದೆ.
“ನಮ್ಮ ಕಡೆಯ ಜಮೀನ್ದಾರರೆಲ್ಲ ಲಂಪಟರಾಗಿದ್ದರೂ ನಮ್ಮ ಮನೆಯಲ್ಲಿ ಯಾರೂ ವಿಶೇಷವಾದ ಲಂಪಟರು ಇರಲಿಲ್ಲ. ನಮ್ಮ ಅಪ್ಪ ಅಮ್ಮ ಒಬ್ಬರಿಗೊಬ್ಬರು ಮೋಸ ಮಾಡಿಕೊಂಡವರಲ್ಲ. ಹೀಗಾಗಿ ಮದುವೆಯ ಬಗ್ಗೆ ಚಿಕ್ಕಂದಿನಿಂದಲೂ ನಾನು ಒಂದು ಥರಾ ಕಾವ್ಯಾತ್ಮಕ ಕಲ್ಪನೆ ಬೆಳೆಸಿಕೊಂಡಿದ್ದೆ. ನನ್ನ ಹೆಂಡತಿ ಪರಿಪೂರ್ಣಳಾಗಿರಬೇಕು, ನನ್ನ ಅವಳ ಪ್ರೇಮ ಅನುಪಮವಾಗಿರಬೇಕು, ಅಪೂರ್ವವಾಗಿರಬೇಕು, ನಿಷ್ಕಳಂಕ ಪರಿಶುದ್ಧ ವೈವಾಹಿಕ ಜೀವನ ನಡೆಸಬೇಕು ಎಂದು ಕನಸು ಕಂಡಿದ್ದೆ. ನನ್ನ ಉದಾತ್ತ ಆಲೋಚನೆಗಳ ಬಗ್ಗೆ ನನಗೇ ಆಶ್ಚರ್ಯ ಆಗುತ್ತಿತ್ತು. ಹಾಗೆಯೇ ನಾನು ವಯಸ್ಸಿಗೆ ಬಂದು ಹತ್ತು ವರ್ಷವಾದರೂ ಮದುವೆಗೆ ಆತುರಪಡಲಿಲ್ಲ”. ಕೊಂಚ ಹೊತ್ತು ಸುಮ್ಮನಿದ್ದು ವಿಚಿತ್ರವಾದ ಸದ್ದು ಮಾಡಿದ. ಅವನಿಗೆ ಹೊಸ ಐಡಿಯಾ ಹೊಳೆದಾಗಲೆಲ್ಲ ಹಾಗೆ ಮಾಡುವುದು ಅಭ್ಯಾಸವಾಗಿತ್ತೆಂದು ಕಾಣುತ್ತದೆ.
“ಹೀಗೆ ಬದುಕುತ್ತಾ ನಾನು ಸಂಪೂರ್ಣ ಪ್ರಾಮಾಣಿಕನೆಂದೇ ನಂಬಿಕೊಂಡಿದ್ದೆ. ಲಂಪಟತೆ ಅನ್ನುವುದು ಮೈಗೆ ಮಾತ್ರ ಸಂಬಂಧಿಸಿದ್ದಲ್ಲ; ದೈಹಿಕವಾಗಿ ಎಂಥ ಅಪಮಾನಕರ ಸಂಬಂಧವೂ ಲಂಪಟತನವಲ್ಲ; ಹೆಂಗಸಿನೊಡನೆ ಮೈಯ ಅಂಟು ಇಟ್ಟುಕೊಂಡೂ ಅವಳ ಬಗ್ಗೆ ಯಾವುದೇ ನೈತಿಕ ಬಂಧನ ಇಲ್ಲದಂತೆ ಇರುವುದು ನಿಜವಾದ ಲಂಪಟತನ ಎಂದು ನನಗೆ ತಿಳಿದಿರಲಿಲ್ಲ. ಹಾಗೆ ನೈತಿಕ ಬಂಧನ ಇಲ್ಲದಿರುವುದನ್ನೇ ಸ್ವಾತಂತ್ರ್ಯವೆಂದೂ ಸದ್ಗುಣವೆಂದೂ ಭಾವಿಸಿಕೊಂಡಿದ್ದೆ. ಒಮ್ಮೆ ಒಬ್ಬ ಹೆಂಗಸಿಗೆ, ಅವಳು ನನ್ನನ್ನು ಪ್ರೀತಿಯಿಂದಲೇ ಕೂಡಿದ್ದಳೋ ಏನೋ, ದುಡ್ಡು ಕೊಡುವುದು ಮರೆತುಹೋದೆ ಅಂತ ಬಲು ಹಿಂಸೆಪಟ್ಟಿದ್ದೆ. ಅವಳಿಗೆ ದುಡ್ಡು ಕೊಟ್ಟು ಕಳಿಸಿದಮೇಲಷ್ಟೇ ನಾನಿನ್ನು ಆಕೆಗೆ ನೈತಿಕವಾಗಿ ಬದ್ಧನಲ್ಲ ಎಂದು ಸ್ಪಷ್ಟಮಾಡಿದ ಸಮಾಧಾನವಾಗಿತ್ತು. ಓಹೋ, ಹಾಗೆ, ನನ್ನ ಮಾತನ್ನು ಒಪ್ಪಿಕೊಳ್ಳುವವರ ಹಾಗೆ ತಲೆದೂಗಬೇಡಿ (ಇದ್ದಕ್ಕಿದ್ದಂತೆ ಅವನು ಆವೇಶ ತುಂಬಿದವರಂತೆ ಹೇಳಿದ). ಇಂಥ ಉಪಾಯಗಳು ನನಗೆ ಗೊತ್ತು. ತೀರ ಅಪರೂಪದ ವ್ಯಕ್ತಿಗಳಲ್ಲದಿದ್ದರೆ ಎಲ್ಲರಿಗೂ, ನಿಮಗೂ ಕೂಡ, ನನಗೆ ಆಗ ಇದ್ದ ಐಡಿಯಾಗಳೇ ಇರುತ್ತವೆ. ನೀವು ಒಪ್ಪಿಕೊಳ್ಳುತ್ತಾ ಇದ್ದರೆ ಅದು ಈಗ, ನಾನು ಹೇಳಿದ ಮೇಲೆ ಮಾತ್ರ. ಮೊದಲು ನಿಮಗೆ ಹೀಗನ್ನಿಸಿರಲಿಲ್ಲ. ನನಗೂ ಅನ್ನಿಸಿರಲಿಲ್ಲ. ನಿಮಗೆ ಈಗ ನಾನು ಹೇಳಿದ ಮಾತನ್ನು ಆಗ ನನಗೆ ಯಾರಾದರೂ ಹೇಳಿದ್ದಿದ್ದರೆ ಈ ಕಥೆಯೆಲ್ಲ ನಡೆಯುತ್ತಲೇ ಇರಲಿಲ್ಲ. ಇರಲಿ ಬಿಡಿ. ಎಲ್ಲಾ ಒಂದೇನೆ. ಕ್ಷಮಿಸಿ. ಹಾರಿಬಲ್.”
“ಏನು ಹಾರಿಬಲ್?” ಎಂದೆ.
“ನಮಗೂ ಹೆಂಗಸರಿಗೂ ಇರುವ ಸಂಬಂಧ...ಎಂಥಾ ಅಪದ್ಧಗಳ ಪ್ರಪಾತದಲ್ಲಿ ಬಿದ್ದು ಒದ್ದಾಡುತ್ತಿದ್ದೇವಲ್ಲ, ಅದು ಭಯಂಕರ. ಸಮಾಧಾನವಾಗಿ ಮಾತಾಡುವುದಕ್ಕೆ ಆಗುವುದೇ ಇಲ್ಲ ನನಗೆ. ಹೀಗಾಗುವುದಕ್ಕೆ ಆ ಮನುಷ್ಯ ‘ಬಿಕ್ಕಟ್ಟು’ ಅಂದನಲ್ಲ, ಅದು ಎದುರಾದಾಗ ನಾನು ಮಾಡಿದ ಕೆಲಸ ಕಾರಣವಲ್ಲ. ಆ ಬಿಕ್ಕಟ್ಟು ಉಂಟಾದ ಕ್ಷಣದಿಂದ ನನ್ನ ದೃಷ್ಟಿಯೇ ಬದಲಾಗಿದೆ. ಎಲ್ಲಾ ತಲೆಕೆಳಗಾಗಿ, ಬೇರೆ ಥರ ಕಾಣುತ್ತಿದೆ.”
ಮತ್ತೆ ಒಂದು ಸಿಗರೇಟು ಹಚ್ಚಿಕೊಂಡು, ಮುಂದಕ್ಕೆ ಬಗ್ಗಿ ಮಾತಾಡತೊಡಗಿದ. ಮುಖ ಕಾಣದಷ್ಟು ಕತ್ತಲಾಗಿತ್ತು. ರೈಲಿನ ಸದ್ದನ್ನೂ ಮೀರಿ ಅವನ ಪ್ರಾಮಾಣಿಕವಾದ ಧ್ವನಿ ಕೇಳಿಸುತ್ತಿತ್ತು. (ಮುಂದುವರೆಯುವುದು)

Rating
No votes yet